ಬೆಂಗಳೂರು, ಮೇ 26- ವಿಧಾನಸಭಾ ಸದಸ್ಯರಿಂದ ವಿಧಾನಪರಿಷತ್‌ನ 11 ಸ್ಥಾನಗಳಲ್ಲಿ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದ್ದು, ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
11 ಸ್ಥಾನಗಳ ಪೈಕಿ ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯೆಯ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್ 7, ಪ್ರತಿಪಕ್ಷ ಬಿಜೆಪಿ 3 ಹಾಗೂ ಜೆಡಿಎಸ್ 1 ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ.ಇದುವರೆಗೂ ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಂತಿಮಗೊಳಿಸಿಲ್ಲ. ಆಕಾಂಕ್ಷಿಗಳ ಸಂಖ್ಯೆ ಸಾಕಷ್ಟಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರು ಪಕ್ಷಗಳು ವಿಳಂಬ ಮಾಡುತ್ತಿವೆ.
ನಾಮಪತ್ರ ಸಲ್ಲಿಸಲು ಜೂನ್ 3 ರವರೆಗೂ ಕಾಲಾವಕಾಶ ಇರುವುದರಿಂದ ಈ ವಾರಾಂತ್ಯದೊಳಗೆ ಅಭ್ಯರ್ಥಿಗಳ ಆಯ್ಕೆ ಮಾಡಿ ಅಂತಿಮಗೊಳಿಸಲಾಗುತ್ತದೆ. ಕಾಂಗ್ರೆಸ್‌ನಲ್ಲಿ 70 ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರೆ ಬಿಜೆಪಿಯಲ್ಲಿ 10 ಕ್ಕೂ ಹೆಚ್ಚು ಮಂದಿ ಇದ್ದಾರೆ.
ಜೆಡಿಎಸ್‌ನಲ್ಲೂ ನಾಲ್ಕು ಮಂದಿ ಪ್ರಬಲ ಆಕಾಂಕ್ಷಿಗಳಿರುವುದು ಅಭ್ಯರ್ಥಿ ಆಯ್ಕೆಗೆ ಕಗ್ಗಂಟಾಗಿ ಪರಿಣಮಿಸಿದೆ.
ಜೂನ್ 17 ರಂದು ವಿಧಾನಪರಿಷತ್ ಸದಸ್ಯರಾದ ಅರವಿಂದ ಕುಮಾರ್ ಅರಳಿ, ಸಚಿವ ಎನ್.ಎಸ್.ಬೋಸರಾಜ್, ಕೆ.ಗೋವಿಂದರಾಜ್, ಮುನಿರಾಜೇಗೌಡ, ಬಿ.ಎಂ.ಫಾರೂಕ್, ರಘುನಾಥರಾವ್ ಮಲ್ಕಾಪುರೆ, ಎನ್.ರವಿಕುಮಾರ್, ಎಸ್.ರುದ್ರೇಗೌಡ, ಕೆ.ಹರೀಶ್‌ಕುಮಾರ್ ನಿವೃತ್ತಿಯಾಗಲಿದ್ದಾರೆ.
ಡಾ.ತೇಜಸ್ವಿನಿಗೌಡ ಹಾಗೂ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಈಗಾಗಲೇ ತಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.ರಾಜೀನಾಮೆ ಹಾಗೂ ನಿವೃತ್ತಿಯಿಂದ ತೆರವಾಗುವ 11 ಸ್ಥಾನಗಳಿಗೆ ಭಾರತದ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ನಾಳೆ ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಜೂನ್ 3 ರಂದು ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.
ಜೂನ್ 4 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಜೂನ್ 6 ರವರೆಗೂ ನಾಮಪತ್ರ ವಾಪಸ್ ಪಡೆಯಲು ಕಾಲಾವಕಾಶ ಇದೆ. 11 ಕ್ಕಿಂತ ಹೆಚ್ಚು ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದರೆ ಜೂನ್ 13 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.ಸಂಜೆ 5 ಗಂಟೆ ನಂತರ ಮತ ಎಣಿಕೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ. ಜೂನ್ 15 ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.