Sunday, December 1, 2024
Homeಜಿಲ್ಲಾ ಸುದ್ದಿಗಳು | District Newsಕಂಟೈನರ್‌-ಕಾರ್ ನಡುವೆ ಭೀಕರ ಅಪಘಾತ, ಮಗು ಸೇರಿ 6 ಜನ ಸ್ಥಳದಲ್ಲೇ ಸಾವು

ಕಂಟೈನರ್‌-ಕಾರ್ ನಡುವೆ ಭೀಕರ ಅಪಘಾತ, ಮಗು ಸೇರಿ 6 ಜನ ಸ್ಥಳದಲ್ಲೇ ಸಾವು

ಹಾಸನ,ಮೇ 26- ಕಂಟೈನರ್‌ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-75ರ ಈಚನಹಳ್ಳಿ ಬಳಿ ಇಂದು ಬೆಳಿಗ್ಗೆ ನಡೆದಿದೆ.ನಾರಾಯಣಸ್ವಾಮಿ, ಸುನಂದ, ರವಿಕುಮಾರ್‌, ನೇತ್ರ, ಚೇತನ್‌ (ಬಾಲಕ), ರಾಕೇಶ್‌ (ಚಾಲಕ) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಮೃತರು ಚಿಕ್ಕಬಳ್ಳಾಪುರ ಜಿಲ್ಲೆ ಹೊಸಕೋಟೆ ತಾಲೂಕಿನ ಅಂದರಹಳ್ಳಿ ಹಾಗೂ ದೇವನಹಳ್ಳಿ ಬಳಿಯ ಕಾರಹಳ್ಳಿ ಮೂಲದವರೆಂದು ತಿಳಿದುಬಂದಿದೆ.ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಈಟಿಯೋಸ್‌‍ ಕಾರಿನಲ್ಲಿ ತೆರಳಿದ್ದ ಒಂದೇ ಕುಟುಂಬದ ಸದಸ್ಯರು ಸಂಬಂಧಿಕರ ಆರೋಗ್ಯವನ್ನು ವಿಚಾರಿಸಿಕೊಂಡು ವಾಪಸ್‌‍ ಗ್ರಾಮಕ್ಕೆ ಬರುತ್ತಿದ್ದಾಗ ಬೆಳಗಿನ ಜಾವ 6.30 ರ ಸುಮಾರಿನಲ್ಲಿ ನಿದ್ದೆ ಮಂಪರಿನಲ್ಲಿದ್ದ ಕಾರಿನ ಚಾಲಕ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಹಾರಿ ಕಂಟೈನರ್‌ಗೆ ಅಪ್ಪಳಿಸಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಸುದ್ದಿ ತಿಳಿಯುತ್ತಿದ್ದ ಹಾಸನ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರಿನೊಳಗೆ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಟ್ಟರು.


ನಂತರ ಕ್ರೇನ್‌ ಮೂಲಕ ಕಾರನ್ನು ಮೇಲಕ್ಕೆ ಎತ್ತಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಮಹಮದ್‌ ಸುಜೀತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಕ್ರಂದನ :
ಅಪಘಾತದಲ್ಲಿ ತಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು.

ಸಂತಾಪ :
ಭೀಕರ ಅಪಘಾತದಲ್ಲಿ ಮೃತಪಟ್ಟವರ ಆತಕ್ಕೆ ಶಾಂತಿ ದೊರೆಯಲಿ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಸಂತಾಪ ವ್ಯಕ್ತಪಡಿಸಿದ್ದು, ಇವರ ಅಗಲಿಕೆ ದುಃಖ ಭರಿಸುವ ಶಕ್ತಿ ಕುಟುಂಬ ಸದಸ್ಯರಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

RELATED ARTICLES

Latest News