ತಿರುಪತಿ,ಸೆ.22- ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಪಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಪರಕಾಮಣಿ (ಹುಂಡಿಯಲ್ಲಿ ಭಕ್ತರು ಹಾಕಿದ್ದ) 100 ಕೋಟಿಗೂ ಅಧಿಕ ಹಣ ಕಳ್ಳತನವಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಆರೋಪಿಸಿದ್ದಾರೆ. ತಿರುಮಲ ತಿರುಪತಿ ದೇವಸ್ತಾನಂ(ಟಿಟಿಡಿ) ಸದಸ್ಯರೂ ಆಗಿರುವ ಬಜೆಪಿ ಮುಖಂಡ ಭಾನುಪ್ರಕಾಶ್ ರೆಡ್ಡಿ, ದೇವಸ್ಥಾನದ ಸಿಬ್ಬಂದಿ ರವಿಕುಮಾರ್ ಕಾಣಿಕೆ ಪೆಟ್ಟಿಗೆಯಿಂದ ಹಣ ಕದ್ದಿದ್ದಾರೆ ಎಂದು ಆರೋಪಿಸಿದ್ದು, ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದಾರೆ.
ಲೂಟಿ ಮಾಡಿದ ಹಣವನ್ನು ಬಳಸಿಕೊಂಡು ರಿಯಲ್ ಎಸ್ಟೇಟ್‌ಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಲಾಗಿದೆ. ಅಕ್ರಮ ಹಣವನ್ನು ಜಗನ್‌ರೆಡ್ಡಿ ಅವರ ಮನೆ, ತಾಡೆಪಲ್ಲಿ ಪ್ಯಾಲೇಸ್‌ಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. 2019ರಿಂದ 2024ರವರೆಗೆ ವೈಎಸ್‌ಆರ್‌ಪಿ ಆಡಳಿತದಲ್ಲಿ ಟಿಟಿಡಿಯ ಇತಿಹಾಸದಲ್ಲಿ ಅತ್ಯಧಿಕ 100 ಕೋಟಿ ರೂ. ಲೂಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರಿರುವ ಟಿಡಿಪಿ ನಾಯಕ ನಾರಾ ಲೋಕೇಶ್ ತಮ ಎಕ್‌್ಸ ಖಾತೆಯಲ್ಲಿ ಲೂಟಿ ತೋರಿಸುತ್ತಿರುವ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ವೈಎಸ್‌ಆರ್‌ಪಿ ಆಡಳಿತದಲ್ಲಿ ಭಕ್ತರು ಕಾಣಿಕೆಯಾಗಿ ಹುಂಡಿಗೆ ಹಾಕಿದ್ದ ಹಣವನ್ನು ಲೂಟಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಹೈಕೋರ್ಟ್ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿದ್ದು, ಒಂದು ತಿಂಗಳೊಳಗೆ ತನಿಖೆ ಮತ್ತು ಮುಚ್ಚಿದ ಕವರ್ ವರದಿಯನ್ನು ಆದೇಶಿಸಿದೆ. ಮಂಡಳಿಯ ನಿರ್ಧಾರಗಳು ಮತ್ತು ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.