Saturday, July 27, 2024
Homeರಾಜ್ಯಎ.ಎಸ್‌.ನಡಹಳ್ಳಿಗೆ ಒಲಿಯಲಿದೆಯೇ ವಿಧಾನಪರಿಷತ್‌ ಸ್ಥಾನ..?

ಎ.ಎಸ್‌.ನಡಹಳ್ಳಿಗೆ ಒಲಿಯಲಿದೆಯೇ ವಿಧಾನಪರಿಷತ್‌ ಸ್ಥಾನ..?

ಬೆಂಗಳೂರು,ಮೇ 13- ಮುಂದಿನ ಜೂನ್‌ ತಿಂಗಳಿನಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್‌.ನಡಹಳ್ಳಿಯವರಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಕೆಲವು ಕಾರಣಗಳಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುದ್ದೆಬಿಹಾಳ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡಿದ್ದ ನಡಹಳ್ಳಿಯವರನ್ನು ಮೇಲ್ಮನೆಗೆ ಆಯ್ಕೆ ಮಾಡಿದರೆ ಪಕ್ಷಕ್ಕೆ ಹೆಚ್ಚಿನ ಬಲ ಬರಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜೂನ್‌ ತಿಂಗಳ ಮಧ್ಯಭಾಗದಲ್ಲಿ ವಿಧಾನಸಭೆಯಿಮದ ವಿಧಾನಪರಿಷತ್‌ಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯ ಬಲಾಬಲದಲ್ಲಿ ಕಾಂಗ್ರೆಸ್‌ 7, ಬಿಜೆಪಿ 3 ಹಾಗೂ ಜೆಡಿಎಸ್‌ಗೆ 1 ಸ್ಥಾನ ದಕ್ಕಲಿದೆ. ಓರ್ವ ಸದಸ್ಯ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಬೇಕಾದರೆ 19 ಮತಗಳ ಅಗತ್ಯವಿದೆ. 65 ಸದಸ್ಯರನ್ನು ಹೊಂದಿರುವ ಬಿಜೆಪಿಗೆ 3 ಸ್ಥಾನ ಸುಲಭವಾಗಿ ಸಿಗಲಿದೆ.

ಹಾಲಿ ವಿಧಾನಪರಿಷತ್‌ನ ಮುಖ್ಯ ಸಚೇತಕರಾಗಿರುವ ಎನ್‌.ರವಿಕುಮಾರ್‌ ಅವಧಿ ಜೂನ್‌ ತಿಂಗಳಲ್ಲಿ ಮುಕ್ತಾಯವಾಗಲಿದ್ದು, ಪಕ್ಷನಿಷ್ಠೆ ಕಾರಣ ಅವರನ್ನು ಮುಂದುವರೆಸುವ ಸಾಧ್ಯತೆಯಿದೆ. ಉಳಿದ ಎರಡು ಸ್ಥಾನಗಳಿಗೆ ಪಕ್ಷದಲ್ಲಿ ತೀವ್ರ ಪೈಪೋಟಿಯಿದ್ದು, ಕಲ್ಯಾಣ ಕರ್ನಾಟಕ ಭಾಗದವರನ್ನೇ ವಿಧಾನಪರಿಷತ್‌ಗೆ ಆಯ್ಕೆ ಮಾಡಬೇಕೆಂಬ ಒತ್ತಾಯ ಪಕ್ಷದೊಳಗೆ ಕೇಳಿಬರುತ್ತಿದೆ.

ಎ.ಎಸ್‌.ನಡಹಳ್ಳಿಯವರನ್ನು ಪರಿಷತ್‌ಗೆ ಆಯ್ಕೆ ಮಾಡಿದರೆ, ಕಲ್ಯಾಣ ಕರ್ನಾಟಕದಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ಅವರನ್ನೇ ಆಯ್ಕೆ ಮಾಡಬೇಕೆಂಬ ಒಕ್ಕೊರಲ ಅಭಿಪ್ರಾಯ ಪಕ್ಷದೊಳಗೆ ವ್ಯಕ್ತವಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿರುವ ನಡಹಳ್ಳಿಯವರು ಸಂಘ ಪರಿವಾರಕ್ಕೂ ಅಚ್ಚುಮೆಚ್ಚು. ವಿಶೇಷವಾಗಿ ಕೃಷಿ, ರೈತರ ಬಗ್ಗೆ ಸದನದಲ್ಲಿ ಎದೆಗಾರಿಕೆಯಿಂದ ಮಾತನಾಡುವ ಚಾತಿಯುಳ್ಳವರು. ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ನಡಹಳ್ಳಿಯವರು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅವಿರತ ಪ್ರಯತ್ನ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾದರೂ ಎದೆಗುಂದದೆ ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡಿರುವ ನಡಹಳ್ಳಿ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿದರೆ, ಪಕ್ಷಕ್ಕೂ ಅನುಕೂಲ ಹಾಗೂ ಸಂಘಟನೆಗೆ ಮತ್ತಷ್ಟು ಆನೆಬಲ ಬರಲಿದೆ ಎಂಬ ವ್ಯಾಖ್ಯಾನ ಕೇಳಿಬರುತ್ತಿದೆ.

ತಮ್ಮನ್ನು ಮೇಲ್ಮನೆಗೆ ಆಯ್ಕೆ ಮಾಡುವಂತೆ ನಡಹಳ್ಳಿಯವರು ಎಲ್ಲಿಯೂ ಒತ್ತಡ ಹೇರಿಲ್ಲ. ಪಕ್ಷ ನೀಡುವ ಯಾವುದೇ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಅವರ ಸಂಘಟನೆಯ ಚಾತುರ್ಯವನ್ನು ಕಂಡು ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಪಕ್ಷ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News