ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ಗೆದ್ದರೂ ಅಮಾನತು ಹಿಂಪಡೆಯದಂತೆ ಅಶೋಕ್‌ ಮನವಿ

0
970

ಬೆಂಗಳೂರು,ಮೇ5- ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್‌ ರೇವಣ್ಣ ವಿಜೇತರಾದರೂ ಅವರನ್ನು ಜೆಡಿಎಸ್‌ನಿಂದ ಕೆಲಕಾಲ ಅಮಾನತು ಮಾಡಿರುವ ನಿರ್ಧಾರವನ್ನು ಹಿಂತೆಗೆದುಕೊಳ್ಳದಂತೆ ಪಕ್ಷದ ನಾಯಕರಿಗೆ ನಾವೇ ಮನವಿ ಮಾಡುತ್ತೇವೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಜ್ವಲ್‌ ರೇವಣ್ಣ ಪ್ರಕರಣವನ್ನು ಜೆಡಿಎಸ್‌ ಕೂಡ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಅವರನ್ನು ಪಕ್ಷದಿಂದ ಅಮಾನತುಪಡಿಸಲಾಗಿದೆ ಎಂದರು.

ಹಾಸನದಲ್ಲಿ ಅವರು ವಿಜೇತರಾದರೂ ಅಮಾನತು ಆದೇಶವನ್ನು ಹಿಂಪಡೆಯದಂತೆ ಮನವಿ ಮಾಡುತ್ತೇವೆ. ತನಿಖೆ ಮುಗಿದು ನ್ಯಾಯಾಲಯದ ತೀರ್ಪು ಬರುವರೆಗೂ ಅಮಾನತು ಪ್ರಕರಣನ್ನು ವಾಪಸ್‌ ಪಡೆಯಬಾರದು. ಈ ನಿಲುವಿನಿಂದ ಕುಮಾರಸ್ವಾಮಿ ಹಿಂದೆ ಸರಿಯಬಾರದೆಂದು ಮನವಿ ಮಾಡಿದರು.

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಬಂಧನ ಪ್ರಕ್ರಿಯೆ ಕಾನೂನಿನ ಪ್ರಕಾರವೇ ನಡೆದಿದೆ. ಎಸ್‌ಐಟಿ ಅವರು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಅಂತಿಮವಾಗಿ ನ್ಯಾಯಾಲಯದಲ್ಲಿ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡದ ಕಾರಣ ಎಸ್‌ಐಟಿಗೆ ಶರಣಾಗಿದ್ದಾರೆ. ಎಲ್ಲವೂ ಕೂಡ ಕಾನೂನಿನ ಅನ್ವಯ ನಡೆದಿದೆ. ಪೊಲೀಸರ ಕ್ರಮವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.

ಈ ಪ್ರಕರಣದಿಂದ ಫಲಿತಾಂಶದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರುವುದಿಲ್ಲ. ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸಿಗರು ಲಾಭ ಮಾಡಿಕೊಳ್ಳಲು ಹೊರಟಿದ್ದರು. ಮತದಾರರಿಗೆ ಇವರ ನಿಜವಾದ ಬಂಡವಾಳ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಏನೇ ಗ್ಯಾರಂಟಿ , ಮಣ್ಣುಮಸಿ ಎಂದುಕೊಂಡರೂ ಯಾವುದೇ ಕಾರಣಕ್ಕೂ ಅವರು ಎರಡಂಕಿ ದಾಟುವುದಿಲ್ಲ. ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಹತಾಶೆ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.