Home ಇದೀಗ ಬಂದ ಸುದ್ದಿ ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರ ಸಾವು

ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರ ಸಾವು

0
ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಇಬ್ಬರ ಸಾವು

ಬೆಂಗಳೂರು,ಜು.29- ಇಬ್ಬರು ಸಾಫ್ಟ್ ವೇರ್‌ ಎಂಜಿನಿಯರ್‌ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಜಾಗರೂಕತೆಯಿಂದ ಅತಿವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿರುವ ಘಟನೆ ಹಲಸೂರು ಗೇಟ್‌ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಬಾಣಸವಾಡಿಯ ಪ್ರಶಾಂತ್‌(25) ಮತ್ತು ಆಂಧ್ರಪ್ರದೇಶದ ಹಿಂದೂಪುರದ ಶಿಲ್ಪಾ(23) ಮೃತಪಟ್ಟವರು.

ಪ್ರಶಾಂತ್‌ ಹಾಗೂ ಶಿಲ್ಪಾ ನಗರದ ಟಿಸಿಎಸ್‌‍ ಕಂಪನಿಯ ಸಾಫ್ಟ್ ವೇರ್‌ ಎಂಜಿನಿಯರ್‌ಗಳು. ಶಿಲ್ಪಾ ನಾಗವಾರದ ಪಿಜಿಯಲ್ಲಿ ನೆಲೆಸಿದ್ದರು. ಶಿಲ್ಪಾ ಮನೆಯಲ್ಲಿ ಆಕೆಯ ಮದುವೆಯ ತಯಾರಿಯಲ್ಲಿದ್ದರು. ನಿನ್ನೆ ಬೆಳಗ್ಗೆ ಸಹ ಶಿಲ್ಪಾ ಅವರ ತಂದೆ ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದರು.

ಸಂಜೆ ಶಿಲ್ಪಾ ಅವರು ಸ್ನೇಹಿತ ಪ್ರಶಾಂತ್‌ ಜೊತೆ ಬೈಕ್‌ನಲ್ಲಿ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿನಲ್ಲಿ ಮಹಾರಾಣಿ ಜಂಕ್ಷನ್‌ನಿಂದ ಕೆ.ಆರ್‌.ಸರ್ಕಲ್‌ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದೊಯ್ದಿದೆ.

ಅಪಘಾತದ ತೀವ್ರತೆಯಿಂದ ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಹಲಸೂರುಗೇಟ್‌ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಂದೆಯ ರೋಧನ:
ತನ್ನ ಮಗ ಸೆಂಟ್‌ ಮಾರ್ಥಾಸ್‌‍ ಆಸ್ಪತ್ರೆಯಲ್ಲಿ ಜನಿಸಿದ್ದ. ಇದೀಗ ಹುಟ್ಟಿದ ಆಸ್ಪತ್ರೆಯಲ್ಲೇ ಮಗ ಸಾವನ್ನಪ್ಪಿದ್ದಾನೆ ಎಂದು ರೋಧಿಸುತ್ತಿದ್ದ ದೃಶ್ಯ ಮನಕಲುಕವಂತಿತ್ತು.

ಆಕ್ರಂಧನ:
ಮಕ್ಕಳನ್ನು ಕಳೆದುಕೊಂಡ ಎರಡೂ ಕುಟುಂಬಸ್ಥರು, ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಮಗಳ ಮದುವೆಗಾಗಿ ಚಿನ್ನಾಭರಣವನ್ನು ಮಾಡಿಸಿ ಮಗಳ ಮದುವೆಯ ಕನಸುಕಂಡಿದ್ದೆ. ಆದರೆ ವಿಧಿಯಾಟಕ್ಕೆ ಮಗಳು ಬಲಿಯಾಗಿದ್ದಾಳೆ ಎಂದು ಶಿಲ್ಪಾ ತಂದೆ ಕಣ್ಣೀರು ಹಾಕಿದ್ದಾರೆ.