Friday, May 3, 2024
Homeರಾಜ್ಯಶಿಸ್ತು ಉಲ್ಲಂಘಿಸಿದರೆ ಹುಷಾರ್ : ಸಚಿವರು, ಶಾಸಕರಿಗೆ ಡಿಕೆಶಿ ವಾರ್ನಿಂಗ್

ಶಿಸ್ತು ಉಲ್ಲಂಘಿಸಿದರೆ ಹುಷಾರ್ : ಸಚಿವರು, ಶಾಸಕರಿಗೆ ಡಿಕೆಶಿ ವಾರ್ನಿಂಗ್

ಬೆಂಗಳೂರು, ಮಾ.30- ಸಚಿವರು, ಶಾಸಕರೂ ಸೇರಿದಂತೆ ಎಲ್ಲರಿಗೂ ಶಿಸ್ತು ಮುಖ್ಯ. ಲಕ್ಷ್ಮಣರೇಖೆ ದಾಟುವಂತಿಲ್ಲ. ಗೆಲ್ಲುವುದು ಅಥವಾ ಸೋಲುವುದು ಬೇರೆ ವಿಚಾರ. ಆದರೆ ಈಗಲೂ ಶಿಸ್ತನ್ನು ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಲೋಕಸಭಾ ಚುನಾವಣಾ ಅಭ್ಯರ್ಥಿಗೆ ಸಂಬಂಧಪಟ್ಟಂತೆ ತಾವು ಹಾಗೂ ಮುಖ್ಯಮಂತ್ರಿಯವರು ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ರಮೇಶ್ಕುಮಾರ್ ಅವರ ಜೊತೆ ಚರ್ಚೆ ಮಾಡಿದ್ದೇವೆ. ಎರಡೂ ಬಣಗಳಿಗೂ ಟಿಕೆಟ್ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ. ಅವರ ಸ್ವಾರ್ಥಗಳಿಗೆ ಮಣೆ ಹಾಕಿಲ್ಲ ಎಂದರು.

ಪರ್ಯಾಯ ಅಭ್ಯರ್ಥಿ ಗೌತಮ್ ಸಾಮಾನ್ಯ ಕಾರ್ಯಕರ್ತ ಪಕ್ಷದ ನಿಷ್ಠಾವಂತ. ಹೈಕಮಾಂಡ್ ಟಿಕೆಟ್ ಕೊಟ್ಟವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಎಲ್ಲರೂ ಹೇಳಿದ್ದರು. ಹೀಗಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಇದರಲ್ಲಿ ಯಾವುದೇ ಒಳ ಏಟು ಅಥವಾ ಆಂತರಿಕ ಭಿನ್ನಮತ ಇರುವುದಿಲ್ಲ ಎಂದರು.’

ಕೋಲಾರದಲ್ಲಿ ಬಲಗೈ ಸಮುದಾಯದ ಸಂಖ್ಯೆ ಹೆಚ್ಚಿದೆ. ಹೀಗಾಗಿ ಆ ವರ್ಗಕ್ಕೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯಿಟ್ಟಿದ್ದು ನಿಜ. ಆದರೆ ನಾವು ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. 10 ಲೋಕಸಭಾ ಕ್ಷೇತ್ರದಲ್ಲಿ ಎಡಗೈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೊದಲಿನಿಂದಲೂ ಕಾಂಗ್ರೆಸ್ ಪಕ್ಷ ಎಡಗೈ ಸಮುದಾಯಕ್ಕೆ ಎರಡು ಸ್ಥಾನಗಳನ್ನು ನೀಡುತ್ತಿದ್ದೇವೆ. ಈ ಬಾರಿಯೂ ಅದನ್ನು ಮುಂದುವರೆಸುತ್ತೇವೆ. ಬಿಜೆಪಿಯವರು ಎರಡು ಕ್ಷೇತ್ರಗಳಿಗೆ ಟಿಕೆಟ್ ನೀಡಿದ್ದಾರೆ ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಕೇಂದ್ರ ಗೃಹಸಚಿವ ಅಮಿತ್ ಷಾ ರೋಡ್ ಶೋ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಹೆಚ್ಚು ಪ್ರಬಲರಾದರೆ ಶತ್ರುಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಅಮಿತ್ ಷಾ ಬರಲಿ, ಗೌರವಾನ್ವಿತ ಪ್ರಧಾನಿಯವರೂ ಬರಲಿ, ನಮಗೆ ದೇವೇಗೌಡರು, ಅವರ ಕುಟುಂಬದ ಮಗ, ಸೊಸೆ, ಮೊಮ್ಮಗ ಎಲ್ಲರ ವಿರುದ್ಧವೂ ಸ್ರ್ಪಧಿಸಿಯಾಗಿದೆ. ಕಾಂಗ್ರೆಸ್ ಪಕ್ಷ ನಮ್ಮ ನಾಯಕತ್ವ ಸಿದ್ಧಾಂತದ ಮೇಲೆ ಚುನಾವಣೆ ನಡೆಸುತ್ತದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡಲು, ಆಹಾರದ ಕಿಟ್ ನೀಡಲು, ಹೆಣ ಹೊರಲು ಯಾರಿದ್ದರು? ಆಗೆಲ್ಲಾ ಡಿ.ಕೆ.ಸುರೇಶ್ ಮತ್ತು ಕಾಂಗ್ರೆಸ್ ಪಕ್ಷ ಮಾತ್ರ ಕೆಲಸ ಮಾಡಿತ್ತು ಎಂದರು.ಕನಕಪುರದಲ್ಲಿ ಕಲ್ಲು ಮತ್ತು ಹೃದಯ ಎಂಬ ಚರ್ಚೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಲ್ಲು ಒಡೆದರೆ ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕøತಿ ಎಂದು ಹೇಳಿದರು.

ದೆಹಲಿ ಸೇರಿದಂತೆ ರಾಷ್ಟ್ರಾದ್ಯಂತ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ನೋಟೀಸ್ ನೀಡಿ ಕಿರುಕುಳ ನೀಡಲಾಗುತ್ತಿದೆ. ಹಿರಿಯ ಒಕ್ಕೂಟ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಿದೆ ಎಂಬ ಆತಂಕದಲ್ಲಿ ಈ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಟೀಕಿಸಿದರು.

ಕಮ್ಯುನಿಸ್ಟ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳನ್ನು ಎನ್ಡಿಎ ಗುರಿಯಾಗಿಸಿಕೊಂಡಿದೆ. ವಿಪಕ್ಷಗಳನ್ನು ದುರ್ಬಲಗೊಳಿಸಲು ಕೇಂದ್ರ ತನಿಖಾ ದಳಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ವೈಯಕ್ತಿಕವಾಗಿ ನನಗೂ ನೋಟೀಸ್ ನೀಡಲಾಗಿದೆ ಎಂದು ಹೇಳಿದರು.

ರಾಜ್ಯದಿಂದ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಬಿಜೆಪಿ ನಾಯಕರೂ ಸೇರಿದಂತೆ ಹಲವರ ವಿರುದ್ಧ ಪ್ರಕರಣಗಳಿವೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ದೋಷಾರೋಪಣ ಪಟ್ಟಿ ಸಲ್ಲಿಸುವುದಿಲ್ಲ. ಆದರೆ ನಮ್ಮ ವಿರುದ್ಧ ಸಿಬಿಐ, ಇಡಿ, ಆದಾಯ ತೆರಿಗೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

RELATED ARTICLES

Latest News