Friday, November 22, 2024
Homeರಾಜಕೀಯ | Politicsಬಿಜೆಪಿಗೆ ಕಗ್ಗಂಟಾದ ಬಾಕಿ 5 ಕ್ಷೇತ್ರಗಳ ಟಿಕೆಟ್ ಹಂಚಿಕೆ

ಬಿಜೆಪಿಗೆ ಕಗ್ಗಂಟಾದ ಬಾಕಿ 5 ಕ್ಷೇತ್ರಗಳ ಟಿಕೆಟ್ ಹಂಚಿಕೆ

ಬೆಂಗಳೂರು,ಮಾ.14- ಹಲವು ವಿರೋಧದ ನಡುವೆಯೂ 20 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿರುವ ಬಿಜೆಪಿಗೆ ಉಳಿದಿರುವ 5 ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.ಅದರಲ್ಲೂ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‍ಗೆ ಯಾವ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬುದೇ ಯಕ್ಷ ಪ್ರಶ್ನೆಯಾಗಿದೆ.

ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾಜಿ ಸಚಿವರಾದ ಡಾ.ಕೆ.ಸುಧಾಕರ್, ಸಿ.ಟಿ.ರವಿ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇದು ವರಿಷ್ಠರಿಗೂ ತಲೆನೋವಾಗಿ ಪರಣಮಿಸಿರುವುದರಿಂದ ಅಭ್ಯರ್ಥಿ ಆಯ್ಕೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರವೇ ಬಿಜೆಪಿ ತನ್ನ ಪಾಲಿನ ಬೆಳಗಾವಿ, ರಾಯಚೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಹೆಸರನ್ನು ಅಂತಿಮಗೊಳಿಸಲಿದೆ. ಜಗದೀಶ್ ಶೆಟ್ಟರ್‍ಗೆ ಈ ಮೊದಲು ಧಾರವಾಡ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಆದರೆ ಕಳೆದ 5 ವರ್ಷ ಸಂಸತ್‍ನಲ್ಲಿ ಪಕ್ಷ ಮತ್ತು ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಿರುವ ಪ್ರಹ್ಲಾದ್ ಜೋಶಿಗೆ ಟಿಕೆಟ್ ನೀಡದಿರಲು ವರಿಷ್ಠರು ಕೂಡ ಹಿಂದೇಟು ಹಾಕಿದ್ದಾರೆ.

ಹೀಗಾಗಿ ಶೆಟ್ಟರ್ ಅವರನ್ನು ಪಕ್ಕದ ಬೆಳಗಾವಿಯಿಂದ ಸ್ಪರ್ಧಿಸುವಂತೆ ಮನವೊಲಿಸಲಾಗುತ್ತಿದೆ. ಒಂದು ವೇಳೆ ಇದೇ ಕ್ಷೇತ್ರದಿಂದ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್‍ನಿಂದ ಕಣಕ್ಕಿಳಿದರೆ ಶೆಟ್ಟರ್ ರಾಜಕೀಯ ಪರಿಸ್ಥಿತಿ ಡೋಲಾಯಮಾನಕ್ಕೆ ಸಿಲುಕಲಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಬೆಳಗಾವಿಯಿಂದ ಕಣಕ್ಕಿಳಿದರೆ ಶೆಟ್ಟರ್ ಬಿಜೆಪಿ ಅಭ್ಯರ್ಥಿಯಾಗಬಹುದು ಎಂದು ತಿಳಿದುಬಂದಿದೆ. ಸದಾ ವಿವಾದಾತ್ಮಕ ಮಾತುಗಳಿಂದಲೇ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತಿರುವ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ನೀಡುವ ಕುರಿತು ಖುದ್ದು ಪ್ರಧಾನಿ ನರೇಂದ್ರಮೋದಿಯೇ ತೀರ್ಮಾನಿಸುತ್ತಾರೆ ಎನ್ನಲಾಗಿದೆ.

ಸಂವಿಧಾನ ಕುರಿತಂತೆ ತಾವು ನೀಡಿರುವ ಹೇಳಿಕೆಗೆ ಸಾರ್ವಜನಿಕವಾಗಿ ಬಹಿರಂಗವಾಗಿ ಅವರು ಕ್ಷಮಾಪಣೆ ಕೇಳಿದರೆ ಮಾತ್ರ ಟಿಕೆಟ್ ನೀಡುವ ಬಗ್ಗೆ ಆಲೋಚಿಸುತ್ತೇವೆ ಎಂಬ ಷರತ್ತನ್ನು ವರಿಷ್ಠರು ವಿಧಿಸಿದ್ದಾರೆ.ಇದೇ ರೀತಿ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದ ಹಿಂದೂ ಫೈಯರ್ ಬ್ರ್ಯಾಂಡ್ ಪ್ರಜ್ಞಾ ಸಿಂಗ್ ಠಾಕೂರ್‍ಗೆ ಈ ಬಾರಿ ಮಧ್ಯಪ್ರದೇಶದ ಭೂಪಾಲ್‍ನಿಂದ ಟಿಕೆಟ್ ನಿರಾಕರಿಸಲಾಯಿತು.

ಮಹಾತ್ಮಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೂಡ್ಸೆ ನನ್ನ ಪಾಲಿನ ದೇವರು ಎಂದು ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ಕೊಟ್ಟಿದ್ದರು. ನಿಮ್ಮನ್ನು ಯಾವುದೇ ಕಾರಣಕ್ಕೂ ನಾನು ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಮೋದಿಯವರು ಎಚ್ಚರಿಕೆ ಕೊಟ್ಟಿದ್ದರು. ಈಗ ಇದೇ ನಿಯಮ ಅನಂತಕುಮಾರ್ ಹೆಗಡೆಗೂ ಅನ್ವಯವಾಗುವುದಾದರೆ ಉತ್ತರ ಕನ್ನಡದಿಂದ ಅವರಿಗೆ ಗೇಟ್‍ಪಾಸ್ ಗ್ಯಾರಂಟಿ ಎಂದು ಪಕ್ಷದ ಮೂಲಗಳು ಹೇಳಿವೆ.

ರಾಯಚೂರಿನಲ್ಲಿ ಹಾಲಿ ಸಂಸದ ರಾಜು ಅಮರೇಶ್ ನಾಯಕ್‍ಗೆ ಸಾಕಷ್ಟು ವಿರೋಧಿ ಅಲೆ ಇರುವುದರಿಂದ ಮಾಜಿ ಸಂಸದ ಬಿ.ವಿ.ನಾಯಕ್ ಇಲ್ಲವೇ ರವಿ ನಾಯಕ್‍ಗೆ ಟಿಕೆಟ್ ಕೊಡಬಹುದು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಯಲಹಂಕ ಶಾಸಕ ವಿಶ್ವನಾಥ ಪುತ್ರ ಅಲೋಕ್ ವಿಶ್ವನಾಥ್ ನಡುವೆ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ.

ಈ ಕ್ಷೇತ್ರದಿಂದ ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷ ಆಲೋಚಿಸಿದೆ ಎಂದು ಗೊತ್ತಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳು ದಳಪತಿಗಳ ಪಾಲಾಗಲಿದೆ.

RELATED ARTICLES

Latest News