Thursday, December 5, 2024
Homeರಾಜಕೀಯ | Politicsಜಂಪಿಂಗ್ ತಯಾರಿ : ಬಿಜೆಪಿಗೆ ಕಂಟಕವಾಗ್ತಾರಾ ಟಿಕೆಟ್ ವಂಚಿತರು..?!

ಜಂಪಿಂಗ್ ತಯಾರಿ : ಬಿಜೆಪಿಗೆ ಕಂಟಕವಾಗ್ತಾರಾ ಟಿಕೆಟ್ ವಂಚಿತರು..?!

ಬೆಂಗಳೂರು,ಮಾ.14- ಸಾಕಷ್ಟು ಅಳೆದೂ ತೂಗಿ 20 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಘೋಷಣೆ ಮಾಡುತ್ತಿದ್ದಂತೆ ಅವಕಾಶ ವಂಚಿತರು ಸಿಡಿದೆದ್ದಿದ್ದು, ಬಂಡಾಯದ ಬಿಸಿ ಜೋರಾಗಿದೆ. ಟಿಕೆಟ್ ಘೋಷಣೆ ಬೆನ್ನೆಲ್ಲೇ ಬೆಂಗಳೂರು ಉತ್ತರ, ಕೊಪ್ಪಳ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ದಾವಣಗೆರೆ, ಬೀದರ್, ಶಿವಮೊಗ್ಗ, ಚಿಕ್ಕೋಡಿ, ತುಮಕೂರು ಕ್ಷೇತ್ರದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಸ್ಥಳೀಯ ನಾಯಕರ ಅಸಮಾಧಾನದಿಂದ ಪಕ್ಷಕ್ಕೆ ಮುಳುವಾಗುವ ಆತಂಕ ಎದುರಾಗಿದೆ.

ಸುಮಾರು 10 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಟಿಕೆಟ್ ಸಿಗದಿರುವವರು ಸ್ವಪಕ್ಷೀಯರ ವಿರುದ್ಧವೇ ಬಂಡಾಯ ಸಾರಿದ್ದು, ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತಂತೆ ಆಪ್ತರ ಸಭೆ ಕರೆಯುವ ಮೂಲಕ ಅಧಿಕೃತ ಅಭ್ಯರ್ಥಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

ವಿಶೇಷವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರಗೆ ಟಿಕೆಟ್ ಘೋಷಣೆಯಾಗಿದೆ. ಹಾವೇರಿಯಿಂದ ತಮ್ಮ ಪುತ್ರನಿಗೆ ಟಿಕೆಟ್ ಸಿಗಬಹುದು ಎಂದು ನಿರೀಕ್ಷಿಸಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮೊದಲ ಬಾರಿಗೆ ಪಕ್ಷದ ವಿರುದ್ಧವೇ ಕೆಂಡ ಕಾರಿದ್ದಾರೆ. ಹಾವೇರಿಯಿಂದ ತಮ್ಮ ಪುತ್ರ ಕೆ.ಇ.ಕಾಂತೇಶ್‍ಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ನಾಳೆ ಶಿವಮೊಗ್ಗದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿರುವ ಈಶ್ವರಪ್ಪ ರಾಘವೇಂದ್ರರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಇದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಶಿವಮೊಗ್ಗಕ್ಕೆ ಹೊಂದಿಕೊಂಡಿರುವ ಪಕ್ಕದ ದಾವಣಗೆರೆಯಲ್ಲೂ ಭಿನ್ನಮತ ಜೋರಾಗಿದೆ. ಅಚ್ಚರಿ ಬೆಳವಣಿಗೆ ಎಂಬಂತೆ ಹಾಲಿ ಸಂಸದ ಜಿ.ಎಂ.ಸಿದ್ದೇಶ್‍ಗೆ ಟಿಕೆಟ್ ಕೈತಪ್ಪಿತು. ಆದರೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್‍ಗೆ ಟಿಕೆಟ್ ನೀಡಿರುವುದು ಹಲವರ ಕಣ್ಣು ಕೆಂಪಾಗುವಂತೆ ಮಾಡಿದೆ.

ಗಾಯತ್ರಿ ಸಿದ್ದೇಶ್ವರ್‍ಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಗುರು ಸಿದ್ದನಗೌಡರ್, ಜಿಲ್ಲಾ ಬಿಜೆಪಿ ಮುಖಂಡರು ಸಭೆ ನಡೆಸಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿರುವುದಕ್ಕೂ ವಿರೋಧ ವ್ಯಕ್ತವಾಗಿದೆ. ಸ್ವತಃ ಬಿಜೆಪಿ ಕಾರ್ಯಕರ್ತರೇ ಗೋ ಶೋಭಕ್ಕ ಗೋ ಅಭಿಯಾನವನ್ನು ಆರಂಭಿಸಿದ್ದಾರೆ. ಬರುವ ದಿನಗಳಲ್ಲಿ ಇದು ಬಿಜೆಪಿಗೆ ಬಿಸಿತುಪ್ಪವಾಗುವುದರಲ್ಲಿ ಅನುಮಾನವೇ ಇಲ್ಲ.

ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿಗೆ ಯಾವುದೇ ರೀತಿಯ ಭಿನ್ನಮತ ತಟ್ಟಿಲ್ಲ. ತುಮಕೂರಿನಲ್ಲೂ ಬಂಡಾಯ ದಿನದಿನಕ್ಕೂ ಜೋರಾಗುತ್ತಿದೆ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ನಡೆ ಬಿಜೆಪಿಗೆ ದುಬಾರಿಯಾಗುವ ಸಾಧ್ಯತೆಯಿದೆ. ಮಾಜಿ ಸಚಿವ ವಿ.ಸೋಮಣ್ಣರಿಗೆ ಟಿಕೆಟ್ ಕೊಟ್ಟಿರುವುದು ಮಾಧುಸ್ವಾಮಿ ಬೆಂಬಲಿಗರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಜಿಲ್ಲೆಯಾದ್ಯಂತ ಅಭಿಯಾನ ಪ್ರಾರಂಭವಾಗಿದೆ.

ಚುನಾವಣೆಗೂ ಮುನ್ನವೇ ರಾಜ್ಯದ ಗಮನ ಸೆಳೆದಿದ್ದ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಿದೆ. ಈ ಕ್ಷೇತ್ರದ ಮೇಲೆ ಮಾಜಿ ಸಚಿವರಾದ ಸಿ.ಟಿ.ರವಿ, ಡಿ.ಎನ್.ಜೀವರಾಜ್ ಹಾಗೂ ಪ್ರಮೋದ್ ಮಧ್ವರಾಜ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಇದೀಗ ಅಚ್ಚರಿಯೆಂಬಂತೆ ವಿಧಾನಪರಿಷತ್‍ನ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸಪೂಜಾರಿಗೆ ಟಿಕೆಟ್ ಘೋಷಿಸಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಸಿ.ಟಿ.ರವಿ ಅವರ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗಿದೆ. ಬೆಂಗಳೂರು ಉತ್ತರದಲ್ಲೂ ಟಿಕೆಟ್ ಕೈತಪ್ಪಿದ್ದು, ಸದ್ಯ ವರಿಷ್ಠರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ರ್ಪಸುವಂತೆ ಮನವೊಲಿಸುತ್ತಿದ್ದಾರೆ. ಬಳ್ಳಾರಿಯಲ್ಲಿ ರಾಮಲುಗೆ ಟಿಕೆಟ್ ಕೊಟ್ಟಿರುವುದು ಹಾಲಿ ಸಂಸದ ದೇವೇಂದ್ರಪ್ಪ ಮತ್ತು ಅವರ ಬೆಂಬಲಿಗರು ಪಕ್ಷದ ವಿರುದ್ಧ ತಿರುಗಿಬಿದ್ದಿದ್ದಾರೆ.

ಅದೇ ರೀತಿ ಕೊಪ್ಪಳದಲ್ಲಿ ಕರಡಿ ಸಂಗಣ್ಣರಿಗೆ ಟಿಕೆಟ್ ತಪ್ಪಿರುವುದರಿಂದ ಅವರು ಕಾಂಗ್ರೆಸ್ ಕಡೆ ಮುಖ ಮಾಡುವ ಸಾಧ್ಯತೆಯಿದೆ. ಒಂದು ವೇಳೆ ಇದು ನಡೆದರೆ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಯಿದೆ.ಬೀದರ್ ಕ್ಷೇತ್ರದಲ್ಲಿ ಎಲ್ಲ ಶಾಸಕರ ನೇರ ವಿರೋಧ ಹೊಂದಿರುವ ಭಗವಂತ ಖೂಬಾ ಅವರಿಗೆ ಬಿಜೆಪಿ ಹೈಕಮಾಂಡ್ ಮತ್ತೆ ಕ್ಷೇತ್ರದಲ್ಲಿ ಮಣೆ ಹಾಕಿದೆ. ಮಾಜಿ ಸಚಿವ ಪ್ರಭು ಚೌಹಾಣ್ ಅವರು ಖೂಬಾ ಅವರಿಗೆ ಟಿಕೆಟ್ ನೀಡದಂತೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು. ಸಭೆಯಲ್ಲೂ ನೇರ ವಾಗ್ದಾಳಿ ನಡೆಸಿದ್ದರು. ಇದೀಗ ಮತ್ತೆ ಖೂಬಾಗೆ ಟಿಕೆಟ್ ಘೋಷಣೆಯಾಗಿದ್ದು, ಕ್ಷೇತ್ರದಲ್ಲಿ ಅಸಮಾಧಾನ ಪಕ್ಷಕ್ಕೆ ಮುಳುವಾಗುವ ಆತಂಕ ಎದುರಾಗಿದೆ.

ಕೊಪ್ಪಳ ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಡಾ.ಬಸವರಾಜ ತ್ಯಾವಟೂರು ಅವರಿಗೆ ಬಿಜೆಪಿ ಟಿಕೆಟ್ ಲಭಿಸಿದೆ. ಕ್ಷೇತ್ರದ ಹಾಲಿ ಸಂಸದರಾಗಿರುವ ಸಂಗಣ್ಣ ಕರಡಿ ಅವರು ತಟಸ್ಥರಾದರೆ ಬಸವರಾಜ ಗೆಲುವು ಸುಲಭವಾಗಲಿದೆ.ಮೈಸೂರಿನಲ್ಲಿ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ಅಸಮಾಧಾನದ ನಡುವೆ ಬೆಂಬಲಿಗರು ನ್ಯೂಟ್ರಲ್? ಆಗುವ ಸಾಧ್ಯತೆ ಇದೆ.

ತುಮಕೂರು ಕ್ಷೇತ್ರದಲ್ಲಿ ವಿ.ಸೋಮಣ್ಣರಿಗೆ ಟಿಕೆಟ್ ಘೋಷಣೆಯಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳ ಮೇಲೆ ಹಾಗೂ ನಳಂಬ ಲಿಂಗಾಯತ ಸಮುದಾಯ ಹಿಡಿತ ಹೊಂದಿರುವ ಮಾಧುಸ್ವಾಮಿ ಅವರು ಮುಂದಿನ ನಡೆ ಕುತೂಹಲ ಮೂಡಿಸಿದೆ. ಇನ್ನೊಂದೆಡೆ, ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್ ಕುಟುಂಬಕ್ಕೆ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ಏಳದು ಎಂದು ಹೇಳಲು ಸಾಧ್ಯವಿಲ್ಲ. ಚಿಕ್ಕೋಡಿ ಕ್ಷೇತ್ರದಲ್ಲಿ ರಮೇಶ್ ಕತ್ತಿ ತಟಸ್ಥವಾದರೆ ಅಣ್ಣಾ ಸಾಹೇಬ್ ಜೊಲ್ಲೆ ಗೆಲುವು ಕಷ್ಟಕರವಾಗಲಿದೆ.

RELATED ARTICLES

Latest News