Saturday, September 14, 2024
Homeಜಿಲ್ಲಾ ಸುದ್ದಿಗಳು | District Newsಕಲುಷಿತ ನೀರು ಪ್ರಕರಣ : ಸತ್ಯ ಮರೆಮಾಚುತ್ತಿದ್ದಾರಾ ಅಧಿಕಾರಿಗಳು..?

ಕಲುಷಿತ ನೀರು ಪ್ರಕರಣ : ಸತ್ಯ ಮರೆಮಾಚುತ್ತಿದ್ದಾರಾ ಅಧಿಕಾರಿಗಳು..?

ಮಧುಗಿರಿ,ಜೂ.13- ಕಲುಷಿತ ನೀರು ಕುಡಿದು ಸುಮಾರು 54 ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿರುವ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಮೂರನೇ ದಿನವಾದ ನಿನ್ನೆ ಮತ್ತೆ ಇಬ್ಬರು ಮೃತ ಪಟ್ಟಿದ್ದು, ಅಧಿಕಾರಿಗಳು ಸತ್ಯವನ್ನು ಮರೆಮಾಚುತ್ತಿದ್ದಾರಾ..? ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಚಿಕ್ಕದಾಸಪ್ಪ ಕಲುಷಿತ ನೀರು ಕುಡಿದು ಅಸ್ವಸ್ಥರಾದ ಹಿನ್ನೆಲೆಯಲ್ಲಿ ತುಮಕೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ.

ಚನ್ನೇನಹಳ್ಳಿ ಗ್ರಾಮದ ಚಿಕ್ಕದಾಸಪ್ಪ(74), ಮೀನಾಕ್ಷಿ(3) ಮೃತಪಟ್ಟವರು.ಅದೇ ಗ್ರಾಮದ ಬಾಲಕಿ ಮೀನಾಕ್ಷಿ(3) ಸಹ ವಾಂತಿ ಬೇಧಿಯಿಂದ ನರಳುತ್ತಿದ್ದು, ಚಿಕಿತ್ಸೆಗಾಗಿ ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ಸಾಗಿ ಮಲಗಿದ್ದಾಗ ಏಕಾಏಕಿ ಕೆಮು ಕಾಣಿಸಿಕೊಂಡಿದ್ದು, ಪೋಷಕರು ಬಾಲಕಿಯನ್ನು ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಅಲ್ಲಿಂದ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುವಾಗ ಬಾಲಕಿ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ.

ಗ್ರಾಮದ ಹನುಮಕ್ಕ (86) ಒಂದು ವಾರದ ಹಿಂದೆ ಆಕಸಿಕವಾಗಿ ಬಿದ್ದಿದ್ದರು. ನಾಗಪ್ಪ (95) ಹದಿನೈದು ದಿನಗಳಿಂದ ಅನಾರೋಗ್ಯ ಬಳಲುತ್ತಿದ್ದರು. ನಾಗಮ (95) ವಯೋ ಸಹಜ ಖಾಯಿಲೆಯಿಂದ ಬಳಲಿ ಮೃತಪಟ್ಟಿದ್ದಾರೆಯೇ ಹೊರತು ಕಲುಷಿತ ನೀರಿನ ಸೇವನೆಯಿಂದಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮಂಗಳವಾರ ಸ್ಪಷ್ಟಪಡಿಸಿದ್ದರು. ನಿನ್ನೆ ಮತ್ತೆ ಇಬ್ಬರು ಮೃತಪಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಮತ್ತೊಬ್ಬ ವ್ಯಕ್ತಿ ಪೆದ್ದಣ್ಣ(74) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 3 ವರ್ಷದ ಬಾಲಕಿ ಮೀನಾಕ್ಷಿ ಸೇರಿದಂತೆ ನಿನ್ನೆ ಇಬ್ಬರು ಮೃತಪಟ್ಟಿದ್ದು, ಸಾವಿಗೆ ಕಾರಣ ಏನು ಎಂಬುದು ನಿಖರವಾಗಿ ತಿಳಿದಿಲ್ಲ. ಆದರೆ ಕಲುಷಿತ ನೀರು ಸೇವನೆಯಿಂದ ವಾಂತಿ ಮತ್ತು ಬೇಧಿಯಾಗಿ ಅಸ್ವಸ್ಥಗೊಂಡು ಮೃತಪಟ್ಟಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿದ್ದು, ಮೃತರ ಶವಪರೀಕ್ಷೆ ನಡೆಸಿದರೆ ಘಟನೆಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬಹುದು. ಈಗಾಗಲೇ ನೀರಿನ ಸ್ಯಾಂಪಲ್‌ ಅನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ.

RELATED ARTICLES

Latest News