Thursday, September 19, 2024
Homeರಾಜಕೀಯ | Politicsಸಿಎಂ, ಡಿಸಿಎಂ ಹುದ್ದೆಯ ವಿವಾದದ ಕುರಿತು ಡಿಕೆಶಿ ಖಡಕ್ ವಾರ್ನಿಂಗ್

ಸಿಎಂ, ಡಿಸಿಎಂ ಹುದ್ದೆಯ ವಿವಾದದ ಕುರಿತು ಡಿಕೆಶಿ ಖಡಕ್ ವಾರ್ನಿಂಗ್

ಬೆಂಗಳೂರು, ಜೂ.29- ಉಪಮುಖ್ಯಮಂತ್ರಿ ಹುದ್ದೆಯೂ ಇಲ್ಲ, ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೂ ಚರ್ಚೆ ಇಲ್ಲ. ನಾನು ಮಾಡಿರುವ ಕೆಲಸಕ್ಕೆ ಪಕ್ಷ ತೀರ್ಮಾನ ಮಾಡಲಿದೆ. ನನಗೆ ಯಾರ ಶಿಫಾರಸು ಅಗತ್ಯ ಇಲ್ಲ. ಸಿಎಂ ಹಾಗೂ ಡಿಸಿಎಂ ಹುದ್ದೆಗಳ ಬಗ್ಗೆ ಇನ್ನು ಮುಂದೆ ಯಾರೂ ಬಹಿರಂಗ ಹೇಳಿಕೆ ನೀಡಬಾರದು. ಇಲ್ಲಿಗೇ ಮುಗಿಯಬೇಕು, ಇನ್ನೂ ಮುಂದೆಯೂ ಚರ್ಚೆ ಮುಂದುವರೆದರೆ ಪಕ್ಷದವರಿಗೆ ನೋಟೀಸ್‌‍ ನೀಡಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ತಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಇಲ್ಲ, ಮುಖ್ಯಮಂತ್ರಿ ಪ್ರಶ್ನೆ ಇಲ್ಲ. ದಯವಿಟ್ಟು ನಾನು ಮನವಿ ಮಾಡುತ್ತೇನೆ. ನನಗೆ ಯಾರ ಶಿಫಾರಸಿನ ಅವಶ್ಯಕತೆ ಇಲ್ಲ. ನಾವು ಮಾಡಿರುವ ಕೆಲಸಕ್ಕೆ ನಮ ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದರು.

ಪಕ್ಷದ ಹಿತದೃಷ್ಟಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಕುಳಿತುಕೊಂಡು ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಇನ್ನೂ ಮುಂದೆ ಈ ವಿಷಯವಾಗಿ ಶಾಸಕರಾಗಲಿ, ಸಚಿವರಾಗಲಿ, ಸ್ವಾಮಿಗಳಾಗಲಿ ಮಾತನಾಡುವ ಅವಶ್ಯಕತೆ ಇಲ್ಲ. ಅವರ ಆಶೀರ್ವಾದ ಇದ್ದರೆ ಒಳಗಿನಿಂದಲೇ ಹರಸಲಿ ಸಾಕು, ಅದನ್ನ ಬಿಟ್ಟು ಇನ್ನು ಮುಂದೆ ಚರ್ಚೆ ಮಾಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಕುರಿತು ಯಾವ ಮಂತ್ರಿಯೂ ಬಹಿರಂಗವಾಗಿ ಚರ್ಚೆ ಮಾಡಬೇಕಾಗಿಲ್ಲ. ನಮ ಪಕ್ಷದ ಶಾಸಕರೂ ಕೂಡ ಪ್ರಸ್ತಾಪ ಮಾಡಬಾರದು, ಹಾಗೂ ಮುಂದುವರೆದರೆ ಎಐಸಿಸಿ ಅಥವಾ ತಾವು ವಿಧಿ ಇಲ್ಲದೆ ನೋಟೀಸ್‌‍ ನೀಡಬೇಕಾಗುತ್ತದೆ. ಪಕ್ಷಕ್ಕೆ ಶಿಸ್ತು ಮುಖ್ಯ. ಶಿಸ್ತಿಲ್ಲದೆ ಯಾರೂ ಇಲ್ಲ. ಪಕ್ಷವನ್ನು ಎಷ್ಟು ಶ್ರಮ ಪಟ್ಟಿದ್ದೇವೆ, ಏನೆಲ್ಲಾ ಮಾಡಿದ್ದೇವೆ ಎಂಬುದು ನಮಗೆ ಗೊತ್ತಿದೆ. ಇವತ್ತು ಇವರ್ಯಾರೂ ಮಾತನಾಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.

ದೆಹಲಿಯಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಲಿಫ್‌್ಟನಲ್ಲಿ ಹೋಗುವಾಗ ವಿಶ್ವ ಒಕ್ಕಲಿಗರ ಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಹೇಳಿಕೆ ಬಗ್ಗೆ ಚರ್ಚೆ ಮಾಡಿದ್ದು, ಹೇಳಿಕೊಟ್ಟು ಹೇಳಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ, ಅದಕ್ಕೆ ಗೃಹ ಸಚಿವರು ಹೌದು ಎಂದು ತಲೆಯಾಡಿಸುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮಗೆ ಗೊತ್ತಿಲ್ಲ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಇದ್ದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ಸಿಟ್ಟಾಗಿ ಹೇಳಿದರು.

ಈವರೆಗೂ ಯಾವ ಸ್ವಾಮೀಜಿಯವರೂ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹುದ್ದೆ ಕುರಿತು ಹೇಳಿಕೆ ನೀಡಿರಲಿಲ್ಲ. ಈಗಷ್ಟೇ ಸ್ವಾಮೀಜಿ ಮಾತನಾಡಿದ್ದಾರೆ. ನಮ ರಾಜಕಾರಣದ ಸುದ್ದಿಗೆ ಮಠಾಧೀಶರು ಬರುವುದು ಬೇಡ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದರು.ದೆಹಲಿಯಲ್ಲಿ ನಡೆದ ಸಂಸದರ ಸಭೆಯ ಕುರಿತು ವಿವರಣೆ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ಇಬ್ಬರು ಸಂಸದರು ಖಾಸಗಿ ಕಾರ್ಯಕ್ರಮದಿಂದಾಗಿ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ಉಳಿದಂತೆ ಎಲ್ಲರೂ ಭಾಗವಹಿಸಿದ್ದರು. ರಾಜಕಾರಣ ಬದಿಗಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದ್ದಾರೆ. ರಾಜ್ಯದ ಸಚಿವರು, ಅಽಕಾರಿಗಳು ದೆಹಲಿಗೆ ಬಂದು ತಮ್ಮನ್ನು ಭೇಟಿ ಮಾಡಿದರೆ ಕೇಂದ್ರದಿಂದ ಅಗತ್ಯ ನೆರವು ಕೊಡಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಎರಡು ಗಂಟೆ ಸಭೆಯಲ್ಲಿ ಭಾಗವಹಿಸಿದ್ದು ದೊಡ್ಡ ಸಾಧನೆ. ಭದ್ರಾ ಮೇಲ್ದಂಡೆ ಯೋಜನೆಗೆ ಈ ಮೊದಲು ಘೋಷಿಸಿದ್ದ 5300 ಕೋಟಿ ರೂಪಾಯಿಗಳ ವಿಶೇಷ ಅನುದಾನದ ವಿಷಯದಲ್ಲಿ ತಾವು ಈಗಲೂ ಬದ್ಧ ಎಂದು ಸಚಿವೆ ಭರವಸೆ ನೀಡಿದ್ದಾರೆ. ಆದರೆ ಕೆಲ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಈವರೆಗೂ ಅದರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಕೇಂದ್ರ ಸರ್ಕಾರಕ್ಕೆ ಅಗತ್ಯ ಇರುವ ರೀತಿಯಲ್ಲೆಲ್ಲಾ ಬರೆದುಕೊಟ್ಟಿದ್ದೇವೆ. ಮುಂದೆ ಕೂಡ ಅಗತ್ಯ ಮಾಹಿತಿ ಒದಗಿಸುತ್ತೇವೆ ಎಂದು ಹೇಳಿದರು.

ಇನ್ನೂ ಮಹದಾಯಿ ವಿಚಾರದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಯವರು ಸಂಸದರಾಗಿ ದೆಹಲಿಗೆ ಹೋಗಿದ್ದಾರೆ. ಅವರಿಗೆ ಎಲ್ಲಾ ಮಾಹಿತಿಗಳು ಬೆರಳ ತುದಿಯಲ್ಲಿ ಇದೆ. ಅವರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಚರ್ಚೆ ಮಾಡಿ ಇತ್ಯರ್ಥ ಪಡಿಸಬಹುದು ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ನಿನ್ನೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವರನ್ನು ಭೇಟಿ ಮಾಡಿದ್ದೆವು. ಅವರು ಎಲ್ಲೆಲ್ಲಿ ಅಡಚಣೆ ಇದೆ ಎಂದು ತಿಳಿಸಿದ್ದಾರೆ. ಕೆಲವು ಕಡೆ ರೈತರು ಮಾರ್ಗ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಇನ್ನೂ ಕೆಲವು ಕಡೆ ದೇವಸ್ಥಾನಗಳು ಅಡ್ಡ ಬರಲಿದ್ದು, ಅದನ್ನು ಮುಟ್ಟಬಾರದು ಎಂದು ಒತ್ತಾಯಿಸಲಾಗುತ್ತಿದೆ. ಆದರೆ ಅದೆಲ್ಲಾ ಸಾಧ್ಯವಿಲ್ಲ. ನಾವು ಸ್ಥಳೀಯರ ಜೊತೆ ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.

ಇಂದು ಸಂಜೆ ಮುಖ್ಯಮಂತ್ರಿಯವರು ಮತ್ತು ತಾವು ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಈ ವೇಳೆ ಮುಖ್ಯಮಂತ್ರಿಯವರು ವಿಶೇಷ ಮನವಿಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

RELATED ARTICLES

Latest News