Friday, May 3, 2024
Homeರಾಜಕೀಯಜೆಡಿಎಸ್ ನಾಲ್ಕೂ ಕ್ಷೇತ್ರಗಳಲ್ಲಿ ಸೋಲುತ್ತೆ : ಡಿ.ಕೆ.ಶಿವಕುಮಾರ್

ಜೆಡಿಎಸ್ ನಾಲ್ಕೂ ಕ್ಷೇತ್ರಗಳಲ್ಲಿ ಸೋಲುತ್ತೆ : ಡಿ.ಕೆ.ಶಿವಕುಮಾರ್

ಬೆಂಗಳೂರು,ಏ.10- ರಾಜ್ಯದಲ್ಲಿ ಜೆಡಿಎಸ್ ಸ್ಪರ್ಧಿಸಿರುವ ಮೂರು ಮತ್ತು ಮತ್ತೊಂದು ಸೇರಿ ಒಟ್ಟು ನಾಲ್ಕು ಕ್ಷೇತ್ರಗಳಲ್ಲೂ ಸೋಲುಂಟಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ನಗರದಲ್ಲಿಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಒಕ್ಕಲಿಗ ಶಾಸಕರು, ಅಭ್ಯರ್ಥಿಗಳು, ಮುಖಂಡರು ಶ್ರೀ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದರು.

ಸಮಾಜದ ಜನ ಮತ್ತು ಶ್ರೀ ಮಠದ ಸ್ವಾಮೀಜಿಗಳು ದಡ್ಡರಲ್ಲ. ಇವರು ದೂರದ ಬೆಟ್ಟ ತೋರಿಸುತ್ತಿದ್ದಾರೆ. ಮುಂದಿನ ನಾಲ್ಕೈದು ವರ್ಷಗಳ ಕಾಲ ಸಮಾಜಕ್ಕೆ, ರಾಜ್ಯಕ್ಕೆ ಸೇವೆ ಸಲ್ಲಿಸುವ ಅವಕಾಶ ನಮಗಿದೆ. ನಾನು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿದ್ದೇನೆ. ಜನರಿಗಾಗಿ ಹಾಗೂ ಸಮಾಜಕ್ಕಾಗಿ ಕೆಲಸ ಮಾಡಲು ಬದ್ಧನಿದ್ದೇನೆ. ಸಮಾಜದ ಜನ ಇದನ್ನು ಅರ್ಥ ಮಾಡಿಕೊಂಡಿರುತ್ತಾರೆ.

ಕಾಂಗ್ರೆಸ್ ಪಕ್ಷ ಒಟ್ಟು 8 ಜನ ಒಕ್ಕಲಿಗ ನಾಯಕರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ರ್ಪಸಲು ಟಿಕೆಟ್ ನೀಡಿದೆ. ಜೆಡಿಎಸ್‍ನವರು ಬೆಂಗಳೂರು ಗ್ರಾಮಾಂತರದಲ್ಲಿ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿಯನ್ನು ತಮ್ಮವರು ಎಂದು ಹೇಳಿಕೊಂಡು ನಾಲ್ಕು ಕಡೆ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ನಾನು ಖಚಿತವಾಗಿ ಹೇಳುತ್ತೇನೆ. ಜೆಡಿಎಸ್ ಚಿಹ್ನೆಯ ಮೇಲೆ ಸ್ರ್ಪಸಿರುವ ಮಂಡ್ಯ, ಹಾಸನ, ಕೋಲಾರವೂ ಸೇರಿ ಈ ನಾಲ್ಕೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಸೋಲು ಕಾಣಲಿದ್ದಾರೆ ಎಂದರು.

ಕಾಂಗ್ರೆಸ್‍ನ ಅಭ್ಯರ್ಥಿಗಳು ಹಾಗೂ ಸಚಿವರನ್ನು ಆದಿಚುಂಚನಗಿರಿ ಶ್ರೀ ಮಠಕ್ಕೆ ಭೇಟಿ ನೀಡುವಂತೆ ನಾನೇ ಸೂಚನೆ ನೀಡಿದ್ದೆ. ಈಗ ಬಿಜೆಪಿಯ ಅಭ್ಯರ್ಥಿಗಳು ಮಠಕ್ಕೆ ಹೋಗಿದ್ದಾರೆ. ಈ ಹಿಂದೆ ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿಯನ್ನು ತೆಗೆದವರು ಇದೇ ಬಿಜೆಪಿಯವರಲ್ಲವೇ. ಮಠದ ಸ್ವಾಮೀಜಿಗಳು ಅದನ್ನು ಪ್ರಶ್ನಿಸಬೇಕು ಎಂದರು.

ಕುಮಾರಸ್ವಾಮಿ ಅವರ ಸರ್ಕಾರವನ್ನು ಪತನಗೊಳಿಸಿದ ಡಾ.ಸಿ.ಅಶ್ವತ್ಥನಾರಾಯಣ, ಸಿ.ಪಿ.ಯೋಗೇಶ್ವರ್ ಅವರು ಇಂದು ಶ್ರೀಮಠಕ್ಕೆ ಹೋಗಿದ್ದಾರೆ. ಸರ್ಕಾರ ಪತನಗೊಳ್ಳುವಾಗ ಬಿಜೆಪಿಯ ಯಡಿಯೂರಪ್ಪ ಅವರು ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ವಿರುದ್ಧವಾಗಿ ಏನು ಹೇಳಿದ್ದರು ಎಂದು ಸಾರ್ವಜನಿಕವಾಗಿ ದಾಖಲೆಗಳು ಲಭ್ಯವಿದೆ. ನಾನು ಯಾವತ್ತೂ ಅವರುಗಳ ವಿರುದ್ಧ ಅಂತಹ ಭಾಷೆಯನ್ನು ಬಳಕೆ ಮಾಡಿಲ್ಲ. ಯಡಿಯೂರಪ್ಪ ಅವರ ವಿರುದ್ಧ ದೇವೇಗೌಡರು ಹೇಳಿದ ಮಾತುಗಳೂ ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿವೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಈ ಹಿಂದೆ ನಮ್ಮ ಪಕ್ಷದ ಕಾರ್ಯಕರ್ತರು ಭೋಜನಾ ವ್ಯವಸ್ಥೆ ಮಾಡಿದಾಗ ಬಿಜೆಪಿಯವರು ಕೇಸು ದಾಖಲಿಸಿದ್ದರು. ಈಗ ಬಿಜೆಪಿಯವರೇ ಊಟ ಹಾಕಿಸುತ್ತಿದ್ದಾರೆ. ಮಾಧ್ಯಮದವರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ಹೋಗಿ ಊಟ ಮಾಡಿಕೊಂಡು ಬರಲಿ ಎಂದು ಲೇವಡಿ ಮಾಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ರಾಮನಗರದಲ್ಲಿ ಗಿಫ್ಟ್ ಓಚರ್‍ಗಳನ್ನು ಹಂಚಲಾಗುತ್ತಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಗಿಫ್ಟ್ ಓಚರ್ ಹಂಚುತ್ತೇನೋ, ಊಟ ಹಾಕಿಸುತ್ತೇನೋ, ಏನೋ ಒಂದು ಮಾಡುತ್ತೇನೆ, ಬಿಜೆಪಿಯವರು ಏನೂ ಮಾಡುತ್ತಿಲ್ಲವೇ? ಎಂದರು.

ಕುಮಾರಸ್ವಾಮಿಯವರು ಮಂಡ್ಯದಲ್ಲಿ ಗೆದ್ದು ಕೇಂದ್ರ ಸಚಿವರಾಗುವುದಾಗಿ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ನಾನು ಶುಭ ಹಾರೈಸುತ್ತೇನೆ ಎಂದು ಹೇಳಿದರು.ಕಳೆದ ಬಾರಿ ರಾಜ್ಯ ಸಂಸದರಾಗಿದ್ದವರು ನಾಡಿನ ಜನರಿಗೆ ಯಾವ ರೀತಿ ನೆರವಾಗಿದ್ದಾರೆ. ತೆರಿಗೆ ಪಾಲಿನ ಹಂಚಿಕೆಯಲ್ಲಾದ ಅನ್ಯಾಯದ ಬಗ್ಗೆ ಶೋಭಾ ಕರಂದ್ಲಾಜೆ ಸೇರಿದಂತೆ ಯಾರೂ ಧ್ವನಿ ಎತ್ತಿಲ್ಲ. ಮಹದಾಯಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿಲ್ಲ ಎಂದು ಆಕ್ಷೇಪಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಕಾಲಕ್ಕನುಗುಣವಾಗಿ ಮಾತು ಬದಲಿಸುತ್ತಾರೆ. ನಾವು ಮೇಕೆದಾಟು ಯೋಜನೆಯ ಪಾದಯಾತ್ರೆ ಮಾಡಿದಾಗ ಟೀಕೆ ಮಾಡಿದ್ದರು. ಈಗ ಅವರೇ ಹೋರಾಟ ಮಾಡುವುದಾಗಿ ಹೇಳುತ್ತಿದ್ದಾರೆ. ತಮ್ಮ ಸರ್ಕಾರವನ್ನು ಪತನಗೊಳಿಸಿದವರ ಜೊತೆಯಲ್ಲೇ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ ಹೋರಾಟದ ಸಮಾನ ವೇದಿಕೆ ನಿರ್ಮಾಣಗೊಳ್ಳುತ್ತಿಲ್ಲ. ಇದನ್ನು ನಾನು ತಾಳ್ಮೆಯಿಂದ ಗಮನಿಸುತ್ತಿದ್ದೇನೆ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ದಿಂಗಾಲೇಶ್ವರ ಮಠದ ಸ್ವಾಮೀಜಿಗಳ ಸ್ಪರ್ಧೆಗೆ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಬೆಂಬಲ ನೀಡಲು ಸಾಧ್ಯವಿಲ್ಲ. ಈಗಾಗಲೇ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದೆ. ಇದಕ್ಕೂ ಮೊದಲೇ ಸ್ವಾಮೀಜಿಗಳು ಸ್ಪರ್ಧಿಸುವುದಾಗಿ ಹೇಳಿದ್ದರೆ ಅದು ಬೇರೆಯ ಮಾತು. ನಮಗೆ ಸ್ವಾಮೀಜಿಯ ಬಗ್ಗೆ ಗೌರವ ಇದೆ. ಆದರೆ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಂತದಲ್ಲಿ ತಾವು ನಿರ್ಧಾರವನ್ನು ಬದಲಿಸಲಾಗುವುದಿಲ್ಲ ಎಂದರು.

RELATED ARTICLES

Latest News