Home ಇದೀಗ ಬಂದ ಸುದ್ದಿ ವರ್ಗಾವಣೆ ಕೋರಿ ಆಯುಕ್ತರ ಕಚೇರಿಗೆ ಬರಬೇಡಿ : ಬಿ.ದಯಾನಂದ ಖಡಕ್‌ ಎಚ್ಚರಿಕೆ

ವರ್ಗಾವಣೆ ಕೋರಿ ಆಯುಕ್ತರ ಕಚೇರಿಗೆ ಬರಬೇಡಿ : ಬಿ.ದಯಾನಂದ ಖಡಕ್‌ ಎಚ್ಚರಿಕೆ

0
ವರ್ಗಾವಣೆ ಕೋರಿ ಆಯುಕ್ತರ ಕಚೇರಿಗೆ ಬರಬೇಡಿ : ಬಿ.ದಯಾನಂದ ಖಡಕ್‌ ಎಚ್ಚರಿಕೆ

ಬೆಂಗಳೂರು,ಅ.4- ವರ್ಗಾವಣೆ ಕೋರಿ ನೇರವಾಗಿ ಆಯುಕ್ತರ ಕಚೇರಿಗೆ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ದಯಾನಂದ ಅವರು ಎಚ್ಚರಿಕೆ ನೀಡಿದ್ದಾರೆ.

ಅಡುಗೋಡಿಯ ಸಿಎಆರ್‌ ಕವಾಯತು ಮೈದಾನದಲ್ಲಿ ಹಮಿಕೊಂಡಿದ್ದ ಮಾಸಿಕ ಕವಾಯತಿನಲ್ಲಿ ವಂದನೇ ಸ್ವೀಕರಿಸಿ ಮಾತನಾಡಿದ ಅವರು, ನಾವು ವರ್ಷದ ಕೊನೆಯ ಘಟ್ಟಕ್ಕೆ ಬಂದಿದ್ದೇವೆ. ಆದರೂ ಸಹ ಆಯುಕ್ತರ ಕಚೇರಿಗೆ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಗಳು ಕೋರಿಕೆ ಪತ್ರವನ್ನು ಹಿಡಿದು ವರ್ಗಾವಣೆಗಾಗಿ ಬರುತ್ತಿದ್ದಾರೆ.

ಸಂದರ್ಶಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆಯುಕ್ತರ ಕಚೇರಿಗೆ ವರ್ಗಾವಣೆ ಕೋರಿ ಬರುತ್ತಿರುವುದರಿಂದ ಕೆಲಸ ಮಾಡಲು ಆಗುತ್ತಿಲ್ಲ. ವರ್ಷಾಂತ್ಯಕ್ಕೆ ಕೇವಲ ಮೂರು ತಿಂಗಳು ಬಾಕಿ ಇದೆ. ಈಗಾಗಲೇ ಬಡ್ತಿ-ವರ್ಗಾವಣೆಯನ್ನು ಕೌನ್ಸಿಲ್‌ ಮೂಲಕ ಮಾಡಿ ಮುಗಿಸಲಾಗಿದೆ. ಆದರೂ ಕೆಲವರು ವರ್ಗಾವಣೆ ರದ್ದು ಕೋರಿ ಅದೇ ಠಾಣೆಗೆ ಅಥವಾ ಬೇರೆ ಕಡೆ ಹೋಗಲು ಬರುತ್ತಿರುವುದು ಸೂಕ್ತವಲ್ಲ ಎಂದರು.

ಒಂದು ವೇಳೆ ಅಂತಹ ತೊಂದರೆ ಇದ್ದಲ್ಲಿ ನಿಮ ಹೆಚ್ಚುವರಿ ಪೊಲೀಸ್‌‍ ಆಯುಕ್ತರು ಹಾಗೂ ಉಪಪೊಲೀಸ್‌‍ ಆಯುಕ್ತರ ಶಿಫಾರಸ್ಸು ಪತ್ರದೊಂದಿಗೆ ವರ್ಗಾವಣೆ ಕೋರಿಕೆ ಪತ್ರವನ್ನು ಕಚೇರಿಗೆ ತಲುಪಿಸಿ ನೀವು ಬರಬೇಡಿ, ನಾವು ಅದನ್ನು ಪರಿಶೀಲಿಸಿ ಒಂದು ವೇಳೆ ಸೂಕ್ತವೆಂದು ಕಂಡುಬಂದರೆ ವರ್ಗಾವಣೆ ಮಾಡುತ್ತೇವೆ ಎಂದರು.

ಕೆಲವು ಠಾಣೆಗಳಲ್ಲಿ ಸಿಬ್ಬಂದಿಗಳಿಗೆ ಟಿಎ- ಡಿಎ ಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗೆ ಮಾಡಬೇಡಿ. ಸಿಬ್ಬಂದಿಗಳು ಯಾವ ಕರ್ತವ್ಯಕ್ಕೆ ಹೋಗಿದ್ದರು ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ಬಂದೋಬಸ್ತ್‌ ನಲ್ಲಿರುತ್ತಾರೆ ಇಲ್ಲವೇ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಹೋಗಿರುತ್ತಾರೆ. ಅವೆಲ್ಲವನ್ನು ಪರಿಗಣಿಸಿ ಸಕಾಲದಲ್ಲಿ ಸಿಬ್ಬಂದಿಗೆ ಟಿಎ-ಡಿಎ ಕೊಡಿ. ಈ ಬಗ್ಗೆ ಈಗಾಗಲೇ ಎಸಿಪಿ, ಡಿಸಿಪಿಯವರೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು.

ನಾವು ವರ್ಷದ ಮೊದಲೇ ಸ್ವತ್ತು ಪ್ರಕರಣ ಪತ್ತೆಹಚ್ಚಲು ಹೇಳಿದ್ದೆವು. ಈಗ ವರ್ಷದ ಕೊನೆಯ ಹಂತಕ್ಕೆ ಬಂದಿದ್ದೀವಿ. ಈಗಾಗಲೇ ಹಲವು ಸ್ವತ್ತು ಪ್ರಕರಣಗಳು, ವಾಹನ, ಸರಗಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿಯೂ ಇನ್ನು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಇಲಾಖೆಗೆ ಹೆಸರು ತನ್ನಿ ಎಂದರು.

ಇತ್ತೀಚಿನ ದಿನಗಳಲ್ಲಿ ಠಾಣೆಗಳಿಗೆ ದೂರುಗಳನ್ನು ಹಿಡಿದು ಬರುವ ಸಾರ್ವಜನಿಕರ ಜೊತೆ ಸಿಬ್ಬಂದಿ ಸೌಜನ್ಯವಾಗಿ ನಡೆದುಕೊಂಡು ಅವರ ಕಷ್ಟಕ್ಕೆ ಸ್ಪಂದಿಸುತ್ತಿರುವುದು ಕಂಡುಬರುತ್ತಿದೆ. ಮುಂದೆಯೂ ಇದೇ ರೀತಿ ತಮ ಕರ್ತವ್ಯವನ್ನು ನಿಭಾಯಿಸಿ ಕೆಲಸ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರಿ ಎಂದು ಸಿಬ್ಬಂದಿಗಳನ್ನು ಆಯುಕ್ತರು ಉರಿದುಂಬಿಸಿದರು.

ಉತ್ತಮ ಕೆಲಸ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಪ್ರಶಂಸಿಸಿದ್ದೇವೆ. ಉಳಿದವರಿಗೂ ಇದು ಮಾದರಿಯಾಗಬೇಕು ಎಂದು ಹೇಳಿದರು. ಈಗಾಗಲೇ ದಸರಾ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ನಾವು ವರ್ಷದ ಕೊನೆಯ ಹಂತಕ್ಕೆ ಕೇವಲ 3 ತಿಂಗಳಿವೆ. ಇನ್ನಷ್ಟು ಉತ್ತಮವಾಗಿ ಅಧಿಕಾರಿ, ಸಿಬ್ಬಂದಿಗಳು ಕೆಲಸ ಮಾಡಬೇಕು. ಅಪರಾಧಗಳನ್ನು ತಡೆಗಟ್ಟಬೇಕು. ಸಂಚಾರ ಸುವ್ಯವಸ್ಥೆ ಕಾಪಾಡಬೇಕು ಎಂದು ಆಯುಕ್ತರು ತಿಳಿಸಿದರು.