Sunday, October 6, 2024
Homeರಾಜ್ಯದ್ವೇಷದ ರಾಜಕಾರಣ ಕಡಿವಾಣಕ್ಕಾಗಿ ಸಿಬಿಐನ ಮುಕ್ತ ತನಿಖೆಗೆ ನೀಡಲಾಗಿದ್ದ ಅನುಮತಿ ಹಿಂಪಡೆಯಲಾಗಿದೆ ; ಡಿಕೆಶಿ

ದ್ವೇಷದ ರಾಜಕಾರಣ ಕಡಿವಾಣಕ್ಕಾಗಿ ಸಿಬಿಐನ ಮುಕ್ತ ತನಿಖೆಗೆ ನೀಡಲಾಗಿದ್ದ ಅನುಮತಿ ಹಿಂಪಡೆಯಲಾಗಿದೆ ; ಡಿಕೆಶಿ

"Don't want CBI to misuse its power": DK Shivakumar

ಬೆಂಗಳೂರು,ಸೆ.27- ದ್ವೇಷದ ರಾಜಕಾರಣಕ್ಕೆ ಕಡಿವಾಣ ಹಾಕಲು ಸಿಬಿಐನ ಮುಕ್ತ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆಯಲಾಗಿದೆ. ರಾಜ್ಯದ ಅಧಿಕಾರಿಗಳು ತನಿಖೆ ಮಾಡಲು ಸಾಧ್ಯವಾಗದೇ ಇರುವ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯಸರ್ಕಾರ ಸಿದ್ಧವಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಾವೆಲ್ಲ ಪ್ರಕರಣಗಳನ್ನು ಸಿಬಿಐನವರಿಗೆ ವಹಿಸಲಾಗಿತ್ತು. ಸಿಬಿಐನವರು ಐಎಂಎ ಸೇರಿ ಹಲವು ಪ್ರಕರಣಗಳಲ್ಲಿ ಯಾವ ರೀತಿ ವರದಿ ನೀಡಿದ್ದರು ಎಂದು ಗೊತ್ತಿದೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್‌‍ನವರು ಸಿಬಿಐ ಬಗ್ಗೆ ಕೆಲ ವರ್ಷಗಳ ಹಿಂದೆ ಯಾವ ರೀತಿ ಹೇಳಿಕೆ ನೀಡಿದ್ದರು ಎಂಬುದನ್ನು ಸರಿಸಿಕೊಳ್ಳಲಿ. ಕಾಂಗ್ರೆಸ್‌‍ ಬಚಾವೋ ಸಂಸ್ಥೆ ಎಂದೆಲ್ಲ ಟೀಕೆ ಮಾಡಿದ್ದರು. ಈಗ ಅದೇ ಸಿವಿಐ ಪರವಾಗಿ ಮಾತನಾಡುತ್ತಿದ್ದಾರೆ. ರಾಜ್ಯಸರ್ಕಾರದ ವಿರುದ್ಧವೂ ಟೀಕೆ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಅವರಿಗೆ ಉತ್ತರ ನೀಡುತ್ತೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಕ್ಷಣೆ ಮಾಡಲು ರಾಜ್ಯ ಸಂಪುಟದಲ್ಲಿ ಸಿಬಿಐ ತನಿಖೆಗೆ ಮುಕ್ತ ಅವಕಾಶ ನಿರಾಕರಿಸುವ ರೀತಿಯ ನಿರ್ಣಯ ಕೈಗೊಂಡಿಲ್ಲ. ತುರ್ತು ಹಾಗೂ ಅಗತ್ಯ ಸಂದರ್ಭದಲ್ಲಿ ಸಿಬಿಐ ತನಿಖೆಗೆ ರಾಜ್ಯಸರ್ಕಾರ ಅನುಮತಿ ನೀಡಲು ಸಿದ್ಧವಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ರಾಜ್ಯಪಾಲರಿಗೆ ವರದಿ ಸಲ್ಲಿಸಬೇಕಾದರೆ, ಅದಕ್ಕೊಂದು ನಿಯಮ ಇದೆ. ಮೊದಲು ಮುಖ್ಯಮಂತ್ರಿ ಕಛೇರಿಗೆ ಪತ್ರ ಬರಬೇಕು. ಅನಂತರ ಅಲ್ಲಿಂದ ಮುಖ್ಯ ಕಾರ್ಯದರ್ಶಿ ಅವರಿಗೆ ಮಾಹಿತಿ ತಲುಪಬೇಕಿದೆ ಎಂದರು.

ರೀ ಡೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಡತವೊಂದು ತಮ ಬಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಉಪಸಮಿತಿ ರಚಿಸುವ ನಿರ್ಣಯ ಕೈಗೊಳ್ಳಲಾಗಿದೆ. ಹಾಗೆಯೇ ಯಾವುದೇ ವಿಚಾರವಾದರೂ ಮುಖ್ಯಮಂತ್ರಿಯವರ ಗಮನಕ್ಕೆ ತರಲು ತೀರ್ಮಾನಿಸಲಾಗಿದೆ.

ಪರಿಸ್ಥಿತಿ ಹೀಗಿರುವಾಗ ಮನಸೋ ಇಚ್ಛೆ ನಾವಾಗಿಯೇ ರಾಜ್ಯಪಾಲರಿಗೆ ವರದಿ ನೀಡಲು ಸಾಧ್ಯವೇ?, ನನಗೆ ಆಡಳಿತ ವ್ಯವಹಾರಗಳ ಬಗ್ಗೆ ಅಲ್ಪಸ್ವಲ್ಪ ಜ್ಞಾನ ಇದೆ. ಅಷ್ಟೊಂದು ಬುದ್ಧಿವಂತ, ವಿದ್ಯಾವಂತ ಅಲ್ಲದೇ ಇದ್ದರೂ ಪ್ರಜ್ಞಾವಂತಿಕೆ ಇದೆ ಎಂದರು.ರಾಜ್ಯಪಾಲರು ಅರ್ಕಾವತಿ ರೀ ಡೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕೇಳಿದಾಕ್ಷಣ ನಾವು ವರದಿ ನೀಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಹೇಳಿದ ಅವರು, ರಾಜ್ಯಪಾಲರ ಪತ್ರದ ಬಗ್ಗೆ ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇನೆ ಎಂದರು.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಪ್ರಕರಣ ದಾಖಲಾಗುವುದರಿಂದ ಯಾವುದೇ ಮುಜುಗರ ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ರಾಜ್ಯಪಾಲರ ಕಚೇರಿಯಿಂದ ಮಾಹಿತಿ ಸೋರಿಕೆಯಾಗುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ರಾಜ್ಯಪಾಲರ ಕಚೇರಿಯಲ್ಲಿ ಹಾಗೂ ಲೋಕಾಯುಕ್ತ ಕಚೇರಿಯಲ್ಲಿ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿಲ್ಲ ಎಂದರು.

RELATED ARTICLES

Latest News