ಬೆಂಗಳೂರು,ಮೇ11-ಮುಂದಿನ ತಿಂಗಳು ಜೂನ್ 3ರಂದು ನಡೆಯಲಿರುವ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಗೆ ಬಿಜೆಪಿ ಇಂದು ಸಂಜೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ನಾಮಪತ್ರ ಸಲ್ಲಿಸಲು ಇದೇ ತಿಂಗಳ 16(ಗುರುವಾರ) ಕೊನೆಯ ದಿನವಾಗಿರುವುದರಿಂದ ಅಭ್ಯರ್ಥಿಗಳು ಅಫಿಡೆವಿಟ್ ಸಿದ್ದತೆ ಮಾಡಿಕೊಳ್ಳಲು ಅನುಕೂಲವಾಗುವಂತೆ ಬಿಜೆಪಿ ಇಂದೇ ಪಟ್ಟಿಯನ್ನು ಬಿಡುಗಡೆ ಮಾಡುವ ಸಂಭವವಿದೆ.
ಈಗಾಗಲೇ ಕೇಂದ್ರ ವರಿಷ್ಠರಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಕಳುಸಿಕೊಡಲಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಂಕಿತ ಬಿದ್ದ ನಂತರ ಅಧಿಕೃತವಾಗಿ ಪಟ್ಟಿ ಪ್ರಕಟವಾಗಲಿದೆ. ಕೆಲವು ಕ್ಷೇತ್ರಗಳಿಗೆ ಒಂದೇ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದರೆ ಇನ್ನು ಕೆಲವು ಕ್ಷೇತ್ರಗಳಿಗೆ ಎರಡು ಹೆಸರುಗಳನ್ನು ರಾಜ್ಯ ಬಿಜೆಪಿ ಘಟಕ ಕಳುಹಿಸಿಕೊಟ್ಟಿದೆ.
ಪ್ರತಿಷ್ಠೆಯ ಕಣವಾಗಿರುವ ಬೆಂಗಳೂರು ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಯುವ ಮುಖಂಡ ಎ.ಎಚ್.ಆನಂದ್‌ಗೆ ಬಹುತೇಕ ಟಿಕೆಟ್ ಖಾತರಿಯಾಗಿದೆ. ಹಾಲಿ ಅಭ್ಯರ್ಥಿ ಅ.ದೇವೇಗೌಡ ಅವರಿಗೆ ಟಿಕೆಟ್ ನೀಡಲು ಪಕ್ಷ ನಿರಾಕರಿಸಿರುವುದರಿಂದ ಆನಂದ್ ಅವರಿಗೆ ನಾಮಪತ್ರ ಸಲ್ಲಿಕೆಗೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಪರೋಕ್ಷವಾಗಿ ಪಕ್ಷ ಸೂಚನೆ ಕೊಟ್ಟಿದೆ.
ಎಬಿವಿಪಿ ಹಿನ್ನಲೆಯಿಂದ ಬಂದ ಆನಂದ್ ಪಕ್ಷದ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಸಂಘ ಪರಿವಾರ ಹಾಗೂ ಬಹುತೇಕ ಬಿಜೆಪಿಯ ಎಲ್ಲಾ ಮುಖಂಡರು ಸ್ಪರ್ಧೆಗೆ ಒಲವು ತೋರಿರುವುದರಿಂದ ಈ ಬಾರಿ ಟಿಕೆಟ್ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಆಗ್ನೇಯ ಪದವೀಧರ ಕ್ಷೇತ್ರದಿಂದ ಹಾಲಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಪುನಃ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಈ ಕ್ಷೇತ್ರದಿಂದ ಒಂದೇ ಹೆಸರನ್ನು ರಾಜ್ಯ ಘಟಕ ಶಿಫಾರಸು ಮಾಡಿದೆ.
ಈಶಾನ್ಯ ಪದವೀಧರ ಕ್ಷೇತ್ರದಿಂದ ಮಾಜಿ ವಿಧಾನಪರಿಷತ್ ಸದಸ್ಯ ಅಮರನಾಥ್ ಪಾಟೀಲ್ ಸ್ಪರ್ಧಿಸಲು ಒಲವು ತೋರಿದ್ದಾರೆ. ಇದೇ ಕ್ಷೇತ್ರದಿಂದ ಮತ್ತೊಬ್ಬ ಮುಖಂಡ ಸುರೇಶ್ ಸಜ್ಜನ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ ಕೊನೆ ಕ್ಷಣದಲ್ಲಿ ಯಾರಿಗೇ ಬೇಕಾದರೂ ಅದೃಷ್ಟ ಖುಲಾಯಿಸಬಹುದೆಂದು ಪಕ್ಷದ ಮೂಲಗಳು ತಿಳಿಸಿವೆ.
ನೈರುತ್ಯ ಪದವೀಧರ ಕ್ಷೇತ್ರದಿಂದ ಶಿವಮೊಗ್ಗದ ಖ್ಯಾತ ವೈದ್ಯ ಧನಂಜಯ ಸರ್ಜಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಳೆದ ಬಾರಿಯೇ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಆಕಾಂಕ್ಷಿಯಾಗಿದ್ದ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿತ್ತು.
ಮೂಲತಃ ಚನ್ನಗಿರಿಯವರಾದ ಡಾ.ಸರ್ಜಿ ಶಿವಮೊಗ್ಗದಲ್ಲಿ ಹಲವಾರು ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ತಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ ಇದೇ ಕ್ಷೇತ್ರದಿಂದ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಕೂಡ ಕಣಕ್ಕಿಳಿಯುವ ಸುಳಿವು ಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆಪ್ತ ವಲಯದಲ್ಲಿ ಸರ್ಜಿ ಗುರುತಿಸಿಕೊಂಡಿರುವುದರಿಂದ ಅವರಿಗೆ ಟಿಕೆಟ್ ಸಿಕ್ಕಿದರೂ ಆಶ್ಚರ್ಯವಿಲ್ಲ.
ಉಳಿದಂತೆ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಹಾಲಿ ಸದಸ್ಯ ಎಸ್.ಎಲ್.ಬೋಜೇಗೌಡ ಹಾಗೂ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಜೆಡಿಎಸ್‌ನಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಸೋಮವಾರದೊಳಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬಹುದೆಂದು ಪಕ್ಷದ ಮೂಲಗಳು ತಿಳಿಸಿವೆ.