Friday, May 24, 2024
Homeರಾಜ್ಯಇದೇ ಮೊದಲ ಬಾರಿಗೆ ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡಿದ ರಾಷ್ಟ್ರೀಯ ಪಕ್ಷಗಳು

ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡಿದ ರಾಷ್ಟ್ರೀಯ ಪಕ್ಷಗಳು

ಬೆಂಗಳೂರು,ಮಾ.22-ಲೋಕಸಭಾ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಹಿಳಾ ಮಣಿಗಳಿಗೆ ಹೆಚ್ಚಿನ ಟಿಕೆಟ್ ನೀಡಿರುವುದು ವಿಶೇಷವಾಗಿದೆ. ಆದರೆ ಟಿಕೆಟ್ ಪಡೆದುಕೊಂಡ ಮಹಿಳೆಯರು ಚುನಾವಣೆಯಲ್ಲಿ ಗೆದ್ದು ಲೋಕಸಭೆಗೆ ಪ್ರವೇಶ ಮಾಡಿರುವುದು ತೀರಾ ಕಡಿಮೆ ಪ್ರಮಾಣದಲ್ಲಿ.

1999ರ ಲೋಕಸಭೆ ಚುನಾಣೆಯಲ್ಲಿ ರಾಜ್ಯದಿಂದ ಇಬ್ಬರು ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದನ್ನು ಹೊರತುಪಡಿಸಿದರೆ ತದನಂತರ ಕೇವಲ ಒಬ್ಬರು ಮಾತ್ರ ಆಯ್ಕೆಯಾಗಿದ್ದಾರೆ. 1999ರ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಹಾಗೂ ಮಾರ್ಗರೇಟ್ ಆಳ್ವ ಅವರು ಕೆನರಾ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯವನ್ನು ಪ್ರತಿನಿಧಿಸಿದ್ದರು.

ಅದನ್ನು ಬಿಟ್ಟರೆ ಸುಮಾರು 24 ವರ್ಷಗಳ ನಂತರ ರಾಜ್ಯದಿಂದ ಪ್ರತಿ ಚುನಾವಣೆಯಲ್ಲಿ ಓರ್ವ ಮಹಿಳೆ ಮಾತ್ರ ಆಯ್ಕೆಯಾಗಿದ್ದರೆ ಇನ್ನು ಕೆಲವು ಚುನಾವಣೆಯಲ್ಲಿ ಮಹಿಳೆಯರಿಗೆ ಟಿಕೆಟ್‍ನ್ನೇ ಕೊಟ್ಟಿರಲಿಲ್ಲ.ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಸಂಸತ್‍ನ ಉಭಯ ಸದನಗಳಲ್ಲಿ ಅಂಗೀಕಾರ ಮಾಡಲಾಗಿದೆ. 2029ರ ಲೋಕಸಭೆ ಚುನಾವಣೆಗೆ ಮಹಿಳಾ ಮೀಸಲಾತಿ ರಾಷ್ಟ್ರಾದ್ಯಂತ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಹಿಳೆಯರಿಗೆ ಪ್ರಾಮುಖ್ಯತೆ ಕೊಟ್ಟಿದೆ. ಅದರಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಇದ್ದು, 6 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿದರೆ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಅದೃಷ್ಟ ಪಣಕ್ಕಿಟ್ಟಿದೆ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಮಹಿಳೆಯರಿಗೆ ಟಿಕೆಟ್ ನೀಡಿಲ್ಲ.

ಮೊದಲ ಪಟ್ಟಿಯಲ್ಲಿ ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಹೆಸರು ಘೋಷಣೆ ಆಗಿತ್ತು. ಇದೀಗ ಎರಡನೇ ಕಾಂಗ್ರೆಸ್ ಲಿಸ್ಟ್‍ನಲ್ಲಿ ಸೌಮ್ಯಾ ರೆಡ್ಡಿ, ಪ್ರಭಾ ಮಲ್ಲಿಕಾರ್ಜುನ, ಅಂಜಲಿ ಲಿಂಬಾಳ್ಕರ್, ಸಂಯುಕ್ತಾ ಪಾಟೀಲ್ ಹಾಗೂ ಪ್ರಿಯಾಂಕ ಜಾರಕಿಹೊಳಿಗೆ ಟಿಕೆಟ್ ಘೋಷಣೆಯಾಗಿದೆ.

ಬಿಜೆಪಿ ಮೊದಲ ಪಟ್ಟಿಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ದಾವಣಗೆರೆ ಕ್ಷೇತ್ರದಿಂದ ಜಿ.ಎಂ.ಸಿದ್ದರೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್‍ಗೆ ಟಿಕೆಟ್ ಕೊಡಲಾಗಿದೆ. 1996 ಮತ್ತು 1998ರ ಲೋಕಸಭಾ ಚುನಾವಣೆ ವೇಳೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್, ಬಿಜೆಪಿ, ಜೆಡಿಯು ಮಹಿಳೆಯರಿಗೆ ಟಿಕೆಟ್ ನೀಡಿರಲಿಲ್ಲ.

1999ರಲ್ಲಿ ಕಾಂಗ್ರೆಸ್ ಇಬ್ಬರಿಗೆ ಹಾಗೂ ಬಿಜೆಪಿ ಓರ್ವ ಮಹಿಳೆಗೆ ಟಿಕೆಟ್ ಕೊಟ್ಟಿತ್ತು.ದೇಶದ ಗಮನಸೆಳೆದಿದ್ದ ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಸುಷ್ಮಾ ಸ್ವರಾಜ್ ಸ್ಪರ್ಧೆ ಮಾಡಿದ್ದರು. ಇನ್ನೊಂದೆಡೆ ಈಗಿನ ಉತ್ತರಕನ್ನಡ ಕ್ಷೇತ್ರ ಎನಿಸಿರುವ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೇಟ್ ಆಳ್ವಾ ಅವರು ಹಿಂದೂ ಫೈರ್ ಬ್ರಾಂಡ್ ಅನಂತಕುಮಾರ್ ಹೆಗಡೆ ಅವರನ್ನು ಪರಾಭವಗೊಳಿಸಿದ್ದರು.2004ರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಮೂರು ಪಕ್ಷಗಳು ಮಹಿಳೆಯರಿಗೆ ಮಣೆ ಹಾಕಿರಲಿಲ್ಲ.

2009ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರ ಪುನರ್ ವಿಂಗಡಣೆಯಾದ ಪರಿಣಾಮ ಕೆಲವು ಮಹತ್ವದ ಬದಲಾವಣೆ ಉಂಟಾಯಿತು. ಸಾಮಾನ್ಯ ಕ್ಷೇತ್ರವಾಗಿದ್ದ ಬಳ್ಳಾರಿ, ಚಿತ್ರದುರ್ಗ, ರಾಯಚೂರು, ಬಿಜಾಪುರ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿ ಬದಲಾದವು. ಬಳ್ಳಾರಿ ಸಾಮಾನ್ಯ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾದರೆ ಬಿಜಾಪುರ, ಚಿತ್ರದುರ್ಗ ಕ್ಷೇತ್ರಗಳು ಪರಿಶಿಷ್ಟ ಜಾತಿಗೆ ಮೀಸಲಾದವು. ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ ಮಾಜಿ ಸಚಿವ ಹಾಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತ ಕೆಲವೇ ಮತಗಳ ಅಂತರದಿಂದ ಗೆದ್ದಿದ್ದರು.

ನಂತರ 2014 ಮತ್ತು 2019ರಲ್ಲಿ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಗೆದ್ದಿದ್ದರು. ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಮಹಿಳೆಯರು ಸ್ಪರ್ಧಿಸಿರುವ ಕ್ಷೇತ್ರಗಳು:
ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
ದಾವಣಗೆರೆ -ಪ್ರಭಾ ಮಲ್ಲಿಕಾರ್ಜುನ
ಉತ್ತರ ಕನ್ನಡ -ಅಂಜಲಿ ನಿಂಬಾಳ್ಕರ್
ಬಾಗಲಕೋಟೆ – ಸಂಯುಕ್ತ ಪಾಟೀಲ್
ಚಿಕ್ಕೋಡಿ – ಪ್ರಿಯಾಂಕ ಜಾರಕಿಹೋಳಿ
ಶಿವಮೊಗ್ಗ – ಗೀತಾ ಶಿವರಾಜ್‍ಕುಮಾರ್
ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
ದಾವಣಗೆರೆ- ಗಾಯತ್ರಿ ಸಿದ್ದೇಶ್ವರ್

RELATED ARTICLES

Latest News