Home ಇದೀಗ ಬಂದ ಸುದ್ದಿ ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ, ಆರೇಂಜ್‌ ಅಲರ್ಟ್‌ ಘೋಷಣೆ

ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ, ಆರೇಂಜ್‌ ಅಲರ್ಟ್‌ ಘೋಷಣೆ

0
ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಸಾಧ್ಯತೆ, ಆರೇಂಜ್‌ ಅಲರ್ಟ್‌ ಘೋಷಣೆ

ಬೆಂಗಳೂರು, ಜು.5-ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರೆಯಲಿದೆ. ಕೇರಳ ಕರಾವಳಿಯಿಂದ ದಕ್ಷಿಣ ಗುಜರಾತ್‌ವರೆಗೂ ಅರಬ್ಬೀ ಸಮುದ್ರದಲ್ಲಿ ಮೇಲುಬ್ಬರ ಉಂಟಾಗಿರುವ ಪರಿಣಾಮ ಭಾರೀ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಅಲ್ಲದೆ, ಜುಲೈ 8 ಮತ್ತು 9ರಂದು ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

ಕಳೆದೊಂದು ವಾರದಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ನದಿಗಳು ಮೈದುಂಬಿ ಹರಿಯುತ್ತಿವೆ. ಕೆಲವೆಡೆ ಭೂ ಕುಸಿತವೂ ಉಂಟಾಗಿದೆ. ಮರ, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ.

ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಅಧಿಕ ಮಳೆಯಾಗುವ ಸಾಧ್ಯತೆಗಳಿದ್ದು, ಆರೇಂಜ್‌ ಅಲರ್ಟ್‌ ನೀಡಲಾಗಿದೆ. ಆದರೆ, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.