Friday, October 11, 2024
Homeರಾಜಕೀಯ | Politicsನಾನು ಮನೆಯಲ್ಲಿ ಕೂರಲ್ಲ, ಜನಪರ ಹೋರಾಟ ಮಾಡುತ್ತೇನೆ : ದೇವೇಗೌಡರು

ನಾನು ಮನೆಯಲ್ಲಿ ಕೂರಲ್ಲ, ಜನಪರ ಹೋರಾಟ ಮಾಡುತ್ತೇನೆ : ದೇವೇಗೌಡರು

I will not sit at home, I will fight for the people: Devegowda

ಬೆಂಗಳೂರು, ಸೆ.14-ನಾನು ಮನೆಯಲ್ಲಿ ಇನ್ನು ಸುಮ್ಮನೆ ಮಲಗುವುದಿಲ್ಲ. ಪಕ್ಷ ಸಂಘಟನೆ ಹಾಗೂ ಜನಪರ ಹೋರಾಟವನ್ನು ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗುಡುಗಿದ್ದಾರೆ.ಜೆಪಿ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಕಡೆಗಳಲ್ಲಿ ಪ್ರವಾಸವನ್ನು ಮಾಡುತ್ತೇನೆ. ಆಗಾಗ್ಗೆ ಪಕ್ಷದ ಕಚೇರಿಗೂ ಬರುತ್ತೇನೆ. ಎನ್‍ಡಿಎ ಮೈತ್ರಿ ಕೂಟದಲ್ಲಿ ನಾವು ಸೇರಿದ್ದು, ಜೆಡಿಎಸ್ ಪಕ್ಷ ಮೈತ್ರಿಗೆ ಯಾವುದೇ ಕಳಂಕ ತರುವುದಿಲ್ಲ ಎಂದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಾಗೂ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕೂತು ಯಾವ ದೇವೇಗೌಡರು ಹೋರಾಟ ಮಾಡಿದ್ದರೋ ಅದೇ ದೇವೇಗೌಡರು ಈಗ ಮತ್ತೆ ಹೋರಾಟಕ್ಕೆ ಅಣಿಯಾಗಿ ನಿಂತಿದ್ದಾರೆ ಎಂದು ಹೇಳಿದರು.

62 ವರ್ಷ ಶಾಸಕನಾಗಿ, ವಿರೋಧ ಪಕ್ಷದ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ಮೂರು ತಿಂಗಳ ಕಾಲ ಮನೆಯಲ್ಲಿಯೇ ಮಲಗಿಸಿ ಬಿಟ್ರಿ ಎಂದು ಮಾರ್ಮಿಕವಾಗಿ ನುಡಿದ ಅವರು, ನಾನು ಈ ದೇಶದಲ್ಲಿ ತಲೆ ಮರೆಸಿಕೊಳ್ಳುವ ರಾಜಕಾರಣಿ ಆಗಿದ್ನಾ? ಎಂದು ಪ್ರಶ್ನಿಸಿದರು.

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಮೂರು ತಿಂಗಳ ಕಾಲ ಮನೆಯ ಬಳಿ ತುಂಬಾ ತೊಂದರೆ ತೆಗೆದುಕೊಂಡಿದ್ದೀರಿ. ದೇವೇಗೌಡರ ಮುಖದಲ್ಲಿ ಏನಾದರೂ ಬದಲಾವಣೆ ಆಗಿದೆಯೇ? ಇನ್ನು ಮುಂದೆ ದೇವೇಗೌಡರ ಹೋರಾಟ ಪ್ರಾರಂಭವಾಗುತ್ತದೆ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ಅವರು ಪ್ರತಿದಿನ ಪಕ್ಷದ ಕಚೇರಿಗೆ ಬರಲು ಆಗುವುದಿಲ್ಲ. ಅವರಿಗೆ ಜವಾಬ್ದಾರಿ ಹೆಚ್ಚು ಇರುತ್ತದೆ. ಆ ಕಾರಣಕ್ಕಾಗಿಯೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ಬಾಬು ಹಾಗೂ ಪಕ್ಷದ ಯುವ ಘಟಕದ ರಾಜ್ಯಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಸದಸ್ಯತ್ವ ಅಭಿಯಾನದ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ಜಿಲ್ಲೆಗೆ ಹೋಗಿ ಸದಸ್ಯತ್ವದ ಬಗ್ಗೆ ಗಂಭೀರವಾಗಿ ಅಭಿಯಾನವನ್ನು ಅವರು ಮಾಡುತ್ತಿದ್ದಾರೆ. ಇದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದು ಗೌಡರು ತಿಳಿಸಿದರು.

RELATED ARTICLES

Latest News