Saturday, September 14, 2024
Homeರಾಜ್ಯಕೊಚ್ಚಿ ಹೋದ ಟಿಬಿ ಡ್ಯಾಮ್ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕ ಗೇಟ್‌ ಅಳವಡಿಕೆ ಕಾರ್ಯ ಆರಂಭ

ಕೊಚ್ಚಿ ಹೋದ ಟಿಬಿ ಡ್ಯಾಮ್ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕ ಗೇಟ್‌ ಅಳವಡಿಕೆ ಕಾರ್ಯ ಆರಂಭ

ಬೆಂಗಳೂರು,ಆ.13- ತುಂಗಭದ್ರಾ ಅಣೆಕಟ್ಟಿನಲ್ಲಿ ಕೊಚ್ಚಿ ಹೋಗಿರುವ 19ನೇ ಕ್ರಸ್ಟ್‌ಗೇಟ್‌ಗೆ ತಾತ್ಕಾಲಿಕವಾದ ಗೇಟ್‌ ಅಳವಡಿಸಿ ನೀರನ್ನು ಸಂರಕ್ಷಿಸಲು ಪ್ರಯತ್ನಿಸಲಾಗುತ್ತಿದ್ದು, ಇಂದು ಸಂಜೆ ಕೆಲಸ ಆರಂಭಗೊಳ್ಳಲಿದೆ.ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಜಲಾಶಯದಲ್ಲಿ 105 ಟಿಎಂಸಿಗೂ ಹೆಚ್ಚಿನ ನೀರು ಸಂಗ್ರಹವಾಗಿತ್ತು. ಒತ್ತಡ ಹಾಗೂ ನೀರಿನ ರಭಸಕ್ಕೆ 19ನೇ ಕ್ರಸ್ಟ್‌ಗೇಟ್‌ನ ಸಂಪರ್ಕ ಸರಪಳಿ ತುಂಡಾಗಿ ಕ್ರಸ್ಟ್‌ಗೇಟ್‌ ಕೊಚ್ಚಿಹೋಗಿದೆ.

ಹೀಗಾಗಿ ನಿರಂತರವಾಗಿ 35 ಸಾವಿರ ಕ್ಯೂಸೆಕ್‌ ನೀರು ಈ ಗೇಟ್‌ನಿಂದ ಹರಿದುಹೋಗುತ್ತಿದೆ. ಇತರ ಕ್ರಸ್ಟ್‌ಗೇಟ್‌ಗಳ ಮೇಲೆ ಒತ್ತಡ ಹೆಚ್ಚಾಗಿ ಅಣೆಕಟ್ಟೆಗೆ ಅಪಾಯವಾಗುವ ಸಾಧ್ಯತೆ ಇದ್ದಿದ್ದರಿಂದಾಗಿ ಉಳಿದ 22 ಗೇಟ್‌ಗಳನ್ನು ತೆರೆದು ಪ್ರತಿದಿನ 1.50 ಲಕ್ಷ ಟಿಎಂಸಿ ನೀರನ್ನು ಹೊರಗೆ ಹರಿಯಬಿಡಲಾಗುತ್ತಿದೆ.

ಕ್ರಸ್ಟ್‌ಗೇಟ್‌ ದುರಸ್ಥಿಗೆ ಸಂಬಂಧಪಟ್ಟಂತೆ ಎರಡು ರೀತಿಯ ಅಭಿಪ್ರಾಯಗಳು ಕೇಳಿಬಂದಿದ್ದವು. ಒಂದು ತಂಡ ಜಲಾಶಯದಲ್ಲಿ 60 ಟಿಎಂಸಿ ನೀರನ್ನು ಖಾಲಿ ಮಾಡಿದ ಬಳಿಕ ಗೇಟ್‌ ದುರಸ್ಥಿ ಕೆಲಸ ಆರಂಭಿಸಬಹುದು ಎಂದು ವರದಿ ನೀಡಿತ್ತು. ಈ ಮೊದಲು ಇದೇ ಜಲಾಶಯದಲ್ಲಿ ಉಸ್ತುವಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದ ಕನ್ನಯ್ಯ ನಾಯ್ಡು ನೇತೃತ್ವದ ತಂಡ ನೀರನ್ನು ಉಳಿಸಿಕೊಂಡೇ ತಾತ್ಕಾಲಿಕವಾಗಿ ಗೇಟ್‌ ಅಳವಡಿಸಬಹುದು ಎಂದು ಸಲಹೆ ನೀಡಿತ್ತು.

ಜಿಂದಾಲ್‌ ಸಂಸ್ಥೆಯ ತಂತ್ರಜ್ಞರ ಉಸ್ತುವಾರಿಯಲ್ಲಿ ಇಂದು ಸಂಜೆಯಿಂದಲೇ ತಾತ್ಕಾಲಿಕ ಗೇಟ್‌ ಅಳವಡಿಕೆಗೆ ಕೆಲಸ ಆರಂಭಿಸಲಾಗುತ್ತಿದೆ. ಈಗಾಗಲೇ ಹೊಸಪೇಟೆಯ ನಾರಾಯಣ್‌ ಇಂಜಿನಿಯರ್‌ರ‍ಸ ಮತ್ತು ಕೊಪ್ಪಳದ ಹೊಸಹಳ್ಳಿಯ ಹಮೀದ್‌ ಇಂಜಿನಿಯರ್‌ರ‍ಸ ಸಂಸ್ಥೆಗಳಲ್ಲಿ ಎರಡು ಪ್ರತ್ಯೇಕ ಗೇಟ್‌ಗಳನ್ನು ಸಿದ್ಧಪಡಿಸಲಾಗಿದೆ. ಕನ್ನಯ್ಯ ನಾಯ್ಡು ಅವರು ಮೂಲನಕ್ಷೆ ಆಧರಿಸಿ ಸಿದ್ದಪಡಿಸಿಕೊಟ್ಟಿರುವ ವಿನ್ಯಾಸದ ಆಧಾರದ ಮೇಲೆ 20 ಅಡಿ ಅಗಲ, 60 ಅಡಿ ಉದ್ದದ 48 ಟನ್‌ ತೂಕದ ಕ್ರಸ್ಟ್‌ಗೇಟ್‌ಗಳನ್ನು ರೂಪಿಸಲಾಗಿದೆ.

4×12 ಅಡಿ ಅಗಲದ ಹಲಗೆಗಳನ್ನು ಬಳಸಿ ಕ್ರಸ್ಟ್ಗೇಟ್ಗಳನ್ನು ಸಿದ್ದಪಡಿಸಲಾಗುತ್ತಿದ್ದು, ಅದನ್ನು ಅಣೆಕಟ್ಟು ಬಳಿ ತರಲಾಗಿದೆ. ಅಣೆಕಟ್ಟೆಯ ತಡೆಗೋಡೆಯ ಮೇಲೆ ಧಾರಣ ಸಾಮರ್ಥ್ಯದ ಕ್ರೇನ್ಗಳನ್ನು ನಿಲ್ಲಿಸಿ ಗೇಟ್ಗಳನ್ನು ಅಳವಡಿಸಲು ಪ್ರಯತ್ನಿಸಲಾಗುತ್ತಿದೆ.

4 ಅಡಿಯ ತಲಾ ಎರಡು ಶೆಟ್ಟರ್‌ಗಳನ್ನು ಕೂರಿಸಿ ಒಟ್ಟು 20 ಅಡಿ ಎತ್ತರಕ್ಕೆ 5 ಹಂತದ ಶೆಟ್ಟರ್‌ಗಳನ್ನು ಜೋಡಿಸಿ ತಾತ್ಕಾಲಿಕವಾಗಿ ನೀರು ಹೊರಹರಿಯವುದನ್ನು ತಡೆಯುವ ಹಾಗೂ ಮುಂದಿನ ದಿನಗಳಲ್ಲಿ ಶಾಶ್ವತವಾದ ಕ್ರಸ್ಟ್‌ಗೇಟ್‌ ಅಳವಡಿಸುವಂತೆ ನಿನ್ನೆ ನಡೆದ ತುಂಗಭದ್ರಾ ಜಲಾಶಯ ಉಸ್ತುವಾರಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ.

ಇನ್ನು ಮುಂದೆ ತುಂಗಭದ್ರಾ ಜಲಾಶಯಕ್ಕೆ ಕಂಪ್ಯೂಟರ್‌ ಆಧಾರಿತ ಕ್ರಸ್ಟ್‌ಗೇಟ್‌ ಚಾಲನಾ ವ್ಯವಸ್ಥೆ ಹಾಗೂ ರೂಟ್‌ ವೇ ಅಳವಡಿಸುವ ಬಗ್ಗೆ ಸಮಾಲೋಚನೆಗಳಾಗಿವೆ. ಪ್ರಸ್ತುತ ಅಣೆಕಟ್ಟೆಯಲ್ಲಿ ನೀರಿನ ರಭಸ ಎದೆ ಝಲ್ಲೆನುಸುವಂತಿದ್ದು, ಅದರ ನಡುವೆಯೇ ಕ್ರಸ್ಟ್‌ಗೇಟ್‌ ಅಳವಡಿಸಲು ಚಾಲನೆ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕನ್ನಯ್ಯ ನಾಯ್ಡು ಅವರಿಂದ ಕ್ರಸ್ಟ್‌ಗೇಟ್‌ ಅಳವಡಿಕೆಯ ಕುರಿತು ಮಾಹಿತಿ ಪಡೆದಿದ್ದಾರೆ.

ರಾಜ್ಯ ಮತ್ತು ದೇಶದ ಇಂಜಿನಿಯರ್‌ಗಳ ಜೊತೆಯಲ್ಲಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ತಜ್ಞರೊಂದಿಗೂ ರಾಜ್ಯಸರ್ಕಾರ ಸಮಾಲೋಚನೆ ನಡೆಸಿದೆ.ತುಂಗಭದ್ರಾ ಅಣೆಕಟ್ಟೆ ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜೀವನದಿಯಾಗಿದ್ದು, ಸುಮಾರು 7.50 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಜೊತೆಗೆ ಬಯಲುಸೀಮೆಯ ತುಮಕೂರು ಜಿಲ್ಲೆಯ ಪಾವಗಡದವರೆಗೂ ಕುಡಿಯುವ ನೀರಿನ ಪೂರೈಕೆಗೆ ಇದೇ ಜಲಾಶಯವನ್ನು ಬಳಸಲಾಗುತ್ತಿದೆ.

RELATED ARTICLES

Latest News