Sunday, November 24, 2024
Homeರಾಜ್ಯಎರಡು ವಾರದಿಂದ ಕೈ ಕೊಟ್ಟ ಮಳೆ, ಒಣಗುತ್ತಿವೆ ಬೆಳೆ

ಎರಡು ವಾರದಿಂದ ಕೈ ಕೊಟ್ಟ ಮಳೆ, ಒಣಗುತ್ತಿವೆ ಬೆಳೆ

Rain Forecast

ಬೆಂಗಳೂರು, ಸೆ.17- ನೈರುತ್ಯ ಮುಂಗಾರು ಮಳೆಯು ಕಳೆದ ಎರಡು ವಾರಗಳಿಂದ ದುರ್ಬಲಗೊಂಡಿದ್ದು, ಮುಂಗಾರು ಹಂಗಾಮಿನ ಹಲವು ಬೆಳೆಗಳು ಒಣಗುತ್ತಿವೆ. ಕಳೆದ ಎರಡು ವಾರಗಳಲ್ಲಿ ಮಳೆ ಕೈಕೊಟ್ಟ ಪರಿಣಾಮವಾಗಿ ಬಿತ್ತಿರುವ ರಾಗಿ, ಶೇಂಗಾ, ಉದ್ದು, ಹೆಸರು, ಅಲಸಂದೆ, ತೊಗರಿ ಸೇರಿದಂತೆ ಹಲವು ಬೆಳೆಗಳಿಗೆ ತೇವಾಂಶದ ಕೊರತೆ ಉಂಟಾಗಿದೆ. ಇದರಿಂದ ಬೆಳೆಗಳು ಒಣಗತೊಡಗಿವೆ. ಅಲ್ಲದೆ, ಭಾಗಶಃ ಮೋಡ ಕವಿದ ವಾತಾವರಣ ಇರುವುದರಿಂದ ಕೀಟ ಬಾಧೆಯೂ ಅಧಿಕವಾಗಿದೆ.

ಕಳೆದ ವರ್ಷ ಕೈಕೊಟ್ಟಿದ ಮುಂಗಾರು ಈ ಬಾರಿ ವಾಡಿಕೆಗಿಂತ ಹೆಚ್ಚಾಗಿದ್ದು, ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ರೈತರು ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಆಗಸ್ಟ್‌ನಲ್ಲೂ ಮಳೆ ಕಡಿಮೆಯಾಗಿತ್ತು. ಆದರೆ ಸೆಪ್ಟೆಂಬರ್‌ ತಿಂಗಳ ಎರಡೂ ವಾರದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಿಲ್ಲ. ಹೀಗಾಗಿ ರೈತರು ಮಳೆ ನಿರೀಕ್ಷೆಯಲ್ಲೇ ಕಾಲ ನೂಕುತ್ತಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಸೆಪ್ಟೆಂಬರ್‌ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಮಳೆಯಾಗಿದೆ. ಈ ಅವಧಿಯಲ್ಲಿ ಕರಾವಳಿ ಮತ್ತು ಮಲೆನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆದರೆ, ರಾಜ್ಯದ ಒಳನಾಡಿನಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ.

ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಮಳೆ ಪ್ರಮಾಣ 58.9 ಮಿ.ಮೀ. ಇದ್ದು, ಕೇವಲ 15.2 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ವಾಡಿಕೆಗಿಂತ ಶೇ.74ರಷ್ಟು ಕಡಿಮೆ ಮಳೆಯಾಗಿದೆ.

ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ ಪ್ರಮಾಣ 60.3 ಮಿ.ಮೀ. ಇದ್ದು, 49.1 ಮಿ.ಮೀ.ನಷ್ಟು ಮಳೆಯಾಗಿದೆ. ವಾಡಿಕೆಗಿಂತ ಶೇ.19ರಷ್ಟು ಮಳೆ ಕೊರತೆ ಉಂಟಾಗಿದೆ.ಕಳೆದ ಎರಡು ವಾರದಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.85 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ರಾಮನಗರ ಶೇ.77, ಕೋಲಾರ ಶೇ.90, ಚಿಕ್ಕಬಳ್ಳಾಪುರ ಶೇ.86, ತುಮಕೂರು ಶೇ.73, ಚಿತ್ರದುರ್ಗ ಶೇ.66, ದಾವಣಗೆರೆ ಶೇ.45, ಚಾಮರಾಜನಗರ ಶೇ.81, ಮೈಸೂರು ಶೇ.45, ಮಂಡ್ಯ ಶೇ.83 ರಷ್ಟು ಮಳೆ ಕೊರತೆಯಾಗಿದೆ.

ಉತ್ತರ ಒಳನಾಡಿನ ಬಳ್ಳಾರಿ ಶೇ.43, ವಿಜಯನಗರ ಶೇ.69, ಕೊಪ್ಪಳ ಶೇ.58, ರಾಯಚೂರು ಶೇ.24, ಧಾರವಾಡ ಶೇ.38, ಹಾವೇರಿ ಶೇ.51, ಗದಗ ಶೇ.68, ವಿಜಯಪುರ ಶೇ.37, ಬಾಗಲಕೋಟೆ ಶೇ.55, ಬೆಳಗಾವಿ ಜಿಲ್ಲೆಯಲ್ಲಿ ಶೇ.14 ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉಳಿದಂತೆ ಕೆಲವು ಜಿಲ್ಲೆಗಳಲ್ಲಿ ವಾಡಿಕೆ ಇಲ್ಲವೆ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ಹವಾಮಾನ ಮುನ್ಸೂಚನೆ ಪ್ರಕಾರ ಸದ್ಯಕ್ಕೆ ಉತ್ತಮ ಮಳೆಯಾಗುವ ಲಕ್ಷಣಗಳಿಲ್ಲ. ಅಲ್ಲಲ್ಲಿ ಚದುರಿದಂತೆ ಹಗರುದಿಂದ ಸಾಧಾರಣ ಮಳೆಯಾಗಬಹುದು. ಭಾಗಶಃ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ವ್ಯಾಪಕ ಪ್ರಮಾಣದಲ್ಲಿ ಒಳ್ಳೆಯ ಮಳೆಯಾದರೆ ಮಾತ್ರ ಮುಂಗಾರು ಹಂಗಾಮಿನ ಬೆಳೆಗಳ ರಕ್ಷಣೆ ಸಾಧ್ಯವಾಗಲಿದೆ.

RELATED ARTICLES

Latest News