ಬೆಂಗಳೂರು,ಮಾ.24-ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಅವರ ಪಕ್ಷದ ಪ್ರಣಾಳಿಕೆಯಲ್ಲಿ ಮೇಕೆದಾಟು ಅಣೆಕಟ್ಟು ವಿಚಾರವನ್ನು ಪ್ರಕಟಿಸಬೇಕು. ಈ ಈ ವಿಚಾರದಲ್ಲಿ ಭಯಪಡುವ ಅಗತ್ಯವಿಲ್ಲ. ಮೂರು ಪಕ್ಷಗಳು ಐಕ್ಯತೆಯಿಂದ ಹೋರಾಟ ಮಾಡಿ ಯೋಜನೆ ಅನುಷ್ಠಾನಗೊಳಿಸಬೇಕಿದೆ ಎಂದರು.
ಮೇಕೆದಾಟು ಯೋಜನೆಗೆ ಮಂಜೂರಾತಿ ನೀಡುವಂತೆ ಪ್ರಧಾನಿ ನರೇಂದ್ರಮೋದಿ ಅವರನ್ನು ಕೂಡ ಒತ್ತಾಯಿಸುತ್ತೇನೆ. ಮೇಕೆದಾಟು ಯೋಜನೆ ಕುರಿತ ವಿಸ್ತೃತವಾದ ಪತ್ರವನ್ನು ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಜಲಶಕ್ತಿ ಸಚಿವರಿಗೆ ಬರೆದಿರುವುದಾಗಿ ಅವರು ಹೇಳಿದರು. ಅಕಾರಿಗಳು ಯೋಜನೆ ಬಗ್ಗೆ ಅಧ್ಯಯನ ಮಾಡಿ 30 ಟಿಎಂಸಿ ನೀರು ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಹೀಗಾಗಿ ಪ್ರಧಾನಿಗಳು ಮಂಜೂರಾತಿ ನೀಡಬೇಕು ಎಂದರು.
ತಮಿಳುನಾಡಿನ ಮುಖ್ಯಮಂತ್ರಿ ಅವರ ಪಕ್ಷದ ಪ್ರಣಾಳಿಕೆಯಲ್ಲಿ ಯಾವುದೇ ಕಾರಣದಿಂದಲೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕಾವೇರಿ ನದಿಪಾತ್ರದಲ್ಲಿ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳು, 22 ತಾಲ್ಲೂಕುಗಳು ಬರುತ್ತವೆ. ಇವುಗಳ ಕುಡಿಯುವ ನೀರು ಪೂರೈಸಬೇಕಾದ ಅಗತ್ಯವಿದೆ. ಬೆಂಗಳೂರಿನಲ್ಲಿ ಕಳೆದ 5 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದೆ. ಬಹಳಷ್ಟು ಜನರು ಬೆಂಗಳೂರಿನ ಮನೆಗಳಿಗೆ ಬೀಗ ಹಾಕಿ ಅವರವರ ಮನೆಗಳಿಗೆ ವಲಸೆ ಹೋಗಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ. ಇಂತಹ ಸಂದರ್ಭದಲ್ಲೇ ತಮಿಳುನಾಡು ಮುಖ್ಯಮಂತ್ರಿ ನೀಡಿರುವ ವಿಚಾರ ಕಠೋರವಾಗಿದೆ ಎಂದು ಹೇಳಿದರು. ಪರಿಸರವಾದಿಗಳು ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ 5 ಸಾವಿರ ಎಕರೆ ಮುಳುಗಡೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಯೋಜನೆಗೆ 5 ಸಾವಿರ ಎಕರೆ ಅರಣ್ಯಪ್ರದೇಶ ಮುಳುಗಡೆಯಾಗುವುದಿಲ್ಲ ಎಂದರು.
ಎರಡೂ ರಾಜ್ಯಗಳ ಸ್ಥಳೀಯ ವಾಸ್ತವತೆ, ನೀರಿನ ಲಭ್ಯತೆ, ಕುಡಿಯುವ ನೀರು ಹಾಗೂ ಬೆಳೆಗಳಿಗೆ ಬೇಡಿಕೆ ಮೊದಲಾದ ವಾಸ್ತವಿಕತೆಯ ಆಧಾರದ ಮೇಲೆ ಸಂಕಷ್ಟ ಸೂತ್ರವನ್ನು ರೂಪಿಸಲು ಕಾವೇರಿ ನೀರು ನಿರ್ವಹಣಾ ಪ್ರಾಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಬರೆದಿರುವುದಾಗಿ ತಿಳಿಸಿದರು. ಅಲ್ಲದೆ ಎರಡು ರಾಜ್ಯಗಳ ಹಾಗೂ ಐವರು ಪರಿಣಿತರ ಸಮಿತಿಯನ್ನು ಕಳುಹಿಸುವಂತೆ ಈಗಾಗಲೇ ಮನವಿ ಮಾಡಲಾಗಿತ್ತು ಎಂದು ಹೇಳಿದರು.
ಮೇಕೆದಾಟು ಯೋಜನೆ ಕುರಿತಂತೆ ಸಿದ್ದಪಡಿಸಲಾಗಿರುವ ಯೋಜನಾ ವರದಿ ಹಾಗೂ ಕಾವೇರಿ ನೀರು ನಿರ್ವಹಣಾ ಸಮಿತಿಯು, ಕಾವೇರಿ ನೀರು ನಿರ್ವಹಣಾ ಪ್ರಾಕಾರಕ್ಕೆ ತೀರ್ಮಾನ ಕೈಗೊಳ್ಳಲು ವರ್ಗಾಯಿಸಿದೆ. 5 ವರ್ಷ ಕಳೆದರೂ ಇನ್ನು ಯಾವುದೇ ತೀರ್ಮಾನ ಹೊರಬಂದಿಲ್ಲ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ, ತಿಪ್ಪೇಸ್ವಾಮಿ, ಮಾಜಿ ಸದಸ್ಯ ರಮೇಶ್ ಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್ ಮತ್ತಿರರು ಇದ್ದರು.