Friday, December 6, 2024
Homeರಾಜ್ಯರಾಜ್ಯದಲ್ಲಿ ಮೂರು ದಿನ ಮಳೆ ಸಾಧ್ಯತೆ

ರಾಜ್ಯದಲ್ಲಿ ಮೂರು ದಿನ ಮಳೆ ಸಾಧ್ಯತೆ

ಬೆಂಗಳೂರು, ಅ.29-ಹಿಂಗಾರು ಸ್ವಲ್ಪ ಪ್ರಮಾಣದ ಚೇತರಿಕೆ ಕಂಡಿದ್ದು, ಮೂರು ದಿನಗಳ ಕಾಲ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ. ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ.

ಅಕ್ಟೋಬರ್ ಒಂದರಿಂದ ಈತನಕ ರಾಜ್ಯದ ಬಹುತೇಕ ಕಡೆ ಒಣ ಹವೆ ಮುಂದುವರೆದಿದೆ. ಕೆಲವು ಕಡೆ ಚದುರಿದಂತೆ ಮಳೆಯಾಗಿದ್ದರೂ ಕೂಡ ವಾಡಿಕೆ ಪ್ರಮಾಣದಲ್ಲಿ ಆಗಿಲ್ಲ. ಹಿಂಗಾರು ಮಳೆ ಕೂಡ ವಿಳಂಬವಾಗಿ ಆರಂಭಗೊಂಡಿದೆ. ಅಲ್ಲದೆ, ಮುಂಗಾರಿನಂತೆ ಹಿಂಗಾರು ಕೂಡ ದುರ್ಬಲವಾಗಿದೆ.

ಮಂಗಳವಾರದವರೆಗೆ ದಕ್ಷಿಣ ಒಳನಾಡಿನ ಕೆಲವೆಡೆ ಚದುರಿದಂತೆ ಸಾಧಾರಣ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ರಾಜ್ಯದ ಕರಾವಳಿ ಭಾಗದಲ್ಲೂ ಸಾಧಾರಣ ಮಳೆಯಾಗಲಿದೆ. ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಮಂಗಳವಾರದವರೆಗೆ 5ರಿಂದ 15 ಮಿ.ಮೀ.ವರೆಗೂ ಸಾಧಾರಣಾ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅವರು ಹೇಳಿದರು.

BREAKING : ಕೇರಳದ ಎರ್ನಾಕುಲಂನಲ್ಲಿ ಬಾಂಬ್ ಬ್ಲಾಸ್ಟ್, ಓರ್ವ ಸಾವು, 20 ಹೆಚ್ಚು ಮಂದಿಗೆ ಗಾಯ

ಆದರೆ, ಉತ್ತರ ಕರ್ನಾಟಕದ ಭಾಗದಲ್ಲಿ ಒಣ ಹವೆ ಮುಂದುವರೆಯಲಿದೆ. ಮಳೆಯಾದರೂ ಅತ್ಯಲ್ಪ ಪ್ರಮಾಣದಲ್ಲಾಗಬಹುದು ಅಷ್ಟೇ. ಆಗಸ್ಟ್‍ನಿಂದ ಈತನಕ ಸತತ ಮಳೆ ಕೊರತೆಯನ್ನು ರಾಜ್ಯ ಎದುರಿಸುತ್ತಿದೆ. ತೀವ್ರಬರದ ಛಾಯೆ ಆವರಿಸಿದ್ದು, ಮುಂದಿನ ಮಳೆಗಾಲದವರೆಗೂ ರಾಜ್ಯವು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ಒಣಗಿವೆ ಎಂದರು.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್ ಒಂದರಿಂದ ನಿನ್ನೆಯವರೆಗಿನ ಮಾಹಿತಿ ನೋಡಿದರೂ ರಾಜ್ಯದಲ್ಲಿ ವಾಡಿಕೆಗಿಂತ ಶೇ. 25ರಷ್ಟು ಕೊರತೆ ಉಂಟಾಗಿರುವುದು ಕಂಡುಬರುತ್ತದೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಮಳೆಯೇ ಆಗಿಲ್ಲ. ಹೀಗಾಗಿ ಶೇ.97ರಷ್ಟು ಮಳೆ ಕೊರತೆಯಾಗಿದೆ. ಅಕ್ಟೋಬರ್ ಒಂದರಿಂದ ನಿನ್ನೆವರೆಗೆ ರಾಜ್ಯದಲ್ಲಿ ಮಳೆ ಕೊರತೆಯೇ ಹೆಚ್ಚಾಗಿದೆ. ಅಂದರೆ, ವಾಡಿಕೆಗಿಂತ ಶೇ.67ರಷ್ಟು ಮಳೆ ಕೊರತೆ ದಾಖಲಾಗಿದೆ.

ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ದಿನದಿಂದ ದಿನಕ್ಕೆ ಜಲಾಶಯಗಳ ಒಳ ಹರಿವು ಕ್ಷೀಣಿಸುತ್ತಿದೆ. ಈಗಾಗಲೇ ಕೆಲವು ಜಲಾಶಯಗಳ ಒಳಹರಿವು ನಿಂತು ಹೋಗಿದೆ. ಹೀಗಾಗಿ ಲಭ್ಯವಿರುವ ನೀರನ್ನೇ ಬೆಳೆ ಹಾಗೂ ಕುಡಿಯುವ ನೀರಿಗೆ ಮಿತವಾಗಿ ಲೆಕ್ಕಾಚಾರದ ಮೇಲೆ ಬಳಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

RELATED ARTICLES

Latest News