Home ಇದೀಗ ಬಂದ ಸುದ್ದಿ ಸಂಜೆ ಶಾಸಕಾಂಗ ಸಭೆ, ಸಿಎಂಗೆ ನೈತಿಕ ಬೆಂಬಲ ನೀಡುವ ಅಭಿಪ್ರಾಯ ಸಂಗ್ರಹ

ಸಂಜೆ ಶಾಸಕಾಂಗ ಸಭೆ, ಸಿಎಂಗೆ ನೈತಿಕ ಬೆಂಬಲ ನೀಡುವ ಅಭಿಪ್ರಾಯ ಸಂಗ್ರಹ

0
ಸಂಜೆ ಶಾಸಕಾಂಗ ಸಭೆ, ಸಿಎಂಗೆ ನೈತಿಕ ಬೆಂಬಲ ನೀಡುವ ಅಭಿಪ್ರಾಯ ಸಂಗ್ರಹ

ಬೆಂಗಳೂರು,ಆ.22- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ನೀಡುವ ನಿಟ್ಟಿನಲ್ಲಿ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲು ನಿಗದಿಪಡಿಸಿರುವ ಶಾಸಕಾಂಗ ಸಭೆ ಸಂಜೆ ನಡೆಯಲಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾದ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟಿ ಪೂರ್ವಾನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜಕೀಯ ಸಮರ ತೀವ್ರಗೊಂಡಿದೆ.

ಕಾಂಗ್ರೆಸ್‌‍ ಹೈಕಮಾಂಡ್‌ ಈಗಾಗಲೇ ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಬೆಂಬಲ ನೀಡಿದೆ. ಅದರ ನಡುವೆಯೂ ತೆರೆಮರೆಯಲ್ಲಿ ಕೆಲವು ಚಟುವಟಿಕೆಗಳು ನಡೆಯುತ್ತಿವೆ. ಜೆಡಿಎಸ್‌‍ ಮತ್ತು ಬಿಜೆಪಿ ಪಕ್ಷಗಳು ಸರ್ಕಾರವನ್ನು ಅಸ್ಥಿರಗೊಳಿಸಲು ಆಪರೇಷನ್‌ ಕಮಲಕ್ಕೆ ಮುಂದಾಗುವ ಸುಳಿವು ದೊರೆತಿದೆ.

ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸುವ ವಾತಾವರಣ ನಿರ್ಮಿಸಿ ತನೂಲಕ ಕಾಂಗ್ರೆಸ್‌‍ನಲ್ಲಿ ಸೃಷ್ಟಿಯಾಗುವ ರಾಜಕೀಯ ಗೊಂದಲಗಳ ಲಾಭ ಪಡೆಯುವ ಹವಣಿಕೆ ನಡೆಯುತ್ತಿವೆ ಎಂಬ ಆರೋಪಗಳಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌‍ ಪ್ರತಿ ಹಂತದಲ್ಲೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಈಗಾಗಲೇ ಎರಡು ಬಾರಿ ಸಚಿವ ಸಂಪುಟ ಸಭೆ ನಡೆಸಿ ರಾಜ್ಯಪಾಲರಿಗೆ ಸಲಹೆ ನೀಡಲಾಗಿತ್ತು. ಅದರ ಹೊರತಾಗಿಯೂ ಅಭಿಯೋಜನೆಗೆ ಅನುಮತಿ ನೀಡಿರುವುದರಿಂದಾಗಿ ಕಾಂಗ್ರೆಸ್‌‍ ಪಾಳೇಯ ರೊಚ್ಚಿಗೆದ್ದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಾಳೆ ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್‌ಗೆ ಪ್ರಕರಣದ ಸಮಗ್ರ ವಿವರಣೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಸಂಜೆ ಶಾಸಕಾಂಗ ಸಭೆ ವಿಧಾನಸೌಧದ ಸಮೇಳನ ಸಭಾಂಗಣದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಕೆಲ ಶಾಸಕರು ಬೇಜವಾಬ್ದಾರಿ ಹಾಗೂ ಸ್ಪಂದನಾ ರಹಿತ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಸಜ್ಜುಗೊಂಡಿದ್ದಾರೆ ಎಂದು ತಿಳಿದುಬಂದಿದೆ.