Monday, September 16, 2024
Homeರಾಜಕೀಯ | Politicsಸಿಎಂ ರಾಜಿನಾಮೆಗೆ ಒತ್ತಾಯಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

ಸಿಎಂ ರಾಜಿನಾಮೆಗೆ ಒತ್ತಾಯಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

Statewide BJP protests demanding resignation of CM Siddaramaiah

ಬೆಂಗಳೂರು,ಆ.22- ಮುಡಾ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ರಾಜ್ಯಪಾಲರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು.

ರಾಜಧಾನಿ ಬೆಂಗಳೂರು, ಮಂಗಳೂರು, ರಾಮನಗರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ.ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.ಇದೇ ರೀತಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬಿಜೆಪಿಯ ಶಾಸಕರು, ವಿಧಾನಪರಿಷತ್‌ ಸದಸ್ಯರು, ಸಂಸದರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮುಡಾ ಪ್ರಕರಣದಲ್ಲಿ ಕಾನೂನು ಉಲ್ಲಂಘಿಸಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರು ನಿವೇಶನವನ್ನು ಪಡೆದುಕೊಂಡಿದ್ದಾರೆ. ಕಾನೂನು ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿರುವುದರಿಂದ ರಾಜ್ಯಪಾಲರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಅಭಿಯೋಜನೆಗೆ ಅನುಮತಿ ನೀಡಿದ್ದಾರೆ.

ಅದನ್ನು ಕೊಟ್ಟಿದ್ದೇ ತಪ್ಪು ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.ರಾಜ್ಯಪಾಲರು ಕಾನೂನು ತಜ್ಞರ ಸಲಹೆ ಪಡೆದುಕೊಂಡೇ ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ನೀಡುವ ಮುನ್ನ ಸಾಕಷ್ಟು ಬಾರಿ ಕಾನೂನು ಅಭಿಪ್ರಾಯ ಪಡೆಯಲಾಗುತ್ತದೆ.

ಒಂದು ವೇಳೆ ರಾಜ್ಯಪಾಲರ ತೀರ್ಮಾನ ಸರಿ ಇಲ್ಲ ಎಂದು ಕಂಡುಬಂದರೆ ಸರ್ಕಾರ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಅದನ್ನು ಬಿಟ್ಟು ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲರ ವಿರುದ್ಧ ಅವಮಾನಕಾರಿ ರೀತಿಯಲ್ಲಿ ಟೀಕೆ ಮಾಡುವುದು ಸರಿಯಲ್ಲ ಎಂದು ಪ್ರತಿಭಟನಾ ನಿರತರು ಕಿಡಿಕಾರಿದರು.

ರಾಜ್ಯಪಾಲರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕೆ ಸಚಿವ ಜಮೀರ್‌ ಅಹಮದ್‌ ಹಾಗೂ ವಿಧಾನಪರಿಷತ್‌ ಸದಸ್ಯ ಐವಾನ್‌ ಡಿಸೋಜಾ ಅವರು ನಾಲಗೆ ಹರಿಬಿಟ್ಟು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಕೂಡಲೇ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಲಾಯಿತು.

ಆರೋಪಿ ಸ್ಥಾನದಲ್ಲಿರುವ ಸ್ದಿರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಅಧಿಕಾರದಲ್ಲಿ ಮುಂದುವರೆದರೆ ನಿಸ್ಪಕ್ಷಪಾತ ಮತ್ತು ನ್ಯಾಯಯುತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಆರೋಪಿ ಸ್ಥಾನದಲ್ಲಿ ಇರುವವರೇ ಉನ್ನತ ಸ್ಥಾನದಲ್ಲಿರುವಾಗ ತನಿಖಾಧಿಕಾರಿಗಳು ಮುಕ್ತವಾಗಿ ತನಿಖೆ ನಡೆಸಲು ಹೇಗೆ ಸಾಧ್ಯ. ಮೊದಲು ನೈತಿಕ ಹೊಣೆ ಹೊತ್ತು ತಮ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕರ ಆಸ್ತಿಗಳನ್ನು ಹಾಳು ಮಾಡಲು ಅವಕಾಶವಿಲ್ಲ. ಬಸ್‌‍ಗಳಿಗೆ ಕಲ್ಲು ಎಸೆಯುವುದು, ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡಿದರೆ ಅಂತವರಿಂದಲೇ ಹಣ ವಸೂಲಿ ಮಾಡಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ಸಾರ್ವಜನಿಕರ ಆಸ್ತಿ-ಪಾಸ್ತಿಗಳನ್ನು ಹಾಳು ಮಾಡಿದರೆ ಹೊಣೆ ಯಾರು ಎಂದು ಪ್ರತಿಭಟನಾನಿರತರು ಪ್ರಶ್ನಿಸಿದರು.

ನಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸಿದ್ದರಾಮಯ್ಯನವರು ರಾಜೀನಾಮೆ ನೀಡುವವರೆಗೂ ಮುಂದುವರೆಯುತ್ತದೆ. ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವವರೆಗೂ ವಿರಮಿಸುವುದಿಲ್ಲ ಎಂದು ಎಚ್ಚರಿಸಿದರು.

RELATED ARTICLES

Latest News