Saturday, May 4, 2024
Homeರಾಜ್ಯಸರ್ಕಾರಕ್ಕೆ ಮುಜುಗರ ತಂದ ಜಮೀರ್ ಹೇಳಿಕೆ

ಸರ್ಕಾರಕ್ಕೆ ಮುಜುಗರ ತಂದ ಜಮೀರ್ ಹೇಳಿಕೆ

ಬೆಂಗಳೂರು, ನ.17- ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ಕಾಂಗ್ರೆಸ್ ಪಕ್ಷವನ್ನು ಹೊಗಳುವ ಭರದಲ್ಲಿ ಸ್ಪೀಕರ್ ಹುದ್ದೆಯ ಕುರಿತು ಅನಪೇಕ್ಷಿತ ಹೇಳಿಕೆ ತೀವ್ರ ಮುಜುಗರಕ್ಕೆ ಕಾರಣವಾಗಿದೆ.

ತೆಲಂಗಾಣದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಸಚಿವ ಜಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಪಕ್ಷ 17 ಮಂದಿ ಮುಸ್ಲಿಂರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿತ್ತು. ಒಂಬತ್ತು ಮಂದಿ ಆಯ್ಕೆಯಾಗಿದ್ದೇವೆ. ಅವರಲ್ಲಿ ನನ್ನನ್ನು ಸೇರಿದಂತೆ ಐದು ಮಂದಿಗೆ ಬೇರೆ ಬೇರೆ ರೀತಿಯ ಅಕಾರವನ್ನು ಕಾಂಗ್ರೆಸ್ ನೀಡಿದೆ.

ನನಗೆ ಸಚಿವ ಸ್ಥಾನ ನೀಡಿ, ಮೂರು ಖಾತೆಗಳ ಜವಾಬ್ದಾರಿ ವಹಿಸಲಾಗಿದೆ. ರಹಿಂಖಾನ್‍ರನ್ನು ಸಚಿವರನ್ನಾಗಿ ಮಾಡಲಾಗಿದೆ, ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹಮದ್‍ರನ್ನು ವಿಧಾನ ಪರಿಷತ್‍ನ ಮುಖ್ಯಸಚೇತಕರನ್ನಾಗಿ ಮಾಡಲಾಗಿದೆ. ನಸೀರ್ ಅಹ್ಮದ್‍ರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಈವರೆಗೂ ಮುಸ್ಲಿಂ ನಾಯಕನೊಬ್ಬನನ್ನು ಸ್ಪೀಕರ್ ಮಾಡಿರಲಿಲ್ಲ. ಕಾಂಗ್ರೆಸ್ ಮೊದಲ ಬಾರಿಗೆ ಯು.ಟಿ.ಖಾದರ್‍ರನ್ನು ಸ್ಪೀಕರ್ ಮಾಡಿದೆ. ಇವತ್ತು ಬಿಜೆಪಿಯ ನಾಯಕರು ಕೂಡ ಯು.ಟಿ.ಖಾದರ್ ಅವರ ಮುಂದೆ ನಮಸ್ಕಾರ ಸಾರ್ ಎಂದು ನಿಲ್ಲಬೇಕಾಗಿದೆ. ಇದನ್ನು ಮಾಡಿರುವುದು ಕಾಂಗ್ರೆಸ್ ಎಂದು ಹೇಳಿದ್ದಾರೆ. ಈ ಹೇಳಿಕೆ ವಿರೋಧ ಪಕ್ಷಗಳನ್ನು ಕೆರಳಿಸಿದೆ.

ಉಡುಪಿ ನಾಲ್ವರ ಹತ್ಯೆ ಪ್ರಕರಣ: ಕುಟುಂಬಕ್ಕೆ ಸಾಂತ್ವಾನ ಹೇಳಿದ ಲಕ್ಷ್ಮೀ ಹೆಬ್ಬಾಳ್ಕರ್

ವಿವಾದಗಳ ನಿಸ್ಸಿಮ:
ಜಮೀರ್ ಅಹ್ಮದ್ ಖಾನ್ ಪದೇ ಪದೇ ವಿವಾದಗಳನ್ನು ಸೃಷ್ಟಿಸುವುದರಲ್ಲಿ ನಿಸ್ಸಿಮರು. ಈ ಮೊದಲು ಕಾಂಗ್ರೆಸ್ ಪಕ್ಷದಲ್ಲೇ ನಾನಾ ರೀತಿಯ ಸಂಚಲನ ಸೃಷ್ಟಿಸುವ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ವಿಧಾನಸಭೆ ಚುನಾವಣೆಗೂ ಮೊದಲೇ ಪ್ರತಿಪಾದನೆ ಮಾಡಿದ್ದರು. ಹೈಕಮಾಂಡ್ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದೆ ಮಾತುಗಳನ್ನಾಡಿದರು. ಅದರ ಪರಿಣಾಮ ಅವರ ಆಪ್ತ ಸ್ನೇಹಿತರಾಗಿದ್ದ ಪುಲಕೇಶಿನಗರದ ಕ್ಷೇತ್ರದ ಅಖಂಡ ಶ್ರೀನಿವಾಸಮೂರ್ತಿ ಅವರು ಕಾಂಗ್ರೆಸ್ ಶಾಸಕರಾಗಿದ್ದರು, ಟಿಕೆಟ್ ತಪ್ಪುವಂತಾಯಿತು. ಆ ಬಳಿಕ ಪಕ್ಷದ ಒಳಗೆ ಮುಜುಗರವಾಗುವಂತಹ ಹೇಳಿಕೆಗಳಿಗೆ ಜಮೀರ್ ಕಡಿವಾಣ ಹಾಕಿಕೊಂಡಿದ್ದರು.

ಅಭಿವೃದ್ಧಿ ವಿಷಯದಲ್ಲಿ ಹೆಚ್ಚು ಸುದ್ದಿಯಾಗದ ಸಚಿವ ಜಮೀರ್ ವಿವಾದಿತ ಹೇಳಿಕೆ, ಹಾಸ್ಯಾಸ್ಪದ ನಡವಳಿಕೆಗಳಿಂದಲೇ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಕಾಂಗ್ರೆಸ್‍ನಲ್ಲಿ ಜಮೀರ್‍ಗಾಗಿ ಹಲವು ನಿಷ್ಠಾವಂತ ಮೂಲ ಕಾಂಗ್ರೆಸಿಗರನ್ನು ಬದಿಗೆ ಸರಿಸಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ವ್ಯಾಪಕ ಆಕ್ರೋಶಗಳು ಒಳಗೊಳಗೆ ಕುದಿಯುತ್ತಿವೆ.

ಚುನಾವಣಾ ಕಾಲದಲ್ಲಿ ಗೊಂದಲಗಳಾದರೆ ಕಾಂಗ್ರೆಸ್‍ಗೆ ನಷ್ಟವಾಗುತ್ತದೆ. ಮುಸ್ಲಿಂರ ವಿರುದ್ಧ ಸದಾ ಕಲ ಕೆಂಡ ಕಾರುವ ಬಿಜೆಪಿಗೆ ಲಾಭವಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಮುಸ್ಲಿಂ ಸಮುದಾಯ ಮತ್ತಷ್ಟು ಆತಂಕಗಳನ್ನು ಹೆದರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದೊಳಗಿನ ಅಲ್ಪಸಂಖ್ಯಾತ ನಾಯಕರು ಜಮೀರ್ ಅವರ ಪಾರುಪತ್ಯವನ್ನು ಅವಡುಗಚ್ಚಿ ಸಹಿಸಿಕೊಂಡಿದ್ದಾರೆ. ಆದರೂ ಜಮೀರ್ ಅನಪೇಕ್ಷಿತ ಹೇಳಿಕೆಗಳ ಮೂಲಕ ಸರ್ಕಾರ ಹಾಗೂ ಪಕ್ಷವನ್ನು ಮುಜಗರಕ್ಕೀಡು ಮಾಡುವುದನ್ನು ಮುಂದುವರೆಸಿರುವುದು ನಾಯಕರ ಅಸಹನೆಗೆ ಕಾರಣವಾಗಿದೆ.

RELATED ARTICLES

Latest News