Monday, December 2, 2024
Homeರಾಜ್ಯಜುಲೈ 15ರಿಂದ ಮಳೆಗಾಲದ ಅಧಿವೇಶನ

ಜುಲೈ 15ರಿಂದ ಮಳೆಗಾಲದ ಅಧಿವೇಶನ

ಬೆಂಗಳೂರು, ಜು.3– ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನವು ಜುಲೈ 15ರಿಂದ ಪ್ರಾರಂಭವಾಗಲಿದೆ.ಜುಲೈ 15ರಿಂದ ಜು.26ರವರೆಗೆ 9ದಿನಗಳ ಮಳೆಗಾಲದ ಅಧಿವೇಶನವನ್ನು ನಡೆಸಲು ನಿಗದಿಪಡಿಸಲಾಗಿದೆ. ಜುಲೈ 15ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಭೆ ಅಧಿವೇಶನ ಸಮಾವೇಶಗೊಳ್ಳುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 26 ನಂತರ ಅಧಿವೇಶನವನ್ನು ವಿಸ್ತರಣೆ ಮಾಡುವ ಅಥವಾ ಮುಕ್ತಾಯಗೊಳಿಸುವ ಬಗ್ಗೆ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ.ಕಳೆದ ಸಚಿವ ಸಂಪುಟ ಸಭೆಯಲ್ಲಿ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ನಡೆಸುವ ದಿನಾಂಕ ನಿರ್ಧಾರ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ನೀಡಲಾಗಿತ್ತು. ಅದರಂತೆ ಅಧಿವೇಶನ ನಡೆಸುವ ದಿನಾಂಕವನ್ನು ನಿಗದಿಪಡಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದ್ದು, ಅವರು ಅನುಮತಿ ನೀಡಿದ್ದಾರೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ನಡೆಯುತ್ತಿರುವ ಮೊದಲ ಅಧಿವೇಶನವಾಗಿದೆ. ಈ ಚುನಾವಣೆಯ ಗೆಲುವಿನ ಉತ್ಸಾಹದಲ್ಲಿರುವ ಪ್ರತಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗುತ್ತಿವೆ. ಹೀಗಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ವಾಕ್ಸಮರಕ್ಕೆ ಈ ಬಾರಿಯ ಅಧಿವೇಶನ ವೇದಿಕೆಯಾಗಲಿದೆ.

ರೈತರ ಆತಹತ್ಯೆ, ಕಳೆದ ಮುಂಗಾರು ಹಂಗಾಮಿನ ಬರಪರಿಹಾರ ಧನ ವಿತರಣೆ ವಿಳಂಬ, ಪೆಟ್ರೋಲ್‌, ಡೀಸೆಲ್‌, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿಚಾರವನ್ನು ಪ್ರಮುಖ ಅಸ್ತ್ರವಾಗಿ ಸರ್ಕಾರದ ವಿರುದ್ಧ ಬಳಸಲು ಪ್ರತಿ ಪಕ್ಷಗಳು ತಯಾರಿ ನಡೆಸಿವೆ.
ಜನರು ದಿನ ನಿತ್ಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸದನದ ಒಳ ಹೊರಗು ಹೋರಾಟ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಾಗೂ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ದೊರಕಿಸಲು ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ನಡೆಸಲಿವೆ.

RELATED ARTICLES

Latest News