Thursday, November 30, 2023
Homeರಾಜ್ಯಸಂಪುಟದಿಂದ ಸಚಿವ ಜಮೀರ್ ಅಹಮ್ಮದ್ ವಜಾಕ್ಕೆ ರೇಣುಕಾಚಾರ್ಯ ಒತ್ತಾಯ

ಸಂಪುಟದಿಂದ ಸಚಿವ ಜಮೀರ್ ಅಹಮ್ಮದ್ ವಜಾಕ್ಕೆ ರೇಣುಕಾಚಾರ್ಯ ಒತ್ತಾಯ

ಬೆಂಗಳೂರು,ನ.17-ಸ್ಪೀಕರ್ ಸ್ಥಾನದ ಘನತೆಯನ್ನು ಹಾಳು ಮಾಡಿರುವ ವಸತಿ ಸಚಿವ ಜಮೀರ್ ಅಹಮ್ಮದ್ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಸ್ಥಾನ ಎನ್ನುವುದು ಅತ್ಯಂತ ಗೌರವ ಮತ್ತು ಸಾಂವಿಧಾನಿಕ ಹುದ್ದೆ. ಈ ಸ್ಥಾನವನ್ನು ಯಾರೊಬ್ಬರೂ ಜಾತಿ-ಧರ್ಮ ನೋಡಿ ಗೌರವ ಕೊಡುವುದಿಲ್ಲ. ಸ್ಥಾನಕ್ಕೆ ಗೌರವ ಕೊಡುತ್ತಾರೆ. ಜಮೀರ್ ಅಹಮ್ಮದ್ ಇದರಲ್ಲಿ ಕೂಡ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಸ್ಪೀಕರ್ ಕುರ್ಚಿಯಲ್ಲಿ ಯಾವ ಜಾತಿಯವರು ಇಲ್ಲವೇ ಯಾವ ಧರ್ಮದವರು ಕುಳಿತಿದ್ದಾರೆ ಎಂಬುದು ಮುಖ್ಯವಲ್ಲ. ಆ ಸ್ಥಾನಕ್ಕೆ ಯಾರೇ ಕುಳಿತರೂ ಸದಸ್ಯರು ಎದ್ದು ನಿಂತು ಗೌರವಿಸುವುದು ಶಿಷ್ಟಾಚಾರ. ಕೇವಲ ಮುಸ್ಲಿಂ ಎನ್ನುವ ಕಾರಣಕ್ಕೆ ಬಿಜೆಪಿಯವರು ಗೌರವ ಕೊಡುವುದಿಲ್ಲ. ಅವರೊಬ್ಬ ಗೌರವಾನ್ವಿತ ವಿಧಾನಸಭೆಯ ಸ್ಪೀಕರ್ ಇದನ್ನು ಸಚಿವ ಜಮೀರ್ ಅರ್ಥ ಮಾಡಿಕೊಳ್ಳಬೇಕೆಂದು ಟೀಕಿಸಿದರು.

ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಏರ್​ಶೋ

ಮತ ಗಳಿಸುವ ಒಂದೇ ಕಾರಣಕ್ಕಾಗಿ ಒಂದು ಸಮುದಾಯದ ಮತಗಳ ಧೃವೀಕರಣಕ್ಕಾಗಿ ಸ್ಪೀಕರ್ ಸ್ಥಾನವನ್ನೇ ದುರ್ಬಳಕೆ ಮಾಡಿಕೊಂಡಿರುವ ಜಮೀರ್ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.

ಮುಖ್ಯಮಂತ್ರಿಯವರು ಅವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸ್ಪೀಕರ್ ಸ್ಥಾನದ ಬಗ್ಗೆ ನಾಳೆ ಯಾರು ಏನೂ ಬೇಕಾದರೂ ಮಾತನಾಡುತ್ತಾರೆ. ಇದರ ಗೌರವ ಉಳಿಯಲಿದೆಯೇ ಎಂದು ಪ್ರಶ್ನೆ ಮಾಡಿದರು.
ಜಮೀರ್ ಯಾವಾಗಲು ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸವನ್ನೇ ಮಾಡುತ್ತಿದ್ದಾರೆ. ಅವರಿಗೆ ಸಾಂವಿಧಾನಿಕ ಹುದ್ದೆ ಯಾವುದು, ಸ್ಪೀಕರ್ ಹುದ್ದೆ ಘನತೆಯೇ ಗೊತ್ತಿಲ್ಲ. ಇಂಥವರು ಸಂಪುಟದಲ್ಲಿ ಮುಂದುವರೆಯಲೂ ಬಾರದು.

ತಕ್ಷಣವೇ ರಾಜ್ಯದ ಜನತೆಯ ಬೇಷರತ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಚುನಾವಣೆ ಸಂದರ್ಭದಲ್ಲಿ ಮತ ಕೇಳುವುದು ಪ್ರತಿಯೊಬ್ಬರ ಹಕ್ಕು. ಹಾಗಂತ ಒಂದು ಸಮುದಾಯವನ್ನು ಓಲೈಕೆ ಮಾಡಿ ಮತ್ತೊಂದು ರಾಜಕೀಯ ಪಕ್ಷಕ್ಕೆ ಇಲ್ಲವೇ ಆ ಪಕ್ಷದ ಮುಖಂಡರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು. ಈ ಹಿಂದೆಯೇ ಇಂತಹ ಹೇಳಿಕೆಯನ್ನೇ ಕೊಟ್ಟಿದ್ದರು. ಈಗಲಾದರೂ ಎಚ್ಚೆತ್ತುಕೊಂಡು ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

RELATED ARTICLES

Latest News