Home Blog Page 102

75ರ ವರನನ್ನು ವರಿಸಲು ಬಂದಿದ್ದ 71ರ ವಧುವಿನ ಹತ್ಯೆ..!

ಲುಧಿಯಾನ,ಸೆ.18– ಯುಕೆ ಮೂಲದ 75 ವರ್ಷದ ಅನಿವಾಸಿ ಭಾರತೀಯ ವ್ಯಕ್ತಿಯನ್ನು ಮದುವೆಯಾಗಲು ಸಿಯಾಟಲ್‌‍ನಿಂದ ಇಲ್ಲಿಗೆ ಬಂದಿದ್ದ ಭಾರತೀಯ ಮೂಲದ 71 ವರ್ಷದ ಮಹಿಳೆಯನ್ನು ಹತ್ಯೆ ಮಾಡಲಾಗಿದೆ.

ಜುಲೈನಲ್ಲಿ ನಡೆದ ಈ ಘಟನೆ, ಮಹಿಳೆಯ ನಾಪತ್ತೆಗೆ ಸಂಬಂಧಿಸಿದಂತೆ ಲುಧಿಯಾನ ಪೊಲೀಸರು ಎಫ್‌‍ಐಆರ್‌ ದಾಖಲಿಸಿದ ನಂತರ ಇತ್ತೀಚೆಗೆ ಬೆಳಕಿಗೆ ಬಂದಿದೆ. ರೂಪಿಂದರ್‌ ಕೌರ್‌ ಪಂಧೇರ್‌ ಅವರು ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ (ಎನ್‌ಆರ್‌ಐ) ಲುಧಿಯಾನದವರಾಗಿದ್ದು, ಅವರ ವರನಾಗಲಿರುವ ಚರಣ್‌‍ಜಿತ್‌ ಸಿಂಗ್‌ ಗ್ರೆವಾಲ್‌ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು.

ಜುಲೈ 24 ರಂದು ಪಂಧೇರ್‌ ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಇದು ಅವರ ಸಹೋದರಿ ಕಮಲ್‌ ಕೌರ್‌ ಖೈರಾರಲ್ಲಿ ಅನುಮಾನ ಮೂಡಿಸಿತ್ತು. ಜುಲೈ 28 ರ ಹೊತ್ತಿಗೆ, ಖೈರಾ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಪೊಲೀಸರು ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಒತ್ತಡ ಹೇರಿದರು.

ಕಳೆದ ವಾರವಷ್ಟೇ ಖೈರಾ ಕುಟುಂಬಕ್ಕೆ ಆಕೆಯ ಸಾವಿನ ಸುದ್ದಿ ತಿಳಿಯಿತು. ಅಮೆರಿಕ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮಲ್ಹಾ ಪಟ್ಟಿಯ ಸುಖ್‌‍ಜೀತ್‌ ಸಿಂಗ್‌ ಸೋನು ಎಂಬಾತನನ್ನು ಬಂಧಿಸಿದ್ದಾರೆ. ಪಂಧೇರ್‌ ಅವರನ್ನು ಅವರ ಮನೆಯಲ್ಲಿ ಕೊಂದು ಶವವನ್ನು ಅಂಗಡಿ ಕೋಣೆಯಲ್ಲಿ ಸುಟ್ಟುಹಾಕಿದ್ದಾಗಿ ಸೋನು ಒಪ್ಪಿಕೊಂಡಿದ್ದಾನೆ.

ಪಂಧೇರ್‌ ಅವರನ್ನು ಕೊಲ್ಲಲು 50 ಲಕ್ಷ ರೂ. ನೀಡುವುದಾಗಿ ಗ್ರೇವಾಲ್‌ ಭರವಸೆ ನೀಡಿದ್ದರು. ಅವರ ಸೂಚನೆಯ ಮೇರೆಗೆ ಸೋನು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಧೇರ್‌ ಕೊಲೆಗೆ ಹಣಕಾಸಿನ ಉದ್ದೇಶವಿತ್ತು. ಗ್ರೇವಾಲ್‌ ಭೇಟಿ ಮಾಡುವ ಮೊದಲು ಪಂಧೇರ್‌ ಸಾಕಷ್ಟು ಹಣ ವರ್ಗಾಯಿಸಿದ್ದರು.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಗ್ರೇವಾಲ್‌‍ನನ್ನು ಶಂಕಿತ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಡೆಪ್ಯೂಟಿ ಇನ್ಸ್ ಪೆಕ್ಟರ್‌ ಜನರಲ್‌ (ಲುಧಿಯಾನ ಪೊಲೀಸ್‌‍ ರೇಂಜ್‌‍) ಸತೀಂದರ್‌ ಸಿಂಗ್‌ ದೃಢಪಡಿಸಿದ್ದಾರೆ. ಸೋನುವಿನ ಬಹಿರಂಗಪಡಿಸುವಿಕೆಯ ಆಧಾರದ ಮೇಲೆ ಬಲಿಪಶುವಿನ ಅಸ್ಥಿಪಂಜರದ ಅವಶೇಷಗಳು ಮತ್ತು ಇತರ ಪುರಾವೆಗಳನ್ನು ಹುಡುಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಯೋಗ ಗುರು ನಿರಂಜನಮೂರ್ತಿ ಬಂಧನ

ಬೆಂಗಳೂರು,ಸೆ.18– ಯೋಗಾಭ್ಯಾಸ ತರಬೇತಿಗಾಗಿ ಯೋಗ ಸೆಂಟರ್‌ಗೆ ಹೋಗುತ್ತಿದ್ದ ಬಾಲಕಿಗೆ ಮೆಡಲ್‌ ಕೊಡಿಸುತ್ತೇನೆಂದು ನಂಬಿಸಿ ಆಕೆಯ ಮೇಲೆ ಅತ್ಯಾಚಾರ ವೆಸಗಿದ ಆರೋಪದಡಿ ಯೋಗ ಗುರು ನಿರಂಜನಮೂರ್ತಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ನಿರಂಜನಮೂರ್ತಿ ಯೋಗ ಕೇಂದ್ರ ನಡೆಸುತ್ತಿದ್ದು, ಈ ಕೇಂದ್ರಕ್ಕೆ ಯೋಗ ಕಲಿಯಲು ಹಲವಾರು ಮಂದಿ ಹೋಗುತ್ತಾರೆ. ತನ್ನ ಯೋಗ ಸೆಂಟರ್‌ಗೆ ಬರುತ್ತಿದ್ದ ಬಾಲಕಿಗೆ ನಿನ್ನನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ, ಮೆಡಲ್‌ ಕೊಡಿಸುತ್ತೇನೆಂದು ಆಮಿಷವೊಡ್ಡಿ ಆಕೆಯ ಮನ ಪರಿವರ್ತನೆ ಮಾಡಿದ್ದಾನೆ.

ಯೋಗದಲ್ಲಿ ನೀನು ಸಾಧನೆ ಮಾಡಿದರೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂದು ನಂಬಿಸಿದ್ದಾನೆ. ಈ ನಡುವೆ ಯೋಗಾ ಸ್ಪರ್ಧೆಯಲ್ಲಿ ಭಾಗವಹಿಸಲು ನಿರಂಜನಮೂರ್ತಿ ಜೊತೆ 2023 ರಲ್ಲಿ ಥಾಯ್ಲಂಡ್‌ ಗೆ ಬಾಲಕಿ ಹೋಗಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಆಕೆ ಯೋಗ ಕೇಂದ್ರಕ್ಕೆ ಹೋಗುವುದನ್ನು ಬಿಟ್ಟಿದ್ದಾಳೆ.

ತದ ನಂತರದಲ್ಲಿ 2024 ರಲ್ಲಿ ಪುನಃ ಯೋಗ ಸ್ಪರ್ಧೆಗೆ ಸನ್‌ ಶೈನ್‌ ಇನ್ಸ್ಟಿಟ್ಯೂಟ್‌ಗೆ ಯೋಗ ಕಲಿಯಲು ಬಾಲಕಿ ಸೇರಿಕೊಂಡಿದ್ದಾಳೆ. ದುರಾದೃಷ್ಟವೆಂಬಂತೆ ನಿರಂಜನಮೂರ್ತಿಯೇ ಈ ಇನ್ಸ್ಟಿಟ್ಯೂಟ್‌ ನಡೆಸುತ್ತಿದ್ದು, ಅಲ್ಲಿಯೂ ಸಹ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಕಳೆದ ಆಗಸ್ಟ್‌ ತಿಂಗಳಿನಲ್ಲಿ ಈ ಇನ್ಸ್ಟಿಟ್ಯೂಟ್‌ನಲ್ಲೇ ಆಕೆಯ ಜೊತೆ ಅತ್ಯಾಚಾರ ವೆಸಗಿದ್ದಾನೆ. ಅಲ್ಲದೇ ಆಗಸ್ಟ್‌ 22 ರಂದು ರಾಜ್ಯ ಮಟ್ಟದಲ್ಲಿ ಪ್ಲೇಸ್‌‍ಮೆಂಟ್‌ ಕೊಡಿಸುತ್ತೇನೆಂದು ದೈಹಿಕ ಸಂಪರ್ಕಕ್ಕೆ ಯತ್ನಿಸಿದ್ದಾನೆ.

ಯೋಗ ಗುರು ನಿರಂಜನಮೂರ್ತಿ ವರ್ತನೆಯಿಂದ ಆತಂಕಗೊಂಡ ಆಕೆ ಪೋಷಕರಿಗೆ ಈ ವಿಷಯ ತಿಳಿಸಿ ನಂತರ ಆರ್‌ಆರ್‌ ನಗರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾಳೆ.
ಈ ಬಗ್ಗೆ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಿರಂಜನಮೂರ್ತಿ ತಲೆ ಮರೆಸಿಕೊಂಡಿದ್ದನು.

ಪೊಲೀಸರು ತನಿಖೆ ಮುಂದುವರೆಸಿ ಯೋಗ ಗುರು ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಆಕೆಯ ಮೇಲೆ ಅತ್ಯಾಚಾರ ವೆಸಗಿರುವುದು ಬಯಲಾಗಿದೆ.ಈ ಯೋಗ ಗುರು ಇನ್ನು ಹಲವು ಯುವತಿಯರ ಮೇಲೆ ಅತ್ಯಾಚಾರ ವೆಸಗಿರುವ ಶಂಕೆ ವ್ಯಕ್ತವಾಗಿವೆ.

ಅತ್ಯಾಚಾರಕ್ಕೆ ಒಳಗಾಗಿದ್ದರೆ ಮಾಹಿತಿ ನೀಡಿ: ಯೋಗ ತರಬೇತಿಗೆಂದು ಈತನ ಯೋಗ ಸೆಂಟರ್‌ಗೆ ಹೋಗುತ್ತಿದ್ದವರು ಈತನಿಂದ ಏನಾದರೂ ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಒಳಗಾಗಿದ್ದರೆ ತಕ್ಷಣ ಪೊಲೀಸ್‌‍ ಠಾಣೆಗೆ ದೂರು ನೀಡುವಂತೆ, ದೂರು ನೀಡುವವರ ಹೆಸರು ಹಾಗೂ ಮಾಹಿತಿಯನ್ನು ಗೌಪ್ಯವಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮತದಾನ ಹಕ್ಕು ಕಳೆದುಕೊಂಡ ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ

ಢಾಕಾ,ಸೆ.18- ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ಲಾಕ್‌ ಮಾಡಲಾಗಿದ್ದು, ಪರಿಣಾಮವಾಗಿ ಅವರು ಮತದಾನದಿಂದ ವಂಚಿತರಾಗಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಬಾಂಗ್ಲಾದೇಶದ ಚುನಾವಣಾ ಆಯೋಗ (ಇಸಿ) ಹೇಳಿದೆ, ರಾಷ್ಟ್ರೀಯ ಗುರುತಿನ (ಎನ್‌ಐಡಿ) ಕಾರ್ಡ್‌ ಲಾಕ್‌ ಆಗಿರುವ ಯಾರಾದರೂ ವಿದೇಶದಿಂದ ಮತ ಚಲಾಯಿಸಲು ಸಾಧ್ಯವಿಲ್ಲ ಎಂದು ಇಸಿ ಕಾರ್ಯದರ್ಶಿ ಅಖ್ತರ್‌ ಅಹದ್‌ ಇಲ್ಲಿನ ನಿರ್ಬಚೋನ್‌ ಭವನದಲ್ಲಿರುವ ತಮ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಹದ್‌ ಬೇರೆ ಯಾವುದೇ ಹೆಸರನ್ನು ಉಲ್ಲೇಖಿಸದಿದ್ದರೂ, ಹೆಸರಿಸದ ಇಸಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಮತ್ತು ಢಾಕಾ ಟ್ರಿಬ್ಯೂನ್‌ ಪತ್ರಿಕೆ, ಹಸೀನಾ ಅವರ ಕಿರಿಯ ಸಹೋದರಿ ಶೇಖ್‌ ರೆಹಾನಾ, ಮಗ ಸಜೀಬ್‌ ವಾಝೆದ್‌ ಜಾಯ್‌ ಮತ್ತು ಮಗಳು ಸೈಮಾ ವಾಝೆದ್‌ ಪುತುಲ್‌ ಅವರ ಎನ್‌ಐಡಿಗಳನ್ನು ಸಹ ಲಾಕ್‌ ಅಥವಾ ಬ್ಲಾಕ್‌ ಮಾಡಲಾಗಿದೆ ಎಂದು ವರದಿ ಮಾಡಿದೆ.

ರೆಹಾನಾ ಅವರ ಮಕ್ಕಳಾದ ಟುಲಿಪ್‌ ರಿಜ್ವಾನಾ ಸಿದ್ದಿಕ್‌, ಅಜಿನಾ ಸಿದ್ದಿಕ್‌ ಮತ್ತು ಸೋದರಳಿಯ ರದ್ವಾನ್‌ ಮುಜಿಬ್‌ ಸಿದ್ದಿಕ್‌ ಬಾಬಿ, ಅವರ ಸೋದರ ಮಾವ ಮತ್ತು ಹಸೀನಾ ಅವರ ಮಾಜಿ ಭದ್ರತಾ ಸಲಹೆಗಾರ ನಿವೃತ್ತ ಮೇಜರ್‌ ಜನರಲ್‌ ತಾರಿಕ್‌ ಅಹದ್‌ ಸಿದ್ದಿಕ್‌, ಅವರ ಪತ್ನಿ ಶಾಹಿನ್‌ ಸಿದ್ದಿಕ್‌ ಮತ್ತು ಅವರ ಪುತ್ರಿ ಬುಶ್ರಾ ಸಿದ್ದಿಕ್‌ ಅವರನ್ನೂ ನಿಷೇಧಿಸಲಾಗಿದೆ. ಆದಾಗ್ಯೂ, ನ್ಯಾಯವನ್ನು ತಪ್ಪಿಸಲು ವಿದೇಶಕ್ಕೆ ಓಡಿಹೋದವರು ಅಥವಾ ಇತರ ಕಾರಣಗಳಿಗಾಗಿ ತಮ ಎನ್‌ಐಡಿ ಕಾರ್ಡ್‌ಗಳು ಸಕ್ರಿಯವಾಗಿದ್ದರೆ ಇನ್ನೂ ಮತ ಚಲಾಯಿಸಬಹುದು ಎಂದು ಅಹದ್‌ ಹೇಳಿದರು.

ಹಸೀನಾ ಅವರ ಅವಾಮಿ ಲೀಗ್‌ ಸರ್ಕಾರ2024 ರ ಆಗಸ್ಟ್‌ 5 ರಂದು ಪತನಗೊಂಡಿತು. ಹಿಂಸಾತಕ ವಿದ್ಯಾರ್ಥಿ ನೇತೃತ್ವದ ಚಳುವಳಿಯು ಭಾರತಕ್ಕೆ ತಪ್ಪಿಸಿಕೊಳ್ಳಲು ಕಾರಣವಾಯಿತು. ನೊಬೆಲ್‌ ಪ್ರಶಸ್ತಿ ವಿಜೇತ ಮುಹಮದ್‌ ಯೂನಸ್‌‍ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.

ಮಾನವೀಯತೆಯ ವಿರುದ್ಧದ ಅಪರಾಧಗಳು ಸೇರಿದಂತೆ ಆರೋಪಗಳ ಮೇಲೆ ಹಸೀನಾ ಮತ್ತು ಇತರ ಹಿರಿಯ ಅವಾಮಿ ನಾಯಕರ ವಿಚಾರಣೆಗೆ ಬಾಕಿ ಇರುವ ಅವಾಮಿ ಲೀಗ್‌ ಚಟುವಟಿಕೆಗಳನ್ನು ಅಮಾನತುಗೊಳಿಸಿದರು.

ಹಸೀನಾ ಪ್ರಸ್ತುತ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ಗೈರುಹಾಜರಿಯಲ್ಲಿ ವಿಚಾರಣೆಗೆ ಒಳಗಾಗಿದ್ದಾರೆ, ಅಲ್ಲಿ ಪ್ರಾಸಿಕ್ಯೂಟರ್‌ಗಳು ಜುಲೈ 2024 ರ ದಂಗೆಯ ಸಮಯದಲ್ಲಿ ಆಪಾದಿತ ದೌರ್ಜನ್ಯಕ್ಕಾಗಿ ಮರಣದಂಡನೆಯನ್ನು ಕೋರಿದ್ದಾರೆ. ಬಾಂಗ್ಲಾದೇಶದ ಸ್ಥಾಪಕ ಮತ್ತು ಹಸೀನಾ ಅವರ ತಂದೆ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ 32 ಧನಂಡಿ ನಿವಾಸ ಸೇರಿದಂತೆ ಗುಂಪುಗಳು ಅವರ ಆಸ್ತಿಗಳನ್ನು ಸುಟ್ಟುಹಾಕಿ ಧ್ವಂಸಗೊಳಿಸಿದ್ದರಿಂದ ಹೆಚ್ಚಿನ ಹಿರಿಯ ಅವಾಮಿ ಲೀಗ್‌ ನಾಯಕರು ಭೂಗತ ಅಥವಾ ದೇಶಭ್ರಷ್ಟರಾಗಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-09-2025)

ನಿತ್ಯ ನೀತಿ : ನಿತ್ಯ ಸುಖ ಆನಂದವನ್ನುಂಟು ಮಾಡುವುದೇ ಭಕ್ತಿಯ ಪರಾಕಾಷ್ಠೆ. ಭಗವಂತನ ನಾಮಸ್ಮರಣೆಯಿಂದ ಚಿತ್ತ ವೃತ್ತಿ ಶುದ್ಧವಾಗುತ್ತಾ ಹೋಗುತ್ತದೆ. ಅಂತಹ ಭಕ್ತಿಯೇ ಮುಕ್ತಿಗೆ ಸಾಧನವಾಗಲಿದೆ.

ಪಂಚಾಂಗ : ಗುರುವಾರ, 18-09-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಭಾದ್ರಪದ / ಪಕ್ಷ:ಕೃಷ್ಣ / ತಿಥಿ: ದ್ವಾದಶಿ / ನಕ್ಷತ್ರ: ಪುಷ್ಯ / ಯೋಗ: ಶಿವ / ಕರಣ: ಕೌಲವ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.19
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30

ರಾಶಿಭವಿಷ್ಯ :
ಮೇಷ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಜೀವನ ಸಂಗಾತಿಯ ಬೆಂಬಲ ನಿಮಗೆ ಸಿಗುತ್ತದೆ.
ವೃಷಭ: ಹಳೆ ಸ್ನೇಹಿತರೊಂದಿಗೆ ಮಾತನಾಡುವ ಮೂಲಕ ನಿಮ್ಮ ವಿಷಯಗಳನ್ನು ಹಂಚಿಕೊಳ್ಳಬಹುದು.
ಮಿಥುನ: ಮನೆಯ ಸದಸ್ಯರು ನಿಮ್ಮನ್ನು ನೋಯಿಸಿ ದ್ದರೆ, ಅವರು ನಿಮ್ಮ ಬಳಿ ಬಂದು ಕ್ಷಮೆ ಕೇಳುವರು.

ಕಟಕ: ಸಾಲದ ವ್ಯವಹಾರ ಮಾಡುವುದನ್ನು ತಪ್ಪಿಸಿ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ.
ಸಿಂಹ: ಮಾನಸಿಕ ಒತ್ತಡ ಹೆಚ್ಚಾಗಬಹುದು. ಯೋಗ ಮಾಡುವುದರಿಂದ ಪ್ರಯೋಜನವಾಗುತ್ತದೆ.
ಕನ್ಯಾ: ಆಹಾರದ ಬಗ್ಗೆ ಗಮನ ಕೊಡುವುದು ಒಳಿತು. ಇಲ್ಲದಿದ್ದರೆ ನಿಮ್ಮ ಆರೋಗ್ಯ ಹದಗೆಡಬಹುದು. ಎಚ್ಚರಿಕೆ ವಹಿಸಿ.

ತುಲಾ: ಕೆಲಸಕ್ಕೆ ಸಂಬಂ ಸಿದಂತೆ ಹಿರಿಯರಿಂದ ಕೆಲವು ಉತ್ತಮ ಸಲಹೆಗಳನ್ನು ಪಡೆಯಬಹುದು.
ವೃಶ್ಚಿಕ: ಗುರಿ ತಲುಪುವಲ್ಲಿ ನಿಮ್ಮ ಶ್ರಮ ಸಾರ್ಥಕವೆನಿಸಲಿದೆ. ಲಕ್ಷ್ಮೀ ಪೂಜೆ ಮಾಡುವುದರಿಂದ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಧನುಸ್ಸು: ಸಾಮಾಜಿಕ ಜೀವನದಲ್ಲಿ ಆಹ್ಲಾದಕರ ಅನುಭವಗಳಾಗುತ್ತವೆ.

ಮಕರ: ಒಡಹುಟ್ಟಿದವರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಲಿದೆ ಮತ್ತು ಅವರಿಂದ ಲಾಭವೂ ದೊರೆಯುವುದು.
ಕುಂಭ: ತಂದೆಯೊಂದಿಗೆ ವೈಮನಸ್ಯವಿದ್ದರೆ ಪರಿಹರಿಸಿ ಕೊಳ್ಳಬಹುದು. ಅವರ ಮಾತಿಗೆ ಮನ್ನಣೆ ನೀಡಿ.
ಮೀನ: ಮನೆಯ ಸಾಮಾಗ್ರಿಗಳ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾಗಬಹುದು.

ನಾಳೆಯಿಂದ ಕಂಪ್ಯೂಟ್, ಕಂಟ್ರೋಲ್, ನೆಟ್ವರ್ಕ್ ಮತ್ತು ಫೋಟಾನಿಕ್ಸ್ ಕುರಿತ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ

0

ಬೆಂಗಳೂರು : ಇದೇ ಸೆಪ್ಟೆಂಬರ್ 18 ಮತ್ತು19 ರಂದು ಎರಡು ದಿನಗಳವರೆಗೆ ನಡೆಯಲಿರುವ ಕಂಪ್ಯೂಟ್, ಕಂಟ್ರೋಲ್, ನೆಟ್ವರ್ಕ್ ಮತ್ತು ಫೋಟಾನಿಕ್ಸ್ ಕುರಿತ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನದ ಆತಿಥ್ಯವನ್ನು ಆಕ್ಸ್‌ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಹಿಸಿಕೊಂಡಿದೆ.

ಸಮ್ಮೇಳನದ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಸಿನಾಪ್ಸಿಸ್ ಐಎನ್‌ಸಿ ಹಿರಿಯ ನಿರ್ದೇಶಕ (ಆರ್‌‌&ಡಿ) ವಿಕಾಸ್ ಗುಡಿ ಅವರು ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಜರ್ಮನಿ ವಿಶ್ವವಿದ್ಯಾಲಯದ ಫ್ರಾನ್ಸಿಸ್ಕೋ ಮುರ್ರೆ ಮತ್ತು ಬಿಹೊರ್ ದಾರ್ ವಿಶ್ವವಿದ್ಯಾಲಯದ ಡಾ. ಫೆಕದ್ ಮಿಹ್ರತ್ ಗೆರೆಮಿವ್ ಅವರು ಉಪಸ್ಥಿತರಿರಲಿದ್ದಾರೆ. ಆಕ್ಸ್‌ಫರ್ಡ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಅಧ್ಯಕ್ಷ ಡಾ. ಎಸ್‌‌.ಎನ್‌.ವಿ‌.ಎಲ್. ನರಸಿಂಹ ರಾಜು ಅವರು ಸಮ್ಮೇಳನದ ಮುಖ್ಯ ಆಯೋಜಕರಾಗಿರುತ್ತಾರೆ.

ಎರಡು ದಿನಗಳ ಸಮ್ಮೇಳನದಲ್ಲಿ ಎಐ, ಎಂಎಲ್, ಐಒಟಿ, ಆನ್‌ಲೈನ್ ಟ್ರ್ಯಾಕ್, ಫೋಟಾನಿಕ್ & ವಿಎಸ್‌ಎಲ್ ವಿಷಯಗಳ ಮೇಲೆ ಚರ್ಚೆ ಮತ್ತು ವಿಚಾರ ಸಂಕಿರಣ ನಡೆಯಲಿದೆ.

ಬೆಂಗಳೂರಲ್ಲಿ ಇಂದಿನಿಂದ ಎಂದಿನಂತೆ ಬರಲಿದೆ ಕಾವೇರಿ ನೀರು

ಬೆಂಗಳೂರು, ಸೆ.17- ನಗರದಲ್ಲಿ ಮೂರು ದಿನ ಕಾವೇರಿ ನೀರು ಬರಲ್ಲ ಎಂದಿದ್ದ ಜಲ ಮಂಡಳಿ ಒಂದು ದಿನ ಮೊದಲೇ ನೀರು ಕೊಡಲು ನಿರ್ಧರಿಸಿದೆ.ನಿಗದಿಗಿಂತ ಒಂದು ದಿನ ಮುಂಚಿತವಾಗಿ ಕಾವೇರಿ ನೀರಿನ ಮರು ಸರಬರಾಜು ಪ್ರಾರಂಭ ಮಾಡಲಾಗಿರುವುದರಿಂದ ಜನ ನೆಮದಿಯ ನಿಟ್ಟುಸಿರು ಬಿಡುವಂತಾಗಿದೆ.

ತುರ್ತು ನಿರ್ವಹಣಾ ಕಾಮಗಾರಿಗಳ ಹಿನ್ನಲೆ ಮೂರು ದಿನಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಈ ಹಿಂದೆ ತಿಳಿಸಿತ್ತು.ಆದರೆ ಅಂದುಕೊಂಡ ಕೆಲಸವನ್ನು ಒಂದು ದಿನದ ಮೊದಲೇ ಪೂರ್ಣಗೊಳಿಸಿರುವುದರಿಂದ ಇಂದಿನಿಂದ ಎಂದಿನಂತೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ.

ತುರ್ತು ನಿರ್ವಹಣಾ ಕಾಮಗಾರಿಗಳನ್ನು ನಮ ಸಿಬ್ಬಂದಿ ಒಂದು ದಿನ ಮೊದಲೇ ಪೂರ್ಣಗೊಳಿಸಿರುವುದರಿಂದ ನಾವು ಇಂದಿನಿಂದಲೇ ಕಾವೇರಿ ನೀರು ಸರಬರಾಜು ಮಾಡುತ್ತಿದ್ದೇವೆ ಎಂದು ಜಲ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ರಸ್ತೆಗುಂಡಿಗಳಿಂದ ಬೇಸತ್ತು ಬೇರೆ ರಾಜಯಗಳತ್ತ ಮುಖಮಾಡಿದ ಖಾಸಗಿ ಸಂಸ್ಥಗಳು,

ಬೆಂಗಳೂರು, ಸೆ. 17- ನಗರದ ರಸ್ತೆ ಗುಂಡಿ ಮತ್ತಿತರ ಅವ್ಯವಸ್ಥೆಗಳಿಂದ ಬೆಸತ್ತಿರುವ ಖಾಸಗಿ ಸಂಸ್ಥೆಯೊಂದು ಬೆಂಗಳೂರಿನಿಂದ ಹೊರ ನಡೆಯಲು ತೀರ್ಮಾನಿಸಿದೆ.ಕಳೆದ ಒಂಬತ್ತು ವರ್ಷಗಳಿಂದ ನಗರದಲ್ಲಿ ಕಾರ್ಯಚರಣೆ ನಡೆಸುತ್ತಿರುವ ಅತಿದೊಡ್ಡ ಲಾಜಿಸ್ಟಿಕ್‌ ಸಂಸ್ಥೆಯಾದ ಬ್ಲಾಕ್‌ ಬಕ್‌ ಕಂಪನಿ ಬೆಂಗಳೂರಿನ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಿದೆ.

ಕಳೆದ 990 ರಲ್ಲಿ ಲಾಜಿಸ್ಟಿಕ್‌ ಸೇವೆ ಆರಂಭಿಸಿದ್ದ ಬ್ಲಾಕ್‌ ಬಕ್‌ ಸಂಸ್ಥೆ ನಗರದ ಹೊರವರ್ತುಲ ರಸ್ತೆಯಲ್ಲಿ ಸೇವೆ ನೀಡುತ್ತ ಬರುತ್ತಿದೆ. ವೈಟ್‌ಫೀಲ್ಡ್‌‍, ಸರ್ಜಾಪುರ, ಮಾರತ್‌ಹಳ್ಳಿ ಮತ್ತು ಬೆಳ್ಳಂದೂರು ಕಡೆಗಳಲ್ಲಿ ಸೇವೆ ನೀಡ್ತಿರೋ ಈ ಸಂಸ್ಥೆ ನಗರದ ಅವ್ಯವಸ್ಥೆಗೆ ಬೇಸತ್ತು ಇಲ್ಲಿಂದ ಜಾಗ ಖಾಲಿ ಮಾಡಲು ನಿರ್ಧರಿಸಿದೆ. ಬ್ಲಾಕ್‌ಬಕ್‌ ಸಂಸ್ಥೆ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್‌ ಯಬಾಜಿ ಅವರು ಎಕ್‌್ಸ ಮಾಡಿ ತಮ ಈ ನಿರ್ಧಾರ ಪ್ರಕಟಿಸಿದ್ದಾರೆ.

ಪೋಸ್ಟ್‌ನಲ್ಲಿ ಕಳೆದ 9 ವರ್ಷದಿಂದ ಬೆಂಗಳೂರಿನಲ್ಲಿ ಸೇವೆ ನೀಡೋಕೆ ಕಷ್ಟ ಆಗ್ತಿದೆ..ಬೆಳ್ಳಂದೂರಿನಲ್ಲಿ ಸೇವೆ ನೀಡೋಕೆ ಕಷ್ಟ ಆಗ್ತಿದೆ. ನಮ್ಮ ಕಚೇರಿ ಇದೀಗ ಕಚೇರಿ ಪ್ಲಸ್‌‍ ಮನೆಯಾಗಿ ಪರಿವರ್ತನೆಯಾಗಿದೆ. ಇಲ್ಲಿ ನಾವು ಮುಂದುವರೆಯುವುದು ಕಷ್ಟ ಆಗಲಿದೆ..ನಾವು ಹೊರಗೆ ಹೋಗಲು ತೀರ್ಮಾನಿಸಿದ್ದೇವೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ನಮ ಅಸಮಾಧಾನಕ್ಕೆ ಕಾರಣ..! ನಮ ಸಹೋದ್ಯೋಗಿಗಳ ಪ್ರಯಾಣದ ಸಮಯ ಒಂದೂವರೆ ಗಂಟೆಗೂ ಹೆಚ್ಚಿದೆ. ರಸ್ತೆಗಳು ಗುಂಡಿ ಮತ್ತು ಧೂಳಿನಿಂದ ತುಂಬಿವೆ. ಹಾಳಾದ ರಸ್ತೆಗಳನ್ನ ರಿಪೇರಿ ಮಾಡಲು ಹಿಂದೇಟು ಹಾಕಲಾಗುತ್ತಿದೆ. ಮುಂದಿನ ಐದು ವರ್ಷ ಯಾವುದೇ ಬದಲಾವಣೆ ಕಂಡು ಬರುವುದು ಕಷ್ಟ ಸಾಧ್ಯ ಎನ್ನುವ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಇಂತಹ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದು ಅವರು ಅಲವತ್ತುಕೊಂಡಿದ್ದಾರೆ.

ಕೆಆರ್‌ ಪುರಂ ನಿಂದ ಸಿಲ್‌್ಕ ಬೋರ್ಡ್‌ ವರೆಗೆ 500ಕ್ಕೂ ಐಟಿ ಸಂಸ್ಥೆಗಳಿವೆ ಇಲ್ಲಿ 9.5 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ರಾಜ್ಯದ ವಾರ್ಷಿಕ ಆದಾಯದಲ್ಲಿ ಶೆ. 36ರಷ್ಟು ಕೊಡುಗೆ ನಮದೆ ಇದೇ. ಪರಿಸ್ಥಿತಿ ಹೀಗಿದ್ದರೂ ನಮಗೆ ಸೂಕ್ತ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ ಎಂದು ಅವರು ತಮ ಅಸಮಾಧಾನ ಹೊರ ಹಾಕಿದ್ದಾರೆ.

ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ : ಕನ್ನಡ ಸಂಘಟನೆಗಳ ಆಕ್ರೋಶ

ಬೆಂಗಳೂರು, ಸೆ.17- ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿ ಶಿಕ್ಷೆ ನೀಡಿರುವುದಕ್ಕೆ ಕನ್ನಡ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ. ಇಂತಹ ಶಾಲೆಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತಗೊಳಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕನ್ನಡ ಸಂಘಟನೆಯ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕನ್ನಡ ವಿರೋಧಿ ಹಾಗೂ ಕನ್ನಡಕ್ಕೆ ದ್ರೋಹ ಬಗೆಯುವ ಶಾಲೆಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳ ಬೇಕಾದ ಅಗತ್ಯವಿದ್ದು, ಯಾವುದೇ ಮುಲಾಜಿಲ್ಲದೆ ಕನ್ನಡಕ್ಕೆ ಅವಮಾನ ಮಾಡುವವರಿಗೆ ಬುದ್ಧಿ ಕಲಿಸುವ ಕಾಲ ಬಂದಿದೆ ಎಂದು ಮುಖಂಡರು ಎಚ್ಚರಿಸಿದ್ದಾರೆ.

ಇಂತಹ ಶಾಲೆಯಲ್ಲಿ ಮಕ್ಕಳು ಪಾಠ ಕಲೀಬೇಕಾ.!
ಇರೋದು ಕರ್ನಾಟಕದಲ್ಲಿ ಆದರೂ ಇಲ್ಲಿನ ವಿದ್ಯಾರ್ಥಿಗಳು ಕನ್ನಡ ಮಾತನಾಡಬಾರದಂತೆ. ಮಾತನಾಡಿದರೆ ದಂಡ ವಿಧಿಸುತ್ತಾರಂತೆ… ಅದ್ಯಾವುದಪ್ಪ ಅಂತಹ ಶಾಲೆ ಅನ್ಕೊಂಡ್ರಾ… ಅದೇ ಸಿಂಧಿ ಶಾಲೆ.ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ ಈ ಶಾಲೆಗೆ ಕಾರಣ ಕೇಳಿ ಶಿಕ್ಷಣ ಇಲಾಖೆ ಅಧಿಕಾರಿಗಳು ನೋಟೀಸ್‌‍ ಜಾರಿ ಮಾಡಿದ್ದಾರೆ.

ನಗರದ ಕುಮಾರ ಪಾರ್ಕ್‌ನಲ್ಲಿರುವ ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾ ಗುತ್ತಿದೆ ಎಂಬ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಾಕಷ್ಟು ದೂರುಗಳು ಬಂದಿದ್ದವು.ಈ ಕುರಿತಂತೆ ಸರ್ಕಾರಕ್ಕೆ ಪತ್ರ ಬರೆದಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ಕನ್ನಡ ವಿರೋಧಿ ಶಾಲೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಪ್ರಾಧಿಕಾರದ ದೂರಿನ ಮೇರೆಗೆ ಬೆಂಗಳೂರು ಉತ್ತರ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸಿಂಧಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕನ್ನಡ ಮಾತನಾಡುವ ವಿದ್ಯಾರ್ಥಿಗಳಿಗೆ ಭಾರಿ ದಂಡ ವಿಧಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಶಾಲೆಗೆ ಕಾರಣ ಕೇಳಿ ನೋಟೀಸ್‌‍ ಜಾರಿ ಮಾಡಿದ್ದಾರೆ. ಶಾಲೆಯವರು ಕಾರಣ ನೀಡಿದ ನಂತರ ಕನ್ನಡ ವಿರೋಧಿ ಶಾಲೆ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಕ್ರೋಶ; ತಿನ್ನುವ ಆಹಾರ, ಕುಡಿಯುವ ನೀರು ಇಲ್ಲಿನದು ಆದರೆ ಅವರಿಗೆ ಇಲ್ಲಿನ ಭಾಷೆ ಬೇಡ ಎಂದರೆ ಏನರ್ಥ. ಅಂತಹ ಶಾಲೆಗಳಲ್ಲಿ ನಮ ಮಕ್ಕಳು ಪಾಠ ಕಲಿಯುವುದು ಬೇಡ ಕನ್ನಡ ವಿರೋಧಿ ಶಾಲೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಾವೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರರು ಎಚ್ಚರಿಸಿದ್ದಾರೆ.

ಕನ್ನಡ ದ್ರೋಹಿಗಳಿಗೆ ಪಾಠ ಕಲಿಸಿ
ಕನ್ನಡದ ನೆಲದಲ್ಲಿದ್ದು, ಎಲ್ಲ ಸೌಲಭ್ಯಗಳನ್ನು ಪಡೆದು ಕನ್ನಡ ಬೇಡ ಎನ್ನುವ ದ್ರೋಹಿಗಳಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು ಎಂದು ಸಾ.ರಾ.ಗೋವಿಂದು ಒತ್ತಾಯಿಸಿದ್ದಾರೆ.
ರಾಜಧಾನಿಯಲ್ಲೇ ಇಂತಹ ಶಾಲೆಗಳು ಇರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಶಾಲೆ ಕೊಠಡಿಯೊಳಗೆ ಇದ್ದ ಇಂತಹ ಆದೇಶ ಈಗ ಶಾಲೆ ಆವರಣ ಮತ್ತು ರಸ್ತೆಗೂ ಬಂದಿದೆ ಎಂದು ಕಿಡಿಕಾರಿದ್ದಾರೆ. ಸಿಂಧಿ ಶಾಲೆ ಸರ್ಕಾರ ನೀಡಿದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದು ಪ್ರಮುಖ ತಾಣದಲ್ಲೇ ಇದೆ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನೂ ಪಡೆದು ಕನ್ನಡಿಗ ಮಕ್ಕಳಿಂದ ದುಬಾರಿ ಫೀಜ್‌ ಕಟ್ಟಿಸಿಕೊಂಡು ಆಳುತ್ತಿರುವ ಇವರು ಕನ್ನಡ ಮಾತನಾಡಿದರೆ ದಂಡ ವಿಧಿಸುವುದು ದುರಂಹಕಾರದ ಪರಮಾವಧಿ ಎಂದು ಹೇಳಿದ್ದಾರೆ.ಇಂತಹ ಘಟನೆಗಳು ಮುಂದೆ ನಡೆಯದಂತೆ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಉಗ್ರ ಹೋರಾಟದ ಎಚ್ಚರಿಕೆ
ಶಾಲೆಯಲ್ಲಿ ಶಿಸ್ತು, ಸಂಯಮ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಿ. ಆದರೆ ಕನ್ನಡದಲ್ಲಿ ಮಾತನಾಡುವುದು ತಪ್ಪು ಎಂದು ಶಿಕ್ಷೆ ನೀಡಿ ದಂಡ ವಿಧಿಸುವವರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.

ಸಿಂಧಿ ಶಾಲೆಯಲ್ಲಿ ವಿದ್ಯಾರ್ಥಿಗಳು ಕನ್ನಡದಲ್ಲಿ ಬೈದಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಅನೇಕ ಶಾಲೆಗಳಲ್ಲಿ ಈಗಲೂ ಕನ್ನಡ ದಲ್ಲಿ ಮಾತನಾಡಿದರೆ ತಪ್ಪು ಎಂದೇ ಅವರನ್ನು ಶಿಕ್ಷಿಸಿ ದಂಡ ಹಾಕುವ ಪ್ರವೃತ್ತಿ ನಡೆಯುತ್ತಿದೆ. ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತದೆ ಎಂದು ಹೇಳಿದ್ದಾರೆ.
ಕನ್ನಡ ರಾಜ್ಯದ ಆಡಳಿತ ಭಾಷೆ ಎಂದು ಸರ್ಕಾರ ಘೋಷಿಸಿದೆ. ಅದನ್ನು ಪಾಲನೆ ಮಾಡಬೇಕಾದುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ. ಆದರೆ ನಮದೇ ಕಾನೂನು, ನಮದೇ ನಡೆ ಎಂಬಂತೆ ಕೆಲ ಶಿಕ್ಷಣ ಸಂಸ್ಥೆಗಳು ವರ್ತಿಸುವುದು ಅವರ ದುರಹಂಕಾರದ ಪರಮಾವಧಿ ಎಂದಿದ್ದಾರೆ.

ಮುತ್ತಿಗೆ ಹಾಕುವ ಎಚ್ಚರಿಕೆ
ರಾಜಧಾನಿ ಬೆಂಗಳೂರಿನ ಸಿಂಧಿ ಶಾಲೆಯ ಕನ್ನಡ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಶಾಲೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿರುವ ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಮಕ್ಕಳಿಗೆ ದಂಡ ವಿಧಿಸಿರುವ ಕ್ರಮವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಆ ಶಾಲೆಗೆ ನೋಟೀಸ್‌‍ ನೀಡಿದರೆ ಸಾಲದು, ಕೂಡಲೇ ಆ ಶಾಲೆಯನ್ನು ಮುಚ್ಚಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಕ್ಷಣಾ ವೇದಿಕೆಯ ವಿದ್ಯಾರ್ಥಿ ಘಟಕ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತದೆ ಎಂದು ಹೇಳಿದರು.

ಇಂಗ್ಲಿಷ್‌ ಬದುಕಿಗೆ ಬೇಕಾಗುತ್ತದೆ, ಇಂಗ್ಲಿಷ್‌ ಭಾಷೆಯನ್ನು ಕಲಿಸಬಾರದು ಎಂದು ನಾವೇನು ಹೇಳಿಲ್ಲ. ಆದರೆ ಕನ್ನಡ ಮಾತನಾಡಿದರೆ ದಂಡ ವಿಧಿಸಿ ಕನ್ನಡ ಭಾಷೆಗೆ ಮಾಡುವ ಅವಮಾನವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಕನ್ನಡ ಭಾಷೆ ಉಳಿಯಬೇಕು. ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಇರಬೇಕು ಮತ್ತು ಭಾಷೆ ಉಳಿವಿಗಾಗಿ ಸರ್ಕಾರ ಹಲವಾರು ಕ್ರಮಗಳನ್ನು ರೂಪಿಸುವುದು ಕೇವಲ ಹೇಳಿಕೆಗೆ ಮಾತ್ರ ಸೀಮಿತವಾದಂತಿದೆ ಎಂದು ಕಿಡಿ ಕಾರಿದರು.

ಇದು ಸಿಂಧಿ ಶಾಲೆಯೊಂದರಲ್ಲಿ ಮಾತ್ರ ಅಲ್ಲ. ಬಹುತೇಕ ಭಾಷೆಗಳಲ್ಲಿ ಇಂತಹ ವರ್ತನೆಗಳು ನಡೆಯುತ್ತಿವೆ. ಕನ್ನಡ ಮಾತನಾಡಿದರೆ ಅವಮಾನ ಎಂಬ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದರ ಮೂಲಕ ಕನ್ನಡ ಉಳಿವಿಗೆ ಮುಂದಾಗಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ ಎಂದು ಅವರು ಹೇಳಿದರು.

ಬೆಳೆಸಾಲ ಮನ್ನಾ ಬೇಡಿಕೆ ಕುರಿತು ಪರಿಶೀಲನೆ : ಸಿಎಂ ಸಿದ್ದರಾಮಯ್ಯ

ಕಲಬುರಗಿ, ಸೆ.17- ಭಾರೀ ಮಳೆಯಿಂದಾಗಿ ಬೆಳೆ ನಷ್ಟ ಸಂಭವಿಸಿದ್ದು ರೈತರ ಅನುಕೂಲಕ್ಕಾಗಿ ಬೆಳೆ ಸಾಲ ಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ ಸಂಭವಿಸಿರುವ ಬೆಳೆಹಾನಿಯನ್ನು ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ
ನಡೆಸಲು ಆದೇಶಿಸಲಾಗಿದೆ. ವಾರದಲ್ಲಿ ಈ ಸಮೀಕ್ಷೆ ಪೂರ್ಣಗೊಂಡು ವರದಿ ಸಲ್ಲಿಕೆಯಾಗಲಿದೆ. ಆ ಬಳಿಕ ಬೆಳೆನಷ್ಟ ಪರಿಹಾರ ಪಾವತಿಸುವುದಾಗಿ ಹೇಳಿದರು.

ಈ ಬಾರಿ ಅದೃಷ್ಟವಶಾತ್‌ ರಾಜ್ಯದ ಹಲವು ಕಡೆ ವಾಡಿಕೆಗಿಂತ ಶೇ. 4ರಷ್ಟು ಹೆಚ್ಚು ಮಳೆಯಾಗಿದೆ. ಬೀದರ್‌, ಕಲಬುರಗಿ, ಯಾದಗಿರಿ ಸೇರಿ ಹಲವಾರು ಜಿಲ್ಲೆಗಳಲ್ಲಿ ಬೆಳೆನಷ್ಟ ಹೆಚ್ಚಾಗಿದೆ. ಕೂಡಲೇ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳೆ ನಷ್ಟದ ಬಗ್ಗೆ ಮಧ್ಯಂತರ ವರದಿ ಪಡೆದಿಲ್ಲ. ಜಂಟಿ ಸಮೀಕ್ಷೆಯ ಅಂತಿಮ ವರದಿ ಪಡೆದು, ಬಳಿಕ ಕ್ರಮ ಕೈಗೊಳ್ಳಲಾಗುವುದು. 2024-25ನೇ ಸಾಲಿಗೆ ಬೆಳೆವಿಮೆ ಯೋಜನೆಯಡಿ 656 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ. ಇದು ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ಮೊತ್ತವಾಗಿದೆ. ಬೆಳೆ ವಿಮೆ ಯೋಜನೆಯನ್ನು ಹೊಂದಿಲ್ಲದವರಿಗೂ ಪರಿಹಾರ ಪಾವತಿಯ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.

ಈ ಹಿಂದೆ ಕೇಂದ್ರ ಸರ್ಕಾರ ನಮಗೆ ಬರ ಪರಿಹಾರದ ಹಣ ನೀಡಲಿಲ್ಲ. ಸುಪ್ರೀಂಕೋರ್ಟ್‌ಗೆ ಹೋಗಿ ಹೋರಾಟದ ಮೂಲಕ ನಾವು ಪರಿಹಾರ ಪಡೆದುಕೊಂಡಿದ್ದೆವು ಎಂದರು.
ಎನ್‌ಡಿಆರ್‌ಎಫ್‌ ನಿಯಮಾವಳಿಗಳನ್ನು ಬದಲಾವಣೆ ಮಾಡಿ ಪ್ರಕೃತಿ ವಿಕೋಪ ನಷ್ಟ ಪರಿಹಾರವನ್ನು ಹೆಚ್ಚಿಸಬೇಕೆಂದು ಹಲವಾರು ಬಾರಿ ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾಸೀತಾರಾಮನ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಆದರೆ ಕೇಂದ್ರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದರೋಡೆಕಾರರ ಕಾರು ಪತ್ತೆ:
ವಿಜಯಪುರದಲ್ಲಿ ಎಸ್‌‍ಬಿಐ ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಗಳು ಬಳಸಿದ್ದ ಕಾರು ಪತ್ತೆಯಾಗಿದೆ. ಕೂಡಲೇ ಅಪರಾಧಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕೆಂದು ವಿಜಯಪುರ ಎಸ್‌‍ಪಿ ಅವರಿಗೆ ಕರೆ ಮಾಡಿ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಆದೇಶಿಸಿರುವುದಾಗಿಯೂ ಹೇಳಿದರು.

ಬ್ಯಾಂಕ್‌ಗಳಿಗೆ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವುದು ಹಾಗೂ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸುವುದು ಬ್ಯಾಂಕ್‌ಗಳ ಜವಾಬ್ದಾರಿ. ಸರ್ಕಾರ ಪೊಲೀಸರಿಂದ ಅಗತ್ಯ ಭದ್ರತೆಯನ್ನು ಒದಗಿಸುತ್ತದೆ ಎಂದರು.

ಅರ್ಹರನ್ನು ತೆಗೆಯುವುದಿಲ್ಲ:
ಬಿಪಿಎಲ್‌ ಪಟ್ಟಿಯಲ್ಲಿರುವ ಅನರ್ಹರನ್ನು ಪರಿಶೀಲಿಸಿ ತೆಗೆದು ಹಾಕಬೇಕು. ಅರ್ಹರಿದ್ದರೆ ಅವರಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ಹೊಸದಾಗಿ ನೀಡಬೇಕೆಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಬಿಜೆಪಿಯವರು ಹೇಳಿದಂತೆ ಕೇಳುವುದಿಲ್ಲ:
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಷಯದಲ್ಲಿ ಬಿಜೆಪಿ ನಾಯಕರು ಹಾಗೂ ವಿರೋಧಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದಂತೆಲ್ಲಾ ಕೇಳಲು ಸಾಧ್ಯವಿಲ್ಲ. ಅವರು ರಾಜಕೀಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.ರಾಜ್ಯದ ಪ್ರತಿಯೊಬ್ಬರನ್ನು ಸಮೀಕ್ಷೆ ನಡೆಸಿ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಈ ದತ್ತಾಂಶಗಳನ್ನು ಆಧರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಸಮೀಕ್ಷೆಯಲ್ಲಿ ಕ್ರಿಶ್ಚಿಯನ್‌ ಧರ್ಮದ ಜೊತೆಗೆ ಜಾತಿಯ ಉಪ ಕಾಲಂಗಳನ್ನು ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಅನಗತ್ಯ. ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯದವರು ಈ ದೇಶದ ಪ್ರಜೆಗಳಲ್ಲವೇ? ಎಂದು ಪ್ರಶ್ನಿಸಿದರು.

ಸಮೀಕ್ಷೆಯಲ್ಲಿ ಜನ ನೀಡುವ ಮಾಹಿತಿಯನ್ನು ದಾಖಲಿಸಲಾಗುತ್ತದೆ. ಇದಕ್ಕಾಗಿ 1.75 ಲಕ್ಷ ಶಿಕ್ಷಕರನ್ನು ಸಮೀಕ್ಷೆಗಾಗಿ ನಿಯೋಜಿಸಲಾಗಿದೆ. ಪ್ರತಿಯೊಬ್ಬರಿಗೂ 150 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ 40 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.

ವಿರೋಧ ಅನಗತ್ಯ:
ಕುರುಬ ಸಮುದಾಯವನ್ನು ಎಸ್‌‍ಟಿ ಮೀಸಲು ಪಟ್ಟಿಗೆ ಸೇರಿಸಲು ಈ ಹಿಂದಿನ ಬಿಜೆಪಿ ಸರ್ಕಾರವೇ ಪ್ರಕ್ರಿಯೆ ಆರಂಭಿಸಿತ್ತು. ನಾವು ಅದನ್ನು ಮುಂದುವರೆಸಿದ್ದೇವೆ. ರಾಜ್ಯ ಸರ್ಕಾರಕ್ಕೆ ಮೀಸಲು ಪಟ್ಟಿಗೆ ಸೇರಿಸುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಷ್ಟೇ. ಅಂತಿಮ ತೀರ್ಮಾನವನ್ನು ಕೇಂದ್ರ ಸರ್ಕಾರ ಮಾತ್ರ ತೆಗೆದುಕೊಳ್ಳಲು ಸಾಧ್ಯ ಎಂದರು.

ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರ ಪರಿಶೀಲಿಸಿದ ಬಳಿಕ ಕುರುಬ ಸಮುದಾಯ ಎಸ್‌‍ಟಿಗೆ ಸೇರಲು ಅವಕಾಶಗಳಿದ್ದರೆ, ಕ್ರಮ ಕೈಗೊಳ್ಳುತ್ತದೆ. ಇಲ್ಲವಾದರೆ ತಿರಸ್ಕರಿಸುತ್ತದೆ. ಈ ವಿಚಾರಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವ ಅಗತ್ಯವಿಲ್ಲ ಎಂದರು.ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಲಾಗಿದೆ. ಅದು ಈ ಭಾಗದಲ್ಲೇ ಇರಲಿದ್ದು, ಅಭಿವೃದ್ಧಿಗೆ ಹೆಚ್ಚಿನ ವೇಗ ದೊರಕಿಸುತ್ತದೆ ಎಂದು ಹೇಳಿದರು.

ಚಡಚಣ ಎಸ್‌‍ಬಿಐ ಬ್ಯಾಂಕ್‌ ದರೋಡೆ : ದರೋಡೆಕೋರರ ಪತ್ತೆಗೆ 7 ತಂಡ ರಚನೆ

ವಿಜಯಪುರ,ಸೆ.17-ಏಕಾಏಕಿ ಬ್ಯಾಂಕಿಗೆ ನುಗ್ಗಿ ಪಿಸ್ತೂಲ್‌ ತೋರಿಸಿ, ಸಿಬ್ಬಂದಿಗಳ ಕೈಕಾಲು ಕಟ್ಟಿ ಸಿನಿಮಾ ಶೈಲಿಯಲ್ಲಿ 23 ಕೋಟಿ ರೂ.ಮೌಲ್ಯದ ಚಿನ್ನಾಭರಣ ಹಾಗೂ 1.4 ಕೋಟಿ ರೂ.ನಗದು ದೋಚಿ ಪರಾರಿಯಾಗಿರುವ ಮುಸುಕುಧಾರಿ ದರೋಡೆಕೋರರ ಬಂಧನಕ್ಕೆ ಏಳು ವಿಶೇಷ ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ.

ಪೊಲೀಸ್‌‍ ಮೂಲಗಳ ಪ್ರಕಾರ ನಿನ್ನೆ ಸಂಜೆ 6 ಗಂಟೆ ಸುಮಾರಿನಲ್ಲಿ ಬ್ಯಾಂಕ್‌ ಮುಚ್ಚುವ ವೇಳೆಗೆ ಠೇವಣಿ ಫಾರಂ ಕೇಳುವ ನೆಪ ಮಾಡಿಕೊಂಡು ಬ್ಯಾಂಕಿಗೆ ಒಬ್ಬ ದರೋಡೆಕೋರ ಕರಿಬಣ್ಣದ ಕೋವಿಡ್‌ ಮಾಸ್ಕ್‌, ಬಿಳಿ ಬಣ್ಣದ ಟೋಪಿ ಹಾಗೂ ಕನ್ನಡಕ ಹಾಕಿಕೊಂಡು ಒಳನುಗ್ಗಿದ ನಂತರ ಒಬ್ಬೊಬ್ಬರಾಗಿ ಒಳನುಸುಳಿದ ಮೂವರು ಮುಸುಕುಧಾರಿ ದರೋಡೆಕೋರರ ತಂಡ
ಏಕಾಏಕಿ ಪಿಸ್ತೂಲ್‌ ಹೊರ ತೆಗೆದು ಬ್ಯಾಂಕ್‌ ಸಿಬ್ಬಂದಿಗಳನ್ನು ಬೆದರಿಸಿದರು.

ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಸಿಬ್ಬಂದಿ ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ದರೋಡೆಕೋರರು ಅವರ ಪ್ಲಾಸ್ಟಿಕ್‌ ಟ್ಯಾಗ್‌ನಿಂದ ಕೈಕಾಲು ಕಟ್ಟಿಹಾಕಿ ತಿಜೋರಿಯಲ್ಲಿದ್ದ ಸುಮಾರು 23,61,78,460 ರೂ.ಮೌಲ್ಯದ 20 ಕೆಜಿ ಚಿನ್ನಾಭರಣ ಹಾಗೂ 1.4 ಕೋಟಿ ಹಣವನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಬ್ಯಾಂಕ್‌ ದರೋಡೆ ಮಾಡಿ ಪರಾರಿಯಾಗಿರುವ ದರೋಡೆಕೋರರ ಹೆಡೆಮುರಿ ಕಟ್ಟಲು ವಿಶೇಷ ಪೊಲೀಸ್‌‍ ತಂಡಗಳನ್ನು ರಚನೆ ಮಾಡಲಾಗಿದೆ.
ಏಕಕಾಲಕ್ಕೆ ಕಾರ್ಯಾಚರಣೆಗೆ ಇಳಿದಿರುವ ಈ ಏಳು ವಿಶೇಷ ಪೊಲೀಸರ ತಂಡಗಳು ಈಗಾಗಲೇ ಮಹಾರಾಷ್ಟ್ರ ಹಾಗೂ ಮತ್ತಿತರ ರಾಜ್ಯಗಳಿಗೆ ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿವೆೆ.

ದರೋಡೆಕೋರರು ಬ್ಯಾಂಕ್‌ ದರೋಡೆಗೆ ಬಳಸಿದ ಕಾರು ಮಹಾರಾಷ್ಟ್ರದ ಸೊಲ್ಲಾಪುರದ ಬಳಿ ಪತ್ತೆಯಾಗಿದ್ದು, ಅವರು ಕಾರಿನಲ್ಲಿ ಪರಾರಿಯಾಗುತ್ತಿದ್ದ ವೇಳೆ ಮಂಗಳವೆಡೆ ತಾಲ್ಲೂಕಿನ ಹುಲಜಂತಿ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದಿದ್ದರಿಂದ ತಮ ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿರುವುದು ಗೊತ್ತಾಗಿದೆ.

ಈ ಜಾಡು ಹಿಡಿದಿರುವ ವಿಶೇಷ ಪೊಲೀಸ್‌‍ ತಂಡಗಳು ನಾಲ್ಕು ದಿಕ್ಕುಗಳಿಗೂ ಸಂಚರಿಸಿ ದರೋಡೆಕೋರರ ಬಂಧನಕ್ಕೆ ಜಾಲ ಬೀಸಿದ್ದಾರೆ. ದರೋಡೆಕೋರರ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು, ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದೆಂದು ಉತ್ತರ ವಲಯ ಐಜಿಪಿ ಚೇತನ್‌ಸಿಂಗ್‌ ರಾಥೋಡ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.