Home Blog Page 105

ಕ್ರಿಶ್ಚಿಯನ್‌ ಧರ್ಮದ ಜತೆ ಜಾತಿ ಸೇರ್ಪಡೆ : ತೀವ್ರಗೊಂಡ ವಿವಾದ, ರಾಜ್ಯಪಾಲರಿಗೆ ಬಿಜೆಪಿ ದೂರು

ಬೆಂಗಳೂರು,ಸೆ.16- ಹಿಂದೂ ಸಮುದಾಯದ ಕೆಲವು ಉಪಪಂಗಡಗಳನ್ನು ಕ್ರಿಶ್ಚಿಯನ್‌ ಸಮುದಾಯದ ಜೊತೆ ಸೇರ್ಪಡೆ ಮಾಡಲು ಅನುಮತಿ ನೀಡಿರುವ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರತಿಪಕ್ಷ ಬಿಜೆಪಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ದೂರು ನೀಡಲಿದೆ.

ಮೈಸೂರು-ಕೊಡುಗು ಸಂಸದ ಯದುವೀರ್‌ ಒಡೆಯರ್‌ ಹಾಗೂ ಶಾಸಕ ಸುನೀಲ್‌ಕುಮಾರ್‌ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರಕ್ಕೆ ಸರಿಯಾದ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಿದ್ದಾರೆ. ಇದೇ ತಿಂಗಳ 22ರಿಂದ ಆರಂಭವಾಗಲಿರುವ ಜಾತಿ ಜನಗಣತಿ ವೇಳೆ ಹಿಂದೂ ಸಮುದಾಯದ ಸುಮಾರು 47 ಉಪಜಾತಿಗಳನ್ನು ಕ್ರಿಶ್ಚಿಯನ್‌ ಧರ್ಮದ ಜೊತೆ ಸೇರಿಸಲು ಅವಕಾಶ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಪ್ರತಿಪಕ್ಷ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿ ಇದು ಹಿಂದೂ ಧರ್ಮದವರನ್ನು ಕ್ರಿಶ್ಚಿಯನ್‌ ಸಮುದಾಯಕ್ಕೆ ಮತಾಂತರ ಮಾಡುವ ಹುನ್ನಾರ ಎಂದು ಆರೋಪಿಸಿದೆ. ಹೀಗಾಗಿ ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಿ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕೆಂಬುದು ದೂರಿನಲ್ಲಿ ಮನವಿ ಮಾಡಲಾಗುತ್ತದೆ. ಒಟ್ಟು 47 ಉಪಜಾತಿಗಳನ್ನು ಕ್ರಿಶ್ಚಿಯನ್‌ ಸಮುದಾಯದ ಜೊತೆ ಸೇರ್ಪಡೆಗೆ ಅವಕಾಶ ಕಲ್ಪಿಸಿರುವುದು ಪ್ರತಿಪಕ್ಷದ ಕಣ್ಣು ಕೆಂಪಾಗುವಂತೆ ಮಾಡಿದೆ.

ಮತ್ತೆ ಮುನ್ನೆಲೆಗೆ ಬಂದ ಪರಿಶಿಷ್ಟ ಪಂಗಡದ ಪಟ್ಟಿಗೆ ಕುರುಬ ಜನಾಂಗ ಸೇರ್ಪಡೆ ವಿವಾದ

ಬೆಂಗಳೂರು, ಸೆ.16- ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕುರುಬ ಸಮುದಾಯದ ಪರಿಶಿಷ್ಟ ಪಂಗಡ ಮೀಸಲು ಪಟ್ಟಿಗೆ ಸೇರ್ಪಡೆ ಕುರಿತ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿಂದೆ ಇದೇ ವಿಚಾರ ಚರ್ಚೆಗೆ ಬಂದಾಗ ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಯಾವುದೇ ಬೆಂಬಲ ನೀಡದೇ ನಿರಾಸಕ್ತರಾಗಿದ್ದರು. ಆಗ ಸಚಿವರಾಗಿದ್ದ ಕೆ.ಎಸ್‌‍.ಈಶ್ವರಪ್ಪ ಮೀಸಲು ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಈಶ್ವರಪ್ಪ ಸಂಪುಟದಿಂದ ನಿರ್ಗಮಿಸಿದ ಬಳಿಕ ವಿಷಯ ತಣ್ಣಗಾಗಿತ್ತು.

ಈಗ ಮತ್ತೇ ಇದೇ ವಿಚಾರ ಮುನ್ನೆಲೆಗೆ ಬಂದಿದೆ. ಸಾಮಾಜಿಕ ವಲಯದಲ್ಲಿ ಕೇಳಿ ಬಂದಿರುವ ಬೇಡಿಕೆಗಳಿಗೆ ಪುಷ್ಠಿ ನೀಡುವಂತೆ ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಚರ್ಚೆ ನಿಗದಿಯಾಗಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿಂದು ಬೆಂಗಳೂರಿನ ಬಹುಮಹಡಿಗಳ ಕಟ್ಟಡದಲ್ಲಿ ಮಹತ್ವದ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸಲು ಪರಿಶಿಷ್ಟ ಪಂಗಡಗಳ ಇಲಾಖೆಯ ನಿರ್ದೇಶಕರಿಗೆ, ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು, ಸಂಶೋಧನಾ ಸಂಸ್ಥೆ ನಿರ್ದೇಶಕರಿಗೆ, ಸಮಾಜ ಕಲ್ಯಾಣ ಇಲಾಖೆ ಎಸ್‌‍ಸಿಎಸ್‌‍ಪಿ-ಟಿಎಸ್‌‍ಪಿ ನೋಡಲ್‌ ಏಜನ್ಸಿಯ ಸಲಹೆಗಾರರನ್ನು ಸಭೆಗೆ ಆಹ್ವಾನಿಸಲಾಗಿತ್ತು.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವ ಕುರಿತು ಹಾಗೂ ಬೀದರ್‌, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ ಗೊಂಡಾ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಅಗತ್ಯ ಮಾಹಿತಿ ಹಾಗೂ ದಾಖಲಾತಿಗಳೊಂದಿಗೆ ಸಭೆಗೆ ಹಾಜರಾಗಲು ಸೂಚಿಸಲಾಗಿತ್ತು.ರಾಜ್ಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಜನಗಣತಿ ನಡೆಯುತ್ತಿರುವ ಹೊತ್ತಿನಲ್ಲೇ ಕುರುಬ ಸಮುದಾಯವನ್ನು ಎಸ್‌‍ಟಿಗೆ ಸೇರ್ಪಡೆ ಮಾಡಲು ತಯಾರಿಯಾಗುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆ ಎಸ್‌‍ಟಿ ಮೀಸಲಾತಿಗಾಗಿ ಕುರುಬ ಸಮುದಾಯ ಹೋರಾಟ ನಡೆಸಿದಾಗ ಪರ-ವಿರೋಧ ಚರ್ಚೆಗಳಾಗಿದ್ದವು. ಹಿಂದುಳಿದ ವರ್ಗಗಳಲ್ಲಿ ಪ್ರಬಲ ಜಾತಿಯಾಗಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಿದರೆ, ಅಲ್ಲಿರುವ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳಿಗೆ ಅನ್ಯಾಯವಾಗುತ್ತದೆ. ನಿಜವಾದ ಸಂತ್ರಸ್ತರು ತೊಂದರೆಗೊಳಗಾಗುತ್ತಾರೆ ಎಂಬ ಆತಂಕಗಳು ಕೇಳಿ ಬಂದವು.

ಈಶ್ವರಪ್ಪ ಸಚಿವರಾಗುವವರೆಗೂ ಎಸ್‌‍ಟಿ ಮೀಸಲಿನ ಚರ್ಚೆ ತೀವ್ರ ಸ್ವರೂಪದಲ್ಲಿತ್ತು. ಇತ್ತೀಚೆಗೆ ರಾಜ್ಯ ಸರ್ಕಾರವೇ ಚರ್ಚೆ ಮುನ್ನೆಲೆಗೆ ಬರುವಂತೆ ಮಾಡಿರುವುದರಿಂದ ಮತ್ತೇ ಹೋರಾಟಗಳು ಭುಗಿಲೇಳುವ ಸಾಧ್ಯತೆಗಳಿವೆ. ಕುರುಬ ಸಮುದಾಯದಲ್ಲಿ ಸಾಕಷ್ಟು ಸಂಖ್ಯೆಯ ಬಡವರಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯ ದೊರೆಯಬೇಕಾದರೆ, ಎಸ್‌‍ಟಿ ಮೀಸಲು ಪಟ್ಟಿಗೆ ಸೇರಿಸುವುದು ಅತ್ಯಗತ್ಯವೆಂಬ ವಾದಗಳಿವೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವ ಕಾಲಘಟ್ಟದಲ್ಲಿ ಈ ಚರ್ಚೆ ಆರಂಭವಾಗಿರುವುದು ಮತ್ತಷ್ಟೂ ಕುತೂಹಲ ಕೆರಳಿಸಿದೆ. ಈ ಹಿಂದೆಲ್ಲಾ ಕುರುಬರ ಎಸ್‌‍ಟಿ ಮೀಸಲಾತಿಗೆ ವಿಷಯವಾಗಿ ಹೆಚ್ಚು ತಲೆ ಕೆಡಸಿಕೊಳ್ಳದ ಸಿದ್ದರಾಮಯ್ಯ ಈಗ ಏಕಾಏಕಿ ಚರ್ಚೆಯನ್ನು ಮುನ್ನೆಲೆಗೆ ತಂದಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ಪಕ್ಷದಲ್ಲಿ ಬಹಳಷ್ಟು ಮಂದಿ ಕುರುಬ ಸಮುದಾಯದ ಶಾಸಕರು ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಲೆಂದು ಬಹಿರಂಗವಾಗಿ ಹೇಳಲಾರಂಭಿಸಿದ್ದಾರೆ. ಇದಕ್ಕಾಗಿ ಜನಾಂಗದ ಬೆಂಬಲ ಪಡೆಯಲು ಸಿದ್ದರಾಮಯ್ಯ ಅವರು ಎಸ್‌‍ಟಿ ಮೀಸಲು ಪಟ್ಟಿ ಎಂಬ ಅಸ್ತ್ರ ಹೂಡಿದ್ದಾರೆ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಮೈಸೂರಿನಲ್ಲಿಂದು ಆರೋಪಿಸಿದ್ದಾರೆ.

ಈ ಮೊದಲು ಬಸವರಾಜ ಬೊಮಾಯಿ ಸರ್ಕಾರದಲ್ಲಿ ನಾನು ಸೇರಿದಂತೆ ಅನೇಕರು ಕುರುಬ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸಿದಾಗ ಸಿದ್ದರಾಮಯ್ಯ ಬೆಂಬಲ ನೀಡಲಿಲ್ಲ. ಈಗ ತಮ ಸ್ಥಾನಕ್ಕೆ ಕುತ್ತು ಬಂದಿರುವುದಕ್ಕಾಗಿ ಎಲ್ಲರನ್ನೂ ಕರೆಯುತ್ತಿದ್ದು, ಬೆಂಬಲ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ತಮ ಸ್ಥಾನ ಉಳಿಸಿಕೊಳ್ಳಲಿಕ್ಕಾಗಿಯೇ ಎಸ್‌‍ಟಿ ಮೀಸಲಾತಿಯೆಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಚರ್ಚೆಗಳು ಏನೇ ಇದ್ದರೂ ಕೆಲವು ದಿನಗಳ ಕಾಲ ಶೈತ್ಯಾವಸ್ಥೆಯಲ್ಲಿದ್ದ ಬೇಡಿಕೆ ಮತ್ತೇ ಮುನ್ನೆಲೆಗೆ ಬಂದಿರುವುದು ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.ಸಂಪುಟದಲ್ಲಿ ಎಸ್‌‍ಟಿ ಸಮುದಾಯದಿಂದ ಸಚಿವರಾಗಿದ್ದ ಬಿ. ನಾಗೇಂದ್ರ, ವಾಲಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ್ದರು.

ಕೆ.ಎನ್‌.ರಾಜಣ್ಣ ಮತಗಳ್ಳತನ ಪ್ರಕರಣದಲ್ಲಿ ಕಾಂಗ್ರೆಸ್‌‍ ವರಿಷ್ಠ ನಾಯಕ ರಾಹುಲ್‌ಗಾಂಧಿ ಅವರ ಅಭಿಪ್ರಾಯಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ ಸಚಿವ ಸ್ಥಾನ ಕಳೆದುಕೊಂಡರು. ಉಳಿದಂತೆ ಸತೀಶ್‌ ಜಾರಕಿಹೊಳಿ ಮಾತ್ರ ಪರಿಶಿಷ್ಟ ಪಂಗಡದ ಸಚಿವರಾಗಿ ಸಂಪುಟದಲ್ಲಿ ಮುಂದುವರೆದಿದ್ದಾರೆ. ಈ ಹಂತದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಟ್ಟದ ಚರ್ಚೆಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿವೆ.

BREAKING : ಮಾಲೂರು ಶಾಸಕ ಕಾಂಗ್ರೆಸ್ ನಂಜೇಗೌಡ ಆಯ್ಕೆ ಅಸಿಂಧು, ಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು : ಕೋಲಾರ ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರ ಆಯ್ಕೆಯನ್ನು ಅಸಿಂಧು ಎಂದು ಮಹತ್ವದ ತೀರ್ಪು ನೀಡಿರುವ ಹೈಕೋರ್ಟ್, ನಾಲ್ಕು ವಾರದೊಳಗೆ ಮರು ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿದೆ. ಅರ್ಜಿದಾರರ ಕೋರಿಕೆಯಂತೆ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ತಾನೇ ನೀಡಿದ್ದ ತೀರ್ಪಿಗೆ 30 ದಿನಗಳ ಕಾಲ ತಡೆಯಾಜ್ಞೆ ನೀಡಿದೆ.
ಅಭ್ಯರ್ಥಿಗಳು ಪಡೆದಿದ್ದ ಮತಗಳ ವಿವರ
ಕೆ.ವೈ, ನಂಜೇಗೌಡ ( ಕಾಂಗ್ರೆಸ್)- 50,955
ಮಂಜುನಾಥ್ ಗೌಡ( ಬಿಜೆಪಿ)- 50707
ಹೂಡಿ ವಿಜಯ್ ಕುಮಾರ್( ಪಕ್ಷೇತರ)- 49362
ಜಿ,ಇ ರಾಮೇಗೌಡ( ಜೆಡಿಎಸ್)- 17.627
ಗೆಲುವಿನ ಅಂತರ 248

ಹೈಕೋರ್ಟ್ ಆದೇಶವನ್ನು ಪ್ರಶ್ನೆಸಿ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಸಿಲು ಅವಕಾಶ ನೀಡಬೇಕು. ಹೀಗಾಗಿ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ನಂಜೇಗೌಡ ಪರ ವಕೀಲರಾದ ನಳೀನ ಮಾಯಾಗೌಡ ಅವರು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡರು. ಇದನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.

ಕೆವೈ ನಂಜೇಗೌಡ ಆಯ್ಕೆ ವಿರುದ್ಧ ಪರಾಜಿತ ಬಿಜೆಪಿ ಅಭ್ಯರ್ಥಿ ಕೆಎಸ್ ಮಂಜುನಾಥಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮತಎಣಿಕೆಯಲ್ಲಿ ಲೋಪವಾಗಿದ್ದು, ಮತ್ತೊಮ್ಮೆ ಮರು ಮತಎಣಿಕೆಗೆ ಆದೇಶ ನೀಡುವಂತೆ ಮನವಿ ಮಾಡಿದ್ದರು.ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್,ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್ ದೇವದಾಸ್ ಅವರು, ಮಂಗಳವಾರ ತೀರ್ಪು ಪ್ರಕಟಿಸಿದರು.

ಹೊಸದಾಗಿ ಮರು ಮತಎಣಿಕೆ ನಡೆಸಲು ಹೈಕೋರ್ಟ್ ಆದೇಶ ನೀಡಿದ್ದು, ನಾಲ್ಕು ವಾರದಲ್ಲಿ ಮರು ಮತ ಎಣಿಕೆ ಮಾಡುವಂತೆ ಸೂಚಿಸಿದೆ. ಜಿಲ್ಲಾ ಚುನಾವಣಾ ಅಧಿಕಾರಿ ಮತ ಎಣಿಕೆಯ ವಿಡಿಯೋ ಸಲ್ಲಿಸಿಲ್ಲ. ಹೀಗಾಗಿ .ಜಿಲ್ಲಾ ಚುನಾವಣಾಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕಳೆದ 2023 ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದ ನಂಜೇಗೌಡ ಅವರ ಮತ ಎಣಿಕೆ ಕಾನೂನು ಪ್ರಕರವಾಗಿ ನಡೆದಿಲ್ಲ ಎಂದು ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಅವರು ಕಾನೂನು ಹೋರಾಟ ನಡೆಸಿದ್ದರು.

ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಪ್ರತಿವಾದಿಗಳಿಗೆ ಹ್ಯಾಂಡ್ ಸಮನ್ಸ್ ನೀಡಲು ಅರ್ಜಿದಾರರಿಗೆ ಹೈಕೋರ್ಟ್ ಅನುಮತಿಸಿತ್ತು.

ಬೆಂಗಳೂರು: `ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ವೇಳೆ ವಿ.ವಿ ಪ್ಯಾಟ್ ಪೇಪರ್ ಟ್ರಯಲ್ ಅನ್ನು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಚಿತ್ರೀಕರಣದ ದೃಶ್ಯಾವಳಿಯನ್ನು ಕೋರ್ಟ್‍ಗೆ ಸಲ್ಲಿಸಿ’ ಎಂದು ಹೈಕೋರ್ಟ್, ಕೋಲಾರ ಜಿಲ್ಲಾಧಿಕಾರಿಗೆ ನಿರ್ದೇಶಿಸಿತ್ತು.

ವಿಚಾರಣೆ ವೇಳೆ ಕೇಂದ್ರ ಚುನಾವಣಾ ಆಯೋಗದ ಪರವಾಗಿ ವಕೀಲ ಶರತ್ ಆರ್.ದೊಡವಾಡ ಅವರು ಹಾಜರಾಗಿ, `ಮತ ಎಣಿಕೆ ವೇಳೆ ವಿ.ವಿ ಪ್ಯಾಟ್ ಪೇಪರ್ ಟ್ರಯಲ್ ಅನ್ನು ಇವಿಎಂ ಜೊತೆಗೆ ಹೊಂದಾಣಿಕೆ ಮಾಡುವ ಕಾರ್ಯದ ಚಿತ್ರೀಕರಣ ಮಾಡಲಾಗಿತ್ತು. ಆ ದೃಶ್ಯಾವಳಿಯನ್ನು ಒಳಗೊಂಡ ಒಂದು ಸಿ.ಡಿಯನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದ್ದರು.

`ನ್ಯಾಯಾಲಯದ ಅನುಮತಿ ಮೇರೆಗೆ ಇವಿಎಂ ಇರಿಸಲಾಗಿದ್ದ ಸ್ಟ್ರಾಂಗ್ ರೂಂ ಅನ್ನು ತೆರೆದು ಪರಿಶೀಲಿಸಲಾಗಿದೆ. ಅಲ್ಲಿ ವಿ.ವಿ ಪ್ಯಾಟ್ ಪೇಪರ್ ಟ್ರಯಲ್ ಮತ್ತು ಇವಿಎಂ ಯಂತ್ರ ಹೊಂದಾಣಿಕೆ ಕಾರ್ಯದ ಚಿತ್ರೀಕರಣ ನಡೆಸಿದ ದೃಶ್ಯಾವಳಿಗಳನ್ನು ಒಳಗೊಂಡ ಮೂರು ಸಿ.ಡಿಗಳು ಲಭ್ಯವಾಗಿವೆ. ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರಿಗೆ ನೀಡಲಾಗಿದ್ದ ಫಾರಂ ನಂ.17(ಸಿ) ನಕಲು ಪ್ರತಿಯೂ ಲಭ್ಯವಾಗಿದೆ. ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಇನ್ನಷ್ಟು ಸಮಯ ನೀಡಬೇಕು’ ಎಂದು ಕೋರಿದ್ದರು.

ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲರು, ಅರ್ಜಿಯಲ್ಲಿ ಶಾಸಕ ಕೆ ವೈ ನಂಜೇಗೌಡ ಮತ್ತು ಚುನಾವಣೆಗೆ ಸ್ಪರ್ಧಿಸಿದ್ದ ಇತರೆ 13 ಮಂದಿ ಪ್ರತಿವಾದಿಗಳಿದ್ದಾರೆ. ಆ ಪೈಕಿ ಅನೇಕ ಪ್ರತಿವಾದಿಗಳಿಗೆ ಅರ್ಜಿ ಸಂಬಂಧ ಈ ಹಿಂದೆ ಹೈಕೋರ್ಟ್ ಜಾರಿ ಮಾಡಿದ್ದ ನೋಟಿಸ್/ಸಮನ್ಸ್ ತಲುಪಿಲ್ಲ. ಅದರಂತೆ ಪ್ರತಿವಾದಿಗಳಿಗೆ ನೋಟಿಸ್/ಹ್ಯಾಂಡ್ ಸಮನ್ಸ್ ಜಾರಿ ನೀಡಲು ಅನುಮತಿಸಬೇಕು ಎಂದು ಮನವಿ ಮಾಡಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಕೆ ವೈ ನಂಜೇಗೌಡ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 15 ಮಂದಿ ಸ್ಪರ್ಧಿಗಳ ಏಜೆಂಟ್‍ಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಒಂದೇ ಕೊಠಡಿಯಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಬೇಕಿದ್ದು, ಎರಡು ಪ್ರತ್ಯೇಕ ಕೊಠಡಿಯಲ್ಲಿ ಮತ ಎಣಿಕೆ ಮಾಡಲಾಗಿದೆ. ಆ ಮೂಲಕ ಜನಪ್ರತಿನಿಧಿಗಳ ಕಾಯಿದೆಯ ನಿಯಮಗಳು ಮತ್ತು ಚುನಾವಣಾ ಆಯೋಗ ಪ್ರಕಟಿಸಿದ್ದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ನಂಜೇಗೌಡ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಚುನಾವಣಾ ಆಯೋಗದ ಕ್ರಮ ರದ್ದುಪಡಿಸಬೇಕು. ಮತಗಳ ಮರು ಎಣಿಕೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಅಗತ್ಯ ದಾಖಲಾತಿ ನೀಡುವಂತೆ ಕೇಳಿತ್ತು. ಜಿಲ್ಲಾಧಿಕಾರಿಗಳು ಸ್ಟ್ರಾಂಗ್ ರೂಮ್‍ನಲ್ಲಿದ್ದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದರು. ಕಳೆದ 2 ವರ್ಷದಿಂದ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿತ್ತು.

ಏಷ್ಯಾ ಕಪ್‌ನ ಉಳಿದ ಪಂದ್ಯಗಳಿಂದ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್ ತೆಗೆದುಹಾಕಬೇಕೆಂಬ ಪಾಕ್ ಬೇಡಿಕೆ ತಿರಸ್ಕರಿಸಿದ ಐಸಿಸಿ

ದುಬೈ,ಸೆ.16- ಏಷ್ಯಾ ಕಪ್‌ನ ಉಳಿದ ಪಂದ್ಯಗಳಿಂದ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ತೆಗೆದುಹಾಕಬೇಕೆಂಬ ಪಾಕಿಸ್ತಾನದ ಬೇಡಿಕೆಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ತಿರಸ್ಕರಿಸಿದೆ.

ಭಾರತ-ಪಾಕಿಸ್ತಾನ ನಡುವೆ ನಡೆದ ಪಂದ್ಯದ ನಂತರ ಔಪಚಾರಿಕವಾಗಿ ಭಾರತೀಯ ಆಟಗಾರರು ಹಸ್ತಲಾಘವ ಮಾಡದಿರುವುದಕ್ಕೆ ಭಾರೀ ವಿವಾದ ಉಂಟಾಗಿತ್ತು. ಹೀಗಾಗಿ ಪಂದ್ಯದ ರೆಫ್ರರಿಯನ್ನು ತೆಗೆದು ಹಾಕಬೇಕೆಂದು ಪಾಕ್‌ ಐಸಿಸಿಗೆ ದೂರು ನೀಡಿತ್ತು. ಆದರೆ ಈ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ವಿರುದ್ಧ ಭಾನುವಾರ ನಡೆದ ಪಂದ್ಯದ ಸಮಯದಲ್ಲಿ ಮ್ಯಾಚ್‌ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅವರನ್ನು ಏಷ್ಯಾ ಕಪ್‌ನಿಂದ ತಕ್ಷಣ ತೆಗೆದುಹಾಕಬೇಕೆಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಒತ್ತಾಯಿಸಿತ್ತು.ಪಂದ್ಯದ ಕೊನೆಯಲ್ಲಿ ಪೈಕ್ರಾಫ್ಟ್ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದರು. ಆದರೆ, ಪಂದ್ಯ ಮುಗಿದ ಬಳಿಕ ಭಾರತೀಯ ಆಟಗಾರರು ಎದುರಾಳಿ ತಂಡದ ಆಟಗಾರರೊಂದಿಗೆ ಕೈಕುಲುಕಲಿಲ್ಲ ಎಂದು ಪಿಸಿಬಿ ಪೈಕ್ರಾಫ್‌್ಟ ವಿರುದ್ಧ ಐಸಿಸಿಗೆ ಔಪಚಾರಿಕ ದೂರು ದಾಖಲಿಸಿತ್ತು.

ಐಸಿಸಿ ನೀತಿ ಸಂಹಿತೆ ಮತ್ತು ಕ್ರಿಕೆಟ್‌ ಸ್ಫೂರ್ತಿಗೆ ಸಂಬಂಧಿಸಿದ ಎಂಸಿಸಿ ಕಾನೂನುಗಳನ್ನು ಮ್ಯಾಚ್‌ ರೆಫರಿ ಉಲ್ಲಂಘಿಸಿದ್ದಾರೆ. ಏಷ್ಯಾ ಕಪ್‌ನಿಂದ ಮ್ಯಾಚ್‌ ರೆಫರಿಯನ್ನು ತಕ್ಷಣವೇ ತೆಗೆದುಹಾಕಬೇಕೆಂದು ಪಿಸಿಬಿ ಒತ್ತಾಯಿಸಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ X ನಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಈ ಹಿಂದೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಜೊತೆ ಈ ವಿಷಯವನ್ನು ಪ್ರಸ್ತಾಪಿಸಿ, ಭಾರತೀಯ ಆಟಗಾರರ ನಡವಳಿಕೆಯನ್ನು ಕ್ರೀಡಾಯೋಗ್ಯವಲ್ಲ ಎಂದು ಕರೆದಿತ್ತು. ಭಾರತೀಯ ಆಟಗಾರರು ಕೈಕುಲುಕದಿರುವ ವರ್ತನೆಯ ವಿರುದ್ಧ ತಂಡದ ವ್ಯವಸ್ಥಾಪಕ ನವೀದ್‌ ಚೀಮಾ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದರು. ಇದನ್ನು ಕ್ರೀಡಾಯೋಗ್ಯವಲ್ಲದ ಮತ್ತು ಆಟದ ವಿರುದ್ಧವೆಂದು ಪರಿಗಣಿಸಲಾಗಿದೆ. ಪ್ರತಿಭಟನೆಯಾಗಿ ನಾವು ನಮ ತಂಡದ ನಾಯಕನನ್ನು ಪಂದ್ಯದ ನಂತರದ ಸಮಾರಂಭಕ್ಕೆ ಕಳುಹಿಸಲಿಲ್ಲೞ ಎಂದು ಪಿಸಿಬಿ ಈ ಹಿಂದೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಜಮು ಮತ್ತು ಕಾಶೀರದ ಪಹಲ್ಗಾಮ್‌ ಭಯೋತ್ಪಾದಕ ದಾಳಿ ಮತ್ತು ಮೇ ತಿಂಗಳಲ್ಲಿ ಭಾರತ ನಡೆಸಿದ ಆಪರೇಷನ್‌ ಸಿಂಧೂರ ನಂತರ ಮೊದಲ ಬಾರಿಗೆ ಐತಿಹಾಸಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡ ಮುಖಾಮುಖಿಯಾಗಿವೆ.

ಸೆ.23ಕ್ಕೆ ವಾರ್ಡ್‌ ಪರಿಷ್ಕರಣೆ ಪಟ್ಟಿ ಸಲ್ಲಿಕೆ, GBA ಚುನಾವಣೆಗೆ ರೆಡಿಯಾಯ್ತು ಆಖಾಡ

ಬೆಂಗಳೂರು, ಸೆ.16- ಯಾವುದೇ ಕಾನೂನು ಸಂಕಷ್ಟ ಎದುರಾಗದಿದ್ದರೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಅದಷ್ಟು ಬೇಗ ಚುನಾವಣೆ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಡಿಸಂಬರ್‌ ವೇಳೆಗೆ ಚುನಾವಣೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು ಇದೇ 23 ರಂದು ವಾರ್ಡ್‌ ಪುನರ್‌ ವಿಂಗಡಣೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

ಶರವೇಗದಲ್ಲಿ ವಾರ್ಡ್‌ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಶೇ.50ರಷ್ಟು ಕಾರ್ಯ ಮುಗಿಸಿದ್ದೇವೆ. ಒಂದೇರಡು ದಿನಗಳ ಒಳಗೆ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಸೆ. 23 ರಂದು ಸರ್ಕಾರಕ್ಕೆ ಸಲ್ಲಿಕೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಹತ್ತು ವರ್ಷಗಳ ಹಿಂದೆ ನಡೆದಿದ್ದ ಬಿಬಿಎಂಪಿ ಚುನಾವಣೆ ನಂತರ 198 ಪಾಲಿಕೆ ಸದಸ್ಯರು ಐದು ವರ್ಷಗಳ ಹಿಂದೆ ಸ್ಥಾನ ಕಳೆದುಕೊಂಡಿದ್ದರು. ಆ ನಂತರ ಐದು ವರ್ಷಗಳವರೆಗೂ ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸಿರಲಿಲ್ಲ. ಇದೀಗ ಕಾಂಗ್ರೆಸ್‌‍ ಸರ್ಕಾರ ಬಿಬಿಎಂಪಿ ಅಸ್ಥಿತ್ವವನ್ನು ರದ್ದುಗೊಳಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿದೆ.

ಆಡಳಿತಾತಾಕ ದೃಷ್ಟಿಯಿಂದ ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳನ್ನು ರಚನೆ ಮಾಡಿದ್ದು, ಒಟ್ಟು 365ಕ್ಕೂ ಹೆಚ್ಚು ವಾರ್ಡ್‌ಗಳನ್ನು ರಚನೆ ಮಾಡುವ ಸಾಧ್ಯತೆ ಇರುವುದರಿಂದ ಮುಂದಿನ ಚುನಾವಣೆ ತೀವ್ರ ಕೂತುಹಲ ಕೆರಳಿಸಿದೆ.ಅ.10 ರೊಳಿಗೆ ಬಜೆಟ್‌; ಬಿಬಿಎಂಪಿ ಹೋಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಬಂದು ಐದು ನಗರ ಪಾಲಿಕೆ ರಚನೆಯಾಗುತ್ತಿದ್ದಂತೆ ಹೊಸ ಪಾಲಿಕೆಗಳಿಗೆ ಹೊಸ ಬಜೆಟ್‌ ಮಂಡನೆ ಮಾಡಲು ಜಿಬಿಎ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ 5 ನಗರ ಪಾಲಿಕೆಗೆ ಹೊಸ ಬಜೆಟ್‌ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಆಕ್ಟೋಬರ್‌ 10 ರೊಳಗೆ ಎಲ್ಲಾ ಪಾಲಿಕೆಗಳಲ್ಲೂ ಬಜೆಟ್‌ ಮಂಡನೆಯಾಗುವುದು ಖಚಿತವಾಗಿದೆ.

ಈಗಾಗಲೇ ಹೊಸ ಬಜೆಟ್‌ ಮಂಡನೆಗೆ ಪೂರ್ವ ಬಾವಿ ಸಿದ್ದತೆ ಆರಂಭವಾಗಿದ್ದು, ಆರ್ಥಿಕ ವರ್ಷದ ಕೊನೆಗೆ ಇನ್ನು ಬಾಕಿ ಇರುವ 8 ತಿಂಗಳ ಅವಧಿಗೆ ಪ್ರತ್ಯೇಕ ಬಜೆಟ್‌ ಮಂಡನೆ ಮಾಡಲಾಗುತ್ತಿದೆ
5 ನಗರ ಪಾಲಿಕೆಗಳಿಗೆ ಈಗಾಗಲೇ ಆಯುಕ್ತರುಗಳನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಆಯುಕ್ತರುಗಳು ತಮ ವ್ಯಾಪ್ತಿಯ ಪಾಲಿಕೆಯಲ್ಲಿ ಬಜೆಟ್‌ ಮಂಡನೆ ಮಾಡಲು ತಯಾರಿ ಆರಂಭಿಸಿದ್ದಾರೆ.

ತಮ್ಮ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಸಿಬ್ಬಂದಿ ವೇತನ, ಆಡಳಿತಾತ್ಮಕ ವೆಚ್ಚ, ಸಭೆ ಸಮಾರಂಭಗಳ ವೆಚ್ಚ, ಕಲ್ಯಾಣ ಕಾರ್ಯಕ್ರಮಗಳು, ಕಾಮಗಾರಿಗಳು, ಉದ್ಯಾನವನಗಳು, ಮೈದಾನ, ಶಾಲಾ.ಕಾಲೇಜು, ಅಸ್ಪತ್ರೆ, ರಸ್ತೆ ನಿರ್ವಹಣೆ, ಇಂದಿರಾ ಕ್ಯಾಂಟೀನ್‌ ಖರ್ಚು ವೆಚ್ಚ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಬಜೆಟ್‌ ಮಂಡನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.

ಎಲ್ಲಾ ಅಂದುಕೊಂಡತೆ ನಡೆದರೆ, ಈ ತಿಂಗಳ ಅಂತ್ಯ ಇಲ್ಲವೇ ಆ.10ರೊಳಗೆ ಬಜೆಟ್‌ ಮಾಡುವುದು ಪಕ್ಕಾ ಎನ್ನುತ್ತಿವೆ ಮೂಲಗಳು.ನಗರದಲ್ಲಿ ನಡೆಯುತ್ತಿರುವ ಬೃಹತ್‌ ಕಾಮಗಾರಿಗಳು ಹಾಗೂ ಕಸ ವಿಲೇವಾರಿ ವಿಚಾರಗಳು ಜಿಬಿಎ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅಂತಹ ಕಾಮಗಾರಿಗಳನ್ನು ಬಿಟ್ಟು ಉಳಿದ ಕಾಮಗಾರಿಗಳ ಅಭಿವೃದ್ಧಿ ಗೆ ಹೊಸ ಬಜೆಟ್‌ ಮಂಡನೆ ಮಾಡಲಾಗುತ್ತಿದೆಯಂತೆ.

ಈಗಾಗಲೇ ಅಯಾ ನಗರ ಪಾಲಿಕೆಗೆ ಬರುವ ಅಸ್ತಿ ತೆರಿಗೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ..ಇದರ ಅಧಾರದ ಮೇಲೆ ಬಜೆಟ್‌ ಮಂಡನೆ ಮಾಡಲು 5 ಪಾಲಿಕೆಗಳ ಆಯುಕ್ತರುಗಳು ಸಿದ್ದತೆ ನಡೆಸಿದ್ದಾರೆ.ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ತೀರ್ಮಾನಗೊಂಡ ಕಾಮಗಾರಿಗಳನ್ನು ಸಾರ್ವಜನಿಕರಿಗೆ ಉಪಯೋಗವಿದ್ದರೆ ಮಾತ್ರ ಅವುಗಳನ್ನು ಬಜೆಟ್‌ ವ್ಯಾಪ್ತಿಗೆ ತರಲಾಗುವುದು ಇಲ್ಲದಿದ್ದರೆ ಅಂತಹ ಕಾಮಗಾರಿಗಳನ್ನು ಕೈಬಿಡುವ ಸಾಧ್ಯತೆಗಳಿವೆ.ಇನ್ನೂ ಬಿಬಿಎಂಪಿ ಈ ಹಿಂದೆ ಮಾಡಿದ ಸಾಲಗಳನ್ನು ಕೂಡ ಆಯಾ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.

ನಿರೀಕ್ಷಿತ ಬಜೆಟ್‌ ಗಾತ್ರ: ಬೆಂಗಳೂರು ಪಶ್ಚಿಮ.. 555.37 ಕೋಟಿ ರೂ, ಬೆಂಗಳೂರು ದಕ್ಷಿಣ 316.28 ಕೋಟಿ ರೂ, ಬೆಂಗಳೂರು ಉತ್ತರ 364.58 ಕೋಟಿ, ಬೆಂಗಳೂರು ಪೂರ್ವ 155.50 ಕೋಟಿ ಹಾಗೂ ಬೆಂಗಳೂರು ಕೇಂದ್ರ ಪಾಲಿಕೆಯಿಂದ 313.25 ಕೋಟಿ ರೂ. ಸೇರಿದಂತೆ ಒಟ್ಟು 1707.98 ಕೋಟಿ ರೂ. ಬಜೆಟ್‌ ಮಂಡನೆಯಾಗುವ ನಿರೀಕ್ಷೆಯಿದೆ.

ಸುರೇಶ್‌ ರೈನಾ, ಶಿಖರ್‌ ಧವನ್‌, ಯುವರಾಜ್‌ ಸಿಂಗ್‌ ರಾಬಿನ್‌ ಉತ್ತಪ್ಪಗೆ ಇಡಿ ಸಮನ್ಸ್

ನವದೆಹಲಿ,ಸೆ.16- ಭಾರತದ ಮಾಜಿ ಕ್ರಿಕೆಟ್‌ ಆಟಗಾರರಾದ ಸುರೇಶ್‌ ರೈನಾ ಮತ್ತು ಶಿಖರ್‌ ಧವನ್‌ ಅವರನ್ನು ವಿಚಾರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ (ಇ.ಡಿ) ಇದೀಗ ರಾಬಿನ್‌ ಉತ್ತಪ್ಪ ಹಾಗೂ ಯುವರಾಜ್‌ ಸಿಂಗ್‌ ಅವರಿಗೂ ಸಮನ್ಸ್ ಜಾರಿ ಮಾಡಿದೆ.

ಬಲಗೈ ಬ್ಯಾಟ್ಸ್ ಮನ್‌ ರಾಬಿನ್‌ಉತ್ತಪ್ಪ ಅವರಿಗೆ ಸೆಪ್ಟೆಂಬರ್‌ 22ರಂದು ಹಾಗೂ ಸೆ.23ರಂದು ಯುವರಾಜ್‌ಸಿಂಗ್‌ ಅವರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್ ನೀಡಲಾಗಿದೆ.
ಹಲವಾರು ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ವೇದಿಕೆಗಳ ವಿರುದ್ಧದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಇಬ್ಬರಿಗೂ ಸಮನ್ಸ್ ಕೊಡಲಾಗಿದೆ.

ಇದೇ ಪ್ರಕರಣದಲ್ಲಿ ಆಗಸ್ಟ್‌ 13 ಮತ್ತು ಸೆಪ್ಟೆಂಬರ್‌ 4ರಂದು ಕ್ರಮವಾಗಿ ರೈನಾ ಮತ್ತು ಧವನ್‌ ಅವರನ್ನು ಹಣಕಾಸು ಅಪರಾಧ ತನಿಖಾ ಸಂಸ್ಥೆ ವಿಚಾರಣೆ ನಡೆಸಿತ್ತು.ತೃಣಮೂಲ ಕಾಂಗ್ರೆಸ್‌‍ (ಟಿಎಂಸಿ) ಮಾಜಿ ಸಂಸದೆ (ಸಂಸದ) ಮಿಮಿ ಚಕ್ರವರ್ತಿ ಅವರನ್ನು ನಿನ್ನೆ ವಿಚಾರಣೆಗೆ ಒಳಪಡಿಸಲಾಗಿತ್ತು. ಬಂಗಾಳಿ ನಟ ಅಂಕುಶ್‌ ಹಜ್ರಾ ಅವರನ್ನು ಇ.ಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಕೂಡ ಹಾಜರಾಗುವ ನಿರೀಕ್ಷೆಯಿತ್ತು. ಆದರೆ ಈ ವರದಿ ಸಲ್ಲಿಸುವವರೆಗೂ ಅವರು ತಮ ಹೇಳಿಕೆಯನ್ನು ದಾಖಲಿಸಲು ಬಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಟ್ಟಿಂಗ್‌ ಅಪ್ಲಿಕೇಶನ್‌ಗಳೊಂದಿಗಿನ ಅವರ ಸಂಪರ್ಕಗಳು, ಅವರು ಗಳಿಸಿದ ಯಾವುದೇ ಅನುಮೋದನೆ ಶುಲ್ಕ ಮತ್ತು ಅವರ ನಡುವಿನ ಸಂವಹನ ವಿಧಾನವನ್ನು ಅರ್ಥಮಾಡಿಕೊಳ್ಳಲು ಜಾರಿ ನಿರ್ದೇಶನಾಲಯವು ಹಲವಾರು ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸುತ್ತಿದೆ.
ಆರ್ಥಿಕ ಅಪರಾಧ ತನಿಖಾ ಸಂಸ್ಥೆಯು ಹಲವಾರು ಅಕ್ರಮ ಆನ್‌ಲೈನ್‌ ಬೆಟ್ಟಿಂಗ್‌ ವೇದಿಕೆಗಳ ತನಿಖೆ ನಡೆಸುತ್ತಿದೆ.

ಜಾಹೀರಾತುಗಳ ರೂಪದಲ್ಲಿ ಹಣವನ್ನು ಪಡೆದಿರುವ ತಂತ್ರಜ್ಞಾನ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳನ್ನು ಪ್ರಶ್ನಿಸಿದೆ. ಈ ತನಿಖೆಯಲ್ಲಿ ಗೂಗಲ್‌ ಮತ್ತು ಮೆಟಾ ಪ್ರತಿನಿಧಿಗಳನ್ನು ಸಹ ಇಡಿ ಕಚೇರಿಗೆ ಕರೆಯಲಾಗಿತ್ತು. ಅಕ್ರಮ ಬೆಟ್ಟಿಂಗ್‌ ಮತ್ತು ಜೂಜಿನ ಲಿಂಕ್‌ಗಳನ್ನು ಹೊಂದಿರುವ ಹಲವಾರು ವೇದಿಕೆಗಳು, ವಿವಿಧ ಸಾಮಾಜಿಕ ಮಾಧ್ಯಮ ಮಳಿಗೆಗಳು ಮತ್ತು ಆ್ಯಪ್‌ ಸ್ಟೋರ್‌ಗಳಲ್ಲಿ ಜಾಹೀರಾತುಗಳನ್ನು ಇರಿಸಿರುವ ನಿದರ್ಶನಗಳು ಸೇರಿದಂತೆ,ಇಡಿ ಸ್ಕ್ಯಾನರ್‌ ಅಡಿಯಲ್ಲಿವೆ.

2023 ರಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪತ್ರಿಕೆಗಳು, ಪ್ರಸಾರ ಸುದ್ದಿ ವಾಹಿನಿಗಳು, ಮನರಂಜನಾ ವಾಹಿನಿಗಳು, ಆನ್‌ಲೈನ್‌ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ವಿಷಯದ ಪ್ರಕಾಶಕರು, ಆನ್‌ಲೈನ್‌ ಜಾಹೀರಾತು ಮಧ್ಯವರ್ತಿಗಳು (ಗೂಗಲ್‌ ಮತ್ತು ಫೇಸ್‌‍ಬುಕ್‌ನಂತಹವು) ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಆನ್‌ಲೈನ್‌ ಬೆಟ್ಟಿಂಗ್‌ ವೇದಿಕೆಗಳನ್ನು ಜಾಹೀರಾತು ಮಾಡದಂತೆ ನಾಲ್ಕು ಸಲಹೆಗಳನ್ನು ನೀಡಿತ್ತು.

ಆನ್‌ಲೈನ್‌ ಬೆಟ್ಟಿಂಗ್‌ ಪ್ಲಾಟ್‌ಫಾರ್ಮ್‌ಗಳ ಜಾಹೀರಾತುಗಳನ್ನು ಅನುಮತಿಸಲಾಗುವುದಿಲ್ಲ ಎಂಬ ಕೇಂದ್ರದ ಈ ಸೂಚನೆಗಳ ಹೊರತಾಗಿಯೂ, ಮನರಂಜನೆ ಮತ್ತು ಕ್ರೀಡಾ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳು ಅವುಗಳನ್ನು ಅನುಮೋದಿಸಿದ್ದಾರೆ. ಈ ನಟರು ಮತ್ತು ಕ್ರೀಡಾಪಟುಗಳು ಸಹ ಜಾರಿ ನಿರ್ದೇಶನಾಲಯದ ಪರಿಶೀಲನೆಯಲ್ಲಿದ್ದಾರೆ ಮತ್ತು ಅವರನ್ನು ಶೀಘ್ರದಲ್ಲೇ ಸಮನ್ಸ್ ಜಾರಿ ಮಾಡಬಹುದು ಎಂದು ಜಾರಿ ನಿರ್ದೇಶನಾಲಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಹಲವಾರು ತಿಂಗಳುಗಳಿಂದ ಇಆ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಹಲವು ವರ್ಷಗಳಿಂದ ನಿಷೇಧಿಸಲ್ಪಟ್ಟಿರುವ ಬಹು ಬೆಟ್ಟಿಂಗ್‌ ವೇದಿಕೆಗಳು ಇನ್ನೂ ಹೆಸರುಗಳನ್ನು ಬದಲಾಯಿಸುವ ಮೂಲಕ ತಮ ಕಾರ್ಯಾಚರಣೆಗಳನ್ನು ನಡೆಸುತ್ತಿವೆ ಮತ್ತು ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಂದ ಪ್ರಚಾರ ಮಾಡಲ್ಪಡುತ್ತವೆ.

ಈ ವೇದಿಕೆಗಳು ಭಾರತ ಸರ್ಕಾರದ ಬಹು ಕಾನೂನುಗಳು ಮತ್ತು ನಿರ್ದೇಶನಗಳನ್ನು ಉಲ್ಲಂಘಿಸುತ್ತಿವೆ, ಅವುಗಳಲ್ಲಿ ತೆರಿಗೆ ವಂಚನೆ, ಹಣ ವರ್ಗಾವಣೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಸೇರಿವೆ. ಏಕೆಂದರೆ ದೇಶದಿಂದ ಅಕ್ರಮವಾಗಿ ಹಣವನ್ನು ವರ್ಗಾಯಿಸಲಾಗುತ್ತದೆ. ಸುಮಾರು 220 ಮಿಲಿಯನ್‌ ಭಾರತೀಯ ಬಳಕೆದಾರರು ಪ್ರಸ್ತುತ ವಿವಿಧ ಬೆಟ್ಟಿಂಗ್‌ ಅಪ್ಲಿಕೇಶನ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು ಇವರಲ್ಲಿ 110 ಮಿಲಿಯನ್‌ ಜನರು ನಿಯಮಿತ ಬಳಕೆದಾರರು ಎಂದು ತಿಳಿಸಿದ್ದಾರೆ.

ಆಧಾರ್‌-ಮೊಬೈಲ್‌ ನಂಬರ್ ಲಿಂಕ್‌ಗಾಗಿ ಅಂಚೆ ಇಲಾಖೆ ಅಧಿಕಾರಿಗಳ ನಿಯೋಜನೆ

ಬೆಂಗಳೂರು, ಸೆ.16- ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಧಾರ್‌ ಸಂಖ್ಯೆಗಳನ್ನು ಮೊಬೈಲ್‌ ಸಂಖ್ಯೆಗೆ ಲಿಂಕ್‌ ಮಾಡಲು ಅಂಚೆ ಇಲಾಖೆಯಿಂದ ಅಧಿಕಾರಿ/ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ಆಧಾರ್‌ ಸಂಖ್ಯೆಗೆ ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಲು ಆಯಾ ಜಿಲ್ಲೆ ಮತ್ತು ತಾಲ್ಲೂಕುವಾರು ಹಾಗೂ ಗ್ರಾಮವಾರು ಅಧಿಕಾರಿಗಳನ್ನು ನಿಯೋಜಿಸಿದೆ. ನಿಯೋಜನೆಗೊಂಡ ಗ್ರಾಮದ/ಪಟ್ಟಣದ ಅಂಚೆ ಕಚೇರಿಯ ಅಧಿಕಾರಿ/ ಸಿಬ್ಬಂದಿಯ ಹೆಸರು ಹಾಗೂ ದೂರವಾಣಿ ಸಂಖ್ಯೆಗಳನ್ನು ಹಿಂದುಳಿದ ವರ್ಗಗಳ ಆಯೋಗದ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗಿದೆ.

ಅಗತ್ಯವಿರುವವರು ತಮ ಗ್ರಾಮದ ವ್ಯಾಪ್ತಿಯಲ್ಲಿ ನಿಯೋಜನೆಗೊಂಡ ಅಂಚೆ ಕಚೇರಿಯ ಅಧಿಕಾರಿ/ ಸಿಬ್ಬಂದಿಯನ್ನು ಸಂಪರ್ಕಿಸಿ, ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಲಿಂಕ್‌ ಮಾಡಿಸಿಕೊಳ್ಳಬಹುದಾಗಿದೆ.

ಆರು ವರ್ಷ ಮೇಲ್ಪಟ್ಟವರಿಗೆ ಸಮೀಕ್ಷೆಯಲ್ಲಿ ಆಧಾರ್‌ ಸಂಖ್ಯೆ ದಾಖಲಿಸುವುದು ಕಡ್ಡಾಯ ಮಾಡಲಾಗಿದೆ. ಹೀಗಾಗಿ ಮೊಬೈಲ್‌ ಸಂಖ್ಯೆಯೊಂದಿಗೆ ಆಧಾರ್‌ ಸಂಖ್ಯೆ ಲಿಂಕ್‌ ಮಾಡದವರ ಅನುಕೂಲಕ್ಕಾಗಿ ಆಯೋಗ ಈ ಕ್ರಮ ಕೈಗೊಂಡಿದೆ.ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಹಿನ್ನೆಲೆಯಲ್ಲಿ ಈಗಾಗಲೇ ವಿದ್ಯುತ್‌ ಮೀಟರ್‌ ರೀಡರ್‌ಗಳ ಸೇವೆ ಬಳಸಿಕೊಂಡು ಮನೆ ಗಣತಿ ಮಾಡಲಾಗುತ್ತಿದೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ 5 ಪಾಲಿಕೆಗಳಿಗೆ ಹೊಸ ಬಜೆಟ್‌

ಬೆಂಗಳೂರು, ಸೆ.16- ಬಿಬಿಎಂಪಿ ಹೋಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಬಂದು ಐದು ನಗರ ಪಾಲಿಕೆ ರಚನೆಯಾಗುತ್ತಿದ್ದಂತೆ ಹೊಸ ಪಾಲಿಕೆಗಳಿಗೆ ಹೊಸ ಬಜೆಟ್‌ ಮಂಡನೆ ಮಾಡಲು ಜಿಬಿಎ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ 5 ನಗರ ಪಾಲಿಕೆಗೆ ಹೊಸ ಬಜೆಟ್‌ ಮಂಡನೆಗೆ ದಿನಗಣನೆ ಆರಂಭವಾಗಿದ್ದು, ಆಕ್ಟೋಬರ್‌ 10 ರೊಳಗೆ ಎಲ್ಲಾ ಪಾಲಿಕೆಗಳಲ್ಲೂ ಬಜೆಟ್‌ ಮಂಡನೆಯಾಗುವುದು ಖಚಿತವಾಗಿದೆ.

ಈಗಾಗಲೇ ಹೊಸ ಬಜೆಟ್‌ ಮಂಡನೆಗೆ ಪೂರ್ವ ಬಾವಿ ಸಿದ್ದತೆ ಆರಂಭವಾಗಿದ್ದು, ಆರ್ಥಿಕ ವರ್ಷದ ಕೊನೆಗೆ ಇನ್ನು ಬಾಕಿ ಇರುವ 8 ತಿಂಗಳ ಅವಧಿಗೆ ಪ್ರತ್ಯೇಕ ಬಜೆಟ್‌ ಮಂಡನೆ ಮಾಡಲಾಗುತ್ತಿದೆ
5 ನಗರ ಪಾಲಿಕೆಗಳಿಗೆ ಈಗಾಗಲೇ ಆಯುಕ್ತರುಗಳನ್ನು ನಿಯೋಜನೆ ಮಾಡಲಾಗಿದೆ. ಎಲ್ಲಾ ಆಯುಕ್ತರುಗಳು ತಮ ವ್ಯಾಪ್ತಿಯ ಪಾಲಿಕೆಯಲ್ಲಿ ಬಜೆಟ್‌ ಮಂಡನೆ ಮಾಡಲು ತಯಾರಿ ಆರಂಭಿಸಿದ್ದಾರೆ.

ತಮ್ಮ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಸಿಬ್ಬಂದಿ ವೇತನ, ಆಡಳಿತಾತ್ಮಕ ವೆಚ್ಚ, ಸಭೆ ಸಮಾರಂಭಗಳ ವೆಚ್ಚ, ಕಲ್ಯಾಣ ಕಾರ್ಯಕ್ರಮಗಳು, ಕಾಮಗಾರಿಗಳು, ಉದ್ಯಾನವನಗಳು, ಮೈದಾನ, ಶಾಲಾ.ಕಾಲೇಜು, ಅಸ್ಪತ್ರೆ, ರಸ್ತೆ ನಿರ್ವಹಣೆ, ಇಂದಿರಾ ಕ್ಯಾಂಟೀನ್‌ ಖರ್ಚು ವೆಚ್ಚ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಬಜೆಟ್‌ ಮಂಡನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಜಿಬಿಎ ಮೂಲಗಳು ತಿಳಿಸಿವೆ.

ಎಲ್ಲಾ ಅಂದುಕೊಂಡತೆ ನಡೆದರೆ, ಈ ತಿಂಗಳ ಅಂತ್ಯ ಇಲ್ಲವೇ ಆ.10ರೊಳಗೆ ಬಜೆಟ್‌ ಮಾಡುವುದು ಪಕ್ಕಾ ಎನ್ನುತ್ತಿವೆ ಮೂಲಗಳು.ನಗರದಲ್ಲಿ ನಡೆಯುತ್ತಿರುವ ಬೃಹತ್‌ ಕಾಮಗಾರಿಗಳು ಹಾಗೂ ಕಸ ವಿಲೇವಾರಿ ವಿಚಾರಗಳು ಜಿಬಿಎ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅಂತಹ ಕಾಮಗಾರಿಗಳನ್ನು ಬಿಟ್ಟು ಉಳಿದ ಕಾಮಗಾರಿಗಳ ಅಭಿವೃದ್ಧಿ ಗೆ ಹೊಸ ಬಜೆಟ್‌ ಮಂಡನೆ ಮಾಡಲಾಗುತ್ತಿದೆಯಂತೆ.

ಈಗಾಗಲೇ ಅಯಾ ನಗರ ಪಾಲಿಕೆಗೆ ಬರುವ ಅಸ್ತಿ ತೆರಿಗೆಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ..ಇದರ ಅಧಾರದ ಮೇಲೆ ಬಜೆಟ್‌ ಮಂಡನೆ ಮಾಡಲು 5 ಪಾಲಿಕೆಗಳ ಆಯುಕ್ತರುಗಳು ಸಿದ್ದತೆ ನಡೆಸಿದ್ದಾರೆ.

ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ತೀರ್ಮಾನಗೊಂಡ ಕಾಮಗಾರಿಗಳನ್ನು ಸಾರ್ವಜನಿಕರಿಗೆ ಉಪಯೋಗವಿದ್ದರೆ ಮಾತ್ರ ಅವುಗಳನ್ನು ಬಜೆಟ್‌ ವ್ಯಾಪ್ತಿಗೆ ತರಲಾಗುವುದು ಇಲ್ಲದಿದ್ದರೆ ಅಂತಹ ಕಾಮಗಾರಿಗಳನ್ನು ಕೈಬಿಡುವ ಸಾಧ್ಯತೆಗಳಿವೆ.ಇನ್ನೂ ಬಿಬಿಎಂಪಿ ಈ ಹಿಂದೆ ಮಾಡಿದ ಸಾಲಗಳನ್ನು ಕೂಡ ಆಯಾ ನಗರ ಪಾಲಿಕೆಗಳಿಗೆ ಹಂಚಿಕೆ ಮಾಡಲಾಗಿದೆ.

ನಿರೀಕ್ಷಿತ ಬಜೆಟ್‌ ಗಾತ್ರ: ಬೆಂಗಳೂರು ಪಶ್ಚಿಮ.. 555.37 ಕೋಟಿ ರೂ, ಬೆಂಗಳೂರು ದಕ್ಷಿಣ 316.28 ಕೋಟಿ ರೂ, ಬೆಂಗಳೂರು ಉತ್ತರ 364.58 ಕೋಟಿ, ಬೆಂಗಳೂರು ಪೂರ್ವ 155.50 ಕೋಟಿ ಹಾಗೂ ಬೆಂಗಳೂರು ಕೇಂದ್ರ ಪಾಲಿಕೆಯಿಂದ 313.25 ಕೋಟಿ ರೂ. ಸೇರಿದಂತೆ ಒಟ್ಟು 1707.98 ಕೋಟಿ ರೂ. ಬಜೆಟ್‌ ಮಂಡನೆಯಾಗುವ ನಿರೀಕ್ಷೆಯಿದೆ.

ದೆಹಲಿ ಬಳಿಕ ಈಗ ಬೆಂಗಳೂರಲ್ಲೂ ರೆಡಿಯಾಗುತ್ತಿದೆ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಪ್ಲಾನ್‌

ಬೆಂಗಳೂರು, ಸೆ.16- ರಾಷ್ಟ್ರ ರಾಜಧಾನಿ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಹೆಚ್ಚು ಹೊಗೆ ಹೊರಸೂಸುವ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಪ್ಲಾನ್‌ ರೆಡಿಯಾಗುತ್ತಿದೆ. ಪರಿಸರಕ್ಕೆ ಮಾರಕವಾಗುವಂತಹ 15 ವರ್ಷಗಳು ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವ ನಿರ್ಧಾರವನ್ನು ಈಗಾಗಲೇ ಕೇಂದ್ರ ಸರ್ಕಾರ ಕೈಗೊಂಡಿದೆ.

ದೇಶದಲ್ಲೇ ಅತಿ ಹೆಚ್ಚು ಪರಿಸರ ಮಾಲಿನ್ಯವಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಸ್ಕ್ರ್ಯಾಪ್‌ ಪಾಲಿಸಿಯನ್ನು ಜಾರಿಗೊಳಿಸಲಾಗಿದೆ. ಇದೀಗ ದೆಹಲಿ ಮಾದರಿಯಲ್ಲೇ ರಾಜ್ಯದಲ್ಲ್ಲೂ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಸ್ಕ್ರ್ಯಾಪ್‌ ಮಾಡುವ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯದಲ್ಲೂ ಸ್ಕ್ರ್ಯಾಪ್‌ ಪಾಲಿಸಿಯನ್ನು ಸಾರಿಗೆ ಇಲಾಖೆ ಜಾರಿಗೊಳಿಸಿದೆ. 15 ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕುವಂತೆ ಈಗಾಗಲೇ ನೋಟೀಸ್‌‍ ನೀಡಲಾಗಿದೆ.

ಟೂ ಸ್ಟ್ರೋಕ್‌ ಆಟೋಗಳ ಜತೆಗೆ 15 ವರ್ಷ ತುಂಬಿರೋ ಲಾರಿಗಳನ್ನೂ ಸ್ಕ್ರ್ಯಾಪ್‌ ಮಾಡುವಂತೆ ಸೂಚಿಸಲಾಗಿದೆ. ಸ್ಕ್ರ್ಯಾಪ್‌ ಪಾಲಿಸಿಗೆ ವಾಹನದ ಮಾದರಿ ಆಧರಿಸಿ ಸಾರಿಗೆ ಇಲಾಖೆ ಪರಿಹಾರ ನೀಡುತ್ತಿದೆ.

ಮೊದಲ ಹಂತದಲ್ಲಿ ಸರ್ಕಾರಿ ವಾಹನಗಳ ಸ್ಕ್ರ್ಯಾಪ್‌ ಮಾಡಲು ತೀರ್ಮಾನ ಮಾಡಿರುವ ಸರ್ಕಾರ ನಂತರ ಅಧೀನ ಸಂಸ್ಥೆಗಳಿಗೆ ಸೇರಿದ ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿದೆ. ನಂತರ ಹಂತ ಹಂತವಾಗಿ 15 ವರ್ಷ ಮೀರಿದ ಖಾಸಗಿ ವಾಹನಗಳನ್ನು ಗುಜರಿಗೆ ಹಾಕುವ ಮಹತ್ವದ ತೀರ್ಮಾನ ಕೈಗೊಳ್ಳಲಿದೆ.

15 ವರ್ಷ ಮೇಲ್ಟಟ್ಟ ಭಾರಿ ವಾಹನಗಳು ಹೊರಸೂಸುವ ಮಾಲಿನ್ಯದಿಂದ ಭವಿಷ್ಯದಲ್ಲಿ ಜನ ಉಸಿರಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬ ಪರಿಸರ ತಜ್ಞರ ಎಚ್ಚರಿಕೆ ಮೇರೆಗೆ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತಿದೆಯಂತೆ.

ಮೈಸೂರಿನಲ್ಲಿ ದಸರಾ ಸಂಭ್ರಮ : ಅರಮನೆಯಲ್ಲಿ ಸಿಂಹಾಸನ ಜೋಡಣೆ ಕಾರ್ಯ ಆರಂಭ

ಮೈಸೂರು,ಸೆ.16 : ದಸರಾ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಇಂದು ಸಿಂಹಾಸನ ಜೋಡಣೆ ಕಾರ್ಯ ಆರಂಭ. ಈ ಹಿನ್ನೆಲೆ ಮಂಗಳವಾರ ಮಧ್ಯಾಹ್ನದವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಾಜವಂಶ್ಥರು ನಡೆಸುವ ಧಾರ್ಮಿಕ ಕಾರ್ಯ, ಖಾಸಗಿ ದರ್ಬಾರ್‌ಗಾಗಿ ಈ ಸಿಂಹಾಸನ ಜೋಡಣೆ ನಡೆಯುತ್ತಿದೆ. ಸ್ಟ್ರಾಂಗ್ ರೂಂನಿಂದ ಬಿಗಿ ಭದ್ರತೆಯೊಂದಿಗೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಸಿಂಹಾಸನ ಜೋಡಣೆ ನಡೆಯಲಿದೆ.

ಬೆ. 8:30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ. ಚಿನ್ನದ ಸಿಂಹಾಸನದ ಬಿಡಿಭಾಗ ಹಾಗೂ ಬೆಳ್ಳಿಯ ಭದ್ರಾಸನದ ಬಿಡಿ ಭಾಗಗಳನ್ನ ದರ್ಬಾರ್ ಹಾಲ್‌ಗೆ ತಂದು ಜೋಡಣೆ ಮಾಡಲಾಗುವುದು.ಬೆಳ್ಳಿ ಭದ್ರಾಸನವನ್ನ ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗುವುದು.

ಸಿಂಹಾಸನ ಜೋಡಣೆ ಕಾರ್ಯ ನಡೆಯುವ ವೇಳೆ ದರ್ಬಾಲ್ ಹಾಲ್ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮೆರಾಗೆ ಪರದೆ ಹಾಕಲಾಗುವುದು.ಸಿಂಹಾಸನ ಜೋಡಣೆ ಕಾರ್ಯದ ನಿಮಿತ್ತ ಬೆಳಗ್ಗೆಯೇ ದರ್ಬಾರ್ ಹಾಲ್‌ನಲ್ಲಿ ಗಣಪತಿ, ಚಾಮುಂಡಿ ಪೂಜೆ ಸೇರಿಂದತೆ ಕೆಲ ಹೋಮ ಹವನ ನಡೆಯಲಿದೆ. ಪೂಜೆ ಮುಗಿದ ಬಳಿಕ ಸಿಂಹಾಸನ ಬಿಡಿಭಾಗವನ್ನ ದರ್ಬಾರ್ ಹಾಲ್‌ಗೆ ತಂದು ಸಿಂಹಾಸನ ಜೋಡಣೆ ಮಾಡಲಾಗುವುದು.