Home Blog Page 113

ವಾರಣಾಸಿ, ಅಯೋಧ್ಯ, ತಿರುಪತಿ ಸೇರಿ ಯಾತ್ರಾ ಸ್ಥಳಗಳಿಗೆ ಬುಕ್ಕಿಂಗ್‌ ಪ್ರಮಾಣ ಹೆಚ್ಚಳ

0

ಬೆಂಗಳೂರು: ದೇಶಾದ್ಯಂತ ತೀರ್ಥಯಾತ್ರೆಗೆ ತೆರಳುವವರ ಸಂಖ್ಯೆ ಹೆಚ್ಚುತ್ತಿದ್ದು, 2024-25 ವರ್ಷದಲ್ಲಿ ತೀರ್ಥಯಾತ್ರೆಗಳ ವಸತಿ ಬುಕ್ಕಿಂಗ್‌ನಲ್ಲಿ ಶೇ. 19ರಷ್ಟು ವೃದ್ಧಿಯಾಗಿದೆ ಎಂದು ಮೇಕ್‌ ಮೈ ಟ್ರಿಪ್‌ ತಿಳಿಸಿದೆ. ಈ ಕುರಿತು ಮಾತನಾಡಿದ ಮೇಕ್‌ಮೈಟ್ರಿಪ್‌ನ ಸಹಸ್ಥಾಪಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಗೊವ್, ತನ್ನ ಬುಕ್ಕಿಂಗ್‌ ಆಪ್‌ನಲ್ಲಿ ತೀರ್ಥಯಾತ್ರಿಕ ಸಂಖ್ಯೆ ಹೆಚ್ಚುತ್ತಿದ್ದು, ದೇಶಾದ್ಯಂತ 34 ತಾಣಗಳಲ್ಲಿ ಎರಡಂಕಿ ಬೆಳವಣಿಗೆ ದಾಖಲಿಸಿದೆ, ಇನ್ನು, 15 ತಾಣಗಳಲ್ಲಿ ಶೇ.25ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸುವ ಮೂಲಕ ಆಧ್ಯಾತ್ಮಿಕ ಪ್ರಯಾಣಕ್ಕೆ ಜನ ಆದ್ಯತೆ ನೀಡುತ್ತಿರುವುದು ತಿಳಿದುಬಂದಿದೆ.

ಪ್ರಮುಖ ಧಾರ್ಮಿಕ ಸ್ಥಳಗಳಾದ ಪ್ರಯಾಗ್‌ರಾಜ್, ವಾರಣಾಸಿ, ಅಯೋಧ್ಯ, ಪುರಿ, ಅಮೃತ್ಸರ, ಮತ್ತು ತಿರುಪತಿ ಸೇರಿದಂತೆ ಮುಂತಾದ ಸ್ಥಳಗಳಲ್ಲಿ ಹೆಚ್ಚು ಬುಕ್ಕಿಂಗ್‌ ಆಗಿವೆ. ಜೊತೆಗೆ, ಖಾತುಷ್ಯಾಮ್ ಜಿ, ಓಂಕಾರೇಶ್ವರ ಮತ್ತು ತಿರುಚೆಂದೂರ್ ಮುಂತಾದ ಸ್ಥಳಗಳೂ ಕೂಡ ಹೆಚ್ಚು ಬುಕ್ಕಿಂಗ್‌ ನೋಡಬಹುದು. ಯಾತ್ರಾ ಬೇಡಿಕೆಯಲ್ಲಿನ ಪ್ರಬಲ ಬೆಳವಣಿಗೆಗೆ, ಪ್ರಮುಖ ಗಮ್ಯಗಳಾದ್ಯಂತ ವಸತಿಯ ಚುರುಕಾದ ವಿಸ್ತರಣೆಯೂ ಕಾರಣವಾಗಿದೆ. ಪ್ರಯಾಣಿಕರು ಬಹುತೇಕವಾಗಿ, ಚಿಕ್ಕದಾದ, ಉದ್ದಿಶ್ಯಿತ ವಸತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅವರುಗಳ ಪೈಕಿ ಅರ್ಧಕ್ಕಿಂತ ಹೆಚ್ಚಿನ ಮಂದಿ ಒಂದು-ರಾತ್ರಿ ಪ್ರವಾಸಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದಾರೆ. ಅದೇ ವೇಳೆ, ಪ್ರೀಮಿಯಮೀಕರಣವು ಕೂಡ ಎಚ್ಚಿದ್ದು, 7 ಸಾವಿರ ರೂ. ಮೇಲ್ಪಟ್ಟ ಬೆಲೆಯ ರೂಮ್‌ಗಳಿಗೆ ಬುಕಿಂಗ್‌ಗಳು ಶೇ.20ಕ್ಕಿಂತ ಹೆಚ್ಚು ಬೆಳೆದಿವೆ ಎಂದರು.

ಆಧ್ಯಾತ್ಮಿಕ ಪ್ರವಾಸದಲ್ಲಿ ಶೇ. 53ರಷ್ಟು ಜನರು ಕೇವಲ ಒಂದು ರಾತ್ರಿಯ ಪ್ರವಾಸವನ್ನು ಆಯ್ಕೆಮಾಡುತ್ತಾರೆ, ಇದು ಮನೋರಂಜನಾ ಪ್ರವಾಸದಕ್ಕೆ ಹೋಲಿಕೆ ಮಾಡಿದರೆ ಹೆಚ್ಚು.
ಎರಡು ರಾತ್ರಿ ಬುಕ್ಕಿಂಗ್‌ ಮಾಡುವವರ ಪ್ರಮಾಣ ಶೇ.31ರಷ್ಟಿದೆ ಎಂದು ವಿವರಿಸಿದರು.

2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ ರಚನೆ : ಸಚಿವ ಶಿವಾನಂದ ಪಾಟೀಲ

ಬೆಂಗಳೂರು: ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಣೆ ಮತ್ತು ಸುಮಾರು 2 ಲಕ್ಷ ಉದ್ಯೋಗ ಸೃಷ್ಟಿಗೆ ಪೂರಕವಾಗಿ ಜವಳಿ ನೀತಿ 2025-30 ನೀತಿ ರೂಪಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನೂತನ ಜವಳಿ ನೀತಿ ರಚನೆಗೆ ಸಲಹೆ ಪಡೆಯಲು ವಿಧಾನಸೌಧದಲ್ಲಿ ಶುಕ್ರವಾರ ಕರೆದಿದ್ದ ಜನಪ್ರತಿನಿಧಿಗಳು, ಜವಳಿ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಇಂದಿನ ಸಭೆಯಲ್ಲಿ ವ್ಯಕ್ತವಾಗಿರುವ ಸಲಹೆಗಳನ್ನು ಪರಿಗಣಿಸಿ ಜವಳಿ ನೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜವಳಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2020ರಿಂದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮಗಳ ಆಡಿಟ್‌ ಆಗಿರಲಿಲ್ಲ. ಈಗ ಆಡಿಟ್‌ ನಡೆದಿದ್ದು, ನಷ್ಟದ ಕಾರಣ ಎರಡನ್ನೂ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಕೈಮಗ್ಗ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಿಗೆ ಖರೀದಿ ಮಾಡಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಶಾಸಕರೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವ ಉದ್ದೇಶವಿದೆ. ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಕೈಮಗ್ಗ ಉತ್ಪನ್ನಗಳನ್ನು ಖರೀದಿ ಮಾಡಿದರೆ ಕೈಮಗ್ಗ ನೇಕಾರರಿಗೆ ಉತ್ತೇಜನ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಶೂನ್ಯ ಬಡ್ಡಿ ದರದ ಸಾಲದ ಮೇಲೂ ಜಿಎಸ್‌ಟಿ ವಿಧಿಸುತ್ತಿರುವುದಿಂದ ನೇಕಾರರಿಗೆ ಬಡ್ಡಿ ರಹಿತ ಸಾಲ ಸಿಕ್ಕರೂ ಉಪಯೋಗ ಆಗುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲರ ಸಹಕಾರದೊಂದಿಗೆ ಜಿಎಸ್‌ಟಿ ತೆರವಿಗೆ ಪ್ರಯತ್ನ ಮಾಡಲಾಗುವುದು. ಬೆಳಗಾವಿಯಲ್ಲಿ ಜವಳಿ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು. ಚರ್ಮಹೊರತುಪಡಿಸಿ ತಯಾರಾಗುವ ಚಪ್ಪಲಿ ಮತ್ತು ಶೂ ಉದ್ಯಮದ ಅಭಿವೃದ್ಧಿ ಬಗ್ಗೆಯೂ ನೀತಿ ರೂಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. ಸಣ್ಣ ಕೈಗಾರಿಕೆ ಕ್ಷೇತ್ರದ ಅಡಿಯಲ್ಲಿ ಬರುವ ಈ ಉದ್ಯಮವನ್ನು ಜವಳಿ ನೀತಿಯಲ್ಲಿ ಪರಿಗಣಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಆದಾಯದ ಮೂಲ ಕಂಡುಕೊಳ್ಳಲು ಇಲಾಖೆ ಆಸ್ತಿ ಇರುವ ಕಡೆ ಪೆಟ್ರೋಲ್‌ ಪಂಪ್‌ಗಳನ್ನು ಸ್ಥಾಪನೆ ಮಾಡುವ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಹಾಗೂ ನಷ್ಟದಲ್ಲಿರುವ ಸಹಕಾರ ಕ್ಷೇತ್ರದ ಜವಳಿ ಉದ್ಯಮದ ಆಸ್ತಿ ಮಾರಾಟಕ್ಕೆ ಅವಕಾಶ ನೀಡದೆ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುವುದು. ನೇಕಾರ ಸಮ್ಮಾನ ಯೋಜನೆಯ ನೆರವನ್ನು ಐದು ಸಾವಿರ ರೂ.ಗಳಿಂದ ಹತ್ತು ಸಾವಿರ ರೂ.ಗಳಿಗೆ ಹೆಚ್ಚಳ ಮಾಡುವ ಬೇಡಿಕೆ ಸೂಕ್ತವಾಗಿದ್ದು, ಪರಿಗಣಿಸಲಾಗುವುದು ಹಾಗೂ ಕುಟುಂಬದಲ್ಲಿ ಒಬ್ಬರನ್ನು ಮಾತ್ರ ಪರಿಗಣಿಸುವ ಬದಲಿಗೆ ಎಲ್ಲ ಸದಸ್ಯರನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.

ಜವಳಿ ಕ್ಷೇತ್ರದ ಅಭಿವೃದ್ಧಿಗೆ ಎಷ್ಟೇ ಯೋಜನೆ ರೂಪಿಸಿದರೂ ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸದಿದ್ದರೆ ಪ್ರಯೋಜನ ಆಗದು. ಆದ್ದರಿಂದ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಅನುದಾನ ಪ್ರಮಾಣ ಹೆಚ್ಚಳ ಮಾಡಲು ಮನವಿ ಮಾಡಬೇಕು ಎಂದು ಮಾಜಿ ಶಾಸಕ, ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಸಲಹೆ ಮಾಡಿದರು.

ನೇಕಾರರಿಗೆ ವರ್ಷವಿಡೀ ಉದ್ಯೋಗ ಒದಗಿಸಬೇಕು. ಪರಿವರ್ತನಾ ನಿಧಿ ಹೆಚ್ಚಳ ಮಾಡಬೇಕು. ನಿಗಮವನ್ನು ಲಾಭದಾಯಕ ಹಾದಿಯಲ್ಲಿ ಕೊಂಡೊಯ್ಯಲು ಆದಾಯದ ಮೂಲಗಳನ್ನು ಸೃಷ್ಟಿಸಬೇಕು. ನಿಗಮದಿಂದ ಹಂಚಿಕೆ ಮಾಡಿರುವ ಮನೆಗಳಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಶಾಸಕ ಸಿದ್ದು ಸವದಿ ಮನವಿ ಮಾಡಿದರು.

ಕೈಮಗ್ಗ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಬೇಕು. ಉತ್ಪನ್ನಗಳನ್ನು ಬ್ರಾಂಡಿಂಗ್‌ ಮಾಡಿ ಇ – ಕಾಮರ್ಸ್‌ ಫ್ಲಾಟ್‌ಫಾರಂನಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಇತ್ತೀಚೆಗೆ ನೇಕಾರರ ಕುಟುಂಬದ ಯುವಕರು ಕುಲಕಸುಬಿನಿಂದ ವಿಮುಖರಾಗುತ್ತಿದ್ದು, ಅವರನ್ನು ಸೆಳೆಯುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಶಾಸಕ ನವೀನ್‌ ಹೇಳಿದರು.

ಹತ್ತು ಕೋಟಿ ಬಂಡವಾಳ ಹೂಡಿದರೆ ಎಷ್ಟು ಉದ್ಯೋಗಾವಕಾಶ, ನೂರು ಕೋಟಿ ಬಂಡವಾಳ ಹೂಡಿದರೆ ಎಷ್ಟು ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಬಗ್ಗೆ ಸ್ಪಷ್ಟ ನೀತಿ ಬೇಕು. ಎಲ್ಲವನ್ನೂ ಯಾಂತ್ರೀಕರಣಗೊಳಿಸಿದರೆ ಉದ್ದೇಶ ಈಡೇರದು. ಈ ಬಗ್ಗೆ ಚಿಂತನೆ ಮಾಡಬೇಕು ಎಂದು ಶಾಸಕ ಕೇಶವಪ್ರಸಾದ್‌ ಹೇಳಿದರು. ಅನವತಿಯಲ್ಲಿರುವ ಅಣ್ಣಿಗೇರಿ ಜವಳಿ ಪಾರ್ಕ್‌ ಪುನಶ್ಚೇತನಗೊಳಿಸಬೇಕು. ಆಸ್ತಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಶಾಸಕ ಎನ್‌.ಎಚ್‌. ಕೋನರೆಡ್ಡಿ ಹೇಳಿದರು.

ಉತ್ತರ ಕರ್ನಾಟಕದಲ್ಲಿ ಜವಳಿ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನಾ ಕೇಂದ್ರ ಆರಂಭಿಸುವ ಅಗತ್ಯವಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಅಭಯ ಪಾಟೀಲ ಹೇಳಿದರು. ಕಾವೇರಿ ಹ್ಯಾಂಡ್‌ಲೂಮ್‌ ಅಧ್ಯಕ್ಷ ಜೆ.ಬಿ. ಗಣೇಶ್‌, ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಸೇರಿದಂತೆ ಅನೇಕರು ಸಲಹೆ ಸೂಚನೆ ನೀಡಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಸಮೀರ್‌ ಶುಕ್ಲಾ, ಯೋಜನಾ ಇಲಾಖೆ ಕಾರ್ಯದರ್ಶಿ ರಮ್‌ದೀಪ್‌ ಚೌಧರಿ, ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಚ್‌ಡಿಡಿಸಿ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪನ್ವಾರ್‌ ಸೇರಿದಂತೆ ಜವಳಿ ಇಲಾಖೆ ಹಲವು ಅಧಿಕಾರಿಗಳು, ಜವಳಿ ಉದ್ಯಮಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಉಪರಾಷ್ಟ್ರಪತಿ ರಾಧಾಕೃಷ್ಣನ್‌ ಪ್ರಮಾಣ ವಚನ ಸಂದರ್ಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಧನ್ಕರ್‌

ನವದೆಹಲಿ, ಸೆ.12- ದಿಢೀರ್‌ ರಾಜೀನಾಮೆ ನೀಡಿ ಯಾರಿಗೂ ಕಾಣಿಸಿಕೊಳ್ಳದೆ ಕುತೂಲಹಕ್ಕೆ ಎಡೆ ಮಾಡಿಕೊಟ್ಟಿದ್ದ ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಕೊನೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಹೊಸದಾಗಿ ಆಯ್ಕೆಯಾದ ಉಪಾಧ್ಯಕ್ಷ ಸಿ.ಪಿ.ರಾಧಾಕೃಷ್ಣನ್‌ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರಮೋದಿ ಮತ್ತು ಪಕ್ಷಾತೀತವಾಗಿ ಉನ್ನತ ನಾಯಕರು ಭಾಗವಹಿಸಿದ್ದರು.ಆಗಸ್ಟ್‌ 2022ರಲ್ಲಿ ಭಾರತದ 14ನೇ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ಜಗದೀಪ್‌ ಧನ್ಕರ್‌ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಕಳೆದ ವಾರ ತಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಮ ಆರೋಗ್ಯಕ್ಕೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಅನುಸರಿಸಲು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು. ಅವರ ರಾಜೀನಾಮೆ ತಕ್ಷಣವೇ ಜಾರಿಗೆ ಬಂದಿತ್ತು.

ಮದ್ಯದ ಅಮಲಿನಲ್ಲಿ ಪತ್ನಿಯನ್ನು ಇರಿದು ಕೊಂದ ಪತಿ

ಹಾಸನ,ಸೆ.12- ಮದ್ಯದ ಅಮಲಿನಲ್ಲಿ ಪತಿ ಮನೆಗೆ ಹೋಗಿ ಪತ್ನಿಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಗ್ರಾಮದಲ್ಲಿ ನಡೆದಿದೆ.

ರೇಖಾ (38) ಕೊಲೆಯಾದ ಮಹಿಳೆ. ಆರೋಪಿ ಪತಿ ರಘು ಘಟನೆ ನಂತರ ಪರಾರಿಯಾಗಿದ್ದಾನೆ. ರಘು ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಪತ್ನಿಯೊಂದಿಗೆ ಜಗಳವಾ ಡುತ್ತಿದ್ದ.ನಿನ್ನೆ ರಾತ್ರಿ ಮನೆಯಲ್ಲಿದ್ದ ಇಬ್ಬರು ಗಂಡು ಮಕ್ಕಳು ಟ್ಯೂಷನ್‌ಗೆ ತೆರಳಿದ್ದ ವೇಳೆ, ಮದ್ಯದ ಅಮಲಿನಲ್ಲಿ ರಘು ಮನೆಗೆ ಹೋಗಿದ್ದಾನೆ.

ಆ ಸಂದರ್ಭದಲ್ಲಿ ಪತ್ನಿಯೊಂದಿಗೆ ಜಗಳವಾಡಿ, ಆಕೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಎದೆಗೆ ಇರಿದು ಪರಾರಿಯಾಗಿದ್ದಾನೆ.ತೀವ್ರ ರಕ್ತಸ್ರಾವದಿಂದ ರೇಖಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಹಿರೀಸಾವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ರಘು ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪತಿ ಕೊಂದು ನಾಟಕವಾಡಿದ್ದ ಪತ್ನಿ ಬಂಧನ
ಹುಣಸೂರು,ಸೆ.12- ಪತಿಗೆ ವಿಷ ಹಾಕಿ ಕೊಂದು ತಿಪ್ಪೆಗುಂಡಿಗೆ ಎಸೆದು, ಹುಲಿ ಕೊಂದಿದೆ ಎಂದು ನಾಟಕವಾಡಿದ್ದ ಪತ್ನಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಸಲ್ಲಾಪುರಿ ಬಂಧಿತ ಮಹಿಳೆಯಾಗಿದ್ದು,ಹುಣಸೂರು ತಾಲ್ಲೂಕು ಚಿಕ್ಕ ಹೆಜ್ಜೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಪರಿಹಾರ ಹಣದ ಆಸೆಗೆ ಪತಿ ವೆಂಕಟಸ್ವಾಮಿನ್ನು ತಾನೇ ಕೊಂದು ಹುಲಿ ಕೊಂದಿದೆ ಎಂದು ನಾಟಕವಾಡಿದ್ದ ಸಲ್ಲಾಪುರಿ ಪಾಪ ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದಂಪತಿ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸ ಇದ್ದರು. ಒಂದು ವಾರದ ಹಿಂದೆ ಪತಿ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ದೂರು ನೀಡಿದ್ದರು.

ಹುಲಿ ಆತನನ್ನು ಕೊಂದು ಎಳೆದುಕೊಂಡು ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಳು. ಈ ಬಗ್ಗೆ ಪರಿಶೀಲನೆ ನಡೆಸಿದ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಪ್ರಾಣಿ ಬಂದ ಕುರುಹು ಇರಲಿಲ್ಲ. ಅನುಮಾನಗೊಂಡು ಮನೆಯಲ್ಲಿ ಹುಡುಕಾಟ ವೇಳೆ ಮನೆಯ ಹಿಂದೆ ತಿಪ್ಪೆಗುಂಡಿಯಲ್ಲಿ ವೆಂಕಟಸ್ವಾಮಿ ಶವ ಪತ್ತೆಯಾಗಿತ್ತು.

ವಿಷ ಹಾಕಿ ಪತಿ ಕೊಲೆ ಮಾಡಿದ್ದ ಪತ್ನಿ ನಂತರ ತಿಪ್ಪೆಗುಂಡಿಗೆ ಎಸೆದಿದ್ದಳು ನಂತರ ಪರಿಹಾರ ಸಿಗುತ್ತದೆ, ಐಷಾರಾಮಿ ಜೀವನ ನಡೆಸಬಹುದು ಎಂಬ ಆಕೆಯ ಆಸೆ ಕೊನೆಗೆ ಅವಳು ಜೈಲು ಕಂಬಿ ಎಣಿಸುವ ಸ್ಥಿತಿಗೆ ತಲುಪಿದೆ.ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬುರುಡೆ ಪ್ರಕರಣ : ಎಸ್‌‍ಐಟಿ ಕಚೇರಿಯಲ್ಲಿ ಮತ್ತೆ ಮೂವರ ವಿಚಾರಣೆ

ಬೆಂಗಳೂರು,ಸೆ.12– ಬುರುಡೆ ಪ್ರಕರಣದಲ್ಲಿ ಇಂದು ಮತ್ತೆ ಮೂವರು ಬೆಳ್ತಂಗಡಿಯ ಎಸ್‌‍ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.ಪ್ರಕರಣ ಸಂಬಂಧ ಇಂದು ವಿಚಾರಣೆಗೆ ಹಾಜರಾಗುವಂತೆ ಗಿರೀಶ್‌ ಮಟ್ಟಣ್ಣನವರ್‌, ಜಯಂತ್‌ ಟಿ. ಹಾಗೂ ಯೂಟ್ಯೂಬರ್‌ ಪ್ರದೀಪ್‌ಗೆ ಸೂಚಿಸಲಾಗಿತ್ತು.

ಹಾಗಾಗಿ ಇಂದು ಈ ಮೂವರು ಬೆಳ್ತಂಗಡಿ ಎಸ್‌‍ಐಟಿ ಕಚೇರಿಗೆ ಹಾಜರಾಗಿದ್ದಾರೆ.ಬುರುಡೆ ಪ್ರಕರಣದ ದೂರುದಾರ ಚಿನ್ನಯ್ಯ ಬಂಧನವಾಗುತ್ತಿದ್ದಂತೆ ಆತ ವಿಚಾರಣೆ ವೇಳೆ ನೀಡಿದ ಮಾಹಿತಿಯನ್ನಾಧರಿಸಿ ಈ ಮೂವರನ್ನು ಈಗಾಗಲೇ ಎರಡು-ಮೂರು ಬಾರಿ ವಿಚಾರಣೆಗೆ ಒಳಪಡಿಸಿ ಎಸ್‌‍ಐಟಿ ಅಧಿಕಾರಿಗಳು ಕೆಲವು ಮಾಹಿತಿ ಗಳನ್ನು ಪಡೆದುಕೊಂಡಿದ್ದಾರೆ. ಇಂದು ಮತ್ತೆ ಅಧಿಕಾರಿಗಳು ಈ ಮೂವರನ್ನು ವಿಚಾರಣೆಗೆ ಒಳಪಡಿಸಿ ತನಿಖೆಯ ಭಾಗವಾಗಿ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಬೆಂಗಳೂರು : ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ ಕಾರು

ಬೆಂಗಳೂರು, ಸೆ.12– ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹತ್ತಿಕೊಂಡಿದ್ದು ಸಾಫ್ಟ್ ವೇರ್‌ ಎಂಜಿನಿಯರ್‌ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಹೈಗ್ರೌಂಡ್ಸ್ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಸಚಿನ್‌ ಎಂಬುವವರು ಕಾರಿನಲ್ಲಿ ಕೋರಮಂಗಲದಿಂದ ಗಂಗಾನಗರದಲ್ಲಿರುವ ಸಬ್‌ರಿಜಿಸ್ಟ್ರರ್‌ ಕಚೇರಿಗೆ ಆಸ್ತಿ ನೋಂದಣಿಗಾಗಿ ಬೆಳಗ್ಗೆ ತೆರಳುತ್ತಿದ್ದರು. ಸುಮಾರು 11.30ರ ಸಂದರ್ಭದಲ್ಲಿ ಸಿಎಂ ಮನೆ ಸಮೀಪದ ಅರಮನೆ ರಸ್ತೆಯ ವಿಲ್ಸನ್‌ ಮ್ಯಾನರ್‌ ಸೇತುವೆಯ ಸರ್ವೀಸ್‌‍ ರಸ್ತೆಯಲ್ಲಿ ಕಾರಿನ ಮುಂಭಾಗದ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.

ತಕ್ಷಣ ಚಾಲಕ ಅಪಾಯ ಅರಿತು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಸಚಿನ್‌ ಕೂಡ ಕಾರಿನಿಂದ ಹೊರಗೆ ಇಳಿದು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಚಾಲಕ ಕಾರಿನ ಮುಂದಿನ ಬಾನೆಟ್‌ ತೆಗೆಯುತ್ತಿದ್ದಂತೆಯೇ ಬೆಂಕಿ ಆವರಿಸಿದ್ದರಿಂದ ಅವರು ಹಿಂದೆ ಸರಿದಿದ್ದಾರೆ. ಸಚಿನ್‌ ಅವರು ಎಚ್ಚೆತ್ತುಕೊಂಡು ತಮ ಬಳಿ ಇದ್ದ ದಾಖಲೆ ಮತ್ತು ಕೆಲ ವಸ್ತುಗಳನ್ನು ಕಾರಿನಿಂದ ಹೊರಗೆ ತೆಗೆದುಕೊಂಡಿದ್ದಾರೆ.

ನೋಡ ನೋಡುತ್ತಿದ್ದಂತೆ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಷ್ಟೋತ್ತಿಗೆ ಕಾರು ಶೇ. 75ರಷ್ಟು ಭಾಗ ಸುಟ್ಟು ಕರಕಲಾಗಿದೆ. ಘಟನೆಯಿಂದ ಸಾಫ್ಟ್ ವೇರ್‌ ಎಂಜಿನಿಯರ್‌ ದಿಗ್ಭ್ರಮೆ ಗೊಂಡಿದ್ದಾರೆ. ಸ್ಥಳೀಯರು ರಸ್ತೆ ಮಧ್ಯೆಯೇ ಕಾರು ಹೊತ್ತು ಉರಿಯುತ್ತಿದ್ದಿದ್ದನ್ನು ನೋಡಿ ಗಾಬರಿಗೊಂಡಿದ್ದಾರೆ. ಹೈಗ್ರೌಂಡ್ಸ್ ಠಾಣೆ ಪೊಲೀಸರು ಸುಟ್ಟು ಹೋದ ಕಾರನ್ನು ಅಲ್ಲಿಂದ ತೆರವುಗೊಳಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕ್ರಿಮಿನಲ್‌ಗಳ ಜೊತೆ ಗುರುತಿಸಿಕೊಂಡರೆ ಕಠಿಣ ಕ್ರಮ : ಸೀಮಂತ್‌ಕುಮಾರ್‌ ಸಿಂಗ್‌ ಎಚ್ಚರಿಕೆ

ಬೆಂಗಳೂರು,ಸೆ.12- ಕ್ರಿಮಿನಲ್‌ಗಳ ಜೊತೆ ಗುರುತಿಸಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಎಚ್ಚರಿಸಿದ್ದಾರೆ.

ಥಣಿಸಂದ್ರದ ಸಿಎಆರ್‌ ಕವಾಯತು ಮೈದಾನದಲ್ಲಿಂದು ಹಮಿಕೊಂಡಿದ್ದ ಮಾಸಿಕ ಪರೇಡ್‌ನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕ್ರಿಮಿನಲ್‌ಗಳ ಜೊತೆ ಸೇರಿಕೊಂಡರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ, ಯಾವ ಕಾರಣಕ್ಕೂ ಅಂತಹ ಸಿಬ್ಬಂದಿಯನ್ನು ಬಿಡುವು ದಿಲ್ಲ, ಪೊಲೀಸ್‌‍ ಇಲಾಖೆಗೆ ಸೇರಿದ್ದೀರಿ, ಒಂದು ಟೀಂ ಆಗಿ ಉತ್ತಮವಾಗಿ ಕೆಲಸ ಮಾಡಬೇಕು ಎಂದು ಅವರು ಎಚ್ಚರಿಸಿದರು.

ಬಂದೋಬಸ್ತ್‌ ವೇಳೆ ಮೊದಲು ನಿಮನ್ನು ನೀವು ರಕ್ಷಣೆ ಮಾಡಿಕೊಂಡು ಹೆಲೆಟ್‌, ಲಾಠಿ ಹಿಡಿದು ಕರ್ತವ್ಯದಲ್ಲಿ ತೊಡಗಿಕೊಂಡರೆ ಸಾರ್ವಜನಿಕರನ್ನು ರಕ್ಷಣೆ ಮಾಡಬಹುದು ಎಂದು ಸಿಬ್ಬಂದಿಗಳಿಗೆ ಸಲಹೆ ನೀಡಿದರು.

ಇತ್ತೀಚೆಗೆ ಬಂದೋಬಸ್ತ್‌ನಲ್ಲಿ ಯಾರೂ ಕೂಡ ಹೆಲೆಟ್‌ ಹಾಗೂ ಲಾಠಿ ತೆಗೆದುಕೊಂಡು ಹೋಗದಿರುವುದನ್ನು ಗಮನಿಸಿದ್ದೇನೆ. ಕಾಟಾಚಾರಕ್ಕೆ ನಿಂತರೆ ಆಗುವುದಿಲ್ಲ. ಪ್ರತಿ ಹಂತದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅತಿಮುಖ್ಯ. ಅಧಿಕಾರಿಗಳು ಬಂದೋಬಸ್ತ್‌ ಕರ್ತವ್ಯಕ್ಕೆ ಹೋಗುವ ಸಿಬ್ಬಂದಿಯನ್ನು ತಪಾಸಣೆ ಮಾಡಿ ಕಳುಹಿಸಬೇಕು ಎಂದರು.

ನೀವು ಕರ್ತವ್ಯಕ್ಕೆ ತೆರಳುವಾಗ ಸಮವಸ್ತ್ರ ಇದ್ದರೆ ಸಾಲುವುದಿಲ್ಲ, ಬಂದೋಬಸ್ತ್‌ ನೋಡಿಕೊಳ್ಳುವವರು ಆಯುಧಗಳ ಜೊತೆಗೆ ತೆರಳಬೇಕು. ನಗರಕ್ಕೆ ಕೆಎಸ್‌‍ಆರ್‌ಪಿ ತುಕಡಿ ಬಂದಾಗಲೂ ಸಹ ಕಡ್ಡಾಯವಾಗಿ ಲಾಠಿ, ಹೆಲೆಟ್‌ ಜೊತೆಯಲ್ಲಿರಬೇಕು ಎಂದು ಅವರು ಹೇಳಿದರು.

ಸರ್ಕಾರದ ಗೃಹ ಇಲಾಖೆಯಿಂದ ಪೊಲೀಸ್‌‍ ಇಲಾಖೆಗೆ ಸೌಲಭ್ಯಗಳು ಬರುತ್ತಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅದೇ ರೀತಿ ಸಮಾಜಕ್ಕೆ ಒಳ್ಳೆಯ ರೀತಿ ಸೇವೆ ಮಾಡಲು ನೀವು ಕಾರಣರಾಗಬೇಕು ಎಂದು ಅವರು ತಿಳಿಸಿದರು.

ವೃತ್ತಿ ಆಧಾರಿತ ಹಾಗೂ ವೈಯಕ್ತಿಕ ಜೀವನ ಎರಡನ್ನೂ ನಿಭಾಯಿಸಬೇಕು. ಹಬ್ಬಗಳನ್ನು ಕುಟುಂಬದೊಂದಿಗೆ ಆಚರಿಸಿ, ಕರ್ತವ್ಯವಿದ್ದಾಗ ನಿಷ್ಠೆಯಿಂದ ಸೇವೆ ಸಲ್ಲಿಸಿ ಬೆಂಗಳೂರು ನಗರಕ್ಕೆ ಒಳ್ಳೆಯ ಹೆಸರು ಬರಲು ಕಾರಣರಾಗಬೇಕು ಎಂದು ಸಿಬ್ಬಂದಿಗಳಿಗೆ ಕರೆ ನೀಡಿದರು.

ಪೊಲೀಸ್‌‍ ಸಿಬ್ಬಂದಿಗಳಿಗಾಗಿ ಆರೋಗ್ಯ ತಪಾಸಣೆಗಾಗಿ ಖುಷಿ ಅಭಿಯಾನ ಆರಂಭವಾಗಿದೆ. ಎಲ್ಲಾ ಸಿಬ್ಬಂದಿಯೂ ತಪಾಸಣೆ ಮಾಡಿಸಿಕೊಂಡು ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕಾರ್ಯಕ್ರಮ ಯಶಸ್ವಿಯಾದರೆ ಮೂರು ತಿಂಗಳಿಗೊಮೆ ಈ ಅಭಿಯಾನವನ್ನು ಮಾಡಲಾಗುವುದು ಎಂದರು.

ಪ್ರತಿ ಶುಕ್ರವಾರ ಕಡ್ಡಾಯವಾಗಿ ಪೆರೇಡ್‌ನಲ್ಲಿ ಪಾಲ್ಗೊಳ್ಳಬೇಕು. ಪರೇಡ್‌ ಮಾಡುವುದರಿಂದ ಶಿಸ್ತು ಬರಲಿದೆ. ಪರೇಡ್‌ ಮೈದಾನಕ್ಕೆ ಬಂದ ತಕ್ಷಣ ತಾವು ತರಬೇತಿ ಸಮಯದಲ್ಲಿ ಕಲಿಸಿದ ಪಾಠವನ್ನು ನೆನಪಿಸಿಕೊಳ್ಳಬೇಕು. ಕಾನ್ಸ್ ಸ್ಟೇಬಲ್‌ ಮಟ್ಟದಿಂದ ಅಧಿಕಾರಿ ಮಟ್ಟದವರೆಗೂ ಪರೇಡ್‌ನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಪ್ರತಿ ಮಂಗಳವಾರ ಮತ್ತು ಶುಕ್ರವಾರ ಇಲಾಖೆಯ ನಿಯಮಾನುಸಾರ ಎಷ್ಟು ಸಿಬ್ಬಂದಿ ಇರುತ್ತಾರೊ, ಅಷ್ಟು ಮಂದಿಯೂ ವೆಪನ್‌ ಡ್ರಿಲ್‌, ಲಾಠಿ ಡ್ರಿಲ್‌ ಮಾಡಬೇಕು ಎಂದು ಅವರು ಸೂಚಿಸಿದರು. ಇದಕ್ಕೂ ಮೊದಲು ಉತ್ತಮವಾಗಿ ಪರೇಡ್‌ ಮಾಡಿದ ಕಾನ್‌್ಸಸೇಬಲ್‌ ಹಾಗೂ ಅಧಿಕಾರಿ ವರ್ಗವನ್ನು ಆಯುಕ್ತರು ಶ್ಲಾಘಿಸಿದರು.

ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಅನ್ಯಾಯದ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತೇನೆ : ಎಸ್‌‍.ನಾರಾಯನ್

ಬೆಂಗಳೂರು,ಸೆ.12– ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ಅನ್ಯಾಯದ ವಿರುದ್ಧ ನಾನು ಕಾನೂನು ಹೋರಾಟ ನಡೆಸುತ್ತೇನೆ, ಧರ್ಮೋ ರಕ್ಷತಿ ರಕ್ಷಿತಃ ಎಂದು ಖ್ಯಾತ ನಟ, ನಿರ್ದೇಶಕರಾದ ಎಸ್‌‍.ನಾರಾಯಣ ಹೇಳಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ನನ್ನ ಹಾಗೂ ನನ್ನ ಕುಟುಂಬದ ಮೇಲೆ ಸೊಸೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು. ಆಕೆ ಪೊಲೀಸ್‌‍ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾನೂನು ಪ್ರಕಾರ ಪ್ರಕ್ರಿಯೆಗಳು ನಡೆಯಲಿ. ನಾನು ಅದನ್ನು ಕಾನೂನಿನ ಮೂಲಕವೇ ಎದುರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ಇಂದಿನ ಸಮಾಜದಲ್ಲಿ ಮೌಲ್ಯಗಳು ಹಾಳಾಗುತ್ತಿವೆ. ಸಂಸ್ಕಾರ ಮರೆಯಾಗುತ್ತಿದೆ. ಇದು ಸಾಕಷ್ಟು ನೋವು ತರುತ್ತಿದೆ. ಇಂತಹ ಘಟನೆಗಳಿಗೆ ಪ್ರತಿಷ್ಠಿತ ವ್ಯಕ್ತಿಗಳನ್ನು ಟಾರ್ಗೆಟ್‌ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಎಂದು ಹೇಳಿದರು.

ಪಾಶ್ಚಿಮಾತ್ಯ ಸಂಸ್ಕೃತಿಗೆಮಾರು ಹೋಗಿ ಈಗ ಕೆಲವರು ನಮತನವನ್ನೇ ಮರೆಯುತ್ತಿದ್ದಾರೆ. ಕಾಲುಂಗುರ ತೊಡುವುದು, ಹಣೆಗೆ ಸಿಂಧೂರ, ಕೊರಳಿಗೆ ಮಾಂಗಲ್ಯ ಸರ ತೊಡುವುದನ್ನೂ ಸಹ ಕೆಲವರು ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿ ಮುಂದೆ ಯಾವ ಹಂತಕ್ಕೆ ತಲುಪುತ್ತದೆ ಎಂಬುದೇ ನನಗೆ ಕಳವಳ ಮೂಡಿಸಿದೆ.

ನಮ ಕುಟುಂಬದಲ್ಲಿ ಯಾರೂ ಕೂಡ ಆಕೆಗೆ ಯಾವುದೇ ಹಿಂಸೆ ನೀಡಿಲ್ಲ. ನಮ ಮನೆಯ ಹೆಣ್ಣುಮಗಳು ಎಂಬಂತೆ ನೋಡಿಕೊಂಡಿದ್ದೆವು. ಆದರೆ ಸುಮಾರು ಒಂದೂವರೆ ವರ್ಷದ ನಂತರ ಈಗ ನಮ ಕುಟುಂಬದ ಮೇಲೆ ದೂರು ನೀಡಿರುವುದರ ಹಿಂದೆ ಯಾವುದೋ ದುರುದ್ದೇಶವಿದ್ದಂತೆ ಕಾಣುತ್ತಿದೆ. ಕಾನೂನಿನ ಮೇಲೆ ನನಗೆ ನಂಬಿಕೆಯಿದ್ದು, ಸತ್ಯ ಹೊರಬರಲಿದೆ ಎಂದು ಹೇಳಿದರು. ಆದರೆ ಇಂತಹ ಘಟನೆಗಳಿಂದ ಕುಟುಂಬದಲ್ಲಿ ಮನಃಶಾಂತಿ ಹಾಳಾಗುತ್ತದೆ. ಇದರ ನೋವು ಏನು ಎಂಬುದು ಅನುಭವಿಸಿದವರಿಗೇ ತಿಳಿದಿರುತ್ತದೆ ಎಂದು ಭಾವುಕರಾದರು.

ಪೊತೀಸ್‌‍ ಬಟ್ಟೆ ಅಂಗಡಿಗಳ ಮೇಲೆ ಐಟಿ ದಾಳಿ

ಬೆಂಗಳೂರು,ಸೆ.12- ಕೋಟ್ಯಂತರ ರೂ. ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡು ಮೂಲದ ಪೊತೀಸ್‌‍ ಬಟ್ಟೆ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ)ಯ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದ್ದಾರೆ.

ಚೆನ್ನೈನಿಂದ ಆಗಮಿಸಿದ್ದ 30ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳಗ್ಗೆಯೇ ನಗರದ ಕೆ.ಜಿ.ರಸ್ತೆಯಲ್ಲಿರುವ ಪೊತೀಸ್‌‍ ಸೇರಿದಂತೆ ಹಲವು ಬಟ್ಟೆ ಮಳಿಗೆಗಳ ಮೇಲೆ ದಾಳಿ ನಡೆಸಿ ತೆರಿಗೆ ವಂಚನೆ ಪ್ರಕರಣ ಸಂಬಂಧ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೆಲವು ಬಟ್ಟೆ ಮಳಿಗೆಗಳು ಇನ್ನು ಬಾಗಿಲು ತೆರೆದಿರಲಿಲ್ಲ. ಐಟಿ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ನೀಡಿ ಬಲವಂತವಾಗಿ ಬೀಗ ತೆರೆಸಿ ಪರಿಶೀಲನೆ ನಡೆಸಿದ್ದಾರೆ. ಮೈಸೂರುರಸ್ತೆಯ ಟೆಂಬರ್‌ ಲೇಔಟ್‌, ಗಾಂಧಿನಗರದ ಅತೀ ದೊಡ್ಡ ಶೋ ರೂಮ್‌ ಮೇಲೆ ಐಟಿ ದಾಳಿಯಾಗಿದೆ. 30ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತ್ಯೇಕ ತಂಡವಾಗಿ ಪೊತೀಸ್‌‍ ಮಳಿಗೆ ಮೇಲೆ ದಾಳಿ ನಡೆಸಲಾಗಿದೆ. ಆದಾಯ ತೆರಿಗೆ ವಂಚನೆ ಹಿನ್ನಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

ಚೆನ್ನೈಯಿಂದ ಬೆಂಗಳೂರಿಗೆ ಬಂದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ಟೆಂಬರ್‌ ಲೇಔಟ್‌ನಲ್ಲಿರುವ ಪೊತೀಸ್‌‍ ಮಳಿಗೆ ಮೇಲೆ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ನಗದು ವಹಿವಾಟು, ಆನ್ಲೈನ್‌ ವಹಿವಾಟು, ಮಳಿಗೆಯಲ್ಲಿರುವ ಬಟ್ಟೆಗಳು, ಮೌಲ್ಯ ಸೇರಿದಂತೆ ಮಳಿಗೆಯಲ್ಲಿನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಈ ಪೊತೀಸ್‌‍ ಮಳಿಗೆಗಳು ಚೆನ್ನೈ ಉದ್ಯಮಿಗೆ ಸೇರಿದ ಮಳಿಗೆಗಳಾಗಿವೆ. ರೇಷೆ ಸೀರೆಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದರು. ಆದರೆ ಇಂದು ಎಲ್ಲಾ ರೀತಿಯ ಉಡುಪುಗಳನ್ನು ಮಾರಾಟ ಮಾಡಲಾಗುತ್ತದೆ.

ಚೆನ್ನೈನಲ್ಲಿರುವ ಪ್ರಮುಖ ಅಂಗಡಿಯನ್ನು ಪೊತೀಸ್‌‍ ಪ್ಯಾಲೇಸ್‌‍ ಎಂದು ಕರೆಯಲಾಗುತ್ತದೆ. ಕೆಲವೇ ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದ ಪೊತೀಸ್‌‍ ಬಟ್ಟೆ ಮಳಿಗೆಯ ಶೋ ರೂಮ್‌ಗಳು ಬೆಂಗಳೂರು, ತಮಿಳುನಾಡು ಸೇರಿದಂತೆ ಹಲವು ಕಡೆ ಇವೆ.

ದೆಹಲಿ ಹೈಕೋರ್ಟ್‌ಗೆ ಬಾಂಬ್‌ ಬೆದರಿಕೆ

ನವದೆಹಲಿ,ಸೆ.12- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಹೈಕೋರ್ಟ್‌ಗೆ ಬಾಂಬ್‌ ಬೆದರಿಕೆ ಪತ್ರ ಬಂದಿದ್ದು, ಆವರಣದಲ್ಲಿರುವ ಎಲ್ಲರನ್ನು ಸ್ಪೋಟಿಸಿ ಕಗ್ಗೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸರು ಹೈಕೋರ್ಟ್‌ನಲ್ಲಿದ್ದ ನ್ಯಾಯಾಧೀಶರು, ವಕೀಲರು, ದೂರುದಾರರು, ಕಕ್ಷಿದಾರರು, ಸಾರ್ವಜನಿಕರು, ಸಿಬ್ಬಂದಿ ಸೇರಿದಂತೆ ಎಲ್ಲರನ್ನು ಹೊರ ಕಳುಹಿಸಿದ್ದಾರೆ.

ನ್ಯಾಯಾಧೀಶರ ಕೊಠಡಿಯಲ್ಲಿ ಮತ್ತು ಆವರಣದ ಇತರ ಸ್ಥಳಗಳಲ್ಲಿ ಮೂರು ಸ್ಫೋಟಕಗಳನ್ನು ಇಡಲಾಗಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಮಧ್ಯಾಹ್ನ 2 ಗಂಟೆಯೊಳಗೆ ಸ್ಥಳಾಂತರ ಪೂರ್ಣಗೊಳಿಸಬೇಕು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ನ್ಯಾಯಾಧೀಶರ ಕೊಠಡಿ ಮಧ್ಯಾಹ್ನ ಇಸ್ಲಾಮಿಕ್‌ ಪ್ರಾರ್ಥನೆಯ ನಂತರ ಸ್ವಲ್ಪ ಸಮಯದ ನಂತರ ಸ್ಫೋಟಗೊಳ್ಳುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಈ ಪತ್ರವು ಪಾಕಿಸ್ತಾನದ ಐಎಸ್‌‍ಐ ಕೋಶಗಳೊಂದಿಗಿನ ಸಂಪರ್ಕಗಳನ್ನು ಉಲ್ಲೇಖಿಸಿದೆ. ಇಮೇಲ್‌ ಮೂಲಕವೂ ಬೆದರಿಕೆ ಸಂದೇಶ ಬಂದಿದೆ. ಅದರಲ್ಲಿ ನ್ಯಾಯಾಲಯದ ಬಗ್ಗೆ ಉಲ್ಲೇಖಿಸಲಾಗಿದೆ. ಆದರೆ ನಿಖರವಾದ ಸ್ಥಳವನ್ನು ನಿರ್ದಿಷ್ಟಪಡಿಸಲಾಗಿಲ್ಲ.

ಬಾಂಬ್‌ ಪತ್ತೆ ಮತ್ತು ವಿಲೇವಾರಿ ದಳವನ್ನು ತಕ್ಷಣವೇ ನಿಯೋಜಿಸಲಾಯಿತು ಮತ್ತು ಸಂಪೂರ್ಣ ಶೋಧಕ್ಕಾಗಿ ಪ್ರದೇಶವನ್ನು ಸುತ್ತುವರಿಯಲಾಯಿತು.ಇತ್ತೀಚಿನ ತಿಂಗಳುಗಳಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ವಿವಿಧ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಇದೇ ರೀತಿಯ ವಂಚನೆ ಬೆದರಿಕೆಗಳು ಬಂದಿರುವ ನಡುವೆಯೇ ಈ ಘಟನೆ ನಡೆದಿದೆ.