Home Blog Page 1927

ಶೆಟ್ಟರ್‌ಗೆ ಡಿಸಿಎಂ ಸ್ಥಾನ ನೀಡುವಂತೆ ಸಿಎಂಗೆ ಪತ್ರ

ಬೆಂಗಳೂರು,ಅ.1- ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯಿತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪದ ನಡುವೆಯೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಮಂಜುನಾಥ ಯಂಟ್ರಾವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕಾಂಗ್ರೆಸ್‍ನಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಯ ಚರ್ಚೆಗಳು ನಡೆದ ವೇಳೆಯಲ್ಲಿ ಪ್ರಭಾವಿ ಮುಖಂಡರಾಗಿರುವ ಸಚಿವ ಎಂ.ಬಿ.ಪಾಟೀಲ್ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಸಿದ್ದರಾಮಯ್ಯ ಅವರ ಆಪ್ತರಾಗಿರುವ ಎಂ.ಬಿ.ಪಾಟೀಲ್‍ಗೆ ಪೈಪೋಟಿ ನೀಡುವಂತೆ ಜಗದೀಶ್ ಶೆಟ್ಟರ್ ಅವರ ಹೆಸರು ಕೇಳಿಬಂದಿದೆ.

ಶ್ಯಾಮನೂರು ಶಿವಶಂಕರಪ್ಪ ಅವರು ಸಮುದಾಯಕ್ಕೆ ಉಪಮುಖ್ಯಮಂತ್ರಿ ಹುದ್ದೆ ಅಗತ್ಯವಿಲ್ಲ. ನಮಗೇನಿದ್ದರೂ ಮುಖ್ಯಮಂತ್ರಿ ಸ್ಥಾನವೇ ಬೇಕು ಎಂದು ಹೇಳಿಕೆ ನೀಡಿದ್ದರು. ಅದರ ಹೊರತಾಗಿಯೂ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಜಾತಿವಾರು ಆದ್ಯತೆ ನೀಡಬೇಕು. 5 ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು ಎಂದು ಚರ್ಚೆಗಳಾಗುತ್ತಿವೆ.

ಮಂಗೋಲಿಯಾದಲ್ಲಿ 648 ಮಿಲಿಯನ್ ಡಾಲರ್ ಗುತ್ತಿಗೆ ಪಡೆದ ಎಂಇಐಎಲ್

ಈ ಹಂತದಲ್ಲಿ ಜಗದೀಶ್ ಶೆಟ್ಟರ್‍ರನ್ನು ಲಿಂಗಾಯಿತ ಸಮುದಾಯದಿಂದ ಪರಿಗಣಿಸಬೇಕು ಎಂಬ ಬೇಡಿಕೆ ಸಂಚಲನ ಮೂಡಿಸಿದೆ. ವಿಧಾನಸಭೆ ಚುನಾವಣಾ ವೇಳೆ ಬಿಜೆಪಿಯಿಂದ ಕಾಂಗ್ರೆಸ್‍ಗೆ ವಲಸೆ ಬಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಅವರನ್ನು ಕಾಂಗ್ರೆಸ್ ಗೌರವಯುತವಾಗಿ ನಡೆಸಿಕೊಳ್ಳುವ ಸಲುವಾಗಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದೆ.

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 209 ರೂ. ಏರಿಕೆ

ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಗದೀಶ್ ಶೆಟ್ಟರ್ ಅವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬ ಚರ್ಚೆಗಳಿವೆ. ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದ ಅಸಮಾಧಾನಗೊಂಡು ಪಕ್ಷಾಂತರ ಮಾಡುತ್ತಿರುವ ಹಲವು ನಾಯಕರನ್ನು ಸೆಳೆಯಲು ಜಗದೀಶ್ ಶೆಟ್ಟರ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಉಪಮುಖ್ಯಮಂತ್ರಿ ಹುದ್ದೆ ಚರ್ಚೆಯಾದ ಹೊತ್ತಿನಲ್ಲಿ ಅವರ ಹೆಸರು ಕೇಳಿಬಂದಿರುವುದು ಕುತೂಹಲ ಕೆರಳಿಸಿದೆ.

ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಬೆಳಗಾವಿಯಲ್ಲಿ ವೇದಿಕೆ ಸಿದ್ದ

ಬೆಂಗಳೂರು,ಅ.1- ಕುರುಬ ಸಮುದಾಯದಲ್ಲೇ ದೇಶಾದ್ಯಂತ ಪ್ರಭಾವಿ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ವಿರೋಧಿಗಳಿಗೆ ಅಕ್ಟೋಬರ್ 3 ರಂದು ನಡೆಯಲಿರುವ ರಾಷ್ಟ್ರೀಯ ಸಮಾವೇಶದಲ್ಲಿ ಪ್ರತ್ಯುತ್ತರ ನೀಡಲಿದ್ದಾರೆ.

ಬೆಳಗಾವಿಯಲ್ಲಿ ಅಕ್ಟೋಬರ್ 3 ರಂದು ನಡೆಯುವ ರಾಷ್ಟ್ರೀಯ ಮಟ್ಟದ ಕುರುಬರ ಸಮಾವೇಶ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಡುತ್ತಿದೆ. ಸುಮಾರು 2 ಲಕ್ಷ ಜನರಿಗೂ ಮೇಲ್ಪಟ್ಟ ಪ್ರತಿನಿಧಿಗಳು ಭಾಗವಹಿಸುವ ಈ ಸಮಾವೇಶದಲ್ಲಿ ವಿವಿಧ ರಾಜ್ಯಗಳ ನೂರಾರು ಪ್ರಮುಖರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಕಾಂಗ್ರೆಸ್‍ನಲ್ಲಿ ಒಳಬೇಗುದಿಗಳು ಹೆಚ್ಚುತ್ತಿರುವ ಸಂದರ್ಭದಲ್ಲೇ ನಡೆಯುತ್ತಿರುವ ಅಖಿಲ ಭಾರತೀಯ ರಾಷ್ಟ್ರೀಯ ಕುರುಬ ಸಮಾವೇಶ ಮತ್ತು 9ನೇ ವಾರ್ಷಿಕ ರಾಷ್ಟ್ರೀಯ ಪ್ರತಿನಿಧಿಗಳ ಮಹಾ ಸಮಾವೇಶ ಹಾಗೂ ರಾಷ್ಟ್ರೀಯ ಸನ್ಮಾನ ಕಾರ್ಯಕ್ರಮಗಳು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳಿಗೆ ಇದು ಪ್ರತ್ಯುತ್ತರವಾಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಅರಣ್ಯ ಇಲಾಖೆಯ ಕಾರ್ಯಕ್ಕೆ ರಾಜ್ಯಪಾಲರ ಮೆಚ್ಚುಗೆ

ಇತ್ತೀಚೆಗೆ ಕಾಂಗ್ರೆಸ್‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‍ಹಿಂದುಳಿದ ವರ್ಗಗಳ ಸಮಾವೇಶದ ಪೂರ್ವಭಾವಿ ಸಭೆ ನಡೆಸಿ, ಅಲ್ಲಿ ಭಾಷಣ ಮಾಡುವ ವೇಳೆ ಸಿದ್ದರಾಮಯ್ಯನವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಸರ್ಕಾರದಲ್ಲಿ ಕೆಲವರಿಗೆ ಮಾತ್ರ ಆದ್ಯತೆ ಸಿಗುತ್ತಿದೆ. ಒಂದು ಸಮುದಾಯಕ್ಕೆ ಎಲ್ಲಾ ಅವಕಾಶಗಳೂ ಲಭ್ಯವಾಗುತ್ತಿವೆ. ಸಣ್ಣಪುಟ್ಟ ಹಾಗೂ ಹಿಂದುಳಿದ ವರ್ಗಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನ ಹೊರಹಾಕಿದರು.

ಅದರ ಬೆನ್ನಲ್ಲೇ ಇತ್ತೀಚೆಗೆ ಹಿರಿಯ ಕಾಂಗ್ರೆಸ್ ನಾಯಕ ಶ್ಯಾಮನೂರು ಶಿವಶಂಕರಪ್ಪ ಲಿಂಗಾಯಿತರನ್ನು ಕಡೆಗಣಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ಗೊಂದಲಗಳಿಗೆ ಸಮಾವೇಶದಲ್ಲಿ ಸಿದ್ದರಾಮಯ್ಯ ತಕ್ಕ ಉತ್ತರ ನೀಡುವ ಸಾಧ್ಯತೆಯಿದೆ. ಕರ್ನಾಟಕದಲ್ಲಷ್ಟೇ ಅಲ್ಲದೆ ದಕ್ಷಿಣ ಭಾರತದ ರಾಜ್ಯಗಳಲ್ಲೂ ಹಿಂದುಳಿದ ವರ್ಗಗಳ ಪ್ರಭಾವಿ ನಾಯಕರಾಗಿರುವ ಸಿದ್ದರಾಮಯ್ಯ ಕುರುಬ ಸಮುದಾಯದಲ್ಲಿ ಏಕಮೇವಾದ್ವಿತೀಯರಾಗಿದ್ದಾರೆ.

ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೂ ರಾಜ್ಯ ರಾಜಕಾರಣದಲ್ಲಿ ತಮಗೆ ಆಸಕ್ತಿ ಎಂದು ಪದೇಪದೇ ಹೇಳುವ ಸಿದ್ದರಾಮಯ್ಯ, ಸಮುದಾಯದ ಸಂಘಟನೆ ವಿಷಯ ಬಂದಾಗ ಬದ್ಧತೆಯ ರಾಜಕಾರಣಿಯಾಗಿ ನಡೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ವೈಭವೀಕರಿಸಲು ಈ ಸಮಾವೇಶದಲ್ಲಿ ವೇದಿಕೆ ಸಜ್ಜುಗೊಂಡಿದೆ.

ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋದ ತಂದೆ, ತಾಯಿ ಸೇರಿ ಮೂವರೂ ನೀರುಪಾಲು

ಈ ಹಿಂದೆ ದಾವಣಗೆರೆಯಲ್ಲಿ ನಡೆದ ಸಿದ್ಧರಾಮೋತ್ಸವ ಶಕ್ತಿ ಪ್ರದರ್ಶನದ ವೇದಿಕೆಯಾಗಿತ್ತು. ಅದು ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಹೆಚ್ಚು ಬಲ ತಂದುಕೊಟ್ಟಿತ್ತು. ಎರಡನೇ ಬಾರಿ ಅಧಿಕಾರದ ಗದ್ದುಗೆ ಹಿಡಿದಿರುವ ಸಿದ್ದರಾಮಯ್ಯ ಅವರನ್ನು ಬೆಳಗಾವಿ ಸಮಾವೇಶ ಮತ್ತಷ್ಟು ಗಟ್ಟಿಗೊಳಿಸಲಿದೆ ಎಂಬ ಲೆಕ್ಕಾಚಾರಗಳಿವೆ.

ಗೋದಾಮಿನಲ್ಲಿ ಬೆಂಕಿ : ಅಪಾರ ಪ್ರಮಾಣದ ಸುಗಂಧದ್ರವ್ಯಗಳು ನಾಶ

ಕೋಲ್ಕತ್ತಾ,ಅ.1- ಸುಗಂಧದ್ರವ್ಯಗಳ ದಾಸ್ತಾನಿಟ್ಟಿದ್ದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಫಫ್ರ್ಯೂಮ್‍ಗಳು ಬೆಂಕಿಗೆ ಸುಟ್ಟುಹೋಗಿ ಭಾರೀ ನಷ್ಟ ಸಂಭವಿಸಿದೆ. ಕೋಲ್ಕತ್ತಾದ ಎಲ್ಲಿಯೆಟ್ ರಸ್ತೆ ಪ್ರದೇಶದಲ್ಲಿರುವ ವೇರ್‍ಹೌಸ್‍ನಲ್ಲಿ ಈ ಘಟನೆ ನಡೆದಿದ್ದು, ಸುಮಾರು 15ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಗಳು ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬಂದಿಗೆ ತಂದಿದ್ದಾರೆ.

ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಮಳಿಗೆಯಲ್ಲಿ ಯಾವ ನೌಕರರು ಇರದೆ ಇದ್ದುದ್ದರಿಂದ ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ವೇಳೆ ಒಬ್ಬ ಅಗ್ನಿಶಾಮಕ ಸಿಬ್ಬಂದಿಗೆ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅರಣ್ಯ ಇಲಾಖೆಯ ಕಾರ್ಯಕ್ಕೆ ರಾಜ್ಯಪಾಲರ ಮೆಚ್ಚುಗೆ

ಗೋದಾಮಿನಲ್ಲಿ ಬಾಡಿ ಸ್ಪ್ರೇ ಮತ್ತು ಸುಗಂಧ ದ್ರವ್ಯದಂತಹ ಹಲವಾರು ದಹಿಸುವ ಉತ್ಪನ್ನಗಳನ್ನು ದಾಸ್ತಾನು ಮಾಡಲಾಗಿತ್ತು. ಅದರೊಳಗೆ ಡ್ರೈ ಫ್ರೂಟ್ಸ್, ಚಿಪ್ಸ್ ಮತ್ತು ಚಾಕೊಲೇಟ್‍ಗಳನ್ನು ಸಂಗ್ರಹಿಸಲಾಗಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಗೋದಾಮಿನ ಎರಡೂ ಬದಿಯಲ್ಲಿ ಸಾಕಷ್ಟು ವಸತಿ ಫ್ಲಾಟ್‍ಗಳಿದ್ದು, ಬೆಂಕಿ ಹರಡುವ ಸಾಧ್ಯತೆ ಇರುವುದರಿಂದ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಅಲ್ಲಿನ ನಿವಾಸಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಿದ್ದಾರೆ.

ಮೈತ್ರಿಗೊಂದಲ ಪರಿಹಾರಕ್ಕೆ ಜೆಡಿಎಸ್ ಕಸರತ್ತು

ಬೆಂಗಳೂರು,ಅ.1- ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಉಂಟಾಗಿರುವ ಗೊಂದಲ ಪರಿಹರಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ಇಂದು ಪಕ್ಷದ ಶಾಸಕರು ಹಾಗೂ ಮುಖಂಡರ ಸಭೆಯನ್ನು ನಡೆಸಿದರು.

ಬಿಡದಿ ಬಳಿಯ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ಸಭೆ ನಡೆಸಿ, ಶಾಸಕರು ಹಾಗೂ ಪಕ್ಷದ ಮುಖಂಡರಲ್ಲಿ ಮೈತ್ರಿಯ ಬಗ್ಗೆ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವ ಪ್ರಯತ್ನ ಮಾಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಿಜೆಪಿಯೊಂದಿಗಿನ ಮೈತ್ರಿ ಬಗ್ಗೆ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿ ಅಕ್ಟೋಬರ್ 16 ರಂದು ಸಮಾನ ಮನಸ್ಕರ ಸಭೆ ಕರೆದಿರುವ ಬೆನ್ನಲ್ಲೇ ಗೌಡರು ಹಾಗೂ ಕುಮಾರಸ್ವಾಮಿ ಸಭೆ ಕರೆದು ಮೈತ್ರಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಪಕ್ಷಕ್ಕಾಗುವ ಅನುಕೂಲ, ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಅದರ ಅಗತ್ಯ, ಪಕ್ಷದ ಉಳಿವು ಮತ್ತು ಬೆಳವಣಿಗೆಗೆ ಏನೆಲ್ಲಾ ಪ್ರಯತ್ನ ಮಾಡಬೇಕಾಗಿದೆ ಎಂಬುದರ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 209 ರೂ. ಏರಿಕೆ

ಮೈತ್ರಿಯಿಂದ ಪಕ್ಷದ ಜಾತ್ಯತೀತ ಸಿದ್ಧಾಂತಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಲಾಗುತ್ತದೆ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದರು. ಆದರೂ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನಗೊಂಡು ಪಕ್ಷ ಬಿಡುವ ನಿರ್ಧಾರ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ಶಾಸಕರು, ಮಾಜಿ ಶಾಸಕರು, ಪ್ರಮುಖ ಮುಖಂಡರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಧಿಸಿದ ಅಭ್ಯರ್ಥಿಗಳ ಸಭೆ ಕರೆದು ಅಸಮಾಧಾನ ತಣಿಸುವ ಪ್ರಯತ್ನ ಮಾಡಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚೆಯಾಗಿಲ್ಲ. ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಉಳಿಸಿಕೊಂಡು ಉಳಿದ ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆಯಲ್ಲಿ ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಾವುದೇ ಕಾರಣಕ್ಕೂ ಮೈತ್ರಿಯಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು, ಕ್ಷೇತ್ರ ಹಾಗೂ ಸ್ಥಳೀಯ ಮಟ್ಟದಲ್ಲಿ ಎದುರಾಗುವ ಗೊಂದಲಗಳನ್ನು ಬಗೆಹರಿಸುತ್ತೇವೆ. ಪಕ್ಷದ ಉಳಿವಿಗಾಗಿ ಕೆಲವೊಂದು ಅನಿವಾರ್ಯತೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ.

ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋದ ತಂದೆ, ತಾಯಿ ಸೇರಿ ಮೂವರೂ ನೀರುಪಾಲು

ಆಪರೇಷನ್ ಹಸ್ತ ತಪ್ಪಿಸಲು ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿವೆ. ಮುಂಬರುವ ನಗರ ಸ್ಥಳೀಯ ಸಂಸ್ಥೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆ ಹಾಗೂ ಜನಪರ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಶಾಸಕರು ಹಾಗೂ ಮುಖಂಡರಿಂದ ಅಭಿಪ್ರಾಯ ಪಡೆದು ವರಿಷ್ಠರು ಮಾರ್ಗದರ್ಶನ ಮಾಡಿದ್ದಾರೆ.ಒಟ್ಟಾರೆ ಮೈತ್ರಿಯ ಸ್ವರೂಪದ ಬಗ್ಗೆ ಮನವರಿಕೆ ಮಾಡಿಕೊಟ್ಟು ಬಹಿರಂಗವಾಗಿ ಅಸಮಾಧಾನ ಹೊರಹಾಕದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮಂಗೋಲಿಯಾದಲ್ಲಿ 648 ಮಿಲಿಯನ್ ಡಾಲರ್ ಗುತ್ತಿಗೆ ಪಡೆದ ಎಂಇಐಎಲ್

ಮಂಗೋಲಿಯಾ,ಅ.1-ದೇಶದ ಪ್ರಮುಖ ಮೂಲಸೌಕರ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್), ಸರ್ಕಾರಿ ಸ್ವಾಮ್ಯದ ಮಂಗೋಲ್ ರಿಫೈನರಿ – ಎಲ್‍ಎಲ್ ಸಿಯಿಂದ 648 ಮಿಲಿಯನ್ ಡಾಲರ್ ಮೌಲ್ಯದ ಅತ್ಯಾಧುನಿಕ ಕಚ್ಚಾ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸುವ ಒಡಂಬಡಿಕೆ ಮಾಡಿಕೊಂಡಿದೆ.

ಎಂಇಐಎಲ್ ಹೈಡ್ರೋಕಾರ್ಬನ್ಸ್ ಅಧ್ಯಕ್ಷ ಪಿ ರಾಜೇಶ್ ರೆಡ್ಡಿ ಮತ್ತು ಮಂಗೋಲ್ ರಿಫೈನರಿ ಸ್ಟೇಟ್ ಸ್ವಾಮ್ಯ ಪ್ರತಿನಿಧಿಸುವ ಕಾರ್ಯನಿರ್ವಾಹಕ ನಿರ್ದೇಶಕಿ ಅಲ್ಟಾಂಟ್ಸೆಟ್ಸೆಗ್ ದಶ್ಡಾವಾ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 209 ರೂ. ಏರಿಕೆ

ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣಾರೆಡ್ಡಿ, ಉನ್ನತ ಅಧಿಕಾರಿಗಳು, ಗಣ್ಯರು ಮತ್ತು ಎರಡೂ ದೇಶಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮಂಗೋಲ್ ಸಂಸ್ಕರಣಾಗಾರ ಯೋಜನೆಯು ಸರ್ಕಾರದಿಂದ ಸರ್ಕಾರಕ್ಕೆ (ಜಿ- 2-ಜಿ) ಉಪಕ್ರಮವಾಗಿದೆ. ಪೂರ್ಣಗೊಂಡ ನಂತರ, ಸಂಸ್ಕರಣಾಗಾರವು ವಾರ್ಷಿಕವಾಗಿ 1.5 ಮಿಲಿಯನ್ ಟನ್ ಕಚ್ಚಾ ತೈಲವನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಇದು ಮಂಗೋಲಿಯದ ದೇಶೀಯ ಬೇಡಿಕೆಯಾದ ಗ್ಯಾಸೋಲಿನ್, ಡೀಸೆಲ್, ವಾಯುಯಾನ ಇಂಧನ ಮತ್ತು ಎಲ್‍ಪಿಜಿಯನ್ನು ಪೂರೈಸುತ್ತದೆ.

ಅರಣ್ಯ ಇಲಾಖೆಯ ಕಾರ್ಯಕ್ಕೆ ರಾಜ್ಯಪಾಲರ ಮೆಚ್ಚುಗೆ

ಮಂಗೋಲ್ ಸಂಸ್ಕರಣಾಗಾರವು ಒಂದು ಸವಾಲಿನ ಯೋಜನೆಯಾಗಿದೆ ಮತ್ತು ಇದನ್ನು ತೀವ್ರ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಒಟ್ಟಾರೆ ಭಾರತೀಯ ಮೂಲದ ಸಂಸ್ಥೆಯಾದ ಎಂ.ಇ.ಐ.ಎಲ್ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ತನ್ನದಾಗಿಸಿ ಕೊಳ್ಳುವತ್ತ ಮುನ್ನಡೆಯುವ ಮೂಲಕ ಸಾಧನೆಗೈದಿದೆ.

“ಪಕ್ಷ ತೊರೆಯುತ್ತಿರುವವರ ಸಮಾಧಾನಕ್ಕೆ ಹೆಚ್ಡಿಕೆ ಹಿಟ್ ಅಂಡ್ ರನ್ ಹೇಳಿಕೆ ನೀಡಿದ್ದಾರೆ”

ರಾಯಚೂರು,ಅ.1- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ 6 ತಿಂಗಳಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗುವುದಿಲ್ಲ, 5 ವರ್ಷ ಅಧಿಕಾರವ ಪೂರ್ಣಗೊಳಿಸಲಿದೆ ಎಂದು ಸಣ್ಣ ನೀರಾವರಿ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯೊಂದಿಗಿನ ಮೈತ್ರಿಯಿಂದ ಅಸಮಾಧಾನಗೊಂಡು ಜೆಡಿಎಸ್‍ನ ಬಹಳಷ್ಟು ನಾಯಕರು ಪಕ್ಷ ತೊರೆಯುತ್ತಿದ್ದಾರೆ. ಅವರಿಗೆ ಧೈರ್ಯ ಹೇಳುವ ಸಲುವಾಗಿ ಕುಮಾರಸ್ವಾಮಿ ರಾಜ್ಯ ಸರ್ಕಾರ ಪತನಗೊಳ್ಳಲಿದೆ ಎಂಬ ಹಿಟ್ ಅಂಡ್ ರನ್ ಹೇಳಿಕೆ ನೀಡಿದ್ದಾರೆ ಎಂದು ಲೇವಡಿ ಮಾಡಿದರು.

ಈ ಹಿಂದೆ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಅದನ್ನು ಉಳಿಸಿಕೊಳ್ಳಲಾಗಲಿಲ್ಲ. ಕಾಂಗ್ರೆಸ್‍ನ ಎಲ್ಲರೂ ಕುಮಾರಸ್ವಾಮಿಯವರಿಗೆ ಬೆಂಬಲ ನೀಡಿದ್ದರು. ಶಕ್ತಿ ಇದ್ದರೆ ಅವರು ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಕುಮಾರಸ್ವಾಮಿಯವರಿಂದ ಅದು ಸಾಧ್ಯವಾಗಲಿಲ್ಲ ಎಂದರು.

ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋದ ತಂದೆ, ತಾಯಿ ಸೇರಿ ಮೂವರೂ ನೀರುಪಾಲು

ಕುಮಾರಸ್ವಾಮಿ ಅವರಿಗೆ ಪಕ್ಷ ಉಳಿಸಿಕೊಳ್ಳಬೇಕಿದೆ. ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಹೀಗಾಗಿ ಕಾರ್ಯಕರ್ತರಿಗೆ ಧೈರ್ಯ ಹೇಳಲು ಅರ್ಥವಿಲ್ಲದ ಮಾತುಗಳನ್ನಾಡುತ್ತಿದ್ದಾರೆ. ಅದಕ್ಕೆ ಒತ್ತು ನೀಡಬೇಕಿಲ್ಲ. ಪ್ರತಿಯೊಂದರಲ್ಲೂ ಹಿಟ್ ಅಂಡ್ ರನ್ ಧೋರಣೆ ಅನುಸರಿಸುತ್ತಾರೆ ಎಂದು ತಿರುಗೇಟು ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರರನ್ನು ವರುಣ ಕ್ಷೇತ್ರದ ಶಾಸಕ ಎಂದು ಎಲ್ಲಿಯೂ ಹೇಳಿಲ್ಲ. ಸಹಜವಾಗಿ ರಾಜಕಾರಣಿಗಳು ಕ್ಷೇತ್ರದ ಜನ ಬಂದಾಗ ಈ ರೀತಿ ಮಾತನಾಡುವುದು ಸರ್ವೆ ಸಾಮಾನ್ಯ. ಈ ಹಿಂದೆ ದೇವೇಗೌಡರು ಪ್ರಧಾನಿಯಾಗಿದ್ದಾಗ ಕುಮಾರಸ್ವಾಮಿ ಹೇಗೆಲ್ಲಾ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದರು ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆ 209 ರೂ. ಏರಿಕೆ

ಬೆಂಗಳೂರು,ಅ.1- ವಾಣಿಜ್ಯ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 209 ರೂ. ದರ ಏರಿಕೆ ಮಾಡಲಾಗಿದೆ. ಒಟ್ಟಾರೆ ಬೆಲೆ 1731.50 ರೂ. ಆಗಿದೆ. ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಓಎಂಸಿ) 19 ಕೆಜಿ ತೂಕದ ವಾಣಿಜ್ಯ ಎಲ್‍ಪಿಜಿ ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು ದಿಢೀರ್ ಏರಿಕೆ ಮಾಡಿದ್ದು, ಇಂದಿನಿಂದಲೇ ಈ ಬೆಲೆಗಳು ಜಾರಿಗೆ ಬರಲಿವೆ.

ಸೆಪ್ಟೆಂಬರ್ 1ರ ಆರಂಭದಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು ಒಎಂಸಿ 158 ರೂ. ಕಡಿತಗೊಳಿಸಿತ್ತು. ಆದರೆ ಇದಾದ ಕೇವಲ ಒಂದು ತಿಂಗಳ ಬಳಿಕ ಈ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಈ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,522 ರೂ.ನಿಂದ 1,731.50 ರೂ.ಗೆ ಏರಿಕೆಯಾಗಿದೆ.

ಅರಣ್ಯ ಇಲಾಖೆಯ ಕಾರ್ಯಕ್ಕೆ ರಾಜ್ಯಪಾಲರ ಮೆಚ್ಚುಗೆ

ವಾಣಿಜ್ಯ ಮತ್ತು ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ. ಇದಕ್ಕೂ ಮೊದಲು ಆಗಸ್ಟ್‍ನಲ್ಲಿಯೂ ಆಯಿಲ್ ಮಾರ್ಕೆಟಿಂಗ್ ಕಂಪನಿಯು ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯನ್ನು 99.75 ರೂ. ಇಳಿಕೆ ಮಾಡಿತ್ತು. ಆದರೆ, ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಇತ್ತೀಚೆಗಷ್ಟೇ ಮೋದಿ ಸರ್ಕಾರ ಜನಸಾಮಾನ್ಯರಿಗೆ ಗೃಹ ಬಳಕೆಯ ಸಿಲಿಂಡರ್ ದರ ಇಳಿಕೆ ಮಾಡಿ ಗುಡ್‍ನ್ಯೂಸ್ ನೀಡಿತ್ತು. ಆದರೆ ಈಗ ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್ ದರವನ್ನು ಒಮ್ಮೆಲೇ 209 ರೂ.ನಷ್ಟು ಏರಿಕೆ ಮಾಡಿದ್ದು, ಇದರಿಂದ ಈಗಾಗಲೇ ದಿನಸಿ ಧಾನ್ಯಗಳ ಬೆಲೆ ಏರಿಕೆಯಿಂದ ಸಂಕಷ್ಟಕ್ಕೀಡಾಗಿರುವ ಹೊಟೇಲ್ ಹಾಗೂ ಇತರ ಆಹಾರೋದ್ಯಮ ನಡೆಸುತ್ತಿರುವವರಿಗೆ ಮತ್ತಷ್ಟು ಸಂಕಟವಾಗಲಿದೆ.

ಪ್ರಪಾತಕ್ಕೆ ಬಸ್ ಬಿದ್ದು 8 ಮಂದಿ ಸಾವು

ಚೆನ್ನೈ, ಅ.1- ಪ್ರವಾಸಿ ಬಸ್ಸೊಂದು ಪ್ರಪಾತಕ್ಕೆ ಬಿದ್ದು 8 ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ನೀಲಗಿರೀಸ್‍ನಲ್ಲಿ ನಡೆದಿದೆ. ಊಟಿಯಿಂದ ವಾಪಸ್ ಆಗುತ್ತಿದ್ದಾಗ ಸುಮಾರು 55 ಜನ ಪ್ರವಾಸಿಗರಿದ್ದ ಬಸ್ ನೀಲಗಿರೀಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳದ ಪ್ರಪಾತಕ್ಕೆ ಉರುಳಿಬಿದ್ದಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಆರು ಮಂದಿ ಸಾವನ್ನಪ್ಪಿದರೆ, ಇಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಸ್ಥಳೀಯರು, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಪಡೆ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ನಿನ್ನೆ ಸಂಜೆ 5.15 ರ ಸುಮಾರಿನಲ್ಲಿ ಊಟಿಯಿಂದ ತೆಂಕೇಶಿ ಕಡೆಗೆ ಬಸ್ ಬರುತ್ತಿತ್ತು. ಈ ಸಂದರ್ಭದಲ್ಲಿ ಕುನೂರಿನಿಂದ ಮೆಟ್ಟುಪಾಳ್ಯಂ ರಸ್ತೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಉರುಳಿಬಿದ್ದಿದೆ. ಬಸ್ ಉರುಳಿಬಿದ್ದ ರಭಸಕ್ಕೆ ಹಲವಾರು ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬಸ್ಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರನ್ನು ಹೊರತೆಗೆಯಲು ಬಸ್ಸನ್ನು ರೋಪ್ ಸಹಾಯದಿಂದ ಮೇಲೆತ್ತಬೇಕಾಯಿತು. ಗಾಯಾಳುಗಳನ್ನು ಕೊಯಮತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋದ ತಂದೆ, ತಾಯಿ ಸೇರಿ ಮೂವರೂ ನೀರುಪಾಲು

ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ, ಗಂಭೀರವಾಗಿ ಗಾಯಗೊಂಡವರಿಗೆ 1 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾಗಿರುವವರಿಗೆ 50 ಸಾವಿರ ರೂ. ಪರಿಹಾರ ಪ್ರಕಟಿಸಿದ್ದಾರೆ.

ಅರಣ್ಯ ಇಲಾಖೆಯ ಕಾರ್ಯಕ್ಕೆ ರಾಜ್ಯಪಾಲರ ಮೆಚ್ಚುಗೆ

ಬೆಂಗಳೂರು, ಅ.1- ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಅರಣ್ಯ ಇಲಾಖೆ ಮಾಡುತ್ತಿರುವ ಕಾರ್ಯಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಭವನದಲ್ಲಿಂದು ಅರಣ್ಯ ಇಲಾಖೆ 69ನೇ ವನ್ಯಜೀವಿ ಸಪ್ತಾಹದ ಬಗ್ಗೆ ಜನಜಾಗೃತಿ ಮೂಡಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಂಟೇಜ್ ವಾಹನ ಯಾನಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಮಾತನಾಡಿದ ಅವರು, ತಾವು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆಯವರ ಸಂಗ್ರಾಹಾಲಯದಲ್ಲಿ ಹಳೆಯ ವಾಹನಗಳನ್ನು ನೋಡಿದ್ದೆ.

ಅರಣ್ಯ ಇಲಾಖೆ ಬೆಂಗಳೂರಿನಲ್ಲಿ ವನ್ಯಜೀವಿ ಸಂರಕ್ಷಣೆಯ ಅರಿವು ಮೂಡಿಸಲು ಹಳೆಯ ವಾಹನ ಯಾನ ಆಯೋಜಿಸಿರುವುದಕ್ಕೆ ಸಂತಸ ತಂದಿದೆ ಎಂದರು.ಪ್ರಕೃತಿ ಪರಿಸರ ಉಳಿಸುವ ಅಗತ್ಯವನ್ನು ರಾಜ್ಯಪಾಲರು ಪ್ರತಿಪಾದಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಮಾದರಿಯಾಗಿದೆ. 6395 ಆನೆಗಳು ರಾಜ್ಯದಲ್ಲಿದ್ದು, ದೇಶದಲ್ಲೇ ನಾವು ಗಜ ಗಣತಿಯಲ್ಲಿ ಮೊದಲಿಗರಾಗಿದ್ದೇವೆ ಎಂದರು.

ಸಿಖ್ ಸಮುದಾಯ ಸಮಸ್ಯೆ ನಿವಾರಣೆಗೆ ಪ್ರಧಾನಿ ಮೋದಿ ಆದ್ಯತೆ : ಜೈಶಂಕರ್

ಅದೇ ರೀತಿ ಹುಲಿ ಗಣತಿಯಲ್ಲೂ ರಾಜ್ಯ ನಂ.2 ಸ್ಥಾನ ಪಡೆದಿದೆ. ಇಲಾಖೆಯ ಹಸಿರು ಹೊದಿಕೆ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ನಗರ ಪ್ರದೇಶಗಳಲ್ಲಿ ಕೂಡ ಜನರು ನೆಮ್ಮದಿಯಿಂದ ಉಸಿರಾಡಲು ಸಾಮಾಜಿಕ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಜುಲೈ 1ರಿಂದ ಇಲ್ಲಿಯವರೆಗೆ 4 ಕೋಟಿ 75 ಲಕ್ಷ ಸಸಿಗಳನ್ನು ನೆಡಲಾಗಿದೆ. ಮುಂದಿನ ಒಂದು ವಾರದಲ್ಲಿ ಉಳಿದ 25 ಲಕ್ಷ ಸಸಿ ನೆಟ್ಟು ಈ ವರ್ಷ 5 ಕೋಟಿ ಗಿಡ ನೆಡಬೇಕು ಎಂಬ ಗುರಿಯನ್ನು ಪೂರೈಸಲಾಗುವುದು ಎಂದರು.

ಹಳೆಯ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟು, ಅವುಗಳನ್ನು ಸಂಚಾರ ಯೋಗ್ಯವಾಗಿರುವಂತೆ ನಿರ್ವಹಣೆ ಮಾಡುತ್ತಿರುವ ಹಳೆಯ ವಾಹನಗಳ ಮಾಲೀಕರಿಗೆ ಅವರು ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋದ ತಂದೆ, ತಾಯಿ ಸೇರಿ ಮೂವರೂ ನೀರುಪಾಲು

ಮೈಸೂರು,ಅ.1- ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋದ ತಂದೆ, ತಾಯಿ ಸೇರಿದಂತೆ ಮೂವರೂ ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ಸರಗೂರು ತಾಲೂಕಿನ ಚಂಗೋಡನಹಳ್ಳಿಯಲ್ಲಿ ನಡೆದಿದೆ.ಶಾವರಬಾನು (35), ಮಹಮ್ಮದ್ ಕಪಿಲ್ (42), ಶಾಹಿರಾಬಾನು(20) ಮೃತಪಟ್ಟ ದುರ್ದೈವಿಗಳು.

ಬೆಂಗಳೂರು ಮೂಲದವರಾದ ಇವರು ಸಂಬಂಕರೊಬ್ಬರ ತಿಥಿ ಕಾರ್ಯಕ್ಕೆ ಚಂಗೋಡನಹಳ್ಳಿಗೆ ಬಂದಿದ್ದರು. ಕಾರ್ಯದ ನಂತರ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಶಾಹಿರಾಬಾನು ಕೈಕಾಲು ತೊಳೆಯಲು ಇಳಿದಾಗ ನೀರಿನ ರಭಸಕ್ಕೆ ಕಾಲು ಜಾರಿ ನಾಲೆಗೆ ಬಿದ್ದಿದ್ದು, ಪುತ್ರಿಯನ್ನು ರಕ್ಷಿಸಲು ಮುಂದಾದ ತಂದೆ ಹಾಗೂ ತಾಯಿ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(01-10-2023)

ಸುದ್ದಿ ತಿಳಿಯುತ್ತಿದ್ದಂತೆ ಸರಗೂರು ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮೂವರ ಮೃತದೇಹಗಳನ್ನು ಹೊರತೆಗೆದು, ಸರಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.ಈ ಸಂಬಂಧ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.