Home Blog Page 23

ಗಂಡನ ಕಿರುಕುಳದಿಂದ ನೊಂದು ಕಟ್ಟಡದಿಂದ ಹಾರಿ ಪತ್ನಿ ಆತ್ಮಹತ್ಯೆ ಯತ್ನ

ಬೆಂಗಳೂರು, ಅ.27- ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬರು ಕಟ್ಟಡವೊಂದರ ಮೂರನೇ ಮಹಡಿಯಿದ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಿಯಾ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಮಹಿಳೆಯಾಗಿದ್ದು, ಮಹಡಿಯಿಂದ ಬಿದ್ದ ಹಿನ್ನೆಲೆಯಲ್ಲಿ ಆಕೆಯ ಬೆನ್ನುಮೂಳೆ ಹಾಗೂ ಕಾಲಿಗೆ ಗಂಭೀರ ಪೆಟ್ಟು ಆಗಿದ್ದು, ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ನಿಕ್ಸನ್‌ ಎಂಬುವವರನ್ನು ಕಳೆದ 7 ವರ್ಷಗಳ ಹಿಂದೆ ಮದುವೆಯಾಗಿದ್ದ ಪ್ರಿಯಾ ಅವರಿಗೆ ಮಕ್ಕಳಿರಲಿಲ್ಲ. ಇತ್ತೀಚೆಗೆ ವೈದ್ಯರ ಚಿಕಿತ್ಸೆಯ ನಂತರ ಅವರಿಗೆ ಹೆಣ್ಣು ಮಗು ಜನಿಸಿತ್ತು. ದಂಪತಿ ಬಾಣಸವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಇತ್ತೀಚೆಗೆ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆಯುತ್ತಿತ್ತು.

ಪತಿಯ ಮದ್ಯವ್ಯಸನದಿಂದ ನೊಂದಿದ್ದ ಪ್ರಿಯಾ ಏಕಾಏಕಿ ಕಳೆದ ರಾತ್ರಿ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತಂತೆ ಬಾಣಸವಾಡಿ ಪೊಲೀಸರು ಪತಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು : ಕುಸಿದುಬಿದ್ದು ಆಟೋ ಚಾಲಕ ಸಾವು

ಬೆಂಗಳೂರು,ಅ.27- ಸರಕು ಸಾಗಾಣಿಕೆ ಆಟೋದ ಚಾಲಕನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ತಲಘಟ್ಟಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನವೀನ್‌ಕುಮಾರ್‌(25) ಮೃತ ಚಾಲಕ. ಭುವನೇಶ್ವರಿ ನಗರದಲ್ಲಿ ತಮ ಅಣ್ಣ ವಸಂತ್‌ ಅವರೊಂದಿಗೆ ನವೀನ್‌ಕುಮಾರ್‌ ವಾಸವಾಗಿದ್ದು ಟಾಟಾಏಸ್‌‍ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು.

ಕಳೆದ ಎರಡು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಮನೆ ಹತ್ತಿರದ ಆಸ್ಪತ್ರೆಯೊಂದರಲ್ಲಿ ನವೀನ್‌ ಕುಮಾರ್‌ ಚಿಕಿತ್ಸೆ ಪಡೆದಿದ್ದರು. ಆದರೆ ಮುಂಜಾನೆ 4 ಗಂಟೆ ಸಂದರ್ಭದಲ್ಲಿ ಪುನಃ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಕಿಮ್ಸೌ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಮಾರ್ಗಮಧ್ಯೆ ಆತ ಕೊನೆಯುಸಿರೆಳೆದಿದ್ದಾರೆ. ಘಟನೆ ಕುರಿತಂತೆ ಈಗ ತಲಘಟ್ಟಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಲ್ಲಿ ಮಂಡ್ಯ ಮೂಲದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು,ಅ.27– ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಕೆಂಗೇರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೃಷ್ಣ ಗಾರ್ಡನ್‌, 1ನೇ ಕ್ರಾಸ್‌‍ನ ಡಿ ಬ್ಲಾಕ್‌ನ ನಿವಾಸಿ ಅರ್ಪಿತ (24) ಆತಹತ್ಯೆ ಮಾಡಿಕೊಂಡಿರುವ ಯುವತಿ.

ಮೂಲತಃ ಮಂಡ್ಯದ ಮದ್ದೂರು ತಾಲ್ಲೂಕು ಕಾಡುಕೊತ್ತನಹಳ್ಳಿಯ ರೈತ ಪರಮೇಶ್‌ ಎಂಬುವರ ಪುತ್ರಿಯಾದ ಅರ್ಪಿತ ಕೃಷ್ಣಗಾರ್ಡನ್‌ನಲ್ಲಿ ಚಿಕ್ಕಪ್ಪ ಬಸವರಾಜ್‌ ಅವರ ಮನೆಯಲ್ಲಿ ವಾಸವಿದ್ದು, ದಯಾನಂದ ಡೆಂಟಲ್‌ ಕಾಲೇಜು ಆಸ್ಪತ್ರೆಯಲ್ಲಿ ಚೇರ್‌ ಅಸಿಸ್ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನ ಚಿಕ್ಕಮ ಸಿಟಿ ಮಾರ್ಕೆಟ್‌ಗೆ ಹೋಗಲು ಅರ್ಪಿತ ಅವರನ್ನು ಕರೆದಿದ್ದಾರೆ. ಆದರೆ ನನಗೆ ಹುಷಾರಿಲ್ಲ. ಮನೆಯಲ್ಲೇ ಇರುತ್ತೇನೆಂದು ಅರ್ಪಿತ ಹೇಳಿ ಕಳುಹಿಸಿದ್ದಾರೆ.

ಬಳಿಕ ಮನೆಯಲ್ಲಿ ಯಾರು ಇಲ್ಲದಿದ್ದಾಗ ಕೋಣೆಯಲ್ಲಿ ಕಬ್ಬಿಣದ ಕೊಂಡಿಗೆ ವೇಲ್‌ನಿಂದ ನೇಣುಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾರೆ. ಮನೆಗೆ ಚಿಕ್ಕಮ ವಾಪಸ್‌‍ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಹಲವು ದಿನಗಳಿಂದ ಅರ್ಪಿತ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಇದರಿಂದ ಆತಹತ್ಯೆ ಮಾಡಿಕೊಂಡಿರಬಹುದೆಂದು ಕುಟುಂಬದವರು ತಿಳಿಸಿದ್ದಾರೆ. ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು : ಡ್ರಗ್‌ ಪೆಡ್ಲರ್‌ ಬಳಿ ಇತ್ತು ಪಿಸ್ತೂಲ್‌ ಹಾಗೂ ನಾಲ್ಕು ಗುಂಡುಗಳು

ಬೆಂಗಳೂರು,ಅ.27- ಅಕ್ರಮವಾಗಿ ಪಿಸ್ತೂಲ್‌ ಮತ್ತು ಜೀವಂತ ಗುಂಡುಗಳನ್ನು ಹೊಂದಿದ್ದ ಡ್ರಗ್‌ ಪೆಡ್ಲರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಸುದ್ದಗುಂಟೆಪಾಳ್ಯದ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಪಕ್ಕದ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಅಕ್ರಮ ಶಸ್ತ್ರ ಹಾಗೂ ಮದ್ದು ಗುಂಡುಗಳೊಂದಿಗೆ ದುಷ್ಕೃತ್ಯವೆಸಗಲು ಸಜ್ಜಾಗುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸ್ಥಳದ ಮೇಲೆ ದಾಳಿ ಮಾಡಿ ಆರೋಪಿಯನ್ನು ಸುತ್ತುವರೆದು ವಶಕ್ಕೆ ಪಡೆದು ಅಂಗ ಶೋಧನೆ ಮಾಡಿದಾಗ ಆತನ ಬಳಿ ಒಂದು ಪಿಸ್ತೂಲು ಹಾಗೂ ನಾಲ್ಕು ಜೀವಂತ ಗುಂಡುಗಳಿರುವುದು ಕಂಡು ಬಂದಿದೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಾನು ಡ್ರಗ್‌ ಪೆಡ್ಲಿಂಗ್‌ ವ್ಯವಹಾರ ಮಾಡುತ್ತಿದ್ದು, ತನಗೆ ಪರಿಚಯವಿರುವ ಮಧ್ಯಪ್ರದೇಶದ ವ್ಯಕ್ತಿಯಿಂದ ಅನಧಿಕೃತವಾಗಿ ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳನ್ನು ಖರೀದಿಸಿದ್ದು, ಈ ಪಿಸ್ತೂಲ್‌ನಿಂದ ತನ್ನ ವಿರೋಧಿಗಳನ್ನು ಹೆದುರಿಸಿ ಮಾದಕ ವಸ್ತುಗಳ ಮಾರಾಟದ ವ್ಯವಹಾರಗಳನ್ನು ಮಾಡುತ್ತಿದ್ದುದಾಗಿ ಹೇಳಿದ್ದಾನೆ. ಆರೋಪಿಯನ್ನು ಪಿಸ್ತೂಲ್‌ ಹಾಗೂ ಜೀವಂತ ಗುಂಡುಗಳ ಸಮೇತ ಬಂಧಿಸಿ ಮುಂದಿನ ತನಿಖೆಕೈಗೊಂಡಿದ್ದಾರೆ.

ಈ ವಿಶೇಷ ಕಾರ್ಯಾಚರಣೆ ಯನ್ನು ಸಿಸಿಬಿ ಜಂಟಿ ಪೊಲೀಸ್‌‍ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಪೊಲೀಸ್‌‍ ಆಯುಕ್ತರು, ಸಹಾಯಕ ಪೊಲೀಸ್‌‍ ಆಯುಕ್ತರು ಹಾಗೂ ಅಧಿಕಾರಿ, ಸಿಬ್ಬಂದಿ ತಂಡ ಯಶಸ್ವಿಯಾಗಿ ಕೈಗೊಂಡಿದೆ.

ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳವು ಪ್ರಕರಣ ತನಿಖೆ ಚುರುಕು

ಬೆಂಗಳೂರು,ಅ.27- ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನ ಆರೋಪ ಕುರಿತ ತನಿಖೆ ವೇಗ ಪಡೆದುಕೊಂಡಿದೆ.ಪ್ರಕರಣದ ಆರೋಪಿಗಳೆಂದು ಗುರುತಿಸಲಾಗಿರುವ ಅಕ್ರಮ್‌, ಅಶ್ಫಾಕ್‌, ನದೀಮ್‌ ಮತ್ತು ಮುಷ್ತಾಕ್‌ ಮತಗಳ್ಳತನ ಕ್ಕೆಂದೇ ಕಾಲ್‌ ಸೆಂಟರ್‌ ಸ್ಥಾಪಿಸಿದ್ದು, ಈ ಸೆಂಟರ್‌ನಲ್ಲಿ ಐದು ಕಂಪ್ಯೂಟರ್‌ ಇರಿಸಿಕೊಂಡು 6,018 ಫಾರ್ಮ್‌ 7 ಅರ್ಜಿಗಳನ್ನು ಸ್ವೀಕರಿಸಿದ್ದರು.

ಈ ನಾಲ್ವರಲ್ಲಿ ಒಬ್ಬ ಆನ್‌ಲೈನ್‌ ರಾಜಕೀಯ ಸರ್ವೇಯರ್‌/ಮ್ಯಾನಿಪ್ಯುಲೇಟರ್‌, ಒಬ್ಬ ಡೇಟಾ ಆಪರೇಟರ್‌ ಮತ್ತು ಮತ್ತಿಬ್ಬರು ಆನ್‌ಲೈನ್‌ ಅರ್ಜಿಗಳನ್ನು ಸಲ್ಲಿಸುವಲ್ಲಿ ಪರಿಣತರಾಗಿದ್ದರು. ಆರೋಪಿಗಳು 6,018 ಅರ್ಜಿಗಳಿಗೆ ಲಾಗಿನ್‌ ಐಡಿಗಳನ್ನು ರಚಿಸಲು ದುರ್ಬಲ ವರ್ಗಗಳ 75 ಮಂದಿ ಮೊಬೈಲ್‌ ಸಂಖ್ಯೆಗಳನ್ನು ಬಳಸಿದ್ದಾರೆಂದು ಎಸ್‌‍ಐಟಿ ಮೂಲಗಳು ಮಾಹಿತಿ ನೀಡಿದೆ.

ಒಟಿಪಿ ಮೂಲಕ ಲಾಗಿನ್‌ ಐಡಿ ರಚಿಸಲಾಗಿದೆ. ಆರೋಪಿಗಳು 75 ಮೊಬೈಲ್‌ ಫೋನ್‌ ಸಂಖ್ಯೆಗಳನ್ನು ಹೇಗೆ ಪಡೆದರು? ಮೊಬೈಲ್‌ ಸಂಖ್ಯೆಗಳನ್ನು ಹ್ಯಾಕ್‌ ಮಾಡಿದ್ದರೇ? ಎಂಬುದರ ಕುರಿತು ವಿಚಾರಣೆ ನಡೆಸುತ್ತಿದೆ.ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌‍ಐಟಿ ಈಗಾಗಲೇ ಅಕ್ರಮ್‌, ನದೀಮ್‌ ಹಾಗೂ ಮುಷ್ತಾಕ್‌ನನ್ನು ವಿಚಾರಣೆ ನಡೆಸಿದ್ದು, ಮತ್ತೊಬ್ಬ ಆರೋಪಿಯ ಪತ್ತೆಗೆ ದುಬೈಗೆ ತೆರಳಲು ಸಿದ್ಧತೆ ನಡೆಸಿದೆ.

ಈ ವಂಚನೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಅರ್ಜಿಗಳ ಸಲ್ಲಿಕೆಗೆ ಡೇಟಾ ಆಪರೇಟರ್‌ ಅನ್ನು ಬಳಸಲಾಗಿದೆ. ನಂತರ ಈತ ನಾಲ್ವರ ಸಹಾಯ ಪಡೆದುಕೊಂಡಿದ್ದಾನೆ. ಈ ನಾಲ್ವರು ನಿರುದ್ಯೋಗಿಗಳಾಗಿದ್ದು, 25-30 ವರ್ಷ ವಯಸ್ಸಿನವರಾಗಿದ್ದಾರೆ. ನಾಲ್ವರು ಆರೋಪಿಗಳಿಗೆ ಪ್ರತಿ ಅರ್ಜಿಗೆ 80 ರೂ. ಪಾವತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

2023ರ ಚುನಾವಣೆಗೂ ಮುನ್ನ ಆಳಂದ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಅಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌‍ಐಟಿ). ನಾಲ್ವರು ಡೇಟಾ ಸೆಂಟರ್‌ ನಿರ್ವಾಹಕರನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆಗೊಳಪಡಿಸಿತ್ತು.

ಒಂದು ವಾರದ ಹಿಂದೆ ಎಸ್‌‍ಐಟಿ ಅಧಿಕಾರಿಗಳು ಈ ನಾಲ್ವರ ಮನೆಗಳ ಮೇಲೆ ದಾಳಿ ನಡೆಸಿ, ಏಳು ಲ್ಯಾಪ್‌ಟಾಪ್‌ಗಳು ಮತ್ತು 15 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿತ್ತು.
ಡೇಟಾ ಸೆಂಟರ್‌ ನಿರ್ವಾಹಕರಿಗೆ ಪ್ರತಿ ಫಾರ್ಮ್‌ 7 ಅರ್ಜಿಗೆ (ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಅಳಿಸಲು) 80 ರೂ. ಪಾವತಿಸಲಾಗಿದೆ ಎಂಬ ಆರೋಪಗಳ ಕುರಿತು ಎಸ್‌‍ಐಟಿ ತನಿಖೆ ನಡೆಸುತ್ತಿದೆ.

ಡಿಸೆಂಬರ್‌ 2022 ಮತ್ತು ಫೆಬ್ರವರಿ 2023ರ ನಡುವೆ ಒಟ್ಟು 6,018 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಒಟ್ಟು 4.8 ಲಕ್ಷ ರೂ. ಪಾವತಿಯಾಗಿದೆ ಎಂದು ತಿಳಿದುಬಂದಿದೆ.ಆಳಂದ ಶಾಸಕ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ್‌ ಅವರು 2023ರಲ್ಲಿ ದೂರು ನೀಡಿದ ನಂತರ ರಾಜ್ಯ ಪೊಲೀಸರು ಈ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಸೆಪ್ಟೆಂಬರ್‌ನಲ್ಲಿ ಸಿಐಡಿ(ಅಪರಾಧ ತನಿಖಾ ಇಲಾಖೆ) ತನಿಖೆ ವಹಿಸಿಕೊಂಡಿತ್ತು.

ಈ ನಡುವೆ ಎಸ್‌‍ಐಟಿ ತನಿಖೆಯನ್ನು ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಅವರ ನಿವಾಸದ ಬಳಿ ಮತದಾರರ ಸುಟ್ಟ ದಾಖಲೆಗಳ ರಾಶಿ ಪತ್ತೆಯಾಗಿತ್ತು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಎಸ್‌‍ಐಟಿ ಅಧಿಕಾರಿಗಳು, ಅರ್ಧ ಸುಟ್ಟ ಮತದಾರರ ಪಟ್ಟಿಯನ್ನು ಸಂಗ್ರಹಿಸಿ ಕಲಬುರಗಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು.ಇದರ ಬೆನ್ನಲ್ಲೇ ಕಳೆದ ವಾರ, ಆಳಂದದ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್‌ ಮತ್ತು ಅವರ ಪುತ್ರರಾದ ಹರ್ಷಾನಂದ್‌ ಮತ್ತು ಸಂತೋಷ್‌ ಗುತ್ತೇದಾರ್‌ ಅವರ ಮನೆಗಳ ಮೇಲೆ ಎಸ್‌‍ಐಟಿ ದಾಳಿ ನಡೆಸಿತ್ತು.

ಏತನಧ್ಯೆ ಪ್ರಕರಣದ ತನಿಖೆಗೆ ಎಸ್‌‍ಐಟಿ ಸಿಐಡಿ ಸಹಾಯವನ್ನು ಪಡೆದುಕೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಪ್ರಕರಣ ಸಂಬಂಧ ಸ್ಥಳೀಯ ಪೊಲೀಸರು, 2023ರ ಫೆಬ್ರವರಿ ತಿಂಗಳಿನಲ್ಲಿ ಮೊಹಮದ್‌ ಅಶ್ಫಾಕ್‌ ಎಂಬಾತನನ್ನು ವಿಚಾರಣೆ ನಡೆಸಿದ್ದರು. ಅಶ್ಫಾಕ್‌ ತನ್ನ ಬಳಿ ಇರುವ ಎಲೆಕ್ಟ್ರಾನಿಕ್‌ ಸಾಧನಗಳನ್ನು ಒಪ್ಪಿಸುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದರೆ ನಂತರ ದುಬೈಗೆ ಪರಾರಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

ಅಶ್ಫಾಕ್‌ ತನ್ನ ಸಹಚರರಾದ ಮೊಹಮದ್‌ ಅಕ್ರಂ ಮತ್ತು ಇತರ ಮೂವರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬುದನ್ನು ಎಸ್‌‍ಐಟಿ ಪತ್ತೆ ಮಾಡಿದ್ದು, ಈ ಕುರಿತು ತನಿಖೆ ನಡೆಸಲು ಎಸ್‌‍ಐಟಿ ಸಿಐಡಿ ಸಹಾಯವನ್ನು ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ಎಸ್‌‍ಐಟಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳುತಿಳಿಸಿವೆ.

ಸಂಪುಟ ಪುನಾರಚನೆಗೆ ಸಮ್ಮತಿಸಲಿದೆಯೇ ‘ಕೈ’ಕಮಾಂಡ್‌..?

ಬೆಂಗಳೂರು, ಅ.27- ರಾಜ್ಯ ರಾಜಕೀಯದಲ್ಲಿ ಯಾವುದೇ ರೀತಿಯ ಕ್ರಾಂತಿ ಇಲ್ಲವೆಂದು ಹೇಳು ತ್ತಿರುವ ನಡುವೆಯೇ ಮುಂದಿನ ಮುಖ್ಯಮಂತ್ರಿ ಹೆಸರಿನಲ್ಲಿ ಪರಸ್ಪರ ಘೋಷಣೆಗಳು ಕೇಳಿ ಬರುತ್ತಿವೆ.

ನಿನ್ನೆ ಆಹಾರ ನಾಗರಿಕ ಪೂರೈಕೆ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಭೇಟಿ ಮಾಡಿದ ಕಾರ್ಯಕರ್ತರು ಮುಂದಿನ ದಲಿತ ಮುಖ್ಯಮಂತ್ರಿ ಮುನಿಯಪ್ಪ ಎಂದು ಘೋಷಣೆ ಕೂಗಿದ್ದಾರೆ. ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರ ಬೆಂಬಲಿಗರು ಇದೇ ರೀತಿಯ ಘೋಷಣೆ ಮೊಳಗಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ಹೋದ ಕಡೆಯಲೆಲ್ಲಾ ಮುಂದಿನ ಮುಖ್ಯಮಂತ್ರಿ
ಎಂದು ಘೋಷಣೆ ಕೂಗುವುದು ಸಾಮಾನ್ಯ.

ಈಗ ಸಂಪುಟದ ಇತರ ಸಚಿವರ ಹೆಸರಿನಲ್ಲೂ ಘೋಷಣೆಗಳು ಕೇಳಿಬರುತ್ತಿವೆ.
ಕಾಂಗ್ರೆಸ್‌‍ನಲ್ಲಿ ಎಲ್ಲವೂ ಸರಿಯಿದೆ. ಯಾವ ಕ್ರಾಂತಿಯೂ ಇಲ್ಲ ಎಂದು ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಹೇಳಿಕೆ ನೀಡುತ್ತಿದ್ದಾರೆ. ಅದರ ನಡುವೆಯೂ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯೆಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ. ಸಚಿವ ಸಂಪುಟ ಪುನರ್‌ರಚನೆಯಾಗಿ 12 ಮಂದಿ ಅಧಿಕಾರ ಕಳೆದುಕೊಳ್ಳುತ್ತಾರೆ. ಹೊಸದಾಗಿ 12 ಮಂದಿ ಸಂಪುಟ ಸೇರುತ್ತಾರೆ ಎಂಬ ಚರ್ಚೆಗಳು ವ್ಯಾಪಕವಾಗಿವೆ. ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಬದಲಾಗಲಿದೆ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಈ ನಡುವೆ ಸಿದ್ದರಾಮಯ್ಯ ಅವರು ಸಚಿವರ ಜೊತೆ ನಡೆಸಿದ ಭೋಜನ ಕೂಟ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್‌ 1 ರಂದು ಕರೆದಿರುವ ಔತಣ ಕೂಟವು ಕೂಡ ಕುತೂಹಲ ಕೆರಳಿಸಿದೆ.

ನವೆಂಬರ್‌ 5 ಮತ್ತು 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ದೆಹಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ವರಿಷ್ಠರ ಜೊತೆ ಮಹತ್ವದ ಚರ್ಚೆಗಳಾಗಿದ್ದು, ಸಂಪುಟ ಪುನರ್‌ರಚನೆ ಅಥವಾ ನಾಯಕತ್ವದ ಬದಲಾವಣೆ ಬಗ್ಗೆ ಹೈಕಮಾಂಡ್‌ ಸ್ಪಷ್ಟ ನಿಲುವು ತಿಳಿಸಲಿದೆ ಎಂದು ಹೇಳಲಾಗಿದೆ.

ಸಂಪುಟಕ್ಕೆ ಸೇರಲು ಹಲವಾರು ಮಂದಿ ಶಾಸಕರು ತುದಿಗಾಲ ಮೇಲೆ ನಿಂತಿದ್ದಾರೆ. ಸಿದ್ದರಾಮಯ್ಯ ಕೂಡ ಸಂಪುಟ ಪುನರ್‌ರಚಿಸಿ ಕೆಲವರಿಗೆ ಅವಕಾಶ ನೀಡುವ ಮೂಲಕ ಭಿನ್ನಮತವನ್ನು ತಣಿಸಲು ಆಸಕ್ತಿ ಹೊಂದಿದ್ದಾರೆ. ಆದರೆ ಅದಕ್ಕೆ ಡಿ.ಕೆ.ಶಿವಕುಮಾರ್‌ ಒಪ್ಪುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅವರ ಒತ್ತಡದಿಂದಾಗಿ ಹೈಕಮಾಂಡ್‌ ಕೂಡ ಸಂಪುಟ ಪುನರ್‌ರಚನೆಗೆ ಸಹಮತಿಸುತ್ತಿಲ್ಲ ಎಂದು ಚರ್ಚೆಗಳಿವೆ.

ಸಂಪುಟ ಪುನರ್‌ರಚನೆಯಾಗಿ ಹೊಸಬರಿಗೆ ಅವಕಾಶ ನೀಡದೆ, ಇರುವ ಸಚಿವರನ್ನೇ ಮುಂದುವರೆಸಿದರೆ ನಾಯಕತ್ವ ಬದಲಾವಣೆ ಬಗ್ಗೆ ಕೂಗು ಹೇಳಬಹುದು. ಇದು ಸಿದ್ದರಾಮಯ್ಯ ಅವರಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಿಸುವುದಷ್ಟೇ ಅಲ್ಲದೇ ಪಕ್ಷದ ಏಕತೆಗೂ ಧಕ್ಕೆ ಉಂಟು ಮಾಡುವ ಸಾಧ್ಯತೆಗಳಿವೆ ಎಂಬ ವ್ಯಾಖ್ಯಾನಗಳಿವೆ.

ಸಂಪುಟ ಪುನರ್‌ರಚನೆಗೆ ಅನುಮತಿಸಬೇಕು ಎಂದು ಸಿದ್ದರಾಮಯ್ಯ ಹಲವು ಬಾರಿ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ ಸದ್ಯಕ್ಕೆ ಬಿಹಾರ ಚುನಾವಣೆ ಮುಗಿಯುವವರೆಗೂ ಯಾವುದೇ ಬದಲಾವಣೆಗೆ ಅವಕಾಶ ಇಲ್ಲ ಎಂದು ವರಿಷ್ಠರು ತಿಳಿಸಿದ್ದಾರೆ ಎನ್ನಲಾಗಿದೆ.

ನಾಯಕತ್ವದ ಬದಲಾವಣೆಯ ವದಂತಿಗಳಲ್ಲಿ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಪರಮೇಶ್ವರ್‌, ಮುನಿಯಪ್ಪ, ಎಂ.ಬಿ.ಪಾಟೀಲ್‌, ಕೃಷ್ಣಭೈರೇಗೌಡ, ಎಚ್‌.ಕೆ. ಪಾಟೀಲ್‌ ಸೇರಿದಂತೆ ಹಲವು ಮುಖಂಡರ ಹೆಸರುಗಳು ವ್ಯಾಪಕವಾಗಿ ಮುಂಚೂಣಿಗೆ ಬಂದಿವೆ.

ಮುಂದಿನ ಮುಖ್ಯಮಂತ್ರಿ ಮುನಿಯಪ್ಪ ಎಂದು ಕಾರ್ಯಕರ್ತರು ನಿನ್ನೆ ಘೋಷಣೆ ಕೂಗಿದಾಗ, ತಬ್ಬಿಬ್ಬಾದ ಮುನಿಯಪ್ಪ, ಆ ರೀತಿ ಮಾತನಾಡಬೇಡಿ ಎಂದು ಕಾರ್ಯಕರ್ತರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಹುಮಸ್ಸಿನಲ್ಲಿದ್ದ ಕಾರ್ಯಕರ್ತರು ಮುನಿಯಪ್ಪ ಅವರ ಮಾತನ್ನೂ ಲೆಕ್ಕಿಸದೇ ಘೋಷಣೆ ಕೂಗುವುದನ್ನು ಮುಂದುವರೆಸಿದ್ದಾರೆ.

ಎರಡೂವರೆ ವರ್ಷದ ಬಳಿಕ ಸಚಿವ ಸಂಪುಟ ಪುನರ್‌ರಚನೆಯಾಗಬೇಕು. ಹೊಸಬರಿಗೆ ಅವಕಾಶ ನೀಡಬೇಕೆಂದು ಮೊದಲು ಪ್ರತಿಪಾದಿಸಿದ್ದ ಮುನಿಯಪ್ಪ ಅವರು, ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದರು.

ಇತ್ತೀಚೆಗೆ ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ್‌ಖರ್ಗೆ ಅವರು ಕೂಡ ಅಧಿಕಾರ ತ್ಯಾಗದ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಳಿಕವಾದರೂ ಹೈಕಮಾಂಡ್‌ ಸಂಪುಟ ಪುನರ್‌ರಚನೆಗೆ ಅವಕಾಶ ನೀಡಲಿದೆಯೇ? ನಾಯಕತ್ವ ಬದಲಾವಣೆಯಾಗಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಧರ್ಮಸ್ಥಳ ಪ್ರಕರಣ ಷಡ್ಯಂತ್ರದ ರೂವಾರಿಗಳಿಗೆ ಬಂಧನದ ಭೀತಿ

ಬೆಂಗಳೂರು,ಅ.27- ಕರ್ನಾಟಕ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಧರ್ಮಸ್ಥಳ ಕೊಲೆ, ಅತ್ಯಾಚಾರ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಷಡ್ಯಂತ್ರ ರೂಪಿಸಿದವರಿಗೆ ಬಲೆ ಬೀಸಿದೆ.

ಎಲ್ಲಾ ಆಯಾಮಗಳಲ್ಲೂ ಎಸ್‌‍ಐಟಿ ತನಿಖೆ ನಡೆಸಿದ್ದು, ಧರ್ಮಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ ಮತ್ತು ಶವ ಹೂತಿಟ್ಟ ಪ್ರಕರಣಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳು ಲಭ್ಯವಿಲ್ಲ ಎಂಬ ಅಂತಿಮ ನಿರ್ಧಾರಕ್ಕೆ ಬಂದಿದೆ. ಈಗ ಎಸ್‌‍ಐಟಿ ಈ ಪ್ರಕರಣವನ್ನು ಮುನ್ನಲೆಗೆ ತಂದ ಷಡ್ಯಂತ್ರದ ರೂವಾರಿಗಳನ್ನು ಹೆಡೆಮುರಿ ಕಟ್ಟಲು ಸಜ್ಜಾಗಿದ್ದು,ಕೆಲವರಿಗೆ ಬಂಧನದ ಭೀತಿ ಕಾಡುತ್ತಿದೆ.

ಹಲವಾರು ವರ್ಷಗಳಿಂದ ನಾನು ಶವವನ್ನು ಹೂತಿಟ್ಟಿದ್ದೇನೆ ಎಂದು ಹೇಳಿ ಜೈಲುಪಾಲಾಗಿರುವ ಚಿನ್ನಯ್ಯ ಪ್ರಕರಣದ ಹಿಂದಿನ ರೂವಾರಿಗಳಾದ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟಣ್ಣನವರ್‌, ಜಯಂತ್‌.ಟಿ ಹಾಗೂ ವಿಠಲಗೌಡರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌‍ ನೀಡಿದೆ. ಒಂದು ವೇಳೆ ಗೈರುಹಾಜರಾದರೆ ಬಂಧಿಸುವ ಎಚ್ಚರಿಕೆಯನ್ನು ಸಹ ಕೊಡಲಾಗಿದೆ.

ಇವರು ಮಾತ್ರವಲ್ಲದೆ ಪ್ರಕರಣದ ಹಿಂದೆ ಇನ್ನು ಕೆಲವು ಕಾಣದ ಕೈಗಳಿರುವುದರಿಂದ ತೆರೆಮರೆಯಲ್ಲಿ ಕುಳಿತು ಶ್ರೀಕ್ಷೇತ್ರ ಧರ್ಮಸ್ಥಳದ ಕೀರ್ತಿಗೆ ಹಾಗೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಷಡ್ಯಂತ್ರ ರೂಪಿಸಿದವರಿಗೆ ಬಲೆ ಬೀಸಿದೆ ಎಂದು ತಿಳಿದುಬಂದಿದೆ. ಶವ ಹೂತಿಟ್ಟಿದ್ದೇನೆ ಎಂದು ಹೇಳಿದ್ದ ಚಿನ್ನಯ್ಯನ ಮಾತು ನಂಬಿ ಎಸ್‌‍ಐಟಿ ಧರ್ಮಸ್ಥಳದ ಸುತ್ತಮುತ್ತ ಉತ್ಖನನ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರಗಳು ಹಾಗೂ ಪುರಾವೆಗಳು ಸಿಗಲಿಲ್ಲ.

ಒಂದೆರಡು ಕಡೆ ಶವಗಳು ಪತ್ತೆಯಾದರೂ ಅವುಗಳು ಪುರುಷರ ಮೃತದೇಹಗಳಾಗಿದ್ದವು. ಅಲ್ಲದೆ ಅನ್ಯ ಕಾರಣಗಳಿಂದ ಆತಹತ್ಯೆ ಹಾಗೂ ಧರ್ಮಸ್ಥಳದಲ್ಲಿ ಸತ್ತರೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿಂದ ಸಾವನ್ನಪ್ಪಿದ ಪ್ರಕರಣಗಳಾಗಿದ್ದವು. ಆರೋಪಿಯು ಆರೋಪಿಸಿದಂತೆ ಉತ್ಖನನದ ವೇಳೆ ಸಿಕ್ಕ ಮೃತದೇಹಕ್ಕೂ ಪ್ರಕರಣಕ್ಕೂ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಈಗ ಧರ್ಮಸ್ಥಳ ಹಾಗೂ ಅದರ ಆಡಳಿತ ಮಂಡಳಿಯನ್ನು ಗುರಿಯಾಗಿಟ್ಟುಕೊಂಡು ಸಂಚು ರೂಪಿಸಲಾಗಿದೆಯೇ ಎಂಬುದರತ್ತ ಎಸ್‌‍ಐಟಿ ತನಿಖೆ ನಡೆಸುತ್ತಿದೆ.

ಹದಿಹರೆಯದ ಯುವತಿಯರು, ಮಹಿಳೆಯರು ಸೇರಿದಂತೆ 100ಕ್ಕೂ ಹೆಚ್ಚು ಶವಗಳನ್ನು ನನ್ನಿಂದ ಹೂತು ಹಾಕಿಸಲಾಗಿತ್ತು ಎಂದು ಸುಳ್ಳು ಹೇಳಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ದೂರುದಾರ ಸಿ.ಎನ್‌.ಚಿನ್ನಯ್ಯ ನ್ಯಾಯಾಲಯದ ಮುಂದೆ ಸತ್ಯ ಒಪ್ಪಿಕೊಂಡದ್ದು ಯಾಕೆ? ಇಂತಹ ಗಂಭೀರ ಆರೋಪಗಳನ್ನು ಮಾಡಲು ಅವರನ್ನು ಪ್ರಚೋದಿಸಿದವರು ಯಾರು? ಎಂಬಿತ್ಯಾದಿ ಮಾಹಿತಿ ತಿಳಿಯಲು ಎಸ್‌‍ ಐಟಿ ಮುಂದಾಗಿದೆ.

1995ರಿಂದ 2014ರವರೆಗೆ ದೇವಸ್ಥಾನದಲ್ಲಿ ಮಾಜಿ ಸ್ವಚ್ಛತ ಕೆಲಸಗಾರನಾಗಿದ್ದ ಚಿನ್ನಯ್ಯ 2002 ಮತ್ತು 2014ರ ನಡುವೆ ದೇವಾಲಯದ ಆವರಣದಲ್ಲಿ 200ಕ್ಕೂ ಹೆಚ್ಚು ಅಪರಿಚಿತ ಶವಗಳನ್ನು ರಹಸ್ಯವಾಗಿ ಹೂತ್ತಿಟ್ಟಿರುವುದಾಗಿ ಆರೋಪಿಸಿ 2025 ಆಗಸ್ಟ್‌ನಲ್ಲಿ ದೂರು ದಾಖಲಿಸಿದ್ದರು.

ಅಪಘಾತಗಳು, ಕೊಲೆ ಮತ್ತು ಅನುಮಾಸ್ಪಾದವಾಗಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆ ಇಲ್ಲದೆ ಅಥವಾ ಪೊಲೀಸರ ವರದಿಯಿಲ್ಲದೆ ಹೂತು ಹಾಕಲಾಗಿದೆ ಎಂದು ಹೇಳಿದ್ದರು. ಬಳಿಕ ನ್ಯಾಯಾಲಯದಲ್ಲಿ ಸ್ವಯಂಪ್ರೇರಿತ ಹೇಳಿಕೆ ನೀಡಿದ್ದ ಚಿನ್ನಯ್ಯ, ತಾನು ಈ ಹಿಂದೆ ನೀಡಿದ್ದ ಹೇಳಿಕೆ ಹಾಗೂ ಸಾಕ್ಷ್ಯಸುಳ್ಳಾಗಿದ್ದು, ಕೆಲವರ ಆಜ್ಞೆಯಿಂದ ಆ ರೀತಿ ಮಾಡಿರುವುದಾಗಿ ಹೇಳಿದ್ದರು.
18 ಕಡೆಗಳಲ್ಲಿ ಎಸ್‌‍ ಐಟಿ ಉತ್ಖನನ

ತಾನೂ ಹೂತಿಟ್ಟಿದ್ದ ಸ್ಥಳದಿಂದ ತರಲಾದ ತಲೆಬುರಡೆ ಎಂದು ಹೇಳಿ ದಕ್ಷಿಣಕನ್ನಡ ಪೊಲೀಸರಿಗೆ ನೀಡಿದ್ದ ಚಿನ್ನಯ್ಯ, ತದನಂತರ ತನ್ನ ಹೇಳಿಕೆ ಹಿಂಪಡೆದಿದ್ದರು. ಅಕ್ಟೋಬರ್‌ 2012ರಲ್ಲಿ ದಕ್ಷಿಣ ಕನ್ನಡದಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ಸೌಜನ್ಯ ಅವರ ಚಿಕ್ಕಪ್ಪ ವಿಠ್ಠಲ ಗೌಡ ತಲೆಬುರುಡೆಯನ್ನು ತನಗೆ ನೀಡಿದ್ದರು ಎಂದು ಹೇಳಿದ್ದರು.

ಚಿನ್ನಯ್ಯ ಗುರುತಿಸಿದ ಸುಮಾರು 18 ಕಡೆಗಳಲ್ಲಿ ಎಸ್‌‍ಐಟಿ ಅಗೆದು ಪರಿಶೀಲಿಸಿದೆ. ಬಂಗ್ಲೆಗುಡ್ಡೆ ಸೇರಿದಂತೆ ಕೆಲವೆಡೆ ಮಾನವನ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಅವುಗಳನ್ನು ಡಿಎನ್‌ಎ ವಿಶ್ಲೇಷಣೆ ಮತ್ತು ಫೋರೆನ್ಸಿಕ್‌ ಪರೀಕ್ಷೆಗೆ ಕಳುಹಿಸಲಾಗಿದೆ.

ಉಲ್ಟಾ ಹೊಡೆದ ಸುಜಾತ್‌ ಭಟ್‌
ಈ ಹಿಂದೆ 2003ರಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ಮಗಳು ಅನನ್ಯಾ ನಾಪತ್ತೆಯಾಗಿದ್ದಳು ಎಂದು ದೂರಿದ್ದ ಮತ್ತೋರ್ವ ದೂರುದಾರ ಮಹಿಳೆ ಸುಜಾತಾ ಭಟ್‌ ನಂತರ ಹೇಳಿಕೆ ಹಿಂಪಡೆದು ತನಗೆ ಹೆಣ್ಣು ಮಕ್ಕಳೇ ಇಲ್ಲ, ಮಟ್ಟಣ್ಣನವರ್‌, ಜಯಂತ್‌ ಹಾಗೂ ಇತರರ ಪ್ರಚೋದನೆಯಿಂದ ಸುಳ್ಳು ಹೇಳಿಕೆ ನೀಡಿರುವುದಾಗಿ ಹೇಳಿದ್ದರು.

2012ರ ಅಕ್ಟೋಬರ್‌ನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ 17 ವರ್ಷದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇನ್ನೂ ನ್ಯಾಯ ಸಿಕ್ಕದ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಜುಲೈನಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

ಬೆಂಗಳೂರು : 2ನೇ ಮಹಡಿಯಿಂದ ಬಿದ್ದು ಮಗು ಸಾವು

ಬೆಂಗಳೂರು,ಅ.27– ಎರಡನೇ ಮಹಡಿಯಿಂದ ಬಿದ್ದು ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯ ಗೊಟ್ಟಿಗೆರೆ ವೀವರ್‌ರ‍ಸ ಕಾಲೋನಿಯಲ್ಲಿ ನಡೆದಿದೆ.

ವೇಹಾಂತ್‌ ಮೃತಪಟ್ಟಿರುವ ಗಂಡು ಮಗು. ವೀವರ್‌ರ‍ಸ ಕಾಲೋನಿಯ 10ನೇ ಕ್ರಾಸ್‌‍ನಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ 2ನೇ ಮಹಡಿಯಲ್ಲಿ ವಾಸವಾಗಿರುವ ವಿನೋದ್‌ ಮತ್ತು ಕಾವ್ಯ ದಂಪತಿಯ ಪುತ್ರ ವೇಹಾಂತ್‌ ಕಳೆದ ಶನಿವಾರ ಸಂಜೆ 6 ಗಂಟೆ ಸಂದರ್ಭದಲ್ಲಿ ಆಟವಾಡುವಾಗ ಆಯತಪ್ಪಿ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.

ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಮಗುವನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಮೆಡಾಕ್‌್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ ನಿನ್ನೆ ಬೆಳಗ್ಗೆ ಚಿಕಿತ್ಸೆ ಫಲಿಸದೆ ವೇಹಾಂತ್‌ ಮೃತಪಟ್ಟಿದ್ದಾನೆ. ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸೂರ್ಯಕಾಂತ್‌ ಮುಂದಿನ ಸುಪ್ರೀಂ ಸಿಜೆಐ

ನವದೆಹಲಿ, ಅ. 27 (ಪಿಟಿಐ)- ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್‌ ಗವಾಯಿ ಅವರು ಮುಂದಿನ ಸಿಜೆಐ ಆಗಿ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ. ಸಿಜೆಐ ಗವಾಯಿ ಅವರ ನಂತರ ಸುಪ್ರೀಂ ಕೋರ್ಟ್‌ನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶರಾದ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ನವೆಂಬರ್‌ 23 ರಂದು ಸಿಜೆಐ ಗವಾಯಿ ಅವರ ನಿವೃತ್ತಿಯ ನಂತರ ನವೆಂಬರ್‌ 24 ರಂದು 53 ನೇ ಸಿಜೆಐ ಆಗಲಿದ್ದಾರೆ.

ಈ ವರ್ಷ ಮೇ 14 ರಂದು ಪ್ರಮಾಣವಚನ ಸ್ವೀಕರಿಸಿದ ಸಿಜೆಐ ಗವಾಯಿ ಅವರು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರನ್ನು ಮುಂದಿನ ಸಿಜೆಐ ಆಗಿ ನೇಮಿಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೇ 24, 2019 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆದ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಸಿಜೆಐ ಆಗಿ 1.2 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿರುತ್ತಾರೆ.
ಅವರು ಫೆಬ್ರವರಿ 9, 2027 ರಂದು ನಿವೃತ್ತರಾಗಲಿದ್ದಾರೆ.ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನಿವೃತ್ತಿ ವಯಸ್ಸು 65 ವರ್ಷಗಳು.