Home Blog Page 24

ಕೇವಲ 2000ರೂ.ಗಾಗಿ ಸ್ನೇಹಿತನನ್ನೇ ಕೊಂದು ಪೊಲೀಸರಿಗೆ ಶರಣಾದ ಯುವಕ

ಬೆಳಗಾವಿ,ಅ.27- ಕೇವಲ 2000ರೂಗೆ ಸ್ನೇಹಿತನನ್ನೇ ಕೊಲೆ ಮಾಡಿದ ಆರೋಪಿ ಪೊಲೀಸ್‌‍ ಠಾಣೆ ಹೋಗಿ ಶರಣಾದ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ಘಟನೆ ನಡೆದಿದೆ.ಗಿರಿಯಾಲ ಗ್ರಾಮದ ಮಂಜುನಾಥ ಗೌಡರ (30) ಕೊಲೆಯಾದ ದುರ್ದೈವಿಯಾಗಿದ್ದು ,ದಯಾನಂದ ಗುಂಡ್ಲೂರ ಬಂಧಿತವ ಆರೋಪಿ.

ಕಳೆದ ವಾರ ದಯಾನಂದ 2 ಸಾವಿರ ಹಣ ಸಾಲವನ್ನಾಗಿ ಸ್ನೇಹಿತ ಮಂಜುನಾಥ ಬಳಿ ಪಡೆದಿದ್ದ. ಒಂದು ವಾರದೊಳಗೆ ಹಣ ಮರಳಿಸುವುದಾಗಿ ಹೇಳಿದ್ದ. ಆದರೆ ಇದರ ಬಗ್ಗೆ ಮಾತನಾಡದೆ ದಯಾನಂದ ಸುಮನಾಗಿದ್ದ.

ನೆನ್ನೆ ರಾತ್ರಿ ಸಾಲದ ಹಣ ನೀಡುವಂತೆ ಮಂಜುನಾಥ ಕೇಳಿದ್ದ ಆದರೆ ದಯಾನಂದ ಜಗಳ ಆರಂಭಿಸಿದ್ದ. ವಾಗ್ವಾದ ನಡೆದು ಇಬ್ಬರ ಜಗಳ ವಿಕೋಪಕ್ಕೆ ತಿರುಗಿತ್ತು.ಇಬ್ಬರನ್ನು ಬಿಡಿಸಿ ಗ್ರಾಮಸ್ಥರು ಮನೆಗೆ ಕಳಿಸಿದ್ದರು.ಆದರೆ ರಾತ್ರಿ ನಡೆದ ಜಗಳದ ಸಿಟ್ಟಿನಲ್ಲೇ ಬೆಳಗಿನ ಜಾವ ಎದುರಾದ ಮಂಜುನಾಥನ ಮೇಲೆ ಕೊಡ್ಲಿಯಿಂದ ಹೊಡೆದು ದಯಾನಂದ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ಮಂಜುನಾಧ ರಕ್ತಸ್ರಾವದಿಂದ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಉಸಿರು ಚಲ್ಲಿದ್ದಾನೆ.

ಮೊಂಜುನಾಥ ಸಾವನ್ನಪ್ಪಿದ ವಿಷಯ ತಿಳಿಯುತ್ತಿದಂತೆ ಪೊಲೀಸ್‌‍ ಠಾಣೆಗೆ ಬಂದು ದಯಾನಂದ ಶರಣಾಗಿದ್ದಾನೆ. ಬೈಲಹೊಂಗಲ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ, ಮಕ್ಕಳ ಎದುರೇ ಬಾರ್‌ ಕ್ಯಾಷಿಯರ್‌ನನ್ನು ಭೀಕರವಾಗಿ ಕೊಂದು ದುಷ್ಕರ್ಮಿ ಪರಾರಿ

ಮಾಲೂರು,ಅ.27- ಮನೆಯ ಮುಂದೆ ಪತ್ನಿ, ಮಕ್ಕಳ ಎದುರೇ ಬಾರ್‌ ಕ್ಯಾಷಿಯರ್‌ನನ್ನುಭೀಕರವಾಗಿ ಕೊಲೆ ಮಾಡಿ ದುಷ್ಕರ್ಮಿ ಪರಾರಿಯಾಗಿರುವ ಘಟನೆ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ರಾತ್ರಿ ನಡೆದಿದೆ.

ಹಾಸನ ಮೂಲದ ಕುಮಾರ್‌ (45) ಕೊಲೆಯಾದವರು. ಮಾಲೂರು ಪಟ್ಟಣದ ಅಶೋಕ ವೈನ್‌್ಸನಲ್ಲಿ ಕ್ಯಾಷಿಯರ್‌ರಾಗಿ ಕೆಲಸಮಾಡುತ್ತಿದ್ದರು. ಬಾರ್‌ಗೆ ಬಂದಿದ್ದವರೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ನಿನ್ನೆ ಸಂಜೆ ಕುಮಾರ್‌ ಅವರು ಕ್ಯಾಷಿಯರ್‌ ಕೌಂಟರ್‌ನಲ್ಲಿದ್ದರು. ಆ ವೇಳೆ ಬಾರ್‌ಗೆ ಬಂದ ಆರೋಪಿಗಳು ಮದ್ಯ ಪಡೆದಿದ್ದು, ಮಿಕ್ಸ್ಚರ್‌ ಕೊಡುವಂತೆ ಕುಮಾರ್‌ಗೆ ಧಮಕಿ ಹಾಕಿದ್ದರು. ದುಡ್ಡು ಕೊಡಿ ಎಂದು ಹೇಳಿದಾಗ ಕುಮಾರ್‌ ಜೊತೆ ಗಲಾಟೆ ನಡೆದು ಅಲ್ಲಿದ್ದವರು ಸಮಾಧಾನ ಮಾಡಿ ಜಗಳ ಬಿಡಿಸಿದ್ದರು.

ರಾತ್ರಿ ಸುಮಾರು 11 ಗಂಟೆಗೆ ಬಾರ್‌ಬಂದ್‌ ಮಾಡಿ ಮನೆಗೆ ತೆರಳುತ್ತಿದ್ದ ಕುಮಾರ್‌ನನ್ನು ಆರೋಪಿ ಸುಭಾಷ್‌ ಎಂಬಾತ ಹಿಂಬಾಲಿಸಿದ್ದ. ಕುಮಾರ್‌ ಅವರು ಮನೆ ಬಳಿ ಬಳಿ ಹೋಗುತ್ತಿದ್ದಂತೆ ಅವರ ಮೇಲೆರಗಿದ ಸುಭಾಷ್‌ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾನೆ.

ಇದನ್ನು ಗಮನಿಸಿದ ಕುಮಾರ್‌ ಅವರ ಪತ್ನಿ, ಮಕ್ಕಳು ಬಿಡಿಸಲು ಹೋದರೂ ಪ್ರಯೋಜನವಾಗಿಲ್ಲ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ರಕ್ತ ಸ್ರಾವವಾಗಿ ಮನೆ ಮುಂದೆಯೇ ಕೊನೆಯುಸಿರೆಳೆದಿದ್ದಾರೆ.

ಮಾಹಿತಿ ತಿಳಿದ ಮಾಲೂರು ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ತನಿಖೆ ಕೈಗೊಂಡು, ಆರೋಪಿ ಸುಭಾಷ್‌ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.

ಜಾರ್ಖಂಡ್‌ : ಕೊಳದಲ್ಲಿ ತೇಲುತ್ತಿತ್ತು ಮೂರು ಹುಡುಗಿಯರ ಶವಗಳು

ಸಿಮ್ಡೆಗಾ, ಅ. 27 (ಪಿಟಿಐ) ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲೆಯ ಕೊಳದಲ್ಲಿ ಮೂವರು ಹುಡುಗಿಯರ ಶವಗಳು ತೇಲುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಾನೋ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿರುವ ನಿಮ್ತೂರ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.5 ರಿಂದ 7 ವರ್ಷ ವಯಸ್ಸಿನ ಮಕ್ಕಳು ಹೇಗೋ ನೀರಿನ ಮೂಲಕ್ಕೆ ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಭಾನುವಾರ ಸಂಜೆ ಶವಗಳನ್ನು ಕೊಳದಿಂದ ಹೊರತೆಗೆಯಲಾಗಿದೆ ಎಂದು ಬಾನೋ ಪೊಲೀಸ್‌‍ ಠಾಣೆಯ ಉಸ್ತುವಾರಿ ಮಾನವ್‌ ಮಾಯಾಂಕ್‌ ತಿಳಿಸಿದ್ದಾರೆ.ಪ್ರಾಥಮಿಕವಾಗಿ ಹೇಳುವುದಾದರೆ, ಹುಡುಗಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆ. ಘಟನೆಯ ನಿಜವಾದ ಕಾರಣವನ್ನು ಸಂಪೂರ್ಣ ತನಿಖೆ ಮತ್ತು ಮರಣೋತ್ತರ ಪರೀಕ್ಷೆಯ ನಂತರ ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದರು.

ಮೃತರನ್ನು ಪ್ರೇಮಿಕಾ ಕುಮಾರಿ (5), ಖುಷ್ಬೂ ಕುಮಾರಿ (6) ಮತ್ತು ಸೀಮಾ ಕುಮಾರಿ (7) ಎಂದು ಗುರುತಿಸಲಾಗಿದೆ.ಮಕ್ಕಳ ಕುಟುಂಬ ಸದಸ್ಯರು ಘಟನೆ ನಡೆದಾಗ ಅವರು ಮನೆಯಲ್ಲಿ ಇರಲಿಲ್ಲ ಎಂದು ಹೇಳಿದರು.ಭಾನುವಾರ ಸಂಜೆ ತಡವಾಗಿ ಹಿಂತಿರುಗಿದ ನಂತರ ಅವರು ತಮ್ಮ ಮಕ್ಕಳನ್ನು ಮನೆಯಲ್ಲಿ ಕಾಣದಿದ್ದಾಗ, ಅವರು ಅವರಿಗಾಗಿ ಹುಡುಕಾಟ ಪ್ರಾರಂಭಿಸಿದರು.ಹುಡುಕಾಟದ ಸಮಯದಲ್ಲಿ, ಒಂದು ಶವ ಕೊಳದಲ್ಲಿ ತೇಲುತ್ತಿರುವುದು ಕಂಡುಬಂದಿದೆ.

ಗ್ರಾಮಸ್ಥರ ಸಹಾಯದಿಂದ, ಇತರ ಇಬ್ಬರು ಹುಡುಗಿಯರನ್ನು ಸಹ ಕೊಳದಿಂದ ಹೊರತೆಗೆದು ಬಾನೋ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರನ್ನು ಸತ್ತಿದ್ದಾರೆಂದು ಘೋಷಿಸಿದರು ಎಂದು ಅವರು ಹೇಳಿದರು.

ಅಪ್ರಾಪ್ತ ಪುತ್ರಿಯರ ಲೈಂಗಿಕ ಕಿರುಕುಳ ನೀಡಿದ್ದ ತಂದೆಯನ್ನು ಹತ್ಯೆ ಮಾಡಿದ ಮಗ

ಮಥುರಾ, ಅ. 27 (ಪಿಟಿಐ) ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ತನ್ನ ಅಪ್ರಾಪ್ತ ಪುತ್ರಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಮಗ ಮತ್ತು ಸೋದರಳಿಯ ಭೀಕರವಾಗಿ ಕೊಲೆ ಮಾಡಿದ್ದಾರೆ.

ತಮ ಅಪ್ರಾಪ್ತ ಪುತ್ರಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಮಗ ಮತ್ತು ಸೋದರಳಿಯನಿಂದಲೇ ಕೊಲೆಯಾದ ಪಾತಕಿಯನ್ನು ಪವನ್‌ ಚೌಧರಿ ಎಂದು ಗುರುತಿಸಲಾಗಿದೆ. ಪವನ್‌ ಚೌಧರಿ ಎಂಬ ವ್ಯಕ್ತಿ ದರೋಡೆ, ಅಪಹರಣ ಮತ್ತು ಕಿರುಕುಳ ಪ್ರಕರಣಗಳ ಇತಿಹಾಸ ಹೊಂದಿರುವ ಅಪರಾಧಿ ಎಂದು ಅವರು ಭಾನುವಾರ ತಿಳಿಸಿದ್ದಾರೆ.ಚೌಧರಿ ತನ್ನ ಪತ್ನಿ ಮತ್ತು ತಾಯಿಯನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದಾರೆ ಎಂದು ಆತನ ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 13 ಮತ್ತು 14 ವರ್ಷ ವಯಸ್ಸಿನ ಹುಡುಗಿಯರು ದೀಪಾವಳಿಯ ಸಮಯದಲ್ಲಿ ಕೋಸಿಕಲನ್‌ ಪ್ರದೇಶದ ಹಳ್ಳಿಯಲ್ಲಿ ತಂದೆಯ ಕಾಟದಿಂದ ತಪ್ಪಿಸಿಕೊಳ್ಳು ದೊಡ್ಡಪ್ಪನ ಮನೆಗೆ ಬಂದಿದ್ದರು.

ಚೌಧರಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ತನ್ನ ಸಹೋದರನ ಮನೆಗೆ ಬಂದು ಹುಡುಗಿಯರನ್ನು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರು.ಅವರ ಕೂಗು ಕೇಳಿ, ಅವರ ಮಗ ಮತ್ತು ಸೋದರಳಿಯ ಅವನನ್ನು ತಡೆಯಲು ಪ್ರಯತ್ನಿಸಿದರು, ಆದರೆ ಅವರು ಅವರ ಮೇಲೂ ಆತ ಹಲ್ಲೆ ನಡೆಸಿದ.

ಈ ಗಲಾಟೆಯಲ್ಲಿ, ಅಪ್ರಾಪ್ತ ಬಾಲಕರು ಚೌಧರಿಯ ನಾಡ ಪಿಸ್ತೂಲ್‌ ಮತ್ತು ಕತ್ತಿಯನ್ನು ಕಸಿದುಕೊಂಡು ಅವರನ್ನು ಕೊಂದರು ಎಂದು ಪೊಲೀಸರು ತಿಳಿಸಿದ್ದಾರೆ.ರಾಜಸ್ಥಾನದ ದೀಗ್‌ನಲ್ಲಿ ಚೌಧರಿಯ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ (ಗ್ರಾಮೀಣ) ಸುರೇಶ್‌ ಚಂದ್ರ ರಾವತ್‌ ಹೇಳಿದ್ದಾರೆ.ಅವನು ದರೋಡೆ, ಅಪಹರಣ ಮತ್ತು ಕಿರುಕುಳದ ಇತಿಹಾಸ ಹೊಂದಿರುವ ಅಪರಾಧಿ. ಮೃತನು ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ಅಸಹ್ಯಕರವಾಗಿ ವರ್ತಿಸಿದ್ದಾನೆ, ನಂತರ ಅವರು ಅವನೊಂದಿಗೆ ವಾಸಿಸಲು ನಿರಾಕರಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಅವರ ಚಿಕ್ಕಪ್ಪ ಅವರನ್ನು ಶಿಕ್ಷಣಕ್ಕಾಗಿ ಹಾಸ್ಟೆಲ್‌ಗೆ ಸೇರಿಸಲು ಪ್ರಯತ್ನಿಸಿದರು, ಆದರೆ ಅವರು ಅಲ್ಲಿಂದ ಅವರನ್ನು ಮರಳಿ ಕರೆತಂದರು ಎಂದು ರಾವತ್‌ ಹೇಳಿದರು.ಘಟನೆಯ ನಂತರ, ಪೊಲೀಸರು ಅಪ್ರಾಪ್ತ ಬಾಲಕರನ್ನು ಬಂಧಿಸಿದರು. ವಿಚಾರಣೆಯಲ್ಲಿ, ನಾಲ್ವರು ಮಕ್ಕಳು ಪದೇ ಪದೇ ದೌರ್ಜನ್ಯ ಮತ್ತು ಚಿತ್ರಹಿಂಸೆ ನೀಡುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ.

ಕೋಸಿಕಲನ್‌ ಪೊಲೀಸ್‌‍ ಠಾಣೆಯ ಸ್ಟೇಷನ್‌ ಹೌಸ್‌‍ ಅಧಿಕಾರಿ ಅಜಯ್‌ ಕೌಶಲ್‌‍, ಚೌಧರಿಯ ಸಹೋದರ ಹರಿಶಂಕರ್‌ ಮಕ್ಕಳ ಹೇಳಿಕೆಗಳನ್ನು ದೃಢಪಡಿಸಿದ್ದಾರೆ ಮತ್ತು ಅವರು ತಮ್ಮ ಅತ್ತಿಗೆಯನ್ನು ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.

ಸುಂಕ ಸಂಕಟ : ಅಮೆರಿಕದ ವಿದೇಶಾಂಗ ಸಚಿವ ರೂಬಿಯೋ ಜೊತೆ ಜೈಶಂಕರ್‌ ಚರ್ಚೆ

ಕೌಲಾಲಂಪುರ, ಅ. 27 (ಪಿಟಿಐ) ಭಾರತೀಯ ಸರಕುಗಳ ಮೇಲಿನ ಅಮೆರಿಕದ ದಂಡನಾತ್ಮಕ ಸುಂಕಗಳಿಂದಾಗಿ ತೀವ್ರ ಒತ್ತಡಕ್ಕೆ ಒಳಗಾಗಿರುವ ದ್ವಿಪಕ್ಷೀಯ ಸಂಬಂಧಗಳನ್ನು ಪುನಃಸ್ಥಾಪಿಸಲು ಎರಡೂ ಕಡೆಯವರು ಮಾಡಿದ ಪ್ರಯತ್ನಗಳ ನಡುವೆಯೇ ವಿದೇಶಾಂಗ ಸಚಿವ ಎಸ್‌‍. ಜೈಶಂಕರ್‌ ಇಂದು ತಮ್ಮ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ಅವರೊಂದಿಗೆ ಮಾತುಕತೆ ನಡೆಸಿದರು.

ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘದ (ಆಸಿಯಾನ್‌) ವಾರ್ಷಿಕ ಶೃಂಗಸಭೆಯ ಹೊರತಾಗಿ ಜೈಶಂಕರ್‌ ಮತ್ತು ರೂಬಿಯೊ ಕೌಲಾಲಂಪುರದಲ್ಲಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಇಂದು ಬೆಳಿಗ್ಗೆ ಕೌಲಾಲಂಪುರದಲ್ಲಿ ಅವರನ್ನು ಭೇಟಿಯಾಗಲು ಸಂತೋಷವಾಯಿತು. ನಮ್ಮ ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಚರ್ಚೆಯನ್ನು ಶ್ಲಾಘಿಸಿದೆ ಎಂದು ಜೈಶಂಕರ್‌ ಎಕ್‌್ಸ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಭಾರತದ ಮೇಲೆ 50 ಪ್ರತಿಶತ ಸುಂಕಗಳನ್ನು ವಿಧಿಸಿದ ನಂತರ ನವದೆಹಲಿ ಮತ್ತು ವಾಷಿಂಗ್ಟನ್‌ ನಡುವಿನ ಸಂಬಂಧಗಳು ತೀವ್ರ ಒತ್ತಡಕ್ಕೆ ಒಳಗಾಗಿವೆ, ಇದರಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗೆ ಹೆಚ್ಚುವರಿ ಶೇಕಡಾ 25 ರಷ್ಟು ಸುಂಕಗಳು ಸೇರಿವೆ.ಭಾರತವು ಅಮೆರಿಕದ ಕ್ರಮವನ್ನು ಅನ್ಯಾಯ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ಎಂದು ಬಣ್ಣಿಸಿದೆ.

ಜೈಶಂಕರ್‌ ಮತ್ತು ರೂಬಿಯೊ ಎರಡೂ ಕಡೆಯ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದವನ್ನು ಸಹ ವಿಶಾಲವಾಗಿ ಪರಿಶೀಲಿಸಿದ್ದಾರೆಂದು ತಿಳಿದುಬಂದಿದೆ.ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕಾಗಿ ಇದುವರೆಗೆ ಐದು ಸುತ್ತಿನ ಮಾತುಕತೆಗಳು ಪೂರ್ಣಗೊಂಡಿವೆ.ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಪ್ರಸ್ತಾವಿತ ವ್ಯಾಪಾರ ಒಪ್ಪಂದವು ಮುಕ್ತಾಯಕ್ಕೆ ತುಂಬಾ ಹತ್ತಿರದಲ್ಲಿದೆ.

ಭಾನುವಾರ, ಜೈಶಂಕರ್‌ ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ, ಸಿಂಗಾಪುರದ ವಿದೇಶಾಂಗ ಸಚಿವ ವಿವಿಯನ್‌ ಬಾಲಕೃಷ್ಣನ್‌ ಮತ್ತು ಅವರ ಥಾಯ್‌ ಪ್ರತಿರೂಪ ಸಿಹಾಸಕ್‌ ಫುವಾಂಗ್ಕೆಟ್ಕಿಯೋ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು.11 ರಾಷ್ಟ್ರಗಳ ಆಸಿಯಾನ್‌ ಅನ್ನು ಈ ಪ್ರದೇಶದ ಅತ್ಯಂತ ಪ್ರಭಾವಶಾಲಿ ಬಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ, ಭಾರತ ಮತ್ತು ಅಮೆರಿಕ, ಚೀನಾ, ಜಪಾನ್‌ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವಾರು ಇತರ ದೇಶಗಳು ಅದರ ಸಂವಾದ ಪಾಲುದಾರರಾಗಿದ್ದಾರೆ. ಗುಂಪಿನ ಪ್ರಸ್ತುತ ಅಧ್ಯಕ್ಷರಾಗಿರುವ ಮಲೇಷ್ಯಾ ಕೌಲಾಲಂಪುರದಲ್ಲಿ ವಾರ್ಷಿಕ ಆಸಿಯಾನ್‌ ಶೃಂಗಸಭೆ ಮತ್ತು ಸಂಬಂಧಿತ ಸಭೆಗಳನ್ನು ಆಯೋಜಿಸುತ್ತಿದೆ.

ಚಿಕ್ಕಮಗಳೂರು : ಹೊಯ್ಸಳರ ಕಾಲದ ವೀರಗಲ್ಲು ಪತ್ತೆ

ಚಿಕ್ಕಮಗಳೂರು,ಅ.27- ಬೈಗೂರು ಗ್ರಾಮದ ನಿವೇದನ್‌ಗೆ ಸೇರಿದ ಜಮೀನಿನಲ್ಲಿ ಗ್ರಾಪಂ ಪಿಡಿಒ ಶರತ್‌ ಕುಮಾರ್‌ ಪಿಡಿ ಇವರ ಸೂಚನೆಯ ಮೇರೆಗೆ ಶಾಸನ ಸಂಶೋಧಕರಾದ ಮೇಕನಗ್ದೆ ಲಕ್ಷ್ಮಣಗೌಡರು 12ನೇ ಶತಮಾನಕ್ಕೆ ಸೇರಿದ ಹೊಯ್ಸಳರ ಕಾಲದ ವೀರಗಲ್ಲು ಶಾಸನವನ್ನು ಪತ್ತೆ ಹಚ್ಚಿದ್ದಾರೆ.

ಶಾಸನವು ನಾಲ್ಕು ಅಡಿ ಎತ್ತರವಿದ್ದು ಎರಡು ಅಡಿ ಅಗಲವಿದೆ. ಮೂರು ಹಂತಗಳಲ್ಲಿ ಆಕರ್ಷಕ ಶಿಲ್ಪಗಳ ಕೆತ್ತನೆಗಳಿದ್ದು ನಡುವಿನ ಎರಡು ಪಟ್ಟಿಗಳಲ್ಲಿ ಮತ್ತು ಆಚೀಚೆಯ ಎರಡು ಬದಿಗಳಲ್ಲಿ ಬರವಣಿಗೆ ಇದೆ.

ಒಟ್ಟು 8 ಸಾಲುಗಳಿರುವ ಈ ಶಾಸನದಲ್ಲಿ ಮೊದಲ ಹಂತದಲ್ಲಿರುವ ಕೆತ್ತನೆ ಹಾಗೂ ಒಂದಷ್ಟು ವಿವರಗಳು ಸವೆದು ಹೋಗಿವೆ. ಈ ಶಾಸನವು ಹೊಯ್ಸಳ ಆಳ್ವಿಕೆಯ ಕಾಲಕ್ಕೆ ಸಂಬಂಧಿಸಿದ ಕೆಲವು ಅಪರೂಪದ ಮಾಹಿತಿಗಳನ್ನು ತಿಳಿಸುತ್ತದೆ ಎಂದು ಶಾಸನವನ್ನು ಓದಿ ಪಠ್ಯ ತಯಾರಿಸಿರುವ ಮೈಸೂರಿನ ಶಾಸನ ತಜ್ಞರಾದ ಎಚ್‌. ಎಂ. ನಾಗರಾಜ್‌ ರಾವ್‌ ತಿಳಿಸಿದರು.

ಶಕ ವರ್ಷ 1043ರ ಶಾರ್ವರಿ ಸಂವತ್ಸರದಂದು ಅಂದರೆ 1220-21ನೇ ಇಸವಿಯಲ್ಲಿ ಹೊಯ್ಸಳ ದೊರೆ ಬಿಟ್ಟಿದೇವ ಮತ್ತು ಆತನ ಸಹೋದರ ಉದಯದಿತ್ಯ ಇವರು ಚೋಳಮಂಡಲವನ್ನು ಗೆದ್ದು ರಾಜ್ಯವಾಳ್ಳುತ್ತಿದ್ದು ದರ ಪ್ರಸ್ತಾಪವಿದೆ. ಉದಯದಿತ್ಯನು ಹಾಸನದ ಕೆಲವತ್ತಿಯ ಕೊಪ್ಪದಲ್ಲಿ ಮರಣ ಹೊಂದಿದಾಗ ಆತನೊಂದಿಗೆ ವೇಳೆಯಾಗಿ ಮರಣ ಹೊಂದಿದವರ ಬಗ್ಗೆ ಈಗಾಗಲೇ ಬೇರೆ ಶಾಸನಗಳಲ್ಲಿ ಉಲ್ಲೇಖವಿದೆ ಎಂದರು.

ಅದೇ ರೀತಿ ಉದಯಾದಿತ್ಯನ ಮಗಳು ಏಚಲ ದೇವಿಯವರು ನಿಧನವಾದಾಗ ಸಹ ಹಲವರು ವೇಳೆಯಾಗಿ ಮರಣ ಹೊಂದಿದ ಉಲ್ಲೇಖವೂ ಇತರ ಶಾಸನಗಳಲ್ಲಿ ಕಂಡು ಬರುತ್ತದೆ. ಅದೇ ರೀತಿ ಪ್ರಸ್ತುತ ಶಾಸನದಲ್ಲಿ ಏಚಲ ದೇವಿಯವರು ನಿಧನವಾದಾಗ ಚಿಕ್ಕ ಎಂಬ ವೀರನು ಮರಣ ಹೊಂದಿರುವ ಉಲ್ಲೇಖವಿದೆ. ಶಾಸನದ ನಡುವಿನ ಪಟ್ಟಿಯಲ್ಲಿ ಶಾಪಾಶಯ ವಾಕ್ಯಗಳಿವೆ. ಕೆಲವು ಅಕ್ಷರಗಳು ಸವೆದು ಹೋಗಿದ್ದು ಮಾಹಿತಿ ಅಸ್ಪಷ್ಟವಾಗಿದೆ. ಕಲ್ಲನ್ನು ಬೊಮಣ್ಣ ಎಂಬುವನು ಮಾಡಿಸಿದ ಉಲ್ಲೇಖವಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-10-2025)

ನಿತ್ಯ ನೀತಿ : ಜಗತ್ತಿನಲ್ಲಿ ದೇವರಿಗಿಂತ ಶ್ರೇಷ್ಠ ಸೂತ್ರಧಾರ ಯಾರೂ ಇಲ್ಲ , ಏಕೆಂದರೆ ಮನುಷ್ಯನಿಗಿಂತ ಶ್ರೇಷ್ಠ ನಾಟಕಕಾರ ಯಾರೂ ಇಲ್ಲ.

ಪಂಚಾಂಗ : ಸೋಮವಾರ, 27-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಷಷ್ಠಿಪೂರ್ಣ / ನಕ್ಷತ್ರ: ಮೂಲಾ / ಯೋಗ: ಅತಿಗಂ / ಕರಣ: ಕೌಲವ
ಸೂರ್ಯೋದಯ – ಬೆ.06.12
ಸೂರ್ಯಾಸ್ತ – 5.55
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ಸರ್ಕಾರಕ್ಕೆ ಸಂಬಂಽಸಿದ ಕೆಲಸ- ಕಾರ್ಯ ಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ.
ವೃಷಭ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಇಂದು ಅತ್ಯುತ್ತಮವಾದ ದಿನ.
ಮಿಥುನ: ಪತ್ನಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತವೆ.

ಕಟಕ: ಯಶಸ್ವಿಯಾಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಹೆಚ್ಚು ಶ್ರಮಿಸಬೇಕಾಗುತ್ತದೆ.
ಸಿಂಹ: ಹೆಚ್ಚಿನ ಖರ್ಚು ಮಾಡುವುದನ್ನು ನಿಯಂತ್ರಿಸಿ.
ಕನ್ಯಾ: ಕೆಲಸದ ಹೊರೆ ಕಡಿಮೆಯಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.

ತುಲಾ: ಚಾತುರ್ಯದಿಂದ ಮಾತುಗಳನ್ನಾಡುವುದ ರಿಂದ ಅಽಕ ಹಣ ಸಂಪಾದಿಸಬಹುದು.
ವೃಶ್ಚಿಕ: ಕಾಲುಗಳಲ್ಲಿ ನೋವು ಮತ್ತು ಸ್ನಾಯುಗಳ ಅಸ್ವಸ್ಥತೆ
ಧನುಸ್ಸು: ಜಂಕ್‌ಫುಡ್‌ ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಮಕರ: ಹಿರಿಯ ಅಽಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ.
ಕುಂಭ: ಮಕ್ಕಳಿಂದಾಗಿ ನೋವುಂಟಾಗಲಿದೆ. ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ.
ಮೀನ: ಸಂಬಳ ಪಡೆಯುವವರು ಕೆಲವು ಲಾಭಗಳನ್ನು ಗಳಿಸುವ ಸಾಧ್ಯತೆಯಿದೆ.

ರಸ್ತೆ ತಿರುವಿನಲ್ಲಿ ಉರುಳಿ ಬಿದ್ದ ಕಂಟೈನರ್‌, ಇಬ್ಬರ ಸಾವು

ಬೆಂಗಳೂರು, ಅ.26- ಕಂಟೈನರ್‌ವೊಂದು ರಸ್ತೆ ತಿರುವಿನಲ್ಲಿ ಉರುಳಿಬಿದ್ದ ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಘಟನೆ ಜಿಗಣಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.

ಭಾರೀ ಗಾತ್ರದ ಯಂತ್ರಗಳನ್ನು ತುಂಬಿಕೊಂಡು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಹಾರೋಹಳ್ಳಿ-ಜಿಗಣಿ ರಸ್ತೆಯಲ್ಲಿ ಕಂಟೈನರ್‌ ಬರುತ್ತಿದ್ದಾಗ ಉರುಗನದೊಡ್ಡಿ ಸಮೀಪ ರಸ್ತೆ ತಿರುವಿನಲ್ಲಿ ಉರುಳಿ ಬಿದ್ದಿದೆ.

ಪರಿಣಾಮ ಇಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಅವರುಗಳನ್ನು ಚಿಕಿತ್ಸೆಗಾಗಿ ಆನೇಕಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದ ಜಿಗಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಅಪಘಾತಕ್ಕೆ ಅತಿವೇಗ ಹಾಗೂ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ನಾಲ್ಕು ಮಕ್ಕಳ ತಾಯಿಯನ್ನು ಕೊಂದಿದ್ದ ಇಬ್ಬರು ಆರೋಪಿಗಳು ಅರೆಸ್ಟ್

ಬೆಂಗಳೂರು,ಅ.26- ನಾಲ್ಕು ಮಕ್ಕಳ ತಾಯಿ ಯನ್ನು ಕೊಲೆ ಮಾಡಿ ಶವವನ್ನು ಆಟೋದಲ್ಲಿಟ್ಟು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ತಿಲಕನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಪ್ರಕರಣ ಸಂಬಂಧ ಪೇಂಟರ್‌ ಹಾಗೂ ಆಟೋ ಚಾಲಕನೊಬ್ಬನನ್ನು ಪೊಲೀಸರು ತೀವ್ರ ವಿಚಾರಣೆಗೊಳ ಪಡಿಸಿದ್ದಾರೆ.

ನಾಲ್ಕು ಮಕ್ಕಳ ತಾಯಿ ಸಲಾ(35) ಅವರು ಪತಿಯನ್ನು ತೊರೆದು ಇತ್ತೀಚೆಗೆ ರಾಗಿಗುಡ್ಡದ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರಿಗೆ ಪೈಂಟರ್‌ ಸುಬ್ರಹಣಿ ಎಂಬಾತ ಪರಿಚಯವಾಗಿ ಸಲುಗೆಯಿಂದ ಇದ್ದರು. ಈ ನಡುವೆ ಮೊನ್ನೆ ರಾತ್ರಿ ಆರೋಪಿಗಳು ಮನೆಯಲ್ಲಿ ಸಲಾ ಅವರನ್ನು ಕೊಲೆ ಮಾಡಿ ಮನೆ ಸಮೀಪದ ರಸ್ತೆ ಬದಿಯಲ್ಲಿ ಸುಮಾರು ಎರಡು ವರ್ಷ ಗಳಿಂದ ನಿಲ್ಲಿಸಿದ್ದ ಆಟೋದಲ್ಲಿ ಶವವಿಟ್ಟು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆ ರಸ್ತೆಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನಡತೆ ವಿಚಾರದಲ್ಲಿ ಜಗಳವಾಗಿ ಈ ಕೊಲೆ ನಡೆದಿದೆ ಎಂದು ಶಂಕಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಒಡಿಶಾದಲ್ಲಿ ಚಂಡಮಾರುತದ ಎಚ್ಚರಿಕೆ

ಭುವನೇಶ್ವರ,ಅ.26- ಬಂಗಾಳಕೊಲ್ಲಿ ಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ತೀವ್ರಗೊಂಡು ಕರಾವಳಿಯತ್ತ ನಿಧಾನವಾಗಿ ಚಲಿಸುತ್ತಿದ್ದು, ಒಡಿಶಾ ಸರ್ಕಾರವು ಎಲ್ಲಾ 30 ಜಿಲ್ಲೆಗಳಲ್ಲಿ ಎಚ್ಚರಿಕೆ ಸೂಚನೆ ನೀಡಿದೆ.

ಅ.28 ರ ಸಂಜೆ ಅಥವಾ ರಾತ್ರಿ ಕಾಕಿನಾಡದ ಸುತ್ತಮುತ್ತಲಿನ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವೆ ಆಂಧ್ರಪ್ರದೇಶದ ಕರಾವಳಿಯನ್ನು ಚಂಡಮಾರುತ ದಾಟುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ, ಗರಿಷ್ಠ ಗಾಳಿಯ ವೇಗ ಗಂಟೆಗೆ 90-110 ಕಿ.ಮೀ ಇರಬಹುದು. ಅ. 28 ಮತ್ತು 29 ರಂದು ಒಡಿಶಾದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಅದು ಹೇಳಿದೆ.

ಒಡಿಶಾದ ಹಲವಾರು ದಕ್ಷಿಣ ಮತ್ತು ಕರಾವಳಿ ಜಿಲ್ಲೆಗಳಿಗೆ ಐಎಂಡಿ ಕೆಂಪು, ಕಿತ್ತಳೆ ಮತ್ತು ಹಳದಿ ಎಚ್ಚರಿಕೆಗಳನ್ನು ನೀಡಿದೆ, ಅಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ 20 ಸೆಂ.ಮೀ.ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.

ಒಡಿಶಾದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಸುರೇಶ್‌ ಪೂಜಾರಿ ಅವರು ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಸಿಬ್ಬಂದಿ ಮತ್ತು ಯಂತ್ರೋಪಕರಣಗಳನ್ನು ಸಿದ್ಧಪಡಿಸಲಾಗಿದ್ದು,ಭಾರೀ ಮಳೆ, ಮೇಲ್ಮೈ ಗಾಳಿ ಅಪ್ಪಳಿಸುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಕರಾವಳಿ ಮತ್ತು ದಕ್ಷಿಣ ಪ್ರದೇಶಗಳಲ್ಲಿನ 15 ಜಿಲ್ಲೆಗಳು ಮುಂಬರುವ ಚಂಡಮಾರುತದಿಂದ ಪ್ರಭಾವಿತವಾಗುತ್ತವೆ ಎಂದು ಅವರು ಹೇಳಿದರು.ಏತನ್ಮಧ್ಯೆ, ಪರಿಸ್ಥಿತಿಯ ತುರ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಮತ್ತು ಕರಾವಳಿ ಪ್ರದೇಶಗಳಲ್ಲಿನ ಸುಮಾರು ಏಳು ಜಿಲ್ಲೆಗಳು ಸರ್ಕಾರಿ ನೌಕರರ ರಜೆಯನ್ನು ರದ್ದುಗೊಳಿಸಿವೆ.

ಕಳೆದ 6 ಗಂಟೆಗಳಲ್ಲಿ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಾಣಿಸಿಕೊಂಡಿದ್ದ ವಾಯುಭಾರ ಕುಸಿತವು ಗಂಟೆಗೆ 10 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯುವ್ಯದಿಕ್ಕಿಗೆ ಚಲಿಸಿ, ತೀವ್ರಗೊಂಡಿದೆ.ಇದು ಬಹುತೇಕ ಪಶ್ಚಿಮವಾಯುವ್ಯಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ, ಮುಂದಿನ 24 ಗಂಟೆಗಳಲ್ಲಿ ನೈಋತ್ಯ ಮತ್ತು ಪಕ್ಕದ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ನಂತರ, ಅದು ವಾಯುವ್ಯಯ ದಿಕ್ಕಿಗೆ, ನಂತರ ಉತ್ತರ-ವಾಯುವ್ಯಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಮತ್ತು ಅ. 28 ರ ಬೆಳಿಗ್ಗೆ ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.