Home Blog Page 25

ಕಾರಿನಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಲಕ್ನೋ, ಅ.26- ಇಲ್ಲಿನ ಹಜರತ್‌ಗಂಜ್‌‍ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ವ್ಯಕ್ತಿಯೊಬ್ಬರು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ರಾಜಾಜಿಪುರಂ ನಿವಾಸಿ ಇಶಾನ್‌ ಗಾರ್ಗ್‌ (38) ಎಂದು ಗುರುತಿಸಲಾಗಿದೆ.

ರಾತ್ರಿ 11.40 ರ ಸುಮಾರಿಗೆ ಘಟನೆ ಸಂಭವಿಸಿದೆ. ಸ್ವಲ್ಪ ಸಮಯದ ನಂತರ, ಹಜರತ್‌ಗಂಜ್‌‍ ಪೊಲೀಸ್‌‍ ಠಾಣೆಗೆ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಕಾರಿನಎಂಜಿನ್‌ ಚಾಲನೆಯಲ್ಲಿತ್ತು ಮತ್ತು ,ಚಾಲಕನ ಸೀಟಿನಲ್ಲಿ ಕುಳಿತ್ತಿದ್ದ ವ್ಯಕ್ತಿ ತಲೆಗೆ ಗುಂಡೇಟಿನ ಗಾಯವಾಗಿತ್ತು.ಅವನ ಬಲಗೈನಲ್ಲಿದ್ದ ರಿವಾಲ್ವರ್‌,ನಾಲ್ಕು ಲೈವ್‌ ಕಾರ್ಟ್ರಿಡ್‌್ಜಗಳನ್ನುವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಪ್ರಕಾರ, ಇಶಾನ್‌ ಗಾರ್ಗ್‌ ಅವರು ರಿವಾಲ್ವರ್‌ ಪರವಾನಗಿ ಹೊಂದಿದ್ದರು ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ಕಾನೂನು ವಿಧಿವಿಧಾನಗಳು ಮತ್ತು ತನಿಖೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌‍ಗಳಲ್ಲಿ ಸುರಕ್ಷತಾ ಕ್ರಮ ಪರಿಶೀಲನೆಗೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು, ಅ.26- ಕರ್ನೂಲ್‌ ಬಳಿ ಸಂಭವಿಸಿದ ಬಸ್‌‍ ಬೆಂಕಿ ದುರಂತ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸಾರಿಗೆ ಸಂಸ್ಥೆಗಳ ಬಸ್‌‍ಗಳಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚನೆ ನೀಡಿದ್ದಾರೆ.

ಕರ್ನೂಲ್‌ ಬಸ್‌‍ ದುರಂತ ಪ್ರಕರಣ ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಿರಲಿ. ಈ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನೂ ಸಹ ಪಾಲಿಸಬೇಕಾಗಿದೆ. ಈ ಹಿಂದೆ ಸಾರಿಗೆ ಸಚಿವನಾಗಿದ್ದಾಗಲೂ ಕೂಡ ಹಾವೇರಿ ಬಳಿ ಖಾಸಗಿ ಬಸ್‌‍ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು.

ಆ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ಬಸ್‌‍ಗಳು, ಕಾಂಟ್ರಾಕ್ಟ್‌ ಗ್ಯಾರೇಜ್‌ ಬಸ್‌‍ಗಳು, ಖಾಸಗಿ ಟೂರಿಸ್ಟ್‌ ಬಸ್‌‍ಗಳು, ಟೆಂಪೋ ಟ್ರಾವೆಲರ್‌ರ‍ಸ, ಶಾಲಾ ವಾಹನಗಳು ಸೇರಿ ಸುಮಾರು 50 ಸಾವಿರ ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಮತ್ತು ದ್ವಾರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಪರಿಶೀಲಿಸಲು ವಿಶೇಷ ಅಭಿಯಾನ ಕೈಗೊಂಡಿದ್ದರಿಂದ ಹಲವು ಬಸ್‌‍ಗಳಲ್ಲಿ ಲೋಪದೋಷಗಳು ಗಮನಕ್ಕೆ ಬಂದು ತುರ್ತು ನಿರ್ಗಮನ ದ್ವಾರಗಳ ಅಳವಡಿಕೆ ಕಡ್ಡಾಯವಾಯಿತು ಎಂದರು.

ಬಸ್‌‍ಗಳಲ್ಲಿ ಯಾವುದೇ ವಾಣಿಜ್ಯ ಸರಕು, ಲಗೇಜ್‌ ಸಾಗಿಸುವ ಸಂದರ್ಭದಲ್ಲಿ ಬೆಂಕಿಸ್ಪರ್ಶಕ್ಕೆ ಸುಲಭವಾಗಿ ಬೆಂಕಿ ಹೊತ್ತಿಕೊಂಡು ಸ್ಫೋಟಿಸುವ ವಸ್ತುಗಳನ್ನು ಸಾಗಿಸದಂತೆ ನಿಗಾ ವಹಿಸಬೇಕು. ಎಲ್ಲ ಎಸಿ ಬಸ್‌‍ಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿಗಳನ್ನು ಒಡೆಯಲು ಸಹಾಯವಾಗುವಂತೆ ಸುತ್ತಿಗೆಗಳು ಕಡ್ಡಾಯವಾಗಿರಬೇಕು. ಲಗೇಜ್‌ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿಗಳು ಮಲಗಲು ಅವಕಾಶ ನೀಡಬಾರದು. ಬಸ್‌‍ಗಳ ನವೀಕರಣದ ಸಂದರ್ಭದಲ್ಲಿ ಪರಿಶೀಲನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.

ಯಾವುದೇ ನ್ಯೂನ್ಯತೆಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರ ಸುರಕ್ಷತೆ ನಮ ಪ್ರಥಮ ಆದ್ಯತೆ. ಪ್ರಾಣಹಾನಿಗೆ ಯಾವುದೇ ರೀತಿಯಿಂದಲೂ ನಷ್ಟಭರಿಸಲು ಸಾಧ್ಯವಿಲ್ಲ. ಆದರೆ, ಈ ಕೂಡಲೇ ಬಸ್‌‍ಗಳಲ್ಲಿನ ಸುರಕ್ಷತೆ ಪರಿಶೀಲನೆಗೆ ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೆಎಸ್‌‍ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಮತ್ತು ಸಾರಿಗೆ ಇಲಾಖೆಯ ಸುರಕ್ಷತಾ ವಿಭಾಗದ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಎಚ್‌ಡಿಕೆ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು. ಅ.26– ಬೆಂಗಳೂರಿನ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡುತ್ತಿರುವ ಬಗ್ಗೆ ಇಲ್ಲ ಸಲ್ಲದ ಟೀಕೆ ಮಾಡುತ್ತಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಖಾಲಿ ಟ್ರಂಕ್‌ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಾಗ್ದಾಳಿ ನಡೆಸಿದರು. ಕಬ್ಬನ್‌ಪಾರ್ಕ್‌ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ವೇಳೆ ಡಿ.ಕೆ.ಶಿವಕುಮಾರ್‌ ಅವರು ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಿದರು.

ಈ ವೇಳೆ ನಾಗರಿಕರೊಬ್ಬರು, ಸರ್ಕಾರ ಎಲ್ಲಾ ಆಸ್ತಿಗಳನ್ನು ಎ ಖಾತಾ ಆಗಿ ಪರಿವರ್ತನೆ ಮಾಡುತ್ತಿರುವುದು ಒಳ್ಳೆಯ ಕೆಲಸ. ಈ ಪರಿವರ್ತನೆಗಾಗಿ ಅನೇಕರು, ಹಲವು ವರ್ಷಗಳಿಂದ ಕಾಯುತ್ತಿದ್ದರು ಎಂದು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಮುಕ್ತವಾಗಿ ಪ್ರಶಂಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌ ಎ ಖಾತಾ ನಿಮ ಆಸ್ತಿ ದಾಖಲೆ.

ಸಾರ್ವಜನಿಕರ ಆಸ್ತಿ ದಾಖಲೆಗಳನ್ನು ಸರಿಪಡಿಸಿ, ಅವುಗಳನ್ನು ಜನರಿಗೆ ನೀಡುವುದು ನಮ ಸರ್ಕಾರದ ಆರನೇ ಗ್ಯಾರಂಟಿ. ಇದಕ್ಕಾಗಿ ನಾವು ಕೇವಲ ಶೇ. 5 ಮಾತ್ರ ಅಭಿವೃದ್ಧಿ ಶುಲ್ಕ ಪಾವತಿ ಮಾಡುವಂತೆ ಕೇಳಿದ್ದೇವೆ. ನಿಮಂತಹ ಪ್ರಜ್ಞಾವಂತ ನಾಗರಿಕರು ಇದನ್ನು ಸ್ವಾಗತಿಸಿರುವುದಕ್ಕೆ ಧನ್ಯವಾದ ಎಂದು ಕೈ ಮುಗಿದು ನಮಿಸಿದರು. ಮತ್ತೊಬ್ಬ ನಾಗರಿಕರು ಸುರಂಗ ರಸ್ತೆ ಯೋಜನೆಯನ್ನು ಬೆಂಬಲಿಸಿ ಮಾತನಾಡಿದರು. ಕಳೆದ 30 ವರ್ಷಗಳಿಂದಲೂ ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆಗೆ ಒಳ್ಳೆಯ ಯೋಜನೆ ಇಲ್ಲ ಎಂದು ಹೇಳಿದರು.

ಈ ವೇಳೆ ಡಿ.ಕೆ.ಶಿವಕುಮಾರ್‌ ಅವರು ನಿಮ ಬೆಂಬಲಕ್ಕೆ ಧನ್ಯವಾದಗಳು ಎಂದು ನಾಗರಿಕರಿಗೆ ಹೇಳಿದರು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಪರ್ಯಾಯ ಅಲೋಚನೆಗಳು ಸಾಧುವಾಗಿಲ್ಲ. ರಸ್ತೆ ಅಗಲೀಕರಣ ಮಾಡಲು, ಮನೆಗಳನ್ನು ಹೊಡೆಯಲು ಸಾಧ್ಯವಿಲ್ಲ. ಅದಕ್ಕೆ ಯಾರೂ ಒಪ್ಪುತ್ತಿಲ್ಲ. ಹೀಗಾಗಿ ಸುರಂಗ ರಸ್ತೆ ನಿರ್ಮಿಸುತ್ತಿದ್ದೇವೆ ಎಂದರು.

12,500 ಪೌರ ಕಾರ್ಮಿಕರನ್ನು ಖಾಯಂ ಗೊಳಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ನಾಗರಿಕರೊಬ್ಬರು, ಕಾಂಗ್ರೆಸ್‌‍ ಪಕ್ಷವನ್ನು ಜನ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದಾಗ ಪಕ್ಷದ ಹೆಸರು ಹೇಳಬೇಡಿ, ಸಮಸ್ಯೆಗಳನ್ನು ಮಾತ್ರ ವಿವರಿಸಿ ಎಂದು ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದರು. ಪೌರಕಾರ್ಮಿಕರಿಗೆ ಮನೆ ಕಟ್ಟಿಸಿ ಕೊಡಿ ಎಂದು ಮನವಿ ಮಾಡಿದರು. ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಇದಕ್ಕಾಗಿ ಧನ್ಯವಾದ ಹೇಳುವುದಾಗಿ ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಸುರಂಗ ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಡಿ ಎಂದು ಒತ್ತಾಯಿಸಿದರು.

330 ಎಕರೆಯಿದ್ದ ಕಬ್ಬನ್‌ಪಾರ್ಕ್‌ ವಿಸ್ತೀರ್ಣ ಈಗ 196 ಎಕರೆಯಾಗಿದೆ. ಲಾಲ್‌ಬಾಗ್‌ ಮಾದರಿಯಲ್ಲೇ ಈ ಉದ್ಯಾನವನ್ನು ಅಭಿವೃದ್ಧಿ ಮಾಡಿ ಆದಾಯ ಬರುವಂತೆ ಮಾಡಬಹುದು. ಭೋಗ್ಯದಲ್ಲಿರುವ ಕಟ್ಟಡಗಳನ್ನು ತೆರವು ಮಾಡಿಸಿ, ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಸಲಹೆ ನೀಡಿದರು.

ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿದೆ. ಸೂಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಿ 2, 3 ಕೋಟಿ ರೂ. ಹಣ ಪಡೆದು ಟಿಕೆಟ್‌ ನೀಡಲಾಗುತ್ತಿದೆ ಎಂಬ ಆರೋಪಗಳಿವೆ ಎಂದು ಸಾರ್ವಜನಿಕರೊಬ್ಬರು ಹೇಳಿದಾಗ ಮಧ್ಯ ಪ್ರವೇಶಿಸಿದ ಡಿ.ಕೆ.ಶಿವಕುಮಾರ್‌ ಅವರು, ಯಾವ ಪಕ್ಷವೂ ಹಣ ಪಡೆದು ಚುನಾವಣೆಯಲ್ಲಿ ಟಿಕೆಟ್‌ ನೀಡಿದ್ದನ್ನು ನಾನು ಕಂಡಿಲ್ಲ, ಪಕ್ಷದ ಶುಲ್ಕವನ್ನಾಗಿ ಸಾವಿರ, 50 ಸಾವಿರದಷ್ಟು ಹಣ ಪಡೆಯಬಹುದಷ್ಟೆ. ಟಿಕೆಟ್‌ ಮಾರಿ ಕೊಂಡಿರುವುದಿಲ್ಲ. ಒಂದು ವೇಳೆ ಅಂತಹ ನಿದರ್ಶನಗಳಿದ್ದರೆ ಲಿಖಿತವಾಗಿ ದೂರು ಕೊಡಿ. ಸಂಜೆಯೇ ತನಿಖೆಗೆ ಆದೇಶಿಸುತ್ತೇನೆ ಎಂದರು.

20 ವರ್ಷಗಳಿಂದಲೂ ಒಬ್ಬರೇ ಪಾಲಿಕೆ ಸದಸ್ಯರಿರುತ್ತಾರೆ. ಆದರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಅದೇ ನಾಗರಿಕರು ಹೇಳಿದಾಗ, ನಾನು 35 ವರ್ಷದಿಂದ ಶಾಸಕನಾಗಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯಿಸಿದರು. ವೈದ್ಯರಿಗೆ, ಎಂಜಿನಿಯರ್‌ಗಳಿಗೆ, ಮಾಜಿ ಸೈನಿಕರಿಗೆ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ಕೊಡಿ ಎಂದು ನಾಗರಿಕರು ಸಲಹೆ ನೀಡಿದರು.

ಚುನಾವಣೆಯಲ್ಲಿ ಸ್ಪರ್ಧಿಸುವವರಿಂದ ಅರ್ಜಿ ಅಹ್ವಾನಿಸುತೇನೆ. ಆಗ ನೀವು ಅರ್ಜಿ ಹಾಕಿ. ಜನರ ಸಂಪರ್ಕದಲ್ಲಿರುವವರು, ಪಕ್ಷದ ಕಾರ್ಯಕರ್ತರ ಜೊತೆ ತೊಡಗಿಸಿಕೊಂಡಿರುವವರನ್ನು ಗುರುತಿಸಿ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

ಅಂಗವಿಕಲರ ವ್ಯಕ್ತಿಗಳ ಅಧಿನಿಯಮದ ಮಾಜಿ ಆಯುಕ್ತ ಪದಶ್ರೀ ಡಾ. ಕೆ.ಎಸ್‌‍.ರಾಜಣ್ಣ, ಭಗವದ್ಗೀತೆಯನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ನೀಡುವ ಮೂಲಕ ನಿಮ ಮನದಲ್ಲಿನ ಬಯಕೆ ಈಡೇರಲಿ ಎಂದು ಹಾರೈಸಿದರು. ಪುಲಕೇಶಿ ನಗರದ ಮೆಟ್ರೋ ನಿಲ್ದಾಣಕ್ಕೆ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಆಗ್ರಹಿಸಿದರು. ಕಬ್ಬನ್‌ಪಾರ್ಕ್‌ ನಡಿಗೆಯಲ್ಲಿ ಡಿ.ಕೆ.ಶಿವಕುಮಾರ್‌, ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು, ಸೆಲ್ಫಿ ಕ್ಲಿಕ್ಕಿಸಿದರು, ವಾಯು ವಿಹಾರಿಗಳು ಕರೆ ತಂದ ಸಾಕು ಪ್ರಾಣಿಗಳನ್ನು ಕಂಡು ಡಿ.ಕೆ.ಶಿವಕುಮಾರ್‌ ಖುಷಿ ಪಟ್ಟರು.

ಆಸ್ತಿಗಾಗಿ 60 ವರ್ಷಗಳ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ

ಕನಕಪುರ, ಅ. 26- ಆಸ್ತಿಯ ವ್ಯಾಮೋಹಕ್ಕೆ 60 ವರ್ಷಗಳ ಹಿಂದೆ ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ನೋಂದಣಿ ಮಾಡಿಕೊಂಡು ಆಸ್ತಿ ಪರಭಾರೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದರ ವಿರುದ್ಧ ರಾಮನಗರ ಐಜೂರು ಪೋಲೀಸ್‌‍ ಠಾಣೆಯಲ್ಲಿ 4 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಕನಕಪುರ ಮತ್ತು ಹಾರೋಹಳ್ಳಿ ತಾಲ್ಲೂಕಿನಲ್ಲಿ ಭೂಮಿಯ ಬೆಲೆ ಗಗನಕ್ಕೆ ಏರಿರುವ ಹಿನ್ನಲೆಯಲ್ಲಿ ಯಾರದೋ ಆಸ್ತಿಯನ್ನು ಮತ್ಯಾರೋ ನಕಲಿ ದಾಖಲೆ ಸೃಷ್ಟಿಸಿ ಕಬಳಿಕೆ ಮಾಡುಲಾಗುತ್ತಿದೆ. ನಗರದ ಖಾಸಗಿ ಹೋಟೆಲ್‌ನಲ್ಲಿ ಆಸ್ತಿಗೆ ಸಂಬಂಧಿಸಿದ ಹೊಂಬಾಳೆಗೌಡರ 5ನೇ ಮಗ ಬಸವೇಗೌಡ ಪತ್ರಿಕಾಗೋಷ್ಠಿಯಲ್ಲಿ ದಾಖಲಾತಿಗಳನ್ನು ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಹಾರೋಹಳ್ಳಿ ಹೋಬಳಿ ಚಿಕ್ಕಕಲ್‌ಬಾಳು ಗ್ರಾಮದ ಚಿಕ್ಕಹುಚ್ಚೇಗೌಡ, ರವಿಕುಮಾರ್‌, ಪುಟ್ಟಬಸವೇಗೌಡ, ಪಾರ್ವತಮ ನವರ ವಿರುದ್ಧ ಪೋಲೀಸರು ಇದೊಂದು ಗಂಭೀರ ಅಪರಾಧವಾಗಿದ್ದು ನಕಲಿ ದಾಖಲೆ ಅಥವಾ ಬದಲಿ ವ್ಯಕ್ತಿಗಳ ಮೂಲಕ ಆಸ್ತಿ ನೋಂದಣಿ ಮಾಡಿರುವ ಹಾಗೂ ಮೋಸ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ ಎಂಬ ವಿವರಗಳನ್ನು ನೀಡಿದರು.

ಚಿಕ್ಕಕಲ್‌ಬಾಳು ಗ್ರಾಮದ ಹುಚ್ಚೇಗೌಡರಿಗೆ ಸೇರಿದ ಸರ್ವೆ ನಂ.82/3ರಲ್ಲಿ 33 ಗುಂಟೆ, 87/7ರಲ್ಲಿ 17 ಗುಂಟೆ, 87/9ರಲ್ಲಿ 16 ಗುಂಟೆ, 119/3ರಲ್ಲಿ 5 ಗುಂಟೆ ಒಟ್ಟು 1.32 ಎಕರೆ ಜಮೀನನ್ನು ಸತ್ತ ವ್ಯಕ್ತಿಯ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ಗಳನ್ನು ಸೃಷ್ಟಿಸಿ ಜಮೀನನ್ನು ನೊಂದಣಿ ಮಾಡಿಸಿಕೊಳ್ಳಲಾಗಿದೆ. ಜಮೀನಿನ ಮಾಲೀಕ ಹುಚ್ಚೇಗೌಡ ಎಂಬುವವರಿಗೆ ಚಿಕ್ಕಮಾರಕ್ಕ ಹಾಗೂ ಮಾವತೂರಮ ಇಬ್ಬರು ಪತ್ನಿಯರು ಮೃತಪಟ್ಟಿರುತ್ತಾರೆ.

ಎರಡನೇ ಪತ್ನಿ ಮಾವತೂರಮನ 7 ಮಕ್ಕಳಲ್ಲಿ 4ನೇ ಮಗ ಚಿಕ್ಕಹುಚ್ಚೇಗೌಡ ನಾನೇ ಹುಚ್ಚೇಗೌಡನೆಂದು ನಕಲಿ ದಾಖಲೆ ಸೃಷ್ಟಿಸಿ (ಆಧಾರ್‌ ಕಾರ್ಡ್‌ ಎಡಿಟ್‌) ಮಾಡಿ ಪುಟ್ಟಬಸವೇಗೌಡ ಮತ್ತು ರವಿಕುಮಾರ್‌ ಇಬ್ಬರೂ ಸೇರಿ 60 ವರ್ಷಗಳ ಹಿಂದೆ ಮೃತಪಟ್ಟಿರುವ ನಮ ತಾತ ಹುಚ್ಚೇಗೌಡರ ಹೆಸರಿನಲ್ಲಿರುವ ಜಮೀನನ್ನು ತಮದಾಗಿಸಿಕೊಳ್ಳಲು ನಮ ದೊಡ್ಡಪ್ಪನಾದ ಚಿಕ್ಕಹುಚ್ಚೇಗೌಡ ಆಧಾರ್‌ಕಾರ್ಡ್‌ನ್ನು ಹುಚ್ಚೇಗೌಡ ಎಂದು ನಕಲಿ ದಾಖಲೆ ಸೃಷ್ಟಿಸಿಕೊಂಡು ಕನಕಪುರದಲ್ಲಿ ನೋಂದಣಿ ಮಾಡಿಸಿಕೊಂಡರೆ ಬಹಿರಂಗವಾಗುವ ಹಿನ್ನಲೆಯಲ್ಲಿ ರಾಮನಗರಕ್ಕೆ ತೆರಳಿ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ತಮ ಹೆಸರಿಗೆ ವಿಭಾಗಪಟ್ಟಿಯನ್ನು ಮಾಡಿ ರಿಜಿಸ್ಟರ್‌ ಮಾಡಿಕೊಂಡು ಪರಭಾರೆ ಮಾಡಿಕೊಂಡಿದ್ದಾರೆ.

ವಿಭಾಗ ಪತ್ರ ಮಾಡಿಕೊಂಡು ರವಿಕುಮಾರ್‌ ತನ್ನ ಪತ್ನಿಯ ಹೆಸರಿಗೆ ದಾನ ಪತ್ರ ಮಾಡಿರುವುದಾಗಿ ಆರೋಪಿಸಿದರು. ನಮ ತಾತ ಹುಚ್ಚೇಗೌಡರಿಗೆ 5 ಮಂದಿ ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳಾದ ಚಿಕ್ಕಹುಚ್ಚೇಗೌಡ ಮತ್ತು ಹೊಂಬಾಳೇಗೌಡ ಇಬ್ಬರು ಮಕ್ಕಳ ಕುಟುಂಬಸ್ಥರ ಸದಸ್ಯರಿಗೆ ಬರಬೇಕಾಗಿದ್ದ ಆಸ್ತಿಯನ್ನು ರವಿಕುಮಾರ್‌ ಒಬ್ಬರೇ ತಮದಾಗಿಸಿಕೊಂಡಿದ್ದಾರೆ.

ಈ ವಿಷಯ ಗೊತ್ತಾದ ಕೂಡಲೇ ನಾನು ರಾಮನಗರದಲ್ಲಿ ದೂರು ದಾಖಲಿಸಿದ್ದೇನೆ, ಆಸ್ತಿ ಲಪಟಾಯಿಸಲು ಸಂಚು ರೂಪಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಿತ್ರಾರ್ಜಿತ ಆಸ್ತಿಯನ್ನು ಪತ್ನಿಯ ಹೆಸರಿಗೆ ಅನಧಿಕೃತವಾಗಿ ದಾನ ಪತ್ರದ ಮೂಲಕ ನೊಂದಣಿ ಮಾಡಿಸಿಕೊಂಡಿರುವ ರವಿಕುಮಾರ್‌ ಸೇರಿದಂತೆ ಮತ್ತಿತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಕರೂರ್‌ ಕಾಲ್ತುಳಿತ ಪ್ರಕರಣದ ತನಿಖೆ ಆರಂಭಿಸಿದ ಸಿಬಿಐ

ನವದೆಹಲಿ,ಅ.26– ಕರೂರ್‌ ಕಾಲ್ತುಳಿತದ ಪ್ರಕರಣದ ತನಿಖೆಯನ್ನು ಸಿಬಿಐ ರಂಭಿಸಿದೆ. ನಟ,ರಾಜಕಾರಣಿ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಾಜಕೀಯ ರ್ಯಾಲಿಯಲ್ಲಿ 41 ಜನರು ಸಾವನ್ನಪ್ಪಿದ ಕರೂರ್‌ ಕಾಲ್ತುಳಿತದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಕರೂರಿನ ವೇಲುಸಾಮಿಪುರಂನಲ್ಲಿರುವ ಸ್ಥಳಕ್ಕೆ ಸಿಬಿಐನ ವಿಶೇಷ ತಂಡ ಈಗಾಗಲೇ ಭೇಟಿ ನೀಡಿದೆ ಎಂದು ಅವರು ಹೇಳಿದರು.ನಿಯಮದಂತೆ, ಸಿಬಿಐ ರಾಜ್ಯ ಪೊಲೀಸರ ಎಫ್‌ಐಆರ್‌ ಅನ್ನು ಮರು ನೋಂದಾಯಿಸಿದೆ ಮತ್ತು ಬೆಳವಣಿಗೆಯ ಬಗ್ಗೆ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದೆ ಎಂದು ಅವರು ಹೇಳಿದರು.

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸ್ವತಂತ್ರ ತನಿಖೆಗಾಗಿ ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ.ತನಿಖೆಯನ್ನು ವಹಿಸಿಕೊಳ್ಳಲು ಹಿರಿಯ ಅಧಿಕಾರಿಯನ್ನು ನೇಮಿಸಲು ಮತ್ತು ಅಧಿಕಾರಿಯ ಸಹಾಯಕ್ಕಾಗಿ ಇತರ ಕೆಲವು ಅಧಿಕಾರಿಗಳನ್ನು ನೇಮಿಸಲು ಸುಪ್ರೀಂ ಕೋರ್ಟ್‌ ಸಿಬಿಐ ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು.

ಸಿಬಿಐ ತನಿಖೆಯ ಮೇಲ್ವಿಚಾರಣೆಗಾಗಿ ನ್ಯಾಯಾಲಯವು ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಅಜಯ್‌ ರಸ್ತೋಗಿ ನೇತೃತ್ವದಲ್ಲಿ ಮೂವರು ಸದಸ್ಯರ ಮೇಲ್ವಿಚಾರಣಾ ಸಮಿತಿಯನ್ನು ಸಹ ರಚಿಸಿತು.

ಕರ್ನೂಲ್‌ ಬಸ್ ಬೆಂಕಿ ದುರಂತಕ್ಕೆ ಬ್ಯಾಟರಿಗಳು ಸ್ಫೋಟಗೊಂಡಿದ್ದೇ ಕಾರಣ : ಪ್ರಾಥಮಿಕ ತನಿಖೆ ವರದಿ

ಹೈದರಾಬಾದ್‌,ಅ.26- ದೇಶವನ್ನೇ ಬೆಚ್ಚಿಬೀಳಿಸಿದ್ದ ಆಂಧ್ರಪ್ರದೇಶದ ಕರ್ನೂಲ್‌ ಬಳಿ ಸಂಭವಿಸಿದ ಭೀಕರ ಬಸ್‌‍ ದುರಂತಕ್ಕೆ 12 ಕೆವಿ ಸಾಮರ್ಥ್ಯದ ಬ್ಯಾಟರಿಗಳು ಸ್ಫೋಟಗೊಂಡಿದ್ದೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

20 ಪ್ರಯಾಣಿಕರು ಸಜೀವ ದಹನಗೊಂಡು, ಹಲವರು ಗಾಯಗೊಂಡಿದ್ದ ಈ ಘಟನೆಗೆ ಖಾಸಗಿ ವ್ಯಕ್ತಿಯೊಬ್ಬರು ದುಬಾರಿ ಬೆಲೆಯ ಸಾರ್ಟ್‌ಫೋನ್‌ಗಳನ್ನು ಸಾಗಿಸುತ್ತಿದ್ದರು. ಇದು ಸ್ಫೋಟಗೊಂಡಿದೇ ಘಟನೆಗೆ ಮತ್ತೊಂದು ಕಾರಣ ಎಂದು ತನಿಖೆಯಿಂದ ತಿಳಿದುಬಂದಿದೆ. ಘಟನೆ ನಡೆದ ನಂತರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಎಫ್‌ಎಸ್‌‍ಎಲ್‌ ತನಿಖಾ ವರದಿ ಈವರೆಗೂ ಅಧಿಕೃತವಾಗಿ ಹೊರಬಂದಿಲ್ಲ. ಪ್ರಾಥಮಿಕ ಮೂಲಗಳ ಪ್ರಕಾರ ಬಸ್‌‍ಗೆ ಅಳವಡಿಸಿದ್ದ 12ಕೆವಿ ಸಾಮರ್ಥ್ಯದ ಬ್ಯಾಟರಿ ಮತ್ತು ಸಾರ್ಟ್‌ಫೋನ್‌ ಏಕಕಾಲಕ್ಕೆ ಸ್ಪೋಟಗೊಂಡಿದ್ದರಿಂದ 20 ಮಂದಿಯ ಜೀವ ಬಲಿ ತೆಗೆದುಕೊಂಡಿದೆ.ಅಪಘಾತಕ್ಕೂ ಮುನ್ನ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಬಸ್‌‍ ಡಿಕ್ಕಿಯಾಗಿ ವಾಹನವನ್ನು ಕೆಳಗೆ ಎಳೆದುಕೊಂಡು ಹೋಗಿದ್ದರಿಂದ ಬೈಕ್‌ನ ಇಂಧನ ಟ್ಯಾಂಕ್‌ ಒಡೆದು ಬೆಂಕಿ ಹೊತ್ತಿಕೊಂಡಿತು. ಬಸ್‌‍ನಲ್ಲಿದ್ದ 19 ಪ್ರಯಾಣಿಕರು ಮತ್ತು ಬೈಕ್‌ ಸವಾರ ಸೇರಿದಂತೆ ಇಪ್ಪತ್ತು ಜನರು ಸಾವನ್ನಪ್ಪಿದ್ದರು.

ವಿಧಿವಿಜ್ಞಾನ ತಜ್ಞರ ಪ್ರಕಾರ, ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಸ್ಲೀಪರ್‌ಬಸ್‌‍ ಸುಮಾರು 46 ಲಕ್ಷ ರೂ. ಮೌಲ್ಯದ 234 ಸಾರ್ಟ್‌ಫೋನ್‌ಗಳು ಇದ್ದವು. ಇವುಗಳನ್ನು ವ್ಯಾಪಾರಿಯೊಬ್ಬರು ಲಾಜಿಸ್ಟಿಕ್‌್ಸ ಸೇವೆಯ ಮೂಲಕ ಸಾಗಿಸುತ್ತಿದ್ದರು.ಬೆಂಕಿ ಪ್ರಾರಂಭವಾದ ನಂತರ ಸಾಧನಗಳೊಳಗಿನ ಲಿಥಿಯಂ-ಐಯಾನ್‌ ಬ್ಯಾಟರಿಗಳು ಸ್ಫೋಟಗೊಂಡು ಪ್ರಯಾಣಿಕರ ಕ್ಯಾಬಿನ್‌ನಾದ್ಯಂತ ವೇಗವಾಗಿ ಹರಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಬಸ್ಸಿನ ಮುಂಭಾಗದಲ್ಲಿ ಇಂಧನ ಸೋರಿಕೆ ಕಂಡುಬಂದಿದ್ದು, ಬೈಕ್‌ ವಾಹನದ ಕೆಳಗೆ ಸಿಲುಕಿಕೊಂಡ ನಂತರ ಬೆಂಕಿ ಹೊತ್ತಿಕೊಂಡಿದೆ.ಇದರ ಪರಿಣಾಮ ಉಂಟಾದ ಬೆಂಕಿ ಕಿಡಿಗಳು ಮತ್ತು ಇಂಧನ ಸೋರಿಕೆ ಬೆಂಕಿಗೆ ಹತ್ತಿಕೊಳ್ಳಲು ಕಾರಣವಾಯಿತು. ಅಲ್ಯೂಮಿನಿಯಂ ಶಾಖಕ್ಕೆ ಕರಗಿ, ಬೆಂಕಿಯ ವೇಗ ಹೆಚ್ಚಲು ಕಾರಣವಾಯಿತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಅಗ್ನಿಶಾಮಕ ಸೇವೆಗಳು ಮತ್ತು ವಿಧಿವಿಜ್ಞಾನ ಇಲಾಖೆಯ ತಜ್ಞರು ಸಲ್ಲಿಸಿರುವ ವರದಿಯ ಪ್ರಕಾರ, ಬಸ್ಸಿನ ಬ್ಯಾಟರಿ ಪ್ಯಾಕ್‌ ಜೊತೆಗೆ ಸಾರ್ಟ್‌ಫೋನ್‌ ಸರಕು ಬೆಂಕಿ ಹರಡಲು ಕಾರಣ ಎಂದು ದೃಢಪಡಿಸಿದ್ದಾರೆ.ಈ ಅವಘಡಕ್ಕೆ ಬಸ್‌‍ನಲ್ಲಿದ್ದ ಎರಡು 12 ಕೆವಿ ಬ್ಯಾಟರಿಗಳೇ ಕಾರಣ, ಸಾರ್ಟ್‌ಫೋನ್‌ಗಳ ಸರಕಲ್ಲ ಎಂದು ಹೇಳಿ, ಅವು ಹೆಚ್ಚಾಗಿ ಹಾಗೆಯೇ ಇದ್ದವು ಎಂದು ಕರ್ನೂಲ್‌ ರೇಂಜ್‌ ಡೆಪ್ಯೂಟಿ ಇನ್‌್ಸಪೆಕ್ಟರ್‌ ಜನರಲ್‌ (ಡಿಐಜಿ) ಕೋಯಾ ಪ್ರವೀಣ್‌ ಹೇಳಿದ್ದಾರೆ.

ಅದು (ದ್ವಿಚಕ್ರ ವಾಹನ ಇಂಧನ ಟ್ಯಾಂಕ್‌) ಬೆಂಕಿಗೆ ಪ್ರಮುಖ ಕಾರಣವಲ್ಲ. ಟ್ಯಾಂಕ್‌ ಸಿಡಿದು ಬೆಂಕಿ ನಿಖರವಾಗಿ ಮುಖ್ಯ ನಿರ್ಗಮನ ದ್ವಾರದಲ್ಲಿ ಕಾಣಿಸಿಕೊಂಡಿತು. ಮುಖ್ಯ ನಿರ್ಗಮನ ದ್ವಾರದ ಹಿಂದೆ ಬಸ್‌‍ ಬ್ಯಾಟರಿಗಳು, ಎರಡು 12 ಕೆವಿ ಬ್ಯಾಟರಿಗಳು ಇದ್ದವು. ಈ ಬ್ಯಾಟರಿಗಳು ಸ್ಫೋಟಗೊಂಡವು ಎಂದು ಸುದ್ದಿ ಸಂಸ್ಥೆಗೆ ಅವರು ತಿಳಿಸಿದ್ದಾರೆ.

ಈ ಎರಡು ಕಾರಣಗಳ ಹೊರತಾಗಿ, ಬಸ್ಸಿನಲ್ಲಿ ಲೋಹದ ಬಣ್ಣ ಸೇರಿದಂತೆ ಹೆಚ್ಚು ದಹನಕಾರಿ ವಸ್ತುಗಳನ್ನು ಅಳವಡಿಸಲಾಗಿತ್ತು, ಇದು ಬೆಂಕಿಯನ್ನು ಮತ್ತಷ್ಟು ಹೆಚ್ಚಿಸಿತು ಎಂದು ಡಿಐಜಿ ಪ್ರವೀಣ್‌ ಹೇಳಿದರು.

ಏತನಧ್ಯೆ ಸುಟ್ಟ ದೇಹಗಳ ಗುರುತುಗಳನ್ನು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಯುತ್ತಿದ್ದು, ಸೋಮವಾರದೊಳಗೆ ಈ ಪ್ರಕ್ರಿಯೆಯು ಪೂರ್ಣಗೊಳ್ಳಬಹುದು.ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್‌‍ನಲ್ಲಿ 44 ಪ್ರಯಾಣಿಕರಿದ್ದರು. ಕೆಲವರು ಬೆಂಕಿಯಿಂದ ಪಾರಾಗಿದ್ದಾರೆ. ಪ್ರಯಾಣಿಕರ ಬಾಗಿಲಿನಿಂದ ಹಾರಿ ಬೆಂಕಿಯಿಂದ ಪಾರಾದ ಬಸ್‌‍ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ವಾಹನದೊಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡ ಲಕ್ಷ್ಮಯ್ಯ ಮತ್ತು ನಾರಾಯಣ, ಟೈರ್‌ ಬದಲಾಯಿಸಲು ಬಳಸುವ ರಾಡ್‌ನಿಂದ ಕಿಟಕಿ ಗಾಜುಗಳನ್ನು ಒಡೆಯಲು ಪ್ರಾರಂಭಿಸಿದರು, ಇದರಿಂದಾಗಿ ಕೆಲವು ಪ್ರಯಾಣಿಕರು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ.

ಕೆಲವು ಪ್ರೇಕ್ಷಕರು ಇನ್ನೂ ಕೆಲವು ಕಿಟಕಿ ಗಾಜುಗಳನ್ನು ಒಡೆದರು, ಇನ್ನು ಕೆಲವರು ಗಾಬರಿಗೊಂಡು ತಪ್ಪಿಸಿಕೊಳ್ಳಲು ಧಾವಿಸಿದ ಪ್ರಯಾಣಿಕರಿಂದ ಒಳಗಿನಿಂದ ಮುರಿದಿದ್ದಾರೆ. ಆದಾಗ್ಯೂ ಬೆಂಕಿಯು ಉರಿಯುತ್ತಲೇ ಇತ್ತು ಮತ್ತು ಇಡೀ ಬಸ್ಸನ್ನು ಆವರಿಸಿತ್ತು. ಇದರಿಂದ ಭಯಭೀತರಾದ ಲಕ್ಷ್ಮಯ್ಯ ಸ್ಥಳದಿಂದ ಪರಾರಿಯಾಗಿದ್ದ.

ಪೊಲೀಸರು ಕರ್ನೂಲ್‌ನಿಂದ ಆತನನ್ನು ಬಂಧಿಸಿದ್ದಾರೆ. ಈತಮ ವಿರುದ್ಧ ನಿರ್ಲಕ್ಷ್ಯ ಮತ್ತು ಅತಿ ವೇಗದ ಚಾಲನೆಗಾಗಿ ಬಿಎನ್‌ಎಸ್‌‍ ಕಾಯ್ದೆಯ ಸೆಕ್ಷನ್‌ 125 (ಎ) (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವುದು) ಮತ್ತು 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .

ರಾಜ್ಯದ 17 ಜಿಲ್ಲೆಗಳಲ್ಲಿ ಇಂದು ಆರ್‌ಎಸ್‌‍ಎಸ್‌‍ ಪಥಸಂಚಲನ, ಪೊಲೀಸರು ಅಲರ್ಟ್

ಬೆಂಗಳೂರು, ಅ.26- ರಾಜ್ಯದ 17 ಜಿಲ್ಲೆಗಳಲ್ಲಿ ಇಂದು ಆರ್‌ಎಸ್‌‍ಎಸ್‌‍ ಪಥಸಂಚಲನ ನಡೆಯಲಿದ್ದು, ಬಿಗಿ ಪೊಲೀಸ್‌‍ ಬಂದೋಬಸ್ತ್‌ ಮಾಡಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಆಯುಕ್ತ ಹಿತೇಂದ್ರ ಅವರು ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಯಚೂರು, ಹಾಸನ, ಶಿವಮೊಗ್ಗ, ಮಂಡ್ಯ, ಬೆಳಗಾವಿ, ಕೋಲಾರ, ವಿಜಯಪುರ ಸೇರಿದಂತೆ 17 ಜಿಲ್ಲೆಗಳಲ್ಲಿ ಪಥ ಸಂಚಲನ ನಡೆಯಲಿದೆ ಎಂದು ವಿವರಿಸಿದರು.ಪಥ ಸಂಚಲನ ನಡೆಯುವ ಜಿಲ್ಲೆಗಳಲ್ಲಿ ಎಸ್‌‍ಪಿಗಳು ಮೊಕ್ಕಾಂ ಹೂಡಿದ್ದಾರೆ. ಸ್ಥಳೀಯ ಪೊಲೀಸರ ಜತೆಗೆ ಕೆಎಸ್‌‍ಆರ್‌ಪಿ, ಡಿಎಆರ್‌ ತುಕಡಿಗಳನ್ನು ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿದೆ.

ಸಣ್ಣಪುಟ್ಟ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಜಿಲ್ಲಾ ಎಸ್‌‍ಪಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪಥ ಸಂಚಲನ ನಡೆಯುವ ರಸ್ತೆಗಳಲ್ಲಿ ನಿಗಾ ವಹಿಸುವಂತೆಯೂ ಸಹ ಈಗಾಗಲೇ ತಿಳಿಸಲಾಗಿದೆ.

ಕೆಲವು ಜಿಲ್ಲೆಗಳಲ್ಲಿ ಶಾಂತಿಸಭೆ ಸಹ ನಡೆಸಲಾಗಿದೆ. ಒಟ್ಟಾರೆ ಪಥ ಸಂಚಲನ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದ ರೀತಿ ಸೂಕ್ತ ಬಂದೋಬಸ್ತ್‌ ಮಾಡಿದ್ದೇವೆ.
ಯಾರೇ ಆದರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಮಾಲೂರಿನಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲ
ಬೆಂಗಳೂರು,ಅ.26-ಅತ್ತ ಚಿತ್ತಾಪುರ ಮತ್ತು ಯಾದಗಿರಿಯಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನಕ್ಕೆ ಜಿಲ್ಲಾಡಳಿತ ನಿರ್ಬಂಧ ಹಾಕಿರುವ ಬೆನ್ನಲ್ಲೇ ಇತ್ತ ಕೋಲಾರದ ಮಾಲೂರಿನಲ್ಲಿ ಆರ್‌ಎಸ್‌‍ಎಸ್‌‍ ಪಥಸಂಚಲನವು ಅದ್ಧೂರಿಯಾಗಿ ನಡೆಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಜಿಲ್ಲಾಡಳಿತವು ಪಥಸಂಚಲನಕ್ಕೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅನುಮತಿ ನೀಡಿತ್ತು. 3 ಗಂಟೆಗೆ ಜಮಾವಣೆಗೊಂಡ ಸ್ವಯಂಸೇವಕರು ಸುಮಾರು 4 ಕಿ.ಮೀವರೆಗೆ ಪಥಸಂಚಲನ ನಡೆಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌‍ಎಸ್‌‍) ಶತಮಾನೋತ್ಸವದ ಅಂಗವಾಗಿ ನಗರದಲ್ಲಿಂದು ಸಾವಿರಾರು ಗಣವೇಷಧಾರಿಗಳು ಪಥಸಂಚಲನ ನಡೆಸಿದರು. ನಗರದ ಹೊಂಡಾ ಸ್ಟೇಡಿಯಂನಿಂದ ಆರಂಭವಾದ ಪಥಸಂಚಲನವು ಬಿಇಒ ಕಚೇರಿಯ ಮುಖ್ಯರಸ್ತೆ ಮಾರ್ಗವಾಗಿ ಕುವೆಂಪು ವೃತ್ತ, ಧರ್ಮರಾಯಸ್ವಾಮಿ ದೇವಾಲಯ, ಅಗ್ರಹಾರ ಬೀದಿ, ಕುಂಬಾರಪೇಟೆ ವೃತ್ತ, ದೊಡ್ಡಪೇಟೆ, ಮಹಾರಾಜ ಸರ್ಕಲ್‌, ಬಾಬುರಾವ್‌ ರಸ್ತೆ, ಕೆಂಪೇಗೌಡ ಸರ್ಕಲ್‌, ಮಾರಿಕಾಂಬ ಸರ್ಕಲ್‌, ಬ್ರಹಕುಮಾರಿ ರಸ್ತೆ, ಅರಳೇರಿ ರಸ್ತೆ ಮೂಲಕ ಹಾದು ಪುನಃ ಹೊಂಡಾ ಸ್ಟೇಡಿಯಂನಲ್ಲಿ ಸಂಪನ್ನಗೊಂಡಿತು.

ಆರ್‌ಎಸ್‌‍ಎಸ್‌‍ ಪಥಸಂಚಲನದ ಹಿನ್ನೆಲೆಯಲ್ಲಿ ಇಡೀ ಮಾಲೂರು ಪಟ್ಟಣದ ಕಳೆದ ಎರಡು ದಿನಗಳಿಂದ ಕೆಸರಿಮಯವಾಗಿತ್ತು. ಪಥಸಂಚಲನ ಹಾದುಹೋಗುವ ಕಡೆಯಲೆಲ್ಲ ದಾರಿಯುದ್ದಕ್ಕೂ ಕೇಸರಿ ಬಾವುಟ, ಭಾಗಧ್ವಜಗಳು, ಫ್ಲೆಕ್ಸ್ , ಬಂಟಿಂಗ್ಸ್ ,ಆರ್‌ಎಸ್‌‍ಎಸ್‌‍ ನಾಯಕರ ಭಾವಚಿತ್ರಗಳು ರಾರಾಜಿಸುತ್ತಿದ್ದವು.

ನಗರದ ಅಂತರಗಂಗೆ ರಸ್ತೆಯ ಕುವೆಂಪು ಉದ್ಯಾನ ಮುಂಭಾಗ ಆರಂಭಗೊಂಡ ಪಥಸಂಚಲನದಲ್ಲಿ ಭಾರತಮಾತೆ ಹಾಗೂ ಸಂಘದ ಸಂಸ್ಥಾಪಕ ಡಾ.ಕೇಶವ್‌ ಬಲಿರಾಮ್‌ ಹೆಡಗೇವಾರ್‌ ಭಾವಚಿತ್ರವನ್ನು ತೆರದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. ಜೀಪಿನ ಹಿಂದೆ ಮುಂದೆ ಆರ್‌ಎಸ್‌‍ಎಸ್‌‍ ಗಣವೇಷಧಾರಿಗಳು ದಂಡ ಹಿಡಿದು, ಕೆಲವರು ಡ್ರಮ್‌ ಬಾರಿಸುತ್ತಾ ಸಾಗಿಸಿದರು.

ಸರ್ಕಾರ ವರ್ಸಸ್‌‍ ಆರ್‌ಎಸ್‌‍ಎಸ್‌‍ ಎಂದು ಬಿಂಬಿತವಾಗಿದ್ದ ಈ ಪಥಸಂಚಲನವು ರಾಜಕೀಯವಾಗಿ ಅಷ್ಟೇ ಮಹತ್ವವನ್ನು ಪಡೆದುಕೊಂಡಿತ್ತು. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಆರ್‌ಎಸ್‌‍ಎಸ್‌‍ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಆಗಮಿಸಿ ಶಾಂತಿ ರೀತಿಯಲ್ಲಿ ಪಥಸಂಚಲನ ನಡೆಸಿದರು.

ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ಮಂಜುನಾಥ ಗೌಡ ಸೇರಿದಂತೆ ಅನೇಕರು ಪಥಸಂಚಲನದಲ್ಲಿ ಗಣವೇಷಧಾರಿಗಳಾಗಿ ಎಲ್ಲರ ಗಮನಸೆಳೆದರು. ನಗರದ ಪ್ರಮುಖ ಭಾಗಗಳಲ್ಲಿ ಪಥಸಂಚಲನ ಹಾದುಬರುವಾಗ ಸಾರ್ವಜನಿಕರು ತುಂಬು ಹೃದಯದ ಸ್ವಾಗತ ಕೋರಿ ದೇಶಾಭಿಮಾನ ಮೆರೆದರು.ಅನೇಕರು ಗಣವೇಷಧಾರಿಗಳಿಗೆ ಪುಷ್ಪವೃಷ್ಟಿ ಮಾಡಿ ಭಾರತ್‌ ಮಾತಾ ಕೀ ಜೈ ಘೋಷಣೆಗಳನ್ನು ಮೊಳಗಿಸಿದರು.

ಅಧಿಕಾರಕ್ಕೆ ಬಂದರೆ ಪಂಚಾಯತ್‌ ಪ್ರತಿನಿಧಿಗಳಿಗೆ 50 ಲಕ್ಷ ಪಿಂಚಣಿ ಮತ್ತು ವಿಮೆ : ತೇಜಸ್ವಿ ಯಾದವ್‌ ಘೋಷಣೆ

ಪಾಟ್ನಾ,ಅ.26-ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪಂಚಾಯತ್‌ ಪ್ರತಿನಿಧಿಗಳಿಗೆ 50 ಲಕ್ಷ ಪಿಂಚಣಿ ಮತ್ತು ವಿಮಾ ರಕ್ಷಣೆ ನೀಡುವುದಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಘೋಷಣೆ ಮಾಡಿದ್ದಾರೆ. ಈಗಾಗಲೇ ಪ್ರತಿ ಮನೆಗೆ ಸರ್ಕಾರಿ ಉದ್ಯೋಗ ಭರವಸೆ ನೀಡಿದ್ದಾರೆ. ನಾಲ್ಕು ಕಾರ್ಯಕ್ರಮಗಳನ್ನು ಹಮಿಕೊಂಡಿದ್ದು, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮೈತ್ರಿಕೂಟದ ಭರವಸೆ ಪ್ರಕಟಿಸಿದ್ದಾರೆ.

ನಾವು ಮೂರು ಹಂತದ ಪಂಚಾಯತ್‌ ಪ್ರತಿನಿಧಿಗಳಿಗೆ (ತಾಲೂಕು, ಜಿಲ್ಲೆ, ಗ್ರಾಮ ಪಂಚಾಯಿತಿ) ಪಿಂಚಣಿ ಯೋಜನೆ ಜಾರಿಗೆ ತರುತ್ತೇವೆ. 50 ಲಕ್ಷ ರೂ.ವರೆಗೆ ವಿಮೆ ಸಹ ಒದಗಿಸಲಾಗುವುದು. ಪಿಡಿಎಸ್‌‍ ವಿತರಕರಿಗೆ ಗೌರವಧನ ನೀಡಲಾಗುವುದು ಹಾಗೂ ಪ್ರತಿ ಕ್ವಿಂಟಾಲ್‌ಗೆ ಮಾರ್ಜಿನ್‌ ಹಣ ಹೆಚ್ಚಿಸಲಾಗುವುದು.ಅಲ್ಲದೇ ಕುಂಬಾರರು, ಕಮಾರರು ಮತ್ತು ಬಡಗಿಗಳಂತಹ ಶ್ರಮಜೀವಿಗಳಿಗೆ 5 ಲಕ್ಷ ರೂಪಾಯಿಗಳ ವರೆಗೆ ಆರ್ಥಿಕ ನೆರವು ನೀಡುವುದಾಗಿ ಅವರು ಘೋಷಿಸಿದರು.

5 ವರ್ಷದಲ್ಲಿ 5 ಲಕ್ಷ ರೂ. ಏಕಕಾಲಿಕ ನೆರವು, ಸರ್ಕಾರಿ ಉದ್ಯೋಗಗಳಿಗೆ ಅನುಕಂಪದ ನೇಮಕಾತಿಗಳಿಗೆ 58 ವರ್ಷ ವಯಸ್ಸಿನ ಮಿತಿ ತೆಗೆದುಹಾಕುವುದಾಗಿಯೂ ಭರವಸೆ ನೀಡಿದ್ದಾರೆ.
ಚುನಾವಣಾ ಪ್ರಚಾರ ತೀವ್ರಗೊಂಡಿದೆ ಮತ್ತು ಬಿಹಾರ ಬದಲಾವಣೆಗೆ ಹಾತೊರೆಯುತ್ತಿದೆ. ಪ್ರಸ್ತುತ ಅಧಿಕಾರದಲ್ಲಿರುವ ನಿತೀಶ್‌ ಕುಮಾರ್‌ ಸರ್ಕಾರವನ್ನು ಟೀಕಿಸಿದ ತೇಜಸ್ವಿ ಯಾದವ್‌, ಬಿಹಾರದಲ್ಲಿ 20 ವರ್ಷಗಳಿಂದ ನಿಷ್ಕಿಯ ಸರ್ಕಾರವಿದೆ ಮತ್ತು ಈಗ ಸಾರ್ವಜನಿಕರು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ತಾನು ಎಲ್ಲಿಗೆ ಹೋದರೂ, ಎಲ್ಲಾ ಜಾತಿ ಮತ್ತು ಧರ್ಮದ ಜನರು ಅವರನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದರು.

ಜನರು ಪ್ರಸ್ತುತ ಸರ್ಕಾರದಿಂದ ಬೇಸತ್ತಿದ್ದಾರೆ ಮತ್ತು ಬಿಹಾರ ಸರ್ಕಾರವನ್ನು ಬದಲಾಯಿಸಲು ಬಯಸುತ್ತಾರೆ. ಈ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರ ಮತ್ತು ಅಪರಾಧಗಳು ವ್ಯಾಪಕವಾಗಿವೆ ಮತ್ತು ಜನರು ಬಿಜೆಪಿಯನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು.

ಪ್ರಚಾರ ಶುರುವಾದಾಗಿನಿಂದ ಬಿಹಾರ ಬದಲಾವಣೆಗಾಗಿ ಕಾತರದಿಂದ ಕಾಯುತ್ತಿದೆ. ಎನ್‌ಡಿಎ ದೃಷ್ಟಿಹೀನ ಸರ್ಕಾರ, ಭ್ರಷ್ಟ ಸರ್ಕಾರ. ಈ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಬಜೆಟ್‌ನಲ್ಲಿ ಬಿಹಾರಕ್ಕೆ ಬರಬೇಕಾದ ಹಣ ಗುಜರಾತ್‌ಗೆ ಹೋಗುತ್ತಿದೆ ಎಂದು ಕಿಡಿ ಕಾರಿದರು.

ಬಿಜೆಪಿ ಮತ್ತು ನಿತೀಶ್‌ ವಿರುದ್ಧ ವಾಗ್ದಾಳಿ :
ಬಿಜೆಪಿ ಮತ್ತು ಅಮಿತ್‌ ಶಾ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ತೇಜಸ್ವಿ ಯಾದವ್‌, ಬಿಹಾರದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಉದ್ದೇಶಪೂರ್ವಕವಾಗಿ ಅವಕಾಶ ನೀಡಲಾಗಿಲ್ಲ ಎಂದು ಹೇಳಿದರು. ಅಲ್ಲದೆ, ತಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡುವಾಗ, 17 ತಿಂಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲಾಗಿದೆ ಮತ್ತು ಚಾಚಾಜಿ ಅವರ ವಿರುದ್ಧ ತಿರುಗಿ ಬೀಳದಿದ್ದರೆ, ಹೆಚ್ಚಿನ ಕೆಲಸಗಳನ್ನು ಮಾಡಲಾಗುತ್ತಿತ್ತು ಎಂದು ಹೇಳಿದರು.

ಕಾಂಗ್ರೆಸ್‌‍ ಮತ್ತು ಮೈತ್ರಿಕೂಟದ ಬಗ್ಗೆ, ನಾವು ಒಟ್ಟಾಗಿ ಪ್ರಚಾರ ಮಾಡುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಂದಲೂ ಪ್ರಚಾರ ಆರಂಭವಾಗಲಿದೆ ಎಂದು ಹೇಳಿದ ತೇಜಸ್ವಿ ಯಾದವ್‌, ತೇಜಶ್ವಿ ಯಾರಿಗೂ ಹಾನಿ ಮಾಡಿಲ್ಲ ಮತ್ತು ತೇಜಶ್ವಿ ವಿರುದ್ಧ ಯಾರಿಗೂ ಯಾವುದೇ ದೂರುಗಳಿಲ್ಲ. ಬಿಹಾರದ ಜನರು ಹಿಂದಿನ ಸರ್ಕಾರಕ್ಕೆ 20 ವರ್ಷಗಳನ್ನು ನೀಡಿದರು ಮತ್ತು ಈಗ ನಾವು ಕೇವಲ 20 ತಿಂಗಳುಗಳನ್ನು ಕೇಳುತ್ತಿದ್ದೇವೆ ಎಂದು ಹೇಳಿದರು. ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ 6ರಂದು ಮೊದಲ ಹಂತ ನವೆಂಬರ್‌ 11ರಂದು 2ನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನ.14ರಂದು ಫಲಿತಾಂಶಪ್ರಕಟವಾಗಲಿದೆ.

ಕರೂರು ಕಾಲ್ತುಳಿತ : ಮೃತರ ಕುಟುಂಬಸ್ಥರ ಭೇಟಿಗೆ ಮುಂದಾದ ಟಿಎಂಕೆ ಮುಖ್ಯಸ್ಥ ನಟ ವಿಜಯ್‌

ಚೆನ್ನೈ,ಅ.26- ಭಾರೀ ವಿವಾದ ಸೃಷ್ಟಿಸಿರುವ ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣ ಸಂಬಂಧ ಮೃತರ ಕುಟುಂಬಸ್ಥರನ್ನು ನಟ, ಟಿಎಂಕೆ ಮುಖ್ಯಸ್ಥ ವಿಜಯ್‌ ನಾಳೆ ಭೇಟಿಯಾಗಲಿದ್ದಾರೆ.ಈ ಘಟನೆ ನಡೆದು ಒಂದು ತಿಂಗಳ ಬಳಿಕ ನಟ ಹಾಗೂ ರಾಜಕಾರಣಿ ವಿಜಯ್‌ ಸೋಮವಾರರಂದು ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ನಾಳೆ ಚೆನ್ನೈ ಸಮೀಪದ ಮಹಾಬಲಿಂಪುರದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಮೃತರ ಕುಟುಂಬಸ್ಥರನ್ನು ನಟ ಭೇಟಿ ಮಾಡಲಿದ್ದಾರೆ. ಈ ಹಿನ್ನೆಲೆ ಖಾಸಗಿ ರೆಸಾರ್ಟ್‌ನಲ್ಲಿ 50 ರೂಮ್‌ಗಳನ್ನು ಕಾಯ್ದಿರಿಸಲಾಗಿದೆ.ಸ್ಥಳಕ್ಕೆ ಬರಲು ಮೃತರ ಕುಟುಂಬಸ್ಥರಿಗೆ ಬಸ್‌‍ ವ್ಯವಸ್ಥೆ ಮಾಡಲಾಗಿದೆ.ಕಳೆದ ಕೆಲವು ವಾರದ ಹಿಂದೆ ವಿಡಿಯೋ ಕಾಲ್‌ ಮಾಡಿಯೂ ವಿಜಯ್‌ ಮಾತನಾಡಿದ್ದರು. ಆ ವೇಳೆ ನೇರ ಭೇಟಿಯಾಗುವ ಬಗ್ಗೆ ಪ್ರಸ್ತಾಪಿಸಿದ್ದರು.

ಯಾರಿಗೂ ಪ್ರವೇಶವಿಲ್ಲ..!
ವಿಜಯ್‌ ದುರಂತದಲ್ಲಿ ಮೃತಪಟ್ಟವರ ಜೊತೆ ಮಾತನಾಡುವ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಆಗಲಿ ಅಥವಾ ವಿಜಯ್‌ ಪಕ್ಷದ ಸದಸ್ಯರಿಗೆ ಆಗಲಿ ಅನುಮತಿ ನೀಡಲಾಗಿಲ್ಲ. ಸಂತ್ರಸ್ತರ ಕುಟುಂಬಗಳಿಗೆ ಖಾಸಗಿಯಾಗಿ ಸಾಂತ್ವನ ಹೇಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಖಾಸಗಿ ಮಾಧ್ಯಮಗಳ ವರದಿಗಳ ಪ್ರಕಾರ, ವಿಜಯ್‌ ಅವರು ಪ್ರತಿ ಕುಟುಂಬದೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಸಮಯದಲ್ಲಿ, ಅವರು ಕುಟುಂಬಗಳ ನೋವಿನಲ್ಲಿ ಭಾಗಿಯಾಗಿ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಘಟನೆ ನಡೆದ ಮರುದಿನವೇ ವಿಜಯ್‌ ಅವರು ಮೃತರ ಪ್ರತಿ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರು.

ಮುಂದಿನ ವರ್ಷ ತಮಿಳುನಾಡಿನ ವಿಧಾನಸಭಾ ಚುನಾವಣೆಗೂ ಮುನ್ನ ತಮಿಳುನಾಡಿನ ರಾಜಕೀಯ ವಲಯದಲ್ಲಿ ಕರೂರು ಕಾಲ್ತುಳಿತ ದುರಂತವು ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಈ ಘಟನೆಯು ವಿಜಯ್‌ ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಸೆ.27ರಂದು ಕರೂರ್‌ನಲ್ಲಿ ನಟ ವಿಜಯ್‌ ಚುನಾವಣಾ ರ್ಯಾಲಿ ನಡೆಸಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಪುಷ್ಪ ಸಿನಿಮಾ ಸ್ಟೈಲಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆಂಧ್ರದ ಗ್ಯಾಂಗ್‌ ಅರೆಸ್ಟ್

ಬೆಂಗಳೂರು, ಅ.26- ತೆಲುಗಿನ ಪುಷ್ಪ ಸಿನಿಮಾ ಮಾದರಿಯಲ್ಲಿ ಶ್ರೀಗಂಧದ ತುಂಡುಗಳನ್ನು ಈರುಳ್ಳಿ ಚೀಲಗಳ ಕೆಳಗಿಟ್ಟು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಆಂಧ್ರದ ನಾಲ್ವರ ಗ್ಯಾಂಗ್‌ಅನ್ನು ಬಂಧಿಸಿರುವ ಸಿದ್ದಾಪುರ ಠಾಣೆ ಪೊಲೀಸರು 750 ಕೆಜಿ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಶೇಕ್‌ ಅಬ್ದುಲ್‌ಕಲಾಂ, ಶೇಕ್‌ ನಾಸಿರ್‌, ಪರಮೇಶ್‌, ರಾಮ್‌ ಬಹದ್ದೂರ್‌ ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 207 ಗೂಡ್‌್ಸ ವಾಹನ ಹಾಗೂ ಮಹೀಂದ್ರ ಪಿಕಪ್‌ ವಾಹನವನ್ನು ವಶಪಡಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ನಗರದ ಸೋಮೇಶ್ವರ ಆರ್ಚ್‌ ಬಳಿ ಈ ವಾಹನಗಳು ಬರುತ್ತಿದ್ದಂತೆ ಅಡ್ಡಗಟ್ಟಿದ ಪೊಲೀಸರು ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ ಆರೋಪಿಗಳು 258 ಶ್ರೀಗಂಧದ ತುಂಡುಗಳನ್ನು ಚೀಲಗಳಲ್ಲಿ ತುಂಬಿ ಅವುಗಳನ್ನು ಕೆಳಗಿಟ್ಟು ಆ ಚೀಲಗಳ ಮೇಲೆ ಈರುಳ್ಳಿ ಚೀಲಗಳನ್ನು ಜೋಡಿಸಿರುವುದು ಕಂಡುಬಂದಿದೆ. ಈ ವಾಹನದ ಹಿಂದೆ ಇದ್ದ ಮಹೀಂದ್ರ ವಾಹನವನ್ನು ಸಹ ವಶಪಡಿಸಿಕೊಂಡು ಅದರಲ್ಲಿದ್ದ ಮೂವರು ಮತ್ತು ಗೂಡ್ಸ್ ವಾಹನ ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ.

ಶ್ರೀಗಂಧದ ತುಂಡುಗಳನ್ನು ಆಂಧ್ರ ಪ್ರದೇಶದ ಕರ್ನೂಲ್‌ ಅರಣ್ಯ ಪ್ರದೇಶದಿಂದ ಬೆಂಗಳೂರು ನಗರಕ್ಕೆ ತರಲಾಗುತ್ತಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.ಆದರೆ, ಈ ಶ್ರೀಗಂಧದ ತುಂಡುಗಳನ್ನು ಯಾರಿಗೆ ತಲುಪಿಸಲಾಗುತ್ತಿತ್ತು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಪ್ರಮುಖ ಆರೋಪಿ ಸಿಕ್ಕಿದ ನಂತರವೇ ಮತ್ತಷ್ಟು ವಿಷಯಗಳು ಬೆಳಕಿಗೆ ಬರಲಿವೆ. ಪೊಲೀಸ್‌‍ ಮೂಲಗಳ ಪ್ರಕಾರ, ಈ ಶ್ರೀಗಂಧದ ತುಂಡುಗಳನ್ನು ಬೆಂಗಳೂರು ನಗರದಿಂದ ವಿದೇಶಕ್ಕೆ ಕಳುಹಿಸಲು ಸಿದ್ಧತೆ ನಡೆದಿತ್ತು ಎಂದು ತಿಳಿದುಬಂದಿದೆ.