Home Blog Page 26

ಅಧಿಕಾರಕ್ಕೆ ಬಂದರೆ ಪಂಚಾಯತ್‌ ಪ್ರತಿನಿಧಿಗಳಿಗೆ 50 ಲಕ್ಷ ಪಿಂಚಣಿ ಮತ್ತು ವಿಮೆ : ತೇಜಸ್ವಿ ಯಾದವ್‌ ಘೋಷಣೆ

ಪಾಟ್ನಾ,ಅ.26-ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಪಂಚಾಯತ್‌ ಪ್ರತಿನಿಧಿಗಳಿಗೆ 50 ಲಕ್ಷ ಪಿಂಚಣಿ ಮತ್ತು ವಿಮಾ ರಕ್ಷಣೆ ನೀಡುವುದಾಗಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಘೋಷಣೆ ಮಾಡಿದ್ದಾರೆ. ಈಗಾಗಲೇ ಪ್ರತಿ ಮನೆಗೆ ಸರ್ಕಾರಿ ಉದ್ಯೋಗ ಭರವಸೆ ನೀಡಿದ್ದಾರೆ. ನಾಲ್ಕು ಕಾರ್ಯಕ್ರಮಗಳನ್ನು ಹಮಿಕೊಂಡಿದ್ದು, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮೈತ್ರಿಕೂಟದ ಭರವಸೆ ಪ್ರಕಟಿಸಿದ್ದಾರೆ.

ನಾವು ಮೂರು ಹಂತದ ಪಂಚಾಯತ್‌ ಪ್ರತಿನಿಧಿಗಳಿಗೆ (ತಾಲೂಕು, ಜಿಲ್ಲೆ, ಗ್ರಾಮ ಪಂಚಾಯಿತಿ) ಪಿಂಚಣಿ ಯೋಜನೆ ಜಾರಿಗೆ ತರುತ್ತೇವೆ. 50 ಲಕ್ಷ ರೂ.ವರೆಗೆ ವಿಮೆ ಸಹ ಒದಗಿಸಲಾಗುವುದು. ಪಿಡಿಎಸ್‌‍ ವಿತರಕರಿಗೆ ಗೌರವಧನ ನೀಡಲಾಗುವುದು ಹಾಗೂ ಪ್ರತಿ ಕ್ವಿಂಟಾಲ್‌ಗೆ ಮಾರ್ಜಿನ್‌ ಹಣ ಹೆಚ್ಚಿಸಲಾಗುವುದು.ಅಲ್ಲದೇ ಕುಂಬಾರರು, ಕಮಾರರು ಮತ್ತು ಬಡಗಿಗಳಂತಹ ಶ್ರಮಜೀವಿಗಳಿಗೆ 5 ಲಕ್ಷ ರೂಪಾಯಿಗಳ ವರೆಗೆ ಆರ್ಥಿಕ ನೆರವು ನೀಡುವುದಾಗಿ ಅವರು ಘೋಷಿಸಿದರು.

5 ವರ್ಷದಲ್ಲಿ 5 ಲಕ್ಷ ರೂ. ಏಕಕಾಲಿಕ ನೆರವು, ಸರ್ಕಾರಿ ಉದ್ಯೋಗಗಳಿಗೆ ಅನುಕಂಪದ ನೇಮಕಾತಿಗಳಿಗೆ 58 ವರ್ಷ ವಯಸ್ಸಿನ ಮಿತಿ ತೆಗೆದುಹಾಕುವುದಾಗಿಯೂ ಭರವಸೆ ನೀಡಿದ್ದಾರೆ.
ಚುನಾವಣಾ ಪ್ರಚಾರ ತೀವ್ರಗೊಂಡಿದೆ ಮತ್ತು ಬಿಹಾರ ಬದಲಾವಣೆಗೆ ಹಾತೊರೆಯುತ್ತಿದೆ. ಪ್ರಸ್ತುತ ಅಧಿಕಾರದಲ್ಲಿರುವ ನಿತೀಶ್‌ ಕುಮಾರ್‌ ಸರ್ಕಾರವನ್ನು ಟೀಕಿಸಿದ ತೇಜಸ್ವಿ ಯಾದವ್‌, ಬಿಹಾರದಲ್ಲಿ 20 ವರ್ಷಗಳಿಂದ ನಿಷ್ಕಿಯ ಸರ್ಕಾರವಿದೆ ಮತ್ತು ಈಗ ಸಾರ್ವಜನಿಕರು ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ತಾನು ಎಲ್ಲಿಗೆ ಹೋದರೂ, ಎಲ್ಲಾ ಜಾತಿ ಮತ್ತು ಧರ್ಮದ ಜನರು ಅವರನ್ನು ಬೆಂಬಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂದರು.

ಜನರು ಪ್ರಸ್ತುತ ಸರ್ಕಾರದಿಂದ ಬೇಸತ್ತಿದ್ದಾರೆ ಮತ್ತು ಬಿಹಾರ ಸರ್ಕಾರವನ್ನು ಬದಲಾಯಿಸಲು ಬಯಸುತ್ತಾರೆ. ಈ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರ ಮತ್ತು ಅಪರಾಧಗಳು ವ್ಯಾಪಕವಾಗಿವೆ ಮತ್ತು ಜನರು ಬಿಜೆಪಿಯನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು.

ಪ್ರಚಾರ ಶುರುವಾದಾಗಿನಿಂದ ಬಿಹಾರ ಬದಲಾವಣೆಗಾಗಿ ಕಾತರದಿಂದ ಕಾಯುತ್ತಿದೆ. ಎನ್‌ಡಿಎ ದೃಷ್ಟಿಹೀನ ಸರ್ಕಾರ, ಭ್ರಷ್ಟ ಸರ್ಕಾರ. ಈ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಬಜೆಟ್‌ನಲ್ಲಿ ಬಿಹಾರಕ್ಕೆ ಬರಬೇಕಾದ ಹಣ ಗುಜರಾತ್‌ಗೆ ಹೋಗುತ್ತಿದೆ ಎಂದು ಕಿಡಿ ಕಾರಿದರು.

ಬಿಜೆಪಿ ಮತ್ತು ನಿತೀಶ್‌ ವಿರುದ್ಧ ವಾಗ್ದಾಳಿ :
ಬಿಜೆಪಿ ಮತ್ತು ಅಮಿತ್‌ ಶಾ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದ ತೇಜಸ್ವಿ ಯಾದವ್‌, ಬಿಹಾರದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಉದ್ದೇಶಪೂರ್ವಕವಾಗಿ ಅವಕಾಶ ನೀಡಲಾಗಿಲ್ಲ ಎಂದು ಹೇಳಿದರು. ಅಲ್ಲದೆ, ತಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡುವಾಗ, 17 ತಿಂಗಳಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಲಾಗಿದೆ ಮತ್ತು ಚಾಚಾಜಿ ಅವರ ವಿರುದ್ಧ ತಿರುಗಿ ಬೀಳದಿದ್ದರೆ, ಹೆಚ್ಚಿನ ಕೆಲಸಗಳನ್ನು ಮಾಡಲಾಗುತ್ತಿತ್ತು ಎಂದು ಹೇಳಿದರು.

ಕಾಂಗ್ರೆಸ್‌‍ ಮತ್ತು ಮೈತ್ರಿಕೂಟದ ಬಗ್ಗೆ, ನಾವು ಒಟ್ಟಾಗಿ ಪ್ರಚಾರ ಮಾಡುತ್ತಿದ್ದೇವೆ ಮತ್ತು ಭವಿಷ್ಯದಲ್ಲಿ, ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರಿಂದಲೂ ಪ್ರಚಾರ ಆರಂಭವಾಗಲಿದೆ ಎಂದು ಹೇಳಿದ ತೇಜಸ್ವಿ ಯಾದವ್‌, ತೇಜಶ್ವಿ ಯಾರಿಗೂ ಹಾನಿ ಮಾಡಿಲ್ಲ ಮತ್ತು ತೇಜಶ್ವಿ ವಿರುದ್ಧ ಯಾರಿಗೂ ಯಾವುದೇ ದೂರುಗಳಿಲ್ಲ. ಬಿಹಾರದ ಜನರು ಹಿಂದಿನ ಸರ್ಕಾರಕ್ಕೆ 20 ವರ್ಷಗಳನ್ನು ನೀಡಿದರು ಮತ್ತು ಈಗ ನಾವು ಕೇವಲ 20 ತಿಂಗಳುಗಳನ್ನು ಕೇಳುತ್ತಿದ್ದೇವೆ ಎಂದು ಹೇಳಿದರು. ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್‌ 6ರಂದು ಮೊದಲ ಹಂತ ನವೆಂಬರ್‌ 11ರಂದು 2ನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನ.14ರಂದು ಫಲಿತಾಂಶಪ್ರಕಟವಾಗಲಿದೆ.

ಕರೂರು ಕಾಲ್ತುಳಿತ : ಮೃತರ ಕುಟುಂಬಸ್ಥರ ಭೇಟಿಗೆ ಮುಂದಾದ ಟಿಎಂಕೆ ಮುಖ್ಯಸ್ಥ ನಟ ವಿಜಯ್‌

ಚೆನ್ನೈ,ಅ.26- ಭಾರೀ ವಿವಾದ ಸೃಷ್ಟಿಸಿರುವ ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣ ಸಂಬಂಧ ಮೃತರ ಕುಟುಂಬಸ್ಥರನ್ನು ನಟ, ಟಿಎಂಕೆ ಮುಖ್ಯಸ್ಥ ವಿಜಯ್‌ ನಾಳೆ ಭೇಟಿಯಾಗಲಿದ್ದಾರೆ.ಈ ಘಟನೆ ನಡೆದು ಒಂದು ತಿಂಗಳ ಬಳಿಕ ನಟ ಹಾಗೂ ರಾಜಕಾರಣಿ ವಿಜಯ್‌ ಸೋಮವಾರರಂದು ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.

ನಾಳೆ ಚೆನ್ನೈ ಸಮೀಪದ ಮಹಾಬಲಿಂಪುರದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಮೃತರ ಕುಟುಂಬಸ್ಥರನ್ನು ನಟ ಭೇಟಿ ಮಾಡಲಿದ್ದಾರೆ. ಈ ಹಿನ್ನೆಲೆ ಖಾಸಗಿ ರೆಸಾರ್ಟ್‌ನಲ್ಲಿ 50 ರೂಮ್‌ಗಳನ್ನು ಕಾಯ್ದಿರಿಸಲಾಗಿದೆ.ಸ್ಥಳಕ್ಕೆ ಬರಲು ಮೃತರ ಕುಟುಂಬಸ್ಥರಿಗೆ ಬಸ್‌‍ ವ್ಯವಸ್ಥೆ ಮಾಡಲಾಗಿದೆ.ಕಳೆದ ಕೆಲವು ವಾರದ ಹಿಂದೆ ವಿಡಿಯೋ ಕಾಲ್‌ ಮಾಡಿಯೂ ವಿಜಯ್‌ ಮಾತನಾಡಿದ್ದರು. ಆ ವೇಳೆ ನೇರ ಭೇಟಿಯಾಗುವ ಬಗ್ಗೆ ಪ್ರಸ್ತಾಪಿಸಿದ್ದರು.

ಯಾರಿಗೂ ಪ್ರವೇಶವಿಲ್ಲ..!
ವಿಜಯ್‌ ದುರಂತದಲ್ಲಿ ಮೃತಪಟ್ಟವರ ಜೊತೆ ಮಾತನಾಡುವ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಆಗಲಿ ಅಥವಾ ವಿಜಯ್‌ ಪಕ್ಷದ ಸದಸ್ಯರಿಗೆ ಆಗಲಿ ಅನುಮತಿ ನೀಡಲಾಗಿಲ್ಲ. ಸಂತ್ರಸ್ತರ ಕುಟುಂಬಗಳಿಗೆ ಖಾಸಗಿಯಾಗಿ ಸಾಂತ್ವನ ಹೇಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಖಾಸಗಿ ಮಾಧ್ಯಮಗಳ ವರದಿಗಳ ಪ್ರಕಾರ, ವಿಜಯ್‌ ಅವರು ಪ್ರತಿ ಕುಟುಂಬದೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಸಮಯದಲ್ಲಿ, ಅವರು ಕುಟುಂಬಗಳ ನೋವಿನಲ್ಲಿ ಭಾಗಿಯಾಗಿ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಘಟನೆ ನಡೆದ ಮರುದಿನವೇ ವಿಜಯ್‌ ಅವರು ಮೃತರ ಪ್ರತಿ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರು.

ಮುಂದಿನ ವರ್ಷ ತಮಿಳುನಾಡಿನ ವಿಧಾನಸಭಾ ಚುನಾವಣೆಗೂ ಮುನ್ನ ತಮಿಳುನಾಡಿನ ರಾಜಕೀಯ ವಲಯದಲ್ಲಿ ಕರೂರು ಕಾಲ್ತುಳಿತ ದುರಂತವು ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಈ ಘಟನೆಯು ವಿಜಯ್‌ ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಸೆ.27ರಂದು ಕರೂರ್‌ನಲ್ಲಿ ನಟ ವಿಜಯ್‌ ಚುನಾವಣಾ ರ್ಯಾಲಿ ನಡೆಸಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು.

ಪುಷ್ಪ ಸಿನಿಮಾ ಸ್ಟೈಲಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ಆಂಧ್ರದ ಗ್ಯಾಂಗ್‌ ಅರೆಸ್ಟ್

ಬೆಂಗಳೂರು, ಅ.26- ತೆಲುಗಿನ ಪುಷ್ಪ ಸಿನಿಮಾ ಮಾದರಿಯಲ್ಲಿ ಶ್ರೀಗಂಧದ ತುಂಡುಗಳನ್ನು ಈರುಳ್ಳಿ ಚೀಲಗಳ ಕೆಳಗಿಟ್ಟು ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಆಂಧ್ರದ ನಾಲ್ವರ ಗ್ಯಾಂಗ್‌ಅನ್ನು ಬಂಧಿಸಿರುವ ಸಿದ್ದಾಪುರ ಠಾಣೆ ಪೊಲೀಸರು 750 ಕೆಜಿ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದ ಶೇಕ್‌ ಅಬ್ದುಲ್‌ಕಲಾಂ, ಶೇಕ್‌ ನಾಸಿರ್‌, ಪರಮೇಶ್‌, ರಾಮ್‌ ಬಹದ್ದೂರ್‌ ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 207 ಗೂಡ್‌್ಸ ವಾಹನ ಹಾಗೂ ಮಹೀಂದ್ರ ಪಿಕಪ್‌ ವಾಹನವನ್ನು ವಶಪಡಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ನಗರದ ಸೋಮೇಶ್ವರ ಆರ್ಚ್‌ ಬಳಿ ಈ ವಾಹನಗಳು ಬರುತ್ತಿದ್ದಂತೆ ಅಡ್ಡಗಟ್ಟಿದ ಪೊಲೀಸರು ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ ಆರೋಪಿಗಳು 258 ಶ್ರೀಗಂಧದ ತುಂಡುಗಳನ್ನು ಚೀಲಗಳಲ್ಲಿ ತುಂಬಿ ಅವುಗಳನ್ನು ಕೆಳಗಿಟ್ಟು ಆ ಚೀಲಗಳ ಮೇಲೆ ಈರುಳ್ಳಿ ಚೀಲಗಳನ್ನು ಜೋಡಿಸಿರುವುದು ಕಂಡುಬಂದಿದೆ. ಈ ವಾಹನದ ಹಿಂದೆ ಇದ್ದ ಮಹೀಂದ್ರ ವಾಹನವನ್ನು ಸಹ ವಶಪಡಿಸಿಕೊಂಡು ಅದರಲ್ಲಿದ್ದ ಮೂವರು ಮತ್ತು ಗೂಡ್ಸ್ ವಾಹನ ಚಾಲಕನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ.

ಶ್ರೀಗಂಧದ ತುಂಡುಗಳನ್ನು ಆಂಧ್ರ ಪ್ರದೇಶದ ಕರ್ನೂಲ್‌ ಅರಣ್ಯ ಪ್ರದೇಶದಿಂದ ಬೆಂಗಳೂರು ನಗರಕ್ಕೆ ತರಲಾಗುತ್ತಿತ್ತು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.ಆದರೆ, ಈ ಶ್ರೀಗಂಧದ ತುಂಡುಗಳನ್ನು ಯಾರಿಗೆ ತಲುಪಿಸಲಾಗುತ್ತಿತ್ತು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ. ಪ್ರಮುಖ ಆರೋಪಿ ಸಿಕ್ಕಿದ ನಂತರವೇ ಮತ್ತಷ್ಟು ವಿಷಯಗಳು ಬೆಳಕಿಗೆ ಬರಲಿವೆ. ಪೊಲೀಸ್‌‍ ಮೂಲಗಳ ಪ್ರಕಾರ, ಈ ಶ್ರೀಗಂಧದ ತುಂಡುಗಳನ್ನು ಬೆಂಗಳೂರು ನಗರದಿಂದ ವಿದೇಶಕ್ಕೆ ಕಳುಹಿಸಲು ಸಿದ್ಧತೆ ನಡೆದಿತ್ತು ಎಂದು ತಿಳಿದುಬಂದಿದೆ.

ಜಾರ್ಖಂಡ್‌ : ವೈದ್ಯರ ನಿರ್ಲಕ್ಷ್ಯದಿಂದ ಎಚ್‌ಐವಿಗೆ ತುತ್ತಾದ ಐವರು ಮಕ್ಕಳು

ರಾಂಚಿ,ಅ.26- ವೈದ್ಯರ ನಿರ್ಲಕ್ಷ್ಯದಿಂದ ಜಾರ್ಖಂಡ್‌ನ ಆಸ್ಪತ್ರೆಯೊಂದರಲ್ಲಿ ರಕ್ತ ಪಡೆದ ಐವರು ಮಕ್ಕಳು ಎಚ್‌ಐವಿಗೆ ತುತ್ತಾಗಿರುವ ಆಘಾತಕಾರಿ ಘಟನೆ ನಡೆದಿದೆ. ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಚೈಬಾಸಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆ ಮಾಡಿದ ನಂತರ ಏಳು ವರ್ಷದ ಥಲಸ್ಸೆಮಿಯಾ ರೋಗಿ ಸೇರಿದಂತೆ ಕನಿಷ್ಠ ಐದು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್‌ ಕಾಣಿಸಿಕೊಂಡಿದೆ.

ಈ ಘಟನೆಯು ರಾಜ್ಯದ ಆರೋಗ್ಯ ಇಲಾಖೆಯಾದ್ಯಂತ ಆಕ್ರೋಶ ಮತ್ತು ಭೀತಿ ಹುಟ್ಟುಹಾಕಿದ್ದು, ರಾಂಚಿಯ ಉನ್ನತ ಮಟ್ಟದ ವೈದ್ಯಕೀಯ ತಂಡವು ತಕ್ಷಣದ ತನಿಖೆಗೆ ಆದೇಶಿಸಿದೆ. ಥಲಸ್ಸೆಮಿಯಾ ಪೀಡಿತ ಮಗುವಿನ ಕುಟುಂಬವು ಚೈಬಾಸಾ ಸದರ್‌ ಆಸ್ಪತ್ರೆಯ ರಕ್ತನಿಧಿಯಲ್ಲಿ ಎಚ್‌ಐವಿ ಸೋಂಕಿತ ರಕ್ತವನ್ನು ಮಗುವಿಗೆ ನೀಡಲಾಗಿತ್ತು. ಮೊದಲನೆಯದಾಗಿ ಈ ಘಟನೆ ಬೆಳಕಿಗೆ ಬಂದಿತ್ತು.

ಈ ಮಕ್ಕಳು ಥಲಸ್ಸೆಮಿಯಾ ರೋಗ ಪೀಡಿತರಾಗಿದ್ದರು. ಮಕ್ಕಳಿಗೆ ಚೈಬಾಸಾದಲ್ಲಿರುವ ಸ್ಥಳೀಯ ರಕ್ತ ನಿಧಿಯಿಂದ ಎಚ್‌ಐವಿ ಸೋಂಕಿತರ ರಕ್ತ ನೀಡಲಾಗಿದೆ ಎಂದು ಏಳು ವರ್ಷದ ಮಗುವಿನ ಕುಟುಂಬ ಆರೋಪಿಸಿದೆ. ರಾಂಚಿಯ ಐದು ಸದಸ್ಯರ ವೈದ್ಯಕೀಯ ತಂಡವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದೆ. ಮಕ್ಕಳಿಗೆ ಸೋಂಕಿತ ರಕ್ತ ಹೇಗೆ ದೊರೆತಿದೆ ಎಂಬುದನ್ನು ಕಂಡುಹಿಡಿಯಲು ಜಾರ್ಖಂಡ್‌ ಸರ್ಕಾರ ವೈದ್ಯಕೀಯ ತಂಡವನ್ನು ರಚಿಸಿದೆ.

ತಂಡದ ತಪಾಸಣೆಯ ಸಮಯದಲ್ಲಿ ಥಲಸ್ಸೆಮಿಯಾದಿಂದ ಬಳಲುತ್ತಿರುವ ಬಾಲಕನ ಜತೆ ಇನ್ನೂ ನಾಲ್ಕು ಮಕ್ಕಳು ಎಚ್‌ಐವಿ-ಪಾಸಿಟಿವ್‌ ಎಂದು ಕಂಡುಬಂದಿದ್ದು, ಒಟ್ಟು ಪೀಡಿತ ಅಪ್ರಾಪ್ತ ಮಕ್ಕಳ ಸಂಖ್ಯೆ ಐದಕ್ಕೆ ಏರಿದೆ. ಎಲ್ಲಾ ಮಕ್ಕಳು ಒಂದೇ ಆಸ್ಪತ್ರೆಯಲ್ಲಿ ರಕ್ತ ಪಡೆದಿದ್ದರು.

ಆರಂಭಿಕ ತನಿಖೆಯಲ್ಲಿ ಥಲಸ್ಸೆಮಿಯಾ ರೋಗಿಗೆ ಕಲುಷಿತ ರಕ್ತವನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯ ಸಮಯದಲ್ಲಿ ರಕ್ತ ಬ್ಯಾಂಕಿನಲ್ಲಿ ಕೆಲವು ವ್ಯತ್ಯಾಸಗಳು ಪತ್ತೆಯಾಗಿದ್ದು, ಅವುಗಳನ್ನು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಡಾ.ದಿನೇಶ್‌ಕುಮಾರ್‌ ತಿಳಿಸಿದ್ದಾರೆ.

ಮೊದಲ ಸೋಂಕಿತ ಮಗುವಿನ ಕುಟುಂಬವು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದು, ನ್ಯಾಯವನ್ನು ಕೋರಿದೆ. ಸ್ಥಳೀಯ ಪ್ರತಿನಿಧಿಗಳು ಸಹ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ, ರಕ್ತ ಬ್ಯಾಂಕಿನ ಕಾರ್ಯನಿರ್ವಹಣೆಯಲ್ಲಿ ಹಲವಾರು ಅಕ್ರಮಗಳು ಕಂಡುಬಂದಿವೆ. ರಕ್ತದ ಮಾದರಿ ಪರೀಕ್ಷೆ, ದಾಖಲೆ ನಿರ್ವಹಣೆ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳ ಅನುಸರಣೆಯಲ್ಲಿನ ದೋಷಗಳು ಸೇರಿದಂತೆ, ಈ ಅಕ್ರಮಗಳನ್ನು ವಿವರಿಸುವ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಸಲ್ಲಿಸಲಾಗಿದೆ.

ಚೈಬಾಸಾದಲ್ಲಿರುವ ಸ್ಥಳೀಯ ರಕ್ತ ನಿಧಿಯಿಂದ ಎಚ್‌ಐವಿ ಸೋಂಕಿತ ರಕ್ತ ವರ್ಗಾವಣೆಯಾಗಿದೆ. ಈ ಬ್ಲಡ್‌ ಬ್ಯಾಂಕ್‌ನಿಂದ 25 ಯೂನಿಟ್‌ಗಳ ರಕ್ತ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಸಿವಿಲ್‌ ಸರ್ಜನ್‌ ಡಾ. ಸುಶಾಂತೋ ಮಜ್ಹೀ, ಆದಾಗ್ಯೂ, ಒಂದು ವಾರದ ಹಿಂದೆ ಮಗುವಿಗೆ ಎಚ್‌ಐವಿ ಪಾಸಿಟಿವ್‌ ಇರುವುದನ್ನು ಪತ್ತೆ ಮಾಡಿದ್ದರು. ಕಲುಷಿತ ಸೂಜಿಗಳಿಂದ ಚುಚ್ಚಿಸಿಕೊಳ್ಳುವುದು ಸೇರಿದಂತೆ ಇತರ ಅಂಶಗಳಿಂದಾಗಿ ಎಚ್‌ಐವಿ ಸೋಂಕು ಸಂಭವಿಸಬಹುದು ಎಂದು ಅವರು ಹೇಳಿದರು.

ಜಾರ್ಖಂಡ್‌ನ ನಿರ್ದೇಶಕ (ಆರೋಗ್ಯ ಸೇವೆಗಳು) ಡಾ. ದಿನೇಶ್‌ ಕುಮಾರ್‌ ನೇತೃತ್ವದ ಐದು ಸದಸ್ಯರ ತಂಡವು ಸದರ್‌ ಆಸ್ಪತ್ರೆಯ ರಕ್ತನಿಧಿ ಮತ್ತು ಮಕ್ಕಳ ತೀವ್ರ ನಿಗಾ ಘಟಕದ ವಾರ್ಡ್‌ ಅನ್ನು ಪರಿಶೀಲಿಸಿದೆ ಮತ್ತು ಮಕ್ಕಳಿಂದ ವಿವರಗಳನ್ನು ಸಂಗ್ರಹಿಸಿದೆ.

ಪ್ರಸ್ತುತ, ಪಶ್ಚಿಮ ಸಿಂಗ್ಭೂಮ್‌ ಜಿಲ್ಲೆಯಲ್ಲಿ 515 ಎಚ್‌ಐವಿ-ಪಾಸಿಟಿವ್‌ ಪ್ರಕರಣಗಳು ಮತ್ತು 56 ಥಲಸ್ಸೆಮಿಯಾ ರೋಗಿಗಳಿದ್ದಾರೆ. ಕುಮಾರ್‌ ನೇತೃತ್ವದ ತನಿಖಾ ತಂಡದಲ್ಲಿ ಡಾ. ಶಿಪ್ರಾ ದಾಸ್‌‍, ಡಾ. ಎಸ್‌‍. ಎಸ್‌‍. ಪಾಸ್ವಾನ್‌, ಡಾ. ಭಗತ್‌, ಜಿಲ್ಲಾ ಸಿವಿಲ್‌ ಸರ್ಜನ್‌ ಡಾ. ಸುಶಾಂತೋ ಮಜ್ಹೀ, ಡಾ. ಶಿವಚರಣ್‌ ಹನ್ಸ್ದಾ ಮತ್ತು ಡಾ. ಮಿನು ಕುಮಾರಿಸೇರಿದ್ದಾರೆ.

ನ.26ರಿಂದ ಡಿ.4ರವರೆಗೆ ದತ್ತಮಾಲೆ ಹಾಗೂ ದತ್ತ ಜಯಂತಿ ಉತ್ಸವ

ಚಿಕ್ಕಮಗಳೂರು, ಅ.26- ಜಿಲ್ಲೆಯ ವಿಶ್ವ ಹಿಂದೂ ಪರಿಷದ್‌- ಬಜರಂಗದಳದ ಸಂಯುಕ್ತಶ್ರಯದಲ್ಲಿ ದತ್ತ ಜಯಂತಿ ಉತ್ಸವ ನ. 26ರಿಂದ ಡಿ. 4ರವರೆಗೆ ವಿಜೃಂಭಣೆಯಿಂದ ನಡೆಸಲು ಸಂಘಟನೆ ತೀರ್ಮಾನಿಸಿದ್ದು, ಸಾಧುಸಂತರು, ಮಾತೆಯರು, ದತ್ತಮಾಲಾಧಾರಿಗಳು, ದತ್ತಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನೀರಿಕ್ಷೆಯಲ್ಲಿ ಇದೆ ಎಂದು ಬಜರಂಗದಳ-ಪ್ರಾಂತ ಸಂಯೋಜಕ ಪ್ರಭಂಜನ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಚಂದ್ರದಾನ ಪರ್ವತ ಶ್ರೇಣಿಯಲ್ಲಿರುವ ಗುರು ದತ್ತಾತ್ರೇಯ ಸ್ವಾಮಿ ಜಾತ್ರಾ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ.

ಎಲ್ಲಾ ಜಿಲ್ಲೆಗಳಲ್ಲೂ ದತ್ತಜಯಂತಿ ಉತ್ಸವ ವಿಜೃಂಭಣೆಯಿಂದ ನಡೆಸಲು ನಿಶ್ಚಯಿಸಲಾಗಿದೆ. ವಿ.ಹಿಂ.ಪ ಅಖಿಲ ಭಾರತೀಯ ಕಾರ್ಯದರ್ಶಿ ಗೋಪಾಲ್‌ ನಾಗರಕಟ್ಟೆ ಭಾಗವಹಿಸಲಿದ್ದಾರೆ.
ಡಿ. 2ರಂದು ಅನಸೂಯದೇವಿ ಪೂಜೆ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಸಭೆಯ ನಂತರ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಬೆಳಗ್ಗೆ 9.30ಕ್ಕೆ ನಡೆಯಲಿದೆ.

ಪೀಠದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಹವಾಚನ, ಪಂಚಗವ್ಯ ಶುದ್ದಿ, ಋತ್ವಿಡ್ವರ್ಣ, ಗಣಪತಿ ಹೋಮ, ಚಂಡಿಕಾ ಪಾರಾಯಣ, ದುರ್ಗಾಹೋಮ, ಕಲಶಾಭೀಷೇಕ ಹಾಗೂ ಮಹಾಪೂಜೆ, ಸಂಜೆ ಪಾದುಕಾಶುದ್ಧಿ, ಪ್ರಕಾರ ಶುದ್ಧಿ, ವಾಸ್ತುರಾಕ್ಷೆಘ್ನ ಹೋಮ, ಸುದರ್ಶನ ಹೋಮ, ದುರ್ಗಾದೀಪ ನಮಸ್ಕಾರ, ಕಲಶಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ.

ಡಿ.3ರಂದು ನವಕಲಶ ಕಲಾವಾಹನಂ, ಕಲಾತತ್ವಾದಿ ವಾಸ ಪೂಜೆ, ಕಲಾ ಹೋಮ, ಕಲಶಾಭೀಷೇಕ ಮಹಾಪೂಜೆ ನಡೆಯಲಿದ್ದು, ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ ಜರುಗಲಿದೆ.

ಡಿ. 4ರಂದು ದತ್ತ ಜಯಂತಿಯ ಪ್ರಯುಕ್ತ ದಶಸಹಸ್ರ ಸಂಖ್ಯೆಯಲ್ಲಿ ರುದ್ರ ಹೋಮ, ದತ್ತಾತ್ರೇಯ ಮಹಾಮಂತ್ರ, ಮಹಾಯಾಗ, ಕಲಶಾಭೀಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನ, ಪ್ರಸಾದ ವಿನಿಯೋಗ ಹಾಗೂ ದತ್ತಜಯಂತಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ.

ಈ ಎಲ್ಲಾ ಕಾರ್ಯಕ್ರಮಗಳು ಜಿಲ್ಲಾಡಳಿತ ದತ್ತ ಜಯಂತಿ ಯಶಸ್ಸಿಗೆ ಮೂಲಭೂತ ಸೌಕರ್ಯಗಳನ್ನು ಮಾಡಿಕೊಡುವಂತೆ ಮನವಿ ಮಾಡಿದರು.ವಿ.ಹಿಂ.ಪ ಜಿಲ್ಲಾಧ್ಯಕ್ಷ ಶ್ರೀಕಾಂತ್‌ ಪೈ, ಜಿಲ್ಲಾ ಕಾರ್ಯದರ್ಶಿ ರಂಗನಾಥ್‌, ಯೋಗೇಶ್‌ ರಾಜ್‌ ಅರಸ್‌‍, ಆರ್‌ ಡಿ ಮಹೇಂದ್ರ ಮತ್ತು ಶಾಮ್‌ ವಿ ಗೌಡ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬೆಲೆ ಕುಸಿತ, ರೈತರಲ್ಲಿ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ

ಬೆಂಗಳೂರು, ಅ.26- ರುಚಿಯಾದ ಅಡುಗೆಯಾಗಬೇಕಾದರೆ ಈರುಳ್ಳಿ ಇರಲೇಬೇಕು. ಈರುಳ್ಳಿ ಹೆಚ್ಚಬೇಕಾದರೆ ಗೃಹಿಣಿಯರ ಕಣ್ಣಲ್ಲಿ ನೀರು ಬಂದರೆ ಬೆಲೆ ಕುಸಿತದಿಂದ ರೈತರ ಕಣ್ಣಲ್ಲಿ ನೀರುಬರುತ್ತಿದೆ.

ದರ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಬೆಲೆ ಮಾತ್ರ ಏಕೋ ಚೇತರಿಸಿಕೊಂಡಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್‌ ಗುಣಮಟ್ಟದ ಈರುಳ್ಳಿ 300ರೂ. ನಿಂದ 350 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಚಿಲ್ಲರೆಯಾಗಿ 100ರೂ.ಗೆ ಹತ್ತು ಕೆಜಿ ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ.

ರಾಜ್ಯದಲ್ಲೇ ಹೆಚ್ಚಾಗಿ ಈರುಳ್ಳಿ ಬೆಳೆಯುವ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಮಾರುಕಟ್ಟೆಗಳಲ್ಲಂತೂ ಬೆಲೆ ಪಾತಾಳ ತಲುಪಿದ್ದು, ಲೋಡ್‌ಗಟ್ಟಲೆ ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆಗೆ ರೈತರು ಈರುಳ್ಳಿ ತಂದಿದ್ದು, ಬೆಲೆ ಕುಸಿತದಿಂದ ರೊಚ್ಚಿಗೆದ್ದು ಆವರಣದಲ್ಲೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿ ಪ್ರತಿ ಕ್ವಿಂಟಾಲ್‌ಗೆ 500ರೂ. ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದ್ದಾರೆ.

ಹೆಚ್ಚಾದ ಮಳೆಯಿಂದ ಬೆಳೆ ನಾಶವಾಗಿದೆ. ಇದರ ಜತೆಗೆ ಈಗ ಈರುಳ್ಳಿ ಬೆಲೆ ಕೂಡ ಕುಸಿತವಾಗಿದ್ದು, ಬೆಳೆಗಾರರು ಮತ್ತಷ್ಟ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಬೇಕೆಂದರೆ ಕನಿಷ್ಟ 40 ಸಾವಿರ ರೂ. ಖರ್ಚಾಗುತ್ತದೆ. ಇನ್ನು ಕಟಾವು ಮಾಡಿ ಮಾರುಕಟ್ಟೆಗೆ ಮಾರಾಟಕ್ಕೆ ತಂದರೆ ಬೆಲೆ ಕುಸಿತದಿಂದ ಕೇಳುವವರೂ ಇಲ್ಲದಂತಾಗಿದೆ. ಇದರಿಂದ ಸಾಗಾಣಿಕೆ ವೆಚ್ಚ, ಕೂಲಿ ಕೂಡ ಹುಟ್ಟುತ್ತಿಲ್ಲ. ಹೀಗಾದರೆ ರೈತರ ಗತಿ ಏನು ಎಂದು ನೊಂದ ಬೆಳೆಗಾರರು ತಮ ಅಳಲು ತೊಡಿಕೊಂಡಿದ್ದಾರೆ.

ನೆರೆಯ ಮಹಾರಾಷ್ಟ್ರದಿಂದಲೂ ಮಾರುಕಟ್ಟೆಗೆ ಹೆಚ್ಚಾಗಿ ಮಾಲು ಬರುತ್ತಿದೆ. ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಲೆ ಕುಸಿದಿದೆ. ಗುಣಮಟ್ಟದ ಈರುಳ್ಳಿ ದಾಸ್ತಾನು ಮಾಡಿದರೂ ಸಹ ಶೀತಗಾಳಿಗೆ ಕೆಡುತ್ತಿವೆ. ಇತ್ತ ಶೇಖರಣೆ ಮಾಡಲು ಆಗುತ್ತಿಲ್ಲ. ಮಾರುಕಟ್ಟೆಯಲ್ಲಿ ಬೆಲೆಯೂ ಕೂಡ ಇಲ್ಲದೆ ಬೆಳೆಗಾರರು ನಷ್ಟ ಅನುಭಸುವಂತಾಗಿದೆ.ಗ್ರಾಹಕರಿಗೆ ಒಂದೆಡೆ ಬೆಲೆ ಕುಸಿತ ಖುಷಿ ತಂದಿದ್ದರೆ, ಬೆಳೆಗಾರರಲ್ಲಿ ಅಕ್ಷರಷಃ ಕಣ್ಣೀರು ತರಿಸುತ್ತಿದೆ.

ರೈತರಿಗೆ ವಂಚಯಿಸಿದವರ ರಕ್ಷಣೆಗೆ ನಿಂತ ಸಚಿವ ಜಮೀರ್‌ ರಾಜಿನಾಮೆಗೆ ಸ್ವಪಕ್ಷೀಯರಿಂದಲೇ ಪಟ್ಟು

ಬೆಂಗಳೂರು. ಅ.26- ವಂಚನೆ ಮಾಡಿದ ನೆರೆ ರಾಜ್ಯದ ಜೋಳದ ವ್ಯಾಪಾರಿಗಳಿಗೆ ಬೆಂಬಲ ನೀಡುವ ಮೂಲಕ ಕರ್ನಾಟಕ ರೈತರಿಗೆ ಅನ್ಯಾಯ ಮಾಡುತ್ತಿರುವ ವಸತಿ, ವಕ್ಫ್ , ಅಲ್ಪ ಸಂಖ್ಯಾತರ ಸಚಿವ ಜಮೀರ್‌ ಅಹಮದ್‌ಖಾನ್‌ ರಾಜೀನಾಮೆ ನೀಡಬೇಕೆಂದು ಸ್ವಪಕ್ಷೀಯ ನಾಯಕರೇ ಪಟ್ಟು ಹಿಡಿದಿದ್ದಾರೆ.

ಹೈದರಾಬಾದ್‌ ಮೂಲದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಾಪಾರಿಗಳ ಬೆಂಬಲಕ್ಕೆ ನಿಲ್ಲುವ ಮೂಲಕ ಸಚಿವ ಜಮೀರ್‌ ಅಹಮದ್‌ ಖಾನ್‌ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ರೈತರಿಗೆ ಅನ್ಯಾಯ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೆಸಂದ್ರ ಗ್ರಾಮದ ಕಾಂಗ್ರೆಸ್‌‍ ನಾಯಕ ಡಿ.ಎನ್‌. ರಾಮಕೃಷ್ಣ ದೂರು ನೀಡಿದ್ದು, ತೆಲಂಗಾಣ ರಾಜ್ಯ ಹೈದರಾಬಾದ್‌ನ ಸೈಯ್ಯದ್‌ ನಾಸಿರ್‌ ಅಹಮದ್‌, ಸೈಯ್ಯದ್‌ ಅಬ್ದುಲ್‌ ರಜಾಕ್‌, ಸೈಯ್ಯದ್‌ ಅಕ್ಬರ್‌ ಪಾಷಾ ಅವರ ವಿರುದ್ಧ ವಂಚನೆಯ ಆರೋಪದಡಿ ದೂರು ದಾಖಲಾಗಿದೆ.

ಮಂಜುನಾಥ್‌ ಅವರು ಪೆರೆಸಂದ್ರದಲ್ಲಿ ಎಸ್‌‍ಎಲ್‌ಎನ್‌ ಟ್ರೇಡರ್‌ರ‍ಸ ಸಂಸ್ಥೆ ನಡೆಸುತ್ತಿದ್ದು, ಕಳೆದ ಫೆಬ್ರವರಿ 1 ರಿಂದ ಜುಲೈ 31ರ ವರೆಗೆ ರೈತರಿಂದ ಜೋಳ ಖರೀದಿಸಿದ್ದಾರೆ. ಪರಸ್ಪರ ನಂಬಿಕೆ ಹಾಗೂ ವಿಶ್ವಾಸದ ಮೇಲೆ 1,89,27,970 ರೂ.ಗಳ ಮೌಲ್ಯದ ಜೋಳವನ್ನು ತೆಲಂಗಾಣದ ಈ ಮೂವರು ವ್ಯಾಪಾರಿಗಳ ಒಡೆತನದಲ್ಲಿರುವ ಹೆಚ್‌ಕೆಜಿಎನ್‌ ಮುಸ್ಕಾನ್‌ ಪಾಪ್‌ಕಾನ್‌ಟ್ರೇಡರ್‌ರ‍ಸ ಹಾಗೂ ಆಲ್‌ ರಜಾಕ್‌ ಮೈಜೇ ಟ್ರೇಡರ್‌ರ‍ಸಗೆ ಸರಬರಾಜು ಮಾಡಿದ್ದಾರೆ. ಆದರೆ ಕಳೆದ 3 ತಿಂಗಳಿನಿಂದಲೂ ಸರಬರಾಜು ಆಗಿರುವ ಜೋಳಕ್ಕೆ ಹಣ ಪಾವತಿಸದೇ ತೆಲಂಗಾಣದ ಉದ್ಯಮಿಗಳು ಸತಾಯಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ಹಲವಾರು ಬಾರಿ ಮನವಿ ಮಾಡಿ ಒತ್ತಾಯಿಸಿದರೂ, ನೋಟೀಸ್‌‍ ನೀಡಿದ್ದರೂ ಕೂಡ ಉದ್ಯಮಿಗಳು ಹಣ ಪಾವತಿಸಿಲ್ಲ ಎಂದು ಮಂಜುನಾಥ್‌ ದೂರಿದ್ದಾರೆ. ಈ ಬಗ್ಗೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ ನ್ಯಾಯ ಕೊಡಿಸುವಂತೆ ಮಂಜುನಾಥ್‌ ಸೆಪ್ಟಂಬರ್‌ 30ರಂದು ಪೆರೆಸಂದ್ರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಪೆರೆಸಂದ್ರ ಪಿಎಸ್‌‍ಐ ದೂರವಾಣಿಯಲ್ಲಿ ಸೂಚನೆ ನೀಡಿದ್ದಾರೆ. ಪೊಲೀಸ್‌‍ ಕ್ರಮಗಳಿಗೆ ಭಯಭೀತರಾದ ಆರೋಪಿಗಳು ಪ್ರಭಾವಿ ಸಚಿವರಾಗಿರುವ ಜಮೀರ್‌ ಅಹಮದ್‌ ಖಾನ್‌ ಅವರ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಜಮೀರ್‌ ಅಹಮದ್‌ ಅವರು, ಪಿಎಸ್‌‍ಐಗೆ ಕರೆ ಮಾಡಿ ತೆಲಂಗಾಣದ ವ್ಯಾಪಾರಿಗಳು ನಮ ಕಡೆಯವರು. ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಪ್ರಭಾವ ಬೀರುವುದಾಗಿ ತಿಳಿದು ಬಂದಿದೆ.

ಈ ಕುರಿತ ಮಾತುಕತೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಚಿವರ ನಡವಳಿಕೆ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ವ ಜಾತಿಯವರು ಎಂಬ ಕಾರಣಕ್ಕಾಗಿ ವಂಚನೆ ಮಾಡಿದವರ ಬೆಂಬಲಕ್ಕೆ ಸಚಿವರು ನಿಂತಿರುವುದು ಸರಿಯಲ್ಲ ಎಂದು ರೈತರು ಕಿಡಿಕಾರಿದ್ದಾರೆ.

ದೂರುದಾರ ರಾಮಕೃಷ್ಣ ಅವರು ಕಾಂಗ್ರೆಸ್‌‍ ನಾಯಕರಾಗಿದ್ದು ಸ್ವ ಪಕ್ಷೀಯ ಸಚಿವರ ವಿರುದ್ಧವೇ ರೊಚ್ಚಿಗೆದ್ದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಮೀರ್‌ ಅಹಮದ್‌ಖಾನ್‌ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ರೈತರಿಗೆ ಅನ್ಯಾಯವಾಗಿದ್ದರೂ ಪ್ರಭಾವ ಬೀರಿ ವ್ಯಾಪಾರಿಗಳನ್ನು ರಕ್ಷಿಸುತ್ತಿರುವ ಜಮೀರ್‌ ಅಹಮದ್‌ಖಾನ್‌ ಸಂಪುಟದಲ್ಲಿ ಮುಂದುವರಿಯುವ ನೈತಿಕತೆ ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಮೀರ್‌ ಅಹಮದ್‌ಖಾನ್‌ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ. ನಾನು ರೈತರಿಂದ ವಿಶ್ವಾಸದ ಮೇಲೆ ಜೋಳ ಖರೀದಿಸಿದ್ದೇನೆ. ನಮಿಂದ ಜೋಳ ಪಡೆದುಕೊಂಡ ತೆಲಂಗಾಣದ ವ್ಯಾಪಾರಿಗಳು ನಿಗದಿತ ಸಮಯಕ್ಕೆ ಹಣ ನೀಡಿದ್ದರೆ, ಯಾವುದೇ ಸಮಸ್ಯೆಗಳಾಗುತ್ತಿರಲಿಲ್ಲ. ಆದರೆ ಅವರು ವಂಚನೆ ಮಾಡಿದ್ದಾರೆ.

ಇದರಿಂದ ನಾನು ನಮ ರಾಜ್ಯದ ರೈತರಿಗೆ ಹಣ ಪಾವತಿಸಲಾಗುತ್ತಿಲ್ಲ, ಎರಡು ತಿಂಗಳಿನಿಂದಲೂ ಜೋಳ ಖರೀದಿಸುವುದನ್ನು ನಿಲ್ಲಿಸಿದ್ದೇನೆ. ಕ್ವಿಂಟಾಲ್‌ಗೆ 6 ಸಾವಿರ ರೂಪಾಯಿಗಳಷ್ಟಿದ್ದ ಜೋಳದ ಬೆಲೆ ಈಗ 3 ಸಾವಿರ ರೂ.ಗೆ ಕುಸಿದಿದೆ. ಸಚಿವರ ಪ್ರಭಾವದಿಂದಾಗಿ ಆರೋಪಿಗಳು ರಕ್ಷಣೆ ಪಡೆದಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-10-2025)

ನಿತ್ಯ ನೀತಿ : ಆರೋಗ್ಯವೇ ದೊಡ್ಡ ಉಡುಗೊರೆ, ಜ್ಞಾನವೇ ಮಹಾ ಸಂಪತ್ತು, ಇರುವುದರಲ್ಲಿಯೇ ತೃಪ್ತಿಯಿಂದ ಬದುಕುವುದೇ ಜೀವನದ ಸಾರ.

ಪಂಚಾಂಗ : ಭಾನುವಾರ, 26-10-2025
ಶೋಭಕೃತ್‌ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಶೋಭನ / ಕರಣ: ಬವ
ಸೂರ್ಯೋದಯ – ಬೆ.06.12
ಸೂರ್ಯಾಸ್ತ – 5.55
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ: ವ್ಯವಹಾರದಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾದರೆ ಬಹಳ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ವೃಷಭ: ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವಿರಿ.
ಮಿಥುನ: ವೈವಾಹಿಕ ಜೀವನದ ಬಗ್ಗೆ ಗಮನ ಕೊಡಿ

ಕಟಕ: ರಕ್ತ ಸಂಬಂ ಗಳ ವಿರೋಧ ಎದುರಿಸ ಬೇಕಾಗುತ್ತದೆ.
ಸಿಂಹ: ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಬೆಳೆಯುವ ನಿಮಗೆ ಸಂತೃಪ್ತಿಯ ದಿನ.
ಕನ್ಯಾ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ. ಜನಪ್ರಿಯತೆ ಗಳಿಸುವಿರಿ.

ತುಲಾ: ಹಳೆಯ ಕಾನೂನು ವಿಷಯಗಳಿಗೆ ಪರಿಹಾರ ದೊರೆಯಲಿದೆ. ದೂರ ಪ್ರಯಾಣ ಬೇಡ.
ವೃಶ್ಚಿಕ: ವಿವಿಧ ಕ್ಷೇತ್ರ ಗಳಲ್ಲಿ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ಧನುಸ್ಸು: ಉದ್ಯೋಗದಲ್ಲಿ ಬಡ್ತಿ ಮತ್ತು ವೇತನ ಹೆಚ್ಚಳವಾಗುವ ಅವಕಾಶಗಳಿವೆ.

ಮಕರ: ಹಣದ ವಿಷಯದಲ್ಲಿ ಸಾಮಾನ್ಯ ದಿನಕ್ಕಿಂತ ಇಂದು ಉತ್ತಮವಾಗಿರುತ್ತದೆ.
ಕುಂಭ: ಪೂರ್ವಜರ ಆಸ್ತಿಯಿಂದ ಲಾಭ ಸಿಗಲಿದೆ. ಕಿರಿಯ ಸಹೋದ್ಯೋಗಿಗಳಿಗೆ ಸಹಾಯ ಮಾಡುವಿರಿ.
ಮೀನ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.

ಬೆಂಗಳೂರಲ್ಲಿ ಸ್ಪೋಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ, ತನಿಖೆಗೆ ಆಗ್ರಹ

ಬೆಂಗಳೂರು,ಅ.25-ಸ್ಟೋಟದಿಂದ ಮನೆ ಧ್ವಂಸವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಈ ಬಗ್ಗೆ ತನಿಖೆಯಾಗ ಬೇಕೆಂದು ಆಗ್ರಹಿಸಿದ್ದಾರೆ. ಕೆಆರ್‌ಪುರಂನ ತ್ರಿವೇಣಿ ನಗರದ ಮನೆಯೊಂದರಲ್ಲಿ ಸ್ಟೋಟ ಸಂಭವಿಸಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅವರು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಇಷ್ಟು ಪ್ರಮಾಣದಲ್ಲಿ ಹಾನಿಯಾಗಲು ಸಾಧ್ಯನಾ ಎಂದು ಪ್ರಶ್ನಿಸಿದ್ದಾರೆ.

ಗಟ್ಟಿಮುಟ್ಟಾದ ಆರ್‌ಸಿಸಿ ಮನೆ ಧ್ವಂಸವಾಗಲು ಸಾಧ್ಯವೇ ಅಥವಾ ಬೇರೆನಾ ಅನ್ನೋದು ತನಿಖೆಯಾಗಬೇಕು ಎಂದರು.ಈ ಘಟನೆಯಿಂದ ಸುತ್ತಮುತ್ತಲಿನ ಜನರು ಭಯಬೀತರಾಗಿದ್ದಾರೆ. ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಇದು ಹೇಗೆ ಬ್ಲಾಸ್ಟ್‌ ಆಯ್ತು, ಕಾರಣ ಏನು ಎಂಬುವುದರ ಬಗ್ಗೆ ಸಮಗ್ರ ತನಿಖೆಯಾಗಲಿ.ಮೃತ ವೃದ್ಧೆ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಲಿ ಎಂದರು.

ದಿಗ್ಬ್ರಾಂತನಾದೆ: ಶಾಸಕ ಬೈರತಿ ಬಸವರಾಜು ರವರು ಪ್ರತಿಕ್ರಿಯಿಸಿ ಘಟನೆ ನೋಡಿ ದಿಗ್ಬ್ರಾಂತನಾದೆ. ಗ್ಯಾಸನಿಂದ ಆಗಿದೆಯೋ, ಸ್ಟೋಟಕದಿಂದ ಆಗಿದೆಯೋ ಗೊತ್ತಾಗಬೇಕು. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿರುವುದು ನೋಡಿದರೆ ಅನುಮಾನ ಬರುತ್ತಿದೆ ಎಂದರು. ಗಾಯಾಳುಗಳ ಚಿಕಿತ್ಸೆ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ ಶಾಸಕರು,ಇದೇ ವೇಳೆ ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ 1ಲಕ್ಷ ಪರಿಹಾರ ಘೋಷಿಸಿದರು.

ತನಿಖೆ ಮುಂದುವರೆದಿದೆ: ಈ ಮನೆಯಲ್ಲಿ ಬೆಳಗ್ಗೆ 7.30 ರ ಸುಮಾರಿಗೆ ಗ್ಯಾಸ್‌‍ ಸ್ಟವ್‌ ಹಚ್ಚುತ್ತಿದ್ದಂತೆ ಸ್ಟೋಟವಾಗಿದೆ. ಇವರ ಮನೆಯಿಂದ ಗ್ಯಾಸ್‌‍ ವಾಸನೆ ಬರುತ್ತಿತ್ತು ಎಂದು ನೆರೆಹೊರೆಯವರು ಹೇಳುತ್ತಿದ್ದಾರೆ.ತನಿಖೆ ಮುಂದುವರೆಸಿದ್ದೇವೆ ಎಂದು ಜಂಟಿ ಪೊಲೀಸ್‌‍ ಆಯುಕ್ತ ರಮೇಶ್‌ ಬಾನೋತ್‌ ಹೇಳಿದ್ದಾರೆ.

ಸೊಕೋ ತಂಡ, ಎಫ್‌ಎಸ್‌‍ಎಲ್‌ ತಂಡ ಮತ್ತು ಬಾಂಬ್‌ ನಿಷ್ಕ್ರಿಯದಳದಿಂದ ಪರಿಶೀಲನೆ ನಡೆಯುತ್ತಿದೆ ಎಂದರು.ಸ್ಟೋಟದಿಂದ ಅಕ್ಕಯ್ಯಮ ಎಂಬುವವರು ಮೃತಪಟ್ಟಿದ್ದಾರೆ. ಅವರ ಮಗ, ಮೊಮಕ್ಕಳು ಮನೆಯಲ್ಲಿದ್ದರು. ಒಬ್ಬರ ಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಎ-ಖಾತಾ ಪರಿವರ್ತನೆ ನೆಪದಲ್ಲಿ ಲೂಟಿ ಮಾಡುತ್ತಿದೆ ಸರ್ಕಾರ : ಹೆಚ್ಡಿಕೆ ಆರೋಪ

ಬೆಂಗಳೂರು,ಅ.25- ರಾಜ್ಯ ಸರ್ಕಾರ ದೀಪಾವಳಿ ಕೊಡುಯಾಗಿ ಬಿ ಖಾತಾಯಿಂದ ಎ ಖಾತಾಗೆ ಪರಿವರ್ತನೆ ಮಾಡುವುದಾಗಿ ಹೇಳಿ ಜನರಿಗೆ ಟೋಪಿ ಹಾಕುತ್ತಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವತ್ತಿನ ಮಾರ್ಗಸೂಚಿ ದರದ ಮೇಲೆ ಶೇ.5ರಷ್ಟು ಪಾವತಿಸಿ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸಿರುವುದಾಗಿ ಸರ್ಕಾರ ಹೇಳಿದೆ. ವಾಸ್ತವವಾಗಿ ಬಿಬಿಎಂಪಿ ಮುನ್ಸಿಪಾಲ್‌ ಕಾಯ್ದೆಯಡಿ ಎ ಖಾತಾ ಬಿ ಖಾತಾ ಎಂಬುದೇನಿಲ್ಲ. ಸಾರ್ವಜನಿಕ ಗೊಂದಲ ಉಂಟು ಮಾಡಲಾಗುತ್ತಿದೆ ಎಂದರು.

ಖಾತಾ ಪರಿವರ್ತನೆ ಹೆಸರಿನಲ್ಲಿ ಸರ್ಕಾರ ಜನರನ್ನು ದಾರಿ ತಪ್ಪಿಸಿ ಹಗಲು ದರೋಡೆ ಮಾಡಲು ಹೊರಟಿದೆ. ಇದಕ್ಕೆ ಮರಳಾಗಬೇಡಿ. ಮುಂದೆ ನಮ ಸರ್ಕಾರ ಬರಲಿದ್ದು, ಹಳೆಯ ವ್ಯವಸ್ಥೆಯನ್ನು ಜಾರಿಗೆ ತಂದು ಜನರ ಹಿತ ಕಾಪಾಡಲಿದೆ ಎಂದು ಹೇಳಿದರು.

ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ. ಖಾತಾ ಪರಿವರ್ತನೆ ಹೆಸರಿನಲ್ಲಿ ಜನರ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಹಗಲು ದರೋಡೆ ಮಾಡುತ್ತಿದ್ದಾರೆ. ಖಜಾನೆ ತುಂಬಿಸಲು ಈ ಯೋಜನೆಗೆ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.

30*40 ಅಡಿಯ ನಿವೇಶನಕ್ಕೆ ಬಿ ಇಂದ ಎ ಖಾತಾಗೆ ಪರಿವರ್ತನೆ ಮಾಡಲು ಸುಮಾರು 4ರಿಂದ 5 ಲಕ್ಷ ರೂ. ಆಗುತ್ತದೆ. ಇದು ಎಚ್‌ಎಸ್‌‍ಆರ್‌ಬಡಾವಣೆಯಲ್ಲಿ 25 ಲಕ್ಷ ರೂ. ಆಗುತ್ತದೆ. ಈ ರೀತಿ ಜನರಿಗೆ ಹೊರೆ ಹೊರಿಸಿ ಖಜಾನೆ ತುಂಬಿಸಿಕೊಳ್ಳಲು ಮುಂದಾಗಿದ್ದಾರೆ.

ಎರಡು ವರ್ಷ ಕಾಯಿರಿ:
ಖಾತಾ ಪರಿವರ್ತನೆಗೆ ದುಬಾರಿ ಹಣ ಪಾವತಿಸುವ ಬದಲು ಎರಡು ವರ್ಷ ಕಾಯಿರಿ. ನಮ ಸರ್ಕಾರ ಅಧಿಕಾರಕ್ಕೆ ಬರಲಿದೆ.ಹಿಂದಿನ ವ್ಯವಸ್ಥೆಯಲ್ಲೇ ಸುಲಭವಾಗಿ ನಿಮ ಆಸ್ತಿ ದೊರೆಯಲಿದೆ. ದೀಪಾವಳಿ ಉಡುಗೊರೆಗೆ ಆಸೆ ಬಿದ್ದು ಹಾಳು ಮಾಡಿಕೊಳ್ಳಬೇಡಿ. ಮಾಲೀಕತ್ವ ಸಿಗಲಿದೆ. ಇದರ ಸವಾಲನ್ನು ಸ್ವೀಕಾರ ಮಾಡುತ್ತೇನೆ ಎಂದರು.

ಜನತಾದಳ ಸರ್ಕಾರವಿದ್ದಾಗ ಪ್ರತಿ ಚದರ ಅಡಿಗೆ 110 ರೂ. ನಿಗದಿ ಮಾಡಿ ಖಾತಾ ಮಾಡಿಕೊಡುವ ವ್ಯವಸ್ಥೆ ಜಾರಿಗೆ ತಂದಿತ್ತು. ಆಗ ಭೂ ಪರಿವರ್ತನೆ ಶುಲ್ಕ 1500 ರೂ. ಖಾತಾಗೆ 12263 ರೂ. ಪಾವತಿಸಬೇಕಿತ್ತು. 2003ರಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ ತರಲಾಗಿತ್ತು. ನಾನು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಒಂದು ಪಟ್ಟಣ ಪಂಚಾಯ್ತಿ , 7 ನಗರಸಭೆಗಳನ್ನು ಒಟ್ಟುಗೂಡಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ರಚಿಸಲಾಯಿತು. ಆಗಿನಿಂದಲೂ ಜನರು ಹಣ ಪಾವತಿಸಿ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಜಿಬಿಎ ಅಧಿಸೂಚನೆಯಲ್ಲಿ ಅತ್ಯಂತ ವೇಗವಾಗಿ ವಿಸ್ತಾರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಬಿ ಖಾತಾ ಪ್ರದೇಶದಲ್ಲಿ ಮಳೆಯಿಂದ ಪ್ರವಾಹ, ಕಟ್ಟಡ ಕುಸಿಯುವುದನ್ನು ಉಲ್ಲೇಖಿಸಲಾಗಿದೆ. ಬಿ ಖಾತಾದಿಂದ ಎ ಖಾತೆಗೆ ಪರಿವರ್ತನೆಯಾದರೆ ಮಳೆ ನೀರಿನ ಪ್ರವಾಹ, ಕಟ್ಟಡ ಕುಸಿತ ಇಳಿಯುತ್ತದೆಯೇ ಎಂದು ವ್ಯಂಗ್ಯವಾಡಿದರು.

ಈಗಾಗಲೇ ಮಾರ್ಗಸೂಚಿ ದರ ಹಾಗೂ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಗ್ಯಾರಂಟಿ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ ಎಂದು ಅವರು ಆರೋಪಿಸಿದರು.2ನೇ ಬಾರಿ ಮುಖ್ಯಮಂತ್ರಿಯಾಗಿದ್ದಾಗ 9 ಕೈಗಾರಿಕಾ ಕ್ಲಸ್ಟರ್‌ಗಳನ್ನು ಘೋಷಣೆ ಮಾಡಲಾಗಿತ್ತು. ಚೀನಾದೊಂದಿಗೆ ಸ್ಪರ್ಧೆ ಮಾಡಲು ಅದನ್ನು ಘೋಷಿಸಲಾಗಿತ್ತು. ಮೈತ್ರಿ ಸರ್ಕಾರ ಪತನವಾದ ನಂತರ ಆ ಕಡೆ ಗಮನವೇ ಹರಿಸಿಲ್ಲ. ಬೆಂಗಳೂರಿನಲ್ಲಿ ರಸ್ತೆಗುಂಡಿ ಮುಚ್ಚುತ್ತಿಲ್ಲ. ಇಂಥವರ ಜೊತೆಗೆ ಬಹಿರಂಗ ಚರ್ಚೆ ಮಾಡಲಾಗುತ್ತದೆಯೇ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದನಾಯಕ ಸಿ.ಬಿ.ಸುರೇಶ್‌ ಬಾಬು,ವಿಧಾನಪರಿಷತ್‌ ಸದಸ್ಯರಾದ ಟಿ.ಎ.ಶರವಣ, ಟಿ.ಎನ್‌.ಜವರಾಯಿಗೌಡ, ವಿವೇಕಾನಂದ, ಎಸ್‌‍.ಎಲ್‌.ಭೋಜೇಗೌಡ,ಮಾಜಿ ವೆಂಕಟರಾವ್‌ ನಾಡಗೌಡ, ಬೆಂಗಳೂರು ಮಹಾನಗರ ಜೆಡಿಎಸ್‌‍ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ, ಜೆಡಿಎಸ್‌‍ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶಿ ರಾಮೇಗೌಡ ಮೊದಲಾದವರು ಉಪಸ್ಥಿತರಿದ್ದರು.