Home Blog Page 29

ಯತೀಂದ್ರ ಅವರ ಹೇಳಿಕೆ ವೈಯಕ್ತಿಕ, ಅವರ ಹೇಳಿಕೆಯಲ್ಲಿ ತಪ್ಪಿಲ್ಲ : ಗೃಹ ಸಚಿವ ಡಾ. ಪರಮೇಶ್ವರ್

ಬೆಂಗಳೂರು, ಅ.24- ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿಕೆ ವೈಯಕ್ತಿಕವಾಗಿದ್ದು, ಅವರ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್‌ ಜಾರಕಿಹೊಳಿ ಹೆಸರು ಪ್ರಸ್ತಾಪಿಸಿ, ಮುಂದೆ ಅಹಿಂದ ನಾಯಕ ಎಂದು ಹೇಳಿದ್ದಾರೆ. ಅವರು ಎರಡೂವರೆ ವರ್ಷಗಳ ನಂತರ ಆಗಬಹುದು. ನಾಳೆಯೇ ಜಾರಕಿಹೊಳಿ ಅವರು ಸಿಎಂ ಆಗುತ್ತಾರೆ ಎಂದೇನು ಹೇಳಿಲ್ಲ. 2028 ಕ್ಕೆ ಸಿಎಂ ಆಗಬಹುದು ಎಂದು ಹೇಳಿದ್ದಾರೆ ಎಂದರು.

ನಾನು ಸಿಎಂ ಆಕಾಂಕ್ಷಿ ಅಲ್ಲ ಅಂದಿದ್ದಾರೆ. ಆ ದೃಷ್ಟಿಯಿಂದ ಯತೀಂದ್ರ ಹೇಳಿರಬಹುದು. ಹೈಕಮಾಂಡ್‌ಗಿಂತ ಯತೀಂದ್ರ ಪವರ್‌ ಫುಲ್‌ ಅಂತೇನೂ ಇಲ್ಲ. ಆದರೆ, ಯತೀಂದ್ರ ಅವರ ಮಾತಿನಲ್ಲಿ ತಪ್ಪೇನೂ ಇಲ್ಲ. ಇದು ಮುಖ್ಯಮಂತ್ರಿಯವರ ಹೇಳಿಕೆಯಲ್ಲ. ನಮಗೂ ಸತೀಶ್‌ ಜಾರಕಿಹೊಳಿ ಸಿಎಂ ಆಗಬೇಕು ಎಂಬುದು ಇದೆ ಎಂದು ಅವರು ತಿಳಿಸಿದರು.

ಈ ರೀತಿ ಹೇಳಿದ್ದರೂ ಯತೀಂದ್ರ ಅವರಿಗೆ ನೋಟಿಸ್‌‍ ಕೊಟ್ಟಿಲ್ಲವೆಂಬ ಪ್ರಶ್ನೆಗೆ ಪ್ರಕ್ರಿಯಿಸಿದ ಸಚಿವರು, ಅದನ್ನು ಪಕ್ಷದ ಅಧ್ಯಕ್ಷರು ಮಾಡುತ್ತಾರೆ. ಯಾರಾದರೂ ಮಾತನಾಡಿದರೆ ನೊಟೀಸ್‌‍ ಕೊಡುವುದಾಗಿ ಹೇಳಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೇವಸ್ಥಾನಕ್ಕೆ ಹೋಗುವುದರಲ್ಲಿ ತಪ್ಪೇನೂ ಇಲ್ಲ. ನಾನು ಹೋಗುತ್ತೇನೆ, ನೀವು ಹೋಗುತ್ತಿರಾ,? ಅವರಿಗೆ ಏನೋ ಹರಕೆ ಇರಬಹುದು. ಅದನ್ನು ತೀರಿಸಲು ಹೋಗಿರಬಹುದು ಎಂದು ಅವರು ಹೇಳಿದರು.

ಡಿಸೆಂಬರ್‌ನಲ್ಲಿ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸಕಾಂಗ ಪಕ್ಷದ ಸಭೆ ಕರೆದು ತೀರ್ಮಾನಿಸಲಾಗುತ್ತದೆ. ಶಾಸಕರು ಯಾರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುತ್ತಾರೋ ಅವರು ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಲಾಗುತ್ತದೆ. ಈಗ ಮುಖ್ಯಮಂತ್ರಿ ಇರುವುದರಿಂದ ಏಕೆ? ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದರು.

ನ.17 ರಿಂದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರೀಷೆ

ಬೆಂಗಳೂರು,ಅ.24– ಐತಿಹಾಸಿಕ ಬಸವನಗುಡಿಯ ಕಡಲೆಕಾಯಿ ಪರೀಷೆ ನ.17ರಿಂದ ಆರಂಭವಾಲಿದ್ದು, ಈ ಬಾರಿ ಐದು ದಿನಗಳ ಕಾಲ ಅದ್ಧೂರಿಯಾಗಿ ಪರೀಷೆ ನಡೆಯಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಕಡಲೆಕಾಯಿ ಪರಿಷೆ – 2025 ರ ಪೂರ್ವಾಭಾವಿ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಬಾರಿಗೆ 2 ದಿನಗಳ ಪರೀಷೆ 5 ದಿನಗಳವರೆಗೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ. ಕಳೆದ ವರ್ಷ ಸುಮಾರು 5 ಲಕ್ಷ ಭಕ್ತಾದಿಗಳು ಭಾಗವಹಿಸಿದ್ದು, ಯಶಸ್ವಿಯಾಗಿ ನಡೆದಿತ್ತು. ಜೊತೆಗೆ ಪ್ಲಾಸ್ಟಿಕ್‌ ಮುಕ್ತ ಕಡಲೆಕಾಯಿ ಪರೀಷೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು ಎಂದರು.

ಪ್ರತಿ ವರ್ಷದಂತೆ ಕಡೇ ಕಾರ್ತಿಕ ಮಾಸದಲ್ಲಿ ಬಸವನಗುಡಿಯ ಶ್ರೀ ಬಸವಣ್ಣ ದೇವಾಲಯದಲ್ಲಿ ನ.17ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಕಡಲೆಕಾಯಿ ಪರೀಷೆ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.

ಉದ್ಘಾಟನೆಯನ್ನು 21 ಬಸವಣ್ಣಗಳನ್ನು ದೇವಸ್ಥಾನಕ್ಕೆ ಆಹ್ವಾನಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುವುದು. ವಿಜೃಂಭಣೆಯ ದೀಪಾಲಂಕಾರ ವ್ಯವಸ್ಥೆ ಬುಲ್‌ ಟೆಂಪಲ್‌ ರಸ್ತೆ, ಗಾಂಧಿ ಬಜಾರ್‌ ಮತ್ತು ಎನ್‌. ಆರ್‌ ರಸ್ತೆಗಳಿಗೂ ಸೇರಿ ದೀಪಾಂಲಕಾರ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.

ಎನ್‌ಜಿಓಗಳ ಸಹಕಾರದೊಂದಿಗೆ ಪ್ಲಾಸ್ಟಿಕ್‌ ಕವರ್‌ ಗಳನ್ನು ಬಳಸದಂತೆ ಬಟ್ಟೆ ಬ್ಯಾಗ್‌ ಗಳನ್ನು ಬಳಸಲು ಅಂಗಡಿಯವರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ಪರಿಷೆಗೆ ಬನ್ನಿ ಕೈ ಚೀಲ ತನ್ನಿ ಎಂದು ಘೋಷಣೆ ಹಾಗೂ ಪ್ಲಾಸ್ಟಿಕ್‌ ಸಂಪೂರ್ಣ ನಿಷೇದಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸುಂಕ ವಸೂಲಾತಿ ರದ್ದು ಮುಂದುವರಿಕೆ
ಬುಲ್‌ಟೆಂಪಲ್‌ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಸುಂಕ ವಸೂಲಾತಿಗೆ ಪ್ರತಿ ವರ್ಷ ಟೆಂಡರ್‌ ಮಾಡಲಾಗುತ್ತಿದ್ದು, ಟೆಂಡರ್‌ ದಾರರು ಅಂಗಡಿಯವರಿಂದ ಬಲವಂತವಾಗಿ ಹೆಚ್ಚು ಸುಂಕ ವಸೂಲಿ ಮಾಡುತ್ತಿರುವುದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಸುಂಕ ವಸೂಲಾತಿ ಟೆಂಡರ್‌ ಅನ್ನು ಕೈಬಿಡಲು ಹಾಗೂ ವ್ಯಾಪಾರಸ್ಥರಿಂದ ಸುಂಕವನ್ನು ಕಳೆದ ವರ್ಷದಂತೆ ಈ ವರ್ಷವೂ ವಸೂಲಿ ಮಾಡದಂತೆ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಕಡಲೆಕಾಯಿ ಪರಿಷೆ ದಿನಗಳಂದು ಆರೋಗ್ಯ ಸ್ವಚ್ಛತೆ ನೈರ್ಮಲ್ಯಕ್ಕೆ ಒತ್ತು ಮತ್ತು ನೂಕು ನುಗ್ಗಲು ಉಂಟಾಗದಂತೆ ತಡೆಯಲು ಪೊಲೀಸ್‌‍ ಇಲಾಖೆಯ ಸಹಕಾರದೊಂದಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ನಿರಂತರ ವಿದ್ಯುತ್‌, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು ಎಂದರು.

ಬೀದಿದೀಪಗಳ ಅಳವಡಿಕೆ ಮತ್ತು ದುರಸ್ಥಿ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಸಿ.ಸಿ.ಟಿ.ವಿಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಕೆ, ಅಗ್ನಿ ಶಾಮಕ ವಾಹನ ನಿಯೋಜನೆ ಸೇರಿದಂತೆ ತುರ್ತು ಚಿಕಿತ್ಸೆ ವಾಹನದ ವ್ಯವಸ್ಥೆ, ಮಾರ್ಷಲ್‌ಗಳನ್ನಿ ನಿಯೋಜಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಶಾಸಕರಾದ ರವಿಸುಬ್ರಹಣ್ಯ, ಉದಯ ಗರುಡಾಚಾರ್‌, ರಾಜ್ಯ ಧಾರ್ಮಿಕ ಪರಿಷತ್‌ ಸದಸ್ಯರಾದ ಕೆ.ಎಂ .ನಾಗರಾಜ್‌, ದ್ವಾರಕಾನಾಥ್‌, ದಕ್ಷಿಣ ಪಾಲಿಕೆಯ ಹಿರಿಯ ಅಧಿಕಾರಿ ದಿಗ್ವಿಜಯ ಬೋಡ್ಸೆ ಮತ್ತಿತರರು ಉಪಸ್ಥಿತರಿದ್ದರು.

ಕರ್ನೂಲ್‌ ಬಳಿ ಖಾಸಗಿ ಬಸ್‌‍, 20ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್‌, ಅ.24- ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌‍ ಕರ್ನೂಲ್‌ ಜಿಲ್ಲೆಯ ಚಿನ್ನೇಕೂರ್‌ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹಸುಗೂಸು ಸೇರಿ ಒಟ್ಟು 20ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದು, 15 ಮಂದಿ ಪವಾಡ ಸದೃಶ್ಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಓರಿಸ್ಸಾದಲ್ಲಿ ನೋಂದಾಯಿತ ಕಾವೇರಿ ಟ್ರಾವಲ್ಸ್ ನ ಐಶಾರಾಮಿ ಸ್ಲೀಪರ್‌ ಕೋಚ್‌ ಬಸ್‌‍ನಲ್ಲಿ 40 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಈ ಬಸ್‌‍ ಕರ್ನೂಲ್‌ನ ಚಿನ್ನೇಕೂರ್‌ ಬಳಿ ಬರುತ್ತಿದ್ದಂತೆ ಮೊದಲು ಮೋಟಾರ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಚಾಲಕ ಬಸ್‌‍ ನಿಲ್ಲಿಸದೇ ಇದ್ದುದರಿಂದ ಬೈಕ್‌ನ್ನು ಸುಮಾರು ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕ್‌ನ ಪೆಟ್ರೋಲ್‌ ಟ್ಯಾಂಕ್‌ಗೆ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ. ಇದರಿಂದ ಬಸ್‌‍ ಗೆ ಕ್ಷಣಾರ್ಧದಲ್ಲಿ ಬೆಂಕಿಯ ಕಿಡಿತಾಗಿ ಬಸ್‌‍ ಪೂರ್ತಿ ಬೆಂಕಿ ಆವರಿಸಿಕೊಂಡಿದೆ.

ಮುಂಜಾನೆ 3.30ರ ಸವಿ ನಿದ್ದೆಯ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಪ್ರಯಾಣಿಕರು ಏನಾಗುತ್ತಿದೆ ಎಂದು ಅರ್ಥೈಸಿಕೊಳ್ಳುವ ವೇಳೆಗೆ ಬಸ್‌‍ ಪೂರ್ತಿ ಬೆಂಕಿಯ ಕೆನ್ನಾಲಿಗೆ ಹಾಗೂ ಹೊಗೆ ಆವರಿಸಿದೆ. ಎಸಿ ಸ್ಲೆಪರ್‌ ಕೋಚ್‌ ಬಸ್‌‍ ಆಗಿದ್ದರಿಂದ ಎಲ್ಲಾ ಕಿಟಕಿಯ ಗಾಜುಗಳು ಮುಚ್ಚಲ್ಪಟ್ಟಿದ್ದವು. ದುರಾದೃಷ್ಟವಶಾತ್‌ ಬಸ್‌‍ನ ಬೆಂಕಿಯ ಕೆನ್ನಾಲಿಗೆಯಿಂದ ವೈರ್‌ಗಳು ಸುಟ್ಟು ಬಸ್‌‍ನ ಯಾಂತ್ರೆಕೃತ ಬಾಗಿಲು ಕೂಡ ತೆರೆಯದೆ ಜಾಮ್‌ ಆಗಿತ್ತು ಎನ್ನಲಾಗಿದೆ.

ಕೆಲವು ಪ್ರಯಾಣಿಕರು ಕಿಟಕಿಯ ಗಾಜುಗಳನ್ನು ಹೊಡೆದು ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ ಬಹುತೇಕರಿಗೆ ಇದು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಸಾಫ್ಟವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ರಮೇಶ್‌ ಮತ್ತು ಅವರ ಕುಟುಂಬ ದೀಪಾವಳಿ ಹಬ್ಬಕ್ಕಾಗಿ ಹೈದರಬಾದ್‌ನಲ್ಲಿರುವ ತಮ ತವರಿಗೆ ಹೋಗಿತ್ತು. ವಾಪಾಸ್‌‍ ಬರುವಾಗ ಈ ದುರುಂತ ಸಂಭವಿಸಿ, ರಮೇಶ್‌, ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಇಡೀ ಕುಟುಂಬ ಬೆಂಕಿಗಾಹುತಿಯಾಗಿದೆ.

ಸುದ್ದಿ ತಿಳಿದು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್‌ ಬಸ್‌‍ನ ಡಿಸೇಲ್‌ ಟ್ಯಾಂಕ್‌ ಗೆ ಬೆಂಕಿ ಹೊತ್ತಿಕೊಂಡಿಲ್ಲ. ಒಂದು ವೇಳೆ ಟ್ಯಾಂಕ್‌ಗೆ ಬೆಂಕಿ ತಾಗಿ ಸ್ಫೋಟಿಸಿದ್ದರೆ ಬಸ್‌‍ನಲ್ಲಿ ಯಾರೂ ಬದುಕಿ ಉಳಿಯುವ ಸಾಧ್ಯತೆಗಳು ಕಡಿಮೆ ಇತ್ತು ಎನ್ನಲಾಗಿದೆ.

ಬೈಕ್‌ ಸವಾರ ಸೇರಿ ಹಲವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 25 ಕ್ಕೆ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗಬಹುದು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಬಸ್ಸಿನಲ್ಲಿ ಚಾಲಕ ಸೇರಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಕರ್ನೂಲ್‌ ಜಿಲ್ಲಾಧಿಕಾರಿ ಡಾ.ಎ.ಸಿರಿ ತಿಳಿಸಿದ್ದಾರೆ.

ಬಸ್‌‍ನಲ್ಲಿ ಸಜೀವ ದಹನವಾದ 20 ಮಂದಿಯ ಪೈಕಿ 11 ಜನರ ಗುರುತು ಪತ್ತೆ ಹಚ್ಚಲಾಗಿದೆ. ಇನ್ನೂಳಿದ ಒಂಬತ್ತು ಜನರ ಮಾಹಿತಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಕರ್ನೂಲ್‌ ವಿಭಾಗದ ಡಿಐಜಿ ಕೋಯಾ ಪ್ರವೀಣ್‌ ಮಾಹಿತಿ ನೀಡಿದ್ದಾರೆ.

ಸಜೀವ ದಹನವಾಗಿರುವ ದೇಹಗಳ ಡಿಎನ್‌ಎ ಮಾದರಿಗಳನ್ನು ವೈದ್ಯಕೀಯ ತಜ್ಞರ ತಂಡ ಸಂಗ್ರಹಿಸಿದೆ. ಮುಂಜಾನೆ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ದುರಂತ ಸಂಭವಿಸಿದ ಕಾರಣ ಅನೇಕ ಪ್ರಯಾಣಿಕರು ದುರಂತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ವಿಷಾಧಿಸಿದ್ದಾರೆ.

ಬೆಂಕಿ ಹೊತ್ತಿಕೊಂಡ ಬಸ್‌‍ನಲ್ಲಿ ಯಾವುದೇ ಅಗ್ನಿಶಾಮಕ ನಿಯಂತ್ರಣ ಸಾಧನಗಳು ಇರಲಿಲ್ಲ ಎಂದು ಡಿಐಜಿ ತಿಳಿಸಿದ್ದಾರೆ. ಇದು ಪ್ರಯಾಣದ ಸಮಯದಲ್ಲಿ ಸುರಕ್ಷತಾ ಅನುಸರಣೆ ಮತ್ತು ತುರ್ತು ಸಿದ್ಧತೆಯಲ್ಲಿನ ಲೋಪಗಳನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಬಸ್‌‍ ದುರಂತದ ಬೆನ್ನಲ್ಲೇ ಖಾಸಗಿ ಬಸ್‌‍ಗಳ ಸುರಕ್ಷತೆಯ ಕುರಿತು ಚರ್ಚೆಗಳು ಶುರುವಾಗಿವೆ.

ಅಮಾಯಕರ ಜೀವಗಳ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಖಾಸಗಿ ಬಸ್‌‍ ಮಾಲೀಕರ ವಿರುದ್ಧ ಇಂತಹ ದುರ್ಘಟನೆಗಳು ಸಂಭವಿಸಿದಾಗ ಕೊಲೆ ಆರೋಪದಡಿ ಪ್ರಕರಣ ದಾಖಲಿಸಲು ತಮ ಸರ್ಕಾರ ಹಿಂದೇಟು ಹಾಕುವುದಿಲ್ಲ ಎಂದು ತೆಲಂಗಾಣ ರಾಜ್ಯ ಸಾರಿಗೆ ಸಚಿವ ಪೂನಂ ಪ್ರಭಾಕರ್‌ ಎಚ್ಚರಿಕೆ ನೀಡಿದ್ದಾರೆ.

ಕರ್ನೂಲ್‌ ಬಳಿ ಬಸ್‌‍ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂತಾಪ: ಬಸ್‌‍ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಜೀವ ನಷ್ಟಕ್ಕೆ ಒಳಗಾದ ಕುಟುಂಬದವರಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

2 ಲಕ್ಷ ಪರಿಹಾರ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಸ್‌‍ ದುರಂತದಲ್ಲಿ ಮೃತಪಟ್ಟವರಿಗಾಗಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದು, ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ನೀಡುವುದಾಗಿ ತಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತಿಳಿಸಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ಬೆಂಬಲ:ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಈ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸುವುದಾಗಿ ಹೇಳಿರುವ ಅವರು, ಗಾಯಗೊಂಡವರು ಮತ್ತು ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಸಂತಾಪ:
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್‌ ರೆಡ್ಡಿ, ಕೇಂದ್ರ ಸಚಿವರಾದ ಹೆಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಅಗಲಿದವರ ಆತಕ್ಕೆ ಸದ್ಗತಿ ಸಿಗಲಿ ಹಾಗೂ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಸಹಾಯವಾಣಿ:
ಕಲ್ಲೂರು ಮಂಡಲದ ಚಿನ್ನೇಕೂರು ಗ್ರಾಮದಲ್ಲಿ ಸಂಭವಿಸಿದ ಖಾಸಗಿ ಟ್ರಾವೆಲ್‌್ಸ ಬಸ್‌‍ ಬೆಂಕಿಗಾಹುತಿಗೆ ಸಂಬಂಧಿಸಿದಂತೆ, ಹಲವಾರು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಮಾಹಿತಿ ಮತ್ತು ಸಹಾಯಕ್ಕಾಗಿ ಬಾಧಿತ ಕುಟುಂಬಗಳ ಸದಸ್ಯರು ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಕರ್ನೂಲ್‌ ಜಿಲ್ಲಾಧಿಕಾರಿ ಡಾ. ಎ. ಸಿರಿ ಅವರು ತಿಳಿಸಿದ್ದಾರೆ.

ಕರ್ನೂಲ್‌ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯಂತ್ರಣ ಕೊಠಡಿ: 08518-277305
ಕರ್ನೂಲ್‌ ಸರ್ಕಾರಿ ಆಸ್ಪತ್ರೆ- 9121101059, 9494609814, 9052951010
ಅಪಘಾತ ಸ್ಥಳ ನಿಯಂತ್ರಣ ಕೊಠಡಿ: 9121101061
ಕರ್ನೂಲ್‌ ಪೊಲೀಸ್‌‍ ಕಚೇರಿ ನಿಯಂತ್ರಣ ಕೊಠಡಿ: 9121101075

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-10-2025)

ನಿತ್ಯ ನೀತಿ : ಕೆಲಸಕ್ಕೆ ಬಾರದ ಮಾತುಗಳು, ಕೆಲಸಕ್ಕೆ ಬಾರದ ವಸ್ತುಗಳು, ಕೆಲಸಕ್ಕೆ ಬಾರದ ಜನಗಳಿಂದ ದೂರವಿದ್ದರೆ ಮನಸ್ಸಿಗೆ ನೆಮ್ಮದಿ ತಾನಾಗೆ ಸಿಗುತ್ತದೆ. – ಗೌತಮ ಬುದ್ಧ

ಪಂಚಾಂಗ : 22-10-2025, ಬುಧವಾರ
ಶೋಭಕೃತ್‌ನಾಮ ಸಂವತ್ಸರ / ದಕ್ಷಿಣಾಯನ / ಋತು: ಸೌರ ಶರದ್‌ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ಪರತಿಪದಾ / ನಕ್ಷತ್ರ: ಸ್ವಾತಿ / ಯೋಗ: ಪ್ರೀತಿ / ಕರಣ: ಕಿಂಸ್ತುಘ್ನ
ಸೂರ್ಯೋದಯ – ಬೆ.06.11
ಸೂರ್ಯಾಸ್ತ – 5.57
ರಾಹುಕಾಲ – 12.00-1.30
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :
ಮೇಷ: ಮಾನಸಿಕ ಯಾತನೆಗೆ ಒಳಗಾಗುವ ಸಾಧ್ಯತೆ ಗಳು ಹೆಚ್ಚಾಗಿವೆ. ಸದಾ ದೇವರ ಧ್ಯಾನ ಮಾಡಿ.
ವೃಷಭ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಾ ವಿದೇಶಕ್ಕೆ ತೆರಳಬೇಕು ಎಂದಿದ್ದಲ್ಲಿ ಮಧ್ಯವರ್ತಿಗಳಿಂದ ಹುಷಾರಾಗಿರಬೇಕು.
ಮಿಥುನ: ವೃತ್ತಿ ಜೀವನದಲ್ಲಿ ಶತ್ರುಗಳಿಂದ ದೂರವಿರಬೇಕಾಗುತ್ತದೆ. ಎಚ್ಚರಿಕೆಯಿಂದಿರಿ.

ಕಟಕ: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ, ಹಣ ವ್ಯರ್ಥ ಮಾಡಿಕೊಳ್ಳದಿರಿ.
ಸಿಂಹ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.
ಕನ್ಯಾ: ದೂರ ಪ್ರಯಾಣ ಮಾಡುವುದರಿಂದ ನಷ್ಟವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ತುಲಾ: ಷೇರು ಮಾರುಕಟ್ಟೆ ಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ವೃಶ್ಚಿಕ: ನೀವು ಮಾತನಾಡುವ ರೀತಿಯಿಂದಾಗಿ ಬೇರೆಯವರಿಗೆ ನೋವಾಗಬಹುದು.
ಧನುಸ್ಸು: ಯಾವುದೇ ಕೆಲಸ ಮಾಡುವಾಗ ಹಿರಿಯರ ಸಲಹೆ-ಸೂಚನೆಗಳನ್ನು ಪಡೆಯುವುದು ಒಳಿತು.

ಮಕರ: ಸಂಗಾತಿ ಮೇಲೆ ಒತ್ತಡ ಹಾಕುವುದರಿಂದ ಅಸಮಾಧಾನವಾಗುವ ಸಾಧ್ಯತೆ ಇದೆ.
ಕುಂಭ: ದೂರದ ಬಂಧುಗಳ ಆಗಮನವಾಗಲಿದೆ. ನೆರೆಹೊರೆಯವರು ನಿಮ್ಮ ನೆರವಿಗೆ ಬರುವರು.
ಮೀನ: ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

4 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ 500ಕಿಮೀ ರಸ್ತೆಗೆ ವೈಟ್‌ ಟಾಪಿಂಗ್‌ : ಡಿಕೆಶಿ

ಬೆಂಗಳೂರು, ಅ.21– ಬೆಂಗಳೂರಿನಲ್ಲಿ 4 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ 500 ಕಿ.ಮೀ. ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು, ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಳೆಪೇಟೆ, ಬಿ.ವಿ.ಕೆ. ಅಯ್ಯಂಗಾರ್‌ ರಸ್ತೆ, ಅವಿನ್ಯೂ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾಡುವ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೆಂಪೇಗೌಡರು ನಿರ್ಮಿಸಿದ್ದ ಬೆಂಗಳೂರಿನ ಹೃದಯಭಾಗದ ಗಾಂಧಿ ನಗರಕ್ಕೆ ಹೊಸ ಸ್ವರೂಪ ನೀಡಲು ಸಚಿವರೂ ಆಗಿರುವ ಶಾಸಕ ದಿನೇಶ್‌ಗುಂಡೂರಾವ್‌ ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಭಾಷಣದ ವೇಳೆ ಸಿಳ್ಳೆ, ಚಪ್ಪಾಳೆಗಳ ಸದ್ದು ಜೋರಾದಾಗ ಗದರಿದ ಡಿ.ಕೆ.ಶಿವಕುಮಾರ್‌ ಕಲಾಸಿಪಾಳ್ಯದ ವ್ಯಾಪಾರ ಮಾಡಬೇಡಿ. ರಸ್ತೆ ಉದ್ಘಾಟನೆಗೆ ಮುಖ್ಯಮಂತ್ರಿ ಬಂದಿದ್ದಾರೆ ಎಂದರೆ ಅದರ ಗಂಭೀರತೆ ಅರ್ಥಮಾಡಿಕೊಳ್ಳಿ. ನಾವು ಹೇಳುವ ಮಾತುಗಳು ಜನರಿಗೆ ತಲುಪಬೇಕು ತಾಳೆಯಿಂದಿರಿ ಎಂದರು.

ಭಾಷಣ ಮುಂದುವರೆಸಿದ ಡಿ.ಕೆ.ಶಿವಕುಮಾರ್‌, ಸಚಿವ ದಿನೇಶ್‌ಗುಂಡೂರಾವ್‌ ಸಣ್ಣ ಕಳಂಕವೂ ಇಲ್ಲದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರನ್ನು 25 ರಿಂದ 30 ಸಾವಿರ ಮತಗಳ ಹಂತಗಳಿಂದ ಗೆಲ್ಲಿಸಬೇಕಿತ್ತು. ಆದರೆ ಅತ್ಯಂತ ಕಡಿಮೆ ಅಂತರದಲ್ಲಿ ಗೆಲ್ಲಿಸಲಾಗಿದೆ. ಬೇರೆ ಪಕ್ಷಗಳ ಅಭ್ಯರ್ಥಿಗಳು ಚಿಹ್ನೆಯ ಮೇಲೆ ಮತ ಪಡೆದರೆ, ದಿನೇಶ್‌ಗುಂಡೂ ರಾವ್‌ ತಾವು ಮಾಡಿದ ಕೆಲಸದ ಮೇಲೆ ಮತ ಪಡೆದಿದ್ದಾರೆ ಎಂದರು.

ತಮಗೆ ಗಾಂಧಿನಗರದ ಗಲ್ಲಿಗಲ್ಲಿಯೂ ಗೊತ್ತು. ನಾನು ಇಲ್ಲಿ ವಾಸಿಸಿದ್ದೇನೆ, ವ್ಯಾಪಾರ ಮಾಡಿದ್ದೇನೆ. ಇಲ್ಲಿ ಯಾವುದೇ ನಕ್ಷೆಗಳ ಮಂಜೂರಾತಿ ಇಲ್ಲದೆ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈಗ ಅವುಗಳನ್ನು ಒಡೆಯಲಾಗುವುದಿಲ್ಲ. ನೀರು, ವಿದ್ಯುತ್‌ ಸಂಪರ್ಕ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಇನ್ನು ಮುಂದೆ ಗಾಳಿ, ಬೆಳಕಿಗೆ ಅವಕಾಶ ಇಲ್ಲದಂತೆ ಕಟ್ಟಡ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದರು.

ಬೆಂಗಳೂರಿನಲ್ಲಿ 1.40 ಕೋಟಿ ಜನ ಸಂಖ್ಯೆಯಿದೆ. ದಿನವೊಂದಕ್ಕೆ 3400 ವಾಹನಗಳು ನೋಂದಣಿಯಾಗುತ್ತಿದ್ದು, ಒಟ್ಟು 1.27 ಕೋಟಿ ವಾಹನಗಳಿವೆ. 40 ರಿಂದ 45 ಸಾವಿರ ವಾಹನಗಳು ಬೆಂಗಳೂರಿಗೆ ಪ್ರತಿದಿನ ಬರುತ್ತಿವೆ. ಸಂಚಾರ ದಟ್ಟಣೆ ತೀವ್ರವಾಗಿದೆ. ರಸ್ತೆಗಳನ್ನು ಅಗಲ ಮಾಡಲಾಗುವುದಿಲ್ಲ, ಇರುವುದನ್ನೇ ಸರಿಪಡಿಸಿಕೊಳ್ಳಬೇಕು ಎಂದರು.

117 ಕಿ.ಮೀ. ಫೆರಿಫರಲ್‌ ಬಿಸನೆಸ್‌‍ ಕಾರಿಡಾರ್‌ ಯೋಜನೆಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಮಂಜೂರಾತಿ ನೀಡಲಾಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಮತ್ತು ಮಾಲೀಕರಿಗೆ ದ್ವಿಗುಣ ಪರಿಹಾರ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಲ್ಲಿ 3 ಪಟ್ಟು, ನಗರ ಪ್ರದೇಶದಲ್ಲಿ ಟಿಡಿಆರ್‌, ಎಫ್‌ಎಆರ್‌ ಮಾದರಿಯಲ್ಲಿ ಪರಿಹಾರ ನೀಡುವ ತೀರ್ಮಾನವನ್ನು ಧೈರ್ಯವಾಗಿ ತೆಗದುಕೊಳ್ಳಲಾಗಿದೆ. ಈ ರಸ್ತೆ ನಿರ್ಮಾಣದಿಂದ ನಗರದ ಒಳಗೆ ಬರುವ ಶೇ. 30 ರಷ್ಟು ವಾಹನಗಳ ದಟ್ಟಣೆ ಕಡಿಮೆಯಾಗಲಿದೆ ಎಂಬ ಕಾರಣಕ್ಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

2007ರಲ್ಲೇ ಈ ರಸ್ತೆಗೆ ಅಧಿಸೂಚನೆ ಹೊರಡಿಸಿದ್ದರೂ ಈವರೆಗೂ ಅನುಷ್ಠಾನವಾಗಿಲ್ಲ. ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಬೆಂಗಳೂರಿನ ನಾಗರಿಕರಿಗೆ ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಅಭಿಯಾನ ಕೈಗೊಂಡಿದ್ದೇವೆ. ದಾಖಲಾತಿಗಳ ಕ್ರಮಬದ್ಧಗೊಳಿಸುವ ಮೂಲಕ ಏಕರೂಪತೆ ತರುವ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಆಸ್ತಿ ದಾಖಲೆಗಳ ಡಿಜಿಟಲೀಕರಣಕ್ಕೆ ಕೇಂದ್ರದ ಮೋದಿ ಸರ್ಕಾರ ಪ್ರಶಂಸೆ ನೀಡಿದೆ ಎಂದರು.

ಬೆಂಗಳೂರಿನಲ್ಲಿ 1650 ಕಿ.ಮೀ ಪ್ರಮುಖ ರಸ್ತೆಗಳಿವೆ. ಅವುಗಳಲ್ಲಿ 104 ಕಿ.ಮೀ. ವೈಟ್‌ ಟಾಪಿಂಗ್‌ ಆಗಿದೆ. 182 ರಸ್ತೆಗಳ 352 ಕಿ.ಮೀ ಉದ್ದವನ್ನು 695 ಕೋಟಿ ರೂ.ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಮಾಡಲಾಗುತ್ತಿದ್ದು, ಈಗ ಬ್ಲಾಕ್‌ ಟಾಪಿಂಗ್‌ ನಡೆಯುತ್ತಿದೆ. 148 ಕಿ.ಮೀ. ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. 83 ರಸ್ತೆಗಳನ್ನು 1800 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 4 ಸಾವಿರ ಕೋಟಿ ವೆಚ್ಚದಲ್ಲಿ 500 ಕಿ.ಮೀ ರಸ್ತೆಯನ್ನು ವೈಟ್‌ ಟಾಪಿಂಗ್‌ ಮಾಡಲು ಕ್ರಿಯ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಬಿಜೆಪಿಯವರು ಅನಗತ್ಯ ಟೀಕೆ ಮಾಡುತ್ತಾರೆ. 113 ಕಿ.ಮೀ. ಮೇಲ್ಸೇತುವೆ ರಸ್ತೆ ನಿರ್ಮಾಣಕ್ಕೆ ನಿರ್ಧಾರ ತೆಗೆದುಕೊಂಡಿದ್ದೇವೆ. 40 ಕಿ.ಮೀ. ಸುರಂಗ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದ್ದು ಒಬ್ಬ ಸಂಸದ ಟೀಕೆ ಮಾಡುತ್ತಿದ್ದಾನೆ. ಆತ ಖಾಲಿ ಡಬ್ಬ, ಟ್ವೀಟ್‌ ಮಾಡಿ ಟೀಕೆ ಮಾಡುವುದು ಬಿಟ್ಟು, ಒಂದು ರೂ. ಹಣ ತಂದಿಲ್ಲ. ನಿರ್ಮಲಾ ಸೀತರಾಮ್‌ ಸೇರಿ ಬೆಂಗಳೂರಿಗೆ ಬಿಜೆಪಿಯ 5 ಜನ ಸಂಸದರಿದ್ದಾರೆ. 10 ರೂ. ಹಣ ತಂದಿಲ್ಲ. ಬೆಂಗಳೂರಿಗೆ ಇವರ ಕೊಡುಗೆ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರದ ಬಳಿಕ ಬೆಂಗಳೂರು ದೇಶಕ್ಕೆ ಅತೀ ಹೆಚ್ಚು ತೆರಿಗೆ ಪಾವತಿಸುತ್ತಿದೆ. ಕೇಂದ್ರ ದಿಂದಲೂ ನಮಗೆ ಹಣಕಾಸಿನ ಸೌಲಭ್ಯ ಬೇಕು ಎಂದು ಪ್ರಧಾನಿಮಂತ್ರಿ ನರೇಂದ್ರಮೋದಿ ಅವ ರಿಗೆ ನೇರವಾಗಿ ಮನವಿ ಮಾಡಿದ್ದೇವೆ. ಈವರೆಗೂ ಉತ್ತರ ಬಂದಿಲ್ಲ ಎಂದು ಆಕ್ಷೇಪಿಸಿದರು. ಅಭಿವೃದ್ಧಿ ವಿಚಾರಗಳ ಕುರಿತು ತಾವು ವಿರೋಧ ಪಕ್ಷಗಳ ನಾಯಕರ ಜೊತೆ ತಾವು ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದರು.

ಕಸವಿಲೇವಾರಿ, ಜಾಹೀರಾತು ಫಲಕ ಸೇರಿದಂತೆ ಎಲ್ಲದಕ್ಕೂ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ. ಆದರೂ ನಾವು ಧೈರ್ಯ ಗೆಡದೆ ಕೆಲಸ ಮಾಡುತ್ತಿದ್ದೇವೆ. ಆದರೆ ಬೆಂಗಳೂರಿನ ಜನ ಮತ ಹಾಕುವಾಗ ನಮನ್ನು ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು.

ದೀಪಾವಳಿ ಜಾತ್ರೆ : ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಹನೂರು,ಅ.21- ತಾಲೂಕಿನ ಪ್ರಸಿದ್ದ ಧಾರ್ಮಿಕ ಪುಣ್ಯ ಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡು ಶ್ರೀ ಸ್ವಾಮಿ ಮಾದಪ್ಪನಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಿದರು.

ವರ್ಷಕ್ಕೊಮೆ ನಡೆಯುವ ದೀಪಾವಳಿ ಜಾತ್ರೆ ಅಮಾವಾಸ್ಯೆ ಮಹೋತ್ಸವದ ಪ್ರಯುಕ್ತ ಮುಂಜಾನೆ ಎಣ್ಣೆ ಮಜ್ಜನ ಸೇವೆ, ಬಿಲ್ವಾರ್ಚನೆ ಮಹಾ ಮಂಗಳಾರತಿ, ನೀರಭಿಷೇಕ, ಪನ್ನೀರು, ಎಳೆನೀರು, ರುದ್ರಾಭಿಷೇಕ, ಪುಷ್ಪಾರ್ಚನೆ, ಗಂಧಾಭಿಷೇಕ ವಿವಿಧ ಪೂಜೆಗಳನ್ನು ನೆರವೇರಿಸಿದವು.

ದೀಪಾವಳಿ ಜಾತ್ರೆಗೆ ಆಗಮಿಸಿದಂತ ಲಕ್ಷಾಂತರ ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಧರ್ಮ ದರ್ಶನ ಪಡೆಯಲು ಪ್ರಾಧಿಕಾರದಿಂದ ಅನುವು ಮಾಡಿ ಕೊಡಲಾಯಿತು. ಇನ್ನು ಕೆಲವು ಭಕ್ತರು 500 ಹಾಗೂ 250 ರೂಗಳ ಟಿಕೆಟ್‌ ಪಡೆದು ಸ್ವಾಮಿಯ ನೇರ ದರ್ಶನಕ್ಕೆ ಹೆಜ್ಜೆ ಹಾಕುತ್ತಿದ್ದರು.

ದೀಪಾವಳಿ ಜಾತ್ರೆಗೆ ಆಗಮಿಸಿದ ಭಕ್ತರು ಬೆಳ್ಳಿ, ಚಿನ್ನ ರಥೋತ್ಸವ ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪಗಳನ್ನು ಮೆರೆವಣಿ ವೀಕ್ಷಿಸಿದರು.ಇನ್ನೂ ಅಲವು ಭಕ್ತರು ಅಂತರಗಂಗೆಯಲ್ಲಿ ಮಿಂದೆದ್ದು ದೇಗುಲ ಸುತ್ತಲು ಉರುಳು ಸೇವೆ ನೆರವೇರಿಸಿದರೆ ಮತ್ತಷ್ಟು ಮಂದಿ ಭಕ್ತರು ಪಂಜಿನ ಸೇವೆ ಇನ್ನಿತರ ಉತ್ಸವಗಳಲ್ಲಿ ಭಾಗಿಯಾಗಿ ತಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತೀರಿಸಿದರು.

ಅಲ್ಲದೆ ಹುಂಡಿಯಲ್ಲಿ ಒಡವೆ ಹಣದ ಕಾಣಿಕೆಗಳನ್ನು ಹಾಕಿದರು. ವಿವಿಧ ಉತ್ಸವ ಮೂರ್ತಿ ಮೆರವಣಿಗೆಗಳಲ್ಲಿ ಧವಸಧಾನ್ಯ ಚಿಲ್ಲರೆ ಕಾಸುಗಳನ್ನು ತೀರಿನ ಮೇಲೆ ಎಸೆದು ಉಘೇ ಮಾದಪ್ಪ ನಾಮ ಸರಣೆಯ ಹಷೋರ್ಘಾದ್ಗಾರ ಮುಳುಗಿಸಿದರು.

ಎಣ್ಣೆ ಮಜ್ಜನ ಮಾದಪ್ಪನ ನರಕ ಚತುರ್ಧಶಿ ವಿಷೇಶ ಪೂಜೆ ಪುನಸ್ಕಾರಗಳ ಇಂದು ಅಮಾವಾಸ್ಯೆ ಪೂಜೆಗಳು ಹಾಲರುವೆ ಉತ್ಸವಗಳು ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳು ನೂರೊಂದು ಕಳಸ ಹೊತ್ತು ಸುಮಾರು 7ಕಿಮಿ. ದೂರದಿಂದ ಉಪವಾಸ ಇದ್ದು ಕಾಲ್ನಾಡಿಗೆಯಲ್ಲಿ ಸತ್ತಿಗೆ ಸೋರಿ ಪಾಣಿ ವಾದ್ಯ ಮೇಳಗಳ ಮೂಲಕ ಶ್ರದ್ಧಾ ಭಕ್ತಿಯಿಂದ ಹಾಲರವಿ ಹೊತ್ತು ದೇಗುಲಕ್ಕೆ ಆಗಮಿಸಿ ದೇಗುಲವನ್ನು ಪ್ರದರ್ಶನ ಹಾಕಿ ಮಹಾದೇವನಿಗೆ ಸಮರ್ಪಣೆ ನೆರವೇರಿಸಿದರು. ನಾಳೆ ಮಹಾರಾತ್ಯೋತ್ಸವ ಮೂಲಕ ದೀಪಾವಳಿ ಜಾತ್ರೆ ಮುಕ್ತಾಯಗೊಳ್ಳಲಿದೆ.

1100 ಟನ್‌ ಕೆಎಂಎಫ್‌ ಸಿಹಿ ಉತ್ಪನ್ನಗಳ ದಾಖಲೆ ಮಾರಾಟ

ಬೆಂಗಳೂರು, ಅ.21- ಕೆಎಂಎಫ್‌ ಮತ್ತು ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1100 ಮೆಟ್ರಿಕ್‌ ಟನ್‌ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ 46 ಕೋಟಿ ರೂ.ಗಳ ದಾಖಲೆಯ ವಹಿವಾಟು ಮಾಡುವ ಮೂಲಕ ಮಹತ್ವದ ಮೈಲುಗಲ್ಲು ನಿರ್ಮಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇ.38ರಷ್ಟು ವಹಿವಾಟಿನಲ್ಲಿ ಪ್ರಗತಿಯಾಗಿದ್ದು, ಇದು ಕೆಎಂಎಫ್‌ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಹೇಳಿದರು.

2024ರ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ 725 ಮೆಟ್ರಿಕ್‌ ಟನ್‌ ಸಿಹಿ ಉತ್ಪನ್ನಗಳನ್ನು ಮಾರಾಟ 33.48 ಕೋಟಿ ವಹಿವಾಟು ದಾಖಲಿಸಲಾಗಿತ್ತು. ಈ ಬಾರಿ ಹಬ್ಬದ ಅವಧಿಯ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ ಎರಡು ತಿಂಗಳು ಮುಂಚಿತವಾಗಿ ಎಲ್ಲ ಸದಸ್ಯ ಹಾಲು ಒಕ್ಕೂಟಗಳ ಸಹಕಾರದೊಂದಿಗೆ ನಿಖರ ಯೋಜನೆ ರೂಪಿಸಿ ಒಂದು ಸಾವಿರ ಮೆಟ್ರಿಕ್‌ ಟನ್‌ ಮಾರಾಟ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಗುರಿ ಮೀರಿದ ಸಾಧನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ನಂದಿನಿ ಬ್ರಾಂಡ್‌ನ ಗುಣಮಟ್ಟ, ಶುದ್ಧತೆ ಮತ್ತು ಗ್ರಾಹಕರ ವಿಶ್ವಾಸದ ಪ್ರತಿಫಲವಾಗಿದ್ದು, ರಾಜ್ಯದ ಹಾಲು ಉತ್ಪಾದಕರ ಶ್ರಮ ಮತ್ತು ಸಹಕಾರಿ ಬಲದ ದೃಢತೆಗೂ ಸಾಕ್ಷಿಯಾಗಿದೆ ಎಂದರು.

ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಶುದ್ಧತೆ, ಗುಣಮಟ್ಟ ಹಾಗೂ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ನಂದಿನಿ ಬ್ರಾಂಡ್‌ಅನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಪ್ರತಿ ವರ್ಷ ದಸರಾ, ದೀಪಾವಳಿ ಸಂದರ್ಭದಲ್ಲಿ ನಂದಿನಿ ಸಿಹಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆ. 40ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳ ಮಾದರಿಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಕೆಎಂಎಫ್‌ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿತ್ತು ಎಂದರು.

ತುಪ್ಪ, ಬೆಣ್ಣೆ, ಪನ್ನೀರು, ಸಿಹಿ ತಿನಿಸು, ಹಾಲಿನ ಪುಡಿ, ಪಾನೀಯಗಳು ಸೇರಿದಂತೆ 185ಕ್ಕೂ ಹೆಚ್ಚು ಬಗೆಯ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಕರ್ನಾಟಕ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ, ದೆಹಲಿ ಅಸ್ಸೋಂ, ದುಬೈ ಮತ್ತು ಸಿಂಗಾಪುರಗಳಿಗೂ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾರುಕಟ್ಟೆಯನ್ನು ವಿಸ್ತರಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ. ದೆಹಲಿಯಲ್ಲಿ ಒಂದು ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿದೆ ಎಂದ ಅವರು, ಮಧುಮೇಹಿಗಳು ಬಳಸುವಂತಹ ಮೂರು ಉತ್ಪನ್ನಗಳನ್ನು ಇತ್ತೀಚೆಗೆ ಕೆಎಂಎಫ್‌ ಬಿಡುಗಡೆ ಮಾಡಿದೆ ಎಂದರು.

ಕೆಎಂಎಫ್‌ ಆಡಳಿತಾಧಿಕಾರಿ ಕುಮಾರ್‌ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆ ಪೂರ್ಣಗೊಂಡ ಬಳಿಕ ಕೆಎಂಎಫ್‌ ಅಧ್ಯಕ್ಷರ ಚುನಾವಣೆ ನಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಮಾತನಾಡಿ, ನಂದಿನಿ ಉತ್ಪನ್ನಗಳಲ್ಲಿ ಕಲಬೆರಕೆ ಇಲ್ಲ, 784 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಕಲಬೆರಕೆ ಇಲ್ಲ ಎಂಬುದು ದೃಢಪಟ್ಟಿದೆ. ನಕಲಿ ನಂದಿನಿ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವ ಬಗ್ಗೆ ದೂರುಗಳು ಬಂದಿಲ್ಲ. ಆದರೂ ನಕಲಿ ಮಾಡುವುದನ್ನು ತಪ್ಪಿಸಲು ಕ್ಯೂಆರ್‌ ಕೋಡ್‌ಅನ್ನು ಅಳವಡಿಸಲಾಗುತ್ತಿದೆ ಎಂದರು.

ನಂದಿನಿ ಪಾರ್ಲರ್‌ಗಳಲ್ಲಿ ಕೆಎಂಎಫ್‌ ಉತ್ಪನ್ನಗಳನ್ನು ಹೊರತುಪಡಿಸಿ
ಬೇರೆ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಲೈಸೆನ್‌್ಸ ರದ್ದುಪಡಿಸಲಾಗುವುದು. ಈ ಸಂಬಂಧ ಪರಿಶೀಲನಾ ತಂಡಗಳನ್ನೂ ಕೂಡ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಕೆಎಂಎಫ್‌ ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಒಂದು ವಾರದೊಳಗೆ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಸಿಎಂ ಸೂಚನೆ

ಬೆಂಗಳೂರು, ಅ.21- ಬೆಂಗಳೂರಿನ ರಸ್ತೆ ಗುಂಡಿಗಳನ್ನು ಒಂದು ವಾರದೊಳಗಾಗಿ ಮುಚ್ಚಬೇಕು. ಎಲ್ಲಾ ರಸ್ತೆಗಳಿಗೂ ಒಂದು ಪದರದ ಟಾರ್‌ ಹಾಕುವಂತೆ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿ.ವಿ.ಕೆ. ಅಯ್ಯಂಗಾರ್‌ ರಸ್ತೆ, ಆರ್‌.ಟಿ. ಸ್ಟ್ರೀಟ್‌, ಚಿಕ್ಕಪೇಟೆ, ಬಳೆಪೇಟೆ, ಗಾಂಧಿನಗರ ಭಾಗದಲ್ಲಿ ವೈಟ್‌ ಟಾಪಿಂಗ್‌ ಮತ್ತು ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬೆಂಗಳೂರಿನ ಅಭಿವೃದ್ಧಿಗೆ 1.20 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಕೇಂದ್ರದಿಂದ ಒಂದು ರೂ.ಕೂಡ ನೆರವು ಸಿಗುತ್ತಿಲ್ಲ. ನಾಗರಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಇನ್ನೊಂದು ವಾರದಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲೇ ಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬಾರಿ ಮಳೆ ಹೆಚ್ಚಾಗಿ ಬಂದಿದ್ದದರಿಂದಾಗಿ ಗುಂಡಿಗಳನ್ನು ಮುಚ್ಚಲು ಕಷ್ಟವಾಗುತ್ತಿದೆ. ವೈಟ್‌ ಟಾಪಿಂಗ್‌ ಕಾಮಗಾರಿ ಇದಕ್ಕೆ ಪರಿಹಾರವಾಗಿದೆ. ಸದ್ಯಕ್ಕೆ ರಸ್ತೆಗಳಿಗೆ ಒಂದು ಪದರದ ಟಾರ್‌ ಹಾಕುವಂತೆ ಜಿಬಿಎ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ಈ ಬಾರಿ ಎಲ್ಲಾ ಶಾಸಕರಿಗೂ ಹಣ ನೀಡಲು ಬಜೆಟ್‌ನಲ್ಲಿ 8 ಸಾವಿರ ಕೋಟಿ ರೂ.ಗಳನ್ನು ಕಾಯ್ದಿರಿಸಿಕೊಂಡಿದ್ದಾಗಿ ಹೇಳಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶದ ಶಾಸಕರ ಜೊತೆಗೆ ಬಿಜೆಪಿ ಮತ್ತು ಜೆಡಿಎಸ್‌‍ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಹಣ ನೀಡಲಾಗುತ್ತದೆ. ಈ ಮೂಲಕ ಸಮಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ ಎಂದು ಬಿಜೆಪಿಯವರು ಟೀಕೆ ಮಾಡುತ್ತಾರೆ. ಅವರ ಕಾಲದಲ್ಲಿ ಗುಂಡಿಗಳಿರಲಿಲ್ಲವೇ ಎಂದು ಕಿಡಿಕಾರಿದ ಮುಖ್ಯಮಂತ್ರಿ ಅವರು, ಹಿಂದೆ ನಾವು ಮಾಡಿದ ರಸ್ತೆಗಳನ್ನು ಹೊರತು ಪಡಿಸಿದರೆ ಬಿಜೆಪಿಯವರ ಯೋಗ್ಯತೆಗೆ ಆಡಳಿತ ನಡೆಸಿದಾಗ ಒಂದು ಹಿಡಿ ಮಣ್ಣು ಹಾಕಿರಲಿಲ್ಲ. ಜೊತೆಗೆ ಹಣ ಇಲ್ಲದೇ ಇದ್ದರೂ 2.10 ಲಕ್ಷ ರೂ. ವೆಚ್ಚದ ಯೋಜನೆಗಳಿಗೆ ಮಂಜೂರಾತಿ ನೀಡಿದ್ದರು. ಅದೆಲ್ಲಾ ಬಾರವೂ ನಮ ಮೇಲೆ ಬಿದ್ದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಾಲದ ಹೊರೆಯ ಜೊತೆಗೆ ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತಂದಿದ್ದೇವೆ. ಗ್ಯಾರಂಟಿಗಳು ಜಾರಿಯಾಗುವುದಿಲ್ಲ ಎಂದು ಅಹಹಾಸ್ಯ ಮಾಡಿದ್ದ ವಿರೋಧ ಪಕ್ಷಗಳಿಗೆ ತಕ್ಕ ಉತ್ತರ ನೀಡಿದ್ದೇವೆ. ಒಂದು ಲಕ್ಷ ಕೋಟಿ. ರೂ.ಗಳನ್ನು ಗ್ಯಾರಂಟಿಗಳಿಗಾಗಿಯೇ ಬಳಸಿದ್ದೇವೆ ಎಂದು ಹೇಳಿದರು.

ಆರ್‌ಎಸ್‌‍ಎಸ್‌‍ ಹೇಳಿದಂತೆ ಮಾತನಾಡುವ ಬಿಜೆಪಿ ನಾಯಕರು:
ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿ ಎಲ್ಲಾ ನಾಯಕರು ಆರ್‌ಎಸ್‌‍ಎಸ್‌‍ ಹೇಳಿ ಕೊಟ್ಟ ಗಿಳಿ ಪಾಠವನ್ನು ಒಪ್ಪಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ವತಂತ್ರ್ಯವಾಗಿ ಏನನ್ನೂ ಮಾತನಾಡುವುದಿಲ್ಲ, ವಿಧಾನಸಭೆಯಲ್ಲಿ ನಾನು ಒಮೆ ಅಶೋಕ್‌ ಅವರ ಜೊತೆ ಚರ್ಚೆ ಮಾಡಿದ್ದಾಗ, ನಾವು ಆರ್‌ಎಸ್‌‍ಎಸ್‌‍ನವರು ಹೇಳಿಕೊಟ್ಟಂತೆ ಹೇಳದಿದ್ದರೆ ನಮನ್ನು ಉಳಿಸುವುದಿಲ್ಲ. ಇಲ್ಲಿ ಒಬ್ಬ ಆರ್‌ಎಸ್‌‍ಎಸ್‌‍ಗೆ ಸೇರಿದ ವ್ಯಕ್ತಿ ಕುಳಿತಿರುತ್ತಾರೆ. ನಮನ್ನು ಗಮನಿಸುತ್ತಾರೆ ಎಂದು ಅಳಲು ತೋಡಿಕೊಂಡರು ಎಂದು ಮುಖ್ಯಮಂತ್ರಿ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಎಷ್ಟು ಒಳ್ಳೆಯವರಂತೆ ಕಾಣುತ್ತಾರೋ ಅವರಿಗೆ ಕರ್ನಾಟಕದ ಬಗ್ಗೆ ಅಷ್ಟೇ ದ್ವೇಷವಿದೆ. ಆದ್ದರಿಂದ ಹಣಕಾಸು ಆಯೋಗದ ಪ್ರಕಾರ ಕರ್ನಾಟಕಕ್ಕೆ 11495 ಕೋಟಿ. ರೂ.ಗಳು ಬರಬೇಕಿತ್ತು. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ನೀಡುವುದಾಗಿ ಕೆಂದ್ರ ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿದರು. ಅದರಲ್ಲಿ ಒಂದು ರೂ. ಕೊಟ್ಟಿಲ್ಲ. ಮೋದಿ ಮುಖ ನೋಡಿ ಸಂಸತ್‌ ಚುನಾವಣೆಯಲ್ಲಿ ಜನ ಮತ ಹಾಕಿದ್ದರು. ಆಯ್ಕೆಯಾದ ಸಂಸದರು ರಾಜ್ಯದ ಪರವಾಗಿ ಒಂದೂ ದಿನವೂ ಧ್ವನಿ ಎತ್ತಿಲ್ಲ. ಸಂಸದರಾದ ತೇಜಸ್ವಿಸೂರ್ಯ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎಚ್‌.ಡಿ.ಕುಮಾರಸ್ವಾಮಿ ಒಂದು ದಿನವೂ ಕರ್ನಾಟಕದ ಪರವಾಗಿ ಮಾತನಾಡಿಲ್ಲ. ಇದನ್ನು ನೋಡಿದರೇ ನಿಮಗೆ ಸಿಟ್ಟು ಬರುವುದಿಲ್ಲವೇ? ರಾಜ್ಯಕ್ಕೆ ದ್ರೋಹ, ಅನ್ಯಾಯ ಮಾಡುತ್ತಿರುವ ಇವರನ್ನು ಚುನಾವಣೆಯಲ್ಲಿ ಸೋಲಿಸುವ ಕೆಲಸ ಮಾಡಿ. ನಿಮ ಧಮಯ್ಯ ಎಂದು ಮನವಿ ಮಾಡಿದರು.

ಜಿಎಸ್‌‍ಟಿ ವಸೂಲಿಗೆ ಆಕ್ರೋಶ:
8 ವರ್ಷದಿಂದ ಜಿಎಸ್ಟಿ ದುಬಾರಿ ತೆರಿಗೆ ವಸೂಲಿ ಮಾಡಿದ ಕೇಂದ್ರ ಸರ್ಕಾರ ಈಗ ಕಡಿಮೆ ಮಾಡಿ, ದೀಪಾವಳಿ ಕೊಡುಗೆಯೆಂದು ಬಿಂಬಿಸಿಕೊಳ್ಳುತ್ತಿದೆ. ಇಷ್ಟು ವರ್ಷ ಜನರಿಂದ ದುಬಾರಿ ತೆರಿಗೆ ವಸೂಲಿ ಮಾಡಿದ ಬಗ್ಗೆ ಬಿಜೆಪಿ ಸರ್ಕಾರ ಯಾವ ರೀತಿಯ ಉತ್ತರ ನೀಡುತ್ತದೆ ಎಂದು ಪ್ರಶ್ನಿಸಿದರು.

ಈಗ ಬಿಜೆಪಿಯ ಎಲ್ಲಾ ಶಾಸಕರು ನರೇಂದ್ರ ಮೋದಿ ಅವರ ಫೋಟೋ ಹಾಕಿಸಿಕೊಂಡು ದೀಪಾವಳಿ ಗಿಫ್‌್ಟ ಎನ್ನುತ್ತಿದ್ದಾರೆ. ಇದು ಸ್ವೀಕಾರಾರ್ಹವೇ ಎಂದು ಪ್ರಶ್ನಿಸಿದರು.
ಸಭೆಯಲ್ಲಿದ್ದ ನಾಗರಿಕರೊಬ್ಬರು ಮೋದಿ ಸರ್ಕಾರ ಜಿಎಸ್‌‍ಟಿ ಜೊತೆಗೆ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ದರದಲ್ಲೂ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ಇದನ್ನು ಬಿಜೆಪಿಯವರ ಬಳಿ ಕೇಳಿ ಎಂದು ಸಿದ್ದರಾಮಯ್ಯ ಹೇಳಿದರು.

ಅವರಿಗೆ ಜನರ ಕೂಗು ಕೇಳುವುದಿಲ್ಲ, ಕಿವಿ ಕಿವುಡಾಗಿದೆ ಎಂದು ನಾಗರಿಕರು ಪ್ರತಿಕ್ರಿಯಿಸಿದರು. ಹಾಗಿದ್ದ ಮೇಲೆ ಮೋದಿ ಮೋದಿ ಎಂದು ಘೋಷಣೆ ಕೂಗಿ ಚುನಾವಣೆಯಲ್ಲಿ ಮತ ಹಾಕುವುದೇಕೇ? ಎಂದು ಸಿದ್ದರಾಮಯ್ಯ ಹಂಗಿಸಿದರು.

ಗುಣಮಟ್ಟದ ಕಾಮಗಾರಿಗೆ ಸೂಚನೆ:
ಬೆಂಗಳೂರಿನಲ್ಲಿ ಹಳೆಯ ಗುತ್ತಿಗೆದಾರರಿದ್ದಾರೆ. ರಾಜಕಾರಣಿಗಳ ಜೊತೆ ಸೇರಿ ಕಳಪೆ ಕಾಮಗಾರಿಯಾಗುವ ಸಾಧ್ಯತೆಯಿದೆ. ಕಾರ್ಯಕರ್ತರು ಎಚ್ಚರದಿಂದಿರಬೇಕು. ವೈಟ್‌ ಟಾಪಿಂಗ್‌ ಕಾಮಗಾರಿಯ ಗುಣಮಟ್ಟದಲ್ಲಿ ರಾಜಿ ಇರಬಾರದು, ಕನಿಷ್ಠ 30 ವರ್ಷ ಊರ್ಜಿತವಾಗುವ ರಸ್ತೆ ನಿರ್ಮಾಣವಾಗಬೇಕು ಎಂದರು.

ಬೆಂಗಳೂರಿನ ವಿಸ್ತೀರ್ಣ ದೊಡ್ಡದಾಗಿರುವುದರಿಂದ ಇದನ್ನು ವಿಭಜಿಸಲು ಬಿಜೆಪಿಯ ಆಡಳಿತದಲ್ಲೇ ಆಲೋಚನೆ ನಡೆದಿತ್ತು. ನಾವು ಬೆಂಗಳೂರನ್ನು 5 ಪಾಲಿಕೆಗಳನ್ನಾಗಿ ಮಾಡಿದ್ದೇವೆ. ಜಿಬಿಎ ರಚನೆಯಾಗಿದ್ದು, ಆ ಪ್ರಾಧಿಕಾರಕ್ಕೆ ನಾನೇ ಅಧ್ಯಕ್ಷನಾಗಿದ್ದೇನೆ. ಉತ್ತಮ ಆಡಳಿತ ದೃಷ್ಟಿಯಿಂದ ವಿಭಜನೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗಾಂಧಿನಗರ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ದಿನೇಶ್‌ಗುಂಡೂರಾವ್‌, ಯೋಜನಾ ಸಚಿವ ಡಿ.ಸುಧಾಕರ್‌, ಶಾಸಕರಾದ ಅಜಯ್‌ಸಿಂಗ್‌, ವೆಂಕಟೇಶ್‌, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ತುಷಾರ್‌ ಗಿರಿನಾಥ್‌, ಜಿಬಿಎ ಮುಖ್ಯ ಆಯುಕ್ತ ಮಹೇಶ್‌ರಾವ್‌ ಮತ್ತು ಇತರರು ಇದ್ದರು.

ತಿರುಮಲ ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಸಭೆ, ಶೀಘ್ರ ಕಾಮಗಾರಿ ಮುಗಿಸಲು ಸೂಚನೆ

ಬೆಂಗಳೂರು, ಅ.21– ವಿಧಾನ ಪರಿಷತ್‌ ನ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಟಿ.ಎ.ಶರವಣ ಹಾಗೂ ಸಮಿತಿ ಸದಸ್ಯರು ತಿರುಪತಿ ತಿರುಮಲಕ್ಕೆ ಭೇಟಿ ನೀಡಿದರು. ಕರ್ನಾಟಕ ಸರ್ಕಾರದಿಂದ ತಿರುಮಲ ಬೆಟ್ಟದ ಮೇಲೆ 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸಭಾಭವನ ಕಾಮಗಾರಿಯ ಪ್ರಗತಿಯನ್ನು ಸಮಿತಿ ಪರಿಶೀಲನೆ ನಡೆಸಿತು.

ನಂತರ ಕರ್ನಾಟಕ ಭವನದಲ್ಲಿ ಅಧಿಕಾರಿಗಳ ಸಭೆ ನಡೆಸಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಎ.ಶರವಣ ಅವರು, ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯದಿರುವ ಬಗ್ಗೆ ಹಾಗೂ ಹಿರಿಯ ಅಧಿಕಾರಿಗಳು ಪೂರ್ವಾನುಮತಿ ಇಲ್ಲದೇ ಸಭೆಗೆ ಗೈರಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಸ್ವಚ್ಛತಾ ಕೆಲಸ ಮಾಡುವಂತಹ ಸಿಬ್ಬಂದಿಗಳೊಂದಿಗೆ ಮಾತನಾಡಿ ಸಮವಸ್ತ್ರ ಧರಿಸಿ ಕಡ್ಡಾಯವಾಗಿ ಹಾಜರಾತಿಯನ್ನು ದಾಖಲಿಸಬೇಕೆಂದು ಸೂಚಿಸಿದರು, ಕಾನೂನು ರೀತಿಯ ಸಮಸ್ಯೆಗಳನ್ನು ಆಂಧ್ರ ಪ್ರದೇಶ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಕೂಡಲೇ ಇತ್ಯರ್ಥ ಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕರ್ನಾಟಕ ಭವನದಲ್ಲಿ ಈಗಾಗಲೇ ಸಿದ್ಧಗೊಂಡಿರುವ ಕಲ್ಯಾಣ ಮಂಟಪ ಕಾಯ್ದಿರಿಸುವ ಹಾಗೂ ಕರ್ನಾಟಕ ಭವನದಲ್ಲಿ ಸಿಗುವ ಸೌಲಭ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಜಾಲತಾಣದಲ್ಲಿ ಸಾರ್ವಜನಿಕರಿಗೆ ಸಿಗುವಂತೆ ಒದಗಿಸಲು ಹಾಗೂ ಕರ್ನಾಟಕದಿಂದ ಬರುವ ಭಕ್ತಾದಿಗಳಿಗೆ ಅನ್ನ ಪ್ರಸಾದ ಕೊಡಲು ಸೂಚಿಸಿರುವುದಾಗಿ ತಿಳಿಸಿದರು.

ತಿರುಪತಿಯನ್ನು ಭೂ ಲೋಕದ ವೈಕುಂಠ ಎಂದು ಕರೆಯಲಾಗುತ್ತದೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಹೀಗಾಗಿ ಕರ್ನಾಟಕ ಸರ್ಕಾರ ವಸತಿ ವ್ಯವಸ್ಥೆ, ಕಲ್ಯಾಣ ಮಂಟಪ ಹಾಗೂ ಇತರ ಹಲವು ಸೌಲಭ್ಯ ಕಲ್ಪಿಸುವ ಕಾಮಗಾರಿ ಕೈಗೊಂಡಿದ್ದು, ಎಲ್ಲವನ್ನೂ ಶೀಘ್ರ ಪೂರ್ಣಗೊಳಿಸಿ, ಯಾತ್ರಿಕರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೆ ನೀಡಿದರು. ಸರ್ಕಾರಿ ಭರವಸೆ ಸಮಿತಿಯ ಸದಸ್ಯರೆಲ್ಲರೂ ತಿರುಪತಿ ಶ್ರೀ ಶ್ರೀನಿವಾಸನ ದರ್ನಶವನ್ನು ಪಡೆದು ರಾಜ್ಯದ ಜನರು ಸುಖ, ನೆಮದಿ ,ಶಾಂತಿಯಿಂದ ಬದುಕಲೆಂದು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು.

ಬೆಂಗಳೂರು : ಸಹ ಜೀವನ ನಡೆಸುತ್ತಿದ್ದ ಜೋಡಿ ಆತ್ಮಹತ್ಯೆಗೆ ಶರಣು

ಬೆಂಗಳೂರು, ಆ.21- ಖಾಸಗಿ ಕಂಪನಿಯೊಂದರಲ್ಲಿ ಹೌಸ್‌‍ ಕೀಪಿಂಗ್‌ ಕೆಲಸ ಮಾಡುತ್ತ ಸಹಜೀವನ ನಡೆಸುತ್ತಿದ್ದ ಯುವಕ ಮತ್ತು ಯುವತಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಜಿಗಣಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಒಡಿಶಾ ಮೂಲದ ರಾಕೇಶ್‌ ಪಾತ್ರ (23), ಸೀಮಾ ನಾಯಕ್‌ (21) ಎಂದು ಗುರುತಿಸಲಾಗಿದೆ.

ಕಂಪೆನಿಯಲ್ಲಿ ಸಹೋದ್ಯೋಗಿಗಳಾಗಿದ್ದ ಇವರು ಕಳೆದ ಹತ್ತು ದಿನಗಳ ಹಿಂದೆ ಕಲ್ಲುಬಾಳು ಪ್ರದೇಶದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು.ಇವರ ಮನೆ ಸಮೀಪವೇ ಅವರ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಚಾಲಕರೊಬ್ಬರು ನೆಲೆಸಿದ್ದಾರೆ. ತಮ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವವರು ಇಲ್ಲಿಗೆ ಬಂದು ವಾಸವಾಗಿದ್ದಾರೆ ಎಂಬುದನ್ನು ತಿಳಿದಿದ್ದರು.

ಪ್ರತಿದಿನ ರಾಕೇಶ್‌ ಮತ್ತು ಸೀಮಾ ಜಗಳವಾಡುತ್ತಿದ್ದರು. ಆದರೆ, ನಿನ್ನೆ ಮನೆಯಿಂದ ಯಾವುದೇ ಸದ್ದು ಬರದಿದ್ದಾಗ ಅನುಮಾನಗೊಂಡು ಇಂದು ಮುಂಜಾನೆ ರಾಕೇಶ್‌ಗೆ ಕರೆ ಮಾಡಲಾಗಿದೆ. ಕರೆ ಸ್ವೀಕರಿಸದಿದ್ದಾಗ ಮನೆಯ ಕಿಟಕಿ ತೆಗೆದು ನೋಡಿದಾಗ ಇಬ್ಬರೂ ನೇಣು ಹಾಕಿಕೊಂಡಿರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶೀಟ್‌ ಮನೆಯ ಛಾವಣಿಯಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಕಂಬಿಗೆ ಮೊದಲು ರಾಕೇಶ್‌ ದುಪ್ಪಟದಿಂದ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ನೋಡಿದ ಸೀಮಾ ಆತಂಕಗೊಂಡು ನೇಣು ಹಾಕಿಕೊಂಡಿದ್ದ ವೇಲ್‌ ಅನ್ನು ಕತ್ತರಿಸಿ ಕೆಳಗಿಳಿಸಿ ನೋಡಿದಾಗ ರಾಕೇಶ್‌ ಸಾವನ್ನಪ್ಪಿರುವುದು ಗೊತ್ತಾಗಿದೆ.

ಇದರಿಂದ ಗಾಬರಿಗೊಂಡ ಆಕೆ ಅದೇ ವೇಲ್‌ನಿಂದ ನೇಣು ಹಾಕಿಕೊಂಡಿದ್ದಾಳೆ ಎಂಬುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಇಬ್ಬರ ಆತಹತ್ಯೆಗೆ ನಿಖರ ಕಾರಣ ಸಧ್ಯಕ್ಕೆ ತಿಳಿದು ಬಂದಿಲ್ಲ. ಕಳೆದ ಆರು ತಿಂಗಳಿನಿಂದ ಇವರು ಸಹಜೀವನ ನಡೆಸುತ್ತಿದ್ದರು ಎಂದು ಗೊತ್ತಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಇವರ ಸಂಬಂಧಿಕರಿಗೆ ಮಾಹಿತಿ ರವಾನಿಸಲಾಗಿದ್ದು, ಶವವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಜಿಗಣಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.