Home Blog Page 34

ಎ-ಖಾತಾ ಸದುಪಯೋಗಕ್ಕೆ ಡಿಸಿಎಂ ಡಿಕೆಶಿ ಕರೆ

ಬೆಂಗಳೂರು, ಅ.19- ನಿಮ ಆಸ್ತಿ ದಾಖಲೆ ಸರಿ ಮಾಡಿಸಿಕೊಳ್ಳಲು ಸರ್ಕಾರ ಉತ್ತಮ ಅವಕಾಶ ಕಲ್ಪಿಸಿದ್ದು, ಎಲ್ಲರೂ ಇ ಖಾತಾ ಮಾಡಿಸಿಕೊಳ್ಳಿ. ಸರ್ಕಾರ ಬಿ ಖಾತೆಯಿಂದ ಎ ಖಾತಾಗೆ ಪರಿವರ್ತನೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿನ ಕೋರಮಂಗಲದ ವೀರ ಯೋಧ ಉದ್ಯಾನವನದಲ್ಲಿ ಭಾನುವಾರ ಹಮಿಕೊಂಡಿದ್ದ ಬೆಂಗಳೂರು ನಡಿಗೆ ಅಭಿಯಾನದ ಅಂಗವಾಗಿ ನಾಗರಿಕರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ಸಿಎ ನಿವೇಶನದ ಬಗ್ಗೆ ಸಾರ್ವಜನಿಕರು ಪ್ರಸ್ತಾಪ ಮಾಡಿದ್ದು, ಸರ್ಕಾರ ಈ ವಿಚಾರದಲ್ಲಿ ಪ್ರತ್ಯೇಕ ನೀತಿ ರೂಪಿಸುತ್ತಿದೆ. ಈ ಹಿಂದೆ ಬಿಡಿಎ ನಿಭಾಯಿಸುತ್ತಿದ್ದ ಯೋಜನಾ ಪ್ರಾಧಿಕಾರದ ಜವಾಬ್ದಾರಿಯನ್ನು ಜಿಬಿಎಗೆ ವರ್ಗಾವಣೆ ಮಾಡಿದ್ದೇನೆ. ಬೆಂಗಳೂರಿನಲ್ಲಿ ದೊಡ್ಡ ಯೋಜನೆಗಳನ್ನು ಜಿಬಿಎ ನಿಭಾಯಿಸಲಿದ್ದು, ಉಳಿದ ಸಣ್ಣ ಯೋಜನೆಗಳನ್ನು ಪಾಲಿಕೆಗಳು ಮಾಡಲಿವೆ ಎಂದರು.

ಜನರ ಕಲ್ಯಾಣಕ್ಕೆ ಪ್ರತಿ ವರ್ಷ 1 ಲಕ್ಷ ಕೋಟಿ ವೆಚ್ಚ: ಜನರ ಹೊಟ್ಟೆ ತುಂಬಿಸಬೇಕು. ಬೆಲೆ ಏರಿಕೆ ಸಮಸ್ಯೆಯಿಂದ ಜನರನ್ನು ರಕ್ಷಿಸಬೇಕು ಎಂದು ಐದು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ಪ್ರತಿ ವರ್ಷ ಇದಕ್ಕೆ 52 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಇದರ ಜೊತೆಗೆ ರೈತರಿಗೆ ಉಚಿತ ವಿದ್ಯುತ್‌ ನೀಡಲು ನಾವು ಪ್ರತಿ ವರ್ಷ 20 ಸಾವಿರ ಕೋಟಿ ನೀಡುತ್ತಿದ್ದೇವೆ. ಹೀಗೆ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ 1 ಲಕ್ಷ ಕೋಟಿಯಷ್ಟು ಮೀಸಲಿಡುತ್ತಿದ್ದೇವೆ ಎಂದರು.

ರಾಜ್ಯ ಸರ್ಕಾರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ನೀವೆಲ್ಲರೂ ಅದರಲ್ಲಿ ಭಾಗವಹಿಸಬೇಕು. ಇದನ್ನು ಎಲ್ಲ ಸಮಾಜದ ಭವಿಷ್ಯಕ್ಕಾಗಿ ಮಾಡುತ್ತಿದ್ದೇವೆ. ನೀವು ಅಗತ್ಯವಾದ ಮಾಹಿತಿ ನೀಡಿ, ಅನಗತ್ಯ ಎನಿಸಿದ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿ ಅವರ ಬಗ್ಗೆ ನೀವು ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದೀರಿ. ಬೆಂಗಳೂರು ದಕ್ಷಿಣ ಉಸ್ತುವಾರಿ ಸಚಿವರಾಗಿರುವ ಅವರು ಹೆಚ್ಚು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಹಿರಿಯ ನಾಯಕರನ್ನು ಹೊಂದಿರುವುದು ನಿಮ ಭಾಗ್ಯ. ನೀವು 8 ಬಾರಿ ಅವರನ್ನು ಆಯ್ಕೆ ಮಾಡಿದ್ದು, ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ನಮಗೆ ಮಾರ್ಗದರ್ಶನ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಪ್ರಶ್ನೋತ್ತರ:
ಬೆಂಗಳೂರು ನಡಿಗೆ ಕಾರ್ಯಕ್ರಮದ ಬಗ್ಗೆ ಕೇಳಿದಾಗ, ಜನರ ಅಭಿಪ್ರಾಯ, ಸಲಹೆ, ಅಹವಾಲು ಕೇಳಬೇಕು, ಉತ್ತಮ ಆಡಳಿತ ನೀಡಬೇಕು ಎಂದು ನಾನೇ ಜನರ ಬಳಿಗೆ ತಲುಪುತ್ತಿದ್ದೇನೆ. ಜನರಿಂದಲೂ ಉತ್ತಮ ಸಹಕಾರ ನೀಡುತ್ತಿದ್ದು, ನನಗೂ ಇದು ಹೊಸ ಅನುಭವ ನೀಡಿದೆ. ಜನರ ಅಹವಾಲನ್ನು ಅಧಿಕಾರಿಗಳು ಬಗೆಹರಿಸಲಿದ್ದಾರೆ ಎಂದರು.ಈಜಿಪುರ ಮೇಲ್ಸೇತುವೆ ಯಾವಾಗ ಮುಗಿಯಲಿದೆ ಎಂದು ಕೇಳಿದಾಗ, ಅದು ಆದಷ್ಟು ಬೇಗ ಮುಕ್ತಾಯವಾಗುತ್ತದೆ ಎಂದರು.

ಐಟಿ ಬಿಟಿ ಕಂಪನಿಗಳ ಸಿಇಓಗಳ ಸಭೆ ಯಾವಾಗ ಮಾಡುತ್ತೀರಿ ಎಂದು ಕೇಳಿದಾಗ, ನಾನು ಅವರೊಂದಿಗೆ ಪ್ರತ್ಯೇಕ ಸಭೆ ಮಾಡುವೆ. ಸಚಿವರಾದ ಪ್ರಿಯಾಕ್‌ ಖರ್ಗೆ, ಎಂ.ಬಿ ಪಾಟೀಲ್‌ ಅವರ ಜೊತೆಗೂಡಿ ಚರ್ಚೆ ಮಾಡುತ್ತೇವೆ ಎಂದರು.

ಖಾತಾ ಪರಿವರ್ತನೆಗೆ ಶೇ.5 ಹಣ ಪಾವತಿ ಬಗ್ಗೆ ಕೇಳಿದಾಗ, ಜನರು ತಮ ಆಸ್ತಿ ದಾಖಲೆ ಸರಿ ಮಾಡಿಕೊಳ್ಳಲು ಇದು ದೊಡ್ಡ ಮೊತ್ತವಲ್ಲ. ಖಾತಾ ಪರಿವರ್ತನೆಯಿಂದ ಅವರ ಆಸ್ತಿ ಮೌಲ್ಯ ದುಪ್ಪಟ್ಟಾಗಲಿದೆ. ಅನೇಕರು ಕಂದಾಯ ನಿವೇಶನ ಖರೀದಿ ಮಾಡಿದ್ದು, ನಾವು ಎಲ್ಲರಿಗೂ ಸಮನಾದ ಸೇವೆ ನೀಡಬೇಕು. ಹೀಗಾಗಿ ಅವರ ಸಹಕಾರ ಬೇಕಾಗಿದೆ.

ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಯಾರೂ ಲಂಚ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.ಆರ್‌ಎಸ್‌‍ಎಸ್‌‍ ನಿರ್ಬಂಧ ವಿಚಾರವಾಗಿ ಕೇಳಿದಾಗ, ಆರ್‌ಎಸ್‌‍ಎಸ್‌‍ ವಿಚಾರದಲ್ಲಿ ನಾವು ಹೊಸ ನಿಯಮ ರೂಪಿಸಿಲ್ಲ. ಬಿಜೆಪಿ ಸರ್ಕಾರದ ಆದೇಶವನ್ನೇ ಹೊರಡಿಸಿದ್ದೇವೆ. 2013ರಲ್ಲಿ ಜಗದೀಶ್‌ ಶೆಟ್ಟರ್‌ ಅವರ ಸರ್ಕಾರದ ಆದೇಶವನ್ನು ಮತ್ತೆ ಜಾರಿಗೊಳಿಸುತ್ತಿದ್ದೇವೆ ಎಂದರು.

ಇಂಡಿಗೋ ವಿಮಾನದಲ್ಲಿ ಆತಂಕ ಸೃಷ್ಟಿಸಿದ ಬಾಂಬ್‌ ಬರಹ

ಬೆಂಗಳೂರು, ಅ. 19 ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದ ವಾಶ್‌ ರೂಮ್‌ನಲ್ಲಿ ಅನಾಮಿಕ ಪ್ರಯಾಣಿಕನೊಬ್ಬ ಬಾಂಬ್‌ ಎಂದು ಬರೆದಿದ್ದ ಘಟನೆ ಇತರ ಪ್ರಯಾಣಿಕರ ಆತಂಕಕ್ಕೆ ಎಡೆಮಾಡಿತ್ತು.

ಮಧ್ಯರಾತ್ರಿ ನಡೆದ ಘಟನೆಯಲ್ಲಿ, ಒಬ್ಬ ಪ್ರಯಾಣಿಕನು ವಿಮಾನದ ಬಾತ್‌ ರೂಮ್‌ನಲ್ಲಿ ಬಾಂಬ್‌‍ ಎಂದು ಪೆನ್‌ನಿಂದ ಬರೆದಿದ್ದಾನೆ. ಈ ಬರಹವನ್ನು ನೋಡಿದ ಇತರ ವಿಮಾನ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಪರಿಶೀಲನೆ ಬಳಿಕ ಆತಂಕ ಪಡುವ ಸಂಗತಿಯಿಲ್ಲವೆಂದು ತಿಳಿದ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟರು.

ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಮಂಗಳೂರಿನ ಬದಲಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು. ಮಧ್ಯರಾತ್ರಿ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್‌ ಆಗಿದ್ದು, ಏರ್‌ಪೋರ್ಟ್‌ ಸುರಕ್ಷತಾ ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡರು.

168 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಬಳಿಕ ಸಂಪೂರ್ಣ ವಿಮಾನ ಮತ್ತು ಪ್ರಯಾಣಿಕರ ಪರಿಶೀಲನೆ ನಡೆಸಲಾಗಿದ್ದು, ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.ಅಪಾವಿಲ್ಲವೆಂದು ತಿಳಿದ ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

ಹುಚ್ಚಾಟದಿಂದ ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿ, ಬೆಂಗಳೂರಿನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿಸಿದ ವ್ಯಕ್ತಿ ಯಾರೆಂದು ಸಧ್ಯಕ್ಕೆ ತಿಳಿದು ಬಂದಿಲ್ಲ. ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹಾಸನಾಂಬ ದರ್ಶನ : ಶಿಷ್ಟಾಚಾರ ಪಾಲಿಸದೆ ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಆರೋಪ : ಜೆಡಿಎಸ್‌‍ನಿಂದ ಪ್ರತಿಭಟನೆ

ಹಾಸನ, ಅ.19– ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಹಾಸನಾಂಬ ದರ್ಶನಕ್ಕಾಗಿ ಭೇಟಿ ನೀಡಿದ ವೇಳೆಯಲ್ಲಿ ಜಿಲ್ಲಾಡಳಿತ ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಜೆಡಿಎಸ್‌‍ ಶಾಸಕ ಹೆಚ್‌.ಪಿ.ಸ್ವರೂಪ್‌ ಪ್ರಕಾಶ್‌ ನೇತೃತ್ವದಲ್ಲಿ ಹಾಸನಾಂಬ ಮುಖ್ಯ ದ್ವಾರದ ಬಳಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ವಿರುದ್ಧ ಶಾಸಕ ಸ್ವರೂಪ್‌ ಪ್ರಕಾಶ್‌ ನೇತೃತ್ವದಲ್ಲಿ ಮಾಜಿ ಸಚಿವ ಎಚ್‌.ಕೆ.ಕುಮಾರಸ್ವಾಮಿ, ಮಾಜಿ ಶಾಸಕ ಲಿಂಗೇಶ್‌, ಮುಖಂಡರಾದ ಮಂಜೇಗೌಡ ಹಾಗೂ ಜೆಡಿಎಸ್‌‍ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಿನ್ನೆ ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ಜೊತೆ ಸ್ಥಳೀಯ ಶಾಸಕ ಸ್ವರೂಪ್‌ ಪ್ರಕಾಶ್‌ ಸೇರಿ ಹತ್ತಕ್ಕೂ ಹೆಚ್ಚು ಶಾಸಕರು ಆಗಮಿಸಿದ್ದರು. ಆಗ ಕುಮಾರಸ್ವಾಮಿ ಅವರನ್ನು ಜಿಲ್ಲಾಧಿಕಾರಿಯವರು ಸ್ವಾಗತಿಲಿಲ್ಲ ಎಂಬ ಆರೋಪ ಮಾಡಿದ್ದಾರೆ.

ಹಾಸನಾಂಬ ದೇವಿ ದರ್ಶನ ಮಾಡಿ ಹೊರ ಬಂದಾಗ ಜಿಲ್ಲಾಡಳಿತ ಗೌರವಾರ್ಪಣೆ ಮಾಡಲಿಲ್ಲ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಬಂದಾಗ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಆಡಳಿತಾಧಿಕಾರಿಗಳು ಬಂದಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಸ್ವರೂಪ್‌ ಪ್ರಕಾಶ್‌, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಬಂದಾಗ ಜಿಲ್ಲಾಡಳಿತ ಗೌರವಿಸಿದೆ. ಆದರೆ, ಎಚ್‌.ಡಿ.ಕುಮಾರಸ್ವಾಮಿ ಅವರು ಬಂದಾಗ ಅಗೌರವ ಏಕೆ? ಎಂದು ಪ್ರಶ್ನಿಸಿದರು.

ದೇವಾಲಯದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕಾರಣ. ಕುಮಾರಸ್ವಾಮಿ ಅವರ ಕೊಡುಗೆಯೂ ಇದೆ. ಬಿಜೆಪಿ-ಜೆಡಿಎಸ್‌‍ ಮೈತ್ರಿ ಸರ್ಕಾರದ ಅವಧಿಯಲ್ಲಿ ಎರಡು ಕೋಟಿ ರೂ. ಅನುದಾನ ಕೊಡಲಾಗಿತ್ತು. ಗೋಪುರ ನಿರ್ಮಿಸಲಾಗಿದೆ. ಜಿಲ್ಲೆಯ ರೈತರ ಮಗನಾದ ಕುಮಾರಸ್ವಾಮಿ ಅವರು ದೇವಾಲಯಕ್ಕೆ ಬಂದಾಗ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳು ಶಿಷ್ಟಾಚಾರದಂತೆ ಗೌರವ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಧರ್ಮ ದರ್ಶನ ಉತ್ತಮವಾಗಿ ನಡೆಯುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆ ಇದೆ. ವಿಜ್ಞಾನ ಕಾಲೇಜಿನ ಕ್ರೀಡಾಂಗಣ ಹಾಳಾಗಿದೆ. ನನ್ನ ಗಮನಕ್ಕೂ ಬಾರದ ರೀತಿಯಲ್ಲಿ ಅಲ್ಲಿ ಆಹಾರ ಮೇಳ ಮಾಡಿ ಹಾಳು ಮಾಡಿದ್ದಾರೆ. ಅದರ ಉದ್ಘಾಟನೆಗೆ ಶಾಸಕನಾದ ನನಗೆ ಆಹ್ವಾನ ನೀಡಿಲ್ಲ. ಈ ರೀತಿಯ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಪ್ರತಿಭಟನೆ ಮಾಡಿದ್ದೇವೆ ಎಂದು ಅವರು ಹೇಳಿದರು.

ದ್ವೇಷದಿಂದ ಮಗಳ ಅಶ್ಲೀಲ ವಿಡಿಯೋ ವೈರಲ್‌ ಮಾಡಿದವರ ವಿರುದ್ಧ ಕ್ರಮಕ್ಕೆ ತಂದೆ ದೂರು

ಮೈಸೂರು, ಅ.19- ಕೆಆರ್‌ನಗರ ತಾಲ್ಲೂಕಿನ ಕಾಂಗ್ರೆಸ್‌‍ ಮುಖಂಡರೊಬ್ಬರ ಅಶ್ಲೀಲ ವಿಡಿಯೋ ವೈರಲ್‌ ಆಗಿದ್ದು, ಸಂತ್ರಸ್ತ ಮಹಿಳೆಯ ತಂದೆ ದೂರು ನೀಡಿ, ಜಮೀನಿನ ವಿವಾದದ ಹಿನ್ನೆಲೆಯಲ್ಲಿ ದ್ವೇಷಕ್ಕಾಗಿ ನಮ ಕುಟುಂಬದ ಘನತೆಗೆ ಧಕ್ಕೆ ತರುವಂತಹ ಹುನ್ನಾರ ನಡೆದಿದೆ ಎಂದು ತಿಳಿಸಿದ್ದಾರೆೆ.

ಸೋಮೇಗೌಡ ಎಂಬುವವರು ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದು ತಾವು ವ್ಯವಸಾಯ ಮಾಡಿಕೊಂಡಿದ್ದೇವೆ. ತಮಗೆ ಇಬ್ಬರು ಮಕ್ಕಳಿದ್ದಾರೆ. ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಗ್ರಾಮವೊಂದರ ವ್ಯಕ್ತಿಗೆ ಮೂರು ತಿಂಗಳ ಹಿಂದೆ ಮಗಳ ಮದುವೆ ಮಾಡಿಕೊಡಲಾಗಿದೆ. ಮಗಳು ಅಳಿಯ ಅನೋನ್ಯವಾಗಿದ್ದರು ಎಂದು ತಿಳಿಸಿದ್ದಾರೆ.

ದೀಪಾವಳಿ ಹಿನ್ನೆಲೆಯಲ್ಲಿ ಮಗಳು ಮನೆಗೆ ಬಂದಿದ್ದಾರೆ. ಅ.16 ರಂದು ಬೆಳಗ್ಗೆ ಸಂಬಂಧಿಯೊಬ್ಬರು ಜಮೀನಿನ ಬಳಿ ಭೇಟಿಯಾದಾಗ ನಿಮ ಮಗಳು ಮತ್ತು ಲೋಹಿತ್‌ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋ, ಮಲ್ಲಿಕಾರ್ಜುನ ಎಂಬುವರ ವಾಟ್ಸಾಪ್‌ಗೆ ಬಂದಿದ್ದು, ಆತ ಅದನ್ನು ನನ್ನ ವಾಟ್ಸಾಪ್‌ ನಂಬರಿಗೆ ಕಳುಹಿಸಿದ್ದಾನೆ.

ಬಳಿಕ ಡಿಲಿಟ್‌ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌‍ ಮುಖಂಡರಾಗಿರುವ ಲೋಹಿತ್‌ ಮತ್ತು ನಮಗೂ ಜಮೀನಿನ ದಾರಿ ವಿಚಾರವಾಗಿ ಪದೇ ಪದೇ ಗಲಾಟೆಯಾಗಿದೆ. ನಿಮ ಕುಟುಂಬಕ್ಕೆ ಒಂದು ಗತಿ ಕಾಣಿಸುತೇನೆ ಎಂದು ಆತ ಹೇಳುತ್ತಿದ್ದ.

ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದ. ಈ ದ್ವೇಷದಿಂದ ನನ್ನ ಮಗಳ ಮತ್ತು ನನ್ನ ಕುಟುಂಬವನ್ನು ಬೀದಿ ಪಾಲು ಮಾಡಲು ಸಂಚು ನಡೆಸಿದ್ದಾನೆ. ಅಶ್ಲೀಲ ವಿಡಿಯೋವನ್ನು ಹರಿ ಬಿಟ್ಟು ಸಂಸಾರಕ್ಕೆ ತೊಂದರೆ ಮಾಡಿರುವ ಲೋಹಿತ್‌ ಅಲಿಯಾಸ್‌‍ ರಾಜೀ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ತಮ ಮಗಳಿಗೆ ನ್ಯಾಯ ಕೊಡಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ನ್ಯಾಮತಿಯ ಎಸ್‌‍ಬಿಐ ಬ್ಯಾಂಕ್‌ ಕಳವು ಪ್ರಕರಣ ಸುಖಾಂತ್ಯ, ಗ್ರಾಹಕರು ನಿರಾಳ

ದಾವಣಗೆರೆ,ಅ.19- ನ್ಯಾಮತಿಯ ಎಸ್‌‍ಬಿಐ ಬ್ಯಾಂಕ್‌ನಲ್ಲಿ ನಡೆದಿದ್ದ 17 ಕೆಜಿ ಚಿನ್ನ ಕಳ್ಳತನ ಪ್ರಕರಣ ಸುಖಾಂತ್ಯ ಕಂಡಿದ್ದು,ಅಧಿಕಾರಿಗಳು , ಗ್ರಾಹಕರು ನಿರಾಳರಾಗಿದ್ದಾರೆ. ದರೋಡೆಯಾಗಿದ್ದ ಗ್ರಾಹಕರ ಅಡವಿಟ್ಟಿದ್ದ ಬಂಗಾರವನ್ನುಸಂಪೂರ್ಣ ವಶಪಡಿಸಿಕೊಂಡು ಪೊಲೀಸರು ಬ್ಯಾಂಕ್‌ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಕಳೆದ ಅಕ್ಟೋಬರ್‌ 2024ರ 28ರಂದು ದಿಪಾವಳಿ ಸಂದರ್ಭದಲ್ಲಿ ನಡೆದಿದ್ದ ಭಾರಿ ಬ್ಯಾಂಕ್‌ ದರೋಡೆ ಇಡೀ ರಾಜ್ಯವನ್ನೇ ಬೆಚ್ಚಿ ಬಿಳಿಸಿತ್ತು. ಸಂಚು ಮಾಡಿ ಎಸ್‌‍ಬಿಐ ಬ್ಯಾಂಕಿನಿಂದ 12.95 ಕೋಟಿ ರೂ. ಮೌಲ್ಯದ 509 ಜನ ಗ್ರಾಹಕರ, 17 ಕೆಜಿಗೂ ಅಧಿಕ ಚಿನ್ನಾಭರಣ ದರೋಡೆ ಮಾಡಲಾಗಿತ್ತು ಖತರ್ನಾಕ್‌ ಕಳ್ಳರು ಬ್ಯಾಂಕ್‌‍ನಲ್ಲಿ ಪ್ರಮುಖ ಸಾಕ್ಷಿಯಾಗಬಲ್ಲ ಸಿಸಿ ಟಿವಿ ಕ್ಯಾಮೆರಾ ಡಿವಿಆರ್‌ ತೆಗೆದುಕೊಂಡು, ಸುಳಿವು ಸಿಗದಂತೆ ಇಡಿ ಬ್ಯಾಂಕ್‌ ತುಂಬೆಲ್ಲಾ ಕಾರದ ಪುಡಿ ಎಸೆದಿದ್ದರು.ಪಕ್ಕಾ ಸಿನಿಮಾ ಶೈಲಿಯಲ್ಲಿ ಭಾರಿ ಮ್ರಮಾಣದದ ಚಿನ್ನ ಕಳುವಾಗಿತ್ತು ಇದರಿಂದ ಗ್ರಾಹಕರು ಅಕ್ಷರಶಃ ಕಂಗಾಲಾಗಿದ್ದರು.

ದಾವಣಗೆರೆ ಪೊಲೀಸರು ಚಲಬಿಡದೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಸಂಪೂರ್ಣ ಬಂಗಾರ ವಶಪಡಿಸಿಕೊಂಡಿದ್ದರು. ಕಾನೂನು ಪ್ರಕ್ರಿಯೆ ಮುಗಿದ ಹಿನ್ನಲೆ ಪೊಲೀಸರು ಗ್ರಾಹಕರ ಸಮುಖದಲ್ಲಿ ಎಲ್ಲ ಬಂಗಾರವನ್ನು ಬ್ಯಾಂಕ್‌‍ಗೆ ಹಸ್ತಾಂತರ ಮಾಡಿದ್ದಾರೆ.

ಪೊಲೀಸರು ಹಸ್ತಾಂತರ ಮಾಡುತ್ತಿದ್ದಂತೆ ಸೇರಿದ್ದ ಎಸ್‌‍ಬಿಐ ಗ್ರಾಹಕರು, ಕಳ್ಳತನ ನಡೆದ ದಿನ ತಮ ಕುಟುಂಬದ ಪರಿಸ್ಥಿತಿ ನೆನೆದು ಭಾವುಕರಾಗಿದ್ದಾರೆ. ಈಗ ಬ್ಯಾಂಕ್‌ ಅಧೕಕಾರಿಗಳು ಸಾಲದ ಹಣ ನೀಡಿ ಅಡವಿಟ್ಟ ಚಿನ್ನವನ್ನು ವಾಪಸ್‌‍ ನೀಡಲು ಮುಂದಾಗಿದೆ.

ಗುತ್ತಿಗೆದಾರರನ್ನು ಬೆದರಿಸುವ ಆಟ ನಡೆಯುವುದಿಲ್ಲ : ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು,ಅ.19-ಗುತ್ತಿಗೆ ದಾರರ ಮೇಲೆ ಸರ್ಕಾರದ ಬೆದರಿಕೆ ನಡೆಯುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ಗುತ್ತಿಗೆದಾರರು ಬೇಕಾದರೆ ಹೈಕಮಾಂಡ್‌ ಮುಂದೆ ಹೋಗಲಿ. ಅದಕ್ಕೆ ನಾನೇ ಸಮಯ ಅವಕಾಶ ಕೊಡಿಸುತ್ತೇನೆ ಎಂದು ಡಿ.ಕೆ.ಶಿವ ಕುಮಾರ್‌ ಹೇಳಿದ್ದರು.

ಇದಕ್ಕೆ ತಮ ಎಕ್‌್ಸ ಖಾತೆಯಲ್ಲಿ ತಿರುಗೇಟು ನೀಡಿರುವ ಅಶೋಕ್‌,ಬಾಕಿ ಬಿಲ್‌ ಕೊಡಿ ಎಂದು ಕೇಳಿದರೆ ಅದು ಧಮ್ಕಿ ಹೇಗೆ ಆಗುತ್ತದೆ ಡಿಸಿಎಂ ಶಿವಕುಮಾರ್‌ ಅವರೇ? ಬಾಕಿ ಬಿಲ್‌ ಕೊಡದಿದ್ದರೆ ತಮ ಹಕ್ಕಿಗಾಗಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಹೇಳುವುದು ಧಮ್ಕಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಬಹುಶಃ ಕಾಂಗ್ರೆಸ್‌‍ನವರು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಸಂವಿಧಾನ ಪುಸ್ತಕದಲ್ಲಿ ನಾಗರೀಕರಿಗೆ ಮುಷ್ಕರ, ಹೋರಾಟ ಮಾಡುವ ಹಕ್ಕಿಲ್ಲ ಅನ್ನಿಸುತ್ತದೆ. ಆದರೆ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನದಲ್ಲಿ ನಾಗರಿಕರು, ಗುತ್ತಿಗೆದಾರರು ತಮ ಹಕ್ಕಿಗಾಗಿ ಸರ್ಕಾರವನ್ನು ಪ್ರಶ್ನಿಸಲೂಬಹುದು, ಮುಷ್ಕರ ಮಾಡಬಹುದು, ಹೋರಾಟವನ್ನೂ ಮಾಡಬಹುದು ಎಂದು ಹೇಳಿದ್ದಾರೆ.

ಇಷ್ಟಕ್ಕೂ ಗುತ್ತಿಗೆದಾರರ ಬಿಲ್‌ ಯಾಕೆ ಕ್ಲಿಯರ್‌ ಮಾಡುತ್ತಿಲ್ಲ? ಒಂದಾ ಪಾಪರ್‌ ಸರ್ಕಾರದ ಬಳಿ ದುಡ್ಡಿಲ್ಲದೆ ಸಂಪೂರ್ಣವಾಗಿ ದಿವಾಳಿ ಆಗಿರಬೇಕು. ಇಲ್ಲಾ ನಿಮ ಕಮಿಷನ್‌ ಬೇಡಿಕೆ ಈಡೇರಿಸಲಾಗದೆ ಗುತ್ತಿಗೆದಾರರು ನೀವು ಕೇಳುತ್ತಿರುವ ಪರ್ಸೆಂಟೇಜ್‌ಗೆ ಒಪ್ಪದೇ ಇರಬಹುದು ಎಂದು ವ್ಯಂಗ್ಯವಾಡಿದ್ದಾರೆ.

ರಸ್ತೆಗುಂಡಿಗಳ ದುಸ್ಥಿತಿ ಬಗ್ಗೆ ದನಿ ಎತ್ತಿದ ಉದ್ಯಮಿಗಳಿಗೆ ಧಮ್ಕಿ ಹಾಕಿ ಅವಮಾನ ಮಾಡಿದ್ದಾಯ್ತು, ಈಗ ಗುತ್ತಿಗೆದಾರರಿಗೆ ಧಮ್ಕಿ ಹಾಕುತ್ತಿದೆ ಈ ಲಜ್ಜೆಗೆಟ್ಟ ಕಾಂಗ್ರೆಸ್‌‍ ಸರ್ಕಾರ. ಪರಿಸ್ಥಿತಿ ಹೀಗೆ ಮುಂದುವರೆದರೆ ಕರ್ನಾಟಕಕ್ಕೆ ಯಾವ ಉದ್ಯಮಗಳೂ ಬರುವುದಿಲ್ಲ, ಯಾವ ಗುತ್ತಿಗೆದಾರರು ಸರ್ಕಾರದ ಕೆಲಸ ಮಾಡುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಕಾಶ್ಮೀರಿ ಪಂಡಿತರ ಮರೆತ ಬಿಜೆಪಿ

ಜಮ್ಮು, ಅ. 19 (ಪಿಟಿಐ)- ತಮ್ಮ ಪಕ್ಷವು ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತರನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕ ಜಹಾನ್‌ಜೈಬ್‌‍ ಸಿರ್ವಾಲ್‌‍ ಅವರು, ಸಮುದಾಯ ದೊಂದಿಗಿನ ದೀರ್ಘಕಾಲದ ಅನ್ಯಾಯವನ್ನು ಪರಿಹರಿಸಲು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಮ್ಮ ಪಕ್ಷದ ನಾಯಕತ್ವಕ್ಕೆ ಕರೆ ನೀಡಿದ್ದಾರೆ.

ಈ ಸಮುದಾಯವು ಬಿಜೆಪಿಗೆ ಅತ್ಯಂತ ದೃಢವಾದ ಪ್ರಚಾರಕರಲ್ಲಿ ಒಂದಾಗಿದೆ.
ಅವರ ನೋವನ್ನು ಬಿಜೆಪಿ ನಾಯಕತ್ವವು ರಾಜಕೀಯ ಲಾಭಕ್ಕಾಗಿ ಸಂಸತ್ತಿನಲ್ಲಿ 500 ಕ್ಕೂ ಹೆಚ್ಚು ಬಾರಿ ಉಲ್ಲೇಖಿಸಿದೆ ಮತ್ತು ಪ್ರತಿ ರಾಜಕೀಯ ವಿರೋಧಿಯ ವಿರುದ್ಧ ಸಾಧನವಾಗಿ ಬಳಸಿದೆ ಎಂದು ಕಾಂಗ್ರೆಸ್‌‍ ತೊರೆದ ನಂತರ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಿಜೆಪಿಗೆ ಸೇರಿದ ಸಿರ್ವಾಲ್‌ ಹೇಳಿದರು.

ಕಾಶ್ಮೀರಿ ಪಂಡಿತ ಸಮುದಾಯದೊಂದಿಗೆ ದೀರ್ಘಕಾಲದ ಅನ್ಯಾಯವನ್ನು ಪರಿಹರಿಸಲು ನಿರ್ಣಾಯಕ ಮತ್ತು ಅರ್ಥಪೂರ್ಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಾನು ಪಕ್ಷದ ನಾಯಕತ್ವವನ್ನು ಕೋರುತ್ತೇನೆ. ಅವರು ಸಾಂಕೇತಿಕ ಸನ್ನೆಗಳು ಅಥವಾ ಸಂಸತ್ತಿನ ಚರ್ಚೆಗಳಲ್ಲಿ ಪುನರಾವರ್ತಿತ ಉಲ್ಲೇಖಗಳಿಗಿಂತ ಹೆಚ್ಚಿನದನ್ನು ಅರ್ಹರು ಎಂದು ಅವರು ಹೇಳಿದರು.

ಇದಕ್ಕೂ ಮೊದಲು, ಅಕ್ಟೋಬರ್‌ 3 ರಂದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಮುಸ್ಲಿಮರ ವಿರುದ್ಧದ ಸ್ವೀಕಾರಾರ್ಹವಲ್ಲದ ಹೇಳಿಕೆಗಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ರಾಜ್ಯ ಪೊಲೀಸರ ಪ್ರತಿಕಾರಾತ್ಮಕ ಮನೋಭಾವವನ್ನು ಉಲ್ಲೇಖಿಸಿ ಸಿರ್ವಾಲ್‌ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.

ಕಾಶ್ಮೀರಿ ಪಂಡಿತರು ತಮ್ಮ ತಾಯ್ನಾಡಿಗೆ ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳುವ, ಅವರ ಹಕ್ಕುಗಳನ್ನು ಪುನಃಸ್ಥಾಪಿಸುವ ಮತ್ತು ಅವರಿಗೆ ದೀರ್ಘಕಾಲದಿಂದ ನಿರಾಕರಿಸಲ್ಪಟ್ಟ ಭದ್ರತೆ ಮತ್ತು ಅವಕಾಶಗಳನ್ನು ಒದಗಿಸುವ ನೀತಿಗಳಿಗೆ ನಾಯಕತ್ವ ಆದ್ಯತೆ ನೀಡಬೇಕು ಎಂದು ಬಿಜೆಪಿ ಮುಖಂಡರು ಹೇಳಿದರು.

ಅವರು ಸ್ಪಷ್ಟವಾದ ಕ್ರಮಕ್ಕೆ ಅರ್ಹರು, ಹಿರಿಯ ನಾಯಕರು ಅವರ ಹೋರಾಟಗಳನ್ನು ನೇರವಾಗಿ ವೀಕ್ಷಿಸಲು ಅವರ ಶಿಬಿರಗಳಿಗೆ ಭೇಟಿ ನೀಡುವುದರೊಂದಿಗೆ ಪ್ರಾರಂಭಿಸಿ, ನಂತರ ಅವರಲ್ಲಿರುವ ಕೆಲವೇ ಪಕ್ಷದ ಸದಸ್ಯರು ಸೇರಿದಂತೆ ಸಮುದಾಯದ ಪ್ರತಿನಿಧಿಗಳೊಂದಿಗೆ ಸಮಗ್ರ ಸಮಾಲೋಚನೆಗಳನ್ನು ನಡೆಸಿ, ಅವರ ಗೌರವಾನ್ವಿತ ಪುನರ್ವಸತಿಗಾಗಿ ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಎಂದು ಸಿರ್ವಾಲ್‌ ಇಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸಮುದಾಯದ ದುಃಸ್ಥಿತಿಯನ್ನು ಪರಿಹರಿಸಲು ಅವರು ಒತ್ತಾಯಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು, ಇದು ತುರ್ತು ಗಮನ ಮತ್ತು ಕ್ರಮದ ಅಗತ್ಯವಿರುವ ಆಳವಾದ ಕಳವಳದ ವಿಷಯವಾಗಿದೆ.

ಪ್ರಧಾನಿ ಅಥವಾ ಗೃಹ ಸಚಿವರು ಸೇರಿದಂತೆ ಉನ್ನತ ನಾಯಕತ್ವವು ಒಮ್ಮೆಯೂ ಸಹ ಅವರು ಅನುಭವಿಸುತ್ತಿರುವ ಶೋಚನೀಯ ಪರಿಸ್ಥಿತಿಗಳನ್ನು ವೀಕ್ಷಿಸಲು ಅವರ ಶಿಬಿರಗಳಿಗೆ ಭೇಟಿ ನೀಡದಿರುವುದು ತೀವ್ರ ದುರದೃಷ್ಟಕರ ಎಂದು ಅವರು ಹೇಳಿದರು.ಸರಿಯಾದ ವಸತಿ, ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ಮತ್ತು ಸಾಮಾಜಿಕ ಪುನರ್ವಸತಿಗೆ ಅವಕಾಶಗಳ ಕೊರತೆಯಿಂದಾಗಿ ಅವರ ಶಿಬಿರಗಳಲ್ಲಿನ ಪರಿಸ್ಥಿತಿಗಳು ಮೂರು ದಶಕಗಳಿಗೂ ಹೆಚ್ಚು ಕಾಲ ಮುಂದುವರಿದಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ವಿಫಲವಾಗಿದೆ ಎಂದು ಸಿರ್ವಾಲ್‌ ಹೇಳಿದರು.

ಕಾಶ್ಮೀರಿ ಪಂಡಿತರ ವಲಸೆಯನ್ನು ಗಂಭೀರ ಮಾನವ ದುರಂತ ಎಂದು ಕರೆದ ಅವರು, ಇದು ಕೇವಲ ಆರ್ಥಿಕ ಸಮಸ್ಯೆಯಲ್ಲ ಎಂದು ಪ್ರತಿಪಾದಿಸಿದರು.ಕುಟುಂಬಗಳನ್ನು ಅವರ ಮನೆಗಳಿಂದ ಹರಿದು ಹಾಕಲಾಯಿತು, ಅವರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಬೇರು ಸಹಿತ ಕಿತ್ತುಹಾಕಲಾಯಿತು, ಮತ್ತು ಅವರು ತಮ್ಮದೇ ದೇಶದೊಳಗೆ ದೇಶಭ್ರಷ್ಟರಾಗಿ ವಾಸಿಸಲು ಒತ್ತಾಯಿಸಲ್ಪಟ್ಟರು, ಅಸಮರ್ಪಕ ಸೌಲಭ್ಯಗಳು ಮತ್ತು ನಿರ್ಲಕ್ಷ್ಯದಿಂದ ಗುರುತಿಸಲ್ಪಟ್ಟ ಶಿಬಿರಗಳಲ್ಲಿ ದಶಕಗಳ ಕಾಲ ಕಷ್ಟಗಳನ್ನು ಸಹಿಸಿಕೊಂಡರು ಎಂದು ಸಿರ್ವಾಲ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.ತಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಅಥವಾ ಅವರ ಪುನರ್ವಸತಿಗಾಗಿ ಕೆಲಸ ಮಾಡಲು ಸಮುದಾಯದೊಂದಿಗೆ ಅರ್ಥಪೂರ್ಣ ಚರ್ಚೆ ಇಲ್ಲದಿರುವುದನ್ನು ಅವರು ಖಂಡಿಸಿದರು.

ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಸಂಸದನ ಮೇಲೆ ದಾಳಿ ಯತ್ನ

ಕೋಲ್ಕತ್ತಾ, ಅ. 19 (ಪಿಟಿಐ)- ಪಶ್ಚಿಮ ಬಂಗಾಳದಲ್ಲಿ ಮತ್ತೊಬ್ಬ ಬಿಜೆಪಿ ಸಂಸದರ ಮೇಲೆ ದಾಳಿ ಯತ್ನ ನಡೆದಿದೆ.ಬಿಜೆಪಿ ಸಂಸದ ರಾಜು ಬಿಸ್ತಾ ಅವರು ಡಾರ್ಜಿಲಿಂಗ್‌ನ ಮಸ್ಧುರಾ ಪ್ರದೇಶದ ಮೂಲಕ ಹಾದುಹೋಗುವಾಗ ತಮ್ಮ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸಂಬಂಧ ಬಿಜೆಪಿ ಜೋರೆಬಂಗ್ಲೋ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಇಂದು ಸುಖಿಯಾ ಪೋಖಾರಿ ಬಳಿಯ ಮಸ್ಧುರಾದಲ್ಲಿ,
ನನ್ನ ಬೆಂಗಾವಲು ಪಡೆಯ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆ ಹೇಡಿಗಳು ನನ್ನ ಮೇಲೆ ದಾಳಿ ಮಾಡಿದ್ದರೂ, ದಾಳಿಯ ಬಲವು ನನ್ನ ಹಿಂದಿನ ವಾಹನದ ಮೇಲೆ ಬಿದ್ದಿತು ಎಂದಿದ್ದಾರೆ.

ಕೋಲ್ಕತ್ತಾಗೆ ನಿಷ್ಠರಾಗಿರುವವರು ಇಂತಹ ದಾಳಿಗಳಿಂದ ನಾವು ಭಯಭೀತರಾಗುತ್ತೇವೆ ಎಂದು ಭಾವಿಸಿದರೆ, ಅದು ತಪ್ಪು. ನಾವು ಹೆದರುವುದಿಲ್ಲ ಮತ್ತು ಅಂತಹ ಹೇಡಿತನದ ದಾಳಿಗಳು ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.ಬಿಸ್ತಾ ಅವರ ಆಪ್ತ ಸಹಾಯಕ ಮತ್ತು ಬಿಜೆಪಿ ಕಾರ್ಯಕರ್ತ ಸಂಜೀವ್‌ ಲಾಮಾ ಕುಳಿತಿದ್ದ ವಾಹನಕ್ಕೆ ಕಲ್ಲು ತಗುಲಿದ ಘಟನೆ ನಡೆದಿದೆ ಎಂದು ಪೊಲೀಸ್‌‍ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಒಂದು ಸಣ್ಣ ಕಲ್ಲು ಕಾರಿಗೆ ಡಿಕ್ಕಿ ಹೊಡೆದಂತೆ ಕಂಡುಬಂದಿದೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.ಬಿಸ್ತಾ ಅವರು ಎಕ್‌್ಸ ಪೋಸ್ಟ್‌ನಲ್ಲಿ, ಇಂದು ಶಾಂತಿ ಕದಡಲು ಪ್ರಯತ್ನಿಸಿದವರಿಗೆ ನಾನು ಎಚ್ಚರಿಕೆ ನೀಡುತ್ತಿದ್ದೇನೆ, ನಿಮ್ಮ ದುಷ್ಟ ಪ್ರಯತ್ನಗಳು ಯಶಸ್ವಿಯಾಗಲು ನಾವು ಬಿಡುವುದಿಲ್ಲ. ನಮ್ಮ ಪ್ರದೇಶದಲ್ಲಿ ಶಾಶ್ವತ ಶಾಂತಿಗಾಗಿ ನಾವು ಕೆಲಸ ಮಾಡುತ್ತೇವೆ ಮತ್ತು ಭೂಮಿಯ ಮೇಲಿನ ಯಾವುದೇ ಶಕ್ತಿಯು ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ಸೇರಿಸಿದ್ದಾರೆ.

ಬಿಸ್ತಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯನ್ನು ಕೇಂದ್ರ ಸಚಿವ ಮತ್ತು ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್‌ ಖಂಡಿಸಿದ್ದಾರೆ, ಇದನ್ನು ಬಾಡಿಗೆ ದುಷ್ಕರ್ಮಿಗಳು ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ…. ಇಂದು ಮತ್ತೊಂದು ಹೇಯ ಮತ್ತು ಹೇಡಿತನದ ಪಿತೂರಿ ಬಯಲಾಗಿದೆ.

ಈ ಬಾರಿ ನಮ್ಮ ಡಾರ್ಜಿಲಿಂಗ್‌ ಸಂಸದ ಜಿ ಅವರನ್ನು ಬಾಡಿಗೆ ದುಷ್ಕರ್ಮಿಗಳ ಮೂಲಕ ಗುರಿಯಾಗಿಸಿಕೊಂಡಿದ್ದಾರೆ. ಹಠಾತ್‌ ದಾಳಿಯಲ್ಲಿ, ಅವರ ಕಾರಿನ ಹಿಂದಿನ ವಾಹನ ಹಾನಿಗೊಳಗಾಯಿತು, ಆದರೆ ಸರ್ವಶಕ್ತನ ಕೃಪೆಯಿಂದ ರಾಜು ಜಿ ಸುರಕ್ಷಿತರಾಗಿದ್ದಾರೆ. ಈ ನೀಚ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶ : ಬೈಕ್‌ಗೆ ಟ್ರಕ್‌ ಡಿಕ್ಕಿಯಾಗಿ 3 ಮಕ್ಕಳ ಸಾವು

ಹರ್ದೋಯ್‌,ಅ.19- ಕಳೆದ ರಾತ್ರಿ ಉತ್ತರ ಪ್ರದೇಶದ ಹರ್ದೋಯ್‌ ಜಿಲ್ಲೆಯ ಬೇಗಮ್‌ಗಂಜ್‌‍ ಫ್ಲೈಓವರ್‌ ಮೇಲೆ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 3 ಮಕ್ಕಳು ಸಾವನ್ನಪ್ಪಿದ್ದಾರೆ. ಕರಣ್‌,ಕಾಜಲ್‌ (10) ಮತ್ತು ಅಂಶಿಕಾ (11) ಮೃತ ದುದೈವಿಗಳು.

ಉನ್ನಾವ್‌ ಜಿಲ್ಲೆಯ ಪ್ರದೀಪ್‌ ಕುಮಾರ್‌ ತಮ ಪತ್ನಿ ಜಿತೆ ತರಳುತ್ತಿದ್ದರೆ, ಹಾರ್ದೋಯ್‌ನ ಪಲ್ಹರೈ ಗ್ರಾಮದ ನಿವಾಸಿ ಅವರ ಅವರ ಸೋದರಳಿಯ ಕರಣ್‌ ಅವರು ಪ್ರದೀಪ್‌ ಅವರ ಪುತ್ರಿಯರಾದ ಕಾಜಲ್‌ ಮತ್ತು ಅಂಶಿಕಾ ಅವರೊಂದಿಗೆ ಮತ್ತೊಂದು ಬೈಕ್‌ನಲ್ಲಿ ಬರುತ್ತಿದ್ದರು.

ಬೇಗಮ್‌ಗಂಜ್‌‍ ಫ್ಲೈಓವರ್‌ ಬಳಿ, ವಿರುದ್ಧ ದಿಕ್ಕಿನಿಂದ ಬಂದ ಟ್ರಕ್‌ ಕರಣ್‌ ಅವರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದೆ ಈ ವೇಳೆ ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ಹತ್ತಿರದ ಸಂದಿಲಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಆದರೆ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಪೊಲೀಸ್‌‍ ವರಿಷ್ಠಾಧಿಕಾರಿ ಅಶೋಕ್‌ ಕುಮಾರ್‌ ಮೀನಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಟ್ರಕ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಮತ್ತು ತನಿಖೆ ನಡೆಯುಯ್ತಿದೆ ಎಂದು ಅವರು ತಿಳಿಸಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ನೂಕುನುಗ್ಗಲು, ಭಕ್ತರ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ

ಹಾಸನ, ಅ.19- ಹಾಸನಾಂಬೆ ಸಾರ್ವಜನಿಕ ದರ್ಶನೋತ್ಸವಕ್ಕೆ ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿದ್ದು, ಇಂದು ಸಹ ಭಕ್ತರ ದಂಡೇ ಹರಿದುಬಂದಿತ್ತು.ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆವರೆಗೂ 3.70 ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿಯ ದರ್ಶನ ಪಡೆದಿರುವುದು ಹೊಸ ದಾಖಲೆಯಾಗಿದೆ.

ಇಂದು ಕೂಡ ಭಕ್ತರ ಸಾಗರವೇ ಹರಿದು ಬರುತ್ತಿದ್ದು, ದರ್ಶನದ ನಿರೀಕ್ಷಾ ಅವಧಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಭಕ್ತರ ಸುರಕ್ಷತೆ ಹಾಗೂ ಅನುಕೂಲಕ್ಕಾಗಿ ಪೊಲೀಸ್‌‍ ಇಲಾಖೆ ಹಾಗೂ ಜಿಲ್ಲಾಡಳಿತ ವಿಶೇಷ ವ್ಯವಸ್ಥೆ ಕೈಗೊಂಡಿದ್ದು, ಮಳೆಯ ಸಾಧ್ಯತೆಯ ಕಾರಣ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ದೀಪಾವಳಿ ನವರಾತ್ರಿ ಉತ್ಸವದ ಭಾಗವಾಗಿ ಹಾಸನಾಂಬ ದರ್ಶನೋತ್ಸವ ಸಹಸ್ರಾರು ಜನರನ್ನು ಆಕರ್ಷಿಸುತ್ತಿದ್ದು, ಇಡೀ ನಗರವನ್ನೆ ಧಾರ್ಮಿಕ ಉತ್ಸವ ಆವರಿಸಿದಂತಾಗಿದೆ.
ಹಾಸನಾಂಬೆ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ಈ ನಡುವೆ ಭಕ್ತರಿಗೆ ದರ್ಶನಕ್ಕೆ ಅಡ್ಡಿಯಾಗದಂತೆ ಜಿಲ್ಲಾಡಳಿತ ಶಿಷ್ಟಾಚಾರ ದರ್ಶನದಲ್ಲಿ ಮಹತ್ವದ ಬದಲಾವಣೆ ಮಾಡಿದೆ.

ಇದರಿಂದ ಸಚಿವರ ಪತ್ರ ಹಿಡಿದು ಶಿಷ್ಟಾಚಾರದಡಿ ದರ್ಶನಕ್ಕೆ ಬರುವವರಿಗೆ ಬ್ರೇಕ್‌ ಬಿದ್ದಂತಾಗಿದ್ದು, ಗಣ್ಯರ ಪತ್ರ ತರುವ ಕುಟುಂಬ ಸದಸ್ಯರಿಗೆ ದೇವಿ ದರ್ಶನಕ್ಕೆ ಅವಕಾಶ ಇಲ್ಲವಾಗಿದೆ. ಸಚಿವರ ಜೊತೆಯಲ್ಲಿ ಬರುವವರಿಗೆ ಮಾತ್ರ ಶಿಷ್ಟಾಚಾರ ದರ್ಶನ ಎಂದು ಆದೇಶ ನೀಡುವಂತೆ ಹಾಸನಾಂಬೆ ದೇವಾಲಯ ಆಡಳಿತಾಧಿಕಾರಿ ಮಾರುತಿ ಆದೇಶ ಮಾಡಿದ್ದು, ಸಚಿವರ ಸೂಚನೆಯಂತೆ ಈ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹಾಸನಾಂಬೆ ದರ್ಶನೋತ್ಸವಕ್ಕೆ ಬೆಂಗಳೂರು ಕಡೆಯಿಂದ ಸಾರಿಗೆ ಬಸ್‌‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಬಸ್‌‍ಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಇಂದು ಭಾನುವಾರವಾದ್ದರಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಕಿಲೋಮೀಟರ್‌ಗಟ್ಟಲೆ ಧರ್ಮದರ್ಶನದ ಸಾಲು ನಿಂತಿದ್ದು, ದರ್ಶನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರತಿನಿತ್ಯ ಮೂರರಿಂದ ಮೂರೂವರೆ ಲಕ್ಷ ಭಕ್ತರು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಭಕ್ತರನ್ನು ನಿಯಂತ್ರಿಸುವುದೇ ಒಂದು ದೊಡ್ಡ ಸವಾಲಾಗಿದೆ.

ಸುಗಮ ದರ್ಶನ ವ್ಯವಸ್ಥೆಗೆ ಎಷ್ಟೇ ಕ್ರಮ ಕೈಗೊಂಡರೂ ಕಷ್ಟಸಾಧ್ಯವಾಗುತ್ತಿದೆ. 300ರೂ. ಹಾಗೂ 1000ರೂ.ಗಳ ಟಿಕೆಟ್‌ ಪಡೆದವರು ಕೂಡ ದರ್ಶನ ಮಾಡಿ ಬರುವಷ್ಟರಲ್ಲಿ ಹೈರಾಣಾಗಿದ್ದಾರೆ. ದರ್ಶನೋತ್ಸವದ ವೇಳೆ ತೊಂದರೆ ಸಂಭವಿಸಿದರೆ ಪೊಲೀಸ್‌‍ ಇಲಾಖೆ ಹೊಣೆಯಲ್ಲ ಎಂದು ಎಸ್‌‍ಪಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ.