Home Blog Page 37

ಬೆಂಗಳೂರು : ಲಾಡ್ಜ್ ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು

ಬೆಂಗಳೂರು,ಅ.18-ಪುತ್ತೂರಿನಿಂದ ಎಂಟು ದಿನಗಳ ಹಿಂದೆಯಷ್ಟೆ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದು ಲಾಡ್ಜ್ ನಲ್ಲಿ ತಂಗಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಡಿವಾಳ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪುತ್ತೂರಿನ ತಕ್ಷಿತ್‌ (20) ಮೃತಪಟ್ಟಿರುವ ಯುವಕ.

ಮಡಿಕೇರಿ ಜಿಲ್ಲೆ ವಿರಾಜಪೇಟೆಯ ಸ್ನೇಹಿತೆಯೊಂದಿಗೆ ಪುತ್ತೂರಿನಿಂದ ತಕ್ಷಿತ್‌ ನಗರಕ್ಕೆ ಬಂದು ಮಡಿವಾಳದ ಮಾರುತಿನಗರದ ಗ್ರ್ಯಾಂಡ್‌ ಚಾಯ್ಸ್ ಹೊಟೇಲ್‌ನಲ್ಲಿ ತಂಗಿದ್ದರು. ಇವರಿಬ್ಬರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.

ಮೊನ್ನೆ ರಾತ್ರಿ ಯುವತಿ ಊರಿಗೆ ವಾಪಸ್‌‍ ಹೋಗಿದ್ದಾಳೆ. ಹಾಗಾಗಿ ರೂಮ್‌ನಲ್ಲಿ ಆತ ಒಬ್ಬನೇ ಇದ್ದನು. ಎಂಟು ದಿನಗಳ ಕಾಲ ಊಟ, ತಿಂಡಿಯನ್ನು ತಮ ರೂಮ್‌ಗೆ ತರಿಸಿಕೊಂಡಿದ್ದಾರೆ. ನಿನ್ನೆ ರೂಮ್‌ನಿಂದ ಯಾರೂ ಹೊರ ಬರದಿದ್ದಾಗ ಅನುಮಾನಗೊಂಡು ಸಿಬ್ಬಂದಿ ಸಂಜೆ ಬಾಗಿಲು ತೆಗೆದು ನೋಡಿದಾಗ ಹಾಸಿಗೆ ಮೇಲೆ ಮಲಗಿದ್ದ ಸ್ಥಿತಿಯಲ್ಲಿ ಯುವಕ ಮೃತಪಟ್ಟಿರುವುದು ಕಂಡು ಬಂದಿದೆ.

ತಕ್ಷಣ ಲಾಡ್‌್ಜ ನವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ರೂಮ್‌ ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ, ಆತನ ಪೋಷಕರಿಗೆ ವಿಷಯ ತಿಳಿಸಿದ್ದಾರೆ.

ಯುವಕನ ಪೋಷಕರು ಹಾಗೂ ತಕ್ಷಿತ್‌ ಜೊತೆ ಇದ್ದ ಯುವತಿ ಸಹ ನಗರಕ್ಕೆ ಬಂದಿದ್ದಾರೆ. ಈತನಿಗೆ ಅನಾರೋಗ್ಯ ಸಮಸ್ಯೆ ಇತ್ತು. ಅಲ್ಲದೇ ಸಿಗರೇಟ್‌ ಹೆಚ್ಚಾಗಿ ಸೇದುತ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದ್ದು, ಸಾವು ಹೇಗಾಗಿದೆ ಎಂಬುವುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಗೊತ್ತಾಗಲಿದೆ. ಈ ಬಗ್ಗೆ ಮಡಿವಾಳ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಬೆಂಗಳೂರು : ಸಿಲಿಂಡರ್‌ ಸ್ಫೋಟ, ನಿವೃತ್ತ ಯೋಧ ಗಂಭೀರ

ಬೆಂಗಳೂರು,ಅ.18- ಮನೆಯೊಂದರಲ್ಲಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಿವೃತ್ತ ಯೋಧ ಗಂಭೀರ ಗಾಯಗೊಂಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಗಾಯಗೊಂಡಿರುವ ನಿವೃತ್ತ ಯೋಧ ಜನಾರ್ಧನ್‌ (60) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಮೂಲತಃ ಮಡಿಕೇರಿಯವರು.

ಅಂಧ್ರಹಳ್ಳಿಯ ವಿದ್ಯಾಮಾನ್ಯ ಲೇಔಟ್‌ನಲ್ಲಿ ರುದ್ರೇಗೌಡ ಎಂಬುವವರ ಬಾಡಿಗೆ ಮನೆಯಲ್ಲಿ ಜನಾರ್ಧನ್‌ ಅವರು ಒಬ್ಬರೇ ವಾಸವಾಗಿದ್ದಾರೆ. ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿರುವುದು ಇವರ ಗಮನಕ್ಕೆ ಬಂದಿಲ್ಲ. ರಾತ್ರಿ 8.30ರ ಸುಮಾರಿನಲ್ಲಿ ಜನಾರ್ಧನ್‌ ಅವರು ಅಡಿಗೆ ಮಾಡಲು ಸ್ಟೌವ್‌ ಆನ್‌ ಮಾಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದರಿಂದ ಜನಾರ್ಧನ್‌ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ಸ್ಪೋಟದ ರಭಸಕ್ಕೆ ಮನೆಗೋಡೆ ಕುಸಿದು ಬಿದ್ದಿದೆ. ಛಾವಣಿ ಬಿರುಕು ಬಿಟ್ಟಿದೆ. ಸ್ಪೋಟದ ಸುದ್ದಿ ತಿಳಿದು ಅಕ್ಕಪಕ್ಕದವರು ತಕ್ಷಣ ಅಗ್ನಿ ಶಾಮಕದಳಕ್ಕೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಅಗ್ನಿಶಾಮಕ ವಾಹನದೊಂದಿಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

ಖೋಟಾನೋಟು ಚಲಾವಣೆಗೆ ಬಂದು ಸಿಕ್ಕಿ ಬಿದ್ದ ತಮಿಳುನಾಡಿನ ಗ್ಯಾಂಗ್‌

ಬೆಂಗಳೂರು,ಅ.18– ನೀವು ನೀಡುವ ಹಣಕ್ಕೆ ಮೂರುಪಟ್ಟು ನಕಲಿ ನೋಟು ಕೊಡುವುದಾಗಿ ಹೇಳಿ ಸಾರ್ವಜನಿಕರನ್ನು ಯಾಮಾರಿಸುತ್ತಿದ್ದ ತಮಿಳುನಾಡಿನ ಮೂವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜೇಶ್ವರನ್‌, ಮೀರನ್‌ ಮೊಹಿದು ದ್ದೀನ್‌ ಮತ್ತು ಶೇಕ್‌ ಮೊಹಮದ್‌ ಬಂಧಿತ ವಂಚಕರು. ತಮಿಳುನಾಡಿನಲ್ಲಿ ಸಕ್ರೀಯರಾಗಿದ್ದ ಈ ಮೂವರು ವಂಚಕರು ನಗರಕ್ಕೆ ಬಂದು ಮೊದಲ ಪ್ರಯತ್ನದಲ್ಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಸೂಟ್‌ಕೇಸ್‌‍ವೊಂದರಲ್ಲಿ ಯಾರಿಗೂ ಅನುಮಾನ ಬಾರದ ರೀತಿ ಮೇಲೆ ಹಾಗೂ ಕೆಳಗೆ 500 ರೂ. ಮುಖ ಬೆಲೆಯ ಅಸಲಿ ನೋಟುಗಳನ್ನು ಇಟ್ಟು ಮಧ್ಯದಲ್ಲಿ ನೋಟಿನ ರೀತಿಯಲ್ಲಿರುವ ಬಿಳಿ ಖಾಲಿ ಪೇಪರ್‌ಗಳನ್ನು ಜೋಡಿಸಿಕೊಂಡು ಬಂದಿದ್ದು, ಜಯನಗರ 4ನೇ ಬ್ಲಾಕ್‌ನಲ್ಲಿ ಸಾರ್ವಜನಿಕರಿಗೆ 10 ಲಕ್ಷ ನೀಡಿದರೆ 30 ಲಕ್ಷ ಅಂದರೆ ಮೂರು ಪಟ್ಟು ನಕಲಿ ನೋಟುಗಳನ್ನು ನೀಡುವುದಾಗಿ ಹೇಳಿ ಯಾಮಾರಿಸುತ್ತಿದ್ದರು.

ಈ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿ ತಮಿಳುನಾಡಿನ ತಿರುನೆಲ್ವೇಳಿಯ ಮೂವರನ್ನು ಬಂಧಿಸಿ ಕಾರು, ಸೂಟ್‌ಕೇಸ್‌‍, ಅದರಲ್ಲಿದ್ದ 15 ಸಾವಿರ ಅಸಲಿ ನೋಟ್‌ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈ ಗ್ಯಾಂಗ್‌ನ ಹಲವರ ಹೆಸರುಗಳನ್ನು ಹೇಳಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ರಾಹುಲ್‌ ಗಾಂಧಿ ಭಾರತದ ಪ್ರಧಾನಿಯಾಗಲು ನಾಲಾಯಕ್ : ಅಮೆರಿಕ ಗಾಯಕಿ ಮೇರಿ ಮಿಲ್ಬೆನ್‌

ನವದೆಹಲಿ,ಅ.18- ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌‍ ಯುವ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಭಾರತದ ಪ್ರಧಾನಿ ಹುದ್ದೆ ಅಲಂಕರಿಸುವಷ್ಟು ಅರ್ಹತೆ ಇಲ್ಲ ಎಂದು ಅಮೇರಿಕಾದ ಹೆಸರಾಂತ ಗಾಯಕಿ ಮೇರಿ ಮಿಲ್ಬೆನ್‌ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ನರೇಂದ್ರಮೋದಿ ವಿರುದ್ಧ ಇತ್ತೀಚೆಗೆ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಟೀಕೆ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿರುವ ಅವರು, ಕಾಂಗ್ರೆಸ್‌‍ ನಾಯಕನಿಗೆ ಪ್ರಧಾನಿಯಾಗುವಷ್ಟು ಚಾಣಾಕ್ಷತನ ಇಲ್ಲ. ಭಾರತದ ಪ್ರಧಾನಿಯಾಗುವಷ್ಟು ಕುಶಾಗ್ರಮತಿ ನಿಮಲ್ಲಿ ಇಲ್ಲದಿರುವುದರಿಂದ ಈ ರೀತಿಯ ನಾಯಕತ್ವವನ್ನು ನೀವು ಅರ್ಥಮಾಡಿಕೊಳ್ಳುತ್ತೀರಿ.

ನಾನು ಇದನ್ನು ನಿರೀಕ್ಷಿಸುವುದಿಲ್ಲ. ನಿಮ ಐ ಹೇಟ್‌ ಇಂಡಿಯಾ ಪ್ರವಾಸಕ್ಕೆ ಹಿಂತಿರುಗುವುದು ಉತ್ತಮ ಎಂದು ವ್ಯಂಗ್ಯಭರಿತವಾಗಿ ತಮ ಸಾಮಾಜಿಕ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಆಗಾಗ್ಗೆ ಹೊಗಳುವ ಮಿಲ್ಬೆನ್‌, ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಬಗ್ಗೆ ಭಯಭೀತರಾಗಿದ್ದಾರೆ ಎಂಬ ರಾಹುಲ್‌ ಗಾಂದಿ ಅವರ ಆರೋಪಕ್ಕೆ ಕೆಂಡಮಂಡಲವಾಗಿದ್ದಾರೆ.

ಭಾರತವು ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಎಂದು ಟ್ರಂಪ್‌ ನಿರ್ಧರಿಸಲು ಮತ್ತು ಘೋಷಿಸಲು ಪ್ರಧಾನಿ ಅನುಮತಿಸುತ್ತಾರೆ, ಪದೇ ಪದೇ ಕಡೆಗಣಿಸಲ್ಪಟ್ಟಿದ್ದರೂ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾರೆ ಮತ್ತು ಆಪರೇಷನ್‌ ಸಿಂಧೂರ್‌ ಬಗ್ಗೆ ಅಮೆರಿಕ ಅಧ್ಯಕ್ಷರನ್ನು ವಿರೋಧಿಸುವುದಿಲ್ಲ ಎಂಬುದು ರಾಹುಲ್‌ ಅರೋಪವಾಗಿದೆ.

ಇದಕ್ಕೆ ಅಮೆರಿಕದ ಗಾಯಕಿ, ಪ್ರಧಾನಿ ಮೋದಿವರು ಅಧ್ಯಕ್ಷ ಟ್ರಂಪ್‌ಗೆ ಹೆದರುವುದಿಲ್ಲ. ಪ್ರಧಾನಿ ಮೋದಿ ದೀರ್ಘಕಾಲದ ರಾಜಕೀಯವನ್ನು ಅರ್ಥಮಾಡಿಕೊಂಡಿದ್ದಾರೆ. ಅಮೆರಿಕದೊಂದಿಗಿನ ಅವರ ರಾಜತಾಂತ್ರಿಕತೆಯು ಕಾರ್ಯತಂತ್ರದ್ದಾಗಿದೆ. ಡೊನಾಲ್ಡ್ ಟ್ರಂಪ್‌ ಯಾವಾಗಲೂ ಅಮೆರಿಕದ ಹಿತಾಸಕ್ತಿಗಳನ್ನು ಮೊದಲು ಇಡುವಂತೆಯೇ, ಪ್ರಧಾನಿ ಮೋದಿ ಅವರು ಭಾರತಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ನಾನು ಅದನ್ನು ಶ್ಲಾಘಿಸುತ್ತೇನೆ. ರಾಷ್ಟ್ರಗಳ ಮುಖ್ಯಸ್ಥರು ಅದನ್ನೇ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

ನಟಿ ಮತ್ತು ಸಾಂಸ್ಕೃತಿಕ ರಾಯಭಾರಿಯೂ ಆಗಿರುವ ಮಿಲ್ಬೆನ್‌, ಜೂನ್‌ 2023ರಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅವರನ್ನು ಮೊದಲು ಭೇಟಿಯಾಗಿದ್ದರು. ರೊನಾಲ್‌್ಡ ರೇಗನ್‌ ಕಟ್ಟಡದಲ್ಲಿ ಅವರು ಭಾರತದ ರಾಷ್ಟ್ರಗೀತೆಯನ್ನು ಪ್ರದರ್ಶಿಸಿದರು, ನಂತರ ಅವರು ಪ್ರಧಾನಿ ಮೋದಿ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಈ ಕ್ಷಣವು ವಿಶ್ವದಾದ್ಯಂತ ಗಮನ ಸೆಳೆದಿತ್ತು.

ಟ್ರಂಪ್‌ ಹೇಳಿಕೆ: ರಾಹುಲ್‌ ಗಾಂಧಿಯವರ ಹೇಳಿಕೆಗೆ ಮೂಲ ಕಾರಣ, ಡೊನಾಲ್‌್ಡ ಟ್ರಂಪ್‌ ಅವರು ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ ಎಂದು ಹೇಳಿಕೊಂಡಿದ್ದು. ಉಕ್ರೇನ್‌ ಮೇಲಿನ ಆಕ್ರಮಣದ ಹಿನ್ನೆಲೆಯಲ್ಲಿ ಮಾಸ್ಕೋ ಮೇಲೆ ಒತ್ತಡ ಹೆಚ್ಚಿಸಲು ಇದು ಒಂದು ದೊಡ್ಡ ಹೆಜ್ಜೆ ಎಂದು ಟ್ರಂಪ್‌ ಬಣ್ಣಿಸಿದ್ದರು.

ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಕೂಡ ಸರ್ಕಾರವನ್ನು ಟೀಕಿಸಿದ್ದು, ಭಾರತ ಆಪರೇಷನ್‌ ಸಿಂಧೂರ್‌ ಅನ್ನು ನಿಲ್ಲಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮೊದಲು ಘೋಷಿಸಿದರು. ತಮ ಒತ್ತಡದ ಮೇರೆಗೆ ಭಾರತ ಕಾರ್ಯನಿರ್ವಹಿಸಿದೆ ಎಂದು ಟ್ರಂಪ್‌ ಪದೇ ಪದೇ ಹೇಳಿಕೊಂಡಿದ್ದಾರೆ ಎಂಬುದನ್ನು ಹೈಲೈಟ್‌ ಮಾಡಿದ್ದಾರೆ.

ತಮ ಓವಲ್‌ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಟ್ರಂಪ್‌, ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದು ಅಮೆರಿಕಕ್ಕೆ ಸಂತೋಷದ ವಿಷಯವಲ್ಲ ಎಂದು ಸ್ಪಷ್ಟಪಡಿಸಿದ್ದರು. ಇಂತಹ ಖರೀದಿಗಳೇ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಯುದ್ಧಕ್ಕೆ ಹಣಕಾಸು ಸಹಾಯ ಮಾಡಿದೆ ಎಂದು ಟ್ರಂಪ್‌ ವಾದಿಸಿದ್ದರು. ಮೋದಿ ಹಾಗೂ ನಾನು ಉತ್ತಮ ಸ್ನೇಹಿತರು, ನಮ ನಡುವೆ ಒಳ್ಳೆಯ ಬಾಂಧವ್ಯವಿದೆ. ಅವರು ರಷ್ಯಾದಿಂದ ತೈಲ ಖರೀದಿಸುವುದು ನಮಗೆ ಸಂತೋಷದ ವಿಷಯವಲ್ಲ. ಏಕೆಂದರೆ ಈ ಖರೀದಿ ರಷ್ಯಾದ ಯುದ್ಧಕ್ಕೆ ಅವಕಾಶ ಮಾಡಿಕೊಡುತ್ತದೆ, ಈ ಯುದ್ಧದಿಂದ ಒಂದೂವರೆ ಮಿಲಿಯನ್‌ ಜನರನ್ನು ಕಳೆದುಕೊಂಡಿದೆ ಎಂದು ಹೇಳಿದ್ದರು.

ಭಾರತ ತೈಲ ಖರೀದಿಸುತ್ತಿರುವುದು ನನಗೆ ಸಂತೋಷವಾಗಿರಲಿಲ್ಲ, ಮತ್ತು (ಮೋದಿ) ಇಂದು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಭರವಸೆ ನೀಡಿದರು. ಇದೊಂದು ಮಹತ್ವದ ಹೆಜ್ಜೆ. ಈಗ ನಾವು ಚೀನಾವನ್ನು ಕೂಡ ಇದೇ ನಿರ್ಧಾರ ಕೈಗೊಳ್ಳುವಂತೆ ಮಾಡಬೇಕಿದೆ ಎಂದು ಟ್ರಂಪ್‌ ತಿಳಿಸಿದ್ದರು.

ಇಂಧನ ಮತ್ತು ಶುದ್ಧ ಗಾಳಿಯ ಸಂಶೋಧನಾ ಕೇಂದ್ರ (ಸಿಆರಿಎ) ಪ್ರಕಾರ, ಚೀನಾದ ನಂತರ ಭಾರತವು ರಷ್ಯಾದ ಪಳೆಯುಳಿಕೆ ಇಂಧನಗಳ ಎರಡನೇ ಅತಿದೊಡ್ಡ ಖರೀದಿದಾರನಾಗಿದೆ. ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಯುರೋಪಿಯನ್‌ ಬೇಡಿಕೆಯಲ್ಲಿನ ಇಳಿಕೆಯಿಂದಾಗಿ ರಷ್ಯಾದ ತೈಲವು ಭಾರೀ ರಿಯಾಯಿತಿಯಲ್ಲಿ ಲಭ್ಯವಾಯಿತು.

ಇದರ ಪರಿಣಾಮವಾಗಿ,ಭಾರತದ ರಷ್ಯಾದ ಕಚ್ಚಾ ತೈಲ ಆಮದು ಅಲ್ಪಾವಧಿಯಲ್ಲಿಯೇ ಶೇಕಡಾ 1 ಕ್ಕಿಂತ ಅದರ ಒಟ್ಟು ಕಚ್ಚಾ ತೈಲ ಆಮದಿನ ಶೇಕಡಾ 40ಕ್ಕೆ ಏರಿತು. ತನ್ನ ತೈಲ ಆಮದುಗಳನ್ನು ರಾಷ್ಟ್ರೀಯ ಇಂಧನ ಭದ್ರತೆ ಮತ್ತು ಕೈಗೆಟಕುವ ದರ ಲಭ್ಯತೆಗಳಿಂದ ನಡೆಸಲಾಗುತ್ತಿದೆ ಹಾಗೂ ರಷ್ಯಾ-ಉಕ್ರೇನ್‌ ಸಂಘರ್ಷದ ಬಗ್ಗೆ ತನ್ನ ನಿಲುವು ಸ್ವತಂತ್ರ ಮತ್ತು ಸಮತೋಲಿತವಾಗಿದೆ ಎಂದು ಭಾರತ ಸರ್ಕಾರ ಸಮರ್ಥಿಸಿಕೊಂಡಿದೆ.

ಪಾರ್ಕ್‌ನಲ್ಲಿ ನಾಗರಿಕರ ಸಮಸ್ಯೆ ಆಲಿಸಿದ ಡಿಸಿಎಂ ಡಿಕೆಶಿ

ಬೆಂಗಳೂರು, ಅ.18- ಜನಸಾಮಾನ್ಯರ ಸಮಸ್ಯೆಯನ್ನು ತಿಳಿದುಕೊಳ್ಳಲು ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಇಂದು ಕೆಆರ್‌ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಇಕೋ ಪಾರ್ಕ್‌ನಲ್ಲಿ ನಾಗರಿಕರ ಸ್ಪಂದನೆ ಕಾರ್ಯಕ್ರಮ ನಡೆಸಿದರು.

ಈ ವೇಳೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು, ಚ ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ನಾಗರಿಕ ಸೌಲಭ್ಯಗಳ ಕೊರತೆಯ ದೂರಿನ ಸರಮಾಲೆಗಳೇ ಕಂಡು ಬಂದವು. ಆಸ್ಪತ್ರೆ, ಸಿಸಿಟಿವಿ ಸ್ಕೈ ವಾಕ್‌ಗಳು, ಒತ್ತುವರಿ ಸಶಾನಕ್ಕಾಗಿ ಜಾಗ ಸೇರಿದಂತೆ ನಾನಾ ಬೇಡಿಕೆಗಳನ್ನು ಸಾರ್ವಜನಿಕರು ಉಪಮುಖ್ಯಮಂತ್ರಿ ಮುಂದೆ ಮಂಡಿಸಿದರು.

ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅವರು ರಾಜಕಾಲುವೆ ಕೆರೆ ಭಾಗದಲ್ಲಿ ವಾಸಿಸುವ ನಾಗರಿಕರ ಸಮಸ್ಯೆಗಳನ್ನು ಆಲಿಸಿದರು. ನಾಗರಿಕರು ತಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಂಡರು.

ಎಆರ್‌ಓ ಬಸವರಾಜ್‌ ಮತ್ತು ವಿಜಿನಾಪುರ ಆರ್‌ಐ ಖಾತೆ ಬದಲಾವಣೆಗೆ 15 ರಿಂದ 20 ಸಾವಿರ ಲಂಚ ಕೇಳುತ್ತಿದ್ದಾರೆ, 2 ತಿಂಗಳಿನಿಂದಲೂ ಅನಗತ್ಯವಾಗಿ ಅಲೆಸುತ್ತಿದ್ದಾರೆ ಎಂದು ನಾಗರಿಕರೊಬ್ಬರು ದೂರು ನೀಡಿದರು. ಆಧಾರರಹಿತವಾಗಿ ಆರೋಪ ಮಾಡಬೇಡಿ ಎಂದು ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದರು. ಆದರೆ ಸದರಿ ವ್ಯಕ್ತಿ ತಮ ಆರೋಪವನ್ನು ಪುನರುಚ್ಚರಿಸಿದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಡಿ.ಕೆ.ಶಿವಕುಮಾರ್‌ ಪ್ರಕಟಿಸಿದರು.

ವಿಜಿನಾಪುರ ಎನ್‌ಆರ್‌ ಬಡಾವಣೆಯ ವಿಘ್ನೇಶ್‌ ಎಂಬುವರು ತಾವು ಎಲ್ಲಾ ತೆರಿಗೆಗಳನ್ನು ಪಾವತಿಸಿ ಅನುಮತಿ ಪಡೆದು, ಮನೆ ನಿರ್ಮಿಸಲು ಮುಂದಾದಾಗ ನೆರೆಯ ಮಲ್ಲಿಕಾರ್ಜುನ ಎಂಬುವರು ಅಡ್ಡಿ ಪಡಿಸಿದ್ದಾರೆ. ಕಷ್ಟಪಟ್ಟು ಮನೆ ಪೂರ್ಣಗೊಳಿಸಿದ್ದೇನೆ. ಈಗ ಒಳಗೆ ಹೋಗಲು ಬಿಡುತ್ತಿಲ್ಲ, ರೌಡಿಗಳನ್ನು ಬಿಟ್ಟು ಬೆದರಿಸುತ್ತಿದ್ದಾರೆ. 10 ಲಕ್ಷ ರೂ.ಹಣ ನೀಡಬೇಕು. ಇಲ್ಲವಾದರೆ, ಡಿ.ಕೆ.ಶಿವಕುಮಾರ್‌ ನನಗೆ ಪರಿಚಿತರಿದ್ದು, ತೊಂದರೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ.

ಸಂಘಟನೆಯ ಹೆಸರು ಹೇಳಿ ನನ್ನನ್ನು ಬೆದರಿಸುವ ಪ್ರಯತ್ನಗಳಾಗುತ್ತಿವೆ ಎಂದು ಅಳುತ್ತಾ ವಿವರಿಸಿದರು. ಇಲ್ಲಿ ನಾಟಕ ಮಾಡಬೇಡ, ಪೊಲೀಸ್‌‍ ದೂರು ಕೊಡು ಯಾರೇ ಆದರೂ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು. ನಿಮ ಉಪಕಾರವನ್ನು ಮರೆಯುವುದಿಲ್ಲ, ನಮ ಮನೆಗೆ ನಿಮ ಹೆಸರಿಡುತ್ತೇನೆ ಎಂದು ವಿಘ್ನೇಶ್‌ ಹೇಳಿದರು.
ಕೆಆರ್‌ಪುರಂ ಸಂತೆಗೆ 250 ವರ್ಷಗಳ ಇತಿಹಾಸವಿದೆ. ಆದರ ಸೌಲಭ್ಯಗಳು ಇಲ್ಲ ಎಂದು ನಾಗರಿಕರೊಬ್ಬರು ದೂರಿದರು. ಸಂತೆ ಮೈದಾನದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಂದ ಸಂಚಾರ ದಟ್ಟಣೆಯಾಗುತ್ತಿದೆ ಎಂದು ಮಹಿಳೆಯೊಬ್ಬರು ಆಕ್ಷೇಪಿಸಿದರು. ಈ ಸಂತೆಯನ್ನು ಸ್ಥಳಾಂತರಿಸಬೇಕೆಂಬ ಬೇಡಿಕೆಯೂ ಕೇಳಿ ಬಂತು.

ಇಸ್ರೋದ ಮಾಜಿ ವಿಜ್ಞಾನಿ ಕೋದಂಡ ಎಂಬುವರು ಕಾವೇರಿ ನೀರಿನ ಸಮಸ್ಯೆ, ಅಸಮರ್ಪಕ ತಾಜ್ಯವಿಲೇವಾರಿ, ಕೆಆರ್‌ಪುರಂನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಮೆಲ್ಸೇತುವೆ ನಿರ್ಮಾಣ, ರಾತ್ರಿ ಪೊಲೀಸ್‌‍ ಗಸ್ತು ಹೆಚ್ಚಳ, ಸಿಸಿಟಿವಿ ನಿಗಾವಣೆ, ಹೊಸಕೋಟೆ ಮಾರ್ಗಕ್ಕೆ ಕೆಆರ್‌ಪುರಂನಿಂದ ಮೆಟ್ರೋ ಸಂಪರ್ಕ ಸೇರಿದಂತೆ ಹಲವಾರು ಸಮಸ್ಯೆ ಹಾಗೂ ಬೇಡಿಕೆಗಳನ್ನು ಮುಂದಿಟ್ಟರು.
ಚಂದ್ರಮ ಎಂಬ ಮಹಿಳೆ ನಾವು ಕಷ್ಟಪಟ್ಟು ನಿವೇಶನ ಖರೀದಿಸಿದ್ದೇವೆ. ಈಗ ನಮ ನಿವೇಶನಕ್ಕೆ ಹೋಗಲು ರಸ್ತೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಭೂ ಮಾಲಿಕರು ನಮ ನೆರವಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು. ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ, ರಸ್ತೆಗಳಲ್ಲೂ ಸರ್ಕಾರಿ ಆಸ್ತಿ ಎಂದು ಘೋಷಿಸುವುದಾಗಿ ಪ್ರಕಟಿಸಿದರು.

ಮತ್ತೊಬ್ಬ ಮಹಿಳೆ ಮೈಸೂರಿನಲ್ಲಿ 10 ದಿನಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿ, ರೇಪಿಸ್ಟ್‌ಗಳಿಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಮಾತನಾಡುವಂತೆ ಡಿ.ಕೆ.ಶಿವಕುಮಾರ್‌ ಸಲಹೆ ನೀಡಿದರು. ಬೆಂಗಳೂರು, ಮೈಸೂರು ಸೇರಿ ಎಲ್ಲಾ ಕಡೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ, ಅತ್ಯಾಚಾರಗಳಾಗುತ್ತಿವೆ. ರಕ್ಷಣೆ ಕೊಡಿ ಎಂದು ಆವೇಶ ಭರಿತರಾಗಿ ಮಾತನಾಡಿದರು.
ಕೆಆರ್‌ಪುರಂನ ಸ್ಕೈ ವಾಕ್‌ಗೆ ಎಲಿವೇಟರ್‌ ಅಳವಡಿಸುವಂತೆ ಬೇಡಿಕೆ ಕೇಳಿ ಬಂತು. ನಾಗರಿಕ ಸೌಲಭ್ಯ ಕೊರತೆ ಹಾಗೂ ಭ್ರಷ್ಟಾಚಾರದ ಬಗ್ಗೆ ಜನ ಸಾಮಾನ್ಯರು ಮುಲಾಜಿಲ್ಲದೆ ಮಾತನಾಡಿದರು.

ಬಳಿಕ ಡಿ.ಕೆ.ಶಿವಕುಮಾರ್‌ ಬೆಂಗಳೂರಿನಲ್ಲಿ 5 ಪಾಲಿಕೆಗಳನ್ನು ನಿರ್ಮಿಸುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ. ಕೆಆರ್‌ಪುರಂ ಭಾಗದ ಪೂರ್ವ ಪಾಲಿಕೆ ಬೆಂಗಳೂರಿನಲ್ಲೇ ಅತೀ ಶ್ರೀಮಂತ ಸಂಸ್ಥೆ. ಇಲ್ಲಿಂದಲೇ ಒಟ್ಟು 6 ಸಾವಿರ ಕೋಟಿ ತೆರಿಗೆ ಬರುತ್ತಿದೆ, ಅದರಲ್ಲಿ ಪೂರ್ವ ಪಾಲಿಕೆಗೆ 1600 ಕೋಟಿ ರೂ. ಗಳನ್ನು ಖರ್ಚು ಮಾಡಲು ಉಳಿಸಲಾಗುತ್ತಿದೆ ಎಂದರು.

ಈ ಮೊದಲು ಇಲ್ಲಿನ ತೆರಿಗೆಯನ್ನು ಬೇರೆ ಬೇರೆ ಪ್ರದೇಶಗಳಿಗೆ ಹಂಚಲಾಗುತ್ತಿತ್ತು. ಹೆಚ್ಚು ತೆರಿಗೆ ಪಾವತಿಸುವ ಈ ಭಾಗದ ಜನರಿಗೆ ಉತ್ತಮ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ಒದಗಿಸಲಾಗುವುದು. ಸದ್ಯಕ್ಕೆ 50 ವಾರ್ಡ್‌ಗಳಿದ್ದು ಹಂತಹಂತವಾಗಿ ಇನ್ನಷ್ಟು ಪ್ರದೇಶಗಳನ್ನು ಸೇರ್ಪಡೆ ಮಾಡುವುದಾಗಿ ತಿಳಿಸಿದರು.
ಪಾಲಿಕೆ ಸದಸ್ಯರಿಗೆ ಅನುದಾನವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಇಲ್ಲಿ ಸಮಸ್ಯೆ ಹೇಳಿಕೊಳ್ಳಲಾಗದಿದ್ದವರು 1533 ಸಂಖ್ಯೆ ಸಹಾಯವಾಣಿಗೆ ಕರೆ ಮಾಡಿ, ಸಮಸ್ಯೆಗಳನ್ನು ನೋಂದಾಯಿಸಬಹುದು ಎಂದು ಹೇಳಿದರು.

ಬಿ ಖಾತೆಯಿಂದ ಎ ಖಾತಾ ಪರಿವರ್ತನಾ ಅಭಿಯಾನವನ್ನು ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು. ನಗರದಲ್ಲಿ 30 ಸಾವಿರ ಫುಟ್‌ಪಾತ್‌ ವ್ಯಾಪಾರಿಗಳಿದ್ದು, ಅವರಿಗೆ ತಳ್ಳುವ ಗಾಡಿ ಹಾಗೂ ವಾಹನ ನೀಡಲಾಗುತ್ತದೆ ಎಂದರು.

ಸುಪ್ರೀಂಕೋರ್ಟ್‌ನ ಮಾರ್ಗದರ್ಶನ ಪ್ರಕಾರ ಒತ್ತುವರಿಯನ್ನು ನಿರ್ಧಾಕ್ಷಿಣ್ಯವಾಗಿ ತೆರವು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಮನೆ ನಿರ್ಮಿಸುವಾಗ ಸುತ್ತಮುತ್ತಲೂ ಗಾಳಿ, ಬೆಳಕಿಗೆ ಜಾಗ ಬಿಡಬೇಕು. ಈ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗುವುದು. ರಸ್ತೆ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಾಣ ಮಾಡಿದರೆ ಮುಲಾಜಿಲ್ಲದೆ ತೆರವು ಮಾಡುತ್ತೇವೆ ಎಂದು ಎಚ್ಚರಿಸಿದರು.

ಮಹದೇವಪುರ, ಕೆಆರ್‌ಪುರಂಗಳಲ್ಲಿ ಹೊಸ ಪಾಲಿಕೆ ಕಚೇರಿಗಳನ್ನು ನಿರ್ಮಿಸಲಾಗುವುದು. ಮಾಹಿತಿ ತಂತ್ರಜ್ಞಾನ ಕಂಪನಿಗಳ ಜೊತೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಮತ್ತೊಂದು ಸಭೆ ನಡೆಸಲಾಗುವುದು. ಆ ದಿನ ಕೈಗಾರಿಕೆ ಐಟಿಬಿಟಿ ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿ

ವಿಜಯಪುರ,ಅ.18-ದರೋಡೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ರೌಡಿಯನ್ನು ಬಂಧಿಸಲು ತೆರಳಿದ್ದ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದಾಗ ಆತರಕ್ಷಣೆಗಾಗಿ ಇನ್ಸ್ ಪೆಕ್ಟರ್‌ ಹಾರಿಸಿದ ಗುಂಡು ತಗುಲಿ ರೌಡಿ ಮೃತಪಟ್ಟಿ ರುವ ಘಟನೆ ಇಂದು ಬೆಳಿಗ್ಗೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಬಳಿ ನಡೆದಿದೆ.

ಯುನೀಶ್‌ ಅಕ್ಲಾಸ್‌‍ ಪಟೇಲ್‌ (35) ಪೊಲೀಸರ ಗುಂಡಿಗೆ ಬಲಿ ಯಾದ ಕುಖ್ಯಾತ ರೌಡಿ.ಈತ ಗಾಂಧಿ ಚೌಕ್‌ ಪೊಲೀಸ್‌‍ ಠಾಣೆಯ ರೌಡಿ ಶೀಟರ್‌. ವಿಜಯಪುರದಲ್ಲಿ ವಾಸವಾಗಿದ್ದ ಈತ ಇತ್ತೀಚೆಗೆ ಆಲಮೇಲ ತಾಲೂಕಿನ ದೇವಣಗಾಂವ್‌ ಗ್ರಾಮಕ್ಕೆ ಬಂದು ವಾಸವಾಗಿದ್ದನು. ನಗರದ ಗಾಂಧಿ ಚೌಕ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಚಾಕು ತೋರಿಸಿ ವ್ಯಕ್ತಿಯೊಬ್ಬರಿಂದ 25 ಸಾವಿರ ಹಣ ದರೋಡೆ ಮಾಡಿ ನಂತರ ಅವರ ಸ್ಕೂಟಿಯನ್ನು ಕಿತ್ತುಕೊಂಡು ರೌಡಿ ಯುನೀಶ್‌ ಪರಾರಿಯಾಗಿದ್ದನು.

ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇಂದು ಮುಂಜಾನೆ 5 ಗಂಟೆ ಸುಮಾರಿನಲ್ಲಿ ಆರೋಪಿ ಆಲಮೇಲ ತಾಲೂಕಿನ ದೇವಣಗಾಂವ್‌ ಗ್ರಾಮದತ್ತ ದರೋಡೆ ಮಾಡಿದ್ದ ಸ್ಕೂಟಿಯಲ್ಲಿ ತೆರಳುತ್ತಿರುವ ಬಗ್ಗೆ ಪೊಲೀಸರ ತಂಡಕ್ಕೆ ಮಾಹಿತಿ ಸಿಕ್ಕಿದೆ.

ತಕ್ಷಣ ಪೊಲೀಸರು ಬಂಧನಕ್ಕೆ ತೆರಳಿದಾಗ ಸಿಂದಗಿ ತಾಲೂಕಿನ ರಾಂಪುರ್‌ ಬಳಿ ಆರೋಪಿ ಯುನೀಶ್‌ ಪೊಲೀಸರನ್ನು ನೋಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.ತಕ್ಷಣ ಆತನನ್ನು ಹಿಡಿಯಲು ಬೆನ್ನಟ್ಟಿದ ಇಬ್ಬರು ಕಾನ್ಸ್ ಟೇಬಲ್‌ಗಳು ಹಾಗೂ ಇನ್ಸ್ ಪೆಕ್ಟರ್‌ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.

ಆ ಸಂದರ್ಭದಲ್ಲಿ ಆಯತಪ್ಪಿ ಇನ್‌್ಸಪೆಕ್ಟರ್‌ ಪ್ರದೀಪ್‌ ತಳಕೇರಿ ಅವರು ಕೆಳಗೆ ಬಿದ್ದಿದ್ದಾರೆ. ಆ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದಾಗ ಇನ್ಸ್ ಪೆಕ್ಟರ್‌ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದ್ದಾರೆ. ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಮುಂದಾದಾಗ ಆತರಕ್ಷಣೆಗಾಗಿ ಇನ್ಸ್ ಪೆಕ್ಟರ್‌ ಪ್ರದೀಪ್‌ ಅವರು ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದು ಬಿದ್ದಿದ್ದಾನೆ.

ತಕ್ಷಣ ಆರೋಪಿಯನ್ನು ಕರೆದೊಯ್ದು ಸಿಂದಗಿ ತಾಲೂಕು ಅಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆನೀಡಿ ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆೆ ಆರೋಪಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೌಡಿ ಯುನೀಶ್‌ ಮೇಲೆ 2 ಕೊಲೆ ಪ್ರಕರಣ, 3 ಕೊಲೆ ಯತ್ನ, ಕಳ್ಳತನ,ದರೋಡೆ ಸೇರಿದಂತೆ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಘಟನೆ ಕುರಿತು ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದರು.

ಕೇವಲ ಆರ್‌ಎಸ್‌‍ಎಸ್‌‍ ಗುರಿಯಾಗಿಸಿ ನಿರ್ಧಾರ ತೆಗೆದುಕೊಂಡಿಲ್ಲ : ಸಿಎಂ ಸಿದ್ದು ಸ್ಪಷ್ಟನೆ

ಮೈಸೂರು, ಅ.18- ರಾಜ್ಯ ಸರ್ಕಾರ ಆರ್‌ಎಸ್‌‍ಎಸ್‌‍ ಸಂಘಟನೆಯನ್ನು ಮಾತ್ರ ಗುರಿಯಾಗಿಟ್ಟುಕೊಂಡು ಯಾವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಬದಲಾಗಿ ಯಾವುದೇ ಖಾಸಗಿ ಸಂಘ ಸಂಸ್ಥೆಗಳು ಅನುಮತಿ ಪಡೆಯದೇ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಚಟುವಟಿಕೆ ನಡೆಸಬಾರದು ಎಂದು ನಿರ್ಬಂಧಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಇಂತಹ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಆಗ ಏಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು ಪ್ರಶ್ನಿಸಿದರು.

ನಾವು ಸಂಘ ಪರಿವಾರದ ಚಟುವಟಿಕೆಗಳನ್ನು ಮಾತ್ರ ನಿರ್ಬಂಧಿಸಿದ್ದರೆ, ಆಗ ಪ್ರಶ್ನೆ ಮಾಡಬಹುದಿತ್ತು. ಯಾವುದೇ ಸಂಘಟನೆಗಳಾಗಿದ್ದರೂ ಅನುಮತಿ ಪಡೆಯದೇ ಅನಧಿಕೃತವಾಗಿ ಚಟುವಟಿಕೆ ನಡೆಸಬಾರದು ಎಂದು ನಿರ್ಣಯಿಸಲಾಗಿದೆ. ಇದರಲ್ಲಿ ವಿರೋಧ ಮಾಡುವಂಥಾದ್ದು ಏನಿದೆ? ಎಂದರು.

ಬಿಜೆಪಿಯವರಿಗೆ ಬಡವರ ಕೆಲಸ ಮಾಡಲು ಗೊತ್ತಿಲ್ಲ. ಸದಾಕಾಲ ರಾಜಕಾರಣವನ್ನೇ ಮಾಡುತ್ತಾರೆ. ಒಂದು ವೇಳೆ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದರೆ, ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.

ಮೈಸೂರಿನಲ್ಲಿ ಉದ್ಯೋಗ ಮೇಳ ನಡೆಸಿದಂತೆ ಇತರ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಉತ್ತರಿಸಿದರು. ಗುತ್ತಿಗೆದಾರರ ಸಂಘದಿಂದ ಮಾಡಲಾಗಿರುವ ಕಮಿಷನ್‌ ಆರೋಪಕ್ಕೆ ಸಂಬಂಧಪಟ್ಟ ಸಚಿವರೇ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್‌‍ಎಸ್‌‍ನ ಪಥ ಸಂಚಲನಕ್ಕೆ ಅನುಮತಿ ಕೇಳಿದ ವೇಳೆ ಗದ್ದಲವಾಗಿರುವ ಬಗ್ಗೆ ತಮಗೆ ಮಾಹಿತಿ ಇಲ್ಲ. ಹೆಚ್ಚಿನ ವಿವರಣೆ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಆರ್‌ಎಸ್‌‍ಎಸ್‌‍ ವಿರುದ್ಧ ಧ್ವನಿ ಎತ್ತಿರುವ ಸಚಿವ ಪ್ರಿಯಾಂಕ ಖರ್ಗೆಯನ್ನು ಒಬ್ಬಂಟಿ ಮಾಡಲಾಗಿದೆ : ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಅ.18- ಆರ್‌ಎಸ್‌‍ಎಸ್‌‍ ವಿರುದ್ಧ ಧ್ವನಿ ಎತ್ತಿರುವ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಒಬ್ಬಂಟಿಗರನ್ನಾಗಿ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದರು ಎನ್ನಲಾಗಿದೆ. ಸಂಘ ಪರಿವಾರ ವಿರುದ್ಧ ಹೋರಾಟ ನಡೆಸುವ ವಿಚಾರವಾಗಿ ಒಗ್ಗಟ್ಟು ಕಂಡು ಬರುತ್ತಿಲ್ಲ.

ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪತ್ರ ಆಧರಿಸಿ, ರಾಜ್ಯ ಸರ್ಕಾರ ಸಂಪುಟದಲ್ಲಿ ನಿರ್ಣಯಕೈಗೊಂಡಿದೆ. ಆದರೆ, ಪ್ರಿಯಾಂಕ್‌ ಮೇಲೆ ನಡೆಯುತ್ತಿರುವ ವೈಯಕ್ತಿಕ ದಾಳಿಗಳ ವಿಚಾರವಾಗಿ ಯಾವ ಸಚಿವರೂ ಬಾಯಿಬಿಡುತ್ತಿಲ್ಲ, ಸರ್ಕಾರ ಮೌನಕ್ಕೆ ಶರಣಾಗಿದೆ ಎಂಬ ಭಾವನೆ ಬರುತ್ತಿದೆ ಎಂದಿರುವುದಾಗಿ ತಿಳಿದು ಬಂದಿದೆ.

ಸಚಿವರಿಗೆ ಕರೆ ಮಾಡಿ, ಬೆದರಿಕೆ ಹಾಕಲಾಗುತ್ತಿದೆ. ಒಬ್ಬ ಸಚಿವರೂ ಕೂಡ ಇದನ್ನು ನೇರವಾಗಿ ಖಂಡಿಸಿಲ್ಲ. ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ ಎಂಬ ಆಕ್ಷೇಪವನ್ನು ಮಲ್ಲಿಕಾರ್ಜುನ್‌ ಖರ್ಗೆ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಬಾರದು, ಚುನಾವಣಾ ಪ್ರಣಾಳಿಕೆಗಳನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರಬೇಕು. ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕಾರ್ಯಕರ್ತರನ್ನು ಪರಿಗಣಿಸಬೇಕು. ಗುತ್ತಿಗೆದಾರರ ಕಮಿಷನ್‌ ಆರೋಪದ ಬಗ್ಗೆ ಸ್ಪಷ್ಟವಾದ ಸಮಜಾಯಿಷಿ ನೀಡಬೇಕು ಎಂದು ಅಧ್ಯಕ್ಷರು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಹಲವು ಬಾರಿ ಸೂಚಿಸಿದ್ದರೂ ಕೂಡ, ಪದೇಪದೇ ಕೆಲವರು ಮಾತನಾಡಿ ಗೊಂದಲಮೂಡಿಸುತ್ತಿದ್ದಾರೆ. ಅಂಥವರಿಗೆ ಕೇವಲ ನೋಟೀಸ್‌‍ ಕೊಟ್ಟು, ನೆಪ ಮಾತ್ರದ ವಿವರಣೆ ಪಡೆಯುವ ಬದಲಾಗಿ ಶಿಸ್ತು ಕ್ರಮ ಜಾರಿಗೆ ತನ್ನಿ ಎಂದು ಅಧ್ಯಕ್ಷರು ಆದೇಶಿಸಿದ್ದಾರೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್‌ ಮತ್ತು ಮಲ್ಲಿಕಾರ್ಜುನ್‌ ಖರ್ಗೆ ಅವರ ಭೇಟಿ ರಾಜಕಾರಣದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ. ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ತೆರೆ ಮರೆಯ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್‌ ಖರ್ಗೆಯವರನ್ನು ಭೇಟಿಮಾಡಿದ್ದಾರೆ.10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಖರ್ಗೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು.ಖರ್ಗೆ ಅವರು ಗುಣಮುಖರಾಗಿ ಮನೆಗೆ ಮರಳಿದ ಬಳಿಕವೂ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿರಲಿಲ್ಲ. ಇಂದಿನ ಭೇಟಿ ನಾನಾ ರೀತಿಯ ಅನುಮಾನಗಳನ್ನು ಹುಟ್ಟುಹಾಕಿತ್ತು.

75 ಗಂಟೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿಸಿದ 300ಕ್ಕೂ ಹೆಚ್ಚು ಮಾವೋವಾದಿಗಳು, ನಕ್ಸಲ್‌ ಮುಕ್ತ ಭಾರತ ; ಪ್ರಧಾನಿ ಮೋದಿ

ನವದೆಹಲಿ,ಅ.18- ಕೆಂಪು ಭಯೋತ್ಪಾದನೆಯಲ್ಲಿ ತೊಡಗಿರುವ ಮಾವೋವಾದಿ ನಕ್ಸಲರನ್ನು ನಿರ್ಮೂಲನೆ ಮಾಡಲು ನಮ್ಮ ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ನಕ್ಸಲಿಸಂ ದೇಶದ ವಿರುದ್ಧದ ಪಾಪ ಎಂದು ಗುಡುಗಿರುವ ಅವರು ಸರ್ಕಾರದ ಕ್ರಮಗಳಿಂದ ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆ 125 ರಿಂದ 11 ಕ್ಕೆ ಇಳಿದಿದ್ದು, 300ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಹೇಳಿದ್ದಾರೆ.

ಮಾವೋವಾದಿ ಉಗ್ರವಾದವು ಭಾರತದ ಯುವಕರಿಗೆ ಅನ್ಯಾಯ ಮಾಡಿದೆ ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವುದೇ ತಮ್ಮ ಸರ್ಕಾರದ ದೃಢಸಂಕಲ್ಪ ಎಂದು ಹೇಳಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆಯ ವಿರುದ್ಧ ಭಾರತ ಬಲವಾದ ನಿಲುವನ್ನು ತೆಗೆದುಕೊಂಡಿದೆ.

ಪಹಲ್ಗಾಮ್‌ನಲ್ಲಿ ಭಾರತೀಯರನ್ನು ಹತ್ಯೆ ಮಾಡಿದ್ದಕ್ಕಾಗಿ ಪಾಕಿಸ್ತಾನ ಹಾಗೂ ಭಯೋತ್ಪಾದಕರಿಗೆ ಆಪರೇಷನ್‌ ಸಿಂಧೂರ್‌ ಮೂಲಕ ಉತ್ತರ ನೀಡಿದ್ದೇವೆ. ದೇಶವು ಗಡಿಯಾಚೆಗಿನ ಬೆದರಿಕೆಗಳನ್ನು ನಾಶ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಭಾರತವು ಈಗ ಚಿಪ್‌ಗಳಿಂದ ಹಿಡಿದು ಹಡಗುಗಳವರೆಗೆ ಎಲ್ಲವನ್ನೂ ತಯಾರಿಸುತ್ತಿದೆ. ಸ್ವಾವಲಂಬನೆ ಮೂಲಕ ಭಾರತ ಪ್ರಗತಿ ಸಾಧಿಸುತ್ತಿದೆ. ಜತೆಗೆ ಈಗಾಗಲೇ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ರಾಷ್ಟ್ರಗಳಲ್ಲಿ ಒಂದಾಗಿದೆ. ಇದರ ನಡುವೆ ಇಡೀ ಮಾವೋವಾದಿ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ ಎಂದು ಹೇಳಿದರು.

ಇದೇ ವೇಳೆ, ಕಾಂಗ್ರೆಸ್‌‍ ವಿರುದ್ಧವು ಕೂಡ ಟೀಕೆ ಮಾಡಿದರು, ಹಿಂದಿನ ಯುಪಿಎ ಸರ್ಕಾರವೂ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿದೆ. ವಿದೇಶಿ ಶಕ್ತಿಗಳ ಜತೆಗೆ ಭಾರತದ ವಿರುದ್ಧ ಕೈಜೋಡಿಸಿತ್ತು. ಕಾಂಗ್ರೆಸ್‌‍ ಬಲವಂತದ ರಾಜಕೀಯವನ್ನು ಮಾಡುತ್ತಿತ್ತು. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಹಾನಿಯಾಗಿದೆ ಎಂದು ಹೇಳಿದರು.

ಈಗಾಗಲೇ 75 ಗಂಟೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಸರ್ಕಾರ ನೀಡಿದ ಅಂತಿಮ ಸೂಚನೆಯ ನಂತರ 308 ಕ್ಕೂ ಹೆಚ್ಚು ಕಟ್ಟಾ ಮಾವೋವಾದಿ ಕಾರ್ಯಕರ್ತರು ಶರಣಾಗತಿಯಾಗಿದ್ದಾರೆ. ಇನ್ನು ದೇಶದಲ್ಲಿರುವ ಅನೇಕ ಜಿಲ್ಲೆಗಳು ಮಾವೋವಾದಿ ಪೀಡಿತದಿಂದ ಮುಕ್ತವಾಗುತ್ತಿದೆ. ಸುಮಾರು 11 ವರ್ಷಗಳ ಹಿಂದೆ 125 ಜಿಲ್ಲೆಗಳು ಮಾವೋವಾದಿ ಹಿಂಸಾಚಾರಕ್ಕೆ ಒಳಗಾಗಿತ್ತು. ಆದರೆ ಇದೀಗ ಇದು 11 ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.

ದೀಪಾವಳಿಗೆ ಬೆಂಗಳೂರಿನಿಂದ ಊರಿಗೆ ತೆರಳುತ್ತಿದ್ದವರಿಗೆ ಶಾಕ್, ಖಾಸಗಿ ಬಸ್‌‍ ಮಾಲೀಕರಿಂದ ಮನಸೋಯಿಚ್ಛೆ ಸುಲಿಗೆ

ಬೆಂಗಳೂರು,ಅ/19- ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದ ಖಾಸಗಿ ಬಸ್‌‍ ಮಾಲೀಕರು, ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರ ಭಾಗಗಳಿಂದ ದೀಪಾವಳಿ ಹಬ್ಬದ ನಿಮಿತ್ತ ತಮ ತಮ್ಮ ಊರುಗಳಿಗೆ ಹೊರಟಿರುವವರಿಗೆ ದುಪ್ಪಟ್ಟು ದರ ವಸೂಲಿ ಮಾಡುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

ಈ ಮಧ್ಯೆ ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್‌‍ಆರ್‌ಟಿಸಿ 2 ಸಾವಿರ ಹೆಚ್ಚುವರಿ ಬಸ್‌‍ಗಳನ್ನು ನಿಯೋಜನೆ ಮಾಡಿದೆ. ಆದಾಗ್ಯೂ ಅವುಗಳಲ್ಲೂ ಬಹುತೇಕ ಸೀಟ್‌ಗಳನ್ನು ಮುಂಗಡ ಕಾಯ್ದಿರಿಸಲಾಗಿದೆ. ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಖಾಸಗಿ ಬಸ್‌‍ ಮಾಲೀಕರು, ಹಬ್ಬಕ್ಕೆ ಎರಡೂರು ದಿನಗಳ ರಜೆ ಇದೆ ಎಂದು ಮನೆ ಕಡೆ ಹೋಗಲು ಸಜ್ಜಾದವರಿಗೆ ಟಿಕೆಟ್‌ ದರ ಏರಿಸಿ ಶಾಕ್‌ ನೀಡಿದ್ದಾರೆ.

ಖಾಸಗಿ ಬಸ್‌‍ಗಳು ಟಿಕೆಟ್‌ ದರವನ್ನು ಶೇ.50-60ರಷ್ಟು ಹೆಚ್ಚಿಸಿ, ಪ್ರಯಾಣಿಕರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿವೆ. ರೈಲು, ಸರಕಾರಿ ಬಸ್‌‍ಗಳಲ್ಲಿ ಹೋಗಲು ಸಾಧ್ಯವಾಗದವರು ಖಾಸಗಿ ಬಸ್‌‍ಗಳಲ್ಲಿ ದುಪ್ಪಟ್ಟು ದರ ಕೊಟ್ಟು ಪ್ರಯಾಣ ಮಾಡುವ ಅನಿವಾರ್ಯತೆ ಇದೆ.

ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ 500-650 ರೂ.ನಷ್ಟಿದ್ದ ಖಾಸಗಿ ಬಸ್‌‍ಗಳ ದರ ಈಗ 1000 ರೂ.ನಿಂದ 2000 ರೂ.ವರೆಗೆ ಏರಿಕೆಯಾಗಿದೆ. ಮಂಗಳೂರಿಗೆ 650 ರೂ.ನಿಂದ 1000 ರೂ.ವರೆಗೆ ಇದ್ದ ದರ 2200ವರೆಗೆ ತಲುಪಿದೆ. ಬೆಂಗಳೂರಿನಿಂದ ಬೆಳಗಾವಿಗೆ ಸಾಮಾನ್ಯ ದಿನಗಳಲ್ಲಿ 920 ರೂ.ನಿಂದ 1500 ರೂ.ವರೆಗಿದ್ದ ದರ 4000 ರೂ.ವರೆಗೆ ಏರಿಕೆ ಮಾಡಲಾಗಿದೆ.

ಪ್ರತಿ ವರ್ಷ ಹಬ್ಬಕ್ಕೆಂದು ಊರಿನತ್ತ ಮುಖಮಾಡುವವರಿಂದ ಖಾಸಗಿ ಬಸ್‌‍ಗಳು ಹಣ ಸುಲಿಗೆ ಮಾಡುತ್ತಿವೆ. ತನಗೂ ದುಪ್ಪಟ್ಟು ದರ ಏರಿಕೆಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಮಾಡಿದಂತೆಯೇ ಈ ಬಾರಿಯೂ ದರ ಏರಿಕೆ ಮಾಡಿದ್ದು, ದುಪ್ಪಟ್ಟಾಗಿಲ್ಲ. ಶೇ.50ರಿಂದ 60 ರಷ್ಟು ಮಾತ್ರ ಏರಿಕೆ ಮಾಡಿದ್ದೇವೆ. ರಾಜ್ಯ ಸರಕಾರ ಈ ಬಾರಿಯೂ ಬಜೆಟ್‌ನಲ್ಲಿ ಖಾಸಗಿ ಬಸ್‌‍ನವರಿಗೆ ಒಂದು ರೂಪಾಯಿ ಕೂಡ ಮೀಸಲಿಟ್ಟಿಲ್ಲ. ಶಕ್ತಿ ಯೋಜನೆ ಜಾರಿಯಾದಾಗಿಂದ ಖಾಸಗಿ ಬಸ್‌‍ ಮಾಲೀಕರು ದೊಡ್ಡ ನಷ್ಟ ಎದುರಿಸುತ್ತಿದ್ದಾರೆ ಎಂದು ಖಾಸಗಿ ಬಸ್‌‍ ಮಾಲೀಕರು ಹೇಳಿದ್ದಾರೆ.

ಹಲವಾರು ಮಾರ್ಗಗಳ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿರುವುದರಿಂದ, ಅನೇಕ ಪ್ರಯಾಣಿಕರು ಕನಿಷ್ಠಪಕ್ಷ ಈ ದೀಪಾವಳಿಗೆ ಉಳಿದ ಸಮಯಕ್ಕಿಂತ ಶೇ.60ರಷ್ಟು ಹೆಚ್ಚು ಟಿಕೆಟ್‌ ಬೆಲೆ ನೀಡಿ ಹೋಗಬೇಕಾಗುತ್ತಿದೆ.

ಉದಾಹರಣೆಗೆ, ಬೆಂಗಳೂರಿನಿಂದ ಹೈದರಾಬಾದ್‌ಗೆ ಸಾಮಾನ್ಯವಾಗಿ 1,200 ರೂ. ಬೆಲೆಯ ಎಸಿ ಸ್ಲೀಪರ್‌ ಟಿಕೆಟ್‌ ಈಗ 1,800 ರಿಂದ 2,000 ರೂ.ಗಳ ನಡುವೆ ನಿಗದಿಪಡಿಸಲಾಗಿದೆ. ಬೆಂಗಳೂರು-ಚೆನ್ನೈ ಮಾರ್ಗವು ಸಾಮಾನ್ಯವಾಗಿ 800 ರಿಂದ 900 ರೂ.ಗಳವರೆಗೆ ಇದ್ದು, 1,400 ರಿಂದ 1,500 ರೂ.ಗಳಿಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ 1,100 ರೂ. ಬೆಲೆಯ ಬೆಂಗಳೂರು-ಬೆಳಗಾವಿ ಟಿಕೆಟ್‌ ಈಗ 1,700 ರೂ.ಗಳಷ್ಟಿದೆ.

ಬೆಂಗಳೂರಿನಿಂದ ಮೈಸೂರಿಗೆ ಎಸಿ ಅಲ್ಲದ ಸ್ಲೀಪರ್‌ ಸೀಟು ಬೆಲೆ ಸುಮಾರು 1,000 ರೂ.ಗಳಷ್ಟಿದೆ.ಬೆಂಗಳೂರು-ಮಂಗಳೂರಿಗೆ, ಎಸಿ ಅಲ್ಲದ ಸ್ಲೀಪರ್ಗಳ ದರಗಳು 1,300 ರೂ.ಗಳಾಗಿದ್ದರೆ, ಎಸಿ ಸ್ಲೀಪರ್‌ಗಳ ದರಗಳು ಸುಮಾರು 2,500 ರೂ.ಗಳಷ್ಟಿವೆ.

ಖಾಸಗಿ ನಿರ್ವಾಹಕರು ಕೋಟಿಗಟ್ಟಲೆ ಹೂಡಿಕೆ ಮಾಡಿ ಉದ್ಯೋಗ ಒದಗಿಸುತ್ತಾರೆ. ಆದರೆ ಸರ್ಕಾರದ ಬೆಂಬಲ ಪಡೆಯುವುದಿಲ್ಲ. ಹಬ್ಬಗಳ ಸಮಯದಲ್ಲಿ ಶುಲ್ಕ ಹೆಚ್ಚಳಕ್ಕೆ ನಮನ್ನು ದೂಷಿಸಲಾಗುತ್ತದೆ, ಇದು ನಮಗೆ ಲಾಭ ಗಳಿಸಲು ಇರುವ ಏಕೈಕ ಸಮಯ. ಕೆಎಸ್‌‍ಆರ್ಟಿಸಿ ಕೂಡ ಫ್ಲೆಕ್ಸಿ-ಫೇರ್‌ ವ್ಯವಸ್ಥೆಯನ್ನು ಅನುಸರಿಸುತ್ತದೆ. ಶಕ್ತಿಯೋಜನೆಯಡಿ ಮರುಪಾವತಿ ಪಡೆಯುತ್ತದೆ. ಆದರೆ ನಮಗೆ ಏನೂ ಸಿಗುವುದಿಲ್ಲ. ತೆರಿಗೆಗಳನ್ನು ಮನ್ನಾ ಮಾಡಿದರೆ, ನಾವು ಪ್ರತಿ ಸೀಟಿಗೆ 50ರಿಂದ 100 ರೂ.ಗಳಷ್ಟು ಕಡಿಮೆ ಶುಲ್ಕ ವಿಧಿಸಬಹುದು ಎಂಬುದು ಅವರ ಅಳಲು.

ಸೋಮವಾರ ಹಾಗೂ ಬುಧವಾರ ರಜೆ ಇರುವ ಕಾರಣ ಬಹತೇಕರು ಶುಕ್ರವಾರವೇ ಊರಿಗೆ ತೆರಳಲು ಜನರು ಮುಂದಾಗಿದ್ದರು. ಆದರೆ ಖಾಸಗಿ ಬಸ್‌‍ಗಳಲ್ಲಿ ಟಿಕೆಟ್‌ ದರ ದುಪ್ಪಟ್ಟು ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮರ್ಥನೆ:
ಹಬ್ಬಗಳ ಸೀಸನ್‌ನಲ್ಲಿ ಟಿಕೆಟ್‌ ದರ ಏರಿಕೆಯನ್ನು ಖಾಸಗಿ ಬಸ್‌‍ ಮಾಲೀಕರು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಖಾಸಗಿ ಬಸ್‌‍ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್‌ ಶರ್ಮ ಪ್ರತಿಕ್ರಿಯಿಸಿದ್ದು, ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಬಸ್‌‍ ಮಾಲೀಕರು ಬೀದಿಗೆ ಬಂದಿದ್ದೇವೆ. ಮೊದಲು ಶಕ್ತಿ ಯೋಜನೆಯನ್ನು ನಿಲ್ಲಿಸಿ. ನಾವು ಮಾತ್ರ ಅಲ್ಲ ಕೆಎಸ್‌‍ಆರ್‌ಟಿಸಿ ಬಸ್ಸಿನವರು ಕೂಡ ಟಿಕೆಟ್‌ ದರ ಹೆಚ್ಚಳ ಮಾಡುತ್ತಾರೆ. ಇದನ್ನು ಬಂಡವಾಳ ಮಾಡಿಕೊಳ್ಳುವ ಆರ್‌ಟಿಒ ಅಧಿಕಾರಿಗಳು, ಸುಳ್ಳು ಕೇಸ್‌‍ಗಳನ್ನು ದಾಖಲಿಸಿ ನಮಗೆ ತೊಂದರೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ಬಸ್ಸುಗಳ ಸಾಮಾನ್ಯ ಟಿಕೆಟ್‌ ದರ (ರೂ.ಗಳಲ್ಲಿ)
ಬೆಂಗಳೂರು-ಹಾವೇರಿ: 850-1000
ಬೆಂಗಳೂರು-ದಾವಣಗೆರೆ: 499-2000
ಬೆಂಗಳೂರು-ಕೋಲಾರ: 90-800
ಬೆಂಗಳೂರು-ಶಿವಮೊಗ್ಗ: 550-1000
ಬೆಂಗಳೂರು-ಹಾಸನ: 500-700
ಬೆಂಗಳೂರು-ಮಂಗಳೂರು: 630-1450
ಬೆಂಗಳೂರು-ಮೈಸೂರು: 250-900
ಬೆಂಗಳೂರು-ಹುಬ್ಬಳ್ಳಿ: 650-3000
ಬೆಂಗಳೂರು-ಧಾರವಾಡ: 650-1400
ಬೆಂಗಳೂರು-ಮಂಡ್ಯ: 184-400
ಖಾಸಗಿ ಬಸ್ಸುಗಳ ಈಗಿನ ಟಿಕೆಟ್‌ ದರ (ರೂ.ಗಳಲ್ಲಿ)
ಬೆಂಗಳೂರು-ಹಾವೇರಿ: 1200-4000
ಬೆಂಗಳೂರು-ದಾವಣಗೆರೆ: 1200-4000
ಬೆಂಗಳೂರು-ಕೋಲಾರ: 90-3000
ಬೆಂಗಳೂರು-ಶಿವಮೊಗ್ಗ: 950-4000
ಬೆಂಗಳೂರು-ಹಾಸನ: 1200-1500
ಬೆಂಗಳೂರು-ಮಂಗಳೂರು: 1200-2700
ಬೆಂಗಳೂರು-ಮೈಸೂರು: 250-2500
ಬೆಂಗಳೂರು-ಹುಬ್ಬಳ್ಳಿ: 1500-3800
ಬೆಂಗಳೂರು-ಧಾರವಾಡ:1400-3500