Home Blog Page 39

ಗುತ್ತಿಗೆದಾರರಿಂದ ಲಂಚಾರೋಪ : ಬಾಕಿ ಹಣ ಬಿಡುಗಡೆ ಮಾಡದಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ಸರ್ಕಾರಕ್ಕೆ ಎಚ್ಚರಿಕೆ

ಬೆಂಗಳೂರು,ಅ.17- ಹಲವಾರು ತಿಂಗಳಿನಿಂದ ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡದಿದ್ದರೆ ಕಾಂಗ್ರೆಸ್‌‍ ಶಾಸಕರ ಕಮೀಷನ್‌ ಲಂಚದ ಬೇಡಿಕೆಯ ಬಗ್ಗೆ ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ಹೋಗುವುದಾಗಿ ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಿದೆ.ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘವು, ಬಿಜೆಪಿ ಅವಧಿಗಿಂತ ಕಾಂಗ್ರೆಸ್‌‍ ಅವಧಿಯಲ್ಲೇ ಲಂಚದ ಬೇಡಿಕೆ ಹೆಚ್ಚಾಗಿದೆ ಎಂದು ಆರೋಪಿಸಿದ್ದರು.

ಇದೀಗ ಕಾಂಗ್ರೆಸ್‌‍ ಶಾಸಕರು ಶೇ.70ರಷ್ಟು ಕಮೀಷನ್‌ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಸರ್ಕಾರ ನಿಗದಿತ ಅವಧಿಯೊಳಗೆ ಸರ್ಕಾರ ಬಾಕಿ ಹಣವನ್ನು ಬಿಡುಗಡೆ ಮಾಡದಿದ್ದರೆ ಲಂಚದ ಬೇಡಿಕೆ ಇಟ್ಟಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ಇದರ ಬಗ್ಗೆ ನಮ ಬಳಿ ಎಲ್ಲವೂ ಇದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷಿ ನಡೆಸಿದ ಗುತ್ತಿಗೆದಾರರ ಸಂಘದ ಆರ್‌.ಮಂಜುನಾಥ್‌ ಅವರು ವಸತಿ ಸಚಿವ ಜಮೀರ್‌ ಅಹಮದ್‌ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ , ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌‍ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರಿಗೂ ದೂರು ನಿಡಿದ್ದೇವೆ. ಎಐಸಿಸಿ ಅಧ್ಯಕ್ಷ ಖರ್ಗೆ ಹಾಗೂ ರಾಹುಲ್‌ ಗಾಂಧಿಯವರು ಸಮಯ ನೀಡಿದರೆ ಭ್ರಷ್ಟಾಚಾರದ ದಾಖಲೆಗಳನ್ನು ಕೊಡಲು ಸಿದ್ದ ಎಂದು ಹೇಳಿದರು.

ಕಾಂಗ್ರೆಸ್‌‍ ಸರ್ಕಾರದಲ್ಲಿ ಲಂಚ ಇಲ್ಲ ಎಂದು ನಾನು ಹೇಳುವುದಿಲ್ಲ. ಜೊತೆಗೆ ಕಮೀಷನ್‌ ಇಲ್ಲ ಎಂದು ಹೇಳುವುದಿಲ್ಲ. ಎಷ್ಟು ಪರ್ಸೆಂಟೇಜ್‌ ಕಮೀಷನ್‌ ನಡೆಯುತ್ತಿದೆ ಎಂಬುದನ್ನು ಡಿಸೆಂಬರ್‌ನಲ್ಲಿ ಹೇಳುತ್ತೇವೆ. ಇದು 40% 60% 80% ಎಂಬುದನ್ನು ಮುಂದಿನ ದಿನದಲ್ಲಿ ಹೇಳುತ್ತೇವೆ ಕಾದು ನೋಡಿ ಎಂದು ಕುತೂಹಲ ಕೆರಳಿಸಿದರು.

ಈ ಹಿಂದೆ ಸಿಎಂ ಹಾಗೂ ಡಿಸಿಎಂಗೆ ಬರೆದ ಪತ್ರದಲ್ಲಿ ಹಣ ಬಿಡುಗಡೆ ಮಾಡುವ ವಿಷಯದಲ್ಲಿ ಕಮೀಷನ್‌ ದುಪ್ಪಟ್ಟಾಗಿದೆ ಎಂದು ಪತ್ರದಲ್ಲಿ ಹೇಳಿದ್ದೆವು. ಸಣ್ಣಪುಟ್ಟ ಗುತ್ತಿಗೆದಾರರು ವಿಷ ಕುಡಿಯುವ ಸ್ಥಿತಿಗೆ ಹೋಗಿದ್ದಾರೆ. ದಯವಿಟ್ಟು ಹಣ ಕೊಡಿಸಿ ಎಂದು ದುಂಬಾಲು ಬೀಳುತ್ತಿದ್ದಾರೆ. ನಮ ಕಷ್ಟವನ್ನು ಯಾರಿಗೆ ಹೇಳೋಣ ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿದ್ದ ಕಾಂಗ್ರೆಸ್‌‍ ನಂತರ ಅಧಿಕಾರಕ್ಕೇರಿತ್ತು. ನಾವು ಅಧಿಕಾರಕ್ಕೆ ಬಂದರೆ ಗುತ್ತಿಗೆದಾರ ಸಮಸ್ಯೆ ಈಡೇರಿಸುತ್ತೇವೆ ಎಂದು ಕಾಂಗ್ರೆಸ್‌‍ ನಾಯಕರು ಭರವಸೆ ನೀಡಿದ್ದರು. ಆದರೆ ಇನ್ನೂ ಬಾಕಿ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

52 ಸಾವಿರ ಕೋಟಿ ರೂಪಾಯಿ ಬಾಕಿ ಬರಬೇಕಿತ್ತು. ಕೆಲ ಇಲಾಖೆಗಳು ಹಣ ಬಿಡುಗಡೆ ಮಾಡಿದ್ದು, 33 ಸಾವಿರ ಕೋಟಿ ರೂ. ಬಾಕಿ ಇದೆ. ಇನ್ನೊಂದು ತಿಂಗಳು ಕಾಯುತ್ತೇವೆ. ಆಗಲೂ ಹಣ ಬಿಡುಗಡೆಯಾಗಿಲ್ಲ ಎಂದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಚ್ಚರಿಸಿದ್ದಾರೆ.ಎರಡು ವರ್ಷಗಳಿಂದ ಈ ಸರ್ಕಾರದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇವೆ. ಐದಾರು ಬಾರಿ ಸಿಎಂ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ರಾಜ್ಯ ಸರ್ಕಾರದಿಂದ 33 ಸಾವಿರ ಕೋಟಿ ಬಾಕಿ ಇದೆ. ಬಿಲ್‌ ಕ್ಲಿಯರ್‌ ಮಾಡದಿದ್ದರೆ, ಭ್ರಷ್ಟಾಚಾರದ ರಿಪೋರ್ಟ್‌ ಕಾರ್ಡ್‌ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗಡುವು: ಗುತ್ತಿಗೆಯಲ್ಲಿ ಪ್ಯಾಕೇಜ್‌ ಸಿಸ್ಟಮ್‌ ಕೈ ಬಿಡಬೇಕು ಎಂದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಡಿಸೆಂಬರ್‌ ವರೆಗೂ ಸರ್ಕಾರಕ್ಕೆ ಡೆಡ್‌ ಲೈನ್‌ ನೀಡೋದಾಗಿ ಹೇಳಿದ್ದಾರೆ. ನವೆಂಬರ್‌ ಒಳಗೆ ಎಲ್ಲಾ ಬಿಲ್‌ ಬಾಕಿ ಬಿಡುಗಡೆಯಾಗಿ ಪಾವತಿಯಾಗಬೇಕು. ಬಾಕಿ ಹಣ ಬಿಡುಗಡೆ ಮಾಡದಿದ್ರೆ ರಾಜ್ಯಪಾಲರು ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾಗೂ ದೂರು ನೀಡುವ ಎಚ್ಚರಿಕೆ ನೀಡಿದ್ದಾರೆ. ನಮ ಸಹನೆಯ ಕಟ್ಟೆ ಹೊಡೆದು ಹೋಗದಂತೆ ಸರ್ಕಾರ ನೋಡಿಕೊಳ್ಳಬೇಕು. ಕರ್ನಾಟಕದಲ್ಲಿ ಹೊರ ರಾಜ್ಯದ ಗುತ್ತಿಗೆದಾರರು ತುಂಬಿಕೊಂಡು ಬಿಟ್ಟಿದ್ದಾರೆ. ನಮವರು ಹೊರ ರಾಜ್ಯದ ಗುತ್ತಿಗೆದಾರರಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಿದ್ದಾರೆ ಎಂದಿದ್ದಾರೆ.

ಜಮೀರ್‌ ಖಾನ್‌ ಮೇಲೆ ಗಂಭೀರ ಆರೋಪ:
ಸಚಿವ ಜಮೀರ್‌ ಅಹಮದ್‌ ಖಾನ್‌ ಮೇಲೆ ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದು, ಭ್ರಷ್ಟ ನಿವೃತ್ತ ಇಂಜಿನಿಯರ್‌ರನ್ನು ಕರೆದುಕೊಂಡು ಬಂದು ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದಾರೆ. ಬಾಲರಾಜ್‌ ಎಂಬುವರನ್ನು ನೇಮಿಸಿ ಗೋಲಾಲ್‌ ಮಾಡುತ್ತಿದ್ದಾರೆ. ಆತನ ಮೇಲೆ ಭ್ರಷ್ಟಾಚಾರ ಆರೋಪವಿದ್ದು, ಜಮೀರ್‌ ಅಹಮದ್‌ ಅವರ ವಸತಿ ಇಲಾಖೆಯಲ್ಲಿ ಬ್ರಹಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ ಬಿ ಶೇಗಜಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಲೂ ಕಮಿಷನ್‌ ನಡೆಯುತ್ತಿದೆ. ಶಾಸಕರಿಗೆ ಹಂಚಿಕೆಯಾಗುವ ಅನುದಾನದಲ್ಲಿ ಕಮಿಷನ್‌ ಅನ್ನು ಟೆಂಡರ್‌ ಗೂ ಮುಂಚಿತವಾಗಿ 15 ರಿಂದ 20 ಪರ್ಸೆಂಟ್‌ ಕಮಿಷನ್‌ ಕೊಡಬೇಕು. ಇಲ್ಲವೆಂದರೆ ಗುತ್ತಿಗೆದಾರರಿಗೆ ಕೆಲಸ ಕೊಡುವುದಿಲ್ಲ. ಕೆಲ ಶಾಸಕರು ಇನ್ನೂ ಹೆಚ್ಚಾಗಿಯೇ ಕಮಿಷನ್‌ ತೆಗೆದುಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಗುತ್ತಿಗೆದಾರರಿಗೆ ಬಿಡುಗಡೆಯಾಗಬೇಕಿರುವ ಹಣ ಎಷ್ಟು?

  • ನೀರಾವರಿ ಇಲಾಖೆ- 12000 ಕೋಟಿ ರೂ.
  • ಪಿಆರ್‌ಡಿ ಇಲಾಖೆ- 3600 ಕೋಟಿ ರೂ.
  • ಸಣ್ಣ ನೀರಾವರಿ ಇಲಾಖೆ- 3200 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ- 2000 ಕೋಟಿ ರೂ.
  • ಮಹಾತ ಗಾಂಧಿ ಯೋಜನೆ- 1600 ಕೋಟಿ ರೂ.
  • ಹೌಸಿಂಗ್‌ ಇಲಾಖೆ 1200 ಕೋಟಿ ರೂ.
  • ಕಾರ್ಮಿಕ ಇಲಾಖೆ 800 ಕೋಟಿ ರೂ.

ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಗುತ್ತಿಗೆದಾರರ ಸಂಘಕ್ಕೆ ಸಿಎಂ ತಿರುಗೇಟು
ಕಾಂಗೆ್ರಸ್‌‍ ಸರ್ಕಾರದಲ್ಲೂ ಕಾಮಗಾರಿಗಳಿಗೆ ಕಮಿಷನ್‌ ಪಡೆಯಲಾಗುತ್ತಿದೆ ಎಂಬ ಆರೋಪ ಮಾಡುತ್ತಿರುವ ಗುತ್ತಿಗೆದಾರರ ಸಂಘದವರು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್‌ ಕಾಂಗ್ರೆಸ್‌‍ ಸರ್ಕಾರ ಕೂಡ ಕಮಿಷನ್‌ ಪಡೆಯುತ್ತಿದೆ ಎಂದು ಹೇಳಿರುವುದಕ್ಕೆ ಸಿಡಿಮಿಡಿ ವ್ಯಕ್ತಪಡಿಸಿದರು. ಅಂಥಹ ಆರೋಪಗಳಿದ್ದರೆ, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಿ, ಗುತ್ತಿಗೆದಾರರಿಂದ ಈ ರೀತಿಯ ಆರೋಪಗಳನ್ನು ಮಾಡಿಸಲಾಗುತ್ತಿದೆ ಎಂದು ಹೇಳಿದರು.
ಇನ್ಫೋಸಿಸ್‌‍ನ ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮಾಹಿತಿ ನೀಡದೆ ಇರುವುದು ಅವರಿಗೆ ಸೇರಿದ ವಿಷಯ. ರಾಜ್ಯ ಕಾಂಗ್ರೆಸ್‌‍ ಸರ್ಕಾರದ ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಮೇಲ್ಜಾತಿಯವರು ಫಲಾನುಭವಿಗಳಿಲ್ಲವೇ? ಎಂದು ಪ್ರಶ್ನಿಸಿದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಿಂದುಳಿದ ವರ್ಗಗಳಿಗೆ ಮಾತ್ರ ಸೀಮಿತವೆಂಬ ತಪ್ಪು ಕಲ್ಪನೆ ಮೂಡಿಸಬಾರದು, ಬಹುಶಃ ನಾರಾಯಣ ಮೂರ್ತಿಯವರಿಗೆ ಯಾರೋ ತಪ್ಪು ಮಾಹಿತಿ ನೀಡಿರಬಹುದು. ಇನ್ಫೋಸಿಸ್‌‍ನ ಸಂಸ್ಥಾಪಕ ನಾರಾಯಣ ಮೂರ್ತಿಯವರು ಬೃಹಸ್ಪತಿಯಲ್ಲ. ಅವರಿಗೆ ಸಮೀಕ್ಷೆಯ ಉದ್ದೇಶ ಅರ್ಥವಾಗದೆ ಇದ್ದರೆ ನಾವೇನೂ ಮಾಡಲಾಗುವುದಿಲ್ಲ ಎಂದರು.ಇದು ಹಿಂದುಳಿದ ವರ್ಗಗಳ ಸಮೀಕ್ಷೆಯಲ್ಲ. ರಾಜ್ಯದ 7 ಕೋಟಿ ಜನರ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪದೇಪದೇ ಜಾಹೀರಾತುಗಳ ಮೂಲಕ, ಸಚಿವರು ಹಾಗೂ ತಾವು ಹೇಳಿಕೆಗಳನ್ನು ನೀಡುವ ಮೂಲಕ ಈ ಬಗ್ಗೆ ಸ್ಪಷ್ಟಪಡಿಸಿದ್ದೇವೆ. ಹಾಗಿದ್ದರೂ ನಾರಾಯಣ ಮೂರ್ತಿಯಂಥವರು, ಸುಧಾಮೂರ್ತಿಯಂಥವರು ಹಿಂದುಳಿದವರ ಸಮೀಕ್ಷೆ ಎಂಬ ಭಾವನೆಯಲ್ಲಿದ್ದರೆ ಅದು ತಪ್ಪು ಎಂದರು.

ಕೇಂದ್ರ ಸರ್ಕಾರ ಜಾತಿ ಸಮೀಕ್ಷೆ ನಡೆಸಲಿದೆ. ಆಗ ಇವರು ಯಾವ ಉತ್ತರ ನೀಡುತ್ತಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.ಬಂಡವಾಳ ಹೂಡಿಕೆದಾರರು ತಮ ಇಷ್ಟವಾದ ಜಾಗಗಳಲ್ಲಿ ಉದ್ಯಮಗಳನ್ನು ಆರಂಭಿಸುತ್ತಾರೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂ-1 ಸ್ಥಾನದಲ್ಲಿದೆ. ಐ ಫೋನ್‌ ತಯಾರಿಕೆಯ ಕಂಪನಿ ಕರ್ನಾಟಕದಲ್ಲಿ ಆರಂಭವಾಗಿದೆ. ಆಂಧ್ರಪ್ರದೇಶಕ್ಕೆ ಏಕೆ ಹೋಗಿಲ್ಲ ಎಂದರೆ ಇದಕ್ಕೆ ಉತ್ತರ ಇರುತ್ತದೆಯೇ? ಎಂದು ಪ್ರಶ್ನಿಸಿದ ಅವರು, ರಾಜ್ಯ ಉದ್ಯಮ ಸ್ನೇಹಿ ವಾತಾವರಣ ಹೊಂದಿದೆ ಎಂದು ಹೇಳಿದರು.

5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಹೇಳಿಕೆ ನೀಡಿರುವವರಿಂದಲೇ ಸ್ಪಷ್ಟನೆ ಕೇಳಿ ಎಂದರು.ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್‌ ಗೆಲ್ಲುವ ವಿಶ್ವಾಸವಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಪಾದ ಯಾತ್ರೆಗೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಡಳಿತ ವ್ಯವಸ್ಥೆಯ ಬದಲಾವಣೆಗೂ ಕೂಡ ಜನ ಆಸಕ್ತಿ ತೋರಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ ಕಾಂಗ್ರೆಸ್‌‍ ಗೆಲ್ಲುವ ನಿರೀಕ್ಷೆಯಿದೆ. ಪ್ರಚಾರಕ್ಕೆ ತಮನ್ನು ಕರೆದರೆ ಅಲ್ಲಿಗೆ ಹೋಗುವುದಾಗಿ ಹೇಳಿದರು.
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ, ರಾಜ್ಯ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಕರ್ನಾಟಕದಲ್ಲಿ ಯಾವ ಕ್ರಾಂತಿಯೂ ಆಗುವುದಿಲ್ಲ, ಭ್ರಾಂತಿಯೂ ಆಗುವುದಿಲ್ಲ. ಕೆಲಸ ಇಲ್ಲದೇ ಇರುವವರು ಈ ವಿಚಾರವನ್ನು ಚರ್ಚೆ ಮಾಡುತ್ತಾರೆ ಎಂದರು.

ಕ್ರಾಂತಿ ಎಂದರೆ ಏನು? ರಾಜ್ಯದಲ್ಲಿ ಅಂತಹ ಯಾವ ವಾತಾವರಣ ಇದೆ? ಎಂದು ಪ್ರಶ್ನಿಸಿದ ಅವರು, ಅಧಿಕಾರ ಬದಲಾವಣೆ ಎಂಬುವುದು ಕ್ರಾಂತಿಯಲ್ಲ ಎಂದರು.ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನಗಳಲ್ಲಿ, ಪಾರ್ಕ್‌ಗಳಲ್ಲಿ, ಸರ್ಕಾರದ ಜಾಗಗಳಲ್ಲಿ ಅನುದಾನಿತ ಶಾಲೆಗಳಲ್ಲಿ, ಆರ್‌ಎಸ್‌‍ಎಸ್‌‍ ಮಾತ್ರವಲ್ಲ, ಯಾವುದೇ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೂ ಅವಕಾಶವಿಲ್ಲ ಎಂದು ನಿನ್ನೆ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಇದು ಹಿಂದಿನ ಸರ್ಕಾರವೇ ತೆಗೆದುಕೊಂಡ ನಿರ್ಧಾರವೇ ಎಂದರು.

ದೀಪಾವಳಿ ವೇಳೆ ಪಟಾಕಿಯಿಂದ ಕಣ್ಣಿಗೆ ಹಾನಿಯಾದರೆ ಈ ನಂಬರ್‌ ಸಂಪರ್ಕಿಸಿ

ಬೆಂಗಳೂರು, ಅ.17- ಹೂ ಕುಂಡ, ಆಟಂ ಬಾಂಬ್‌ ತಂಟೆಗೆ ಹೋಗಬೇಡಿ… ಪಟಾಕಿ ಹಚ್ಚುವಾಗ ಬಕೆಟ್‌ ನೀರನ್ನು ಹತ್ತಿರದಲ್ಲಿಟ್ಟುಕೊಳ್ಳಿ. ಪೋಷಕರೇ ಮುಂದೆ ನಿಂತು ಮಕ್ಕಳ ಕೈಯಲ್ಲಿ ಪಟಾಕಿ ಸಿಡಿಸಿ ಇದು ನಿಮಗೂ ನಿಮ ಕುಟುಂಬಕ್ಕೂ ಆಗಬಹುದಾದ ಸಮಸ್ಯೆ ನಿವಾರಿಸಲು ಸಹಾಯ ಮಾಡಲಿದೆ ಎಂದು ಮಿಂಟೋ ಆಸ್ಪತ್ರೆಯ ವೈದ್ಯರು ಸಾರ್ವಜನಿಕರಿಗೆ ಸಲಹೆ ಸೂಚನೆ ನೀಡಿದ್ದಾರೆ.

ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿರುವ ಹಿನ್ನೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಿಂಟೋ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಶಶಿಧರ್‌ ಅವರು ಪಟಾಕಿ ಹಚ್ಚುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ವಿವರಿಸಿದರು.

ಕಳೆದ ದೀಪಾವಳಿ ಸಂದರ್ಭದಲ್ಲಿ ಪಟಾಕಿಯಿಂದಾಗಿ ಶೇ. 35ರಷ್ಟು ಜನರಿಗೆ ಸುಟ್ಟ ಗಾಯಾಳಾಗಿತ್ತು. ಶೇ. 19ರಷ್ಟು ಮಂದಿಯ ಕಣ್ಣಿಗೆ ಹಾನಿ ಮಾಡಿಕೊಂಡಿದ್ದರು. ಅದರಲ್ಲಿ ಶೇ. 40ರಷ್ಟು ಮಂದಿ 14 ವರ್ಷದ ಒಳಗಿನ ಮಕ್ಕಳು ಎನ್ನುವುದು ವಿಶೇಷ ಹೀಗಾಗಿ ಮಕ್ಕಳ ಬಗ್ಗೆ ಎಚ್ಚರವಹಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಪ್ರಮುಖವಾಗಿ ಶೇ.28ರಷ್ಟು ಜನ ಪಟಾಕಿ ಹಚ್ಚಲು ಹೋಗಿ ತೊಂದರೆಗೊಳಗಾಗಿದ್ದರು ಶೆ. 18 ಮಂದಿ ಪಟಾಕಿ ಹಚ್ಚೋದನ್ನ ನೋಡೋಕೆ ಹೋಗಿ ಹಾನಿ ಮಾಡಿಕೊಂಡಿದ್ದಾರೆ.ಕಳೆದ ಬಾರಿ 71ಜನರಿಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅದರಲ್ಲಿ 53 ಜನರಿಗೆ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ18 ಜನರಿಗೆ ಒಳರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ಅವರು ಹೇಳಿದರು.

ಪಟಾಕಿ ಹಚ್ಚುವಾಗ ಹೂಕುಂಡ, ಆಟಂ ಬಾಂಬ್‌‍, ಬಿಜಲಿ ಪಟಾಕಿಯಿಂದ ಭಾರಿ ಸದ್ದು ಮಾಡುವ ಪಟಾಕಿ ಹಚ್ಚುವ ಬದಲು ಸಣ್ಣಪುಟ್ಟ ಪಟಾಕಿ ಸಿಡಿಸುವುದು ಉತ್ತಮ ಎಂದರು.
ಪಟಾಕಿ ಹಚ್ಚುವಾಗ ಬಕೆಟ್‌ ನೀರನ್ನು ಪಕ್ಕದಲ್ಲಿ ಇಟ್ಟುಕೊಂಡಿರಬೇಕು. 5ವರ್ಷದೊಳಗಿನ ಮಕ್ಕಳಿಗೆ ಪಟಾಕಿ ಹೊಡಿಸಬಾರದು.

ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಪಟಾಕಿ ಹೊಡೆಸಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಾಗಿ ಗಮನ ನೀಡಬೇಕು ಅದರಲ್ಲೂ ಪಟಾಕಿ ಹೊಡಿಬೇಕಾದ್ರೆ ಕನ್ನಡಕ ಬಳಸೋದು ಒಳಿತು1 ಎಂದು ಅವರು ಸಲಹೆ ನೀಡಿದರು.ಅದಷ್ಟು ಪಟಾಕಿಯಿಂದ ದೂರ ಉಳಿಯೋದೇ ವಾಸಿ ಪಟಾಕಿ ಬೇಕೇ ಬೇಕು ಎಂದಾದರೆ ಹಸಿರು ಪಟಾಕಿ ಬಳಸುವುದು ಪರಿಸರಕ್ಕೆ ಹಾಗೂ ನಿಮ ಆರೋಗ್ಯಕ್ಕೂ ಒಳ್ಳೆದು ಎಂದು ಅವರು ಹೇಳಿದರು.

ದೀಪಾವಳಿ ಸಂದರ್ಭದಲ್ಲಿ ನಮ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಕಾಲ ಚಿಕಿತ್ಸೆನೀಡಲಾಗುವುದು. ಅಗತ್ಯವಿರುವವರು 0802670 7176, 08026706221 ಸಹಾಯವಾಣಿಗಳನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.ಪಟಾಕಿ ಸಿಡಿತದಿಂದ ಹಾನಿ ಮಾಡಿಕೊಳ್ಳುವವರಿಗಾಗಿ 25 ಹಾಸಿಗೆಗಳನ್ನು ರಿಸರ್ವ್‌ ಮಾಡಲಾಗಿದೆ. ಇದರಲ್ಲಿ ಪುರುಷ ಮತ್ತು ಮಹಿಳೆಯರಿಗೆ ತಲಾ ಹತ್ತು ಹಾಗೂ ಮಕ್ಕಳಿಗಾಗಿ ಐದು ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ವಾರ್ಡ್‌ಗಳಲ್ಲಿ ಗಾಯಾಳುಗಳ ಎಕ್ಸಾಮಿನೇಷನ್‌ ಮಾಡಲು ಸ್ಲಿಟ್‌ ಲ್ಯಾಂಪ್‌ ವ್ಯವಸ್ಥೆ ಮಾಡಲಾಗಿದೆ. ವೈದ್ಯರಿಗೆ ದೀಪಾವಳಿಗೆ ರಜೆ ಇರುವುದಿಲ್ಲ. ಎಲ್ಲಾ ವೈದ್ಯರು ಕಡ್ಡಾಯವಾಗಿ ಕೆಲಸ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಎಚ್‌ಡಿಕೆ ಮೇಲಿನ ಪ್ರಕರಣ ರದ್ದುಗೊಳಿಸಿದ ಸುಪ್ರೀಂ

ಬೆಂಗಳೂರು,ಅ.17– ಲೋಕಾಯುಕ್ತ ವಿಶೇಷ ತನಿಖಾ ತಂಡ(ಎಸ್‌‍ಐಟಿ) ಎಡಿಜಿಪಿ ಚಂದ್ರಶೇಖರ್‌ ಅವರಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬೆದರಿಕೆ ಹಾಕಿದ್ದ ಪ್ರಕರಣವನ್ನು ಸುಪ್ರೀಂಕೋರ್ಟ್‌ ರದ್ದುಗೊಳಿ ಸಿದೆ. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲನವಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸುವ ಮೂಲಕ ಕಾನೂನು ಹೋರಾಟದಲ್ಲಿ ಎಚ್‌.ಡಿ.ಕುಮಾರಸ್ವಾಮಿಗೆ ದೊಡ್ಡ ಗೆಲುವಾಗಿದೆ.

ಸರ್ಕಾರದ ಮೇಲನವಿ ಅರ್ಜಿಯನ್ನು ವಜಾಗೊಳಿಸುವಂತೆ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ ಮೇಲ್ನೋಟಕ್ಕೆ ಬೆದರಿಕೆ ಹಾಕಿರುವ ಬಗ್ಗೆ ದಾಖಲೆಗಳು ರುಜುವಾತಾ ಗುತ್ತಿಲ್ಲ. ಹೀಗಾಗಿ ಅರ್ಜಿಯನ್ನು ವಜಾಗೊಳಿಸುವುದಾಗಿ ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನಲೆ:
ಆಂಧ್ರಪ್ರದೇಶ ಮೂಲದ ಜಂತಕಲ್‌ ಮೈನಿಂಗ್‌ ಕಂಪನಿಯ ಸಹವರ್ತಿ ಸಂಸ್ಥೆಯಾಗಿರುವ ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್‌್ಸ ಕಂಪನಿಗೆ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿ 550 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಲೀಸ್‌‍ ನೀಡಲು ಪರವಾನಗಿಗೆ ಅನುಮೋದನೆ ಕಡತಕ್ಕೆ ಸಹಿ ಹಾಕಿದ್ದರು.

2007ರ ಅಕ್ಟೋಬರ್‌ 5ರಂದು ಸಹಿ ಹಾಕಲಾಗಿತ್ತು. ಈ ವೇಳೆ ಸಲ್ಲಿಕೆಯಾಗಿದ್ದ 29 ಅರ್ಜಿಗಳ ಪೈಕಿ ಕೊನೆಯದಾಗಿ ಸಲ್ಲಿಕೆಯಾಗಿದ್ದ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಅರ್ಜಿಯನ್ನು ಸರ್ಕಾರ ನಿಯಮಾವಳಿ ಉಲ್ಲಂಘಿಸಿ ಅನುಮೋದಿಸಿ ಮಂಜೂರು ಮಾಡಲಾಗಿತ್ತು ಎಂಬುದು ಕುಮಾರಸ್ವಾಮಿ ಅವರ ಮೇಲಿರುವ ಆರೋಪವಾಗಿತ್ತು.

ಈ ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ ಕಾನೂನು ಕ್ರಮಕೈಗೊಳ್ಳಲು ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಎಸ್‌‍ಐಟಿ ಮುಖ್ಯಸ್ಥರಾಗಿರುವ ಎಂ ಚಂದ್ರಶೇಖರ್‌ ಮನವಿ ಮಾಡಿ ದ್ದರು.

ಇದರಿಂದ ಕೆರಳಿದ ಕುಮಾರ ಸ್ವಾಮಿ ಅವರು ಸೆಪ್ಟೆಂಬರ್‌ 28 ಮತ್ತು 29ರಂದು ಮಾಧ್ಯಮಗೋಷ್ಠಿ ನಡೆಸಿ ತನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿ, ಬೆದರಿಕೆ ಹಾಕಿದ್ದಾರೆ. ಕರ್ನಾಟಕ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದು, ತಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿ, ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ.

ತಾನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ನಕಲಿ ವೈದ್ಯಕೀಯ ದಾಖಲೆ ಪಡೆದು ಕರ್ನಾಟಕ ಕೇಡರ್‌ಗೆ ಸೇರ್ಪಡೆಯಾಗಿರುವುದಾಗಿ ಆರೋಪಿದ್ದಲ್ಲದೆ ತಾನು ಲಂಚ ಸ್ವೀಕರಿಸುತ್ತಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚಂದ್ರಶೇಖರ್‌ ದೂರಿನಲ್ಲಿ ತಿಳಿಸಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣ ದಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಚಂದ್ರ ಶೇಖರ್‌ ಪತ್ರ ಬರೆದಿದ್ದರು. ಆ ಬಳಿಕ, ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ, ಚಂದ್ರಶೇಖರ್‌ ವಿರುದ್ಧ ಆರೋಪ ಮಾಡಿದ್ದರು.50 ಕೋಟಿ ನೀಡುವಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯ ತಾತ ನೀಡಿದ ದೂರು ಆಧರಿಸಿ, ಕುಮಾರಸ್ವಾಮಿ ವಿರುದ್ಧ ಇತ್ತೀಚೆಗಷ್ಟೇ ಅಮೃತಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೆಂಗಳೂರು : ಲಾಂಗ್‌ ತೋರಿಸಿ ಸರ ಅಪಹರಣ ಮಾಡಿದ್ದ ದರೋಡೆಕೋರ ಸೆರೆ

ಬೆಂಗಳೂರು,ಅ.17- ಲಾಂಗ್‌ನಿಂದ ಬೆದರಿಸಿ ಸರ ಅಪಹರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ದರೋಡೆಕೋರನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಾಸಿಂಗನಹಳ್ಳಿ ನಿವಾಸಿ ಯೋಗಾನಂದ (35) ಬಂಧಿತ ದರೋಡೆಕೋರ.

ಬ್ಯಾಟರಾಯನಪುರ ಪೊಲೀಸ್‌‍ ಠಾಣೆಯ ರೌಡಿ ಶೀಟರ್‌ ಆಗಿರುವ ಈತನ ಮೇಲೆ ವಿವಿಧ ಪೊಲೀಸ್‌‍ ಠಾಣೆಗಳಲ್ಲಿ 25 ಪ್ರಕರಣಗಳು ದಾಖಲಾಗಿವೆ.ಕೋಡಿಪಾಳ್ಯದಲ್ಲಿ ವಾಸವಾಗಿದ್ದುಕೊಂಡು ತನ್ನ ಸಹಚರನೊಂದಿಗೆ ಬೈಕ್‌ನಲ್ಲಿ ಸುತ್ತಾಡುತ್ತಾ ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಹಿಂಬಾಲಿಸಿಕೊಂಡು ಹೋಗಿ ಲಾಂಗ್‌ನಿಂದ ಬೆದರಿಸಿ ಸರ ಅಪಹರಣ, ದರೋಡೆ ಮಾಡಿ ಪರಾರಿಯಾಗುತ್ತಿದ್ದನು.

ಗಿರಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸರ ಅಪಹರಣ ಪ್ರಕರಣದಲ್ಲಿ ಆರೋಪಿ ಯೋಗಾನಂದನನ್ನು ಬಂಧಿಸಿದ್ದಾರೆ. ಕೋಣನಕುಂಟೆ, ಕೆ.ಎಸ್‌‍ ಲೇಔಟ್‌, ಗಿರಿನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು 6.54 ಲಕ್ಷ ರೂ. ಮೌಲ್ಯದ 75.62 ಗ್ರಾಂ ಚಿನ್ನಾಭರಣವನ್ನು ಹಾಗೂ ಬೈಕ್‌ ವಶಪಡಿಸಿಕೊಂಡಿ ದ್ದಾರೆ. ಈಗಾಗಲೇ ಈತನ ಸಹಚರನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಖಡಕ್‌ ಪೊಲೀಸ್‌‍ ಆಫಿಸರ್‌ ಎನಿಸಿಕೊಂಡಿದ್ದ ಡಿಐಜಿ ಮನೆಯಲ್ಲಿ ಪತ್ತೆಯಾಯ್ತು ಕುಬೇರನ ಖಜಾನೆ

ಚಂಡೀಗಢ, ಅ. 17- ಖಡಕ್‌ ಪೊಲೀಸ್‌‍ ಆಫಿಸರ್‌ ಎಂದೇ ಗುರುತಿಸಿಕೊಂಡಿದ್ದ ಪಂಜಾಬ್‌ನ ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರ ಮನೆಯಲ್ಲಿ ಕುಬೇರನ ಖಜಾನೆಯೇ ಪತ್ತೆಯಾಗಿದ್ದು ಅವರನ್ನು ಸಿಬಿಐ ಬಂಧಿಸಿದೆ.ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಪಂಜಾಬ್‌ನ ರೋಪರ್‌ ವಲಯ ಡಿಐಜಿ ಹರ್‌ಚರಣ್‌‍ ಸಿಂಗ್‌ ಬುಲ್ಲಾರ್‌ ಸಿಬಿಐ ಬಲೆಗೆ ಬಿದ್ದ ಐಪಿಎಸ್‌‍ ಅಧಿಕಾರಿಯಾಗಿದ್ದಾರೆ.

ಅವರ ನಿವಾಸದಿಂದ ಐದು ಕೋಟಿ ರೂ. ನಗದು, ಚಿನ್ನಾಭರಣ, ಕಂತೆ ಕಂತೆ ನೋಟುಗಳು, ವಜ್ರ, ಚಿನ್ನದ ಆಭರಣಗಳು, ಉತ್ಕೃಷ್ಟ ವಾಚ್‌ಗಳು ಸೇರಿದಂತೆ ಸಂಪತ್ತಿನ ಖಜಾನೆಯನ್ನೇ ವಶಕ್ಕೆ ಪಡೆದುಕೊಳ್ಳಲಾಗಿದೆ.ವ್ಯಕ್ತಿಯೊಬ್ಬರಿಂದ 8 ಲಕ್ಷ ರೂ. ಲಂಚ ಪ್ರಕರಣ ಪಡೆದ ಪ್ರಕರಣದ ಬೆನ್ನತ್ತಿದ್ದ ಸಿಬಿಐನವರು ಭ್ರಷ್ಟ ಐಪಿಎಸ್‌‍ ಅಧಿಕಾರಿಯ ಸಂಪತ್ತಿನ ಖಜಾನೆ ಕಂಡು ನಿಬ್ಬೆರಗಾಗಿದ್ದಾರೆ.

ಹರ್‌ಚರಣ್‌‍ ಸಿಂಗ್‌ ಬುಲ್ಲಾರ್‌ 2009ರ ಬ್ಯಾಚ್‌ನ ಐಪಿಎಸ್‌‍ ಅಧಿಕಾರಿ. ಪಂಜಾಬ್‌ನ ರೋಪರ್‌ ವಲಯದಲ್ಲಿ ಡಿಐಜಿಯಾಗಿದ್ದಾರೆ. 8 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಲ್ಲಿ ಸಿಬಿಐಗೆ ಬಲೆಗೆಬಿದ್ದಿದ್ದಾರೆ. ಇವರ ಜೊತೆ ಮಧ್ಯವರ್ತಿ ಕೃಷ್ಣ ಎಂಬಾತನನ್ನು ಬಂಧಿಸಲಾಗಿದೆ. ಆಕಾಶ್‌ ಬಟ್ಟಾ ಎಂಬ ಸ್ಕ್ರ್ಯಾಪ್‌ ವ್ಯಾಪಾರಿ ವಿರುದ್ಧ ಕ್ರಿಮಿನಲ್‌ ಕೇಸ್‌‍ ಇತ್ಯರ್ಥಕ್ಕೆ ಮಧ್ಯವರ್ತಿ ಮೂಲಕ ಲಂಚ ಪಡೆಯುವ ವೇಳೆ ಲಾಕ್‌ ಆಗಿದ್ದಾರೆ.

8 ಲಕ್ಷ ರೂ. ಲಂಚ ಕೊಡದಿದ್ದರೆ ಕ್ರಿಮಿನಲ್‌ ಕೇಸ್‌‍ ಜೊತೆ ಉದ್ಯಮಕ್ಕೆ ತೊಂದರೆ ಎದುರಿಸಬೇಕಾಗುತ್ತದೆ ಎಂದು ಡಿಐಜಿ ಬೆದರಿಸಿದ್ದರು. ಈ ಬಗ್ಗೆ ಉದ್ಯಮಿ ಆಕಾಶ್‌ ಸಿಬಿಐಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದಲ್ಲಿ ಅಖಾಡಕ್ಕಿಳಿದ ಸಿಬಿಐ ಅಧಿಕಾರಿಗಳು, ಲಂಚ ಪಡೆಯುವ ವೇಳೆ ರೆಡ್‌ಹ್ಯಾಂಡಾಗಿ ಡಿಐಜಿ ಹರ್‌ಚರಣ್‌ರನ್ನು ಬಂಧಿಸಿದೆ.

ನಂತರ ಅವರ ಮನೆಯನ್ನು ಶೋಧಿಸಿದಾಗ 5 ಕೋಟಿ ರೂಪಾಯಿಗೂ ಹೆಚ್ಚು ನಗದು ಸಿಕ್ಕಿದೆ. ಇದಲ್ಲದೆ 1.5 ಕೆಜಿ ಚಿನ್ನಾಭರಣ, ನೂರಾರು ಕೋಟಿ ರೂ. ಮೌಲ್ಯದ ನಿವೇಶನ-ಜಮೀನಿನ ದಾಖಲೆಪತ್ರಗಳು, ಐಷಾರಾಮಿ ಮರ್ಸಿಡಿಸ್‌‍, ಆಡಿ ಕಾರ್‌ನ ಕೀಗಳು, 22 ದುಬಾರಿ ಬೆಲೆಯ ವಾಚ್‌ಗಳು, 40 ಲೀಟರ್‌ ಇಂಪೋರ್ಟೆಡ್‌ ಮದ್ಯ, ಡಬಲ್‌ ಬ್ಯಾರಲ್‌ ಶಾಟ್‌ಗನ್‌, ಒಂದು ಪಿಸ್ತೂಲ್‌‍, ಒಂದು ರಿವಾಲ್ವರ್‌ ಮತ್ತು 1 ಏರ್‌ಗನ್‌ಅನ್ನು ಸಿಬಿಐ ವಶಕ್ಕೆ ಪಡೆದಿದೆ.

ಇದಲ್ಲದೆ ಲಂಚದ ಡೀಲ್‌ ಕುದಿರಿಸಿದ್ದ ಮಧ್ಯವರ್ತಿ ಕೃಷ್ಣ ಎಂಬಾತನಿಂದ 21 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ಡಿಜಿಐ ಮನೆಯಲ್ಲಿ ರಾತ್ರಿಯಿಡೀ ಶೋಧ ಮುಂದುವರಿದಿದ್ದು, ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವಿಶೇಷವೆಂದರೆ, ದಕ್ಷ ಅಧಿಕಾರಿ ಎಂದೇ ಹೆಸರು ಪಡೆದಿದ್ದ ಐಪಿಎಸ್‌‍ ಹರ್‌ಚರಣ್‌‍ ಸಿಂಗ್‌ ಬುಲ್ಲಾರ್‌ ಈವರೆಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಡ್ರಗ್‌್ಸ ಮಾಫಿಯಾ ವಿರುದ್ಧ ವಿನಾಶದ ವಿರುದ್ಧ ಯುದ್ಧ ಎಂದು ದೊಡ್ಡ ಅಭಿಯಾನವನ್ನೇ ಕೈಗೊಂಡಿದ್ದರು. ಇದರಿಂದಾಗಿಯೇ ಇವರಿಗೆ ಡಿಐಜಿಯಾಗಿ ಬಡ್ತಿ ಸಿಕ್ಕಿತ್ತು. ಆದರೆ ಈಗ ಇವರ ಭ್ರಷ್ಟ ಮುಖವಾಡ ಕಳಚಿಬಿದ್ದಿದೆ. ಸಂಪತ್ತಿನ ಕೋಟೆ ನೋಡಿ ಸಿಬಿಐ ಅಧಿಕಾರಿಗಳೇ ದಂಗಾಗಿದ್ದಾರೆ.

“ಸರಳತೆ ಶ್ರೀಮಂತಿಕೆಯನ್ನು ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ತ ಮನಃಸ್ಥಿತಿಯನ್ನಲ್ಲ” : ಸಮೀಕ್ಷೆಗೆ ನಿರಾಕರಿಸಿದ್ದಕ್ಕೆ ಹರಿಪ್ರಸಾದ್‌ ಕಟುಟೀಕೆ

ಬೆಂಗಳೂರು, ಅ.17- ಸಂಸ್ಥೆಗಳನ್ನು ಜಗದಗಲ ಬೆಳೆಸಲು ಜನರಿಂದ ಆಯ್ಕೆಯಾದ ಸರ್ಕಾರದಿಂದಲೇ ಭೂಮಿ, ನೀರು, ತೆರಿಗೆ, ವಿದ್ಯುತ್‌, ಸೇರಿದಂತೆ ಅನೇಕ ಸವಲತ್ತುಗಳನ್ನು ಪಡೆಯುವ ಸಂಸ್ಥೆಗಳ ಮಾಲೀಕರು ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಆತಸಾಕ್ಷಿಗೆ ಬಗೆಯುವ ದ್ರೋಹ ಮಾತ್ರವಲ್ಲ ಉದ್ಧಟತನದ ಪರಮಾವಧಿ ಎಂದು ಕಾಂಗ್ರೆಸ್‌‍ನ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆಕ್ಷೇಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರು ಅವರ, ಸರಳತೆ ಶ್ರೀಮಂತಿಕೆಯನ್ನು ಮಾತ್ರ ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ತ ಮನಃಸ್ಥಿತಿಯನ್ನಲ್ಲ, ಶ್ರೀಮಂತಿಕೆಯನ್ನು ಸರಳತೆಯಲ್ಲಿ
ಬಚ್ಚಿಡುವುದು, ಸಾಮಾಜಿಕ ಸಮೀಕ್ಷೆಯಿಂದ ಮಾಹಿತಿಯನ್ನು ದೀನ ದಲಿತರ, ಹಿಂದುಳಿದವರ, ಬಡ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಪಡಿಸಿ, ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಮಾತ್ರ ಸಾಧ್ಯವೇ ಹೊರತು, ತೋರಿಣಿಕೆ, ಪ್ರಚಾರದ ಮೋಹದಿಂದ ಕೂಡಿದ ಸಮಾಜಸೇವೆಯಿಂದ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ವ್ಯವಸ್ಥೆಯಲ್ಲಿ ಸರ್ವ ಜನಾಂಗದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳನ್ನು ಅವಲೋಕಿಸಿ, ಬಡವರ್ಗದವರ ಏಳಿಗೆಗಾಗಿ ಸರ್ಕಾರ ಸಮರ್ಪಕವಾದ ನೀತಿಗಳನ್ನು ರೂಪಿಸುವುದು ಸಾಂವಿಧಾನಿಕ ಜವಾಬ್ದಾರಿ. ಆದರೆ ಶ್ರೀಮಂತಿಕೆ, ದೊಡ್ಡಸ್ಥಿಕೆಯ ಚಾದರವನ್ನೇ ಹೊದ್ದು ಮಲಗಿದವರು ಕ್ಷುಲ್ಲಕ ಕಾರಣಗಳನ್ನು ನೀಡಿ ಸಾಮಾಜಿಕ ಸಮೀಕ್ಷೆಯಿಂದ ಹೊರಗುಳಿಯುವುದು ಅಷ್ಟೇ ಬೇಜವಾಬ್ದಾರಿ ತನ ಎಂದಿದ್ದಾರೆ.

ಹತ್ಯೆಗೀಡಾಗಿದ್ದ ದಲಿತ ಯುವಕನ ಕುಟುಂಬಕ್ಕೆ ರಾಹುಲ್‌ ಸಾಂತ್ವನ

ಕಾನ್ಪುರ, ಅ. 17 (ಪಿಟಿಐ)- ಉತ್ತರ ಭಾರತದ ರಾಯ್‌ಬರೇಲಿಯಲ್ಲಿ ಗುಂಪು ಗಲಭೆಯಿಂದ ಹತ್ಯೆಗೀಡಾದ ದಲಿತ ವ್ಯಕ್ತಿ ಹರಿಓಂ ವಾಲ್ಮೀಕಿಯ ಕುಟುಂಬದವರಿಗೆ ಕಾಂಗ್ರೆಸ್‌‍ ನಾಯಕ ರಾಹುಲ್‌ ಗಾಂಧಿ ಇಂದು ಸಾಂತ್ವನ ಹೇಳಿದರು.

ರಾಹುಲ್‌ ನಮ ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸಿದರು ಎಂದು ಬಲಿಪಶುವಿನ ಚಿಕ್ಕಪ್ಪ ಚೌಧರಿ ಭಕ್‌್ತ ದಾಸ್‌‍ ಹೇಳಿದ್ದಾರೆ. ಅಕ್ಟೋಬರ್‌ 2 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ರಾತ್ರಿ ಜಾಗರಣೆ ವೇಳೆ ಗ್ರಾಮಸ್ಥರು ವಾಲ್ಮೀಕಿ (40) ಅವರನ್ನು ಕಳ್ಳ ಎಂದು ತಪ್ಪಾಗಿ ಭಾವಿಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ, ದರೋಡೆಗಳಿಗಾಗಿ ಮನೆಗಳನ್ನು ಗುರುತಿಸಲು ಒಂದು ಗ್ಯಾಂಗ್‌ ಕಣ್ಗಾವಲುಗಾಗಿ ಡ್ರೋನ್‌ಗಳನ್ನು ಬಳಸುತ್ತಿದೆ ಎಂಬ ವದಂತಿಗಳ ನಡುವೆ ನಡೆದಿದ್ದ ಈ ಕೊಲೆಗೆ ಆಕ್ರೋಶಕ್ಕೆ ಕಾರಣವಾಗಿತ್ತು.

ಕಾಂಗ್ರೆಸ್‌‍ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರವು ದಲಿತರನ್ನು ರಕ್ಷಿಸುವಲ್ಲಿ ಮತ್ತು ಗುಂಪು ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿವೆ.ದಾಳಿಯ ನಂತರ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಅಕ್ಟೋಬರ್‌ 10 ರಂದು ನಡೆದ ಎನ್‌ಕೌಂಟರ್‌ ನಂತರ ಬಂಧಿಸಲಾದ ಪ್ರಮುಖ ಆರೋಪಿ ಸೇರಿದಂತೆ ಇದುವರೆಗೆ 14 ಜನರನ್ನು ಬಂಧಿಸಲಾಗಿದೆ.

ಪ್ರಕರಣವನ್ನು ನಿರ್ವಹಿಸುವಲ್ಲಿನ ಲೋಪಕ್ಕಾಗಿ ಇಬ್ಬರು ಸಬ್‌ ಇನ್ಸ್ ಪೆಕ್ಟರ್‌ಗಳು ಸೇರಿದಂತೆ ಐದು ಪೊಲೀಸರನ್ನು ಅಮಾನತು ಗೊಳಿಸಲಾಗಿದೆ. ಕಾಂಗ್ರೆಸ್‌‍ ನಾಯಕ ಚಕೇರಿ ವಿಮಾನ ನಿಲ್ದಾಣದಲ್ಲಿ ಬಂದಿಳಿದು ರಸ್ತೆ ಮೂಲಕ ಸುಮಾರು 80 ಕಿ.ಮೀ ದೂರದಲ್ಲಿರುವ ಫತೇಪುರಕ್ಕೆ ಪ್ರಯಾಣ ಬೆಳೆಸಿ, ಅಲ್ಲಿ ಮೃತರ ಕುಟುಂಬ ಸದಸ್ಯರನ್ನು ಭೇಟಿಯಾದರು.

ಅವರ ಭೇಟಿಗೂ ಮುನ್ನ, ಸರ್ಕಾರವು ಹರಿಯೋಮ್‌ ಅವರ ಸಹೋದರಿ ಕುಸುಮ್‌ ಅವರಿಗೆ ಫತೇಪುರ್‌ ವೈದ್ಯಕೀಯ ಕಾಲೇಜಿನಲ್ಲಿ ಸ್ಟಾಫ್‌ ನರ್ಸ್‌ ಆಗಿ ಗುತ್ತಿಗೆ ಹುದ್ದೆಗೆ ಪ್ರಸ್ತಾವನೆ ಪತ್ರವನ್ನು ನೀಡಿತು.ಅವರ ಭೇಟಿಗಾಗಿ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು, ವಾಲ್ಮೀಕಿಯವರ ಮನೆಗೆ ಹೋಗುವ ಮಾರ್ಗವನ್ನು ಬ್ಯಾರಿಕೇಡ್‌ ಮಾಡಲಾಗಿದೆ.

ಬಿಹಾರ ಅಧಿಕಾರಿಗಳೊಂದಿಗೆ ಚುನಾವಣಾ ಆಯೋಗ ಮಹತ್ವದ ಸಭೆ

ನವದೆಹಲಿ, ಅ. 17 (ಪಿಟಿಐ)- ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಪ್ರಚೋದಿಸುವುದನ್ನು ತಡೆಗಟ್ಟುವ ಕಾರ್ಯತಂತ್ರಕ್ಕೆ ಅಂತಿಮ ರೂಪ ನೀಡಲು ಚುನಾವಣಾ ಆಯೋಗವು ಇಂದು ಜಾರಿ ಸಂಸ್ಥೆಗಳ ಮುಖ್ಯಸ್ಥರು ಮತ್ತು ಸೇನಾ ಪಡೆಗಳ ಮುಖ್ಯಸ್ಥರ ಜೊತೆ ಇಂದು ಮಹತ್ವದ ಸಭೆ ನಡೆಸಿದೆ.

ಬಿಹಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಕೂಡ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯೊಂದಿಗೆ ಆನ್‌ಲೈನ್‌ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು. ಮುಂಬರುವ ಬಿಹಾರ ಚುನಾವಣೆಗಳ ಸಮಯದಲ್ಲಿ ಪ್ರತಿಯೊಂದು ಕಾನೂನು ಜಾರಿ ಸಂಸ್ಥೆಯಿಂದ ಸಕ್ರಿಯ ಮತ್ತು ತಡೆಗಟ್ಟುವ ಕ್ರಮವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ಸಮಿತಿಯು, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ರಹಸ್ಯ ವೆಚ್ಚವನ್ನು ತಡೆಯುವ ಕಾರ್ಯತಂತ್ರವನ್ನು ಚರ್ಚಿಸುತ್ತದೆ. ಪರಿಣಾಮಕಾರಿ ಕ್ರಮಕ್ಕಾಗಿ ಕಾನೂನು ಜಾರಿ ಸಂಸ್ಥೆಗಳ ನಡುವೆ ಆರ್ಥಿಕ ಅಪರಾಧಗಳ ಸಹಕಾರ ಮತ್ತು ಗುಪ್ತಚರ ಹಂಚಿಕೆಯನ್ನು ಸಹ ಇದು ಉತ್ತಮಗೊಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತರರಾಜ್ಯ ಗಡಿಗಳು ಮತ್ತು ಅಂತರರಾಷ್ಟ್ರೀಯ ಗಡಿಗಳ ಮೂಲಕ ಕಳ್ಳಸಾಗಣೆ ಸರಕುಗಳು, ಮಾದಕ ವಸ್ತುಗಳು, ಮದ್ಯ ಮತ್ತು ನಗದು, ನಕಲಿ ಕರೆನ್ಸಿ ಸೇರಿದಂತೆ ಸಾಗಣೆಯನ್ನು ಪರಿಶೀಲಿಸುವ ಕ್ರಮಗಳನ್ನು ಸಹ ಚರ್ಚೆಯ ಸಮಯದಲ್ಲಿ ತೆಗೆದುಕೊಳ್ಳಲಾಗುವುದು.

ಬಿಹಾರವು ನೇಪಾಳದೊಂದಿಗೆ ತನ್ನ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಳ್ಳುತ್ತದೆ.ಸಮಿತಿಯು 17 ಇಲಾಖೆಗಳನ್ನು ಒಳಗೊಂಡಿದ್ದುಮ ಆಯಾ ಇಲಾಖೆಯ ಎಲ್ಲಾ ಮುಖ್ಯಸ್ಥರೊಂದಿಗೆ ಚುನಾವಣಾಧಿಕಾರಿಗಳು ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ನವೆಂಬರ್‌ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆಗೆ ನಡೆಯಲಿದ ಮತ್ತು ನವೆಂಬರ್‌ 14 ರಂದು ಮತಎಣಿಕೆ ನಡೆಯಲಿದೆ.

ಡಾ.ಕೃತಿಕಾ ಕೊಲೆ ಪ್ರಕರಣ : ಹಲವು ಸ್ಫೋಟಕ ಸಂಗತಿಗಳು ಬೆಳಕಿಗೆ

ಬೆಂಗಳೂರು,ಅ.17- ಪತ್ನಿ, ವೈದ್ಯೆ ಕೃತ್ತಿಕಾ ಕೊಲೆಗೆ 11 ತಿಂಗಳುಗಳಿಂದ ಪತಿ ಡಾ. ಮಹೇಂದ್ರ ರೆಡ್ಡಿ ಹಲವು ಬಾರಿ ಯತ್ನಿಸಿದ್ದ ಎಂಬುವುದು ಮಾರತ್ತಹಳ್ಳಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಕೃತಿಕಾ ಅವರ ಮರಣೋತ್ತರ ಪರೀಕ್ಷೆಯ ವರದಿಯಿಂದ ಕೊಲೆಯಾಗಿರುವುದು ಬಹಿರಂಗವಾಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ಮಹೇಂದ್ರರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿಗಳನ್ನು ಕಲೆಹಾಕಿದಾಗ ಹಲವು ಸ್ಪೋಟಕ ಸಂಗತಿಗಳು ಬೆಳಕಿಗೆ ಬಂದಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಹೇಂದ್ರರೆಡ್ಡಿಯನ್ನು ಪೊಲೀಸರು ಬಂಧಿಸಿ, ಸುದೀರ್ಘ ವಿಚಾರಣೆ ನಡೆಸಿದಾಗ ಮದುವೆಯಾದ ಕೆಲವೇ ತಿಂಗಳ ಅಂತರದಲ್ಲಿ ಪತ್ನಿ ಕೊಲೆಗೆ ಪ್ರಯತ್ನಿಸಿದ್ದ ಎಂಬುವುದು ಗೊತ್ತಾಗಿದೆ.

ಮೇಲ್ನೋಟಕ್ಕೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವಂತೆ ಮಹೇಂದ್ರರೆಡ್ಡಿ ಕುಟುಂಬದವರ ವಿಶ್ವಾಸಗಳಿಸಿ ಅನುಮಾನಕ್ಕೆ ಆಸ್ಪದ ಕೊಡದಂತೆ ಒಳಗೊಳಗೆ ಕೊಲೆಗೆ ಸಂಚು ರೂಪಿಸುತ್ತಿದ್ದದ್ದು ಯಾರ ಗಮನಕ್ಕೂ ಬಂದಿಲ್ಲ.ಕೃತಿಕಾ ಮನೆಯವರು ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಮಹೇಂದ್ರರೆಡ್ಡಿ ಮೇಲೆ ತುಂಬ ನಂಬಿಕೆ ಇಟ್ಟುಕೊಂಡಿದ್ದರು.

ಆದರೆ ಆ ನಂಬಿಕೆಯನ್ನು ಮಹೇಂದ್ರರೆಡ್ಡಿ ಹುಸಿಗೊಳಿಸಿದ್ದಾನೆ. ಹಲವು ಬಾರಿ ಪತ್ನಿ ಮೇಲೆ ಡ್ರಗ್‌್ಸ ಪ್ರಯೋಗ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.11 ತಿಂಗಳಿನಿಂದ ಪ್ರತಿನಿತ್ಯ ಪತ್ನಿ ಕೃತಿಕಾಗೆ ಡ್ರಗ್‌್ಸ ನೀಡಿದ್ದು, ಬಳಿಕ ಒಂದು ದಿನ ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ಸಹಜ ಸಾವೆಂದು ಬಿಂಬಿಸಿ ನಾಟಕವಾಡಿದ್ದ. ವೈದ್ಯಕೀಯ ಪರೀಕ್ಷೆ ವರದಿ ನೋಡಿ ಕೃತಿಕಾ ಪೋಷಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿ ಹಲವು ವಸ್ತುಗಳನ್ನು ವಶಕ್ಕೆ ಪಡೆದು ಅದನ್ನು ಸಹ ಎಫ್‌ಎಸ್‌‍ಎಲ್‌ಗೆ ಕಳುಹಿಸಿದ್ದು, 6 ತಿಂಗಳ ಬಳಿಕ ಆತನ ಸಂಚು ಬಯಲಾಗಿದೆ.

ಡಾ.ಕೃತಿಕಾರೆಡ್ಡಿ ಅವರ ತಂದೆ ನೂರಾರು ಕೋಟಿ ಆಸ್ತಿವಂತರು. ಡಾ. ಮಹೇಂದ್ರರೆಡ್ಡಿ ಕುಟುಂಬ ಸಹ ಸ್ಥಿತಿವಂತರು. ಇವರಿಬ್ಬರಿಗೂ ಮೇ.26, 2024 ರಲ್ಲಿ ವಿವಾಹವಾಗಿದ್ದು, ದಂಪತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ ಡಾ. ಮಹೇಂದ್ರರೆಡ್ಡಿ ಮನಸಲ್ಲಿ ಯಾವ ದುರಾಲೋಚನೆ ಇತ್ತೋ ಗೊತ್ತಿಲ್ಲ.ವಿದ್ಯಾವಂತೆ, ರೂಪವಂತೆಯಾಗಿದ್ದ ಪತ್ನಿಯನ್ನೇ ಕೊಲೆ ಮಾಡಿ ಇದೀಗ ಪೊಲೀಸರ ವಶದಲ್ಲಿದ್ದಾನೆ.

ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾದ ಆರ್‌ಎಸ್‌ಎಸ್‌

ಬೆಂಗಳೂರು,ಅ.17-ಸರ್ಕಾರಿ ಸ್ಥಳಗಳು, ಆಟದ ಮೈದಾನ, ಕ್ರೀಡಾಂಗಣಗಳು ಮತ್ತಿತರ ಕಡೆ ಚಟುವಟಿಕೆ ನಡೆಸಲು ಅನುಮತಿ ಅಗತ್ಯ ಎಂದು ಆರ್‌ಎಸ್‌‍ಎಸ್‌‍ಗೆ ಪರೋಕ್ಷವಾಗಿ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರದ ವಿರುದ್ಧ ಸಂಘ ಪರಿವಾರ ನೇರಾನೇರ ತೊಡೆತಟ್ಟಿದೆ.

ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ಸರ್ಕಾರಿ ಜಾಗಗಳಲ್ಲಿ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಇದೇ 19ರಂದು ಬೃಹತ್‌ ಪಥಸಂಚಲ ನಡೆಸಲಿದೆ
.
ವಿಶೇಷವೆಂದರೆ ಸರ್ಕಾರದ ಅನುಮತಿಯನ್ನು ಪಡೆಯಬೇಕೆಂಬ ಪೂರ್ವ ಷರತ್ತನ್ನು ಪಡೆಯದೆ 19ರಂದು ಚಿತ್ತಾರಪುರದಲ್ಲಿ ಸಾವಿರಾರು ಸ್ವಯಂಸೇವಕರು ನಗರದ
ಪ್ರಮುಖ ಪಟ್ಟಣಗಳಲ್ಲಿ ಪಥಸಂಚಲನ ನಡೆಸಲಿದ್ದಾರೆ. ಈ ಮೂಲಕ ತವರು ಕ್ಷೇತ್ರದಲ್ಲೇ ಪ್ರಿಯಾಂಕ್‌ ಖರ್ಗೆ ಸಂಘಪರಿವಾರ ಸೆಡ್ಡು ಹೊಡೆಯಲಿದೆ.

ಪಥಸಂಚಲನಕ್ಕೆ ಅಗತ್ಯವಿರುವ ಪೂರ್ವಸಿದ್ದತೆಗಳನ್ನು ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದ್ದು, ಅಂದಿನ ಪಥಸಂಚಲನಕ್ಕೆ ಸ್ವಯಂಪ್ರೇರಿತರಾಗಿ ಸಾವಿರಾರು ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಯಾವುದೇ ಸಂಘಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ಚಟುವಟಿಕೆಗಳನ್ನು ನಡೆಸಲು ಸರ್ಕಾರದ ಅನುಮತಿ ಅಗತ್ಯ ಎಂಬ ತೀರ್ಮಾನದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಪಥಸಂಚನ ಇದಾಗಿದೆ.

ಇದೊಂದು ಶಕ್ತಿ ಪ್ರದರ್ಶನವೆಂದೇ ಬಿಂಬಿತವಾಗಿದ್ದು, ಚಿತ್ತಾಪುರದ ಪ್ರಮುಖ ಪಟ್ಟಣಗಳಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪಥಸಂಚಲನವನ್ನು ನಡೆಸಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ, ನಾವು ಯಾವುದೇ ಅನುಮತಿಯನ್ನು ಪಡೆಯದೇ ಪಥಸಂಚಲನ ನಡೆಸುತ್ತೇವೆ. ಸ್ಥಳೀಯ ಸಂಸ್ಥೆಗಳಿಂದಲೂ ಒಪ್ಪಿಗೆ ಪಡೆಯುವುದಿಲ್ಲ, ಹಿಂದೆಯೂ ಪಡೆಯುವುದಿಲ್ಲ ಮುಂದೆಯೂ ಪಡೆಯುವುದಿಲ್ಲ. ನೋಡೇ ಬಿಡೋಣ ಏನಾಗುತ್ತದೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಬಾಂಡಗೆ ಅವರ ಮಾತಿಗೆ ದನಿಗೂಡಿಸಿರುವ ಬಿಜೆಪಿಯ ಅನೇಕ ನಾಯಕರು, ಒಂದು ಸಮುದಾಯದ ಓಲೈಕೆಗಾಗಿ ಸರ್ಕಾರ ದೇಶಭಕ್ತ ಸಂಘಟನೆಯಾದ ಆರ್‌ಎಸ್‌‍ಎಸ್‌‍ಗೆ ಪರೋಕ್ಷವಾಗಿ ಕಡಿವಾಣ ಹಾಕಲು ಮುಂದಾಗಿದ್ದಾರೆ. ನೀವು ಬೆದರಿಕೆ ಹಾಕಿದಷ್ಟು ಆರ್‌ಎಸ್‌‍ಎಸ್‌‍ ಹೆಮರವಾಗಿ ಬೆಳೆಯುತ್ತದೆ. ಅದನ್ನು ಮುಟ್ಟಲು ಬಂದರೆ ಸುಟ್ಟು ಭಸವಾಗುತ್ತೀರಿ ಎಂದು ಬಿಜೆಪಿ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.