Home Blog Page 40

ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಮುಂದಾದ ಆರ್‌ಎಸ್‌ಎಸ್‌

ಬೆಂಗಳೂರು,ಅ.17-ಸರ್ಕಾರಿ ಸ್ಥಳಗಳು, ಆಟದ ಮೈದಾನ, ಕ್ರೀಡಾಂಗಣಗಳು ಮತ್ತಿತರ ಕಡೆ ಚಟುವಟಿಕೆ ನಡೆಸಲು ಅನುಮತಿ ಅಗತ್ಯ ಎಂದು ಆರ್‌ಎಸ್‌‍ಎಸ್‌‍ಗೆ ಪರೋಕ್ಷವಾಗಿ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರದ ವಿರುದ್ಧ ಸಂಘ ಪರಿವಾರ ನೇರಾನೇರ ತೊಡೆತಟ್ಟಿದೆ.

ಆರ್‌ಎಸ್‌‍ಎಸ್‌‍ ಚಟುವಟಿಕೆಗಳಿಗೆ ಸರ್ಕಾರಿ ಜಾಗಗಳಲ್ಲಿ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುವ ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಇದೇ 19ರಂದು ಬೃಹತ್‌ ಪಥಸಂಚಲ ನಡೆಸಲಿದೆ
.
ವಿಶೇಷವೆಂದರೆ ಸರ್ಕಾರದ ಅನುಮತಿಯನ್ನು ಪಡೆಯಬೇಕೆಂಬ ಪೂರ್ವ ಷರತ್ತನ್ನು ಪಡೆಯದೆ 19ರಂದು ಚಿತ್ತಾರಪುರದಲ್ಲಿ ಸಾವಿರಾರು ಸ್ವಯಂಸೇವಕರು ನಗರದ
ಪ್ರಮುಖ ಪಟ್ಟಣಗಳಲ್ಲಿ ಪಥಸಂಚಲನ ನಡೆಸಲಿದ್ದಾರೆ. ಈ ಮೂಲಕ ತವರು ಕ್ಷೇತ್ರದಲ್ಲೇ ಪ್ರಿಯಾಂಕ್‌ ಖರ್ಗೆ ಸಂಘಪರಿವಾರ ಸೆಡ್ಡು ಹೊಡೆಯಲಿದೆ.

ಪಥಸಂಚಲನಕ್ಕೆ ಅಗತ್ಯವಿರುವ ಪೂರ್ವಸಿದ್ದತೆಗಳನ್ನು ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿದ್ದು, ಅಂದಿನ ಪಥಸಂಚಲನಕ್ಕೆ ಸ್ವಯಂಪ್ರೇರಿತರಾಗಿ ಸಾವಿರಾರು ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಯಾವುದೇ ಸಂಘಸಂಸ್ಥೆಗಳು ಸರ್ಕಾರಿ ಜಾಗದಲ್ಲಿ ಚಟುವಟಿಕೆಗಳನ್ನು ನಡೆಸಲು ಸರ್ಕಾರದ ಅನುಮತಿ ಅಗತ್ಯ ಎಂಬ ತೀರ್ಮಾನದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಪಥಸಂಚನ ಇದಾಗಿದೆ.

ಇದೊಂದು ಶಕ್ತಿ ಪ್ರದರ್ಶನವೆಂದೇ ಬಿಂಬಿತವಾಗಿದ್ದು, ಚಿತ್ತಾಪುರದ ಪ್ರಮುಖ ಪಟ್ಟಣಗಳಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪಥಸಂಚಲನವನ್ನು ನಡೆಸಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ರಾಜ್ಯಸಭಾ ಸದಸ್ಯ ನಾರಾಯಣ ಬಾಂಡಗೆ, ನಾವು ಯಾವುದೇ ಅನುಮತಿಯನ್ನು ಪಡೆಯದೇ ಪಥಸಂಚಲನ ನಡೆಸುತ್ತೇವೆ. ಸ್ಥಳೀಯ ಸಂಸ್ಥೆಗಳಿಂದಲೂ ಒಪ್ಪಿಗೆ ಪಡೆಯುವುದಿಲ್ಲ, ಹಿಂದೆಯೂ ಪಡೆಯುವುದಿಲ್ಲ ಮುಂದೆಯೂ ಪಡೆಯುವುದಿಲ್ಲ. ನೋಡೇ ಬಿಡೋಣ ಏನಾಗುತ್ತದೆ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಬಾಂಡಗೆ ಅವರ ಮಾತಿಗೆ ದನಿಗೂಡಿಸಿರುವ ಬಿಜೆಪಿಯ ಅನೇಕ ನಾಯಕರು, ಒಂದು ಸಮುದಾಯದ ಓಲೈಕೆಗಾಗಿ ಸರ್ಕಾರ ದೇಶಭಕ್ತ ಸಂಘಟನೆಯಾದ ಆರ್‌ಎಸ್‌‍ಎಸ್‌‍ಗೆ ಪರೋಕ್ಷವಾಗಿ ಕಡಿವಾಣ ಹಾಕಲು ಮುಂದಾಗಿದ್ದಾರೆ. ನೀವು ಬೆದರಿಕೆ ಹಾಕಿದಷ್ಟು ಆರ್‌ಎಸ್‌‍ಎಸ್‌‍ ಹೆಮರವಾಗಿ ಬೆಳೆಯುತ್ತದೆ. ಅದನ್ನು ಮುಟ್ಟಲು ಬಂದರೆ ಸುಟ್ಟು ಭಸವಾಗುತ್ತೀರಿ ಎಂದು ಬಿಜೆಪಿ ನಾಯಕರು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಬಿ ಖಾತೆಯಿಂದ ಎ ಖಾತೆ ಪರಿವರ್ತನೆಗೆ ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು,ಅ.17- ಬಿ ಖಾತೆಯಿಂದ ಎ ಖಾತೆ ನೀಡುವ ಜಿಬಿಎ ನಿರ್ಧಾರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯೋಜನೆ ಆರಂಭದಲ್ಲೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಈಗಾಗಲೇ ನೂರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ ಜಾತಿ ಗಣತಿ ಕಾರ್ಯ ಮುಗಿದ ಕೂಡಲೇ ಅರ್ಜಿ ವಿಲೇವಾರಿ ಕಾರ್ಯ ಆರಂಭಿಸುತ್ತೇವೆ ಎಂದು ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

ನಮ್ಮ ಕಂಟ್ರೋಲ್‌ ರೂಂಗೆ ಖಾತೆಗೆ ಸಂಬಂಧಿಸಿದ ಸಾವಿರಾರು ಕರೆಗಳು ಬರುತ್ತಿವೆ. ಸಬ್‌ ರಿಜಿಸ್ಟ್ರಾರ್‌ ದರದ ಶೇ.5 ರಷ್ಟು ಮೊತ್ತವನ್ನು ಜನರು ಪಾವತಿ ಮಾಡಬೇಕು. ಮಾರ್ಕೆಟ್‌ ದರ ಹೆಚ್ಚಿರುತ್ತೆ ಹೀಗಾಗಿ ಗೈಡ್‌ಲೈನ್ಸ್ ವ್ಯಾಲ್ಯೂ ಪರಿಗಣನೆ ಮಾಡುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅವಧಿ ವಿಸ್ತಿರಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರ ಕೊಟ್ಟ ಡೆಡ್‌ ಲೈನ್‌ ಗೆ ಕೆಲವೇ ದಿನಗಳು ಬಾಕಿ ಇದೆ. ಈ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಯತ್ನಿಸಲಾಗುವುದು. ಸಾಧ್ಯವಾಗದಿದ್ದರೆ ಸರ್ಕಾರದೊಂದಿಗೆ ಮಾತನಾಡಿ ಅವಧಿ ವಿಸ್ತರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ನಗರದಲ್ಲಿ ಪಟಾಕಿ ಅಂಗಡಿಗಳಿಗೆ ಪೊಲೀಸ್‌‍ ಕಮಿಷನರ್‌ ಕೊಡ್ತಾರೆ ನಮ ಕಡೆಯಿಂದ ಪಟಾಕಿ ಮಳಿಗೆಗೆ ಜಾಗ ಗುರುತು ಮಾಡುವ ಕೆಲಸ ಆಗಿದೆ. ಪೊಲೀಸ್‌‍ ಕಮಿಷನರ್‌ ಜೊತೆ ಸಂಪರ್ಕದಲ್ಲಿದ್ದು, ಅಗತ್ಯ ಸುರಕ್ಷತೆಗೆ ಏನೇನ್‌ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧರಿಸುತ್ತಿದ್ದೇವೆ ಎಂದು ಅವರು ವಿವರಿಸಿದರು.

ಅಂಗನವಾಡಿಗಳಿಗೆ ಜನತಾ ಬಜಾರ್‌ ಆಹಾರ ಪದಾರ್ಥ ಪೂರೈಸಿ ; ಆರ್‌.ಅಶೋಕ್‌

ಬೆಂಗಳೂರು, ಅ.17- ಅಂಗನವಾಡಿಗಳಿಗೆ ಸರಬರಾಜಗುತ್ತಿರುವ ಕಳಪೆ ಆಹಾರವನ್ನು ನಿಲ್ಲಿಸಿ ಕೂಡಲೇ ಈ ಮೊದಲಿನಂತೆ ಜನತಾ ಬಜಾರ್‌ನಿಂದ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ರಾಜ್ಯದ ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಕಳಪೆ ಆಹಾರ ಕೂಡಲೇ ನಿಲ್ಲಿಸಿ ಮೊದಲಿನಂತೆ ಜನತಾ ಬಜಾರ್‌ ನಿಂದ ಉತ್ತಮ ಗುಣಮಟ್ಟದ ಆಹಾರ ಪೂರೈಸಬೇಕೆಂದು ಶಿಫಾರಸು ಮಾಡಿದೆ.

ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಸರಬರಾಜು ಆಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಅಶೋಕ್‌ ಅವರು ಸಮಿತಿ ಶಿಫಾರಸು ಮಾಡಿರುವಂತೆ ಜನತಾ ಬಜಾರ್‌ಗಳಿಂದಲೇ ಆಹಾರ ಪದಾರ್ಥ ಪೂರೈಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಈಗ ಮಕ್ಕಳಿಗೆ ಪೌಡರ್‌ ರೂಪದಲ್ಲಿ ಆಹಾರ ಸರಬರಾಜಾಗುತ್ತಿದ್ದು ಅದರಲ್ಲಿ ಪೌಷ್ಟಿಕಾಂಶ ಇದೆಯೋ ಇಲ್ಲವೋ ಗೊತ್ತಿಲ್ಲ, ಔಷಧಿ ರೂಪದಲ್ಲಿ ಆಹಾರ ಕೊಡುತ್ತಿದ್ದಾರೆ. ಗುಣಮಟ್ಟವಿಲ್ಲದ ಅಲ್ಪ ಪ್ರಮಾಣದ ಆಹಾರ ಪೂರೈಸುತ್ತಿರುವುದು ಕಂಡುಬಂದಿದೆ ಹಾಗಾಗಿ ಮೊದಲು ಏನು ಆಹಾರ ಪೂರೈಸಲಾಗುತ್ತಿತ್ತೋ ಆ ರೀತಿಯ ಆಹಾರವನ್ನು ಈಗಲೂ ಸಹ ಪೂರೈಕೆ ಮಾಡಬೇಕೆಂದು ಸಮಿತಿಯು ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ಕರ್ನಾಟಕ ರಾಜ್ಯದ ಬಡಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಯ ದೃಷ್ಟಿಯಿಂದ ಐತಿಹಾಸಿಕವಾದ ಹಾಗೂ ಮಹತ್ವದ ತೀರ್ಮಾನವಾಗಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ನೀಡಿರುವ ಆದೇಶವನ್ನು ರದ್ದುಪಡಿಸಿ, ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಸ್ಥೆ ಜನತಾ ಬಜಾರ್‌ ಮೂಲಕ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ಆದೇಶ ನೀಡುವುದು ಎಲ್ಲ ರೀತಿಯಲ್ಲೂ ಉತ್ತಮ ಕ್ರಮ ಆಗುತ್ತದೆ.ಹಾಗಾಗಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಶಿಫಾರಸ್ಸಿನ ಅನ್ವಯ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪತಿಯಿಂದಲೇ ಕೊಲೆಯಾದ ವೈದ್ಯೆ ಡಾ.ಕೃತಿಕಾ ರೆಡ್ಡಿ ಭವ್ಯ ಬಂಗಲೆಯನ್ನು ಇಸ್ಕಾನ್‌ಗೆ ದಾನ ಮಾಡಲು ಮುಂದಾದ ತಂದೆ

ಬೆಂಗಳೂರು,ಅ.17- ತನ್ನ ಪತಿಯಿಂದಲೇ ಅನೇಸ್ತೇಶಿಯಾ ಪಡೆದು ಕೊಲೆಯಾದ ವೈದ್ಯೆ ಡಾ.ಕೃತಿಕಾ ರೆಡ್ಡಿಗೆ ಕಟ್ಟಿಸಿಕೊಟ್ಟಿದ್ದ 3 ಕೋಟಿ ಬೆಲೆಬಾಳುವ ಭವ್ಯ ಬಂಗಲೆಯನ್ನು ಮೃತಳ ತಂದೆ ಇಸ್ಕಾನ್‌ಗೆ ದಾನ ಮಾಡಲು ತೀರ್ಮಾನಿಸಿದ್ದಾರೆ.ಅಯ್ಯಪ್ಪಲೇಔಟ್‌ನಲ್ಲಿ ಕೃತಿಕಾ ರೆಡ್ಡಿ ಅವರ ತಂದೆ ಕೆ.ಮುನಿರೆಡ್ಡಿ ಅವರು 3 ಕೋಟಿ ಮೌಲ್ಯದ ಮನೆಯನ್ನು ವಿವಾಹವಾದ ನಂತರ ತಮ ಹಣದಿಂದಲೇ ಖರೀದಿಸಿ ಕೊಟ್ಟಿದ್ದರು.

ಮಗಳು ಕೃತಿಕಾ ರೆಡ್ಡಿ ಹಾಗೂ ಅಳಿಯ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಮಹೇಂದ್ರ ರೆಡ್ಡಿ ತಮ ಮಕ್ಕಳ ಜೊತೆ ಕುಟುಂಬ ಸಮೇತ ಚೆನ್ನಾಗಿರಲೆಂದು ಅವರೇ ಸ್ವಂತ ದುಡ್ಡಿನಲ್ಲಿ ಬಂಗಲೆ ಖರೀದಿಸಿಕೊಟ್ಟಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ವೈದ್ಯೆಯಾಗಿದ್ದ ಕೃತಿಕಾ ರೆಡ್ಡಿ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಮಹೇಂದ್ರ ರೆಡ್ಡಿ ಯಾರೊಬ್ಬರು ನಿರೀಕ್ಷೆ ಮಾಡದ ರೀತಿಯಲ್ಲಿ ಚಿಕಿತ್ಸೆ ನೆಪದಲ್ಲಿ ಅನೆಸ್ತೇಶಿಯ ನೀಡಿ ಕೊಲೆ ಮಾಡಿದ್ದ.

ಈ ಘಟನೆಯಿಂದ ಭಾರೀ ಆಘಾತಕ್ಕೊಳಗಾಗಿರುವ ಮುನಿರೆಡ್ಡಿ ಹಾಗೂ ಕುಟುಂಬದವರು ನನ್ನ ಮಗಳೇ ಇಲ್ಲದ ಮೇಲೆ ಆ ಮನೆಯಲ್ಲಿ ಯಾರೋಬ್ಬರೂ ಇರಬಾರದು. ಕುಟುಂಬದವರು ಮತ್ತು ಮೊಮಕ್ಕಳು ಚೆನ್ನಾಗಿರಲೆಂದು ಖರೀದಿಸಿಕೊಟ್ಟಿದ್ದ ಈ ಮನೆ ನನ್ನ ಮಗಳಿಲ್ಲದ ಮೇಲೆ ಯಾರಿಗೆ ಕೊಟ್ಟರೂ ಪ್ರಯೋಜನವಿಲ್ಲ. ಹೀಗಾಗಿ ಈ ಮನೆಯನ್ನು ಇಸ್ಕಾನ್‌ಗೆ ದಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

ನನ್ನ ಮಗಳು ತನ್ನ ಪತಿ ಮತ್ತು ಮಕ್ಕಳೊಂದಿಗೆ ಸಂತೋಷದಿಂದ ಬದುಕುವುದನ್ನು ನೋಡಲು ಮಾತ್ರ ನಾನು ಈ ಮನೆಯನ್ನು ನಿರ್ಮಿಸಿದ್ದೆ. ಈಗ ಅವಳೇ ಇಲ್ಲ ಎಂದಮೇಲೆ ಯಾರಿಗಾಗಿ ಈ ಮನೆ? ಇದನ್ನು ಇಸ್ಕಾನ್‌ಗೆ ದಾನ ಮಾಡುತ್ತೇನೆ. ಅವರು ತಮ ಇಚ್ಛೆಗೆ ಅನುಗುಣವಾಗಿ ಈ ಬಂಗಲೆಯನ್ನು ಬಳಸಿಕೊಳ್ಳಿ ಎಂದು ತಿಳಿಸಿದ್ದಾರೆ. ಅಯ್ಯಪ್ಪಲೇಔಟ್‌ನಲ್ಲಿರುವ ಮನೆಯ ಮುಂದೆ ಡಾ.ಕೃತಿಕಾ .ಎಂ ರೆಡ್ಡಿ ನೆನಪಿಗಾಗಿ ಎಂದು ಬರೆದಿರುವ ನಾಮಫಲಕ ಎಲ್ಲರನ್ನು ಆಕರ್ಷಿಸುತ್ತಿದೆ.

ಪ್ರಕರಣದ ಹಿನ್ನೆಲೆ:
ಏಪ್ರಿಲ್‌ 24ರಂದು ತನ್ನ ಪತ್ನಿ, ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿ ಅವರಿಗೆ ಅತಿಯಾದ ಅರಿವಳಿಕೆ ಮದ್ದು ನೀಡಿ ಕೊಲೆಗೈದ ಆರೋಪದಲ್ಲಿ ವೈದ್ಯ ಡಾ. ಮಹೇಂದ್ರ ರೆಡ್ಡಿಯನ್ನು ಬಂಧಿಸಲಾಗಿತ್ತು.ಕೃತಿಕಾ ರೆಡ್ಡಿ ಅವರ ಮರಣೋತ್ತರ ಪರೀಕ್ಷೆಯ ಎಫ್‌ಎಸ್‌‍ಎಲ್‌ ವರದಿಯಲ್ಲಿ ಅತಿಯಾದ ಅರಿವಳಿಕೆ ನೀಡಿದ್ದರಿಂದಲೇ ಸಾವು ಸಂಭವಿಸಿದೆ ಎಂಬ ವರದಿ ಅನ್ವಯ ಅ.14ರಂದು ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿತ್ತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜನರಲ್‌ ಸರ್ಜನ್‌ ಆಗಿದ್ದ ಡಾ.ಮಹೇಂದ್ರ ರೆಡ್ಡಿ, ಶಸ್ತ್ರಚಿಕಿತ್ಸೆಗೆ ಬಳಸುವ ಅರಿವಳಿಕೆಯನ್ನು ಅಕ್ರಮವಾಗಿ ಮನೆಗೆ ತಂದು ಪತ್ನಿ ಕೃತಿಕಾ ರೆಡ್ಡಿಗೆ ನೀಡಿದ್ದಾನೆ ಎಂಬ ಬಲವಾದ ಅನುಮಾನ ಪೊಲೀಸರಲ್ಲಿದೆ.

ಆರೋಪಿ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಗುರುವಾರ ಆತನ ಗುಂಜೂರು ನಿವಾಸಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಅಲ್ಲಿಂದ ಲ್ಯಾಪ್‌ಟಾಪ್‌, ಹಾರ್ಡ್‌ಡಿಸ್ಕ್‌, ಕಂಪ್ಯೂಟರ್‌ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಮಹೇಂದ್ರ ರೆಡ್ಡಿ ಪತ್ನಿಯನ್ನು ಕೊಲೆ ಮಾಡಿಲ್ಲ ಎಂದು ವಾದಿಸುತ್ತಿದ್ದಾನೆ. ತನಗೆ ಕೊಲೆ ಬಗ್ಗೆ ಗೊತ್ತಿಲ್ಲ ಎಂದು ಪದೇ ಪದೇ ಹೇಳುತ್ತಾ ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ, ಆರೋಪಿಯನ್ನು 9 ದಿನಗಳ ಕಾಲ ಪೊಲೀಸ್‌‍ ವಶಕ್ಕೆ ಪಡೆಯಲಾಗಿದೆ.

ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸಿದರೆ ಬಿಜೆಪಿಗೆ ಭಯವೇಕೆ..? : ಪ್ರಿಯಾಂಕ್‌ ಪ್ರಶ್ನೆ

ಬೆಂಗಳೂರು, ಅ.17- ಸರ್ಕಾರಿ ಸ್ವತ್ತುಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸಿರುವ ಸಂಪುಟ ತೀರ್ಮಾನದಲ್ಲಿ ಯಾವುದೇ ಒಂದು ಸಂಘಟನೆಯ ಹೆಸರನ್ನು ಉಲ್ಲೇಖಿಸಿಲ್ಲ, ಇದು ಎಲ್ಲರಿಗೂ ಅನ್ವಯವಾಗುವ ಕಾನೂನು. ಏಕರೂಪಕ್ಕೆ ತರುವ ಪ್ರಯತ್ನ. ಹಾಗಿದ್ದರೂ ಬಿಜೆಪಿಯವರು ನೊಂದುಕೊಳ್ಳುತ್ತಿರುವುದೇಕೆ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲು ವಿಷಯಾಂತರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಕ್ಕೂ ತಿರುಗೇಟು ನೀಡಿದರು. ವಿಷಯಾಂತರಿಸುವ ಪ್ರಯತ್ನ ಎಂದೇ ಭಾವಿಸಲಿ. ಆದರೆ ನಾವು ಕೇಳುತ್ತಿರುವುದರಲ್ಲಿ ಅಕ್ರಮವಿದೆಯೇ? ಅಥವಾ ನ್ಯಾಯಯುತವೇ? ಎಂಬುದಕ್ಕೆ ಉತ್ತರ ನೀಡಬೇಕು. ಇವರಿಗೆ ಇಷ್ಟೊಂದು ಭಯ ಏಕೆ? ಎಂದು ಪ್ರಶ್ನಿಸಿದರು.

ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳನ್ನು ನಿಷೇಧಿಸಿದ್ದೇವೆ ಎಂದು ನಾವು ಎಲ್ಲಿಯೂ ಹೇಳಲಿಲ್ಲ. ಏಕರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಆದರೂ ಏಕೆ ಇಷ್ಟೊಂದು ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಸರ್ಕಾರ ಸರಿ ಇಲ್ಲ ಎಂದಾದರೆ, ಬೀದಿಗಿಳಿದು ಹೋರಾಟ ನಡೆಸಲಿ. ಅವರನ್ನು ಯಾರೂ ಬೇಡ ಎಂದಿಲ್ಲ. ಬುದ್ಧಬಸವ ಅಂಬೇಡ್ಕರ್‌ ತತ್ವವನ್ನು ರಾಜ್ಯದಲ್ಲಿ ಪಾಲಿಸಲು ಹೊರಟಿದ್ದೇವೆ. ಪ್ರಬುದ್ಧ ಸಮಾಜ ತರುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಬುದ್ಧತೆ ಇದ್ದರೆ, ಸಮೃದ್ಧ ಸಮಾಜ ಇರಲಿದೆ ಎಂದರು.

ಖಾಸಗಿ ಸಂಘ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಬಿಜೆಪಿಯವರಿಗೆ ಸಮಸ್ಯೆಯಾಗುವುದಾದರೆ, ಅದಕ್ಕೆ ನಾವೇನು ಮಾಡಲಾಗುವುದಿಲ್ಲ. ಅವರು, ಕೇಶವಕೃಪ ಹತ್ರ ಹೋಗಿ ಬಾಯಿ ಬಡಿದುಕೊಳ್ಳಲಿ. ನಾನು ಯಾರ ವಿರುದ್ಧವೂ ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ಬದಲಾಗಿ ನನ್ನ ವಿರುದ್ಧ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಆರ್‌ಎಸ್‌‍ಎಸ್‌‍ ಶಾಖೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ಮಕ್ಕಳಿಲ್ಲ. ಈ ಬಗ್ಗೆ ನನ್ನ ತಕರಾರು ಇದೆ. ಬಡವರ ಮಕ್ಕಳನ್ನು ಗೋ ರಕ್ಷಣೆ, ಧರ್ಮ ರಕ್ಷಣೆ ಎಂದು ದುರ್ಬಳಕೆ ಮಾಡಿಕೊಳ್ಳುತ್ತಿರುವ ನಾಯಕರು ತಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಿಸಿ, ಗೋ ರಕ್ಷೆಗಾಗಿ ರಸ್ತೆಗೆ ಬಿಡಲಿ, ಗೋ ಮೂತ್ರ ಕುಡಿಯಲು ಹೇಳಲಿ, ಗಣವೇಷ ಧರಿಸಿ, ಧರ್ಮ ರಕ್ಷಣೆ ಮಾಡಲಿ. ಆಗ ನನ್ನ ಮಾತುಗಳನ್ನು ನಿಲ್ಲಿಸುತ್ತೇನೆ ಎಂದು ಹೇಳಿದರು.

ನಾಲ್ಕು ದಿನದಿಂದ ಪುಢಾರಿಗಳ ಮೂಲಕ ನನಗೆ ಬೆದರಿಕೆ ಹಾಕಿಸಲಾಗುತ್ತಿದೆ. ನನ್ನ ಮಾತನ್ನು ನಾನು ನಿಲ್ಲಿಸುವುದಿಲ್ಲ. ಎಷ್ಟೇ ಬೆದರಿಕೆ ಬಂದರೂ ಜಗ್ಗುವುದಿಲ್ಲ. ಸರ್ಕಾರಿ ಶಾಲೆ, ಆಟದ ಮೈದಾನ, ಉದ್ಯಾನವನಗಳು ಹೇಗಿರಬೇಕು ಎಂದು ಹಿಂದೆ ಬಿಜೆಪಿ ಸರ್ಕಾರ ಮಾಡಿದ ಕಾನೂನನ್ನೇ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು.

ಕಾನೂನು ಪಾಲನೆ ಮಾಡದಿದ್ದವರ ವಿರುದ್ಧ ಕ್ರಮ ಕೈಗೊಳ್ಳುವುದು ಶತಃಸಿದ್ಧ. ಅನುಮತಿ ಪಡೆದು, ಅವರು ಪಥ ಸಂಚಲನ ಮಾಡಲಿ. 100 ವರ್ಷದ ಆಚರಣೆ ವೇಳೆ 100 ಕಡೆ ಪಥ ಸಂಚಲನ ಮಾಡಿದ್ದಾರೆ. ಯಾರ ಅನುಮತಿ ಪಡೆದಿದ್ದಾರೆ? ಲಾಠಿ ಹಿಡಿದು ಹೋರಾಡಲು ಯಾವ ಧರ್ಮದಲ್ಲಿ ಅವಕಾಶವಿದೆ? ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರು ಪದೇಪದೇ ಕಲಬುರಗಿಗೆ ಬರುವುದನ್ನು ನಾನು ಸ್ವಾಗತಿಸುತ್ತೇನೆ. ನಾನು ಈಗಾಗಲೇ ಎಚ್ಚರವಾಗಿದ್ದೇನೆ. ಪ್ರಬುದ್ಧತೆ ಇರುವುದಕ್ಕಾಗಿಯೇ ಪತ್ರ ಬರೆದಿದ್ದೇನೆ. ಬಿಜೆಪಿಯವರು ಬಂದು ಎಚ್ಚರಿಕೆ ಕೊಡುವ ಅಗತ್ಯ ಇಲ್ಲ. ಅವರಿಗೆ ಕಾನೂನಿನ ತಿಳವಳಿಕೆ ನೀಡಲಾಗುತ್ತಿದೆ. ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಇನ್ಫೋಸಿಸ್‌‍ನ ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಅವರು ಮಾಹಿತಿ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ಎಲ್ಲರೂ ಸಹಕರಿಸಿ ಮಾಹಿತಿ ನೀಡಿದರೆ ಒಳ್ಳೆಯದಾಗುತ್ತದೆ. ನಾನು ಮೇಲ್ಜಾತಿ, ಸೂಪರ್‌ ಶ್ರೀಮಂತ ಎಂದು ಹೇಳಿ ಸಮೀಕ್ಷೆಯಲ್ಲಿ ಭಾಗವಹಿಸದಿರುವುದು ಸರಿಯಲ್ಲ.

ಮುಂದೆ ಕೇಂದ್ರ ಸರ್ಕಾರ ಕೂಡ ಜನಗಣತಿ ಹಾಗೂ ಜಾತಿ ಸಮೀಕ್ಷೆ ನಡೆಸುತ್ತದೆ. ಆಗಲೂ ಇವರು ಭಾಗವಹಿಸುವುದಿಲ್ಲ ಎನ್ನುತ್ತಾರೆಯೇ? ಎಂದು ಪ್ರಶ್ನಿಸಿದರು.ಕೆಲವು ಅವಿವೇಕಿ ಸಂಸದರು ನೀಡಿದ ಹೇಳಿಕೆಗಳಿಂದ ಪ್ರಭಾವಿತರಾಗಿ ನಾರಾಯಣಮೂರ್ತಿ ಅವರು, ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿರಬಹುದು ಎಂದರು.

ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ : ಸಹಾಯವಾಣಿ ಮೂಲಕ ನೋಂದಣಿಗೆ ಅವಕಾಶ

ಬೆಂಗಳೂರು,ಅ.16- ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಸಂಬಂಧ, ಬೆಂಗಳೂರು ನಗರ ಜಿಲ್ಲೆಯ ನಾಗರೀಕರು ಸಮೀಕ್ಷೆಗೆ ತಮ ಮಾಹಿತಿ ನೋಂದಾಯಿಸಲು ಅನುಕೂಲವಾಗುವಂತೆ ಸಹಾಯವಾಣಿ ಒದಗಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ ಜಗದೀಶ ತಿಳಿಸಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಳ ಬಗ್ಗೆ ಸಮೀಕ್ಷೆಗೆ ನೋಂದಾಯಿಸಿಕೊಳ್ಳದೇ ಉಳಿದಿರುವ ಬೆಂಗಳೂರು ನಗರ ಜಿಲ್ಲಾ ನಿವಾಸಿಗಳು ಅ18ರೊಳಗಾಗಿ ತಮ ವಿವರಗಳನ್ನು ತಾಲ್ಲೂಕು ಕಚೇರಿ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಾದ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.

ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಮಧುರಾಜ್‌ ಸಹಾಯವಾಣಿ ಸಂಖ್ಯೆ-9916681192, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿ ಅಶ್ವಿನಿ- 9019242803, ಬೆಂಗಳೂರುಪೂರ್ವ ತಾಲ್ಲೂಕಿನಲ್ಲಿ ರಾಜೀವ್‌ -9632339738, ಯಲಹಂಕ ತಾಲ್ಲೂಕಿನಲ್ಲಿ ಶ್ರೇಯಸ್ಸ್‌ -8660575524, ಆನೇಕಲ್‌ ತಾಲ್ಲೂಕಿನಲ್ಲಿ ಶಶಿಧರ್‌ ಮಾಡಿಯಾಳ್‌ -9449289995, ಹೆಬ್ಬಗೋಡಿ ನಗರಸಭೆಯಲ್ಲಿ ರಾಜೇಂದ್ರ ಬಿ.ಎಲ್‌‍- 080-27833736, ಮಾದನಯಕನಹಳ್ಳಿ ನಗರಸಭೆಯ ಆರ್‌.ಮಂಜುನಾಥ್‌‍-7975559204, ಆನೇಕಲ್‌‍, ಪುರಸಭೆಯ ಹೆಚ್‌‍.ಎ.ಕುಮಾರ-080-27830092, ಅತ್ತಿಬೆಲೆ, ಪುರಸಭೆಯ ದೊಡ್ಡ ಅವಲಪ್ಪ -8296350533, ಬೊಮ್ಮಸಂದ್ರ ಪುರಸಭೆಯ ವೆಂಕಟೇಶಪ್ಪ ಬಿ.ಆರ್‌-080-27834655, ಚಂದಾಪುರ ಪುರಸಭೆಯ ಮಂಜುನಾಥ-080-27832411, ಜಿಗಣಿ, ಪುರಸಭೆಯ ರಾಜೇಶ್‌‍-080-29760400, ಹುಣಸಮಾರನಹಳ್ಳಿ ಪುರಸಭೆಯ ಕಾಂತರಾಜು-080-23901684, ಚಿಕ್ಕಬಾಣಾವರ, ಪುರಸಭೆಯ ಮಂಜುನಾಥ ಎಸ್‌‍-8546824510, ಕೋನಪ್ಪನ ಅಗ್ರಹಾರ, ಪುರಸಭೆಯ ಎ.ಮುನಿರಾಜು-080-22441443, ದೊಡ್ಡತೊಗೂರು, ಪಟ್ಟಣ ಪಂಚಾಯಿತಿಯ ರಾಜೇಶ್‌ ಅವರನ್ನು ಸಹಾಯವಾಣಿ ಸಂಖ್ಯೆ -080-22111177ರ ಮೂಲಕ ಸಂಪರ್ಕಿಸಿ ತಮ ಮಾಹಿತಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ನ್ಯಾಯಾಲಯ ತಲುಪಿದ ಟ್ರಂಪ್ ವಿಧಿಸಿದ ಹೆಚ್‌-1ಬಿ ಶುಲ್ಕದ ವಿಚಾರ

ವಾಷಿಂಗ್ಟನ್‌, ಅ. 17 (ಪಿಟಿಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಆಡಳಿತವು ಎಲ್ಲಾ ಹೊಸ ಹೆಚ್‌-1ಬಿ ವೀಸಾ ಅರ್ಜಿಗಳ ಮೇಲೆ ಒಂದು ಲಕ್ಷ ಡಾಲರ್‌ಗಳ ಶುಲ್ಕ ವಿಧಿಸುವ ನಿರ್ಧಾರದ ವಿರುದ್ಧ ಚೇಂಬರ್‌ ಆಫ್‌ ಕಾಮರ್ಸ್‌ ಮೊಕದ್ದಮೆ ಹೂಡಿದೆ, ಇದು ಅಮೆರಿಕದ ನಾವೀನ್ಯತೆ ಮತ್ತು ಸ್ಪರ್ಧಾತ್ಮಕತೆಯನ್ನು ಕುಂಠಿತಗೊಳಿಸುವ ದಾರಿತಪ್ಪಿದ ನೀತಿ ಮತ್ತು ಸ್ಪಷ್ಟವಾಗಿ ಕಾನೂನುಬಾಹಿರ ಕ್ರಮ ಎಂದು ಅದು ಹೇಳಿದೆ.

ಕೊಲಂಬಿಯಾದ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ಮೊಕದ್ದಮೆಯು, ಟ್ರಂಪ್‌ ಆಡಳಿತದ ಸೆಪ್ಟೆಂಬರ್‌ 19 ರ ಘೋಷಣೆಯಾದ ಕೆಲವು ವಲಸೆರಹಿತ ಕಾರ್ಮಿಕರ ಪ್ರವೇಶದ ಮೇಲಿನ ನಿರ್ಬಂಧವನ್ನು ಪ್ರಶ್ನಿಸುತ್ತದೆ, ಇದು ಹೆಚ್‌-1ಬಿ ವೀಸಾ ಕಾರ್ಯಕ್ರಮವನ್ನು ನಿಯಂತ್ರಿಸುವ ಕಾಂಗ್ರೆಸ್‌‍ನ ಅಧಿಕಾರವನ್ನು ಅತಿಕ್ರಮಿಸುವ ಮೂಲಕ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ವಾದಿಸುತ್ತದೆ.

ಹೋಮ್‌ಲ್ಯಾಂಡ್‌‍ ಸೆಕ್ಯುರಿಟಿ ಮತ್ತು ಸ್ಟೇಟ್‌ ಇಲಾಖೆಗಳು, ಅವುಗಳ ಕಾರ್ಯದರ್ಶಿಗಳಾದ ಕ್ರಿಸ್ಟಿ ಎಲ್‌ ನೋಯೆಮ್‌ ಮತ್ತು ಮಾರ್ಕೊ ರುಬಿಯೊ ಅವರನ್ನು ಕ್ರಮವಾಗಿ ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.ಪ್ರಸ್ತುತ ಇರುವ ಸುಮಾರು 3,600 ರ ಮಟ್ಟದಿಂದ ಹೆಚ್ಚಿನ ಶುಲ್ಕವು ಅಮೆರಿಕದ ಉದ್ಯೋಗದಾತರಿಗೆ, ವಿಶೇಷವಾಗಿ ಸ್ಟಾರ್ಟ್‌-ಅಪ್‌ಗಳು ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಹೆಚ್‌-1ಬಿ ಕಾರ್ಯಕ್ರಮವನ್ನು ಬಳಸಿಕೊಳ್ಳುವುದು ವೆಚ್ಚ-ನಿಷೇಧಿತವಾಗಿಸುತ್ತದೆ, ಇದನ್ನು ಎಲ್ಲಾ ಗಾತ್ರದ ಅಮೇರಿಕನ್‌ ವ್ಯವಹಾರಗಳು ಇಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಬೆಳೆಸಲು ಅಗತ್ಯವಿರುವ ಜಾಗತಿಕ ಪ್ರತಿಭೆಗಳನ್ನು ಪ್ರವೇಶಿಸಬಹುದು ಎಂದು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್‌‍ ಸ್ಪಷ್ಟವಾಗಿ ರಚಿಸಿದೆ ಎಂದು ಚೇಂಬರ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ನೀತಿ ಅಧಿಕಾರಿ ನೀಲ್‌ ಬ್ರಾಡ್ಲಿ ಹೇಳಿದರು.

ತನ್ನ ದೂರಿನಲ್ಲಿ, ಈ ಘೋಷಣೆಯು ತಪ್ಪು ನೀತಿ ಮಾತ್ರವಲ್ಲ; ಇದು ಸ್ಪಷ್ಟವಾಗಿ ಕಾನೂನುಬಾಹಿರ ಎಂದು ವ್ಯಾಪಾರ ಸಂಸ್ಥೆ ಹೇಳಿದೆ. ನಾಗರಿಕರಲ್ಲದವರ ಪ್ರವೇಶದ ಮೇಲೆ ಗಮನಾರ್ಹ ಅಧಿಕಾರವನ್ನು ಹೊಂದಿದ್ದಾರೆ, ಆದರೆ ಆ ಅಧಿಕಾರವು ಕಾನೂನಿನಿಂದ ಸೀಮಿತವಾಗಿದೆ ಮತ್ತು ಕಾಂಗ್ರೆಸ್‌‍ ಅಂಗೀಕರಿಸಿದ ಕಾನೂನುಗಳನ್ನು ನೇರವಾಗಿ ವಿರೋಧಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಘೋಷಣೆ ನಿಖರವಾಗಿ ಹೀಗೆ ಮಾಡುತ್ತದೆ: ಇದು -1 ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್‌‍ ನಿಗದಿಪಡಿಸಿದ ಶುಲ್ಕವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಮತ್ತು ಈ ಕಾರ್ಯಕ್ರಮವು ಅಮೇರಿಕನ್‌ ಸಮಾಜದ ಸುಧಾರಣೆಗಾಗಿ ವಾರ್ಷಿಕವಾಗಿ 85,000 ಜನರಿಗೆ ತಮ್ಮ ಪ್ರತಿಭೆಯನ್ನು ಅಮೆರಿಕಕ್ಕೆ ಕೊಡುಗೆ ನೀಡಲು ಒಂದು ಮಾರ್ಗವನ್ನು ಒದಗಿಸಬೇಕು ಎಂಬ ಕಾಂಗ್ರೆಸ್‌‍ನ ತೀರ್ಪನ್ನು ವಿರೋಧಿಸುತ್ತದೆ ಎಂದು ಅದು ಹೇಳಿದೆ.

ಈ ಘೋಷಣೆಯು ಅಧ್ಯಕ್ಷರ ಕಾನೂನುಬದ್ಧ ಅಧಿಕಾರವನ್ನು ಮೀರಿದೆ ಎಂದು ದೂರಿನಲ್ಲಿ ಒತ್ತಿ ಹೇಳಲಾಗಿದೆ.ಅಮೆರಿಕದಲ್ಲಿ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುವ ಟ್ರಂಪ್‌ ಅವರ ಪ್ರಸ್ತಾಪಗಳನ್ನು ಚೇಂಬರ್‌ ಸಕ್ರಿಯವಾಗಿ ಬೆಂಬಲಿಸಿದೆ, ಆದರೆ ಈ ಬೆಳವಣಿಗೆಯನ್ನು ಬೆಂಬಲಿಸಲು, ಅಮೆರಿಕದ ಆರ್ಥಿಕತೆಗೆ ಕಡಿಮೆ ಅಲ್ಲ, ಹೆಚ್ಚಿನ ಕಾರ್ಮಿಕರ ಅಗತ್ಯವಿರುತ್ತದೆ ಎಂದು ಬ್ರಾಡ್ಲಿ ಹೇಳಿದರು.

ಅ.22ರಂದು ಶಬರಿಮಲೆ ದೇವಾಲಯಕ್ಕೆ ರಾಷ್ಟ್ರಪತಿ ಮುರ್ಮು ಭೇಟಿ

ಕೊಚ್ಚಿ, ಅ. 17 (ಪಿಟಿಐ)ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇದೇ 22 ರಂದು ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೇಗುಲದಲ್ಲಿ ವಿವಿಐಪಿ ಬೆಂಗಾವಲಿಗೆ ಅನುಮತಿ ನೀಡುವಂತೆ ಶಬರಿಮಲೆ ವಿಶೇಷ ಆಯುಕ್ತರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ರಾಷ್ಟ್ರಪತಿಗಳ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ವಿಸ್ತಾರವಾದ ಜನಸಂದಣಿ ನಿರ್ವಹಣಾ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾಯಾಲಯವು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಗೆ ನಿರ್ದೇಶನ ನೀಡಿದೆ.

ವಿಶೇಷ ಆಯುಕ್ತರ ಪ್ರಕಾರ, ಕೇರಳ ಪೊಲೀಸರ ಐದು ನಾಲ್ಕು ಚಕ್ರ ಚಾಲನೆಯ ವಾಹನಗಳು 4.5 ಕಿಮೀ ಉದ್ದದ ಸ್ವಾಮಿ ಅಯ್ಯಪ್ಪನ್‌ ರಸ್ತೆ ಮತ್ತು ಸನ್ನಿಧಾನಕ್ಕೆ ಸಾಂಪ್ರದಾಯಿಕ ಚಾರಣ ಮಾರ್ಗದಲ್ಲಿ ಆಂಬ್ಯುಲೆನ್‌್ಸನೊಂದಿಗೆ ರಾಷ್ಟ್ರಪತಿಗಳ ಬೆಂಗಾವಲು ಪಡೆಯ ಭಾಗವಾಗಿರುತ್ತವೆ.

ವಿವಿಐಪಿ ಭದ್ರತೆಗಾಗಿ ಬ್ಲೂ ಬುಕ್‌ ಪ್ರೋಟೋಕಾಲ್‌ ಅನ್ನು ಅನುಸರಿಸಬೇಕು ಎಂದು ನ್ಯಾಯಾಲಯವು ನಿರ್ದೇಶಿಸಿದೆ.ಪತ್ತನಂತಿಟ್ಟದಲ್ಲಿರುವ ಪೊಲೀಸ್‌‍ ಅಧಿಕಾರಿಗಳು ಈಗಾಗಲೇ ಭದ್ರತಾ ಪೂರ್ವಾಭ್ಯಾಸ ನಡೆಯುತ್ತಿದ್ದು, ಶೀಘ್ರದಲ್ಲೇ ಪೂರ್ಣ ಬೆಂಗಾವಲು ವಿಚಾರಣೆಯನ್ನು ನಡೆಸಲಾಗುವುದು ಎಂದು ಹೇಳಿದರು.

ಸಾಂಪ್ರದಾಯಿಕವಾಗಿ, ಭಕ್ತರು ಕಾಲ್ನಡಿಗೆಯಲ್ಲಿ ಅಥವಾ ಗೊಂಬೆಗಳಲ್ಲಿ (ಪಲ್ಲಕ್ಕಿಗಳು) ಬೆಟ್ಟದ ಮೇಲೆ ಚಾರಣ ಕೈಗೊಳ್ಳುತ್ತಾರೆ.1970 ರ ದಶಕದಲ್ಲಿ ಶಬರಿಮಲೆಗೆ ಭೇಟಿ ನೀಡಿದ ಮಾಜಿ ಅಧ್ಯಕ್ಷ ವಿ.ವಿ. ಗಿರಿ ಅವರು ಡಾಲಿಯಲ್ಲಿ ದೇವಾಲಯವನ್ನು ತಲುಪಿದರು ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಮತ್ತು ದೇವಾಲಯಕ್ಕೆ ಸರಕುಗಳನ್ನು ಸಾಗಿಸಲು ಟಿಡಿಬಿ ಮತ್ತು ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುವ ಆಂಬ್ಯುಲೆನ್‌್ಸಗಳು ಮತ್ತು ಟ್ರ್ಯಾಕ್ಟರ್‌ಗಳಿವೆ ಎಂದು ಟಿಡಿಬಿ ಅಧಿಕಾರಿ ತಿಳಿಸಿದ್ದಾರೆ.ಅಧ್ಯಕ್ಷ ಮುರ್ಮು ನಾಲ್ಕು ದಿನಗಳ ಭೇಟಿಯ ಭಾಗವಾಗಿ ಅಕ್ಟೋಬರ್‌ 21 ರಂದು ಕೇರಳಕ್ಕೆ ಆಗಮಿಸಲಿದ್ದಾರೆ.

ಪರೀಕ್ಷೆ ತಪ್ಪಿಸಲು ಶಾಲೆಗೆ ಬಾಂಬ್‌ ಬೆದರಿಕೆ ಇ-ಮೇಲ್‌ ಕಳಿಸಿದ ವಿದ್ಯಾರ್ಥಿ

ನವದೆಹಲಿ, ಅ.17- ಪರೀಕ್ಷೆಗಳನ್ನು ತಪ್ಪಿಸಲು ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ಬಾಂಬ್‌ ಇಡಲಾಗಿದೆ ಎಂದು ಇ-ಮೇಲ್‌ ಕಳಿಸಿದ್ದ ಘಟನೆ ಇಲ್ಲಿ ನಡೆದಿದೆ. ದೆಹಲಿಯ ಹೊರವಲಯದ ಖಾಸಗಿ ಶಾಲೆಗೆ ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಬಂದಿದೆ ಪೊಲೀಸರು ಪರಿಶೀಲನೆ ನಡೆಸಿದಾಗ ಅದು ಹುಸಿ ಬೆದರಿಕೆ ಎಂದು ಹೊತ್ತಾಗಿ ಕಳಿಸಿದವರು ಯಾರು ಎಂದು ತನಿಖೆ ನಡೆಸಿದಾಗ ಅದೆ ಶಾಲೆಯ ವಿದ್ಯಾರ್ಥಿ ಎಂದು ಗೊತ್ತಾಗಿದೆ.

ವಿಶಾಲ್‌ ಭಾರತಿ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲರು ಪಶ್ಚಿಮ ವಿಹಾರ್‌ ಪೂರ್ವ ಪೊಲೀಸ್‌‍ ಠಾಣೆಗೆ ಮಹಿತಿ ನೀಡಿದಾಗ ಬಾಂಬ್‌ ನಿಷ್ಕ್ರಿಯ ದಳ, ಶ್ವಾನ ದಳ ಮತ್ತು ಅಗ್ನಿಶಾಮಕ ದಳದ ತಂಡಗಳನ್ನು ಸಂಪೂರ್ಣ ಪರಿಶೀಲನೆ ನಡೆಸಲು ಕರೆಸಲಾಯಿತು ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೋಧನೆಯ ಸಮಯದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲವಾದ ನಂತರ, ಬೆದರಿಕೆಯನ್ನು ಸುಳು ಎಂದು ಘೋಷಿಸಲಾಯಿತು ಎಂದು ಅವರು ಹೇಳಿದರು.ಪ್ರಕರಣ ದಾಖಲಿಸಲಾಯಿತು ಮತ್ತು ತನಿಖೆಯ ಸಮಯದಲ್ಲಿ, ಸೈಬರ್‌ ತಂಡವು ಇ-ಮೇಲ್‌ನ ಮೂಲವನ್ನು ಬಾಲಾಪರಾಧಿಗೆ ಪತ್ತೆಹಚ್ಚಿತು.

ಬಾಲಾಪರಾಧಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಿದಾಗ, ಪರೀಕ್ಷೆಗಳಿಗೆ ಹೆದರಿ ಶಾಲೆಗೆ ರಜೆ ಘೋಷಿಸಬೇಕೆಂದು ಬೆದರಿಕೆ ಪತ್ರ ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿ ಹೇಳಿದರು

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ : ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ ಬಂಧನ

ತಿರುವನಂತಪುರಂ,ಅ.17– ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಿಂದ ಚಿನ್ನ ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಇಂದು ಬೆಂಗಳೂರು ಮೂಲದ ಉದ್ಯಮಿ,ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿಯನ್ನು ಬಂಧಿಸಿದೆ. ಪುಲಿಮಠದಲ್ಲಿರುವ ಅವರ ನಿವಾಸದಿಂದ ಆರೋಪಿಯನ್ನು ಬಂಧಿಸಿತಿರುವನಂತಪುರಂನ ಎಸ್‌‍ಐಟಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ನಂತರ, ಪೊಟ್ಟಿ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಮಧ್ಯಾಹ್ನದ ವೇಳೆಗೆ ಪತ್ತನಂತಿಟ್ಟಕ್ಕೆ ಕರೆದುಕೊಂಡು ಹೋಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ವಿವರವಾದ ವಿಚಾರಣೆಗಾಗಿ ಪೊಟ್ಟಿಯನ್ನು ಕಸ್ಟಡಿಗೆ ನೀಡಲು ಎಸ್‌‍ಐಟಿ ಕೋರಲಿದೆ.
ಕೇರಳ ಹೈಕೋರ್ಟ್‌ ನಿರ್ದೇಶನದ ಮೇರೆಗೆ ರಚಿಸಲಾದ ಎಸ್‌‍ಐಟಿ ಪ್ರಸ್ತುತ ಎರಡು ಪ್ರಕರಣಗಳ ತನಿಖೆ ನಡೆಸುತ್ತಿದೆ – ಒಂದು ದ್ವಾರಪಾಲಕ ವಿಗ್ರಹಗಳಿಂದ ಕಾಣೆಯಾದ ಚಿನ್ನ ಮತ್ತು ಇನ್ನೊಂದು ಶ್ರೀಕೋವಿಲ್‌ ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ನಷ್ಟಕ್ಕೆ ಸಂಬಂಧಿಸಿದೆ.

2019 ರಲ್ಲಿ ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರದ ತಟ್ಟೆಗಳು ಮತ್ತು ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳನ್ನು ವಿದ್ಯುಲ್ಲೇಪಿಸುವಿಕೆಗಾಗಿ ಪಾಟಿಗೆ ಹಸ್ತಾಂತರಿಸುವಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಸದಸ್ಯರು ಮತ್ತು ಅಧಿಕಾರಿಗಳ ಭಾಗಿಯಾಗಿರುವ ಬಗ್ಗೆಯೂ ಎಸ್‌‍ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ, ಟಿಡಿಬಿ ವಿಜಿಲೆನ್‌್ಸವಿಂಗ್‌ ಪಾಟಿಯನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿತ್ತು ಮತ್ತು ಅದರ ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ಅವರ ಹೇಳಿಕೆಯನ್ನು ದಾಖಲಿಸಿತ್ತು. ಎಸ್‌‍ಐಟಿ ತನ್ನ ತನಿಖೆಯನ್ನು ಮುಕ್ತಾಯಗೊಳಿಸಲು ಹೈಕೋರ್ಟ್‌ ಆರು ವಾರಗಳ ಗಡುವನ್ನು ನಿಗದಿಪಡಿಸಿದೆ.