Home Blog Page 44

ಸಾರ್ವಕಾಲಿಕ ದಾಖಲೆ ಬರೆದ ಚಿನ್ನ, ಬೆಳ್ಳಿ ಬೆಲೆ

ನವದೆಹಲಿ,ಅ.15- ರಾಷ್ಟ್ರ ರಾಜಧಾನಿ ಯಲ್ಲಿ ಚಿನ್ನದ ಬೆಲೆ ಒಂದೇ ದಿನದಲ್ಲಿ 2,850 ರೂ. ಏರಿಕೆಯಾಗುವುದರ ಮೂಲಕ 10 ಗ್ರಾಂಗೆ 1,30,800 ರೂ. ತಲುಪಿದೆ. ಧಂತೇರಾಸ್‌‍ ಹಬ್ಬದ ಹಿನ್ನೆಲೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಮತ್ತು ಆಭರಣ ವ್ಯಾಪಾರಿಗಳಿಂದ ಭಾರೀ ಪ್ರಮಾಣದಲ್ಲಿ ಹಬ್ಬದ ಖರೀದಿ ನಡೆದಿದೆ.

ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 99.9 ಪ್ರತಿಶತ ಶುದ್ಧತೆಯ ಅಮೂಲ್ಯ ಲೋಹ ಸೋಮವಾರ 10 ಗ್ರಾಂಗೆ 1,27,950 ರೂ.ಗೆ ಮುಕ್ತಾಯಗೊಂಡಿತ್ತು.99.5 ಪ್ರತಿಶತ ಶುದ್ಧ ಚಿನ್ನವು ಮಂಗಳವಾರ 2,850 ರೂ. ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ದಾಖಲೆಯ 1,30,200 ರೂ. ತಲುಪಿದೆ. ಇಲ್ಲಿವರೆಗೆ ಬಂಗಾರದ ಬೆಲೆ ಅಂದರೆ 2024ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಶೇ.65.67ರಷ್ಟು ಏರಿಕೆಯಾಗಿದೆ.

ಜಾಗತಿಕ ರಾಜಕೀಯ ಕಾರಣಗಳು, ಪೂರೈಕೆ ನಿರ್ಬಂಧಗಳು ಮತ್ತು ಬಲವಾದ ದೇಶೀಯ ಹೂಡಿಕೆ ಬೇಡಿಕೆ ಹಾಗೂ ದುರ್ಬಲ ರೂಪಾಯಿಯಿಂದ ಚಿನ್ನ ಮತ್ತು ಬೆಳ್ಳಿ ಹೊಸ ಗರಿಷ್ಠ ಮಟ್ಟವನ್ನು ತಲುಪಿವೆ. ಏರಿಕೆಯ ಪ್ರವೃತ್ತಿ ಹಾಗೇ ಮುಂದುವರೆದಿದೆ.

ಬೆಳ್ಳಿ ಕೂಡ 6,000 ರೂ.ಗಳಷ್ಟು ಏರಿಕೆಯಾಗಿ ಪ್ರತಿ ಕಿಲೋಗ್ರಾಂಗೆ 1,85,000 ರೂ.ಗಳ ಜೀವಮಾನದ ಗರಿಷ್ಠ ಮಟ್ಟ ತಲುಪಿದೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ), ಇದು ಸತತ 5ನೇ ದಿನದ ಏರಿಕೆಯನ್ನು ಸೂಚಿಸುತ್ತದೆ. ಹಿಂದಿನ ಮಾರುಕಟ್ಟೆ ಅವಧಿಯಲ್ಲಿ ಬಿಳಿ ಲೋಹವು ಪ್ರತಿ ಕೆಜಿಗೆ 1,79,000 ರೂ.ಗಳಲ್ಲಿ ಸ್ಥಿರವಾಗಿತ್ತು.

ರೂಪಾಯಿ ಕುಸಿತವೇ ಬೆಲೆ ಏರಿಕೆಗೆ ಕಾರಣ:
ಹಬ್ಬ ಮತ್ತು ಮದುವೆ ಋತುವಿಗೆ ಮುಂಚಿತವಾಗಿ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ನಿರಂತರ ಬೇಡಿಕೆ ಹೆಚ್ಚಾಗಿದೆ. ಮಂಗಳವಾರ ಯುಎಸ್‌‍ ಡಾಲರ್‌ ವಿರುದ್ಧ 12 ಪೈಸೆ ಕುಸಿದು 88.80ರಷ್ಟು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಮರಳಿದ್ದು, ಬೆಳ್ಳಿ ಬೆಲೆಯಲ್ಲಿ ತೀವ್ರ ಏರಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಬೆಳ್ಳಿ ಬೆಲೆ 95,300 ರೂ. ಅಥವಾ ಶೇ. 106.24ರಷ್ಟು ಏರಿಕೆಯಾಗಿದೆ. ಡಿಸೆಂಬರ್‌ 31, 2024 ರಂದು ಪ್ರತಿ ಕಿಲೋಗ್ರಾಂಗೆ 89,700 ರೂಪಾಯಿ ಇತ್ತು. ಸತತ ಎಂಟು ವಾರಗಳ ಕಾಲ ಏರಿಕೆ ಕಂಡ ಸ್ಪಾಟ್‌ ಚಿನ್ನ, ಪ್ರತಿ ಔನ್‌್ಸಗೆ 4,179 ಡಾಲರ್‌ಗಳ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.

ವಿಶ್ವದ ಅತಿದೊಡ್ಡ ಬೆಳ್ಳಿ ಬಳಕೆದಾರ ರಾಷ್ಟ್ರವಾದ ಭಾರತದಲ್ಲಿ, ಬಿಳಿ ಲೋಹದ ಬೆಲೆಗಳು ಜಾಗತಿಕ ಮಾನದಂಡಗಳಿಗಿಂತ ಶೇ. 10-15ರಷ್ಟು ಹೆಚ್ಚಿನ ಏರಿಕೆಯಾಗಿ ವಹಿವಾಟು ನಡೆಸುತ್ತಿವೆ. ಬಲವಾದ ಹೂಡಿಕೆ ಮತ್ತು ಹಬ್ಬ ಸಂಬಂಧಿತ ಬೇಡಿಕೆಯಿಂದಾಗಿ, ಭೌತಿಕವಾಗಿ ಬೆಂಬಲಿತ ಇಟಿಎಪ್‌ಗಳು ಹೊಸ ಚಂದಾದಾರಿಕೆಗಳನ್ನು ನಿಲ್ಲಿಸಲು ಪ್ರೇರೇಪಿಸುತ್ತಿವೆ ಎಂದು ಸರಕು ಮತ್ತು ಕರೆನ್ಸಿಗಳ ಮುಖ್ಯಸ್ಥ ಪ್ರವೀಣ್‌ ಸಿಂಗ್‌ ಹೇಳಿದ್ದಾರೆ.

ದೇಶೀಯ ಮಾರುಕಟ್ಟೆಗಳಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ ರೂ. 1,94,639 ಕ್ಕೆ ಏರುವ ಸಾಧ್ಯತೆಯಿದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಇದು ಔನ್‌್ಸಗೆ ಯುಎಸ್‌‍ಡಿ 59.89 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದೆ : ಗೃಹ ಸಚಿವ ಪರಮೇಶ್ವರ್‌

ಬೆಂಗಳೂರು, ಅ.15- ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣ ಇದೆ. ಗೂಗಲ್‌ ಸಂಸ್ಥೆಯವರು ರಾಜ್ಯ ಬಿಟ್ಟು ಹೊರ ಹೋಗಲು ಬೇರೆಯೇ ಕಾರಣ ಇರಬಹುದು. ಆದರೆ ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ವ್ಯತಿರಿಕ್ತವಾದ ಪರಿಸರ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೆಲಸ ಪ್ರಗತಿಯಲ್ಲಿರುವಾಗಲೇ ಟೀಕೆ ಮಾಡುವುದು ಸರಿಯಲ್ಲ. ಕೆಲಸ ಮುಗಿದ ಮೇಲೆ ಬೇಕಾದರೆ ಸರಿಯಿಲ್ಲ ಎಂದರೆ ಟೀಕೆ ಮಾಡಲಿ ಎಂದರು.

ರಾಜ್ಯದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10.22 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಸಹಿ ಹಾಕಲಾಗಿದೆ. ಈವರೆಗೂ 3.5ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ ಎಂದರು.ನೆರೆ ರಾಜ್ಯಗಳಿಂದ ಉದ್ಯಮಿಗಳು ಕರ್ನಾಟಕದತ್ತ ಮುಖ ಮಾಡಿದ್ದಾರೆ. ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತದೆ. ಕೈಗಾರಿಕಾ ವಿರೋಧಿಯಾದ ವಾತಾವರಣವನ್ನು ನಾವು ಸೃಷ್ಟಿಸಿಲ್ಲ ಎಂದರು.

ಆರ್‌ಎಸ್‌‍ಎಸ್‌‍ನ ಚಟುವಟಿಕೆಗಳನ್ನು ಸರ್ಕಾರಿ ಆಸ್ತಿಗಳಲ್ಲಿ ನಿರ್ಬಂಧಿಸಲು ಪತ್ರ ಬರೆದಿರುವ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಯಾರು ಬೆದರಿಕೆ ಹಾಕಿದ್ದಾರೆ ಮತ್ತು ಅದರ ಮೂಲ ಎಲ್ಲಿಯದು ಎಂಬುದನ್ನು ತನಿಖೆ ಮಾಡುತ್ತೇವೆ ಮತ್ತು ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಚಿವರು ತಮ ಅಭಿಪ್ರಾಯಗಳನ್ನು ತಿಳಿಸಿರಬಹುದು. ಆದರೆ, ಸರ್ಕಾರ ಇನ್ನೂ ತನ್ನ ನಿರ್ಧಾರ ತೆಗೆದುಕೊಂಡಿಲ್ಲ. ಕೆಲವರು ಕರೆ ಮಾಡಿ, ಬೆದರಿಕೆ ಹಾಕುತ್ತಿರುವುದನ್ನು ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಕೆಲವು ಸಂದರ್ಭಗಳಲ್ಲಿ ತಾಂತ್ರಿಕತೆಯ ಕಾರಣಕ್ಕೆ ಪತ್ತೆ ಹಚ್ಚಲು ಕಷ್ಟ ಆಗಬಹುದು. ಆದರೆ ಅಸಾಧ್ಯ ಅಲ್ಲ ಎಂದರು.

ಶಾಲೆಗಳಿಗೆ ಹುಸಿಬಾಂಬ್‌ ಬೆದರಿಕೆ ಹಾಕುವ ಕರೆಗಳನ್ನು ಪತ್ತೆ ಹಚ್ಚುತ್ತೇವೆ. ವಿದೇಶದಲ್ಲಿರುವ ಐಪಿ ಅಡೆ್ರಸ್‌‍ಗಳನ್ನು ಬಳಸಿಕೊಂಡು ಬೆದರಿಕೆ ಹಾಕಿರುವುದನ್ನೂ ನಾವು ತನಿಖೆ ಮಾಡಿದ್ದೇವೆ. ಇನ್ನು ಭಾರತದ ಒಳಗಿನಿಂದಲೇ ಬೆದರಿಕೆ ಬಂದಿದ್ದರೆ ಕ್ರಮ ಕೈಗೊಳ್ಳುವುದು ಕಷ್ಟವೇನಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕವಾಗಿ ಔತಣಕೂಟ ಆಯೋಜಿಸಿದರು. ಈಗಾಗಲೇ ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿದೆ. ಬಾಕಿಯಿರುವ ಅವಧಿಯಲ್ಲಿ ಎಲ್ಲರೂ ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರ ಹೊರತಾಗಿ ಬೇರೆ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಎಂದರು.

ಮರಳು ದಂಧೆಕೋರರು ಯಾದಗಿರಿಯಲ್ಲಿ ಎಎಸ್‌‍ಐ ಒಬ್ಬರನ್ನು ಅಪಹರಣ ಮಾಡಿ, ಹಲ್ಲೆ ನಡೆಸಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಘಟನೆ ಬಗ್ಗೆ ವರದಿ ನೀಡುವಂತೆ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅವರಿಗೆ ಸೂಚನೆ ನೀಡಿದೇನೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬಿಜೆಪಿಯವರು ಪ್ರತಿಯೊಂದು ವಿಚಾರಕ್ಕೂ ಟೀಕೆ ಮಾಡುವುದರಲ್ಲಿ ನಿಸ್ಸೀಮರು. ಅದು ಅವರ ಕರ್ತವ್ಯವೂ ಕೂಡ. ಆದರೆ ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಾ ಹೋದರೆ ಅರ್ಥ ಇರುವುದಿಲ್ಲ. ಸಕಾರಾತಕ ಟೀಕೆ ಮಾಡಲಿ ಎಂದು ಸಲಹೆ ನೀಡಿದರು.

6ನೇ ಗ್ಯಾರಂಟಿ ಜಾರಿ ಮುಂದಾದ ಕಾಂಗ್ರೆಸ್‌‍ ಸರ್ಕಾರ : ಬಿ -ಖಾತಾದಾರರಿಗೆ ಎ-ಖಾತಾ ಭಾಗ್ಯ

ಬೆಂಗಳೂರು, ಅ.15- ರಾಜ್ಯ ಕಾಂಗ್ರೆಸ್‌‍ ಸರ್ಕಾರ ಭೂಮಿ ಹಕ್ಕಿನ 6ನೇ ಗ್ಯಾರಂಟಿಯನ್ನು ಜಾರಿಗೊಳಿಸುತ್ತಿದ್ದು, ಬಿ ಖಾತಾಗಳನ್ನು ಎ ಖಾತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.ವಿಧಾನಸೌಧದ ಸಮೇಳನ ಸಭಾಂಗಣದಲ್ಲಿಂದು ಬಿ ಖಾತೆಯಿಂದ ಎ ಖಾತೆಗೆ ಆಸ್ತಿ ಪರಿವರ್ತಿಸಲು ಸಿದ್ಧಪಡಿಸಿರುವ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 25 ಲಕ್ಷ ಆಸ್ತಿಗಳಿವೆ. ಅದರಲ್ಲಿ 7.5 ಲಕ್ಷ ಎ ಖಾತೆಗಳಿದ್ದು, ಇನ್ನೂ 7.5 ಲಕ್ಷ ಬಿ ಖಾತೆಗಳಿವೆ. ಸುಮಾರು 8 ರಿಂದ 9 ಲಕ್ಷ ಅಸ್ತಿಗಳನ್ನೂ ಖಾತೆ ನೋಂದಣಿಗಾಗಿ ಮನವಿ ಸಲ್ಲಿಕೆಯಾಗಿವೆ ಎಂದು ವಿವರಿಸಿದರು.ನಮ ರಾಜ್ಯದಲ್ಲಿನ ಆಸ್ತಿ ದಾಖಲಾತಿಗಳ ಕ್ರಮ ಬದ್ಧತೆ ಮತ್ತು ಡಿಜಿಟಲೀಕರಣಕ್ಕಾಗಿ ಕೇಂದ್ರ ಸರ್ಕಾರ ನಮಗೆ ಪ್ರಶಸ್ತಿ ನೀಡಿದೆ ಎಂದು ಹೇಳಿಕೊಂಡರು.

ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಕಾಯ್ದೆ (ಕೆಟಿಸಿಪಿ ಆ್ಯಕ್ಟ್‌) 1961ರ ಅಡಿಯಲ್ಲಿ ಅನುಮೋದನೆಗೊಂಡ ಕೃಷಿ ಜಮೀನುಗಳ ಕಂದಾಯ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದರೆ, ಕೆಲವು ಪರಿವರ್ತನೆಯಾಗಿದ್ದು, ಇನ್ನೂ ಕೆಲವು ಪರಿವರ್ತನೆಯಾಗದೇ ಇದ್ದರೆ, ಈ ಆಸ್ತಿಗಳ ಮಾಲೀಕರಿಗೆ ಬ್ಯಾಂಕಿನಿಂದ ಸಾಲ ಪಡೆಯಲು ಮತ್ತು ಕಟ್ಟಡ ನಿರ್ಮಾಣಕ್ಕೆ ನಿಯಮ ಬದ್ಧವಾಗಿ ನಕ್ಷೆ ಅನುಮೋದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ ಎ ಪರಿವರ್ತನಾ ಅಭಿಯಾನವನ್ನು ಆರಂಭಿಸಿದ್ದೇವೆ.

ನಿರ್ಮಾಣಗೊಂಡಿರುವ ಕಟ್ಟಡದ ಸಕ್ರಮೀಕರಣಕ್ಕೆ ನಾವು ಕೈ ಹಾಕುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.ಕಂದಾಯ ಲೇಔಟ್‌ಗಳಲ್ಲಿ ಭೂ ಮಾಲೀಕರು ರಸ್ತೆಗಳನ್ನು ತಮ ಹೆಸರಿಗೆ ಇರಿಸಿಕೊಂಡು, ಇಬ್ಬಿಬ್ಬರಿಗೆ ನೋಂದಣಿ ಮಾಡಿ, ಸಾರ್ವಜನಿಕರಿಗೆ ಮೋಸ ಮಾಡುವ ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ ಮೂರ್ನಾಲ್ಕು ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಕಾನೂನು ತಿದ್ದುಪಡಿ ತಂದು ಎಲ್ಲಾ ರಸ್ತೆಗಳನ್ನು ಸರ್ಕಾರದ ಆಸ್ತಿಗಳೆಂದು ಘೋಷಣೆ ಮಾಡಿದ್ದೇವೆ ಎಂದರು.

ಕಂದಾಯ ನಿವೇಶನಗಳು, ಪರಿವರ್ತನೆಯಾಗದ ಭೂಮಿ, ಯೋಜನೆ ಅನುಮೋದನೆಯಿಲ್ಲದ ಬಿ ಖಾತೆ ನಿವೇಶನಗಳನ್ನು ಎ ಖಾತೆಯನ್ನಾಗಿ ಪರಿವರ್ತಿಸಿಕೊಳ್ಳಲು 100 ದಿನಗಳ ಕಾಲಾವಕಾಶ ನೀಡಲಾಗುತ್ತಿದೆ.
ನವೆಂಬರ್‌ 1 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು 500 ರೂ. ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದರು.

ಪ್ರತಿಯೊಂದು ಪಾಲಿಕೆಯಲ್ಲೂ ಎರಡು ಕಡೆ ಕಚೇರಿಗಳನ್ನು ಆರಂಭಿಸಿ, ಸಹಾಯ ಕೇಂದ್ರಗಳ ಮೂಲಕ ನೆರವು ನೀಡಲಾಗುವುದು. ಬೆಂಗಳೂರು ಒನ್‌ ಕೇಂದ್ರದಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗುವುದು. ಯಾರಿಗೆ ಯಾರೂ ಕೂಡ ಒಂದು ರೂ. ಲಂಚ ನೀಡಬಾರದು. ಅಧಿಕೃತವಾದ ಶುಲ್ಕ ಮಾತ್ರ ಪಾವತಿಸಬೇಕು ಎಂದರು.
ಸಧ್ಯಕ್ಕೆ 2 ಸಾವಿರ ಚದರ ಮೀಟರ್‌ (20 ಸಾವಿರ ಚದರ ಅಡಿ) ನಿವೇಶನಗಳನ್ನು ಎ ಖಾತೆಗಳನ್ನಾಗಿ ಯಾಂತ್ರಿಕೃತವಾಗಿ ಪರಿವರ್ತಿಸಲಾಗುತ್ತದೆ. ಅದಕ್ಕೆ ಮೇಲ್ಪಟ್ಟ ನಿವೇಶನಗಳ ಪರಿವರ್ತನೆಗೆ ದಾಖಲಾತಿಗಳ ಪರಿಶೀಲನೆ ಹಾಗೂ ಇತರ ಪ್ರಕ್ರಿಯೆಗಳನ್ನು ಪಾಲಿಸಬೇಕಿದೆ ಎಂದರು.

ಕಂದಾಯ ಇಲಾಖೆಗೆ ಭೂ ಪರಿವರ್ತನೆಗಾಗಿ (ಅಲಿನೇಷನ್‌)ಗಾಗಿ ಶುಲ್ಕ ಪಾವತಿಸದೇ ಇದ್ದವರಿಂದ ಈಗ ಶುಲ್ಕ ವಸೂಲಿ ಮಾಡಿ ಆ ಹಣವನ್ನು ಕಂದಾಯ ಇಲಾಖೆಗೆ ಪಾವತಿಸಲಾಗುತ್ತದೆ. ನಗರ ಯೋಜನಾ ಪ್ರಾಧಿಕಾರವಾದ ಬಿಡಿಎ ಅಥವಾ ಬಿಬಿಎಂಪಿಗೆ ಡೆವಲಪ್‌ಮೆಂಟ್‌ ಚಾರ್ಜ್‌ ಕಟ್ಟದೇ ಇದ್ದರೆ ಅದನ್ನು ಕೂಡ ಈ ಸಂದರ್ಭದಲ್ಲಿ ವಸೂಲಿ ಮಾಡಲಾಗುವುದು. ಈ ಎರಡು ಶುಲ್ಕಗಳಿಗಾಗಿ ಮಾರ್ಗಸೂಚಿ ಮೌಲ್ಯದ ಶೇ. 5ರಷ್ಟು ಶುಲ್ಕವನ್ನು ವಸೂಲಿ ಮಾಡಲಾಗುವುದು. 100 ದಿನದ ಬಳಿಕ ಈ ಶುಲ್ಕವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದರು.

ಎ ಖಾತಾ ಪರಿವರ್ತನೆಯಾದ ನಿವೇಶನಗಳಿಗೆ ವಿದ್ಯುತ್‌, ನೀರು, ಒಳಚರಂಡಿ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಪಾಲಿಕೆ ಒದಗಿಸಲಿದೆ. ಬೆಂಗಳೂರು ಹಾಗೂ ಹೊರ ವಲಯದ ನಿವೇಶನಗಳಲ್ಲಿ ಈ ಅಭಿಯಾನ ಚಾಲ್ತಿಯಲ್ಲಿರುತ್ತದೆ. ಎ ಖಾತಾ ಪರಿವರ್ತನೆಯಿಂದ ಆಸ್ತಿಯ ಮೌಲ್ಯ ಹೆಚ್ಚಾಗಲಿದ್ದು, ಅಧಿಕೃತ ಗೌರವವು ಕೂಡ ದೊರೆಯುತ್ತದೆ ಎಂದರು.

ಓಸಿ ಮತ್ತು ಸಿಸಿಗೂ ಇದಕ್ಕೂ ಸಂಬಂಧ ಇಲ್ಲ. ಬೆಂಗಳೂರು ನಗರದಲ್ಲಿ 15 ಲಕ್ಷ ಆಸ್ತಿ ಮಾಲೀಕರಿಗೆ ಅಭಿಯಾನದಿಂದ ಅನುಕೂಲವಾಗಬಹುದು. ಕಳೆದ 50 ವರ್ಷಗಳಿಂದಲೂ ಯಾವ ಸರ್ಕಾರವು ಜಾರಿ ಮಾಡದೇ ಇರುವ ವ್ಯವಸ್ಥೆಯನ್ನು ನಮ ಸರ್ಕಾರ ರೂಪಿಸಿದೆ. ಏಕಗವಾಕ್ಷಿ ಯೋಜನೆಯಡಿ ಖಾತೆ ಪರಿವರ್ತನೆ ಮಾಡಿಕೊಡಲಾಗುತ್ತದೆ ಎಂದರು. ಅನಧಿಕೃತ ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಗಳ ಮಾರಾಟಕ್ಕೆ ಇನ್ನು ಮುಂದೆ ಅವಕಾಶವಿರುವುದಿಲ್ಲ. ಬಿ ಖಾತಾ ಫ್ಲಾಟ್‌ಗಳು ಅಥವಾ ಬಹುಮಹಡಿ ಕಟ್ಟಡಗಳಿಗೆ ಇದು ಅನ್ವಯಿಸುವುದಿಲ್ಲ. ಮೊದಲಿಗೆ ನಿವೇಶನ ಮತ್ತು ಅದರಲ್ಲಿ ನಿರ್ಮಿಸಿರುವ ಕಟ್ಟಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.

ಪಾಲಿಕೆ ಅಧಿಕಾರಿಗಳು ಪ್ರತಿ ಆಸ್ತಿಗಳನ್ನು ಮಾಲೀಕರ ಸಹಿತವಾಗಿ ಫೋಟೋ, ವಿಡಿಯೋ ತೆಗೆದು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ. ಜನ ಅದನ್ನು ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಬಹುದು. ಯಾರದೋ ಜಾಗಕ್ಕೆ ಇನ್ಯಾರೋ ಖಾತೆ ಮಾಡಿಸಿಕೊಳ್ಳಲು ಅವಕಾಶವಿರುವುದಿಲ್ಲ ಎಂದರು.

ಸರ್ಕಾರದ ಆಸ್ತಿ, ಪಿಟಿಸಿಎಲ್‌ ವಿವಾದಿತ ಮತ್ತು ನ್ಯಾಯಾಲಯದ ತಗಾದೆ ಇರುವ ಆಸ್ತಿಗಳಿಗೆ ಈ ಅಭಿಯಾನ ಅನ್ವಯಿಸುವುದಿಲ್ಲ. ಸ್ವಂತ ಮಾಲೀಕರು ಪಂಚಾಯಿತಿ ಸೇರಿದಂತೆ ಯಾವುದೇ ಸಂಸ್ಥೆಗಳಲ್ಲಿ ಭೂಮಿ ನೋಂದಾಯಿಸಿಕೊಂಡಿದ್ದರೆ ಅವರು ಸದಾವಕಾಶ ಬಳಸಿಕೊಳ್ಳಬಹುದು ಎಂದರು.ಖಾತಾ ಪರಿವರ್ತನ ಅಭಿಯಾನದಲ್ಲಿ ಸಂಗ್ರಹವಾಗುವ ಶುಲ್ಕಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಇದು ಆಯಾ ಪಾಲಿಕೆಗಳ ಗಳಿಕೆ ಮಾತ್ರ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬೆಂಗಳೂರು ಬಿಟ್ಟು ಯಾವ ಖಾಸಗಿ ಸಂಸ್ಥೆಗಳೂ ಹೊರಹೋಗುವುದಿಲ್ಲ. ಉದ್ಯಮಗಳು ಹಾಗೂ ಕೈಗಾರಿಕೆಗಳಿಗೆ ಸರ್ಕಾರ ಭೂಮಿ ಸೇರಿದಂತೆ ಸಾಕಷ್ಟು ನೆರವು ನೀಡಿದೆ. ಅದನ್ನು ಮರೆತು ಟೀಕೆ ಮಾಡಿದರೆ ಅದು ದೇಶ ದ್ರೋಹವಾಗುತ್ತದೆ. ಉದ್ಯಮದವರು ನೀವೇ ನಿಮ ಮನೆಯನ್ನು ಹಾಳುಮಾಡಿಕೊಳ್ಳಬೇಡಿ ಎಂದು ಕೈ ಮುಗಿದು ಪ್ರಾರ್ಥಿಸುವುದಾಗಿ ಹೇಳಿದರು.

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ : ಶಾಸಕ ಬಾಲಕೃಷ್ಣ ಭವಿಷ್ಯ

ಬೆಂಗಳೂರು ದಕ್ಷಿಣ, ಅ.15– ಕಾಂಗ್ರೆಸ್‌‍ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಅವರಿಗೆ ಹೈಕಮಾಂಡ್‌ ಮುಖ್ಯಮಂತ್ರಿಯಾಗುವ ಅವಕಾಶ ಮಾಡಿಕೊಡುವ ವಿಶ್ವಾಸವಿದೆ ಎಂದು ಕ್ಷೇತ್ರದ ಶಾಸಕ ಡಾ. ಎಚ್‌.ಸಿ. ಬಾಲಕೃಷ್ಣ ಪುನರುಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಯಾವುದೇ ಕ್ರಾಂತಿಯಾಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆಯಂತಹ ವಿಚಾರಗಳು ಹೈಕಮಾಂಡ್‌ಗೆ ಬಿಟ್ಟ ವಿಚಾರ. ನಮಂಥವರ ಹಂತದಲ್ಲಿ ಈ ರೀತಿಯ ಚರ್ಚೆಗಳು ಸಾಧುವಲ್ಲ ಎಂದರು.

ಸಂಪುಟ ಪುನಾರಚನೆಯಾದರೆ, ನನ್ನ ಹಿರಿತನಕ್ಕೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಒಂದು ವೇಳೆ ಪುನಾರಚನೆಯಾಗದೆ ಇದ್ದರೆ ಅವಕಾಶ ಮಾಡಿಕೊಡಿ ಎಂದು ಕೇಳುವ ಸಾಧ್ಯತೆಯೂ ಇರುವುದಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್‌‍ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕಮಾರ್‌ ಅವರ ಕಾಣಿಕೆಯಿದೆ. ಅದನ್ನು ಪರಿಗಣಿಸಿ, ಅವಕಾಶ ನೀಡಬಹುದು. ಹೈಕಮಾಂಡ್‌ ಗಮನಕ್ಕೂ ನನ್ನ ಹಿರಿತನದ ಬಗ್ಗೆ ಮಾಹಿತಿ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಈ ವಿಚಾರವಾಗಿ ಭರವಸೆ ಕೊಟ್ಟಿದ್ದಾರೆ. ನನಗೂ ವಿಶ್ವಾಸವಿದೆ ಎಂದರು.

ಯಾವುದೇ ಸಂಘಟನೆಗೆ ಜವಾಬ್ದಾರಿ ಇರಬೇಕಾದರೆ, ಮೊದಲು ನೋಂದಣಿಯಾಗಬೇಕು. ಆರ್‌ಎಸ್‌‍ಎಸ್‌‍ ಸಂಘಟನೆ ಸರ್ಕಾರ ಮಟ್ಟದಲ್ಲಿ ನೋಂದಣಿಯಾಗಿಲ್ಲ. ಯಾವುದಾದರೂ ಕೃತ್ಯಗಳಾದರೆ ನೋಂದಣಿಯಾಗದ ಹೊರತು ಕ್ರಮಕೈಗೊಳ್ಳುವುದು ಕಷ್ಟಸಾಧ್ಯ. ಕೇರಳದಲ್ಲಿ ವ್ಯಕ್ತಿಯೊಬ್ಬರು ಆತಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಆತ ಆರ್‌ಎಸ್‌‍ಎಸ್‌‍ನಲ್ಲಿ ಸಲಿಂಗಕಾಮಿಗಳು ಹೆಚ್ಚಿದ್ದಾರೆ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ರಮ ಕೈಗೊಳ್ಳಬೇಕಾದರೆ ಸಂಘಟನೆಗಳು ನೋಂದಣಿಯಾಗುವುದು ಸೂಕ್ತ ಎಂದರು.

ಆರ್‌ಎಸ್‌‍ಎಸ್‌‍ನವರು ಮೊದಲು ನೋಂದಣಿ ಮಾಡಿಸಿಕೊಳ್ಳಲಿ. ಅವರನ್ನು ಹತ್ತಿಕ್ಕುವ ಅಗತ್ಯವಿಲ್ಲ. ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ ಪರಸ್ಪರ ತಮಷ್ಟಕ್ಕೇ ತಾವೇ ಹತ್ತಿಕ್ಕಿಕೊಳ್ಳುತ್ತಿವೆ ಎಂದು ತಿರುಗೇಟು ನೀಡಿದರು.ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರ ಬಗ್ಗೆ ಮಾತನಾಡುವುದೇ ಅವಮಾನಕರ. ಆತ ಒಬ್ಬ ಜೋಕರ್‌. ಮಾಧ್ಯಮಗಳು ಆತನ ಸುದ್ದಿ ಪ್ರಸಾರ ಮಾಡುವ ಮೂಲಕ ತಮ ಗೌರವ ಕಳೆದುಕೊಳ್ಳುತ್ತಿವೆ ಎಂದು ತಿರುಗೇಟು ನೀಡಿದರು.

ಶಾಸಕರಾಗಿದ್ದವರಿಗೆ ತಮ ಹಕ್ಕುಗಳನ್ನು ಕೇಳಲು ವಿಧಾನಸಭೆ ಎಂಬ ವೇದಿಕೆ ಇದೆ. ಅದನ್ನು ಬಿಟ್ಟು ಸಾರ್ವಜನಿಕ ದೂರುದುಮಾನ ಕಾರ್ಯಕ್ರಮದಲ್ಲಿ ಹೋಗಿ ನಾಟಕ ಮಾಡುವುದು ಹಾಸ್ಯಾಸ್ಪದ. ಆತನ ನಡವಳಿಕೆ ಮೊದಲಿನಿಂದಲೂ ಎಲ್ಲರ ಗಮನದಲ್ಲಿದೆ. ಅವರದೇ ಪಕ್ಷದ ನಾಯಕ ಆರ್‌.ಅಶೋಕ್‌ ಅವರಿಗೆ ಏಡ್ಸ್ ಇಂಜೆಕ್ಷನ್‌ ಚುಚ್ಚಲು ಹೋಗಿದ್ದಂತಹ ವ್ಯಕ್ತಿಯ ಬಗ್ಗೆ ಚರ್ಚೆ ಮಾಡಬೇಕೆ? ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಅಭಿವೃದ್ಧಿ ಸಂಬಂಧಪಟ್ಟಂತೆ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಭೂ ಸ್ವಾಧೀನ ಸಂದರ್ಭದಲ್ಲಿ 60:40 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ಭೂಮಿ ಕುರಿತಂತೆ ಚರ್ಚೆ ನಡೆಯುತ್ತಿದೆ ಎಂದರು. ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಬಗ್ಗೆ ಉದ್ಯಮಿ ಕಿರಣ್‌ ಮಜೂಂದಾರ್‌ಶಾ ಟೀಕೆ ಮಾಡಿರುವುದಕ್ಕೆ ಡಿ.ಕೆ.ಶಿವಕುಮಾರ್‌ ಈಗಾಗಲೇ ಉತ್ತರ ನೀಡಿದ್ದಾರೆ. ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆೆ. ಈ ಹಂತದಲ್ಲಿ ಅಪಸ್ವರ ಸರಿಯಲ್ಲ ಎಂದರು.

ಉಡುಪಿ : ಸಮುದ್ರದಲ್ಲಿ ಮುಳುಗಿ ಮೂವರು ಬಾಲಕರ ಸಾವು

ಉಡುಪಿ,ಅ.15- ಸಮುದ್ರದಲ್ಲಿ ಈಜಲು ಹೋಗಿ ಮೂವರು ಅಪ್ರಾಪ್ತ ಬಾಲಕರು ಮುಳುಗಿ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲ್ಲೂಕಿನ ಕಿರಿಮಂಜೇಶ್ವರ ಗ್ರಾಮದ ಬಳಿ ನಡೆದಿದೆ. ಮೃತರನ್ನು ಸಂಕೇತ್‌ (16), ಸೂರಜ್‌ (15) ಮತ್ತು ಆಶಿಶ್‌ (14) ಎಂದು ಗುರುತಿಸಲಾಗಿದೆ.

ಕಿರಿಮಂಜೇಶ್ವರ ಗ್ರಾಮದ ಬಳಿಯ ಕೊಡೇರಿ ಹೊಸಹಿತ್ಲುವಿನ ಕರಾವಳಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ನಾಲ್ವರು ಅಪ್ರಾಪ್ತ ಬಾಲಕರು ಆಟವಾಡುತ್ತಾ ಸಮುದ್ರದಲ್ಲಿ ಈಜಾಡುವಾಗ ಮುಳುಗಿದ್ದಾರೆ. ಹೊರಗೆ ಬರಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ ಆದರೆ ಒಬ್ಬ ಈಜಿ ದಡ
ಸೇರಿದ ನಂತರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಕಾರ್ಯಾಚರಣೆ ನಡೆಸಿ ಮೂರು ಬಾಲಕರ ಶವಗಳನ್ನುಪತ್ತೆಹಚ್ಚಿದ್ದೇವೆ ಒಬ್ಬ ಅಸ್ವಸ್ಥ ಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸ್ಥಳೀಯ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ,ಮೃತರ ಕುಟುಂಬಗಳಿಗೆ ಮಾಹಿತಿ ನೀಡಲಾಗಿದೆ. ದುರಂತಕ್ಕೆ ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

“ಪಾಕ್ ಮತ್ತೆ ದುಷ್ಕೃತ್ಯ ಎಸಗಿದರೆ ಆಪರೇಷನ್‌ ಸಿಂಧೂರ್‌ 2.0 ಡೆಡ್ಲಿ ಆಗಿರುತ್ತೆ”

ನವದೆಹಲಿ, ಅ.15– ಪಾಕಿಸ್ತಾನ ಭಾರತದ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿಲ್ಲ. ಆದರೆ ಪಹಲ್ಗಾಮ್‌ ಮಾದರಿಯ ದಾಳಿಯನ್ನು ಮತ್ತೆ ಪ್ರಯತ್ನಿಸಬಹುದು. ಒಂದು ವೇಳೆ ಮತ್ತೊಮೆ ಅಂತಹ ಕೃತ್ಯಕ್ಕೆ ಕೈ ಹಾಕಿದರೆ ಆಪರೇಷನ್‌ ಸಿಂಧೂರ್‌ 2.0 ಅವರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಪಶ್ಚಿಮ ಸೇನಾ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಮನೋಜ್‌ ಕುಮಾರ್‌ ಕಟಿಯಾರ್‌ ಪ್ರತಿಪಾದಿಸಿದ್ದಾರೆ.

ಮುಂದಿನ ಬಾರಿ ನಾವು ತೆಗೆದುಕೊಳ್ಳುವ ಕ್ರಮವು ಹಿಂದಿನದಕ್ಕಿಂತ ಹೆಚ್ಚು ಮಾರಕವಾಗಿರುತ್ತದೆ. ಅದು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಹೌದು, ನೀವು ಹೇಳಿದ್ದು ತುಂಬಾ ಸರಿ – (ಆಪರೇಷನ್‌ ಸಿಂಧೂರ್‌ 2.0) ಹೆಚ್ಚು ಮಾರಕವಾಗಿರಬೇಕು. ಅದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಲೆಫ್ಟಿನೆಂಟ್‌ ಜನರಲ್‌ ಕಟಿಯಾರ್‌ ವರದಿಗಾರರಿಗೆ ತಿಳಿಸಿದರು.

ಆಪರೇಷನ್‌ ಸಿಂದೂರ್‌ 2.0 ಮೊದಲನೆಯದಕ್ಕಿಂತ ಹೆಚ್ಚು ಮಾರಕವಾಗುತ್ತದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಭವಿಷ್ಯದಲ್ಲಿ ಪಾಕಿಸ್ತಾನದಿಂದ ಪಹಲ್ಗಾಮ್‌ ಮಾದರಿಯ ದಾಳಿಗಳು ನಡೆಯುತ್ತವೆಯೇ ಎಂದು ಕೇಳಿದಾಗ, ಪಾಕಿಸ್ತಾನದ ಚಿಂತನೆಯಲ್ಲಿ ಬದಲಾವಣೆ ಬರುವವರೆಗೆ, ಅದು ಅಂತಹ ದುಷ್ಕೃತ್ಯಗಳನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ನಮ್ಮೊಂದಿಗೆ ಯುದ್ಧ ಮಾಡುವ ಸಾಮರ್ಥ್ಯ ಅದಕ್ಕಿಲ್ಲ. ಅವರು ಯುದ್ಧ ಮಾಡಲು ಬಯಸುವುದಿಲ್ಲ. ಸಾವಿರ ಕಡಿತಗಳ ಮೂಲಕ ಭಾರತವನ್ನು ರಕ್ತಸಿಕ್ತಗೊಳಿಸುವ ನೀತಿಯಂತೆ ಅದು ದುಷ್ಕೃತ್ಯಗಳನ್ನು ಎಸಗುತ್ತದೆ ಎಂದು ಅವರು ಹೇಳಿದರು.
ಆಪರೇಷನ್‌ ಸಿಂಧೂರ್‌ನಲ್ಲಿ ಭಾರತ ಪಾಕಿಸ್ತಾನದ ಮೇಲೆ ಭಾರೀ ಹಾನಿಯನ್ನುಂಟುಮಾಡಿದೆ ಎಂದು ಪಶ್ಚಿಮ ಸೇನಾ ಕಮಾಂಡರ್‌ ಹೇಳಿದರು. ನಾವು ಅದರ ನೆಲೆಗಳು ಮತ್ತು ವಾಯುನೆಲೆಗಳನ್ನು ನಾಶಪಡಿಸಿದ್ದೇವೆ, ಆದರೆ ಅದು ಮತ್ತೆ ಪಹಲ್ಗಾಮ್‌ ದಾಳಿಯಂತಹದನ್ನು ಪ್ರಯತ್ನಿಸಬಹುದು. ನಾವು ಸಿದ್ಧರಾಗಿರಬೇಕು. ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ.

ಈ ಬಾರಿಯ ಕ್ರಮವು ಹಿಂದಿನದಕ್ಕಿಂತ ಹೆಚ್ಚು ಮಾರಕವಾಗಿರುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದರು. ಆಪರೇಷನ್‌ ಸಿಂಧೂರ್‌ನಲ್ಲಿ ಸಶಸ್ತ್ರ ಪಡೆಗಳ ಪಾತ್ರಕ್ಕಾಗಿ ಸೇನಾ ಕಮಾಂಡರ್‌ ಅವರನ್ನು ಶ್ಲಾಘಿಸಿದರು, ಪಹಲ್ಗಾಮ್‌ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಕ್ಕೆ ಅದು ಸೂಕ್ತ ಉತ್ತರವನ್ನು ನೀಡಿದೆ ಎಂದು ಹೇಳಿದರು.ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮತ್ತೆ ಭಯೋತ್ಪಾದಕ ದಾಳಿಯ ಮೂಲಕ ದುಷ್ಕೃತ್ಯದ ದಾಳಿಗೆ ಪ್ರಯತ್ನಿಸಿತು, ಆದರೆ ಭಾರತೀಯ ಸೇನೆಯು ಬಲವಾಗಿ ಪ್ರತಿಕ್ರಿಯಿಸಿತು. ಆಪರೇಷನ್‌ ಸಿಂಧೂರ್‌ನಲ್ಲಿ, ನಾವು ಸಾರ್ವಜನಿಕರು, ನಿವೃತ್ತ ಸೈನಿಕರು, ರಾಜ್ಯ ಮತ್ತು ನಾಗರಿಕ ಆಡಳಿತ ಮತ್ತು ಇತರ ಎಲ್ಲರಿಂದ ಸಂಪೂರ್ಣ ಬೆಂಬಲವನ್ನು ಪಡೆದುಕೊಂಡಿದ್ದೇವೆ ಎಂದು ಅವರು ಹೇಳಿದರು.

1965 ರ ಭಾರತ-ಪಾಕಿಸ್ತಾನ ಯುದ್ಧದ 60 ವರ್ಷಗಳನ್ನು ಸ್ಮರಿಸಲು ಮಾಜಿ ಸೈನಿಕರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಹಲ್ಗಾಮ್‌ ದಾಳಿಯಲ್ಲಿ ಭಯೋತ್ಪಾದಕರು ಅಮಾಯಕ ಜನರನ್ನು ಕೊಂದಿದ್ದಾರೆ ಎಂದು ಹೇಳಿದರು. ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಸೂಕ್ತ ಉತ್ತರವನ್ನು ನೀಡಿತು. ಆಡಳಿತ, ಮಾಜಿ ಸೈನಿಕರು ಮತ್ತು ಸ್ಥಳೀಯ ಜನರಿಂದ ನಮಗೆ ಸಂಪೂರ್ಣ ಬೆಂಬಲ ದೊರೆತ ಕಾರಣ ಆಪರೇಷನ್‌ ಸಿಂಧೂರ್‌ ಯಶಸ್ವಿಯಾಗಿದೆ.

ನೆರೆಯ ರಾಷ್ಟ್ರದ ಭವಿಷ್ಯದ ದಾಳಿಗಳನ್ನು ತಡೆಯಲು ಪಡೆಗಳು ಸಿದ್ಧವಾಗಿವೆ ಎಂದು ಸೇನಾ ಕಮಾಂಡರ್‌ ಸಮರ್ಥಿಸಿಕೊಂಡರು.ಪಾಕಿಸ್ತಾನಕ್ಕೆ ಭಾರತವನ್ನು ನೇರವಾಗಿ ಎದುರಿಸುವ ಧೈರ್ಯವಿಲ್ಲ ಮತ್ತು ಅದರ ಉದ್ದೇಶಗಳಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದರು. ಪಾಕಿಸ್ತಾನದ ವರ್ತನೆ ಬದಲಾಗುವುದಿಲ್ಲ ಎಂದು ನಾವು ನಂಬುತ್ತೇವೆ. ಅದು ನಮ್ಮ ಮೇಲೆ ಮತ್ತೆ ದಾಳಿ ಮಾಡಲು ಪ್ರಯತ್ನಿಸುತ್ತದೆ. ನಮ್ಮನ್ನು ನೇರವಾಗಿ ಎದುರಿಸುವ ಧೈರ್ಯ ಅದಕ್ಕೆ ಇಲ್ಲ, ಆದ್ದರಿಂದ ಅದು ಪಹಲ್ಗಾಮ್‌ನಲ್ಲಿ ನಡೆದಂತಹ ಮತ್ತೊಂದು ಭಯೋತ್ಪಾದಕ ದಾಳಿಯನ್ನು ಪ್ರಯತ್ನಿಸುತ್ತದೆ. ನಾವು ಜಾಗರೂಕರಾಗಿರುವುದು ಮುಖ್ಯ. ಪಾಕಿಸ್ತಾನದ ಯಾವುದೇ ದುರುದ್ದೇಶಪೂರಿತ ನಡೆಯನ್ನು ತಡೆಯಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌‍ ಪಕ್ಷಕ್ಕೆ ದಮ್ಮು-ತಾಕತ್ತು ಇದ್ದರೆ ಆರ್‌ಎಸ್‌‍ಎಸ್‌‍ ನಿಷೇಧ ಮಾಡಲಿ : ವಿಜಯೇಂದ್ರ

ಚಿತ್ರದುರ್ಗ,ಅ.15- ಸಾಲು ಸಾಲು ಚುನಾವಣೆ ಸೋತು ದೇಶದಲ್ಲೇ ಅಸ್ತಿತ್ವಕ್ಕೆ ಪರದಾಡುತ್ತಿರುವ ಕಾಂಗ್ರೆಸ್‌‍ ಪಕ್ಷಕ್ಕೆ ಆರ್‌ಎಸ್‌‍ಎಸ್‌‍ ನಿಷೇಧ ಮಾಡುವ ದಮ್ಮು ಇಲ್ಲವೇ ತಾಕತ್ತು ಇಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌‍ಎಸ್‌‍ ನಿಷೇಧ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ಮೂರ್ಖತನದ ಪರಮಾವಧಿ. ನಿಮಿಂದ ಇದು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ದೇಶದಲ್ಲಿ ಕಾಂಗ್ರೆಸ್‌‍ ಎಲ್ಲಾ ಚುನಾವಣೆಗಳಲ್ಲಿ ಸೋತು ಅಸ್ತಿತ್ವವನ್ನೇ ಕಳೆದುಕೊಂಡಿದೆ. ಒಂದೆರಡು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇಂತಹ ಪಕ್ಷ ಶತಮಾನಗಳ ಇತಿಹಾಸವಿರುವ ಆರ್‌ಎಸ್‌‍ಎಸ್‌‍ನ್ನು ನಿಷೇಧ ಮಾಡುತ್ತೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. ಅದನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಗುಡುಗಿದರು.

ಆರ್‌ಎಸ್‌‍ಎಸ್‌‍ ಒಂದು ದೇಶಭಕ್ತ ಸಂಘಟನೆ. ಅವರೇನು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಸನಾತನ ಧರ್ಮ ಉಳಿಸುವಿಕೆ ರಾಷ್ಟ್ರ ರಕ್ಷಣೆ, ದೇಶಭಕ್ತಿಗಾಗಿ ಹೋರಾಟ ಮಾಡುತ್ತಿದೆ. ಭಾರತವಲ್ಲದೆ 40 ರಾಷ್ಟ್ರಗಳಲ್ಲಿ ಅದರ ಸಂಘಟನೆಗಳು ವಿಸ್ತರಣೆಯಾಗಿವೆ. ಇಂತಹ ಸಂಘಟನೆಯನ್ನು ಪ್ರಿಯಾಂಕ ಖರ್ಗೆ ಇರಲಿ ಅಥವಾ ಇನ್ಯಾರು ಕೂಡ ಮುಟ್ಟಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ಕೊಟ್ಟರು.

ಆರ್‌ಎಸ್‌‍ಎಸ್‌‍ ನಿಷೇಧ ಮಾಡುವುದು ಆಮೇಲಿರಲಿ. ಮೊದಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರಾಗಿ ನೀವು ನಿಮ ಇಲಾಖೆಯಲ್ಲಿ ಮಾಡಿರುವ ಸುಧಾರಣೆಗಳೇನು? ಎಷ್ಟು ಅಭಿವೃದ್ಧಿ ಮಾಡಿದ್ದೀರಿ? ಇಲಾಖೆಯಲ್ಲಿ ಯಾವುದಾದರೂ ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೀರಾ? ಮೊದಲು ಅದನ್ನು ಜನತೆಯ ಮುಂದಿಡಿ ಎಂದು ವಿಜಯೇಂದ್ರ ಸವಾಲು ಹಾಕಿದರು.

ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ ಅನೇಕ ಜನರ ಸಂತ್ರಸ್ತರಾಗಿದ್ದಾರೆ. ಅವರಿಗೆ ಪರಿಹಾರವನ್ನೇ ಒದಗಿಸಿಲ್ಲ. ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇದನ್ನು ವಿಷಯಾಂತರ ಮಾಡಲು ಆರ್‌ಎಸ್‌‍ಎಸ್‌‍ ನಿಷೇಧದ ಬಗ್ಗೆ ಖರ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಿಂದ ಹಣ ಕೊಟ್ಟರೆ ಹೈಕಮಾಂಡ್‌ ಖುಷಿಪಡಿಸಬಹುದೆಂಬ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ ಎಂದು ಆರೋಪಿಸಿದರು. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ಹದಗೆಟ್ಟ ರಸ್ತೆಗಳು, ಗುಂಡಿಗಳು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಷಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದರೆ ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬಂಡವಾಳ ಹೂಡುವವರು ಸರಿಯಾದ ಮೂಲಭೂತ ಸೌಕರ್ಯ ಇಲ್ಲ ಎಂದರೆ ಬೇರೆ ರಾಜ್ಯಗಳಿಗೆ ಹೋಗುವುದು ಅನಿವಾರ್ಯವಾಗುತ್ತದೆ ಎಂದರು.

ಸಮೀಕ್ಷೆಗೆ ಬಂದ ಶಿಕ್ಷಕಿಗೆ ಬಾಗಿನ

ಬೆಂಗಳೂರು : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದರೆ ನಿರ್ಲಕ್ಷ್ಯ ತೋರುವ ಸಮೀಕ್ಷಾದಾರರನ್ನು ಅವಹೇಳನ ಮಾಡಿ ಟೀಕಿಸಿ ವ್ಯಂಗ್ಯವಾಡುವ ಸನ್ನಿವೇಶಗಳೇ ಹೆಚ್ಚಾಗಿರುವ ಸಂದರ್ಭದಲ್ಲಿ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂದಿನಿ ಬಡಾವಣೆಯಲ್ಲಿ ಸಮೀಕ್ಷೆಗೆ ಬಂದ ಶಿಕ್ಷಕಿಯ ಕುಶಲೋಪರಿ ವಿಚಾರಿಸಿ ಬಾಗಿನ ನೀಡಿ ಮಡಿಲು ತುಂಬಿ ಸತ್ಕರಿಸಿ ಮಾದರಿಯಾದ ಪ್ರಸಂಗ ನಡೆದಿದೆ.

ರಾಜಧಾನಿ ಬೆಂಗಳೂರಿನಲ್ಲಿ ಸಮೀಕ್ಷೆ ನಿಗದಿತ ಪ್ರಮಾಣದಲ್ಲಿ ನಡೆದಿಲ್ಲ. ಸಮೀಕ್ಷಾದಾರರ ಬಗ್ಗೆ ಕುಹಕವಾಡುವ, ಅವರನ್ನು ಕಾಂಪೌಂಡ್‌ ಒಳಗೂ ಬಿಟ್ಟುಕೊಳ್ಳದಿರುವ, ಈಗ ಬನ್ನಿ, ಆಗ ಬನ್ನಿ ಎಂದು ಹೇಳುವ ಉದಾಹರಣೆಗಳು ಕಣ್ಣಮುಂದೆ ಇದೆ. ಸಮೀಕ್ಷಾದಾರರು ಮನೆಯ ಕಾಲಿಂಗ್‌ ಬೆಲ್‌ ಒತ್ತಿದರೆ ಯಾರೂ ಇಲ್ಲ ಎಂದು ಹೇಳಿ ಸಾಗು ಹಾಕುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಂತೂ ಸಮೀಕ್ಷಾದಾರರಿಗೆ ಸರಿಯಾಗಿ ಪ್ರತಿಕ್ರಿಯೆಯನ್ನೇ ನೀಡುತ್ತಿಲ್ಲ.

ಕೆಲವೆಡೆ ನಾಯಿಗಳ ಕಾಟದಿಂದ ಸಮೀಕ್ಷೆಗೆ ಬಂದವರು ಆತಂಕಕ್ಕೆ ಒಳಗಾಗಿದ್ದಾರೆ. ಎಲ್ಲಾ ಸಂಕಷ್ಟ, ಸವಾಲುಗಳ ನಡುವೆಯೇ ಶಿಕ್ಷಕರು, ನೌಕರರು ಸರ್ಕಾರದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಕೆಲವರು ಸಮೀಕ್ಷೆಗೆ ಸಹಕರಿಸುತ್ತಾರೆ. ಮತ್ತೆ ಕೆಲವರು ಬೇಕಾಬಿಟ್ಟಿಯಾಗಿ ವರ್ತಿಸುತ್ತಾರೆ. ಮಾಹಿತಿ ನೀಡದೆ ಸತಾಯಿಸುತ್ತಾರೆ. ಈ ರೀತಿಯಾದರೆ ಸರ್ಕಾರಿ ನೌಕರರ ಪಾಡೇನು?

ಈ ಎಲ್ಲಾ ಬೆಳವಣಿಗೆಗಳ ನಡುವೆ ನಂದಿನಿ ಲೇಔಟ್‌ನ ಮನೆಯೊಂದರಲ್ಲಿ ಸಮೀಕ್ಷೆಗೆ ಬಂದ ಶಿಕ್ಷಕಿಗೆ ಆದರದ ಸತ್ಕಾರವೇ ದೊರೆಯಿತು. ಈ ರೀತಿಯ ಸತ್ಕಾರ ಸಿಗುತ್ತದೆ ಎಂದು ಆ ಶಿಕ್ಷಕಿ ಊಹಿಸಿರಲಿಲ್ಲ. ಸಮೀಕ್ಷೆಗೆ ಬಂದಾಗ ಮನೆಯವರು ಅವರನ್ನು ಸ್ವಾಗತಿಸಿ ಅಗತ್ಯ ಮಾಹಿತಿಗಳನ್ನು, ದಾಖಲೆಗಳನ್ನು ನೀಡಿ ಸಹಕರಿಸಿದರು. ಅವರ ಕುಶಲೋಪರಿಯನ್ನು ವಿಚಾರಿಸಿ ಕುಡಿಯಲು ತಂಪು ಪಾನೀಯ ನೀಡಿದರು. ಅಲ್ಲದೆ ಊಟಕ್ಕೂ ಆಹ್ವಾನಿಸಿದರು.

ಆದರೆ ಅವರ ಊಟವಾಗಿತ್ತು. ಸಮೀಕ್ಷೆ ಮುಗಿಸಿ ಹೊರಡಲು ಸಿದ್ಧವಾದಾಗ ಮನೆಯವರು ಅವರಿಗೆ ಬಾಗಿನ ಅರ್ಪಿಸಿ ಹಣ್ಣುಹಂಪಲು ನೀಡಿ ಸತ್ಕರಿಸಿದರು. ಇದರಿಂದ ಆ ಶಿಕ್ಷಕಿ ಭಾವುಕರಾದರು. ಈ ರೀತಿ ಎಲ್ಲರೂ ಪ್ರತಿಕ್ರಿಯಿಸಿದರೆ ನಮ ಕರ್ತವ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ದೊಡ್ಡ ದೊಡ್ಡವರೆಂದರೆ ಭಯವಿರುತ್ತದೆ. ಆದರೆ ದೊಡ್ಡವರು ಇಷ್ಟು ಸೌಜನ್ಯದಿಂದ ವರ್ತಿಸಿ ಸತ್ಕರಿಸಿದ್ದನ್ನು ಕಂಡು ಆ ಶಿಕ್ಷಕಿಗೆ ಆನಂದಬಾಷ್ಪ ಬಂದಿತ್ತು. ಏನೇ ಆಗಲಿ ಈ ಪ್ರಸಂಗ ಮಾದರಿಯಾಗಲಿ. ಯಾವುದೇ ಸರ್ಕಾರಿ ಕರ್ತವ್ಯ ನಿಭಾಯಿಸುವವರಿಗೆ ಸಾರ್ವಜನಿಕರು ಮೃದುವಾಗಿ ಸಹಕರಿಸಲಿ ಎಂಬುದು ನಮ ಆಶಯ.

ಇನ್ನುಮುಂದೆ SSLC ಮತ್ತು PUC ಪರೀಕ್ಷೆಯಲ್ಲಿ ಶೇ.33ರಷ್ಟು ಪಡೆದರೆ ಪಾಸ್

ಬೆಂಗಳೂರು, ಅ.15-ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನಿಂದ ಎಸ್‌‍.ಎಸ್‌‍.ಎಲ್‌.ಸಿ ಹಾಗೂ ದ್ವಿತೀಯ ಪರೀಕ್ಷೆಯಲ್ಲಿ ತೇರ್ಗಡೆಯ ಅಂಕಗಳನ್ನು ಕಡಿತಗೊಳಿಸಲಾಗಿದ್ದು, ಶೇ.33ರಷ್ಟು ಅಂಕ ಪಡೆದವರನ್ನು ತೇರ್ಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್‌‍. ಮಧುಬಂಗಾರಪ್ಪ ತಿಳಿಸಿದರು.

ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ.33ರಷ್ಟು ಅಂಕಗಳನ್ನು ಪಡೆದು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಬೇಕು. ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆದ ಅಭ್ಯರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆಯಬೇಕು. ಪ್ರತಿ ವಿಷಯದಲ್ಲೂ ಲಿಖಿತ/ಪ್ರಾಯೋಗಿಕ/ಆಂತರಿಕ ಅಂಕಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕು. ಒಟ್ಟು 600 ಅಂಕಗಳಿಗೆ 198 ಅಂಕಗಳನ್ನು ಪಡೆದ ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ನಿಯಮವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಸ್‌‍ಎಸ್‌‍ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಅನ್ವಯ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸಿಬಿಎಸ್‌‍ಇ ಮತ್ತು ನೆರೆ ರಾಜ್ಯಗಳಲ್ಲಿ ಉತ್ತೀರ್ಣತೆ ಅಂಕಗಳಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳಲ್ಲೂ ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ಪಡೆಯಬೇಕೆಂಬ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯ ಆಡಳಿತ ಸುಧಾರಣಾ ಆಯೋಗವು ಕೂಡ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು. ಇದುವರೆಗೂ ಎಸ್‌‍ಎಸ್‌‍ ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಲು ಕನಿಷ್ಠ ಶೇ.35ರಷ್ಟು ಅಂಕಗಳನ್ನು ಪಡೆಯಬೇಕೆಂಬ ನಿಯಮವಿತ್ತು ಎಂದು ಅವರು ಹೇಳಿದರು.

ಈ ಬದಲಾವಣೆಯು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಸಕಾರಾತಕ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತಷ್ಟು ವಿವರಗಳನ್ನು ಒದಗಿಸಲಿದೆ ಎಂದರು.

ತೇರ್ಗಡೆಯ ಕನಿಷ್ಠ ಅಂಕಗಳನ್ನು ಕಡಿತ ಮಾಡುವುದಕ್ಕೆ ಸಾರ್ವಜನಿಕ ಸಲಹೆ-ಸೂಚನೆಗೆ ಅವಕಾಶ ಕಲ್ಪಿಸಲಾಗಿತ್ತು. ಶೇ. 33ರಷ್ಟು ಅಂಕಗಳ ಪರವಾಗಿ 701 ಪತ್ರಗಳು ಬಂದಿದ್ದವು. ಶೇ. 35 ರಷ್ಟು ಅಂಕಗಳ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು. ಹೀಗಾಗಿ ಶೇ.33ರಷ್ಟು ಅಂಕಗಳನ್ನು ತೇರ್ಗಡೆಗೆ ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದರು.
ಪರೀಕ್ಷೆಯ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅತಿ ಮುಖ್ಯವಾಗುತ್ತದೆ. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದ್ದವು. ವಿದ್ಯಾರ್ಥಿಗಳು ಬೇರೆ ವ್ಯವಸ್ಥೆಯಲ್ಲಿ ಉತ್ತೀರ್ಣರಾದರೆ ಮುಂದೆ ತೊಂದರೆಯಾಗುತ್ತದೆ. ಹೀಗಾಗಿ ವೆಬ್‌ಕಾಸ್ಟಿಂಗ್‌ ಮೂಲಕ ಪರೀಕ್ಷೆ ನಡೆಸುತ್ತಿದ್ದೇವೆ. ವಾರ್ಷಿಕ ಮೂರು ಪರೀಕ್ಷೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಒಳ್ಳೆ ಶಿಕ್ಷಕರಿದ್ದಾರೆ. ಆದರೆ, ಅವರ ಸೇವೆ ಬಳಸಿಕೊಳ್ಳುವುದರಲ್ಲಿ ಇಲಾಖೆ ಎಡವುತ್ತಿತ್ತು. ಶಿಕ್ಷಕರು ಅದನ್ನು ಸರಿಪಡಿಸಿಕೊಂಡು ಪಾಠ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡ ಗ್ರೇಸ್‌‍ ಅಂಕಗಳನ್ನು ನೀಡಬಾರದು ಎಂದು ಹೇಳಿದ್ದರು. ನಮಗೆ ಶೇ. 75ರಷ್ಟು ಗುರಿ ನೀಡಿದ್ದರು. ಈ ವರ್ಷ ನಾವು ಶೇ.79 ರಷ್ಟು ಫಲಿತಾಂಶ ಪಡೆದಿದ್ದೇವೆ ಎಂದರು.

ರಾಜ್ಯಾದ್ಯಂತ 800 ಸರ್ಕಾರಿ ಶಾಲೆಗಳನ್ನು ಒಂದೇ ಬಾರಿಗೆ ಉನ್ನತೀಕರಿಸಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದ್ದು, 400 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು. ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗುವುದು. ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಸಹಯೋಗದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ 500 ಶಾಲೆಗಳನ್ನು ಕೆಪಿಎಸ್‌‍ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನಿಧಿಯ ಮೂಲಕ 200 ಶಾಲೆಗಳನ್ನು ಕೆಪಿಎಸ್‌‍ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.

ಗಣಿ ಪರಿಸರ ಪುನಶ್ಚೇತನ ನಿಗಮದ ವತಿಯಿಂದ 10 ತಾಲ್ಲೂಕುಗಳಲ್ಲಿ 100 ಕೆಪಿಎಸ್‌‍ ಶಾಲೆಗಳನ್ನು ಉನ್ನತೀಕರಿಸಿ ಪ್ರತ್ಯೇಕ ಡಿಪಿಎಆರ್‌ ತಯಾರಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2ರಿಂದ 3 ಕೆಪಿಎಸ್‌‍ ಶಾಲೆಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿ ತಾಲ್ಲೂಕಿನಲ್ಲಿ 4ರಿಂದ 5 ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಅವರಿಗೆಲ್ಲಾ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದ ಅವರು, ನಿನ್ನೆಯವರೆಗೆ ಜಿಬಿಎ ಹೊರತುಪಡಿಸಿ ಶೇ.91.46ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ಸಾಕಷ್ಟು ಶಿಕ್ಷಕರಿಗೆ ಸಾರ್ವಜನಿಕರು ತೊಂದರೆ ಕೊಟ್ಟಿದ್ದಾರೆ. ಆದರೂ ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಪಾಠ ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ಪಾಠದ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲೂ ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸವಿದೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ, ಒತ್ತಡದ ಮಧ್ಯೆಯೂ ಶಿಕ್ಷಕರು ತುಂಬ ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶಿ ಮಹೇಶ್‌, ಆಯುಕ್ತ ಸೂರಳ್ಕರ್‌ ವಿಕಾಸ್‌‍ ಕಿಶೋರ್‌, ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕರಾದ ವಿದ್ಯಾಕುಮಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಚಲಿಸುತ್ತಿದ್ದ ಬಸ್‌‍ಗೆ ಬೆಂಕಿ, 20 ಮಂದಿ ಸಜೀವ ದಹನ

ಜೈಸಲೇರ್‌. ಅ.14 (ಪಿಟಿಐ) ರಾಜಸ್ಥಾನದ ಜೈಸಲ್ಮೇರ್‌ನಿಂದ ಜೋಧ್‌ಪುರಕ್ಕೆ ಹೋಗುತ್ತಿದ್ದ ಖಾಸಗಿ ಬಸ್‌‍ ಹಠಾತ್ತನೆ ಹೊತ್ತಿ ಉರಿದು 20 ಜನರು ಸಜೀವ ದಹನವಾಗಿದ್ದು, 16 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 57 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌‍ ಜೈಸಲ್ಮೇರ್‌ನಿಂದ ಜೋಧ್‌ಪುರ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ, ವಾಹನದ ಹಿಂಭಾಗದಿಂದ ಹೊಗೆ ಹೊರಬರಲು ಪ್ರಾರಂಭಿಸಿತು.ಇದನ್ನು ಗಮನಿಸಿದ ಚಾಲಕ ಬಸ್‌‍ ಅನ್ನು ನಿಲ್ಲಿಸಿದನು, ಆದರೆ ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡಿ ಬಸ್‌‍ಗೆ ಆವರಿಸಿತು.

ಸ್ಥಳೀಯರು ಮತ್ತು ದಾರಿಹೋಕರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಿದರು. ಸೇನಾ ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ಸಹಾಯ ಮಾಡಿದರು. ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು ಮತ್ತು ಗಾಯಾಳು ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಜೈಸಲ್ಮೇರ್‌ನ ಜವಾಹರ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಗಂಭೀರವಾಗಿ ಗಾಯಗೊಂಡ 16 ಪ್ರಯಾಣಿಕರನ್ನು ಜೋಧಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸ್‌‍ ಬೆಂಕಿಯಲ್ಲಿ 20 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪೋಕರನ್‌ ಬಿಜೆಪಿ ಶಾಸಕ ಪ್ರತಾಪ್‌ ಪುರಿ ಪಿಟಿಐಗೆ ತಿಳಿಸಿದ್ದಾರೆ. ಬಸ್‌‍ನಲ್ಲಿ ಹತ್ತೊಂಬತ್ತು ಪ್ರಯಾಣಿಕರು ಸಾವನ್ನಪ್ಪಿದರು ಮತ್ತು ಜೋಧಪುರಕ್ಕೆ ಹೋಗುವ ದಾರಿಯಲ್ಲಿ ಒಬ್ಬರು ಸುಟ್ಟ ಗಾಯಗಳಿಂದ ಸಾವನ್ನಪ್ಪಿದರು ಎಂದು ಅವರು ಹೇಳಿದರು.

ಜೈಸಲ್ಮೇರ್‌ನಿಂದ ಹೊರಟ 10 ನಿಮಿಷಗಳ ನಂತರ ಬಸ್‌‍ ಬೆಂಕಿಗೆ ಆಹುತಿಯಾಯಿತು ಎಂದು ಶಾಸಕರು ಹೇಳಿದರು.ಘಟನೆಯ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಭಜನ್‌ಲಾಲ್‌‍ ಶರ್ಮಾ ಜೈಸಲ್ಮೇರ್‌ ತಲುಪಿದರು ಮತ್ತು ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು.ಗಾಯಗೊಂಡವರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಜೈಸಲ್ಮೇರ್‌ನಲ್ಲಿ ಬಸ್‌‍ಗೆ ಬೆಂಕಿ ಹೊತ್ತಿಕೊಂಡ ಘಟನೆ ಅತ್ಯಂತ ಹೃದಯ ವಿದ್ರಾವಕವಾಗಿದೆ. ಈ ದುರಂತ ಅಪಘಾತದಲ್ಲಿ ಹಾನಿಗೊಳಗಾದವರಿಗೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತು ಬಲಿಪಶುಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಎಕ್‌್ಸ ಮಾಡಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌ ಈ ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಹತ್ತಿರದ ಸಂಬಂಧಿಕರಿಗೆ 2 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.