Home Blog Page 48

ಅಫ್ಘಾನ್‌ ಸಚಿವರ ಭಾರತ ಭೇಟಿಗೆ ಜಾವೇದ್‌ ಅಖ್ತರ್‌ ಅಸಮಾಧಾನ

ನವದೆಹಲಿ, ಅ.14– ಅಫ್ಘಾನ್‌ ಸಚಿವರ ಭಾರತ ಭೇಟಿಗೆ ಖ್ಯಾತ ಚಿತ್ರಕಥೆಗಾರ-ಗೀತರಚನೆಕಾರ ಜಾವೇದ್‌ ಅಖ್ತರ್‌ ಅವರು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ಮುತ್ತಕಿ ಪ್ರಸ್ತುತ ಭಾರತಕ್ಕೆ ಆರು ದಿನಗಳ ಭೇಟಿಯಲ್ಲಿದ್ದಾರೆ, 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಗುಂಪು ಅಧಿಕಾರವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್‌ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದು.
ವಿಶ್ವದ ಕೆಟ್ಟ ಭಯೋತ್ಪಾದಕ ಗುಂಪು ತಾಲಿಬಾನ್‌ನ ಪ್ರತಿನಿಧಿಗೆ ನೀಡಿದ ಗೌರವ ಮತ್ತು ಸ್ವಾಗತವನ್ನು ನೋಡಿದಾಗ ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ ಎಂದು ಅಖ್ತರ್‌ ಎಕ್ಸ್ ನಲ್ಲಿ ಬರೆದಿದ್ದಾರೆ.

ಕಳೆದ ಗುರುವಾರ ದೆಹಲಿಗೆ ಬಂದಿಳಿದ ಮುತ್ತಕಿ ಅವರಿಗೆ ಗೌರವಯುತ ಸ್ವಾಗತ ನೀಡಿದ್ದಕ್ಕಾಗಿ ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಇಸ್ಲಾಮಿಕ್‌ ಸೆಮಿನರಿಗಳಲ್ಲಿ ಒಂದಾದ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿರುವ ದಾರುಲ್‌ ಉಲೂಮ್‌ ದಿಯೋಬಂದ್‌ ಅನ್ನು ಸಹ ಅವರು ಟೀಕಿಸಿದ್ದಾರೆ.

ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿದವರಲ್ಲಿ ಒಬ್ಬರಾದ ತಮ್ಮ ಇಸ್ಲಾಮಿಕ್‌ ಹೀರೋ ಗೆ ಇಷ್ಟೊಂದು ಗೌರವಯುತ ಸ್ವಾಗತ ನೀಡಿದ್ದಕ್ಕಾಗಿ ದಿಯೋಬಂದ್‌ಗೂ ನಾಚಿಕೆಯಾಗಬೇಕು. ನನ್ನ ಭಾರತೀಯ ಸಹೋದರ ಸಹೋದರಿಯರೇ !!! ನಮಗೆ ಏನಾಗುತ್ತಿದೆ ಎಂದು ಅಖ್ತರ್‌ ಹೇಳಿದರು.ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾಲಿಬಾನ್‌ ನಿರ್ಬಂಧ ಸಮಿತಿಯು ತಾಲಿಬಾನ್‌ ನಾಯಕನ ಮೇಲೆ ವಿಧಿಸಲಾದ ಪ್ರಯಾಣ ನಿಷೇಧಕ್ಕೆ ವಿನಾಯಿತಿಯನ್ನು ಅನುಮೋದಿಸಿದ ನಂತರ ಮುತ್ತಕಿ ಭಾರತಕ್ಕೆ ಭೇಟಿ ನೀಡಿದ್ದಾರೆ.

ಕಳೆದ ವಾರ, ದೆಹಲಿಯಲ್ಲಿ ಮುತ್ತಕಿ ಅವರ ಮಾಧ್ಯಮ ಸಂವಾದದಲ್ಲಿ ಮಹಿಳಾ ಪತ್ರಕರ್ತರ ಅನುಪಸ್ಥಿತಿಯ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿತು.ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಗೈರುಹಾಜರಿಯನ್ನು ಹಲವಾರು ವಿರೋಧ ಪಕ್ಷದ ನಾಯಕರು ಸ್ವೀಕಾರಾರ್ಹವಲ್ಲ ಮತ್ತು ಮಹಿಳೆಯರಿಗೆ ಅವಮಾನ ಎಂದು ಬಣ್ಣಿಸಿದರು. ಹಲವಾರು ಪತ್ರಿಕಾ ಸಂಸ್ಥೆಗಳು ಅಫ್ಘಾನ್‌ ವಿದೇಶಾಂಗ ಸಚಿವರನ್ನು ಟೀಕಿಸಿದವು.ವಿದೇಶಾಂಗ ಸಚಿವಾಲಯ ಪತ್ರಿಕಾ ಸಂವಾದದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಹೇಳಿದೆ.

ವಿವಾದ ತೀವ್ರಗೊಳ್ಳುತ್ತಿದ್ದಂತೆ, ಮುತ್ತಕಿ ಮತ್ತೊಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹಲವಾರು ಮಹಿಳಾ ಪತ್ರಕರ್ತರನ್ನು ಆಹ್ವಾನಿಸಿದರು.ಮಹಿಳಾ ಪತ್ರಕರ್ತರನ್ನು ಹೊರಗಿಡುವ ಯಾವುದೇ ಉದ್ದೇಶವಿಲ್ಲ ಎಂದು ಅವರು ಹೇಳಿದರು.

ಪತ್ರಿಕಾ ಸಮ್ಮೇಳನಕ್ಕೆ ಸಂಬಂಧಿಸಿದಂತೆ, ಅದನ್ನು ಅಲ್ಪಾವಧಿಗೆ ಆಯೋಜಿಸಲಾಗಿತ್ತು. ಪತ್ರಕರ್ತರ ಸಣ್ಣ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಇದು ಹೆಚ್ಚಾಗಿ ತಾಂತ್ರಿಕ ಸಮಸ್ಯೆಯಾಗಿತ್ತು ಎಂದು ಅವರು ಹೇಳಿದರು.ನಮ್ಮ ಸಹೋದ್ಯೋಗಿಗಳು ನಿರ್ದಿಷ್ಟ ಪತ್ರಕರ್ತರಿಗೆ ಆಹ್ವಾನಗಳನ್ನು ಕಳುಹಿಸಲು ನಿರ್ಧರಿಸಿದ್ದರು ಮತ್ತು ಬೇರೆ ಯಾವುದೇ ಉದ್ದೇಶವಿರಲಿಲ್ಲ ಎಂದು ಮುತ್ತಕಿ ಹೇಳಿದರು.:

ಬೆಂಗಳೂರಲ್ಲಿ ಹದಗೆಟ್ಟ ರಸ್ತೆಗಳು, ತುಂಬಿತುಳುಕುವ ಕಸ : ವಿವಾದಕ್ಕೆ ಕಾರಣವಾಯ್ತು ಕಿರಣ್ ಮಜುಂದಾರ್‌ ಶಾ ಪೋಸ್ಟ್

ಬೆಂಗಳೂರು,ಅ.14- ರಾಜಧಾನಿ ಬೆಂಗಳೂರಿನಲ್ಲಿ ಹಾಳಾಗಿರುವ ರಸ್ತೆಗುಂಡಿಗಳು ಮತ್ತು ಕಸದ ಸಮಸ್ಯೆ ಕುರಿತು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಆರೋಪ ಭಾರೀ ವಿವಾದಕ್ಕೆ ಕಾರಣವಾಗಿದೆ.

ವಿದೇಶಿ ಅತಿಥಿಯೊಬ್ಬರು ಕೇಳಿದ ಪ್ರಶ್ನೆಯ ಬಗ್ಗೆ ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಅವರು, ನಗರದಲ್ಲಿ ರಸ್ತೆಗಳ ಗುಂಡಿಗಳ ಸಮಸ್ಯೆ ಮತ್ತೆ ಬೆಳಕಿಗೆ ಬಂದಿದೆ. ಅದನ್ನು ಯಾವುದೇ ಭಾರತೀಯರು ಕೇಳಲು ಬಯಸುವುದಿಲ್ಲ. ಬೆಂಗಳೂರಿನ ರಸ್ತೆಗಳು ಮಾತ್ರವಲ್ಲ, ಇಲ್ಲಿ ವಿಲೇವಾರಿ ಮಾಡದ ಕಸದ ಬಗ್ಗೆಯೂ ಸರ್ಕಾರದ ಗಮನಸೆಳೆದಿದ್ದಾರೆ.

ಬಯೋಕಾನ್‌ ಪಾರ್ಕ್‌ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು ರಸ್ತೆಗಳು ಏಕೆ ಕೆಟ್ಟದಾಗಿವೆ? ಸುತ್ತಲೂ ಇಷ್ಟೊಂದು ಕಸ ಏಕೆ ಇದೆ? ಸರ್ಕಾರ ಹೂಡಿಕೆಯನ್ನು ಬೆಂಬಲಿಸಲು ಬಯಸುವುದಿಲ್ಲವೇ? ನಾನು ಚೀನಾದಿಂದ ಬಂದಿದ್ದೇನೆ. ಇಲ್ಲಿನ ವಾತಾವರಣ ಅನುಕೂಲಕರವಾಗಿರುವಾಗ ಭಾರತವು ರಸ್ತೆಗಳ ಸುಧಾರಣೆಗೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಳಿದರು. ಸಂಚಾರದ ಜೊತೆಗೆ, ಮುಂಬೈನ ರಸ್ತೆಗಳಂತೆಯೇ ಬೆಂಗಳೂರಿನ ರಸ್ತೆಗಳು ಸಹ ಅವುಗಳ ಗುಂಡಿಗಳಿಗೆ ಕುಖ್ಯಾತವಾಗಿವೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.

ರಸ್ತೆಗಳನ್ನು ಸರಿಪಡಿಸುವ ಸರ್ಕಾರದ ಇಚ್ಛಾಶಕ್ತಿಯನ್ನು ಕಿರಣ್‌ ಮಜುಂದಾರ್‌ ಶಾ ಪ್ರಶ್ನಿಸಿದ್ದು, ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಲು ರಾಜಕೀಯ ಇಚ್ಛಾಶಕ್ತಿ ಇದೆಯೇ? ನಮ ನಗರವನ್ನು ಸರಿಪಡಿಸಲು ಮತ್ತು ಅದನ್ನು ವಿಶ್ವ ದರ್ಜೆಯನ್ನಾಗಿ ಮಾಡಲು ರಾಜಕೀಯ ನಾಯಕತ್ವವು ರಾಜಕೀಯ ತುರ್ತುಸ್ಥಿತಿಯನ್ನು ಏಕೆ ತೋರಿಸುತ್ತಿಲ್ಲ ಎಂಬುದರ ಬಗ್ಗೆ ಗೊಂದಲವಿದೆ. ಬಜೆಟ್‌ ಹಂಚಿಕೆ ಮತ್ತು ಕಾರ್ಯಗತಗೊಳಿಸುವಿಕೆಯ ವಿಷಯದಲ್ಲಿ ಗಮನಹರಿಸುವುದಕ್ಕಿಂತ ಹೆಚ್ಚಿನದನ್ನು ಇದು ತೆಗೆದುಕೊಳ್ಳುವುದಿಲ್ಲ. ಇದನ್ನು ಮಾಡಲು ಒಂದು ಶತಕೋಟಿ ಡಾಲರ್‌ ಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನ ಗುಂಡಿಗಳಿಂದ ಕೂಡಿದ ರಸ್ತೆಗಳು ಮತ್ತು ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕಿರುವ ಸರ್ಪಗಾವಲು ವಾಹನಗಳು ಭಾರತದಾದ್ಯಂತ ಕುಖ್ಯಾತವಾಗಿವೆ. ಐಟಿ ಕೇಂದ್ರದ ನಿವಾಸಿಗಳು ರಸ್ತೆಗಳಲ್ಲಿ ತುಂಬಿರುವ ವಾಹನಗಳ ಜನಸಂಖ್ಯೆಯ ಹೊರೆಯನ್ನು ನಿರಂತರವಾಗಿ ಹೊರುತ್ತಿದ್ದಾರೆ.

ಕಿರಣ್‌ ಮಜುಂದರ್‌ ಶಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಿಲಯನ್‌್ಸ ಇಂಡಸ್ಟ್ರೀಸ್‌‍ನ ಹಿರಿಯ ಉಪಾಧ್ಯಕ್ಷ ವೈಭವ್‌ ಗೋಯೆಲ್‌, ನಿಯಮಿತವಾಗಿ ಮತದಾನ ಮಾಡುವುದರಿಂದ ಉತ್ತಮ ರೂಪದ ಹೊಣೆಗಾರಿಕೆಗೆ ಕಾರಣವಾಗುತ್ತದೆ ಎಂಬ ಪ್ರಜಾಪ್ರಭುತ್ವದ ಮೂಲ ಪ್ರಮೇಯವು ಒಂದು ಪುರಾಣ ಎಂದು ಸಾಬೀತಾಗಿದೆ. ಸಮಾಜದಲ್ಲಿ ಸಾಮೂಹಿಕ ಜವಾಬ್ದಾರಿಗಿಂತ ವೈಯಕ್ತಿಕ ದುರಾಸೆ ಹೆಚ್ಚು ಶಕ್ತಿಶಾಲಿಯಾಗಿದೆ. ಚುನಾವಣಾ ವ್ಯವಸ್ಥೆಯು ಇನ್ನಷ್ಟು ಹದಗೆಡಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಭಾರತವನ್ನು ಚೀನಾಕ್ಕೆ ಎಂದಿಗೂ ಹೋಲಿಸಬಾರದು, ಅವರು ದಶಕಗಳಷ್ಟು ಮುಂದಿದ್ದಾರೆ. ನಾಗರಿಕ ಪ್ರಜ್ಞೆಯ ವಿಷಯಕ್ಕೆ ಬಂದರೆ, ಶ್ರೀಲಂಕಾ, ಭೂತಾನ್‌, ನೇಪಾಳಗಳು ಸಹ ಬಹಳ ಮುಂದಿವೆ. ದುಃಖಕರವೆಂದರೆ ಭಾರತದ ಪ್ರತಿಯೊಂದು ನಗರದ ಪರಿಸ್ಥಿತಿ ಹೀಗಿದೆ. ಕಳಪೆ ಮೂಲಸೌಕರ್ಯ, ನಾಗರಿಕ ಪ್ರಜ್ಞೆ. ಬೃಹತ್‌ ಶಿಕ್ಷಣ, ಉಪಕರಣಗಳು ಮತ್ತು ಜಾರಿ ಅಭಿಯಾನದ ಅಗತ್ಯವಿದೆ. ಚೆನ್ನೈನಲ್ಲಿ ನಾನು ನೋಡುತ್ತೇನೆ , ಟನ್‌ಗಟ್ಟಲೆ ಕಸದ ಬುಟ್ಟಿಗಳಿವೆ, ಆದರೆ ಜನರು ಇನ್ನೂ ಬೀಚ್‌ನಾದ್ಯಂತ ಕಸ ಹಾಕುತ್ತಿದ್ದಾರೆ. ಅದು ಸಂಪನೂಲಗಳ ಕೊರತೆಯಲ್ಲ, ಅವರಿಗೆ ದಂಡ ಮತ್ತು ಚಾಟಿಯೇಟು ಹಾಕಬೇಕು ಎಂದು ಕಿಡಿಕಾರಿದ್ದಾರೆ.

ಪಿಎಸ್‌‍ಆರ್‌ಐ ಆಸ್ಪತ್ರೆಯ ನಿರ್ದೇಶಕ ಡಾ.ಸುಮೀತ್‌ ಶಾ ಕೂಡ ಟ್ವೀಟ್‌ ಮಾಡಿ, ಕಳಪೆ ಮೂಲಸೌಕರ್ಯವು ಭಾರತದ ಪ್ರಗತಿಗೆ ಅಡ್ಡಿಯಾಗುತ್ತಿದೆ. ಹಾನಿಗೊಳಗಾದ ರಸ್ತೆಗಳು, ಬೀದಿಗಳಲ್ಲಿ ಕಳಪೆ ಬೆಳಕು, ಕಸದ ರಾಶಿಗಳು, ನೀರು ನಿಲ್ಲುವುದು, ಬೀದಿ ಪ್ರಾಣಿಗಳು, ಪಾದಚಾರಿ ಮಾರ್ಗಗಳು ಇಲ್ಲದಿರುವುದು ಮತ್ತು ಇನ್ನೂ ಹೆಚ್ಚಿನವುಗಳು ಇದ್ದಾಗ ಜಿಡಿಪಿಯ ಎಲ್ಲಾ ಮಾತುಗಳು ಶೂನ್ಯವಾಗುತ್ತವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಜುಲೈನಲ್ಲಿ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರೊಂದಿಗಿನ ಸಭೆಯ ಬಗ್ಗೆ ಉಲ್ಲೇಖಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದರು.

ದಶಕಗಳಲ್ಲಿ ಬೆಂಗಳೂರು ಬೆಳೆಯುತ್ತಿರುವುದನ್ನು ಕಂಡವನಾಗಿ, ನಮ ಜನರು ಎದುರಿಸುತ್ತಿರುವ ದೈನಂದಿನ ಸವಾಲುಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ – ಸಂಚಾರ ದಟ್ಟಣೆ, ದೀರ್ಘ ಪ್ರಯಾಣ ಮತ್ತು ಉತ್ತಮ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಸಾರ್ವಜನಿಕ ಬೇಡಿಕೆ. ಪ್ರಮುಖ ಯೋಜನೆಗಳನ್ನು ಸಕ್ರಿಯಗೊಳಿಸಲು ಪ್ರಮುಖ ರಕ್ಷಣಾ ಭೂ ವರ್ಗಾವಣೆಗೆ ಸಮಯೋಚಿತ ಅನುಮೋದನೆ ಕೋರಿದ್ದೇನೆ ಎಂದು ಹೇಳಿದ್ದರು.
ಗೋರಗುಂಟೆಪಾಳ್ಯದಲ್ಲಿ ಮೆಟ್ರೋ ಹಂತ -3 ಡಬಲ್‌ ಡೆಕ್ಕರ್‌ ಫ್ಲೈಓವರ್‌, ಹೆಬ್ಬಾಳ-ಸಿಲ್ಕ್ ಬೋರ್ಡ್‌ ಅವಳಿ ಸುರಂಗ ಮತ್ತು ಹೆಬ್ಬಾಳ ಬಳಿಯ ಪ್ರಮುಖ ಸಂಪರ್ಕ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ನಿರ್ವಹಿಸುವಲ್ಲಿ ವಿಫಲತೆ ಮತ್ತು ಹೆಚ್ಚುತ್ತಿರುವ ಗುಂಡಿಗಳ ಸಂಖ್ಯೆಗಾಗಿ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿಯವರ ಪುತ್ರ ಸುದೀಪ್‌ ಭಂಡಾರಿ ಆತ್ಮಹತ್ಯೆ

ಉಡುಪಿ,ಅ.14-ಕಾರ್ಕಳದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುತ್ರ ಸುದೀಪ್‌ ಭಂಡಾರಿ (48) ಆತ್ಮಹತ್ಯೆ ಶರಣಾಗಿದ್ದಾರೆ. ಸುದೀಪ್‌ ಭಂಡಾರಿ ಕಳೆದ ರಾತ್ರಿ ಬ್ರಹಾವರ ಸಮೀಪದ ಬಾರ್ಕೂರು ಬಳಿ ರೈಲಿಗೆ ಸಿಕ್ಕಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಹೆಬ್ರಿಯಲ್ಲಿ ವೈನ್‌ ಶಾಪ್‌ ಹೊಂದಿದ್ದ ಮೃತ ಸುದೀಪ್‌ ಭಂಡಾರಿ ಅತ್ಯಂತ ಸರಳ ವ್ಯಕ್ತಿತ್ವದವರಾಗಿದ್ದರು ಎನ್ನಲಾಗಿದೆ.

ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಒಬ್ಬ ಸಹೋದರ ಮತ್ತು ಒಬ್ಬ ಸಹೋದರಿಯನ್ನು ಅಗಲಿದ್ದಾರೆ.ಬ್ರಹ್ಮಾವರ ಪೊಲೀಸ್‌‍ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ಸಮಗ್ರ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಆದರೆ ಸುದೀಪ್‌ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಆತಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಂಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್, ರಾಜ್ಯದ ಹಲವೆಡೆ ಏಕಕಾಲಕ್ಕೆ ದಾಳಿ

ಬೆಂಗಳೂರು,ಅ.14-ರಾಜಕೀಯ ಗದ್ದಲದ ನಡುವೆ ರಾಜ್ಯಾದ್ಯಂತ ಬೆಳ್ಳಂಬೆಳಿಗ್ಗೆ ಏಕಕಾಲದಲ್ಲಿ 12 ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ, ಅಕ್ರಮವಾಗಿ ಗಳಿಸಿದ್ದ ಸಂಪತ್ತು ಬಯಲಿಗೆಳೆದಿದೆ. ಅಕ್ರಮ ಆಸ್ತಿಗಳಿಕೆ ಆರೋಪದ ಮೇಲೆ ಬಂದ ದೂರುಗಳನ್ನು ಆಧರಿಸಿ ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ, ಹಾವೇರಿ,ಉಡುಪಿ,ಕಲಬುರ್ಗಿ,ಬೆಂಗಳೂರು ಸೇರಿ 40ಕ್ಕೂ ಹೆಚ್ಚು ಕಡೆ ಮಿಂಚಿನ ದಾಳಿ ನಡೆಸಲಾಗಿದೆ.

ಔರಾದ್‌ ತಾಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ದೂಳಪ್ಪ ಅವರ ಬೀದರ್‌ ನಗರದ ಗುರುನಾನಕ್‌ ಕಾಲೋನಿಯ ನಿವಾಸ ಸೇರಿದಂತೆ ಏಕಕಾಲಕ್ಕೆ ಲೋಕಾಯುಕ್ತ ಎಸ್‌‍ಪಿ ಸಿದ್ದರಾಜು ,ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಒಟ್ಟು 4 ಕಡೆ ದಾಳಿ ಮಾಡಲಾಗಿದೆ.

ಭಾಲ್ಕಿಯ ಕಡ್ಯಾಳ ಗ್ರಾಮದ ನಿವಾಸ, ಔರಾದ್‌ನ ಸಹಾಯಕ ನಿದೇರ್ಶಕರ ಕಚೇರಿ ಮತ್ತು ಔರಾದ್‌ನ ಮುದೋಳ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಂತೆ ಸಿಬ್ಭಂಧಿ ಅಲರ್ಟ್‌ ಆಗಿದ್ದಾರೆ.ಕಾವಲುಗಾರನಿಂದ ಬೀಗ ತೆಗಸಿ ಒಳಗೆ ತಪಾಸಣೆ ಮಾಡಲಾಗಿದೆ ಇದರ ಬಗ್ಗೆ ಮಾಹಿತಿ ಪಡೆದು ಕೆಲ ಹಿರಿಯ ಸಿಬ್ಬಂಧಿ ಕಚೇರಿಗೆ ಆಗಮಿಸಿದ್ದಾರೆ. ಇಲ್ಲಿ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಚಿತ್ರದುರ್ಗದಲ್ಲಿ ಹೊಳಲ್ಕೆರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಕುಮಾರ್‌ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್‌ ನೀಡಿದ್ದಾರೆ.ಎಸ್ಪಿ ವಾಸುದೇವರಾಮ್‌‍, ಡಿವೈಎಸ್ಪಿ ಮೃತ್ಯುಂಜಯ, ಪಿಐ ಮಂಜುನಾಥ್‌ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಹಲವೆಡ ಶೋಧ ನಡೆಸಿದೆ.

ತರಳಬಾಳು ನಗರದಲ್ಲಿರುವ ಚಂದ್ರಕುಮಾರ್‌ ಮನೆಗೆ ಅಧಿಕಾರಿಗಳು ಬರುತ್ತಿದ್ದಂತೆ ಮನೆಯವರು ಶಾಕ್‌ ಆಗಿದ್ದಾರೆ. ಮನೆಯಲ್ಲಿ ಲಕ್ಷಾಂತರ ರೂ ನಗದು,ಚಿನ್ನಭರಣ, ಮತ್ತಿತರ ಬೆಲೆಬಾಳುವ ವಸ್ತುವನ್ನು ಪತ್ತೆ ಮಾಡಿದ್ದಾರೆ.ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರು ಗ್ರಾಮದ ಮನೆಗಳು ಹಾಗು ಕಚೇರಿ ಮೇಲೂ ದಾಳಿ ನಡೆದಿದೆ.

ದಾವಣಗೆರೆಯಲ್ಲಿ ಕೆಆರ್‌ ಐಡಿಎಲ್‌ ಸಹಾಯಕ ಇಂಜಿನಿಯರ್‌ ಜಗದೀಶ್‌ ನಾಯ್ಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಎಸ್‌‍ಡಿಎ ನಡುವಿನನಮಾನಿ ಮನೆ, ಕಚೇರಿ ಹಾಗು ಸಂಬಂಧಿಕರ ಮನೆಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ.
ಮೂಲಗಳ ಪ್ರಕಾರ ಇಬ್ಬರು ಅಧಿಕಾರಿಗಳಿಗೆ ಸೇರಿದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾವಣಗೆರೆ ಎಸ್ಪಿ ಎಂಎಸ್‌‍ ಕೌಲಾಪುರೆ ನೇತೃತ್ವದ ತಂಡ ದಾಳಿ ನಡೆಸಿದೆ.

ಇಬ್ಬರ ಮನೆಯಲ್ಲೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ,ನಿವೇಶನ ,ಕೃಷಿ ಜಮೀನು ಸೇರಿದಂತೆ ಹಲವು ದಾಖಲಾತಿ ದೊರೆತಿದ್ದು, ಅಧಿಕಾರಿಗಳು ಪರೀಶಿಲನೆ ನಡೆಸಿದ್ದಾರೆ
ಹಾಸನದ ಸತ್ಯಮಂಗಲ ಬಡಾವಣೆಯಲ್ಲಿರುವ ಆರೋಗ್ಯ ಇಲಾಖೆ ಪ್ರಥಮ ದರ್ಜೆಸಹಾಯಕಿ ಜ್ಯೋತಿ ಮೇರಿ ಅವರ ಮನೆ ಹಾಗೂ ಕುವೆಂಪು ನಗರದಲ್ಲಿರುವ ಅವರ ತಂಗಿಯ ನಿವಾಸದ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ.

ಲೋಕಾಯುಕ್ತ ಎಸ್ಪಿ ಸ್ನೇಹ, ಡಿವೈಎಸ್‌‍ಪಿ ಸುರೇಶ್‌, ಇನ್ಸ್ ಪೆಕ್ಟರ್‌ ಶಿಲ್ಪಾ ಮತ್ತು ಚಂದ್ರಶೇಖರ್‌ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು.ಹಲವೆಡೆ ನಿವೇಶನ ಸೇರಿ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಶೋಧ ಕಾರ್ಯಚರಣೆ ಸಂಜೆವರೆಗೂ ಮುಂದುವರೆದಿದ್ದು ಅಧಿಕಾರಿಗಳು ಮನೆ ಹಾಗೂ ಆಸ್ಪತ್ರೆಯಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಹಾವೇರಿಯಲ್ಲಿ ಸವಣೂರ ಪುರಸಭೆ ಮುಖ್ಯಾಧಿಕಾರಿ, ರಾಣೆಬೆನ್ನೂರ ಆರ್‌ ಒ ಮನೆ ಮೇಲೆ ದಾಳಿ

ರಾಣೆಬೆನ್ನೂರ:
ನಗರದ ಎರಡು ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಕ್ರಮ ಆಸ್ತಿಗಳಿಸಿದ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಇಲ್ಲಿಯ ಚೋಳಮರಡೇಶ್ವರ ನಗರದ ನಿವಾಸಿಸವಣೂರ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಶಿಡೇನೂರ ಹಾಗೂ ಸಿದ್ದೇಶ್ವರ ನಗರದ ನಿವಾಸಿ ರಾಣೆಬೆನ್ನೂರ ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ ಮನೆ ಮೇಲೆ ನಡೆದಿದೆ.

ಇಲ್ಲಿ ದಾವಣಗೆರೆ ಹಾಗೂ ಹಾವೇರಿ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಮನೆಯಲ್ಲಿರುವ ದಾಖಲಾತಿ, ಚಿನ್ನಾಭರಣ ಹಾಗೂ ನಗದು ಪರಿಶೀಲನೆ ನಡೆಸುತ್ತಿದ್ದಾರೆ.
ಚಿನ್ನಾಭರಣ, ನಿವೇಶನ ಸೇರಿ ಹಲವು ಅಕ್ಕಮ ಸಂಪತ್ತು ಬೆಳಕಿಗೆ ಬಂದಿದೆ.

ಹಾಸನಾಂಬೆ ದರ್ಶನೋತ್ಸವ 5ನೇ ದಿನ : ಅಪಾರ ಸಂಖ್ಯೆಯ ಭಕ್ತರಿಂದ ದೇವಿಯ ದರ್ಶನ

ಹಾಸನ,ಅ.14-ಹಾಸನಾಂಬೆ ದರ್ಶನೋತ್ಸವದ ಸಾರ್ವಜನಿಕ ದರ್ಶನದ 5ನೇ ದಿನವಾದ ಇಂದು ಸಹ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದು, ಈ ಭಾರಿ ಶಿಷ್ಟಾಚಾರ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದ್ದು, ಎಲ್ಲರೂ ಒಂದೇ ಎಂಬಂತೆ ದರ್ಶನ ಸುಲಲಿತವಾಗಿ ನಡೆಯುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ನಿಂತು ನಿರಾಸದಾಯಕವಾಗಿ ದರ್ಶನ ಪಡೆಯುತ್ತಿದ್ದಾರೆ. ಈ ಭಾರಿ ಜನಪ್ರತಿನಿಧಿಗಳು, ಅಧಿಕಾರಿಗಳು, ಜನಸಾಮಾನ್ಯರಂತೆ ಸರದಿ ಸಾಲಿನಲ್ಲಿ ಬಂದು ದರ್ಶನ ಪಡೆಯುತ್ತಿರುವುದು ವಿಶೇಷ.

ಜಿಲ್ಲಾಧಿಕಾರಿ ಲತಾಕುಮಾರಿಯವರು ಕೆಲ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ಜನ ಸಾಮಾನ್ಯರಂತೆ ನಿಂತು ದರ್ಶನ ಪಡೆದರು. ಅದೇ ರೀತಿ ಚಿತ್ರನಟಿ ತಾರಾ ಅನುರಾಧ, ಅಂಜಲಿ, ಶಾಸಕ ಸ್ವರೂಪ್‌ಪ್ರಕಾಶ್‌ ಸೇರಿದಂತೆ ಹಲವರು ಗಣ್ಯರು ಶಿಷ್ಟಾಚಾರ ಪಾಲನೆ ಮಾಡಿದ್ದಾರೆ.

ಮುಂಜಾನೆ ನಾಲ್ಕು ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಭಕ್ತರು ಎರಡು-ಮೂರು ಗಂಟೆಗಳಲ್ಲಿ ದರ್ಶನ ಪಡೆದಿದ್ದಾರೆ. ಅದೇ ರೀತಿ 300 ರೂ. ಹಾಗೂ 1 ಸಾವಿರದ ಟಿಕೆಟ್‌ ಪಡೆದವರು ಸಹ ಒಂದು ಗಂಟೆಗಳಲ್ಲಿ ದರ್ಶನ ಪಡೆದಿದ್ದಾರೆ.ಈ ಭಾರಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದ್ದು, ಎಲ್ಲೂ ಕೂಡ ತೊಂದರೆಯಾಗದಂತೆ ದರ್ಶನ ನಡೆಯುತ್ತಿದ್ದು, ಭಕ್ತಗಣ ಸಂತಸ ವ್ಯಕ್ತಪಡಿಸಿದೆ.

ದೂರದ ಊರುಗಳಿಂದ ಬಂದ ಭಕ್ತರು ಸಹ ಕೆಲವೇ ಗಂಟೆಗಳಲ್ಲಿ ದರ್ಶನ ಪಡೆಯುತ್ತಿದ್ದು ಸಂತಸದ ವಿಷಯ.ಕುಡಿಯುವ ನೀರು, ಶೌಚಾಯಲ, ಸರದಿ ಸಾಲು, ನೆರಳಿನ ವ್ಯವಸ್ಥೆ , ಟಿಕೆಟ್‌ ಕೌಂಟರ್‌ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಬಹಳ ಶಿಸ್ತಿನಿಂದ ಪಾಲನೆ ಮಾಡಲಾಗುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೀಪಾವಳಿ ಹಬ್ಬಕ್ಕೆ KSRTCಯಿಂದ 2500 ವಿಶೇಷ ಬಸ್‌‍ ಸೇವೆ

ಬೆಂಗಳೂರು,ಅ.14-ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಕ್ಕೆ 2500 ಹೆಚ್ಚುವರಿ ಬಸ್‌‍ಗಳ ವ್ಯವಸ್ಥೆ ಕಲ್ಪಿಸಿದೆ.ಕೆಂಪೇಗೌಡ ಬಸ್‌‍ ನಿಲ್ದಾಣ, ಮೈಸೂರು ರಸ್ತೆ ಬಸ್‌‍ ನಿಲ್ದಾಣ ಮತ್ತು ಶಾಂತಿ ನಗರ ನಿಲ್ದಾಣದಿಂದ ಅ.17 ರಿಂದ 20 ರ ವರೆಗೆ ಬಸ್‌‍ಗಳು ಹೊರಡಲಿವೆ.

ಹಾಗೂ ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಅ.22 ರಿಂದ 26 ರ ವರೆಗೆ ಬೆಂಗಳೂರಿಗೆ ವಿಶೇಷ ಬಸ್‌‍ಗಳು ಬರಲಿವೆ.ಕೆಂಪೇಗೌಡ ಬಸ್‌‍ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲ್ಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌, ತಿರುಪತಿ, ವಿಜಯವಾಡ, ಹೈದರಾಬದ್‌ ಮುಂತಾದ ರಸ್ತೆಗಳಿಗೆ ವಿಶೇಷಕ ಕಾರ್ಯಾಚರಣೆ ಮಾಡಲಿವೆ.

ಮೈಸೂರು ರಸ್ತೆ ಬಸ್‌‍ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಬಸ್‌‍ಗಳು ತೆರಳಲಿವೆ.
ತಮಿಳುನಾಡು, ಕೇರಳ, ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್‌, ತ್ರಿಶೂರ್‌, ಏರ್ನಾಕುಲಂ, ಕೋಯಿಕೋಡ್‌,ಕ್ಯಾಲಿಕಟ್‌ ಮುಂತಾದ ಸ್ಥಳಗಳಿಗೆ ತೆರಳುವ ಪ್ರತಿಷ್ಠಿತ ಸಾರಿಗೆ ಬಸ್‌‍ಗಳು ಶಾಂತಿನಗರದ ಬಿಎಂಟಿಸಿ ಬಸ್‌‍ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಿವೆ.

ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಹಾಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. www.ksrtc karnataka.gov.in ವೆಬ್‌ಸೈಟ್‌ ಮುಖಾಂತರ ಈ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ. ಪ್ರಯಾಣಿಕರು ಕರ್ನಾಟಕ ಹಾಗೂ ಅಂತರರಾಜ್ಯದಲ್ಲಿರುವ ಬುಕ್ಕಿಂಗ್‌ ಕೌಂಟರ್‌ಗಳ ಮೂಲಕವು ಕೂಡ ಮುಂಗಡವಾಗಿ ಹಾಸನಗಳನ್ನು ಕಾಯ್ದಿರಿಸಬಹುದಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ವಾಪಸ್‌‍ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುವುದು.

ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ , ಮಹಾರಾಷ್ಟ್ರ ಹಾಗೂ ಪುದುಚೆರಿಯಲ್ಲಿರುವ ಪ್ರಮುಖ ನಗರಗಳಲ್ಲಿ ನಿಗಮದ ಕಚೇರಿಯಲ್ಲಿ ಮುಂಗಡ ಹಾಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳಿದ್ದು ಇವುಗಳ ಮೂಲಕವು ಸಹ ಮುಂಗಡವಾಗಿ ಹಾಸನಗಳನ್ನು ಕಾಯ್ದಿರಿಸಬಹುದಾಗಿದೆ.ವಿಶೇಷ ಬಸ್‌‍ಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ವೆಬ್‌ಸೈಟ್‌ಗಳಲ್ಲಿ ಒದಗಿಸಲಾಗಿದೆ ಎಂದು ನಿಗಮವು ತಿಳಿಸಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-10-2025)

ನಿತ್ಯ ನೀತಿ : ಖುಷಿಯಾಗಿದ್ದೇನೆ ಎನ್ನುವುದು ಭ್ರಮೆ. ಖುಷಿಯಾಗಿರುತ್ತೇನೆ ಎನ್ನುವುದು ಕಲ್ಪನೆ. ಹೇಗಿದ್ದರೂ ಬದುಕುತ್ತಿರುವೆನು ಎನ್ನುವುದು ವಾಸ್ತವ.

ಪಂಚಾಂಗ : ಮಂಗಳವಾರ, 14-10-2025
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.03
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು: ಸೌರ ಶರದ / ಮಾಸ: ಆಶ್ವಯುಜ / ಪಕ್ಷ: ಕೃಷ್ಣ / ತಿಥಿ: ಅಷ್ಟಮಿ / ನಕ್ಷತ್ರ: ಪುನರ್ವಸು / ಯೋಗ: ಸಿದ್ಧ / ಕರಣ: ತೈತಿಲ

ಇಂಡಿದ ರಾಶಿಭವಿಷ್ಯ :
ಮೇಷ
: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಿರಿ. ವಾಹನ ಖರೀದಿಸುವ ಸಾಧ್ಯತೆ ಇದೆ.
ವೃಷಭ: ಹಿರಿಯ ವಿದ್ವಾಂಸರಿಗೆ ಗೌರವ ಸಿಗುತ್ತದೆ. ನಿರೀಕ್ಷಿತ ಮಟ್ಟಕ್ಕಿಂತ ಆದಾಯ ಹೆಚ್ಚಿರುತ್ತದೆ.
ಮಿಥುನ: ಸಂಗಾತಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ.

ಕಟಕ: ಯೋಗಾಭ್ಯಾಸದಿಂದ ಆರೋಗ್ಯ ಚೆನ್ನಾಗಿರುವುದು.
ಸಿಂಹ: ಸ್ವಂತ ಉದ್ಯೋಗ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಆತ್ಮಗೌರವಕ್ಕೆ ಹೆಚ್ಚು ಬೆಲೆ ಕೊಡುವಿರಿ.
ಕನ್ಯಾ: ಸೌಜನ್ಯದಿಂದ ನಡೆದು ಕೊಳ್ಳುವುದರಿಂದ ನೆರೆಹೊರೆ ಯವರು ನಿಮ್ಮ ಕಷ್ಟಗಳಿಗೆ ಸ್ಪಂದಿಸುವರು.

ತುಲಾ: ಸೋದರನ ಆಗಮನ ದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮ ಮೂಡಲಿದೆ.
ವೃಶ್ಚಿಕ: ಮಕ್ಕಳಿಂದ ನೆಮ್ಮದಿ ಸಿಗಲಿದೆ. ವ್ಯಾಪಾರ- ವ್ಯವಹಾರದಲ್ಲಿ ಲಾಭ.
ಧನುಸ್ಸು: ಗೃಹ ನಿರ್ಮಾಣ ಕೆಲಸ-ಕಾರ್ಯಗಳಲ್ಲಿ ತೊಂದರೆ ಯಾಗಲಿದೆ. ಸ್ನೇಹಿತನ ಆರೋಗ್ಯದಲ್ಲಿ ಏರುಪೇರು.

ಮಕರ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.
ಕುಂಭ: ಇತರರೊಂದಿಗೆ ಸೇರಿ ಮಾಡುವ ಕೆಲಸ- ಕಾರ್ಯಗಳಲ್ಲಿ ಉತ್ತಮ ಲಾಭ ದೊರೆಯಲಿದೆ.
ಮೀನ: ನಿಮ್ಮ ಮೇಲಿದ್ದ ಆಪಾದನೆಗಳು ದೂರಾಗಿ ಮೇಲ ಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.

ಹಿರಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಇನ್ನಿಲ್ಲ, ಉಡುಪಿಯಲ್ಲಿ ಹೃದಯಾಘಾತದಿಂದ ನಿಧನ

ಉಡುಪಿ : ಹಿರಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ರಾಜು ತಾಳಿಕೋಟೆ ನಿಧನ ಹೊಂದಿದ್ದಾರೆ . ರಾಜು ತಾಳಿಕೋಟೆ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಸಿನಿಮಾವೊಂದರ ಶೂಟಿಂಗ್ ಮುಗಿಸಿ ರೂಮುನಲ್ಲಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ.

ಕುಡುಕನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಇವರ ʼಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಬಹಳ ಫೇಮಸ್‌ ಆಗಿದ್ದವು. ಈ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು.

ವಿಜಯಪುರ ಜಿಲ್ಲೆಯ ತಾಳಿಕೋಟೆಯ ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡಿದ್ದ ರಾಜು ಅವರು, ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ರಂಗಭೂಮಿಯ ಮೂಲಕ. ಅವರ ‘ಖಾಸ್ಗತೇಶ್ವರ ನಾಟಕ ಮಂಡಳಿ’ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ. ಅದರಲ್ಲೂ ‘ಕಲಿಯುಗದ ಕುಡುಕ’ ನಾಟಕದಲ್ಲಿನ ಅವರ ಅಭಿನಯ ಅವರನ್ನು ಮನೆಮಾತಾಗುವಂತೆ ಮಾಡಿತ್ತು. ಆ ನಂತರ ಯೋಗರಾಜ್ ಭಟ್ಟರ ‘ಮನಸಾರೆ’ ಚಿತ್ರದ ಮೂಲಕ ಸಿನಿಮಾಗೆ ಕಾಲಿಟ್ಟ ಅವರು, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇತ್ತೀಚೆಗಷ್ಟೇ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು, ರಂಗಭೂಮಿಗೆ ಹೊಸ ಹುರುಪು ನೀಡುವ ಕನಸು ಕಂಡಿದ್ದರು.

ಕಂಬನಿ ಮಿಡಿದ ಯೋಗರಾಜ್ ಭಟ್‌ :
ತಮ್ಮ ನೆಚ್ಚಿನ ನಟನ ಅಗಲಿಕೆಯಿಂದ ದುಃಖಿತರಾಗಿರುವ ಯೋಗರಾಜ್ ಭಟ್, “ಬಯಲು ಸೀಮೆಯ ಹೃದಯಕ್ಕೆ ನಮನ. ನೀವೆಂದರೆ ತುಂಬು ಪ್ರೀತಿ, ತುಂಬು ಖುಷಿ, ತುಂಬು ನೆನಪು. ನೀವೊಬ್ಬ ನಾಡು ಕಂಡ ಉತ್ಕೃಷ್ಟ ಕಲಾವಿದ. ಹೋಗಿಬನ್ನಿ. ಸಾವಲ್ಲ ಇದು ನಿಮ್ಮ ಹುಟ್ಟು. ನಮನ, ಧನ್ಯವಾದ ರಾಜಣ್ಣ,” ಎಂದು ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.

ಕುಡಿದು ಬಂದು ಹಲ್ಲೆ ಮಾಡಿದ ಪತಿಯನ್ನು ಇಟ್ಟಿಗೆಯಿಂದ ಬಡಿದು ಕೊಂದ ಪತ್ನಿ

ಹೈದರಾಬಾದ್‌,ಅ.13- ಮನೆಗೆ ಕುಡಿದು ಬಂದು ಮೇಲೆ ಹಲ್ಲೆ ನಡೆಸುತ್ತಿದ್ದ ಕಾರಣ ಪತ್ನಿಯೇ ಮಗನ ಎದುರೇ ಗಂಡನನ್ನು ಇಟ್ಟಿಕೆಗೆಯಿಂದ ತಲೆಗೆ ಬಡಿದು ಕೊಲೆ ಮಾಡಿರುವ ಘಟನೆ ಕೇಶಂಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪು ಕುಮಾರ್‌(35) ಕೊಲೆಯಾದ ಕುಡುಕ ಪತಿ. ಕೆ. ಮಾಧವಿ ಕೊಲೆ ಮಾಡಿರುವ ಪತ್ನಿ. ಈ ಹಿಂದೆಯೂ ಸಹ, ಕುಮಾರ್‌ ಆಗಾಗ್ಗೆ ಕುಡಿದು ಮನೆಗೆ ಬರುತ್ತಿದ್ದರಿಂದ ದಂಪತಿಗಳ ನಡುವೆ ಜಗಳವಾಗುತ್ತಿತ್ತು.ಕೊಪ್ಪುಕುಮಾರ್‌ ಮತ್ತೆ ಕುಡಿದು ಮನೆಗೆ ಬಂದಿದ್ದರಿಂದ ಕೋಪಗೊಂಡ ಮಾಧವಿ ಇಟ್ಟಿಗೆ ಎತ್ತಿಕೊಂಡು ಅವನ ತಲೆಗೆ ಪದೇ ಪದೇ ಬಡಿದಿದ್ದಾಳೆ.

ಸ್ಥಳದಲ್ಲೇ ಸಾವನ್ನಪ್ಪಿದ ಕುಮಾರ್‌ನ ಶವವನ್ನು ತನ್ನ ಮನೆಯ ಮುಂದೆ ಇರುವ ಸಂಪ್‌ನಲ್ಲಿ ಎಸೆದಿದ್ದಾಳೆ. ಮನೆಯಿಂದ ಹೊರಡುವ ಮೊದಲು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಳು. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಧವಿಗಾಗಿ ಶೋಧ ನಡೆಸುತ್ತಿದ್ದಾರೆ.

ಪಾರಿವಾಳ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಅಧಿಕಾರಿ

ಥಾಣೆ,ಅ.13- ವಿದ್ಯುತ್‌ ತಂತಿಗೆ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಲು ಹೋದ ಫೈರ್‌ ಗ್ರೇಡ್‌ನ ಅಧಿಕಾರಿ ತಮ ಪ್ರಾಣ ಕಳೆದುಕೊಂಡಿದ್ದು, ಸಹಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಖಾರಿಗಾನ್‌ನ ಸುಧಾಮ ರೆಸಿಡೆನ್ಸಿಯ ಡಿವಾ-ಶಿಲ್‌ ರಸ್ತೆಯಲ್ಲಿ ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ. ದತಿವಾಲಿ ನಿವಾಸಿ ಉತ್ಸವ ಪಾಟೀಲ್‌(28) ಮೃತಪಟ್ಟಿರುವ ಅಧಿಕಾರಿ. ಪಾಲ್ಘರ್‌ನ ವಾಡಾ ನಿವಾಸಿ ಆಜಾದ್‌ ಪಾಟೀಲ್‌ (29) ಗಂಭೀರ ಗಾಯಗೊಂಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಅಗ್ನಿಶಾಮಕ ದಳದೊಂದಿಗೆ ಒಪ್ಪಂದದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರು.

ಘಟನೆ ವಿವರ : ಟೊರೆಂಟ್‌ ಪವರ್‌ ಕಂಪನಿಗೆ ಸೇರಿದ ಓವರ್‌ಹೆಡ್‌ ವೈರ್‌ಗಳಲ್ಲಿ ಪಾರಿವಾಳ ಸಿಲುಕಿರುವ ಬಗ್ಗೆ ಥಾಣೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು. ದಿವಾ ಬೀಟ್‌ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ದಳದವರು ರಕ್ಷಣಾ ವಾಹನದೊಂದಿಗೆ ಸ್ಥಳಕ್ಕೆ ಬಂದಿದ್ದರು.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಇಬ್ಬರು ಅಗ್ನಿಶಾಮಕ ದಳದವರು ಆಕಸಿಕವಾಗಿ ಹೈಟೆನ್ಷನ್‌ ವಿದ್ಯುತ್‌ ಕೇಬಲ್‌ ಸಂಪರ್ಕಕ್ಕೆ ಬಂದು ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದರು. ಅವರನ್ನು ತಕ್ಷಣ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್‌ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಸ್ತುತ ಘಟನೆ ಕುರಿತು ತನಿಖೆ ನಡೆಯುತ್ತಿದೆ ಮತ್ತು ವಿಚಾರಣೆ ಪೂರ್ಣಗೊಂಡ ನಂತರ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ ಎಂದು ಅಗ್ನಿಶಾಮಕ ಅಧಿಕಾರಿ ಗಿರೀಶ್‌ ಝಲಕೆ ತಿಳಿಸಿದ್ದಾರೆ.