Home Blog Page 48

ದೀಪಾವಳಿ ಹಬ್ಬಕ್ಕೆ KSRTCಯಿಂದ 2500 ವಿಶೇಷ ಬಸ್‌‍ ಸೇವೆ

ಬೆಂಗಳೂರು,ಅ.14-ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಕ್ಕೆ 2500 ಹೆಚ್ಚುವರಿ ಬಸ್‌‍ಗಳ ವ್ಯವಸ್ಥೆ ಕಲ್ಪಿಸಿದೆ.ಕೆಂಪೇಗೌಡ ಬಸ್‌‍ ನಿಲ್ದಾಣ, ಮೈಸೂರು ರಸ್ತೆ ಬಸ್‌‍ ನಿಲ್ದಾಣ ಮತ್ತು ಶಾಂತಿ ನಗರ ನಿಲ್ದಾಣದಿಂದ ಅ.17 ರಿಂದ 20 ರ ವರೆಗೆ ಬಸ್‌‍ಗಳು ಹೊರಡಲಿವೆ.

ಹಾಗೂ ರಾಜ್ಯ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಅ.22 ರಿಂದ 26 ರ ವರೆಗೆ ಬೆಂಗಳೂರಿಗೆ ವಿಶೇಷ ಬಸ್‌‍ಗಳು ಬರಲಿವೆ.ಕೆಂಪೇಗೌಡ ಬಸ್‌‍ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲ್ಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌, ತಿರುಪತಿ, ವಿಜಯವಾಡ, ಹೈದರಾಬದ್‌ ಮುಂತಾದ ರಸ್ತೆಗಳಿಗೆ ವಿಶೇಷಕ ಕಾರ್ಯಾಚರಣೆ ಮಾಡಲಿವೆ.

ಮೈಸೂರು ರಸ್ತೆ ಬಸ್‌‍ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಬಸ್‌‍ಗಳು ತೆರಳಲಿವೆ.
ತಮಿಳುನಾಡು, ಕೇರಳ, ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿ, ಪಾಲಕ್ಕಾಡ್‌, ತ್ರಿಶೂರ್‌, ಏರ್ನಾಕುಲಂ, ಕೋಯಿಕೋಡ್‌,ಕ್ಯಾಲಿಕಟ್‌ ಮುಂತಾದ ಸ್ಥಳಗಳಿಗೆ ತೆರಳುವ ಪ್ರತಿಷ್ಠಿತ ಸಾರಿಗೆ ಬಸ್‌‍ಗಳು ಶಾಂತಿನಗರದ ಬಿಎಂಟಿಸಿ ಬಸ್‌‍ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲಿವೆ.

ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಹಾಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. www.ksrtc karnataka.gov.in ವೆಬ್‌ಸೈಟ್‌ ಮುಖಾಂತರ ಈ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ. ಪ್ರಯಾಣಿಕರು ಕರ್ನಾಟಕ ಹಾಗೂ ಅಂತರರಾಜ್ಯದಲ್ಲಿರುವ ಬುಕ್ಕಿಂಗ್‌ ಕೌಂಟರ್‌ಗಳ ಮೂಲಕವು ಕೂಡ ಮುಂಗಡವಾಗಿ ಹಾಸನಗಳನ್ನು ಕಾಯ್ದಿರಿಸಬಹುದಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ವಾಪಸ್‌‍ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುವುದು.

ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ , ಮಹಾರಾಷ್ಟ್ರ ಹಾಗೂ ಪುದುಚೆರಿಯಲ್ಲಿರುವ ಪ್ರಮುಖ ನಗರಗಳಲ್ಲಿ ನಿಗಮದ ಕಚೇರಿಯಲ್ಲಿ ಮುಂಗಡ ಹಾಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳಿದ್ದು ಇವುಗಳ ಮೂಲಕವು ಸಹ ಮುಂಗಡವಾಗಿ ಹಾಸನಗಳನ್ನು ಕಾಯ್ದಿರಿಸಬಹುದಾಗಿದೆ.ವಿಶೇಷ ಬಸ್‌‍ಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ವೆಬ್‌ಸೈಟ್‌ಗಳಲ್ಲಿ ಒದಗಿಸಲಾಗಿದೆ ಎಂದು ನಿಗಮವು ತಿಳಿಸಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-10-2025)

ನಿತ್ಯ ನೀತಿ : ಖುಷಿಯಾಗಿದ್ದೇನೆ ಎನ್ನುವುದು ಭ್ರಮೆ. ಖುಷಿಯಾಗಿರುತ್ತೇನೆ ಎನ್ನುವುದು ಕಲ್ಪನೆ. ಹೇಗಿದ್ದರೂ ಬದುಕುತ್ತಿರುವೆನು ಎನ್ನುವುದು ವಾಸ್ತವ.

ಪಂಚಾಂಗ : ಮಂಗಳವಾರ, 14-10-2025
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.03
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು: ಸೌರ ಶರದ / ಮಾಸ: ಆಶ್ವಯುಜ / ಪಕ್ಷ: ಕೃಷ್ಣ / ತಿಥಿ: ಅಷ್ಟಮಿ / ನಕ್ಷತ್ರ: ಪುನರ್ವಸು / ಯೋಗ: ಸಿದ್ಧ / ಕರಣ: ತೈತಿಲ

ಇಂಡಿದ ರಾಶಿಭವಿಷ್ಯ :
ಮೇಷ
: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವಿರಿ. ವಾಹನ ಖರೀದಿಸುವ ಸಾಧ್ಯತೆ ಇದೆ.
ವೃಷಭ: ಹಿರಿಯ ವಿದ್ವಾಂಸರಿಗೆ ಗೌರವ ಸಿಗುತ್ತದೆ. ನಿರೀಕ್ಷಿತ ಮಟ್ಟಕ್ಕಿಂತ ಆದಾಯ ಹೆಚ್ಚಿರುತ್ತದೆ.
ಮಿಥುನ: ಸಂಗಾತಿಗೆ ಅನಾರೋಗ್ಯ ಸಮಸ್ಯೆ ಕಾಡಲಿದೆ.

ಕಟಕ: ಯೋಗಾಭ್ಯಾಸದಿಂದ ಆರೋಗ್ಯ ಚೆನ್ನಾಗಿರುವುದು.
ಸಿಂಹ: ಸ್ವಂತ ಉದ್ಯೋಗ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಆತ್ಮಗೌರವಕ್ಕೆ ಹೆಚ್ಚು ಬೆಲೆ ಕೊಡುವಿರಿ.
ಕನ್ಯಾ: ಸೌಜನ್ಯದಿಂದ ನಡೆದು ಕೊಳ್ಳುವುದರಿಂದ ನೆರೆಹೊರೆ ಯವರು ನಿಮ್ಮ ಕಷ್ಟಗಳಿಗೆ ಸ್ಪಂದಿಸುವರು.

ತುಲಾ: ಸೋದರನ ಆಗಮನ ದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮ ಮೂಡಲಿದೆ.
ವೃಶ್ಚಿಕ: ಮಕ್ಕಳಿಂದ ನೆಮ್ಮದಿ ಸಿಗಲಿದೆ. ವ್ಯಾಪಾರ- ವ್ಯವಹಾರದಲ್ಲಿ ಲಾಭ.
ಧನುಸ್ಸು: ಗೃಹ ನಿರ್ಮಾಣ ಕೆಲಸ-ಕಾರ್ಯಗಳಲ್ಲಿ ತೊಂದರೆ ಯಾಗಲಿದೆ. ಸ್ನೇಹಿತನ ಆರೋಗ್ಯದಲ್ಲಿ ಏರುಪೇರು.

ಮಕರ: ದೂರ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ.
ಕುಂಭ: ಇತರರೊಂದಿಗೆ ಸೇರಿ ಮಾಡುವ ಕೆಲಸ- ಕಾರ್ಯಗಳಲ್ಲಿ ಉತ್ತಮ ಲಾಭ ದೊರೆಯಲಿದೆ.
ಮೀನ: ನಿಮ್ಮ ಮೇಲಿದ್ದ ಆಪಾದನೆಗಳು ದೂರಾಗಿ ಮೇಲ ಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ.

ಹಿರಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ಇನ್ನಿಲ್ಲ, ಉಡುಪಿಯಲ್ಲಿ ಹೃದಯಾಘಾತದಿಂದ ನಿಧನ

ಉಡುಪಿ : ಹಿರಿಯ ನಟ, ರಂಗಕರ್ಮಿ ರಾಜು ತಾಳಿಕೋಟೆ ನಿಧನ ಹೊಂದಿದ್ದಾರೆ. ಹೃದಯಾಘಾತದಿಂದ ರಾಜು ತಾಳಿಕೋಟೆ ನಿಧನ ಹೊಂದಿದ್ದಾರೆ . ರಾಜು ತಾಳಿಕೋಟೆ ಅವರನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಉಡುಪಿಯಲ್ಲಿ ಸಿನಿಮಾವೊಂದರ ಶೂಟಿಂಗ್ ಮುಗಿಸಿ ರೂಮುನಲ್ಲಿ ಮಲಗಿದ್ದಾಗ ಹಾರ್ಟ್ ಅಟ್ಯಾಕ್ ಆಗಿದೆ.

ಕುಡುಕನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಇವರ ʼಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಬಹಳ ಫೇಮಸ್‌ ಆಗಿದ್ದವು. ಈ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದವು.

ವಿಜಯಪುರ ಜಿಲ್ಲೆಯ ತಾಳಿಕೋಟೆಯ ಮಣ್ಣಿನ ಗುಣವನ್ನು ಮೈಗೂಡಿಸಿಕೊಂಡಿದ್ದ ರಾಜು ಅವರು, ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ರಂಗಭೂಮಿಯ ಮೂಲಕ. ಅವರ ‘ಖಾಸ್ಗತೇಶ್ವರ ನಾಟಕ ಮಂಡಳಿ’ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ. ಅದರಲ್ಲೂ ‘ಕಲಿಯುಗದ ಕುಡುಕ’ ನಾಟಕದಲ್ಲಿನ ಅವರ ಅಭಿನಯ ಅವರನ್ನು ಮನೆಮಾತಾಗುವಂತೆ ಮಾಡಿತ್ತು. ಆ ನಂತರ ಯೋಗರಾಜ್ ಭಟ್ಟರ ‘ಮನಸಾರೆ’ ಚಿತ್ರದ ಮೂಲಕ ಸಿನಿಮಾಗೆ ಕಾಲಿಟ್ಟ ಅವರು, ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಇತ್ತೀಚೆಗಷ್ಟೇ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು, ರಂಗಭೂಮಿಗೆ ಹೊಸ ಹುರುಪು ನೀಡುವ ಕನಸು ಕಂಡಿದ್ದರು.

ಕಂಬನಿ ಮಿಡಿದ ಯೋಗರಾಜ್ ಭಟ್‌ :
ತಮ್ಮ ನೆಚ್ಚಿನ ನಟನ ಅಗಲಿಕೆಯಿಂದ ದುಃಖಿತರಾಗಿರುವ ಯೋಗರಾಜ್ ಭಟ್, “ಬಯಲು ಸೀಮೆಯ ಹೃದಯಕ್ಕೆ ನಮನ. ನೀವೆಂದರೆ ತುಂಬು ಪ್ರೀತಿ, ತುಂಬು ಖುಷಿ, ತುಂಬು ನೆನಪು. ನೀವೊಬ್ಬ ನಾಡು ಕಂಡ ಉತ್ಕೃಷ್ಟ ಕಲಾವಿದ. ಹೋಗಿಬನ್ನಿ. ಸಾವಲ್ಲ ಇದು ನಿಮ್ಮ ಹುಟ್ಟು. ನಮನ, ಧನ್ಯವಾದ ರಾಜಣ್ಣ,” ಎಂದು ಭಾವಪೂರ್ಣವಾಗಿ ಬರೆದುಕೊಂಡಿದ್ದಾರೆ.

ಕುಡಿದು ಬಂದು ಹಲ್ಲೆ ಮಾಡಿದ ಪತಿಯನ್ನು ಇಟ್ಟಿಗೆಯಿಂದ ಬಡಿದು ಕೊಂದ ಪತ್ನಿ

ಹೈದರಾಬಾದ್‌,ಅ.13- ಮನೆಗೆ ಕುಡಿದು ಬಂದು ಮೇಲೆ ಹಲ್ಲೆ ನಡೆಸುತ್ತಿದ್ದ ಕಾರಣ ಪತ್ನಿಯೇ ಮಗನ ಎದುರೇ ಗಂಡನನ್ನು ಇಟ್ಟಿಕೆಗೆಯಿಂದ ತಲೆಗೆ ಬಡಿದು ಕೊಲೆ ಮಾಡಿರುವ ಘಟನೆ ಕೇಶಂಪೇಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪು ಕುಮಾರ್‌(35) ಕೊಲೆಯಾದ ಕುಡುಕ ಪತಿ. ಕೆ. ಮಾಧವಿ ಕೊಲೆ ಮಾಡಿರುವ ಪತ್ನಿ. ಈ ಹಿಂದೆಯೂ ಸಹ, ಕುಮಾರ್‌ ಆಗಾಗ್ಗೆ ಕುಡಿದು ಮನೆಗೆ ಬರುತ್ತಿದ್ದರಿಂದ ದಂಪತಿಗಳ ನಡುವೆ ಜಗಳವಾಗುತ್ತಿತ್ತು.ಕೊಪ್ಪುಕುಮಾರ್‌ ಮತ್ತೆ ಕುಡಿದು ಮನೆಗೆ ಬಂದಿದ್ದರಿಂದ ಕೋಪಗೊಂಡ ಮಾಧವಿ ಇಟ್ಟಿಗೆ ಎತ್ತಿಕೊಂಡು ಅವನ ತಲೆಗೆ ಪದೇ ಪದೇ ಬಡಿದಿದ್ದಾಳೆ.

ಸ್ಥಳದಲ್ಲೇ ಸಾವನ್ನಪ್ಪಿದ ಕುಮಾರ್‌ನ ಶವವನ್ನು ತನ್ನ ಮನೆಯ ಮುಂದೆ ಇರುವ ಸಂಪ್‌ನಲ್ಲಿ ಎಸೆದಿದ್ದಾಳೆ. ಮನೆಯಿಂದ ಹೊರಡುವ ಮೊದಲು ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಳು. ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಧವಿಗಾಗಿ ಶೋಧ ನಡೆಸುತ್ತಿದ್ದಾರೆ.

ಪಾರಿವಾಳ ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಅಧಿಕಾರಿ

ಥಾಣೆ,ಅ.13- ವಿದ್ಯುತ್‌ ತಂತಿಗೆ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಲು ಹೋದ ಫೈರ್‌ ಗ್ರೇಡ್‌ನ ಅಧಿಕಾರಿ ತಮ ಪ್ರಾಣ ಕಳೆದುಕೊಂಡಿದ್ದು, ಸಹಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

ಖಾರಿಗಾನ್‌ನ ಸುಧಾಮ ರೆಸಿಡೆನ್ಸಿಯ ಡಿವಾ-ಶಿಲ್‌ ರಸ್ತೆಯಲ್ಲಿ ನಿನ್ನೆ ಸಂಜೆ ಈ ಘಟನೆ ಸಂಭವಿಸಿದೆ. ದತಿವಾಲಿ ನಿವಾಸಿ ಉತ್ಸವ ಪಾಟೀಲ್‌(28) ಮೃತಪಟ್ಟಿರುವ ಅಧಿಕಾರಿ. ಪಾಲ್ಘರ್‌ನ ವಾಡಾ ನಿವಾಸಿ ಆಜಾದ್‌ ಪಾಟೀಲ್‌ (29) ಗಂಭೀರ ಗಾಯಗೊಂಡಿದ್ದಾರೆ. ಈ ಇಬ್ಬರೂ ಅಧಿಕಾರಿಗಳು ಅಗ್ನಿಶಾಮಕ ದಳದೊಂದಿಗೆ ಒಪ್ಪಂದದ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರು.

ಘಟನೆ ವಿವರ : ಟೊರೆಂಟ್‌ ಪವರ್‌ ಕಂಪನಿಗೆ ಸೇರಿದ ಓವರ್‌ಹೆಡ್‌ ವೈರ್‌ಗಳಲ್ಲಿ ಪಾರಿವಾಳ ಸಿಲುಕಿರುವ ಬಗ್ಗೆ ಥಾಣೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು. ದಿವಾ ಬೀಟ್‌ ಅಗ್ನಿಶಾಮಕ ಠಾಣೆಯ ಅಗ್ನಿಶಾಮಕ ದಳದವರು ರಕ್ಷಣಾ ವಾಹನದೊಂದಿಗೆ ಸ್ಥಳಕ್ಕೆ ಬಂದಿದ್ದರು.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ, ಇಬ್ಬರು ಅಗ್ನಿಶಾಮಕ ದಳದವರು ಆಕಸಿಕವಾಗಿ ಹೈಟೆನ್ಷನ್‌ ವಿದ್ಯುತ್‌ ಕೇಬಲ್‌ ಸಂಪರ್ಕಕ್ಕೆ ಬಂದು ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದರು. ಅವರನ್ನು ತಕ್ಷಣ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್‌ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಸ್ತುತ ಘಟನೆ ಕುರಿತು ತನಿಖೆ ನಡೆಯುತ್ತಿದೆ ಮತ್ತು ವಿಚಾರಣೆ ಪೂರ್ಣಗೊಂಡ ನಂತರ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ ಎಂದು ಅಗ್ನಿಶಾಮಕ ಅಧಿಕಾರಿ ಗಿರೀಶ್‌ ಝಲಕೆ ತಿಳಿಸಿದ್ದಾರೆ.

ವಿಚ್ಛೇದನಕ್ಕೆ ಮುಂದಾದ ಪತ್ನಿಯನ್ನು ಇರಿದು ಕೊಂದ ಪತಿ

ಚಿಕ್ಕಮಗಳೂರು,ಅ.13 – ಕಳೆದ ಐದು ತಿಂಗಳ ಹಿಂದೆಯಷ್ಟೇ ವಿವಾಹವಾಗಿ ಕೌಟುಂಬಿಕ ಕಲಹದಿಂದ ತವರು ಸೇರಿದ್ದು, ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ನೇತ್ರಾವತಿ (32) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.

ಸಕಲೇಶಪುರದ ನವೀನ್‌ ಎಂಬುವವರ ಜೊತೆ ಕಳೆದ ಐದು ತಿಂಗಳ ಹಿಂದೆಯಷ್ಟೆ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲ ದಿನಗಳಲ್ಲೇ ಕೌಟುಂಬಿಕ ಕಲಹದಿಂದ ನೇತ್ರಾವತಿ ತನ್ನ ತವರು ಮನೆ ಸೇರಿದ್ದಳು.ರಾಜಿ ಪಂಚಾಯ್ತಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ವಿಚ್ಚೇದನ ನೀಡಲು ಸಿದ್ದತೆ ನಡೆಸಿ ಈ ಸಂಬಂಧ ಪತಿ ವಿರುದ್ಧ ನೇತ್ರಾವತಿ ಠಾಣೆಗೆ ದೂರು ಕೂಡ ನೀಡಿದ್ದರು.

ಈ ವಿಷಯ ತಿಳಿದ ನವೀನ್‌ ಬೇಸರಗೊಂಡು ನೇತ್ರಾವತಿ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ನೇತ್ರಾಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅಲ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾವಿಗೆ ಬಿದ್ದ ಮಹಿಳೆ ರಕ್ಷಣೆಗೆ ಹೋಗಿ ಪ್ರಾಣ ಬಿಟ್ಟ ಮೂವರು ಅಗ್ನಿಶಾಮಕ ದಳದ ಸಿಬ್ಬಂದಿ

ಕೊಲ್ಲಂ, ಅ. 13 (ಪಿಟಿಐ)– ಪ್ರಾಣ ಕಳೆದುಕೊಳ್ಳಲು ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಕೇರಳದ ಕೊಲ್ಲಂನಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಇಲ್ಲಿಗೆ ಸಮೀಪದ ನೆಡುವತೂರಿನಲ್ಲಿ ಬಾವಿಗೆ ಹಾರಿದ ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತರನ್ನು ನೆಡುವತೂರಿನ ಅರ್ಚನಾ, ಆಕೆಯ ಸ್ನೇಹಿತ ಶಿವಕೃಷ್ಣನ್‌ ಮತ್ತು ಕೊಟ್ಟಾರಕ್ಕರ ಠಾಣೆಯಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿ ಸೋನಿ ಎಸ್‌‍ ಕುಮಾರ್‌ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಮಧ್ಯರಾತ್ರಿಯ ಸುಮಾರಿಗೆ, ನೆಡುವತೂರಿನಲ್ಲಿ ಮಹಿಳೆಯೊಬ್ಬರು 80 ಅಡಿ ಆಳದ ಬಾವಿಗೆ ಹಾರಿದ್ದಾರೆ ಎಂದು ವರದಿಯಾದ ದುರಂತದ ಕರೆಯನ್ನು ಕೊಟ್ಟಾರಕ್ಕರ ಅಗ್ನಿಶಾಮಕ ಠಾಣೆಗೆ ಸ್ವೀಕರಿಸಲಾಯಿತು.ರಕ್ಷಣಾ ತಂಡವು ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಲು ಪ್ರಯತ್ನಗಳನ್ನು ಪ್ರಾರಂಭಿಸಿತು.ಕುಮಾರ್‌ ಸುರಕ್ಷತಾ ಸಾಧನಗಳನ್ನು ಧರಿಸಿ ಬಾವಿಗೆ ಇಳಿಯುತ್ತಿದ್ದಂತೆ, ಬಾವಿಯ ಪ್ಯಾರಪೆಟ್‌ ಕುಸಿದು ಅವರ ಮತ್ತು ಅರ್ಚನಾ ಮೇಲೆ ಬಿದ್ದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ತಿರದಲ್ಲಿ ನಿಂತಿದ್ದ ಶಿವಕೃಷ್ಣನ್‌ ಕೂಡ ಬಾವಿಗೆ ಬಿದ್ದಿದ್ದರಿಂದ ರಚನೆ ಸಡಿಲಗೊಂಡಾಗ ಬಾವಿಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಗ್ನಿಶಾಮಕ ದಳದವರು ಶೀಘ್ರದಲ್ಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು ಗಂಭೀರ ಗಾಯಗೊಂಡ ಮೂವರನ್ನು ಬಾವಿಯಿಂದ ಹೊರತೆಗೆಯಲಾಯಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೊತ್ತಿ ಉರಿದ ಇವಿ ಸ್ಕೂಟರ್‌

ಬೆಂಗಳೂರು, ಅ.13– ಚಾರ್ಜ್‌ಗೆ ಹಾಕಿದ್ದ ಇವಿ ಸ್ಕೂಟರ್‌ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆ ಬಸವೇಶ್ವರ ನಗರದಲ್ಲಿ ರಾತ್ರಿ ನಡೆದಿದೆ. ಶಿವನಹಳ್ಳಿಯ 1ನೇ ಕ್ರಾಸ್‌‍ನ ನಿವಾಸಿ ಮುಕೇಶ್‌ ಎಂಬುವವರು ಮನೆಯ ನೆಲ ಮಳಿಗೆಯಲ್ಲಿ ಎಲೆಕ್ಟ್ರಿಕ್‌ ಸ್ಕೂಟರನ್ನು ಚಾರ್ಜ್‌ಗೆ ಹಾಕಿದ್ದರು.

ರಾತ್ರಿ 11 ಗಂಟೆ ಸುಮಾರಿನಲ್ಲಿ ಈ ಸ್ಕೂಟರ್‌ ಸ್ಟೋಟಗೊಂಡು ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿದೆ.ತಕ್ಷಣ ಮನೆಯವರು ಗಮನಿಸಿ ಮಹಡಿಯಿಂದ ಕೆಳಗೆ ಇಳಿದು ಬಂದು ನೋಡಿದಾಗ ಸ್ಕೂಟರ್‌ಗೆ ಹೊತ್ತಿಕೊಂಡಿದ್ದ ಬೆಂಕಿ ಪಕ್ಕದಲ್ಲೇ ನಿಲ್ಲಿಸಿದ್ದ ಸೈಕಲ್‌ಗೂ ಆವರಿಸಿರುವುದು ಕಂಡು ಬಂದಿದೆ.

ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿ ಅಕ್ಕಪಕ್ಕದವರು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.ಎಲೆಕ್ಟ್ರಿಕ್‌ ಸ್ಕೂಟರ್‌ ಹಾಗೂ ಸೈಕಲ್‌ ಸಂಪೂರ್ಣ ಸುಟ್ಟು ಕರಕಲಾಗಿವೆೆ. ಇವಿ ಸ್ಕೂಟರ್‌ ಸ್ಪೋಟಕ್ಕೆ ನಿಖರ ಕಾರಣ ಸಧ್ಯಕ್ಕೆ ತಿಳಿದು ಬಂದಿಲ್ಲ.

ನಗರದಲ್ಲಿ ಆಗಾಗ್ಗೆ ಇವಿ ಸ್ಕೂಟರ್‌ಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಈ ವಾಹನಗಳ ಸವಾರರು ಆತಂಕಗೊಂಡಿದ್ದಾರೆ. ಇತ್ತೀಚೆಗೆ ಯಲಚೇನಹಳ್ಳಿಯ ಕಮರ್ಷಿಯಲ್‌ ಕಟ್ಟಡವೊಂದರ ಬೇಸೆಂಟ್‌ನಲ್ಲಿ ಚಾರ್ಜ್‌ಗೆ ಹಾಕಿದ್ದ ಇವಿ ಬೈಕ್‌ ಓವರ್‌ ಹೀಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು.

ಬಸ್‌‍ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಗೆ ಸಹ ಪ್ರಯಾಣಿಕನಿಂದ ಕಿರುಕುಳ

ಬೆಂಗಳೂರು,ಅ.13- ಬಸ್‌‍ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಗೆ ಕಿರುಕುಳ ನೀಡಿದ ಸಹಪ್ರಯಾಣಿಕನನ್ನು ಹಿಡಿದು ಸಂಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ. ದೊಡ್ಡಬಳ್ಳಾಪುರದಿಂದ ಕೆಎಸ್‌‍ಆರ್‌ಟಿಸಿ ಬಸ್‌‍ನಲ್ಲಿ ವೈದ್ಯೆಯೊಬ್ಬರು ಬೆಂಗಳೂರಿಗೆ ಬರುತ್ತಿದ್ದರು. ಫಿರೋಝ್‌ ಖಾನ್‌ ಎಂಬಾತ ಇವರ ಪಕ್ಕ ಕುಳಿತುಕೊಂಡಿದ್ದಾನೆ.

ಕೆಲ ಸಮಯದ ಬಳಿಕ ವೈದ್ಯೆಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ. ವೈದ್ಯೆ ಮುಜುಗರ ಪಟ್ಟುಕೊಂಡು ಆತನಿಂದ ಪಕ್ಕಕ್ಕೆ ಸರಿದು ಅಂತರ ಕಾಯ್ದುಕೊಂಡರಾದರೂ ಆತ ಪದೇ ಪದೇ ಕಾಟ ಕೊಟ್ಟಿದ್ದಾನೆ.ವೈದ್ಯೆ ಆತನ ವರ್ತನೆಯಿಂದ ಬೇಸತ್ತು ಬಸ್‌‍ಚಾಲಕರಿಗೆ ವಿಷಯ ತಿಳಿಸಿದ್ದಾರೆ. ಅಲ್ಲದೇ ತನ್ನ ಸಹೋದರನಿಗೂ ಮೊಬೈಲ್‌ ಕರೆ ಮಾಡಿ ಹೇಳಿದ್ದಾರೆ.

ತನ್ನ ಬಗ್ಗೆ ವೈದ್ಯೆ ಚಾಲಕನಿಗೆ ಹೇಳಿದ್ದಾರೆಂದು ವಿಷಯ ತಿಳಿದು ಆತ ಬಸ್‌‍ನಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.ತಕ್ಷಣ ಬಸ್‌‍ ಪ್ರಯಾಣಿಕರು ಹಾಗೂ ಬಸ್‌‍ ಚಾಲಕ ಸೇರಿಕೊಂಡು ಆತನನ್ನು ಹಿಡಿದು ಸಂಜಯನಗರ ಪೊಲೀಸ್‌‍ ಠಾಣೆಗೆ ಒಪ್ಪಿಸಿದ್ದು, ಆತನ ವಿರುದ್ಧ ವೈದ್ಯೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಂಡು ಮತ್ತೆ ವಿಚಾರಣೆಗೆ ಬರುವಂತೆ ಹೇಳಿ ನೋಟೀಸ್‌‍ಕೊಟ್ಟು ಕಳುಹಿಸಿದ್ದಾರೆ.

ಧಾರವಾಡ : ಮರಕ್ಕೆ ಕ್ರೂಸರ್‌ ವಾಹನ ಡಿಕ್ಕಿಯಾಗಿ ಇಬ್ಬರು ಸಾವು

ಧಾರವಾಡ,ಅ.13– ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್‌ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಎಂಟು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ತೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಅಪಘಾತದಲ್ಲಿ ಗದಗ ಹುಡ್ಕೋ ಕಾಲೋನಿಯ ಮಹಾಂತಮ ಬಸವಣೆಪ್ಪ ತುಪ್ಪದ (85) ಮತ್ತು ಸುರೇಶ ಬಸವಣೆಪ್ಪ ತುಪ್ಪದ (52)ಮೃತಪಟ್ಟಿದ್ದಾರೆ.ಗದಗ ಮೂಲದ ಕುಟುಂಬವು ಮಹಾರಾಷ್ಟ್ರದ ಕೊಲ್ಲಾಪುರದ ಮಹಾಲಕ್ಷ್ಮೀ ದೇವಸ್ಥಾನಕ್ಕೆ ತೆರಳಿದ್ದು, ಅವರೆಲ್ಲರೂ ದೇವಿ ದರ್ಶನ ಪಡೆದು ತಮ ಊರಿಗೆ ಕ್ರೂಸರ್‌ ವಾಹನದಲ್ಲಿ ಹಿಂದಿರುಗುತ್ತಿದ್ದರು.

ಇಂದು ಮುಂಜಾನೆ 5.30 ರ ಸುಮಾರಿನಲ್ಲಿ ಈ ಕ್ರೂಸರ್‌ ವಾಹನ ಧಾರವಾಡ ತಾಲ್ಲೂಕಿನ ತೇಗೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಮುಲ್ಲಾ ಡಾಬಾ ಬಳಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ.ಅಪಘಾತದ ರಭಸಕ್ಕೆ ಕ್ರೂಸರ್‌ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ವಾಹನದೊಳಗಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಗಾಯಗೊಂಡಿದ್ದ ಎಂಟು ಮಂದಿಯನ್ನು ರಕ್ಷಿಸಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಗರಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.