Home Blog Page 53

ರಾಮಭದ್ರಾಚಾರ್ಯರ ಅವಹೇಳನಕಾರಿ ವಿಡಿಯೋ ಡಿಲಿಟ್‌ ಮಾಡಲು ಆದೇಶ

ಲಕ್ನೋ,ಅ.12- ಖ್ಯಾತ ರಾಮಕಥಾ ನಿರೂಪಕ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಜಗದ್ಗುರು ರಾಮಭದ್ರಾಚಾರ್ಯರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ವೀಡಿಯೊಗಳನ್ನು 48 ಗಂಟೆಗಳ ಒಳಗೆ ತೆಗೆದುಹಾಕುವಂತೆ ಅಲಹಾಬಾದ್‌ ಹೈಕೋರ್ಟ್‌ನ ಲಕ್ನೋ ಪೀಠ ಮೆಟಾ ಮತ್ತು ಗೂಗಲ್‌ಗೆ ನಿರ್ದೇಶನ ನೀಡಿದೆ.

ಶರದ್‌ ಚಂದ್ರ ಶ್ರೀವಾಸ್ತವ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಶೇಖರ್‌ ಬಿ ಸರಾಫ್‌ ಮತ್ತು ನ್ಯಾಯಮೂರ್ತಿ ಪ್ರಶಾಂತ್‌ ಕುಮಾರ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಆದೇಶ ನೀಡಿದೆ.ತೆಗೆದುಹಾಕುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಂಬಂಧಿತ ಲಿಂಕ್‌ಗಳನ್ನು ಒದಗಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್‌ 11 ಕ್ಕೆ ನಿಗದಿಪಡಿಸಲಾಗಿದೆ.

ಯೂಟ್ಯೂಬ್‌‍, ಫೇಸ್‌‍ಬುಕ್‌‍ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಬಹು ಚಾನೆಲ್‌ಗಳನ್ನು ನಿರ್ವಹಿಸುವ ಶಶಾಂಕ್‌ ಶೇಖರ್‌ ಎಂಬವರು ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಜಗದ್ಗುರು ಸ್ವಾಮಿ ರಾಮಭದ್ರಾಚಾರ್ಯ ದಿವ್ಯಾಂಗ್‌ ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ ರಾಮಭದ್ರಾಚಾರ್ಯರ ವಿರುದ್ಧ ಅವಹೇಳನಕಾರಿ ಮತ್ತು ಮಾನನಷ್ಟಕರ ವೀಡಿಯೊಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ರಾಮಭದ್ರಾಚಾರ್ಯರ ಅನುಯಾಯಿಗಳು ಎತ್ತಿದ ಆಕ್ಷೇಪಣೆಗಳ ಹೊರತಾಗಿಯೂ, ವೀಡಿಯೊಗಳು ಆನ್‌ಲೈನ್‌ನಲ್ಲಿಯೇ ಉಳಿದಿವೆ ಎಂದು ವರದಿಯಾಗಿದೆ ಮತ್ತು ಅವುಗಳನ್ನು ತೆಗೆದುಹಾಕಲು ಸಂಬಂಧಪಟ್ಟ ವೇದಿಕೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅದು ಹೇಳಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿಯಂತ್ರಿಸಲು ನಿಯಮಗಳನ್ನು ರೂಪಿಸಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆಯೂ ಅರ್ಜಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಲಾಗಿದೆ, ಆನ್‌ಲೈನ್‌ನಲ್ಲಿ ಮಾನಹಾನಿಕರ ವಿಷಯಗಳ ಹರಡುವಿಕೆಯನ್ನು ತಡೆಯುವ ಅಗತ್ಯವನ್ನು ಎತ್ತಿ ತೋರಿಸಲಾಗಿದೆ.

ಅರ್ಜಿದಾರರು ಈ ವಿಷಯವು ಮಾನಹಾನಿಕರ ಮಾತ್ರವಲ್ಲದೆ, ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯ ಅವರ ಅಂಗವೈಕಲ್ಯವನ್ನು ಅಣಕಿಸುವಂತಿದೆ ಎಂದು ವಾದಿಸಿದರು.ವಿಚಾರಣೆಯ ಸಮಯದಲ್ಲಿ, ರಾಜ್ಯ ಅಂಗವಿಕಲರ ಆಯುಕ್ತರ ಕಚೇರಿಯು ಈ ವಿಷಯವನ್ನು ಈಗಾಗಲೇ ಗಮನದಲ್ಲಿಟ್ಟುಕೊಂಡು ಶೇಖರ್‌ ಅವರಿಗೆ ನೋಟಿಸ್‌‍ ನೀಡಿ, ಅಕ್ಟೋಬರ್‌ 18 ರಂದು ಆಯೋಗದ ಮುಂದೆ ಹಾಜರಾಗುವಂತೆ ನಿರ್ದೇಶಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಮೇಘಾಲಯ : ಮಾರುಕಟ್ಟೆಯಲ್ಲಿ ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕಗಳ ವಶ

ಶಿಲ್ಲಾಂಗ್‌,ಆ. 12 (ಪಿಟಿಐ) ಮೇಘಾಲಯದ ರಿ-ಭೋಯ್‌ ಜಿಲ್ಲೆಯ ಉಮಿಸಿಂಗ್‌ ಮಾರುಕಟ್ಟೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರುಕಟ್ಟೆಯ ಮೇಘಾಲಯ ಗ್ರಾಮೀಣ ಬ್ಯಾಂಕ್‌ ಮುಂಭಾಗದಲ್ಲಿರುವ ಕಾಂಪೌಂಡ್‌ನಲ್ಲಿ ಶಂಕಿತ ಸ್ಫೋಟಕಗಳನ್ನು ಹೊಂದಿದ್ದ ಕೈಬಿಟ್ಟ ಚೀಲ ಪತ್ತೆಯಾಗಿದೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ವಿವೇಕಾನಂದ ಸಿಂಗ್‌ ತಿಳಿಸಿದ್ದಾರೆ.

ಬಾಂಬ್‌ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್‌‍) ಮತ್ತು ಕೆ-9 ತಂಡವನ್ನು ಕೋರಲಾಯಿತು ಮತ್ತು ಪರೀಕ್ಷಿಸಿದಾಗ, ಅವರು ಸ್ಫೋಟಕಗಳ ಉಪಸ್ಥಿತಿಯನ್ನು ದೃಢಪಡಿಸಿದರು.ನಂತರ ಬಿಡಿಡಿಎಸ್‌‍ ತಂಡವು ಐಇಡಿಯನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿತು.

ವಿಶ್ಲೇಷಣೆಯ ನಂತರ, ಐಇಡಿಯನ್ನು 4.7 ಕೆಜಿ ಜೆಲಾಟಿನ್‌‍, 10 ಡಿಟೋನೇಟರ್‌ಗಳು ಮತ್ತು ಸುಮಾರು 50 ಕಬ್ಬಿಣದ ರಾಡ್‌ ತುಂಡುಗಳನ್ನು ಸ್ಪ್ಲಿಂಟರ್‌ಗಳಾಗಿ ಬಳಸಿ ತಯಾರಿಸಲಾಗಿದೆ ಎಂದು ಕಂಡುಬಂದಿದೆ ಎಂದು ಸಿಂಗ್‌ ಹೇಳಿದರು.

ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ ಪ್ರಕಾರ ಸ್ಥಳದಿಂದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಜೀವ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ.ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಒಬ್ಬ ಶಂಕಿತನನ್ನು ಗುರುತಿಸಲಾಗಿದ್ದು, ಆತನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್ಪಿ ತಿಳಿಸಿದ್ದಾರೆ.

ಸಮೀಕ್ಷೆ ಕುರಿತು ನಾಳೆ ಒಕ್ಕಲಿಗ ಸಮುದಾಯದ ನಾಯಕರು, ಮಠಾಧೀಶರ ಮಹತ್ವದ ಸಭೆ

ಬೆಂಗಳೂರು, ಅ.12- ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಬಗ್ಗೆ ಒಕ್ಕಲಿಗ ಸಮುದಾಯದ ನಾಯಕರು ಹಾಗೂ ಮಠಾಧೀಶರ ಮಹತ್ವದ ಸಭೆ ನಾಳೆ ನಡೆಯಲಿದೆ.

ಈ ಸಮೀಕ್ಷೆ ಆರಂಭಕ್ಕೂ ಮುನ್ನ ಆದಿಚುಂಚನಗಿರಿ ಮಠದ ವಿಜಯನಗರ ಶಾಖಾಮಠದ ಸಮುದಾಯ ಭವನದಲ್ಲಿ ಇದೇ ರೀತಿ ಸಭೆ ನಡೆಸಿ ಒಕ್ಕಲಿಗರ ಒಗ್ಗಟ್ಟು ಪ್ರದರ್ಶಿಸಲಾಗಿತ್ತು. ಸಮೀಕ್ಷೆ ಕುರಿತಂತೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಲು ಕರೆ ನೀಡಲಾಗಿತ್ತು.

ಗ್ರೇಟರ್‌ ಬೆಂಗಳೂರು ವ್ಯಾಪ್ತಿ ಹೊರತುಪಡಿಸಿ ರಾಜ್ಯದ ವಿವಿಧೆಡೆ ಸಮೀಕ್ಷೆ ಬಹುತೇಕ ಮುಕ್ತಾಯ ಹಂತ ತಲುಪಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸಮೀಕ್ಷೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಾಳೆ ಜಾಗೃತಿ ಸಭೆ ನಡೆಸಲಾಗುತ್ತದೆ.

ಈ ಸಭೆಗೆ ಒಕ್ಕಲಿಗ ಸಮುದಾಯದ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರುಗಳನ್ನು ಆಹ್ವಾನಿಸಲಾಗಿದೆ. ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಇದುವರೆಗೆ ಸಮೀಕ್ಷೆಯಲ್ಲಿ ಕಂಡುಬಂದ ಲೋಪದೋಷಗಳು, ಸಮುದಾಯದವರಿಗೆ ಮಾಡಿರುವ ಜಾಗೃತಿ, ಆಗಿರುವ ಪ್ರಗತಿ, ಜಿಬಿಎ ವ್ಯಾಪ್ತಿಯಲ್ಲಿ ಒಕ್ಕಲಿಗ ಜನಾಂಗದವರು ಎಲ್ಲರೂ ಪಾಲ್ಗೊಳ್ಳುವಂತೆ ಅರಿವು ಮೂಡಿಸುವ ಬಗ್ಗೆ ಸುದೀರ್ಘ ಸಮಾಲೋಚನೆ ಮಾಡಲಾಗುತ್ತದೆ.

ಈಗಾಗಲೇ ಸಮೀಕ್ಷೆಯನ್ನು ಮುಂದೂಡುವಂತೆ ಹಾಗೂ ವಿಸ್ತರಣೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅಲ್ಲದೆ, ಸಮೀಕ್ಷೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಮೊರೆ ಹೋಗಿದ್ದು, ಮಧ್ಯಂತರ ಆದೇಶವನ್ನು ನ್ಯಾಯಾಲಯ ನೀಡಿದೆ.

ಸಭೆಯಲ್ಲಿ ಸಂಘ-ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಂದ ಸಮೀಕ್ಷೆ ಕುರಿತಂತೆ ಸಲಹೆ-ಸೂಚನೆಗಳನ್ನು ಆಲಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ನಾಳೆ ನಡೆಯುವ ಒಕ್ಕಲಿಗ ನಾಯಕರು, ಮುಖಂಡರ ಸಭೆ ಕುತೂಹಲ ಕೆರಳಿಸಿದ್ದು, ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-10-2025)

ನಿತ್ಯ ನೀತಿ : ಜನ್ಮಪೂರ್ತಿ ಪುಸ್ತಕ ಓದಿದೆ ಏನೂ ಕಲಿಯಕ್ಕೆ ಆಗಲಿಲ್ಲಾ! ಹತ್ತಿರದಿಂದ ಕೆಲವು ಮುಖಗಳ ಓದಿದೆ ನೂರಾರು ಪಾಠ ಕಲಿತೆ..!!

ಪಂಚಾಂಗ : ಭಾನುವಾರ, 12-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ಷಷ್ಠಿ / ನಕ್ಷತ್ರ: ಮೃಗಶಿರಾ / ಯೋಗ: ವರೀಯಾ / ಕರಣ: ವಿಷ್ಟಿ
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.03
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ
: ಅಂದುಕೊಂಡ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ನೆರವೇರಲಿವೆ.
ವೃಷಭ: ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರಬರಲಿದೆ.
ಮಿಥುನ: ಬಹಳ ದಿನಗಳ ನಂತರ ಕಚೇರಿಯ ಕೆಲಸ-ಕಾರ್ಯಗಳು ತೃಪ್ತಿಕರವಾಗಲಿವೆ.

ಕಟಕ: ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭ ಬರಲಿದೆ.
ಸಿಂಹ: ಸಂಗಾತಿಯೊಂದಿಗೆ ಇದ್ದ ಕೆಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು.
ಕನ್ಯಾ: ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಿಂದ ಆರ್ಥಿಕ ಸಹಾಯ ಸಿಗಲಿದೆ.

ತುಲಾ: ತಂದೆ-ತಾಯಿಯರ ಹಿತವಚನವನ್ನು ಸಹನೆ ಯಿಂದ ಕೇಳುವುದು ಒಳಿತು.
ವೃಶ್ಚಿಕ: ಆರ್ಥಿಕ ವಿಚಾರದಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಕೊಳ್ಳುವಿರಿ.
ಧನುಸ್ಸು: ವಾಹನ ಚಾಲನೆ ಹಾಗೂ ವಾಹನದಲ್ಲಿ ಪ್ರಯಾಣಿಸುವಾಗ ಹೆಚ್ಚು ಜಾಗೃತರಾಗಿರಿ.

ಮಕರ: ಅತಿಯಾದ ಆಲಸ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟುಮಾಡಲಿದೆ. ದೂರ ಪ್ರಯಾಣ ಬೇಡ.
ಕುಂಭ: ಆಹಾರದಲ್ಲಿನ ಬದಲಾವಣೆಯಿಂದಾಗಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ.
ಮೀನ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.

“ಡಿಸೆಂಬರ್‌ನಲ್ಲಿ ನಿತಿನ್‌ ಗಡ್ಕರಿ ಪ್ರಧಾನಿಯಾಗ್ತಾರೆ” : ಸಂತೋಷ್‌ ಲಾಡ್‌ ಭಯಂಕರ ಭವಿಷ್ಯ

ಬೆಂಗಳೂರು, ಅ.11– ಡಿಸೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬದಲಾಗುತ್ತಾರೆ, ನಿತಿನ್‌ ಗಡ್ಕರಿ ಹೊಸದಾಗಿ ಪ್ರಧಾನಿಯಾಗುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ್‌ಲಾಡ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕ್ರೈಸ್ಟ್‌ ವಿಶ್ವವಿದ್ಯಾಲಯ ಅಸೋಷಿಯೇಟ್‌ ಡಿನ್‌ ಸಹಾಯಕ ಡಾ. ಸ್ವಪ್ನ ಎಸ್‌‍. ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಋತುಚಕ್ರ ನೀತಿ ಕುರಿತು ಸಮಿತಿಯ ಸದಸ್ಯರ ಜೊತೆ ಚರ್ಚೆ ನಡೆಸಿ, ಅವರನ್ನು ಅಭಿನಂದಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಯವರು ಸಚಿವರನ್ನು ಔತಣಕೂಟಕ್ಕೆ ಕರೆದಿರುವುದು ವಿಶೇಷವೇನಿಲ್ಲ. ನಮಲ್ಲಿ ನವೆಂಬರ್‌ ಕ್ರಾಂತಿ ಎಂಬುದೇನಿಲ್ಲ. ಆದರೆ ಕೇಂದ್ರದಲ್ಲಿ ನಿತಿನ್‌ ಗಡ್ಕರಿ ಪ್ರಧಾನಿಯಾಗುತ್ತಾರೆ ಎಂದರು.

ಬಿಜೆಪಿಯಲ್ಲಿನ ಆಂತರಿಕ ಚರ್ಚೆಗಳ್ನು ನಾನು ಹೇಳುತ್ತಿದ್ದೇನೆ. ಮೋದಿ ಅವರ ವಿರುದ್ಧ ಬಿಜೆಪಿಯ ನಾಯಕರಾಗಲಿ, ಮಾಧ್ಯಮದವರಾಗಲಿ ಮಾತನಾಡಲು ಅವಕಾಶ ಇಲ್ಲದಂತಹ ವಾತಾವರಣವಿದೆ. ಹೀಗಾಗಿ ಡಿಸೆಂಬರ್‌ ಒಳಗಾಗಿ ಬದಲಾವಣೆಯಾಗುತ್ತದೆ ಎಂದರು. ಪ್ರಧಾನಿಯವರು ತಮ ಹುದ್ದೆಯ ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿದ್ದಾರೆ. ವಿದೇಶಗಳಿಗೆ ಹೋದರೆ ಏನೋ ಒಂದು ಮಾತನಾಡುತ್ತಾರೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಹೋದಾಗ ಪ್ರಾಸ ಬದ್ದವನ್ನಾಗಿ ಮಾತನಾಡುತ್ತಾರೆ. ಇದು ಪ್ರಧಾನಿ ಅವರ ಕೆಲಸವೇ? ಎಂದು ಆಕ್ಷೇಪಿಸಿದರು.

ರಾಜ್ಯ ಸರ್ಕಾರ ರೂಪಿಸಿರುವ ಋತುಚಕ್ರ ರಜೆ ನೀತಿಯ ಕಾರಣಕ್ಕಾಗಿ ಖಾಸಗಿ ಸಂಸ್ಥೆಯವರು ಮಹಿಳಾ ಉದ್ಯೋಗಿಗಳಿಗೆ ಅವಕಾಶ ನಿರಾಕರಿಸಿದರೆ, ಸರ್ಕಾರ ಮಧ್ಯಪ್ರವೇಶ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.ಇದೊಂದು ಪ್ರಗತಿಪರ ಮಸೂದೆ. ಎಲ್ಲರೂ ಇದನ್ನು ಸ್ವಾಗತಿಸಿದ್ದಾರೆ. ಈವರೆಗೂ ಯಾರೂ ವಿರೋಧ ಮಾಡಿರುವುದು ಕಂಡು ಬಂದಿಲ್ಲ. ಅಂತಹ ಸಂದರ್ಭ ಬಂದಾಗ ಪರಿಶೀಲಿಸುತ್ತೇವೆ ಎಂದರು.

ಪ್ರಿಯತಮೆಗಾಗಿ ಸಂಬಂಧಿಕರ ಮಳೆಯಲ್ಲೇ ಕಳ್ಳತನ ಮಾಡಿ ಕಥೆ ಕಟ್ಟಿದ್ದ ಪ್ರೇಮಿ ಅಂದರ್‌

ಬೆಂಗಳೂರು, ಅ.11 – ಪ್ರಿಯತಮೆಗೆ ಹಣ, ಆಭರಣ ಕೊಡಲು ತಮ್ಮ ಸಂಬಂಧಿಕರ ಮನೆಯಲ್ಲಿಯೇ ನಗದು ಸೇರಿದಂತೆ 52.71 ಲಕ್ಷ ರೂ. ಬೆಲೆಯ ಚಿನ್ನಾಭರಣ ಕಳ್ಳತನ ಮಾಡಿ ನಾಟಕವಾಡಿದ್ದ ಯುವಕನೊಬ್ಬನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಟ್ಟಿಹಳ್ಳಿಯ ನಿವಾಸಿ ಶ್ರೇಯಸ್‌‍(22) ಬಂಧಿತ ಆರೋಪಿ. ಈತ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ತಮದೇ ಊರಿನ ಸಂಬಂಧಿಕರಾದ ಹರೀಶ್‌ ಎಂಬುವವರ ಮನೆಗೆ ಈ ಶ್ರೇಯಸ್‌‍ ಆಗಾಗ್ಗೆ ಹೋಗುತ್ತಿದ್ದ. ಕಳೆದ ತಿಂಗಳ 14ರಂದು ಹರೀಶ್‌ ಅವರ ತಾಯಿ ಮನೆಗೆ ಬೀಗಹಾಕಿ ಪಕ್ಕದ ಬೀದಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು.

ಆ ಸಂದರ್ಭದಲ್ಲಿ ಮನೆಯ ಬಳಿ ಬಂದ ಶ್ರೇಯಸ್‌‍ ಬೀಗ ಮುರಿದು 3.46 ಲಕ್ಷ ರೂ. ನಗದು, 416 ಗ್ರಾಂ ಚಿನ್ನವನ್ನು ದೋಚಿ ಹೋಗಿದ್ದನು.ಕಳ್ಳತನ ಮಾಡಿದ್ದ ಕೆಲವು ಆಭರಣಗಳನ್ನು ಬನ್ನೇರುಘಟ್ಟದಲ್ಲಿ ವಾಸವಿರುವ ತನ್ನ ಪ್ರಿಯತಮೆಗೆ ಕೊಟ್ಟಿದ್ದು, ಉಳಿದ ಆಭರಣಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಮುತ್ತೂಟ್‌ ಫೈನಾನ್‌್ಸನಲ್ಲಿ ಅಡವಿಟ್ಟಿದ್ದ. ನಗದನ್ನು ಸೂರ್ಯಸಿಟಿಯಲ್ಲಿರುವ ಬ್ಯಾಂಕ್‌ನ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದ.
ನಂತರ ಹರೀಶ್‌ ಅವರ ಮನೆ ಬಳಿ ಬಂದ ಶ್ರೇಯಸ್‌‍ ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ನೀವು ಬೇಗ ಪೊಲೀಸರಿಗೆ ದೂರು ಕೊಡಿ ಎಂದು ಅವನೇ ಪೊಲೀಸರಿಗೆ ದೂರು ಕೊಡಿಸಿದ್ದ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ತಾಂತ್ರಿಕ ಸಾಕ್ಷ್ಯಾಧಾರದ ಮೇಲೆ ಶ್ರೇಯಸ್‌‍ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.ನಂತರ ಪೊಲೀಸರು ಆತನನ್ನು ಬಂಧಿಸಿ ಸಂಬಂಧಿಕರ ಮನೆಯಲ್ಲಿ ಕದ್ದಿದ್ದ ಹಣ, ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಬಂಧನ: 86 ಗ್ರಾಂ ಮಾಂಗಲ್ಯ ಸರ ವಶ
ಕೆರೆಯ ಬಳಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ಮೌಲ್ಯದ 86 ಗ್ರಾಂ ತೂಕದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಗೊಲ್ಲಹಳ್ಳಿಯ ನಿವಾಸಿ ನಿತಿನ್‌ ಬಂಧಿತ ಆರೋಪಿ. ಈತ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಸೆ.12ರಂದು ಮಾರುಗೊಂಡನಹಳ್ಳಿಯ ಕೆರೆ ಬಳಿ ವಾಕಿಂಗ್‌ ಮಾಡುತ್ತಿದ್ದಾಗ ಅವರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದ.

ಈ ಸಂಬಂಧ ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಬಾತಿದಾರನಿಂದ ಬಂದ ಖಚಿತ ಮಾಹಿತಿಯನ್ನು ಕಲೆ ಹಾಕಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸರ ಅಪಹರಣ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಚಿನ್ನದ ಸರವನ್ನು ಹಾಸನದ ಆಭರಣ ಅಂಗಡಿಯೊಂದರಲ್ಲಿ ಅಡಮಾನ ಇಟ್ಟಿದ್ದ ಸುಮಾರು 9,03,000 ರೂ. ಮೌಲ್ಯದ 86 ಗ್ರಾಂ ತೂಕದ ಮಾಂಗ್ಯಲ ಸರವನ್ನು ವಶಪಡಿಸಿಕೊಂಡಿದ್ದಾರೆ.ಎಲೆಕ್ಟ್ರಾನಿಕ್‌ಸಿಟಿ ಉಪವಿಭಾಗದ ಉಪ ಪೊಲೀಸ್‌‍ ಆಯುಕ್ತ ನಾರಾಯಣ್‌ ಅವರ ಮಾರ್ಗದರ್ಶನದಲ್ಲಿ ಉಪವಿಭಾಗದ ಸಹಾಯಕ ಪೊಲೀಸ್‌‍ ಆಯುಕ್ತರಾದ ಕೆ.ಎಂ.ಸತೀಶ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಸೋಮಶೇಖರ್‌ ಹಾಗೂ ಸಿಬ್ಬಂದಿಗಳ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಪನ್ಯಾಸಕರ ಮನೆಗೆ ನುಗ್ಗಿ 1.40 ಕೋಟಿ ದೋಚಿದ್ದ 7 ಮಂದಿ ಡಕಾಯಿತರ ಗ್ಯಾಂಗ್ ಅರೆಸ್ಟ್

ಬೆಂಗಳೂರು, ಅ.11- ಉಪನ್ಯಾಸಕರೊಬ್ಬರ ಮನೆಗೆ ಜಾಗೃತ ದಳದ ಅಧಿಕಾರಿಗಳಂತೆ ನುಗ್ಗಿ 1.40 ಕೋಟಿ ರೂ. ದೋಚಿದ್ದ ಏಳು ಮಂದಿ ಡಕಾಯಿತರ ತಂಡವನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಉಪನ್ಯಾಸಕರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕರ್‌, ಆಂಧ್ರ ಮೂಲದ ಜಗನ್‌ಮೋಹನ್‌, ಅವನ ಸಹೋದರ ಶ್ರೀನಿವಾಸ್‌‍, ಯಲಹಂಕದಲ್ಲಿ ಮಾನವ ಹಕ್ಕುಗಳ ಸಂಘಟನೆ ಕಚೇರಿ ಹೊಂದಿದ್ದ ರಾಜೇಂದ್ರ, ಹೇಮಂತ, ಶ್ರೀನಿವಾಸ ಹಾಗೂ ಕಿರಣ್‌ ಬಂಧಿತ ಆರೋಪಿಗಳು.

ಕೋಟು, ಟೈ ಹಾಕಿಕೊಂಡು ಠಾಕುಟೀಕಾಗಿ ಡ್ರೆಸ್‌‍ ಮಾಡಿಕೊಂಡು ಕಳೆದ ಸೆ.19ರಂದು ಬೆಳಗ್ಗೆ ವಿನಾಯಕ ನಗರದಲ್ಲಿ ವಾಸವಾಗಿರುವ, ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕ ಗಿರಿರಾಜ್‌ ಎಂಬುವವರ ಮನೆ ಬಳಿ ಎಂಟು ಮಂದಿ ಬಂದಿದ್ದಾರೆ. ನಾಲ್ವರು ಹೊರಗೆ ನಿಂತಿದ್ದು, ನಾಲ್ಕು ಮಂದಿ ಮನೆ ಒಳಗೆ ಹೋಗಿದ್ದರು.

ನಂತರ ಗಿರಿರಾಜ್‌ ಅವರ ತಾಯಿ ಹಾಗೂ ಪತ್ನಿಗೆ ನಾವು ಜಾಗೃತ ದಳದ ಅಧಿಕಾರಿಗಳೆಂದು ಹೇಳಿ ಬೆದರಿಸಿ ಮನೆ ಶೋಧ ನಡೆಸಬೇಕೆಂದು ಕೆಲ ದಾಖಲೆಗಳು, ಹಣವಿದ್ದ ಸೂಟ್‌ಕೇಸ್‌‍ ಹಾಗೂ ಬ್ಯಾಗ್‌ಗಳನ್ನು ದೋಚಿ ಕಾರಿನಲ್ಲಿ ಪರಾರಿಯಾಗಿದ್ದರು.

ಗಿರಿರಾಜ್‌ ಅವರು ಊಟಕ್ಕೆಂದು ಬಂದಾಗ ಮೊದಲು ಮನೆಯವರು ಏನನ್ನೂ ಹೇಳಲಿಲ್ಲ, ನಂತರ ಜಮೀನು ಮಾರಿ ಇಟ್ಟಿದ್ದ ಹಣವನ್ನು ನೋಡಿದ್ದಾರೆ. ಹಣ ಇಲ್ಲದಿದ್ದಾಗ ಮನೆಯವರನ್ನು ವಿಚಾರಿಸಿದ್ದಾರೆ. ನಂತರ ನಡೆದ ಘಟನೆಯನ್ನು ತಿಳಿದುಕೊಂಡಿದ್ದಾರೆ.ಕೂಡಲೇ ಯಲಹಂಕ ಪೊಲೀಸ್‌‍ ಠಾಣೆಗೆ ಹೋಗಿ ಡಕಾಯಿತರು ಮನೆಗೆ ನುಗ್ಗಿ ಜಮೀನು ಮಾರಿ ಬಂದಿದ್ದ ಸುಮಾರು 1.40 ಕೋಟಿ ರೂ.ಗಳನ್ನು ದೋಚಿದ್ದಾರೆ ಎಂದು ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಯಲಹಂಕ ಠಾಣೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ನಂತರ ಸಂಜಯನಗರದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಡಕಾಯಿತಿ ಘಟನೆ ಬೆಳಕಿಗೆ ಬಂದಿದೆ.

ಈತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಇನ್ನೂ ಏಳು ಮಂದಿ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ. ನಂತರ ಆರೋಪಿಯ ಗೋಡೌನ್‌ ಮತ್ತು ಆಫೀಸ್‌‍ ಮೇಲೆ ದಾಳಿ ನಡೆಸಿ ಅಲ್ಲಿಟ್ಟಿದ್ದ 38,80,200 ರೂ. ನಗದು, ದಾಖಲಾತಿಗಳಿದ್ದ ಮೂರು ಬ್ಯಾಗ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಯಿತು.

ಇದೇ ವೇಳೆ ಆರೋಪಿ ನೀಡಿದ ಮಾಹಿತಿ ಮೇರೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಆಂಧ್ರ ಪ್ರದೇಶದ ರೇಣುಕಾಮಾಪಲ್ಲಿ ಗ್ರಾಮದ ಜಗನ್‌ಮೋಹನ್‌ನನ್ನು ಬಂಧಿಸಿ ಆತನ ಮನೆಯಲ್ಲಿಟ್ಟಿದ್ದ 55 ಲಕ್ಷ ರೂ. ಮತ್ತು ಆತನ ಸಂಬಂಧಿಕರ ಮನೆಯಲ್ಲಿರಿಸಿದ್ದ 25 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು.

ನಂತರ ವಿಜಯನಗರದ ಚೋಳರಪಾಳ್ಯದ ಆರೋಪಿ ಮನೆಯಿಂದ 1.50 ಲಕ್ಷ ರೂ. ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತಿಬ್ಬರು ಆರೋಪಿಗಳನ್ನು ಶ್ರೀನಗರ ಹಾಗೂ ರಾಮಮೂರ್ತಿ ನಗರದಲ್ಲಿ ವಶಕ್ಕೆ ಪಡೆದು ಎಲ್ಲ ಏಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ 10 ದಿನಗಳ ಕಾಲ ಅಧಿರಕ್ಷೆಗೆ ಪಡೆದುಕೊಳ್ಳಲಾಯಿತು.

ಈ ಹಿಂದೆ ಗಿರಿರಾಜ್‌ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಂಕರ್‌ ಈ ಪ್ರಕರಣದ ಮಾಸ್ಟರ್‌ ಮೈಂಡ್‌ ಎಂದು ತಿಳಿದುಬಂದಿದ್ದು, ಈತ ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದು, ದೊಮಲೂರಿನಲ್ಲಿ ವಾಸವಾಗಿದ್ದ. ಗಿರಿರಾಜ್‌ ಅವರ ಮನೆಯಲ್ಲಿ ಹಣವಿರುವ ಬಗ್ಗೆ ಸುಳಿವು ಪಡೆದುಕೊಂಡು ಪೂರ್ವ ನಿಯೋಜಿತ ಚರ್ಚೆ ನಡೆಸಿ ಈ ಡಕಾಯಿತಿ ನಡೆಸಿದ್ದರು.

ಶಂಕರ್‌ ಮನೆಯಲ್ಲಿದ್ದ 4 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಈಗ ಪೊಲೀಸರು 1.27 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್‌ ಮಾರ್ಗದರ್ಶನದಲ್ಲಿ ಎಸಿಪಿ ನರಸಿಂಹಮೂರ್ತಿ ನೇತೃತ್ವದಲ್ಲಿ ಯಲಹಂಕ ಠಾಣೆ ಇನ್ಸ್ ಪೆಕ್ಟರ್‌ ಎಂ.ಎನ್‌.ಕೃಷ್ಣಮೂರ್ತಿ ಮತ್ತವರ ಸಿಬ್ಬಂದಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಹಾರ ಫಲಿತಾಂಶ ನಂತರ ಸಂಪುಟ ಪುನಾರಚನೆ ಚರ್ಚೆ : ಸಚಿವ ಚೆಲುವರಾಯ ಸ್ವಾಮಿ

ಮಂಡ್ಯ, ಅ.11– ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ನವೆಂಬರ್‌ 14ರಂದು ಪ್ರಕಟವಾಗಲಿದ್ದು, ಆ ಬಳಿಕ ಸಂಪುಟ ಪುನರ್‌ ರಚನೆಯ ಬಗ್ಗೆ ಮುಖ್ಯಮಂತ್ರಿ ಮತ್ತು ಪಕ್ಷ ಚರ್ಚೆ ಮಾಡಿ ನಿರ್ಧರಿಸಲಾಗುವುದು ಎಂದು ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ನ 138 ಮಂದಿ ಶಾಸಕರು ಸಚಿವರಾಗಬೇಕೆಂಬ ಆಕಾಂಕ್ಷೆ ಹೊಂದಿರುತ್ತಾರೆ. ಆದರೆ 34 ಮಂದಿಗೆ ಮಾತ್ರ ಅವಕಾಶ ಸಿಕ್ಕಿದೆ. ಪಂಚಾಯಿತಿಗಳಲ್ಲಿ 10 ತಿಂಗಳಿಗೆ ಅಧಿಕಾರ ಬದಲಾಗುತ್ತದೆ, ಸರ್ಕಾರದಲ್ಲಿ ಎರಡೂವರೆ ವರ್ಷದ ಬಳಿಕ ಬದಲಾವಣೆ ಕೇಳುವುದು ತಪ್ಪೇ? ಎಂದು ಪ್ರಶ್ನಿಸಿದರು.
ಸಂಪುಟ ಪುನರ್‌ ರಚನೆಯ ವೇಳೆ 34 ಜನರಲ್ಲಿ ಯಾರನ್ನು ತೆಗೆಯುತ್ತಾರೋ ಗೊತ್ತಿಲ್ಲ. 10 ಜನ ತೆಗೆಯುತ್ತಾರೋ, 33 ಜನರನ್ನು ತೆಗೆಯುತ್ತಾರೋ ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಸದ್ಯಕ್ಕೆ ಇದ್ಯಾವ ವಿಚಾರಗಳು ಇಲ್ಲ ಎಂದರು.

ಸಚಿವರು ಜಿಲ್ಲೆಗಳಲ್ಲಿ ಯಾವ ರೀತಿಯ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿರ್ವಹಿಸುತ್ತಿರುವ ಜವಾಬ್ದಾರಿ ಬಗ್ಗೆ ಚರ್ಚೆ ಮಾಡಲು ಸಚಿವರ ಔತಣ ಕೂಟ ಆಯೋಜಿಸಿದ್ದಾರೆ. ಇದನ್ನು ಬೇರೆ ರೀತಿ ಬಿಂಬಿಸಬಾರದು, ಔತಣಕೂಟದಲ್ಲಿ ನಿರ್ಗಮಿಕ ಸಚಿವರಿಗೆ ಸಮಾಧಾನ ಪಡಿಸಲಾಗುವುದು ಎಂಬುವುದು ಕೇವಲ ವದಂತಿ ಎಂದರು.

ಈ ಮುಂಗಾರಿನಲ್ಲಿ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಕಾವೇರಿ ನದಿ ಪಾತ್ರದಲ್ಲೂ ಕೃಷಿ ಮತ್ತು ತೋಟಗಾರಿಕೆ ಬೆಲೆ ಹಾನಿಯಾಗಿದೆ. ಮಳೆ ನಿಂತ ಮೇಲೆ ನಿರ್ಧಿಷ್ಠ ಪ್ರಮಾಣದ ಅಂದಾಜನ್ನು ಜಂಟಿ ಸರ್ವೇ ಮೂಲಕ ಗುರುತಿಸಿ, ತಕ್ಷಣ ಪರಿಹಾರ ನೀಡಲಾಗುವುದು.
ಈ ಮೊದಲು ಒಣ ಬೇಸಾಯಕ್ಕೆ 8,500, ನೀರಾವರಿಗೆ 22500 ರೂ.ಗಳನ್ನು ಹೆಕ್ಟೇರ್‌ಗೆ ಪರಿಹಾರ ನೀಡಲಾಗುತ್ತಿತ್ತು, ಅದನ್ನು ಹೆಚ್ಚಿಸಲಾಗಿದೆ.

ರೈತರ ಜೊತೆ ಚರ್ಚಿಸಿ ಬೇಡಿಕೆಯಂತೆ ಒಣ ಬೇಸಾಯಕ್ಕೆ 17 ಸಾವಿರ, ನೀರಾವರಿಗೆ 21,500, ಬಹು ಮಾದರಿ ಬೆಲೆಗೆ 31 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ.
ಒಂದು ತಿಂಗಳೊಳಗಾಗಿಯೇ ರೈತರ ಖಾತೆಗೆ ಪರಿಹಾರ ಹಣ ಪಾವತಿಸುವುದಾಗಿ ಹೇಳಿದರು. ಇದರ ಜೊತೆಗೆ ಕೃಷಿ ಬೆಲೆ ವಿಮೆ ಪರಿಹಾರ ಕೂಡ ದೊರೆಯಲಿದೆ ಎಂದು ಹೇಳಿದರು.

ಬಿಎಂಟಿಸಿ ಬಸ್‌‍ ಡಿಕ್ಕಿಯಾಗಿ 4ನೇ ತರಗತಿ ವಿದ್ಯಾರ್ಥಿನಿ ಸಾವು

ಬೆಂಗಳೂರು, ಅ.11– ಯಮರೂಪಿಯಾಗಿ ಬಂದ ಬಿಎಂಟಿಸಿ ಬಸ್‌‍ ಡಿಕ್ಕಿ ಹೊಡೆದು 4ನೆ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮಹಾಲಕ್ಷ್ಮಿ ಬಡಾವಣೆಯ 1ನೆ ಹಂತದ ಸಿಗ್ನಲ್‌ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಬೋವಿಪಾಳ್ಯದ ನಿವಾಸಿ ಭುವನಾ (9) ಮೃತ ದುರ್ದೈವಿ. ಪಾಂಚಜನ್ಯ ಶಾಲೆಯಲ್ಲಿ 4ನೆ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಇಂದು ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಸುಮಾರು 12.20ರ ಸಮಯದಲ್ಲಿ ಒಂದನೆ ಹಂತದ ಸಿಗ್ನಲ್‌ ಬಳಿ ಬಿಎಂಟಿಸಿ ಬಸ್‌‍ ಡಿಕ್ಕಿ ಹೊಡೆದಿದೆ.

ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯರು ಆರೈಕೆ ಮಾಡಿ ನಂತರ ಹತ್ತಿರದ ಪೋರ್ಟಿಸ್‌‍ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ತೀವ್ರವಾಗಿ ಪೆಟ್ಟುಬಿದ್ದ ಹಿನ್ನೆಲೆಯಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ.

ಘಟನೆ ನಂತರ ಬಿಎಂಟಿಸಿ ಚಾಲಕ ವಾಹನ ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳೀಯರು ಈ ಘಟನೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆ ಜತೆಗಿದ್ದ ಕೆಲ ಸಹಪಾಠಿಗಳು ಈ ದೃಶ್ಯ ನೋಡಿ ಕಣ್ಣೀರು ಹಾಕಿದ್ದಾರೆ. ಸುದ್ದಿ ತಿಳಿದ ಮಲ್ಲೇಶ್ವರಂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದ 13ನೇ ಮಹಡಿಯಿಂದ ಬಿದ್ದು ಇಬ್ಬರು ಕಾರ್ಮಿಕರ ಸಾವು

ಬೆಂಗಳೂರು, ಅ.11- ನಿರ್ಮಾಣ ಹಂತದ ವಸತಿ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು 13ನೇ ಮಹಡಿಯಿಂದ ಕೆಳಗೆ ಬಿದ್ದು, ಮೃತಪಟ್ಟಿರುವ ದುರ್ಘಟನೆ ಬೆಳ್ಳಂದೂರು ಪೊಲೀಸ್‌‍ ಠಾಣಾ ವ್ಯಾಪ್ತಿಯ ರಾಮ್‌ದೇವ್‌ ಮೆಡಿಕಲ್ಸ್ ಬಳಿ ನಡೆದಿದೆ. ಪಶ್ಚಿಮ ಬಂಗಾಳದ ಸೊನ್‌ಪುರ್‌ನ ಅಮಿರ್‌ ಹುಸೇನ್‌(33), ಮುಮ್ತಾಜ್‌ ಅಲಿ ಮೋಲಾ(28) ಮೃತ ದುರ್ದೈವಿಗಳು.

ಡಿಎನ್‌ಆರ್‌ ಹರಿಸ್ತಾ ಡೆವಲಪರ್‌ರ‍ಸ ವತಿಯಿಂದ ಇಲ್ಲಿ ವಸತಿ ಸಮುಚ್ಚಯವನ್ನು ನಿರ್ಮಿಸಲಾಗುತ್ತಿತ್ತು. ಇದನ್ನು ಇಂಪಿರಿಯಲ್‌ ಬಿಲ್ಡ್ ಟೆಕ್‌ ಪ್ರವೇಟ್‌ ಲಿಮಿಟೆಡ್‌ ಸಂಸ್ಥೆ ಕಾಮಗಾರಿಯ ಜವಾಬ್ದಾರಿ ವಹಿಸಿಕೊಂಡಿತ್ತು.

ನಿನ್ನೆ ಸಂಜೆ 13ನೇ ಅಂತಸ್ತಿನಲ್ಲಿ ಸುಮಾರು 10 ಮಂದಿ ಕಾರ್ಮಿಕರು ಬಾಲ್ಕಾನಿ ನಿರ್ಮಾಣ ಕಾಮಗಾರಿಯನ್ನು ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅಳವಡಿಸಿದ್ದ ಸೆಂಟ್ರಿಂಗ್‌ ಕುಸಿದು ಮೇಲಿನಿಂದ ಇಬ್ಬರು ಕೆಳಗೆ ಬಿದಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಳ್ಳಂದೂರು ಠಾಣೆ ಪೊಲೀಸರು ಘಟನೆಗೆ ಕುರಿತಂತೆ ನಿರ್ಲಕ್ಷ್ಯ ಸೇರಿದಂತೆ ಹಲವು ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಟ್ಟಡ ನಿರ್ಮಾಣ ಕಾಮಗಾರಿ ಉಸ್ತುವಾರಿ ವತಿಯಿಂದ ಇಂಪಿರಿಯಲ್‌ ಬಿಲ್ಡ್ ಟೆಕ್‌ನ ಸೈಟ್‌ ಎಂಜಿನಿಯರ್‌ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.