ಬೆಂಗಳೂರು,ಅ.10- ಹಲವಾರು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿರುವ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಅಂತಿಮಘಟ್ಟ ತಲುಪಿದ್ದು, ಆಯ್ಕೆ ನಿರೀಕ್ಷೆಯಲ್ಲಿರುವ ಬಿ.ವೈ.ವಿಜಯೇಂದ್ರ ಅವರ ಹೆಸರು ಯಾವುದೇ ಕ್ಷಣದಲ್ಲಾದರೂ ಘೋಷಣೆಯಾಗುವ ಸಾಧ್ಯತೆಗಳಿವೆ.
ರಾಜ್ಯ ಬಿಜೆಪಿ ಘಟಕಕ್ಕೆ ಪೂರ್ಣ ಪ್ರಮಾಣದ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡುವಂತೆ ಪಕ್ಷನಿಷ್ಠರು ಮನವಿ ಮಾಡಿಕೊಂಡಿದ್ದರು. ಆದರೆ ಪಕ್ಷದೊಳಗಿನ ಭಿನ್ನಮತದಿಂದ ಇಂದು, ನಾಳೆ ಎನ್ನುತ್ತಲೇ ಮುಂದೂಡತ್ತಲೇ ಬಂದಿದ್ದರು. ಅಂತಿಮವಾಗಿ ವರಿಷ್ಠರು ಗಟ್ಟಿ ನಿರ್ಧಾರಕ್ಕೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ.
ನೇಮಕ ವಿಳಂಬವಾಗುತ್ತಿರುವುದು ಸ್ಥಳೀಯ ಸಂಸ್ಥೆ ಚುನಾವಣೆಗಳಾದ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ . ಅದಲ್ಲದೇ ನೇಮಕಾತಿ ವಿಳಂಬವೂ ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.
ಬಿಜೆಪಿಯ ದೆಹಲಿ ನಾಯಕರು ಸದ್ಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ಕರ್ನಾಟಕಕ್ಕೆ ಸಂಬಂಧಿಸಿದ ವಿಚಾರಗಳತ್ತ ಜನವರಿವರೆಗೂ ಹೈಕಮಾಂಡ್ ನಾಯಕರು ಗಮನಹರಿಸದಿರುವ ಸೂಚನೆ ರಾಜ್ಯ ನಾಯಕರಿಗೆ ಸಿಕ್ಕಿದ್ದು, ರಾಜ್ಯ ಬಿಜೆಪಿಯ ಉನ್ನತ ಹುದ್ದೆಗಳಿಗೆ ನೇಮಕವಾಗದೇ ಜನರ ಮುಂದೆ ಹೋಗುವುದು ಹೇಗೆ? ಆಡಳಿತ ಪಕ್ಷವನ್ನು ಎದರಿಸುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
ಇದರ ನುಡವೆ ಕೆಲ ತಿಂಗಳ ಹಿಂದೆ ವಿಜಯೇಂದ್ರ ಅವರು ಇತ್ತೀಚೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. ಇದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರು ಅಖೈರುಗೊಂಡಿದ್ದು, ಪ್ರಧಾನಿ ನರೇಂದ್ರಮೋದಿ ಅವರ ಅನುಮೋದನೆಯಷ್ಟೇ ಬಾಕಿಯಿದೆ ಎಂದು ಹೇಳಲಾಗಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಮಾಜಿ ಶಾಸಕ ಸಿ.ಟಿ.ರವಿ ಅವರ ಹೆಸರು ಒಕ್ಕಲಿಗ ಸಮುದಾಯದಿಂದ ಕೇಳಿಬರುತ್ತಿದ್ದು, ಒಬಿಸಿಯಿಂದ ಕಾರ್ಕಳ ಶಾಸಕ ವಿ.ಸುನೀಲ್ಕುಮಾರ್ ಹೆಸರು ಕೇಳಿಬರುತ್ತಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಶಿಕಾರಿಪುರ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರಿಸಲು ಕೈಕಮಾಂಡ್ಗೆ ಒಲುವಿದ್ದರೂ ಪಕ್ಷದಲ್ಲಿನ ಅತೃಪ್ತರ ಅಸಮಾಧಾನ ಮತ್ತು ಬಿಜೆಪಿ ತಟಸ್ಥ ಗುಂಪಿನ ವಿರೋಧ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಬಿಜೆಪಿಯಲ್ಲಿ ವಿಜಯೇಂದ್ರ ಅವರನ್ನು ಪೂರ್ಣ ಪ್ರಮಾಣದ ಅವಧಿಗೆ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ ಮೂರು ಗುಂಪುಗಳಾಗಿವೆ. ವಿಜಯೇಂದ್ರ ನೇಮಕದ ಪರವಾಗಿರುವ ಯಡಿಯೂರಪ್ಪ ಬಣ ಮತ್ತು ಪಕ್ಷವನ್ನು ಬಿಎಸ್ವೈ ಹಿಡಿತದಿಂದ ಹೊರತರಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿ ಅಸಮಾಧಾನಿತರ ಗುಂಪು. ಈ ಗುಂಪಿನಲ್ಲಿ ಪ್ರಮುಖವಾಗಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವರಾದ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದ ಪ್ರತಾಪ ಸಿಂಹ ಮತ್ತು ಇತರ ನಾಯಕರಿದ್ದಾರೆ.
ತಟಸ್ಥ ಗುಂಪಿನಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಸುನೀಲ್ಕುಮಾರ್, ಸಿ.ಟಿ.ರವಿ ಸೇರಿದಂತೆ ಬಹುತೇಕ ಸಂಸದರಿದ್ದಾರೆ.ರಾಜ್ಯ ಬಿಜೆಪಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರನ್ನಾಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡುವುದಕ್ಕೆ ಅಪಸ್ವರವೆತ್ತಿರುವ ಪಕ್ಷದ ತಟಸ್ಥ ಬಣ ಮತ್ತು ಅಸಮಾಧಾನಿತ ಬಣದವರನ್ನು ವಿಶ್ವಾಸಕ್ಕೆ ತಗೆದುಕೊಂಡೇ ಹೊಸ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಬೇಕೆನ್ನುವ ಧೋರಣೆಯನ್ನ ಪಕ್ಷದ ಹೈಕಮಾಂಡ್ ಹೊಂದಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ವಿಜಯೇಂದ್ರ ನೇಮಕವನ್ನು ಪ್ರಬಲವಾಗಿ ವಿರೋಧಿಸಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಬಿಜೆಪಿಯ ಹಿರಿಯ ಮುಖಂಡರಾಗಿದ್ದ ಮಾಜಿ ಕೇಂದ್ರ ಸಚಿವ ಬಸನಗೌಡ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಪ್ರತ್ಯೇಕ ಸಭೆಗಳನ್ನು ನಡೆಸಿ ಮುಜುಗರ ಮಾಡುತ್ತಿದ್ದ ಹಾಗೂ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದ ಅತೃಪ್ತ ಬಣದ ಶಾಸಕ ಬಿ.ಪಿ. ಹರೀಶ್ ಅವರಿಗೆ ಶಿಸ್ತುಕ್ರಮದ ನೋಟಿಸ್ ನೀಡಿ ಬಿಜೆಪಿ ಹೈಕಮಾಂಡ್ ಬಿಸಿ ಮುಟ್ಟಿಸಿತ್ತು. ಹೈಕಮಾಂಡ್ನ ಈ ಹೆಜ್ಜೆಗಳೆಲ್ಲಾ ವಿಜಯೇಂದ್ರ ಆಯ್ಕೆಗೆ ದಾರಿ ಸುಗಮಗೊಳಿಸುವುದಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸಚಿವ ವಿ.ಸೋಮಣ್ಣ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ನೀಡುವುದಾದರೆ ಕೇಂದ್ರ ಸಚಿವ ಸ್ಥಾನ ಬಿಟ್ಟು ಬರಲು ಸಿದ್ಧ ಎಂಬ ಸಂದೇಶವನ್ನೂ ಸಹ ಹೈಕಮಾಂಡ್ಗೆ ರವಾನಿಸಿದ್ದಾರೆ.
ಪಕ್ಷದ ಹಿರಿಯ ಮುಖಂಡರಾದ ಸಿ.ಟಿ. ರವಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಅರವಿಂದ ಲಿಂಬಾವಳಿ, ಮಾಜಿ ಸಚಿವ ಸುನೀಲ್ ಕುಮಾರ್, ಮಾಜಿ ಸಿಎಂ ಬಸವರಾಜ ಬೊಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪಕ್ಷ ಅವಕಾಶ ನೀಡಿದರೆ ರಾಜ್ಯ ಬಿಜೆಪಿ ಅಧ್ಯಕ್ಷ ಗಾದಿಗೇರಲು ಒಲವನ್ನು ಹೊಂದಿದ್ದಾರೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ಈ ಎಲ್ಲಾ ಹೆಸರುಗಳನ್ನು ಪರಿಶೀಲಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿರುವ ಮತ್ತು ಯಡಿಯೂರಪ್ಪನವರ ಆಶೀರ್ವಾದ ಇರುವ ವಿಜಯೇಂದ್ರ ಆಯ್ಕೆಯೇ ಸಮಯೋಚಿತ ಎಂಬ ನಿಲುವವನ್ನು ದೆಹಲಿ ವರಿಷ್ಠರು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಸಂಘಟನೆಯನ್ನು ಪ್ರಬಲವಾಗಿ ಕಟ್ಟಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಾಮರ್ಥ್ಯ ವಿಜಯೇಂದ್ರಗೆ ಇಲ್ಲ. ಬಿವೈವಿ ಹೊರತುಪಡಿಸಿ ಬೇರೆ ಯಾರನ್ನಾದರೂ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಅವಶ್ಯಕತೆ ಇದೆ ಎಂದು ಅತೃಪ್ತ ಬಣ ದೆಹಲಿ ಹೈಕಮಾಂಡ್ಗೆ ಸ್ಪಷ್ಟಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.