Home Blog Page 57

ಸಿಟಿ ಸಿವಿಲ್‌ ಕೋರ್ಟ್‌ ಮಹಡಿಯಿಂದ ಜಿಗಿದು ಆರೋಪಿ ಆತ್ಮಹತ್ಯೆ

ಬೆಂಗಳೂರು,ಅ.9-ಸಿಟಿ ಸಿವಿಲ್‌ ಕೋರ್ಟ್‌ ಕಟ್ಟಡದ 5ನೇ ಮಹಡಿಯಿಂದ ಆರೋಪಿ ಜಿಗಿದು ಆತಹತ್ಯೆ ಮಾಡಿಕೊಂಡಿದ್ದಾನೆ.ಪೋಸ್ಕೋ ಪ್ರಕರಣದ ಆರೋಪಿ ಗೌತಮ್‌ ಆತಹತ್ಯೆಗೆ ಶರಣಾದವನು.

ಆಡುಗೋಡಿ ಪೊಲೀಸ್‌‍ ಠಾಣೆಯಲ್ಲಿ ಗೌತಮ್‌ ವಿರುದ್ಧ ಪೋಸ್ಕೋ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸಿದ್ದ ಪೊಲೀಸರು ಇಂದು ಮಧ್ಯಾಹ್ನ ವಿಚಾರಣೆಗಾಗಿ ಪರಪ್ಪನ ಅಗ್ರಹಾರದಿಂದ ನ್ಯಾಯಾಲಯಕ್ಕೆ ಕರೆತಂದಿದ್ದರು.

ಸಿಟಿ ಸಿವಿಲ್‌ ಕೋರ್ಟ್‌ಗೆ ಪೊಲೀಸರು ಆರೋಪಿ ಗೌತಮ್‌ನನ್ನು ಕರೆತಂದಿದ್ದಾಗ ಪೊಲೀಸರಿಂದ ತಪ್ಪಿಸಿಕೊಂಡು ಏಕಾಏಕಿ ಕೋರ್ಟ್‌ನ 5 ನೇ ಮಹಡಿಯಿಂದ ಜಿಗಿದಿದ್ದರಿಂದ ಗಂಭೀರ ಗಾಯಗೊಂಡನು.

ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ಹಲಸೂರು ಗೇಟ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಬೆಂಗಳೂರಲ್ಲಿ ಸಂಚಾರ ನಿಯಮ ಉಲ್ಲಂಘನೆ ಮೇಲೆ ಸಿಸಿ ಕ್ಯಾಮೆರಾಗಳ ಹದ್ದಿನ ಕಣ್ಣು

ಬೆಂಗಳೂರು, ಅ. 9- ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ಬಿದ್ದೇ ಬೀಳುತ್ತದೆ ಎಂದು ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌‍ ಆಯುಕ್ತರಾದ ಕಾರ್ತಿಕ್‌ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ.

ಱಈ ಸಂಜೆೞ ಜೊತೆ ಮಾತನಾಡಿದ ಅವರು, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ನಗರದಾದ್ಯಂತ ಪ್ರಮುಖ ವೃತ್ತಗಳಲ್ಲಿ 105 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.ಮುಂದಿನ ವರ್ಷದ ಆರಂಭದಲ್ಲಿ ಇನ್ನಷ್ಟು ಈ ರೀತಿಯ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಅವರು ವಿವರಿಸಿದರು.

ಇವುಗಳಲ್ಲದೆ ನಗರದ 500ಕ್ಕೂ ಹೆಚ್ಚು ವೃತ್ತಗಳಲ್ಲಿ ಸಾಮಾನ್ಯ ಸಿಸಿ ಕ್ಯಾಮೆರಾಗಳನ್ನು ಹಾಕಲಾಗಿದೆ.ಈ ಕ್ಯಾಮೆರಾಗಳ ಪ್ರದರ್ಶನವನ್ನು ನಮ ಸಿಬ್ಬಂದಿ ಟಿಎಂಸಿಯಲ್ಲೇ ಕುಳಿತು ವೀಕ್ಷಣೆ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಮಾಡಿ ಅವರುಗಳಿಗೆ ನೋಟಿಸ್‌‍ ನೀಡುತ್ತಾರೆ.

ಈಗ ನಾವು ನಗರದಾದ್ಯಂತ ಅಳವಡಿಸಿರುವ ಎಲ್ಲ ಕ್ಯಾಮೆರಾಗಳು ಸುಸ್ಥಿತಿಯಲ್ಲಿದ್ದು ದಿನದ 24 ಗಂಟೆಗಳ ಕಾಲ ಕಾರ್ಯವಹಿಸುತ್ತಿವೆ. ಒಂದು ವೇಳೆ ಈ ಕ್ಯಾಮೆರಾಗಳು ಕೆಟ್ಟು ಹೋದರೆ ಅಥವಾ ಸ್ಥಗಿತವಾದರೆ ಒಂದೆರಡು ನಿಮಿಷಗಳಲ್ಲೇ ಟಿಎಂಸಿಯಲ್ಲಿರುವ ನಮ ಮಾನಿಟರ್‌ ಸಿಸ್ಟಮ್‌ನಲ್ಲಿ ಗೊತ್ತಾಗುತ್ತದೆ. ಯಾವ ಕ್ಯಾಮೆರಾದಿಂದ ನಮ ಮಾನಿಟರ್‌ ಸಿಸ್ಟಮ್‌ಗೆ ಡೇಟಾ ಬರುತ್ತಿಲ್ಲವೆಂದು ತಕ್ಷಣ ಗೊತ್ತಾಗುತ್ತದೆ. ಆಗ ನಮ ಸಿಬ್ಬಂದಿ ಕ್ಯಾಮೆರಾಗಳ ನಿರ್ವಹಣೆ ಹೊಣೆ ಹೊತ್ತಿರುವ ಖಾಸಗಿ ಸಂಸ್ಥೆಗೆ ತಿಳಿಸುತ್ತಾರೆ.

ವಿಷಯ ತಿಳಿದ ಸಂಸ್ಥೆಯವರು ಅತಿ ಶೀಘ್ರದಲ್ಲೇ ಅವುಗಳನ್ನು ಸರಿಪಡಿಸುತ್ತಾರೆ. ಸ್ಥಗಿತಗೊಂಡಿರುವ ಕ್ಯಾಮೆರಾಗಳನ್ನು 24 ಗಂಟೆ ಒಳಗೆ ಸರಿಪಡಿಸದಿದ್ದರೆ ಆಗ ಸಂಸ್ಥೆಗೆ ಮುಲಾಜಿಲ್ಲದೆ ದಂಡ ಹಾಕುತ್ತೇವೆ ಎಂದು ಜಂಟಿ ಆಯುಕ್ತರು ಹೇಳಿದರು.

ನಗರದ ಬಹುತೇಕ ಪ್ರಮುಖ ಸರ್ಕಲ್‌ ಮತ್ತು ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಹಾಕಿದ್ದೇವೆ. ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್‌‍ ಕಮೀಷನರೇಟ್‌ ವ್ಯಾಪ್ತಿಗೆ ಹೊಸದಾಗಿ 3 ಪೊಲೀಸ್‌‍ ಠಾಣೆಗಳು ಸೇರಿವೆ. ಈ ಠಾಣೆಗಳ ವ್ಯಾಪ್ತಿಯ ಕೆಲವು ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳಿಲ್ಲ. ಮುಂದಿನ ದಿನಗಳಲ್ಲಿ ಆ ಪ್ರದೇಶಗಳಲ್ಲಿ ಹಂತ ಹಂತವಾಗಿ ಅಳವಡಿಸುತ್ತೇವೆ.
ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹಲವಾರು ಕ್ರಮಕೈಗೊಂಡಿದ್ದೇವೆ. ನಾನ್‌ ಪೀಕ್‌ ಅವರ್ಸ್‌ಗಳಲ್ಲಿ ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ನಗರದ ಕೆಲವು ರಸ್ತೆಗಳಲ್ಲಿ ಸಿಂಕ್ರೋನೈಸ್ಟ್‌ ಸಿಗ್ನಲ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರಿಂದ ಅನಗತ್ಯ ನಿಲುಗಡೆ ತಪ್ಪುತ್ತದೆ ಎಂದು ಕಾರ್ತಿಕ್‌ರೆಡ್ಡಿ ತಿಳಿಸಿದರು.

ಮತ್ತೆ ನಗರದ 1194 ರಸ್ತೆಗಳಲ್ಲಿ ನೋ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ತರಲು ಹೊಸ ಯೋಜನೆ ಒಂದನ್ನು ರೂಪಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಓಲಾ, ಊಬರ್‌ ಮುಂತಾದ ಸಂಸ್ಥೆಗಳ ಜೊತೆ ಚರ್ಚೆ ಸಹ ನಡೆಸಿದ್ದೇವೆ.ಪದೇ ಪದೇ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನ ನಿಲ್ಲಿಸುವ ಓಲಾ, ಊಬರ್‌ ಚಾಲಕರ ವಿರುದ್ಧ ಅವರ ಸಂಸ್ಥೆಯವರೇ ಕ್ರಮಕೈಗೊಳ್ಳಲಿದ್ದಾರೆ. ಈ ವಾಹನಗಳಿಗೆ ಜಿಪಿಎಸ್‌‍ ಅಳವಡಿಸುವುದರಿಂದ ಪತ್ತೆ ಹಚ್ಚುವುದು ಸುಲಭ.

ಇವುಗಳಲ್ಲದೆ ಸುಗಮ ಸಂಚಾರಕ್ಕಾಗಿ ಯುರೋಪ್‌ ದೇಶಗಳಿರುವ ಕೆಲವು ವ್ಯವಸ್ಥೆಗಳನ್ನು ನಗರದಲ್ಲಿ ಅಳವಡಿಸಲು ಸಹ ಯೋಚಿಸುತ್ತಿದ್ದೇವೆ. ಬಹಳ ಮುಖ್ಯವಾಗಿ ಕಟ್ಟುನಿಟ್ಟಾಗಿ ಸಂಚಾರ ನಿಯಮಗಳನ್ನು ಪಾಲಿಸಿ ಪ್ರತಿ ವಾಹನ ಸವಾರರು ಅಥವಾ ಚಾಲಕರು ಚಾಲನೆ ಮಾಡಿದರೆ ಮತ್ತು ಪಾದಚಾರಿಗಳೂ ಸಹ ಶಿಸ್ತಿನಿಂದ ನಡೆದುಕೊಂಡರೆ ಮಾತ್ರ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಹುದು ಎಂದು ಹೇಳುತ್ತಾರೆ ಜಂಟಿ ಆಯುಕ್ತರಾದ ಕಾರ್ತಿಕ್‌ರೆಡ್ಡಿ.

ಬಿಗ್‌ಬಾಸ್‌‍ ಏನು ದೊಡ್ಡ ಕಾರ್ಖಾನೆ ಅಲ್ಲ : ಡಿಸಿಎಂ ಡಿಕೆಶಿ

ಬೆಂಗಳೂರು, ಅ.9– ಬಿಗ್‌ಬಾಸ್‌‍ ಏನು ದೊಡ್ಡ ಕಾರ್ಖಾನೆಯಲ್ಲ. ಸಣ್ಣಪುಟ್ಟ ಲೋಪಗಳಿದ್ದರೆ ಸರಿಪಡಿಸಿಕೊಳ್ಳಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳುವ ಮೂಲಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿಯೇ ತಾವು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಅವರಿಗೆ ಕರೆ ಮಾಡಿ, ಒಂದು ಅವಕಾಶ ನೀಡುವಂತೆ ಸೂಚನೆ ನೀಡಿದ್ದೇನೆ. ನಮಲ್ಲಿ ಕೈಗಾರಿಕೆಗಳು ಬೆಳೆಯಬೇಕು. ಸಣ್ಣಪುಟ್ಟ ಲೋಪಗಳಾಗಿದ್ದರೆ, ಅದನ್ನು ಸರಿಪಡಿಸಿಕೊಂಡು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸುವಂತೆ ತಮ ಬಳಿ ಬಂದಿದ್ದ ಸಂಸ್ಥೆಯವರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. ಬಿಗ್‌ಬಾಸ್‌‍ ದೊಡ್ಡ ಕಾರ್ಖಾನೆ ಏನಲ್ಲ, ನಿಯಮ ಉಲ್ಲಂಘನೆಯಾಗಿದ್ದರೆ, ಸರಿಪಡಿಸಿಕೊಳ್ಳುತ್ತಾರೆ ಎಂದಿದ್ದಾರೆ.

ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಪಟ್ಟಂತೆ ತಮಗೆ ಯಾವುದೇ ಮಾಹಿತಿ ಇಲ್ಲ. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ. ಯಾರೂ ಕೂಡ ಅನಗತ್ಯವಾಗಿ ಹೇಳಿಕೆ ನೀಡಿ ಗೊಂದಲ ಮೂಡಿಸಬಾರದು ಎಂದು ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದರು.ತಮ ಬಳಿ ಯಾರೂ ಚರ್ಚೆ ಮಾಡಿಲ್ಲ. ಒಂದು ವೇಳೆ ಹೈಕಮಾಂಡ್‌ ತಮನ್ನು ಕರೆದರೆ, ತಾವು ಸಲಹೆ ನೀಡುವುದಾಗಿ ಹೇಳಿದರು.

ದುಡಿಯುವ ಮಹಿಳೆಯರಿಗೆ ಒಂದು ದಿನ ವೇತನ ಸಹಿತ ಋತುಚಕ್ರದ ರಜೆ

ಬೆಂಗಳೂರು, ಅ.9- ದುಡಿಯುವ ಮಹಿಳೆಯರಿಗೆ ಪ್ರತಿ ತಿಂಗಳು ಋತುಚಕ್ರದ ಸಮಯದಲ್ಲಿ ಒಂದು ದಿನ ವೇತನ ಸಹಿತ ರಜೆ ನೀಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟಸಭೆಯಲ್ಲಿ ಋತುಚಕ್ರ ರಜೆ ನೀತಿ 2025ರ ಕುರಿತು ಗಂಭೀರ ಚರ್ಚೆಗಳಾಗಿದ್ದು, ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು, ಗಾರ್ಮೆಂಟ್‌್ಸ ಗಳು, ಬಹುರಾಷ್ಟ್ರೀಯ ಕಂಪನಿಗಳು, ಮಾಹಿತಿ ತಂತ್ರಜ್ಞಾನ ಇತರೆ ಖಾಸಗಿ ಕೈಗಾರಿಕಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನ ಋತುಚಕ್ರ ಸಮಯದಲ್ಲಿ ವೇತನ ಸಹಿತ ರಜೆ ನೀಡಲು ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಈಗಾಗಲೇ ಬಿಹಾರ ರಾಜ್ಯದಲ್ಲಿ 1992ರಿಂದಲೂ ಸರ್ಕಾರಿ ಸಿಬ್ಬಂದಿಗಳಿಗೆ ರಜೆ ನೀತಿ ಜಾರಿಯಲ್ಲಿದೆ. ಕೇರಳದಲ್ಲಿ 2023ರಿಂದಲೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಡಿಶಾ ಸರ್ಕಾರ, ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಈ ರಜೆ ನೀತಿಯನ್ನು ಜಾರಿಗೆ ತಂದಿದೆ.

ಬಹುತೇಕ ರಾಜ್ಯಗಳಲ್ಲಿ ಈ ನೀತಿ ಏರು ಪೇರುಗಳಾಗಿದ್ದು, ಕೆಲವು ಕಡೆ ಸರ್ಕಾರಿ ಸಿಬ್ಬಂದಿಗಳಿಗೆ ಅನ್ವಯಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಸಾರ್ವತ್ರಿಕವಾಗಿ ಎಲ್ಲಾ ವಲಯದ ಎಲ್ಲಾ ಮಹಿಳೆಯರಿಗೆ ಮುಟ್ಟಿನ ರಜೆ ಸೌಲಭ್ಯವನ್ನು ಒದಗಿಸುವ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಈ ವಿಷಯವಾಗಿ ಶೈಲೇಂದ್ರ ತ್ರಿಪಾಠಿಲ್‌ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ವಿಚಾರಣ ನಡೆಸಿದ ಅಂದಿನ ಮುಖ್ಯಮಂತ್ರಿ ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ಇದು ನೀತಿ ನಿರೂಪಣೆಗೆ ಸಂಬಂಧಪಟ್ಟ ವಿಷಯವಾಗಿದ್ದು, ಸರ್ಕಾರಗಳು ಕ್ರಮಕೈಗೊಳ್ಳಬೇಕೆಂದು ಸಲಹೆ ನೀಡಿದರು. ಅದರಂತೆ ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕದ ಬಗ್ಗೆಯೂ ಸಂಪುಟದಲ್ಲಿ ಚರ್ಚೆಯಾಗಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕ ಮಕ್ಕಳಿಗೆ ಎರಡನೇ ಹಂತದಲ್ಲಿ ಹನ್ನೊಂದು ಶ್ರಮಿಕ ವಸತಿ ಶಾಲೆಗಳನ್ನು ನಿರ್ಮಿಸಲು 405 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತಕ ಅನುಮೋದನೆ ನೀಡುವ ಬಗ್ಗೆ ಚರ್ಚಿಸಲಾಗಿದೆ.

ಪ್ರಧಾನಮಂತ್ರಿ ಸಿಂಚಾಯ್‌ ಯೋಜನೆ 2.0 ಅಡಿ ರಾಜ್ಯದ 14 ತಾಲ್ಲೂಕುಗಳಲ್ಲಿ 15 ಯೋಜನೆಗಳನ್ನು ಜಾರಿಗೊಳಿಸಿ 39413 ಹೆಕ್ಟೇರ್‌ ಪ್ರದೇಶವನ್ನು 90 ಕೋಟಿ ರೂ. ವೆಚ್ಚದಲ್ಲಿ ಜಲಾನಯನ ವ್ಯಾಪ್ತಿಗೊಳಪಡಿಸಲು ಚರ್ಚಿಸಲಾಗಿದೆ.

ಒಳ ಮೀಸಲಾತಿ ಹಿನ್ನೆಲೆಯಲ್ಲಿ ಸರ್ಕಾರಿ ನೇಮಕಾತಿಗಳು ವಿಳಂಬವಾಗಿದ್ದು, ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗಾಗಿ 3 ವರ್ಷ ಸಡಿಲಿಕೆ ಮಾಡುವುದಾಗಿ ಈಗಾಗಲೇ ಪ್ರಕಟಿಸಲಾಗಿದೆ. ಈ ನಿರ್ಣಯಕ್ಕೆ ಇಂದಿನ ಸಂಪುಟಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗುತ್ತಿದೆ.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಸಂದರ್ಭದಲ್ಲಿ ವೈಯಕ್ತಿಕ ದತ್ತಾಂಶಗಳು ಸೋರಿಕೆಯಾಗಲಿವೆ ಎಂಬ ಆತಂಕ ಪ್ರಮುಖವಾಗಿ ಕೇಳಿ ಬಂದಿತು. ನ್ಯಾಯಾಲಯಕ್ಕೂ ಈ ಕುರಿತು ತಕರಾರು ಅರ್ಜಿ ಸಲ್ಲಿಕೆಯಾಗಿದ್ದು, ಹೈಕೋರ್ಟ್‌ ದತ್ತಾಂಶಗಳು ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಲು ಕಟ್ಟುನಿಟ್ಟಿನ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದತ್ತಾಂಶ ಕೇಂದ್ರದಲ್ಲಿನ ಭದ್ರತಾ ಕಾರ್ಯಚಲನೆ ಕೇಂದ್ರವನ್ನು ನವೀಕರಿಸಲು ಮತ್ತು ಸೈಬರ್‌ ಭದ್ರತೆಯನ್ನು ಬಲಪಡಿಸಲು 38.33 ಕೋಟಿ ರೂ.ಗಳ ಯೋಜನೆಗೆ ಆಡಳಿತಾತಕ ಅನುಮೋದನೆ ದೊರೆಯುವ ಸಾಧ್ಯತೆಯಿದೆ.ಬೆಂಗಳೂರು ಉತ್ತರ ತಾಲ್ಲೂಕಿನ ಮಾಚೋಹಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ 78 ಎಕರೆಯನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದ್ದು, ಇದರಲ್ಲಿ ವಿವಿಧ ಸಂಸ್ಥೆಗಳಿಗೆ ಭೂಮಿ ಮಂಜೂರಾತಿ ಮಾಡಲಾಗಿತ್ತು. ಎಲ್ಲಾ ಆದೇಶಗಳನ್ನು ಹಿಂಪಡೆಯಲು ಸರ್ಕಾರ ಮುಂದಾಗಿದೆ.

ಪೊಲೀಸ್‌‍ ಇಲಾಖೆಗೆ ಗಣಕಯಂತ್ರಗಳನ್ನು ಖರೀದಿಸಲು ಹಾಗೂ ತರಬೇತಿಗಾಗಿ ಕೇಂದ್ರ ಗೃಹ ಸಚಿವಾಲಯ 89.22 ಕೋಟಿ ರೂ.ಗಳ ಯೋಜನೆ ರೂಪಿಸಿದ್ದು, ಅದಕ್ಕೆ ರಾಜ್ಯ ಸರ್ಕಾರ ಆಡಳಿತಾತಕ ಅನುಮೋದನೆ ನೀಡುವ ಸಾಧ್ಯತೆಯಿದೆ.

ಪ್ರಮುಖವಾಗಿ ರಾಜ್ಯದಲ್ಲಿ ಹಲವಾರು ಕಡೆ ಸೇತುವೆಗಳ ಪುನರ್‌ ನಿರ್ಮಾಣದ ಅಗತ್ಯ ಇದ್ದು, ಈ ಯೋಜನೆಗೆ 2 ಸಾವಿರ ಕೋಟಿ ರೂ.ಗಳ ಅಗತ್ಯಯಿದ್ದು, ಮೊದಲ ಹಂತದಲ್ಲಿ 39 ಬೃಹತ್‌ ಸೇತುವೆಗಳನ್ನು ಪುನರ್‌ ನಿರ್ಮಿಸಲು 8 ಸಾವಿರ ಕೋಟಿ ರೂ. ಬಳಕೆ ಮಾಡಲಾಗುತ್ತದೆ. ಬೀದರ್‌ ಜಿಲ್ಲೆಯ ಔರಾಧ್‌ ಪಟ್ಟಣ ಪಂಚಾಯತಿಯನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಸಾಧ್ಯತೆಯಿದೆ.

ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು

ಬೆಂಗಳೂರು,ಅ.9– ರಾಜ್ಯ ಸರ್ಕಾರ ನಿಗಧಿತ ಸಮಯದೊಳಗೆ ತಮ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಇದೇ ತಿಂಗಳ 15ರಿಂದ ಐದು ದಿನಗಳ ಕಾಲ ರಾಜ್ಯಾದ್ಯಂತ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.

ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದ್ದು, 2020 ಜನವರಿ 1ರಿಂದ ಆಗಿರುವ ಶೇ.15ರಷ್ಟು ವೇತನ ಹೆಚ್ಚಳದ ನಂತರದ 38 ತಿಂಗಳ ಬಾಕಿ ಹಣ ಪಾವತಿ, 38 ತಿಂಗಳ ಬಾಕಿ ಇರುವ ಸಂಬಳದ ಪಾವತಿ ಮತ್ತು ಶೇ.25ರಷ್ಟು ವೇತನ ಹೆಚ್ಚಳಕ್ಕಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಮಿತಿ ಹೇಳಿದೆ.

ಇದರಿಂದಾಗಿ ದೀಪಾವಳಿ ಸಂದರ್ಭದಲ್ಲಿ ತಮ ತಮ ಊರುಗಳಿಗೆ ಕುಟುಂಬ ಸಮೇತ ತೆರಳುವ ಪ್ರಯಾಣಿಕರು ಸರ್ಕಾರಿ ಬಸ್‌‍ ಗಳನ್ನು ಅವಲಂಬಿಸದೆ, ದುಪ್ಪಟ್ಟು ದರ ನೀಡಿ ಖಾಸಗಿ ಬಸ್‌‍ಗಳಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದೆ. ಒಂದು ವೇಳೆ ಅಷ್ಟರೊಳಗೆ ಸರ್ಕಾರ ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಸಂಧಾನ ಸಫಲವಾದರೆ ಸಮಸ್ಯೆ ಬಗೆಹರಿಯಲಿದೆ. ಇಲ್ಲದಿದ್ದರೆ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ.

ಈ ಹಿಂದೆ ಕೆಎಸ್‌‍ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ, ಎನ್‌ಡಿಬ್ಲ್ಯೂಕೆಆರ್‌ಟಿಸಿ ಸದಸ್ಯರನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಆ ವೇಳೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಬೇಡಿಕೆ ಈಡೇರಿಸುವುದಾಗಿ ಆಶ್ವಾಸನೆ ನೀಡಿದ್ದರು. ಹೀಗೆ ಕೊಟ್ಟ ಭರವಸೆ ಹಲವಾರು ತಿಂಗಳು ಕಳೆದರೂ ಈಡೇರಿಲ್ಲ. ಹಾಗಾಗಿ ಮುಷ್ಕರ ಶತಸಿದ್ಧ. ಮುಷ್ಕರ ಮಾಡಿಸುವುದು ತಪ್ಪಿಸುವುದು ಸಿಎಂ ಕೈಯಲ್ಲಿದೆ ಎಂದು ನೌಕರರ ಸ್ಪಷ್ಟಪಡಿಸಿದ್ದಾರೆ.

ನಗದು ರಹಿತ ಆರೋಗ್ಯ ಚಿಕಿತ್ಸೆ ಯೋಜನೆಯನ್ನು ಏಕಕಾಲದಲ್ಲಿ 4 ನಿಗಮಗಳಲ್ಲಿ ಜಾರಿಗೆ ತರಬೇಕು, ಸಂಸ್ಥೆಯಲ್ಲಿ ವಿದ್ಯುತ್‌ ಚಾಲಿತ ಬಸ್ಸುಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನು ಕೈಬಿಟ್ಟು, ಸಂಸ್ಥೆಯ ನೌಕರರು ಮತ್ತು ಸಿಬ್ಬಂದಿ ನಿರ್ವಹಣೆ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಚಾಲಕ, ತಾಂತ್ರಿಕ ಮತ್ತು ಭದ್ರತಾ ಸಿಬ್ಬಂದಿ ನೇಮಕಾತಿ ಕೈಬಿಡಬೇಕು ಎಂಬುದು ಸಾರಿಗೆ ನೌಕರರ ಆಗ್ರಹವಾಗಿದೆ ಎಂದು ಕಾರ್ಮಿಕ ಮುಖಂಡ ಹೆಚ್‌.ವಿ.ಅನಂತ ಸುಬ್ಬರಾವ್‌ ಹೇಳಿದ್ದಾರೆ.

ಸದ್ಯ ನೌಕರರು ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡುವುದು, ಎಲ್ಲಾ ನೌಕರರಿಗೂ ಪ್ರತೀ ತಿಂಗಳೂ ಹೊರ ರೋಗಿ ಚಿಕಿತ್ಸೆ ವೆಚ್ಚಕ್ಕಾಗಿ ಎರಡು ಸಾವಿರ ರೂಪಾಯಿ ಜೊತೆಗೆ ಉಚಿತ ಔಷಧಿ ನೀಡುವುದು, ಇಎಸ್‌‍ಐ ಮಾದರಿಯಲ್ಲಿ ನೌಕರರ ಮೂಲ ವೇತನದ ಶೇ.4.5 ಹಾಗೂ ನೌಕರರಿಂದ ಶೇ.0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್‌ ರಚಿಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡುವ ಯೋಜನೆ ರೂಪಿಸಬೇಕು. ನಿವೃತ್ತ ನೌಕರರು ಮತ್ತು ಅವರ ಪತಿ/ಪತ್ನಿ ಹಾಗೂ ಮಕ್ಕಳಿಗೂ ಆರೋಗ್ಯ ಯೋಜನೆ ನೀಡಬೇಕು ಎಂಬುದು ಸಾರಿಗೆ ನೌಕರರ ಬೇಡಿಕೆಯಾಗಿದೆ.

ವ್ಯಾಪಾರ, ರಕ್ಷಣೆ, ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳ ಕುರಿತು ಮೋದಿ-ಸ್ಟಾರ್ಮರ್‌ ಮಹತ್ವದ ಮಾತುಕತೆ

ಮುಂಬೈ, ಅ. 9 (ಪಿಟಿಐ)- ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಬ್ರಿಟಿಷ್‌ ಸಹವರ್ತಿ ಕೀರ್‌ ಸ್ಟಾರ್ಮರ್‌ ಅವರೊಂದಿಗೆ ವ್ಯಾಪಾರ, ರಕ್ಷಣೆ ಮತ್ತು ಭದ್ರತೆ ಮತ್ತು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ-ಯುಕೆ ಸಂಬಂಧಗಳನ್ನು ಹೆಚ್ಚಿಸುವತ್ತ ಗಮನಹರಿಸಿ ವಿಸ್ತೃತ ಮಾತುಕತೆ ನಡೆಸಿದರು.

ಬ್ರಿಟಿಷ್‌ ನಾಯಕ, ಯುಕೆಯ 125 ಪ್ರಮುಖ ವ್ಯಾಪಾರ ನಾಯಕರು, ಉದ್ಯಮಿಗಳು ಮತ್ತು ಶಿಕ್ಷಣ ತಜ್ಞರ ನಿಯೋಗದೊಂದಿಗೆ ಎರಡು ದಿನಗಳ ಭೇಟಿಗಾಗಿ ನಿನ್ನೆ ಬೆಳಿಗ್ಗೆ ಮುಂಬೈಗೆ ಬಂದಿಳಿದಿದ್ದರು. ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ, ಸುಂಕಗಳನ್ನು ಕಡಿತಗೊಳಿಸುವ ಮತ್ತು 2030 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ನಿರೀಕ್ಷೆಯಿರುವ ಎರಡೂವರೆ ತಿಂಗಳ ನಂತರ ಸ್ಟಾರ್ಮರ್‌ ಅವರ ಭಾರತ ಭೇಟಿ ನಡೆಯಿತು.

ಜುಲೈನಲ್ಲಿ ಪ್ರಧಾನಿ ಮೋದಿ ಅವರ ಲಂಡನ್‌ ಭೇಟಿಯ ಸಮಯದಲ್ಲಿ ವ್ಯಾಪಾರ ಒಪ್ಪಂದವನ್ನು ದೃಢಪಡಿಸಲಾಯಿತು.ನಿನ್ನೆ ತಮ್ಮ ಹೇಳಿಕೆಯಲ್ಲಿ, ಸ್ಟಾರ್ಮರ್‌ ಅವರು, ಈ ವ್ಯಾಪಾರ ಒಪ್ಪಂದವು ದ್ವಿಮುಖ ಬೆಳವಣಿಗೆಗೆ ಲಾಂಚ್‌ಪ್ಯಾಡ್‌‍ ಆಗಿದ್ದು, ಭಾರತವು 2028 ರ ವೇಳೆಗೆ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗಲಿದೆ ಎಂದು ಹೇಳಿದರು.

ನಾವು ಜುಲೈನಲ್ಲಿ ಭಾರತದೊಂದಿಗೆ ಪ್ರಮುಖ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ – ಯಾವುದೇ ದೇಶಕ್ಕಿಂತ ಉತ್ತಮವಾದದ್ದು – ಆದರೆ ಕಥೆ ಅಲ್ಲಿಗೆ ನಿಲ್ಲುವುದಿಲ್ಲ ಎಂದು ಅವರು ಹೇಳಿದರು.ಇದು ಕೇವಲ ಕಾಗದದ ತುಂಡು ಅಲ್ಲ, ಇದು ಬೆಳವಣಿಗೆಗೆ ಒಂದು ಲಾಂಚ್‌ಪ್ಯಾಡ್‌‍. 2028 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಅವರೊಂದಿಗೆ ವ್ಯಾಪಾರವು ತ್ವರಿತ ಮತ್ತು ಅಗ್ಗವಾಗಲಿದ್ದು, ವಶಪಡಿಸಿಕೊಳ್ಳಲು ಕಾಯುತ್ತಿರುವ ಅವಕಾಶಗಳು ಸಾಟಿಯಿಲ್ಲ ಎಂದು ಅವರು ಹೇಳಿದರು.

ಮಾತುಕತೆಗಳಲ್ಲಿ, ಬ್ರಿಟಿಷ್‌ ನೆಲದಿಂದ ಕೆಲವು ಖಲಿಸ್ತಾನ್‌ ಪರ ಅಂಶಗಳ ಚಟುವಟಿಕೆಗಳ ಬಗ್ಗೆ ಭಾರತದ ಕಡೆಯವರು ತಮ್ಮ ಕಳವಳಗಳನ್ನು ವ್ಯಕ್ತಪಡಿಸುವ ಜೊತೆಗೆ ವಿಜಯ್‌ ಮಲ್ಯ ಮತ್ತು ನೀರವ್‌ ಮೋದಿ ಸೇರಿದಂತೆ ಹಲವಾರು ಶತಕೋಟ್ಯಾಧಿಪತಿ ಪರಾರಿಯಾದವರನ್ನು ಯುಕೆಯಿಂದ ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸುವ ನಿರೀಕ್ಷೆಯಿದೆ.

ಕಫ್ ಸಿರಪ್‌ ರಫ್ತಿನ ಬಗ್ಗೆ ವರದಿ ಕೇಳಿದ ವಿಶ್ವ ಆರೋಗ್ಯ ಸಂಸ್ಥೆ

ನವದೆಹಲಿ, ಅ. 9 (ಪಿಟಿಐ)- ಭಾರತದಲ್ಲಿ ಹಲವಾರು ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾಗಿರುವ ಕೆಮ್ಮಿನ ಸಿರಪ್‌ ಅನ್ನು ಇತರ ದೇಶಗಳಿಗೆ ರಫ್ತು ಮಾಡಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ.

ಇಲ್ಲಿನ ಅಧಿಕಾರಿಗಳಿಂದ ಅಧಿಕೃತ ದೃಢೀಕರಣವನ್ನು ಪಡೆದ ನಂತರ, ಜಾಗತಿಕ ಆರೋಗ್ಯ ಸಂಸ್ಥೆಯು ಕೆಮ್ಮಿನ ಸಿರಪ್‌‍, ಕೋಲ್ಡ್ರಿಫ್‌ ಕುರಿತು ಗ್ಲೋಬಲ್‌ ಮೆಡಿಕಲ್‌ ಪ್ರಾಡಕ್ಟ್‌ ಅಲರ್ಟ್‌ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ. ಮಧ್ಯಪ್ರದೇಶದ ಐದು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದಾರೆ, ಆದರೆ 20 ಮಕ್ಕಳು ಡೈಥಿಲೀನ್‌ ಗ್ಲೈಕಾಲ್‌ ಮತ್ತು ಎಥಿಲೀನ್‌ ಗ್ಲೈಕಾಲ್‌ ಹೊಂದಿರುವ ಕಲುಷಿತ ಕೆಮ್ಮಿನ ಸಿರಪ್‌ ಸೇವನೆಯಿಂದ ಉಂಟಾದ ಮೂತ್ರಪಿಂಡದ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಇದಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಮ್ಮಿನ ಸಿರಪ್‌ ಸೇವಿಸಿದ ನಂತರ ರಾಜಸ್ಥಾನದಲ್ಲಿ ಕನಿಷ್ಠ ಮೂರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.ದೇಶದಲ್ಲಿ ಮಕ್ಕಳ ಸಾವಿಗೆ ಕಾರಣವಾಗುವ ಕೆಮ್ಮಿನ ಸಿರಪ್‌ ಅನ್ನು ದಿನನಿತ್ಯದ ಪ್ರಕ್ರಿಯೆಯ ಭಾಗವಾಗಿ ಇತರ ದೇಶಗಳಿಗೆ ರಫ್ತು ಮಾಡಲಾಗಿದೆಯೇ ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟೀಕರಣವನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್‌ ಸೇವನೆಯಿಂದ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಮೊದಲು ಕಚ್ಚಾ ವಸ್ತುಗಳು ಮತ್ತು ಔಷಧ ಉತ್ಪನ್ನಗಳ ಸಿದ್ಧಪಡಿಸಿದ ಸೂತ್ರೀಕರಣಗಳ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳುವಂತೆ ಡ್ರಗ್ಸ್ ಕಂಟ್ರೋಲರ್‌ ಜನರಲ್‌ ಆಫ್‌ ಇಂಡಿಯಾ ಎಲ್ಲಾ ರಾಜ್ಯ ಮತ್ತು ಔಷಧ ನಿಯಂತ್ರಕರನ್ನು ಒತ್ತಾಯಿಸಿದೆ.

ತಯಾರಣಾ ಸೌಲಭ್ಯಗಳಲ್ಲಿ ಇತ್ತೀಚೆಗೆ ನಡೆಸಿದ ತಪಾಸಣೆ ಮತ್ತು ಪ್ರಮಾಣಿತ ಗುಣಮಟ್ಟದಲ್ಲಿಲ್ಲದ ಎಂದು ಘೋಷಿಸಲಾದ ಔಷಧಿಗಳ ತನಿಖೆಯಲ್ಲಿ, ಹಲವಾರು ತಯಾರಕರು ಬಳಕೆಗೆ ಮೊದಲು ನಿಗದಿತ ಮಾನದಂಡಗಳ ಅನುಸರಣೆಗಾಗಿ ಪ್ರತಿ ಬ್ಯಾಚ್‌ ಸಹಾಯಕ ವಸ್ತುಗಳು ಮತ್ತು ಸಕ್ರಿಯ ಪದಾರ್ಥಗಳನ್ನು ಪರೀಕ್ಷಿಸುತ್ತಿಲ್ಲ ಎಂದು ತಿಳಿಸಿದೆ.ಮಧ್ಯಪ್ರದೇಶದ ಚಿಂದ್ವಾರದಲ್ಲಿ ಇತ್ತೀಚೆಗೆ ಮಕ್ಕಳ ಸಾವುಗಳು ವರದಿಯಾಗಿವೆ, ಇವು ಕಲುಷಿತ ಕೆಮ್ಮಿನ ಸಿರಪ್‌ಗಳಿಗೆ ಸಂಬಂಧಿಸಿವೆ ಮತ್ತು ಈ ಕೆಮ್ಮಿನ ಸಿರಪ್‌ಗಳ ಗುಣಮಟ್ಟಕ್ಕೆ ಸಂಬಂಧಿಸಿದ ಕಳವಳಗಳಿವೆ ಎಂದು ಸಲಹಾ ಸಂಸ್ಥೆ ತಿಳಿಸಿದೆ.

ತಯಾರಿಕಾ ಸೌಲಭ್ಯಗಳಲ್ಲಿ ನಡೆಸಿದ ತಪಾಸಣೆಗಳಲ್ಲಿ ಮತ್ತು ಪ್ರಮಾಣಿತ ಗುಣಮಟ್ಟವನ್ನು ಹೊಂದಿಲ್ಲ ಎಂದು ಘೋಷಿಸಲಾದ ಔಷಧಿಗಳ ತನಿಖೆಗಳಲ್ಲಿ, ತಯಾರಕರು ಸೂತ್ರೀಕರಣಗಳ ತಯಾರಿಕೆಯಲ್ಲಿ ಮತ್ತು ಸಿದ್ಧಪಡಿಸಿದ ಉತ್ಪನ್ನಗಳಲ್ಲಿ ನಿಗದಿತ ಮಾನದಂಡಗಳ ಅನುಸರಣೆಯ ಪರಿಶೀಲನೆಗಾಗಿ ಪ್ರತಿ ಬ್ಯಾಚ್‌ನ ಸಹಾಯಕ ಪದಾರ್ಥಗಳು ನಿಷ್ಕ್ರಿಯ ಮತ್ತು ಸಕ್ರಿಯ ಔಷಧೀಯ ಪದಾರ್ಥಗಳ ಪರೀಕ್ಷೆಯನ್ನು ನಡೆಸುತ್ತಿಲ್ಲ ಎಂದು ವರದಿಗಳಲ್ಲಿ ಕಂಡುಬಂದಿದೆ ಎಂದು ಅಕ್ಟೋಬರ್‌ 7 ರ ದಿನಾಂಕದ ಸಲಹಾ ಸಂಸ್ಥೆ ತಿಳಿಸಿದೆ.

ಸಚಿವರಿಗೆ ಸಿಎಂ ಆಯೋಜಿಸಿದ್ದ ಔತಣಕೂಟವನ್ನು ಸಮರ್ಥಿಸಿಕೊಂಡ ಡಿಸಿಎಂ

ಬೆಂಗಳೂರು, ಅ.9– ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವರಿಗೆ ಆಯೋಜಿಸಿರುವ ಔತಣಕೂಟವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಲವರು ಸಮರ್ಥಿಸಿಕೊಂಡಿದ್ದಾರೆ. ಕಾಂಗ್ರೆಸ್‌‍ ಸರ್ಕಾರಕ್ಕೆ ಎರಡೂವರೆ ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ತಮ ನಿವಾಸದಲ್ಲಿ ಔತಣ ಕೂಟವನ್ನು ಆಯೋಜಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಊಟ ಮಾಡುವುದರಲ್ಲಿ ತಪ್ಪೇನಿದೆ. ಆ ವೇಳೆ ಚರ್ಚೆ ನಡೆಸುವುದು ಅಪರಾಧವೇನಲ್ಲ ಎಂದಿದ್ದಾರೆ.ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಮುಖ್ಯಮಂತ್ರಿಯವರು ಸಾಮಾನ್ಯವಾಗಿ ಸಚಿವರನ್ನು ಪದೇ ಪದೇ ಊಟಕ್ಕೆ ಕರೆಯುತ್ತಾರೆ. ಶಾಸಕರನ್ನೂ ಔತಣ ಕೂಟಕ್ಕೆ ಕೆಲವು ಬಾರಿ ಆಹ್ವಾನಿಸಿರುವ ಉದಾಹರಣೆಗಳಿವೆ. ಸಚಿವರ ಜೊತೆ ಎರಡು ಮೂರು ಬಾರಿ ಔತಣಕೂಟಗಳಾಗಿವೆ ಎಂದರು.ಎಲ್ಲರಿಗೂ ಊಟ ಹಾಕಿಯೇ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದೇನಿಲ್ಲ, ಮುಖ್ಯಮಂತ್ರಿಯವರ ಮೇಲೆ ಎಲ್ಲರಿಗೂ ವಿಶ್ವಾಸ ಇದ್ದೇ ಇದೆ ಎಂದು ಹೇಳಿದ್ದಾರೆ.

ಸಚಿವರಾದ ಶಿವರಾಜ ತಂಗಡಗಿ, ರಾಮಲಿಂಗಾರೆಡ್ಡಿ ಮತ್ತಿತರರು ಡಿನ್ನರ್‌ ಮೀಟಿಂಗ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ. ಸಚಿವ ಚೆಲುವರಾಯಸ್ವಾಮಿ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇತ್ತೀಚೆಗೆ ಸಚಿವರ ನಡುವೆ ಹೊಂದಾಣಿಕೆಯ ಕೊರತೆ ಕಂಡು ಬರುತ್ತಿದೆ. ಲಿಂಗಾಯತ ವೀರಶೈವ ಸಮುದಾಯಕ್ಕೆ ಅಲ್ಪ ಸಂಖ್ಯಾತ ಸ್ಥಾನಮಾನ ನೀಡುವ ಬಗ್ಗೆ ಸಚಿವರ ನಡುವೆಯೇ ವ್ಯತಿರಿಕ್ತ ಹೇಳಿಕೆಗಳು ಕೇಳಿ ಬರುತ್ತಿವೆ. ಸಚಿವರಾದ ಎಂ.ಬಿ.ಪಾಟೀಲ್‌, ಈಶ್ವರ್‌ಖಂಡ್ರೆ ಪರಸ್ಪರ ಜಟಾಪಟಿಗೆ ಇಳಿದಿದ್ದಾರೆ.

ಜೊತೆಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿಯೂ ಸಾಕಷ್ಟು ಆಕ್ಷೀಪಗಳು ಒಳಗೊಳಗೆ ಕುದಿಯುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವರ ನಡುವೆ ಹೊಂದಾಣಿಕೆ ತರುವ ನಿಟ್ಟಿನಲ್ಲಿ ಈ ಔತಣ ಕೂಟ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.

ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ಬಗ್ಗೆಯೂ ಇದೇ ವೇಳೆ ಚರ್ಚೆಯಾಗಲಿವೆ ಎಂದು ತಿಳಿದು ಬಂದಿದೆ. ಬಿಹಾರ ವಿಧಾನಸಭೆ ಚುನಾವಣೆ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ಚರ್ಚೆಗಳಿದ್ದು, ಸಂಪುಟದಿಂದ ನಿರ್ಗಮಿಸುವ ಸಚಿವರ ಮನವೊಲಿಸಲು ಸಭೆ ಮುಖ್ಯಮಂತ್ರಿ ಔತಣ ಕೂಟ ಆಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಕಾರ ಮುಂದಿನ ಎರಡೂವರೆ ವರ್ಷ ಅವಧಿಯಲ್ಲೂ ಯಾವುದೇ ತಕರಾರು ಇಲ್ಲದೆ ಸುಲಲಿತವಾಗಿ ನಡೆಯಲು ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ರಾಜಕೀಯ ವಲಯದಲ್ಲಿಯೂ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ.

ಶೈಕ್ಷಣಿಕ, ಸಾಮಾಜಿಕ, ಸಮೀಕ್ಷೆಗೆ ಸಂಬಂಧ ಪಟ್ಟಂತೆ ಎಲ್ಲಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಸಭೆಯ ಮೂಲಕ ಅಸಮಾಧಾನವನ್ನು ನಿವಾರಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎನ್ನಲಾಗಿದೆ.

ಕುರುಬ ಸಮುದಾಯವನ್ನು STಗೆ ಸೇರಿಸಲು ಶಿಫಾರಸು ಮಾಡಿದ್ದೇ ಸಿದ್ದರಾಮಯ್ಯ : ಬೊಮ್ಮಾಯಿ

ಬೆಂಗಳೂರು,ಅ.9- ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯನವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು. ನಮ ಅವಧಿಯಲ್ಲಿ ಕುಲಶಾಸ್ತ್ರೀಯ ಅಧ್ಯಯನ ವರದಿ ಬಂದಿತ್ತು. ಈಗಿನ ಕಾಂಗ್ರೆಸ್‌‍ ಸರ್ಕಾರ ಅದನ್ನು ಪರಿಶೀಲನೆ ಮಾಡಿ 2023ರ ಜುಲೈ 20 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಪ್ರಸ್ತಾಪ ಹೋಗಿತ್ತು. ಕುಲ ಶಾಸ್ತ್ರೀಯ ಅಧ್ಯಯನ ಮಾಡಿಸುವಂತೆ ವಾಪಸ್‌‍ ಬಂದಿತ್ತು. ಸಮಿಶ್ರ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶ ಮಾಡಿತ್ತು.

ನಮ ಅವಧಿಯಲ್ಲಿ ಕುಲಶಾಸ್ತ್ರಿಯ ಅಧ್ಯಯನ ವರದಿ ಬಂದಿತ್ತು. ಅದನ್ನು ನಮ ಸರ್ಕಾರ ಒಪ್ಪಿತ್ತು. ಚುನಾವಣೆ ಬಂದು ನಮ ಸರ್ಕಾರ ಹೋಯಿತು. ಈಗಿನ ಕಾಂಗ್ರೆಸ್‌‍ ಸರ್ಕಾರ ಅದನ್ನು ಪರಿಶೀಲನೆ ಮಾಡಿ 2023ರ ಜುಲೈ 20 ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಸರ್ಕಾರ ದಾಖಲೆಗಳನ್ನು ತೆಗೆದು ನೋಡಲಿ. ಈಗ ಸಿದ್ದರಾಮಯ್ಯ ಅವರ ಕೈಯಲ್ಲಿ ಇದೆ ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕು. ವಾಲೀಕಿ ಸಮುದಾಯ ಮತ್ತು ಕುರುಬರ ನಡುವೆ ಏನೂ ಸಮಸ್ಯೇ ಆಗುವುದಿಲ್ಲ. ಅಹಿಂದ ನಾಯಕ ಸಿದ್ದರಾಮಯ್ಯ ಅವರೇ ಇದ್ದಾರೆ. ಮೀಸಲಾತಿ ಹೆಚ್ಚಳ ಮಾಡುವುದು ಅಷ್ಟು ಸುಲಭವಿಲ್ಲ ಎಂದರು.

ಬಿಗ್‌ ಬಾಸ್‌‍ ಸಮಸ್ಯೆ ಬಗೆಹರಿಸಲಿ :
ಬಿಗ್‌ ಬಾಸ್‌‍ ವಿಚಾರ ಆ ಸ್ಟುಡಿಯೊ ಮಾಲಿಕರು ಮತ್ತು ಅಧಿಕಾರಿಗಳ ನಡುವೆ ನಡೆಯುವುದು ಯಾವ ಕಾನೂನಿನಡ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದಕ್ಕೂ ಕಾನೂನು ಪ್ರಕಾರ ನಡೆಯುವ ಪದ್ದತಿ ಇದೆ. ಈ ಮಧ್ಯೆ ಅದಕ್ಕೆ ಡಿಸಿಎಂ ಅವರು ಹಿಂದೆ ಆಡಿದ ಮಾತು ಸೇರಿಸಿ ಕೆಲವರು ಹೇಳುತ್ತಿದ್ದಾರೆ. ಅದು ಮುಖ್ಯವಲ್ಲ. ಎಲ್ಲೊ ದಾರಿ ತಪ್ಪುತ್ತಿದೆ ಎನಿಸುತ್ತಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರ ವ್ಯಾಪ್ತಿ ಏನು ಬಂದ್‌ ಮಾಡುವ ಅಧಿಕಾರ ಇದೆಯಾ ಇಲ್ಲವಾ ನೋಡಬೇಕು. ಒಂದು ಕಡೆ ಮನರಂಜನಾ ಉದ್ಯಮ ನಡೆಯಬೇಕು ಇನ್ನೊಂದೆಡೆ ಮಾಲಿನ್ಯವಾಗದಂತೆ ನೊಡಿಕೊಳ್ಳಬೇಕಿದೆ. ಎಷ್ಟು ದಿನದಿಂದ ಈ ಸಮಸ್ಯೆ ಇದೆ. ಈಗ್ಯಾಕೆ ಈ ಕ್ರಮ ಕೈಗೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡುತ್ತದೆ. ಇಕೊ ಎಕನಾಮಿಕ್‌್ಸ ಅಂತಾರೆ, ಆರ್ಥಿಕತೆಯೂ ನಡೆಯಬೇಕು, ಪರಿಸರವೂ ಉಳಿಯಬೇಕು. ಅದು ಈ ರಾಜ್ಯದಲ್ಲಿ ತಪ್ಪಿ ಹೋಗಿದೆ. ರಾಜ್ಯದಲ್ಲಿ ಎಲ್ಲವೂ ದಾರಿ ತಪ್ಪಿದೆ. ನಡೆದದ್ದೇ ದಾರಿ ಎನ್ನುವಂತಾಗಿದೆ. ಹಾಗೆ ಆದಾಗಲೇ ಈ ರೀತಿಯ ಘಟನೆಗಳು ನಡೆಯುತ್ತವೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಬಿಗ್‌ ಬಾಸ್‌‍ ಕಾರ್ಯಕ್ರಮಕ್ಕೆ ಅನುಮತಿ ಕೊಡೆಸಿ ಇದರಲ್ಲಿ ತಮ ಪಾತ್ರ ಇಲ್ಲ ಎನ್ನುವುದನ್ನು ಸಾಬೀತು ಪಡಿಸುವ ಪ್ರಯತ್ನ ಮಾಡಿದ್ದರೆ ಎಂದು ಹೇಳಿದರು.

ಕಾಂಗ್ರೆಸ್‌‍ ಹೈಕಮಾಂಡ್‌ಗೆ ಸ್ಪಷ್ಟತೆಯಿಲ್ಲ
ರಾಜ್ಯ ಕಾಂಗ್ರೆಸ್‌‍ ನಲ್ಲಿ ನವೆಂಬರ್‌ ಕ್ರಾಂತಿಯಾಗುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನವೆಂಬರ್‌ ನಲ್ಲಿ ಏನಾಗುತ್ತೊ ಬಿಡುತ್ತದೊ ಅದು ಕಾಂಗ್ರೆಸ್‌‍ ಆಂತರಿಕ ವಿಚಾರ. ಆದರೆ, ಒಂದು ವಿಚಾರ ಸ್ಪಷ್ಟ ಆಡಳಿತ ಮಾಡುವುದನ್ನು ಬಿಟ್ಟು ಸಿಎಂ ನಾನು ಮುಂದುವರೆಯುತ್ತೇನೆ ಎನ್ನುವುದು ಕೆಲವರು ಅವರು ಮುಂದುವರೆಯುವುದಿಲ್ಲ ಎನ್ನುವುದು. ಕಾಂಗ್ರೆಸ್‌‍ ಶಾಸಕರು ಮತ್ತು ಮಂತ್ರಿಗಳ ನಡುವೆ ಸಾಕಷ್ಡು ಗೊಂದಲ ಇದೆ. ಅಶಿಸ್ತು ತೋರಿದರೆ ಕ್ರಮ ಕೈಗೊಳ್ಳುತ್ತೆನೆ ಎಂದರೂ ಶಾಸಕರು ಸುಮನಿಲ್ಲ. ಹೈಕಮಾಂಡ್‌ ನವರಿಗೂ ಇದರ ಸ್ಪಷ್ಟತೆ ಇಲ್ಲಾ. ಸಿಎಂ ಸಿದ್ದರಾಮಯ್ಯ ಅವರ ಹಿನ್ನೆಲೆ ಮತ್ತು ಇಮೇಜ್‌ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಡಿಸಿಎಂ ಶಿವಕುಮಾರ್‌ ಪಕ್ಷ ಕಟ್ಟಿದ್ದಾರೆ ಅವರ ಬಗ್ಗೆಯೂ ಯೋಚನೆ ಮಾಡಿ ಯಾವುದೇ ನಿರ್ಧಾರಕ್ಕೆ ಬರಲು ಆಗುತ್ತಿಲ್ಲ. ಕ್ರಾಂತಿ ನವೆಂಬರ್‌ ನಲ್ಲಿ ಆಗುತ್ತದೊ ಡಿಸೆಂಬರ್‌ ನಲ್ಲಿ ಆಗುತ್ತದೊ ಕಾದುನೋಡಬೇಕು ಎಂದು ಹೇಳಿದರು.

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತಾರತಮ್ಯವಾಗುತ್ತಿದೆ ಎಂದು ಕಾಂಗ್ರೆಸ್‌‍ ನಾಯಕರು ಮಾಡುತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಸರ್ಕಾರ 15 ನೇ ಹಣಕಾಸು ಅಡಿಯಲ್ಲಿ ಹಾಗೂ ಇತರ ಯೋಜನೆಗಳಿಗೆ ಐದು ಪಟ್ಟು ಹಣ ಹೆಚ್ಚಿಗೆ ನೀಡಿದೆ. 15 ನೇ ಹಣಕಾಸು ಯೋಜನೆಯಲ್ಲಿ 14 ನೇ ಹಣಕಾಸು ಆಯೋಗಕ್ಕಿಂತ ಒಂದು ಲಕ್ಷ ಕೊಟಿ ಹೆಚ್ಚಿಗೆ ಕೊಟ್ಟಿದೆ. ಯುಪಿಎ ಅವಧಿಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಐದು ವರ್ಷದಲ್ಲಿ ಒಟ್ಟು 7 ಸಾವಿರ ಕೋಟಿ ರೂ. ಬಂದಿತ್ತು. ಈಗ ಪ್ರತಿ ವರ್ಷ ಏಳು ಸಾವಿರ ಕೊಟಿ ಬರುತ್ತಿದೆ. 6 ಸಾವಿರ ಕಿ.ಮೀ. ಹೈವೆ ಆಗುತ್ತಿದೆ. ರಾಜ್ಯದಲ್ಲಿ ಕೇಂದ್ರದ ಅನುದಾನದಿಂದಲೇ ಯೋಜನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಹೇಳಿದರು. ಸೌಜನ್ಯ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಅವಳಿಗೆ ನ್ಯಾಯ ಸಿಗಬೇಕು ಅಷ್ಟೆ ಎಂದು ಹೇಳಿದರು.

ಸಮೀಕ್ಷೆಗೆ ಮಹತ್ವ ಇಲ್ಲ:
ಸಾಮಾಜಿಕ ಆರ್ಥಿಕ ಸಮೀಕ್ಷೆಯಿಂದ ಮಕ್ಕಳು ಮತ್ತು ಶಿಕ್ಷಕರಿಗೆ ದೊಡ್ಡ ಅನ್ಯಾಯವಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಸರಿಯಾಗಿ ಸಮೀಕ್ಷೆ ನಡೆಯುತ್ತಿಲ್ಲ. ಬಹಳಷ್ಟು ಜನ ಮನೆಯಲ್ಲಿ ಇರುವುದಿಲ್ಲ. ಸಹಕಾರ ನೀಡುತ್ತಿಲ್ಲ ಹೀಗಾಗಿ ಈ ಸಮೀಕ್ಷೆಗೆ ಯಾವುದೇ ಮಹತ್ವ ಉಳಿದಿಲ್ಲ ಎಂದರು.

ಎರಡು ಪಟ್ಟು ಪರಿಹಾರ ಕೊಡಲಿ
ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾದ ಪ್ರವಾಹಕ್ಕೆ ಸರಿಯಾದ ಪರಿಹಾರ ನೀಡದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಯಡಿಯೂರಪ್ಪ ಅವರ ಕಾಲದಲ್ಲಿ ಪ್ರವಾಹ ಆದಾಗ 63 ಹೊಸ ಗ್ರಾಮಗಳನ್ನೆ ಕಟ್ಟಿಸಿದರು. ಎರಡನೇ ಸಾರಿ ಪ್ರವಾಹ ಆದಾಗ ಸುಮಾರು ಮೂರು ಲಕ್ಷ ಮನೆಗಳನ್ನು ಐದು ಲಕ್ಷ ಪರಿಹಾರ ನೀಡಿದ್ದೇವೆ. ನಾನು ಸಿಎಂ ಆಗಿದ್ದಾಗ ಕೇಂದ್ರ ಸರ್ಕಾರ ನೀಡುವ ಎರಡು ಪಟ್ಟು ಪರಿಹಾರ ನೀಡಿದ್ದೇವು. ಒಣ ಬೇಸಾಯಕ್ಕೆ 13 ಸಾವಿರ, ನೀರಾವರಿಗೆ 18 ಸಾವಿರ, ತೋಟಗಾರಿಗೆ ಬೆಳೆಗಳಿಗೆ 25 ಸಾವಿರ ರೂ. ಪ್ರತಿ ಎಕರೆಗೆ ಪರಿಹಾರ ನೀಡಿದ್ದೇವು. ಸುಮಾರು ಏಳು ಲಕ್ಷ ರೈತರಿಗೆ ಪರಿಹಾರ ನೀಡಿದ್ದೇವೆ. ರಾಜ್ಯ ಸರ್ಕಾರ ಕೂಡಲೇ ರೈತರಿಗೆ ಎರಡು ಪಟ್ಟು ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ರಾಹುಲ್‌ ಗಾಂಧಿಯಂತೆ ಸಮೀಕ್ಷೆಯೂ ಗೊಂದಲಮಯ : ಆರ್‌.ಅಶೋಕ್‌ ವ್ಯಂಗ್ಯ

ಬೆಂಗಳೂರು,ಅ.9- ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆಯೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರಂತೆಯೇ ಅಸ್ತವ್ಯಸ್ತವಾಗಿದ್ದು, ಗೊಂದಲಮಯವಾಗಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಇದು ಸಮೀಕ್ಷೆಯಲ್ಲ. ಇದು ದೋಷಗಳ ಸಮೀಕ್ಷೆ, ಅಧಿಕಾರಕ್ಕೆ ಅಂಟಿಕೊಳ್ಳಲು ಸಿಎಂ ಸಿದ್ದರಾಮಯ್ಯನವರ ಚೇಷ್ಟೆಗಳಿಗೆ ಕರ್ನಾಟಕದ ಮಕ್ಕಳು ಬೆಲೆ ತೆರುತ್ತಿದ್ದಾರೆ ಎಂದು ವಾಗ್ದಳಿ ನಡೆಸಿದ್ದಾರೆ.

ಕರ್ನಾಟಕದ ಜಾತಿ ಸಮೀಕ್ಷೆಗೆ ತಯಾರಿ ಇಲ್ಲ. ಯೋಜನೆ ಇಲ್ಲ. ಸ್ಪಷ್ಟ ಉದ್ದೇಶವಿಲ್ಲ. ರಾಹುಲ್‌ಗಾಂಧಿಯಂತೆಯೇ ಆಗಿದೆ. ಈಗ ಕಾಂಗ್ರೆಸ್‌‍ ಸರ್ಕಾರವು ದಸರಾ ರಜೆಯನ್ನು ವಿಸ್ತರಿಸಿದೆ. ಶಿಕ್ಷಕರು ಈ ಅವ್ಯವಸ್ಥೆಯಿಂದ ರೋಸಿ ಹೋಗಿದ್ದಾರೆ.

ಗಣತಿದಾರರಿಗೆ ಏನು ಕೇಳಬೇಕೆಂದು ತಿಳಿದಿಲ್ಲ, ಶಿಕ್ಷಕರನ್ನು ತರಗತಿಯಿಂದ ದೂರ ಇಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಕತ್ತಲೆಯಲ್ಲಿ ಬಿಡಲಾಗಿದೆ.ಇವೆಲ್ಲವೂ ಕಾಂಗ್ರೆಸ್‌‍ನ ವಿಭಜಿತ ಮತ-ಬ್ಯಾಂಕ್‌ ರಾಜಕೀಯಕ್ಕೆ ಮಾತ್ರ ಕಾರ್ಯನಿರ್ವಹಿಸುವ ರಾಜಕೀಯ ಪ್ರೇರಿತ ಕಸರತ್ತು ಎಂದು ಅಶೋಕ್‌ ಟೀಕಾ ಪ್ರಹಾರ ನಡೆಸಿದ್ದಾರೆ.