Home Blog Page 59

ಗಾಜಾ ಕುರಿತ ಟ್ರಂಪ್‌ ಶಾಂತಿ ಯೋಜನೆ ಸ್ವಾಗತಿಸಿದ ಪ್ರಧಾನಿ ಮೋದಿ

ನವದೆಹಲಿ, ಅ. 9 (ಪಿಟಿಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪಶ್ಚಿಮ ಏಷ್ಯಾದ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.

ಈ ಯೋಜನೆ ಅಡಿಯಲ್ಲಿ ಇಸ್ರೇಲ್‌ ಮತ್ತು ಹಮಾಸ್‌‍ ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲು ನಿರ್ಧರಿಸಿವೆ.ಈ ಒಪ್ಪಂದವು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬವಾಗಿದೆ ಎಂದು ಮೋದಿ ಹೇಳಿದರು.

ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಶಾಂತಿ ಯೋಜನೆಯ ಮೊದಲ ಹಂತದ ಒಪ್ಪಂದವನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ರಧಾನಿ ನೆತನ್ಯಾಹು ಅವರ ಬಲವಾದ ನಾಯಕತ್ವದ ಪ್ರತಿಬಿಂಬವೂ ಆಗಿದೆ ಎಂದು ಮೋದಿ ಎಕ್ಸ್ ಮಾಡಿದ್ದಾರೆ.

ಒತ್ತೆಯಾಳುಗಳ ಬಿಡುಗಡೆ ಮತ್ತು ಗಾಜಾದ ಜನರಿಗೆ ವರ್ಧಿತ ಮಾನವೀಯ ನೆರವು ಅವರಿಗೆ ವಿಶ್ರಾಂತಿ ತರುತ್ತದೆ ಮತ್ತು ಶಾಶ್ವತ ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.

ಟ್ರಂಪ್‌ ಆಡಳಿತವು ಮಂಡಿಸಿದ ಒಪ್ಪಂದದಲ್ಲಿ ಇಸ್ರೇಲ್‌ ಮತ್ತು ಹಮಾಸ್‌‍ ಗಾಜಾದಲ್ಲಿ ಹೋರಾಟವನ್ನು ನಿಲ್ಲಿಸಲು ಮತ್ತು ಕನಿಷ್ಠ ಕೆಲವು ಒತ್ತೆಯಾಳುಗಳು ಮತ್ತು ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿವೆ.ಈ ಒಪ್ಪಂದವು ಎರಡು ವರ್ಷಗಳಷ್ಟು ಹಳೆಯದಾದ ವಿನಾಶಕಾರಿ ಯುದ್ಧದಲ್ಲಿ ತಿಂಗಳುಗಳಲ್ಲಿ ಅತಿದೊಡ್ಡ ಪ್ರಗತಿಯನ್ನು ಸೂಚಿಸುತ್ತದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-10-2025)

ನಿತ್ಯ ನೀತಿ : ದೇಹ ದುಡಿದರೆ ಕಾರ್ಮಿಕ, ಬುದ್ಧಿ ದುಡಿದರೆ ಮಾಲೀಕ,

ಪಂಚಾಂಗ : ಗುರುವಾರ, 09-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಕೃಷ್ಣ / ತಿಥಿ: ತೃತೀಯಾ / ನಕ್ಷತ್ರ: ಭರಣಿ / ಯೋಗ: ವಜ್ರ / ಕರಣ: ವಣಿಜ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.04
ರಾಹುಕಾಲ – 01.30-3.00
ಯಮಗಂಡ ಕಾಲ – 9.00-10.30
ಗುಳಿಕ ಕಾಲ -6.00-7.30

ರಾಶಿಭವಿಷ್ಯ :
ಮೇಷ
: ಕುಟುಂಬದವರೊಂದಿಗೆ ಮಾತನಾಡು ವಾಗ ಬುದ್ಧಿವಂತಿಕೆಯಿಂದ ಪದ ಬಳಸಬೇಕು.
ವೃಷಭ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಮಿಥುನ: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.

ಕಟಕ: ಅತಿಥಿಗಳ ಆಗಮನ ದಿಂದಾಗಿ ಖರ್ಚು- ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ.
ಸಿಂಹ: ಕುಟುಂಬ ಸದಸ್ಯರೊಂದಿಗೆ ಹೊಂದಿಕೊಂಡು ಹೋಗಲು ಪ್ರಯತ್ನಿಸಿ.
ಕನ್ಯಾ: ಹಣ ಕಳೆದುಕೊಳ್ಳುವ ಸಂಭವವಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.

ತುಲಾ: ಕೆಲವರಿಗೆ ಪ್ರೇಮ ಸಂಬಂಧದಲ್ಲಿ ತೊಂದರೆಗಳು ಎದುರಾಗಬಹುದು.
ವೃಶ್ಚಿಕ: ದೈನಂದಿನ ಜೀವನ ದಲ್ಲಿ ಉತ್ಸಾಹ ಹೆಚ್ಚಾಗಲಿದೆ.
ಧನುಸ್ಸು: ಹಳೆ ಮಿತ್ರರನ್ನು ಭೇಟಿ ಮಾಡುವಿರಿ.

ಮಕರ: ಪ್ರೀತಿಪಾತ್ರರೊಂದಿಗೆ ಯಾವುದೇ ವಿವಾದದಲ್ಲಿ ಭಾಗಿಯಾಗದಿರುವುದು ಒಳಿತು.
ಕುಂಭ: ಆಸ್ತಿ, ಅಪಾರ್ಟ್‌ಮೆಂಟ್‌ ಖರೀದಿಯಲ್ಲಿ ಅ ಕ ಹಣ ಹೂಡಿಕೆ ಮಾಡುವಿರಿ.
ಮೀನ: ಹಣದ ವಿಷಯದಲ್ಲಿ ಸ್ವಲ್ಪ ಜಾಗರೂಕರಾ ಗಿರಿ. ಪೋಷಕರ ಆರೋಗ್ಯದ ಬಗ್ಗೆ ಗಮನ ಹರಿಸಿ.

ಭಾರತದ ಮೊದಲ ಹೆವಿ-ಡ್ಯೂಟಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೆಚ್ಡಿಕೆ ಮತ್ತು ಗಡ್ಕರಿ

ಸೋನಿಪತ್ (ಹರಿಯಾಣ), ಅ.8, 2025: ಭಾರತದ ಸ್ವಚ್ಛ ಚಲನಶೀಲತೆಯ ಪರಿವರ್ತನೆಗೆ ಒಂದು ಮೈಲಿಗಲ್ಲಾಗಿ, ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಶನಿವಾರದಂದು ಹರಿಯಾಣದ ಸೋನಿಪತ್‌ನಲ್ಲಿರುವ ಅಂತಾರಾಷ್ಟ್ರೀಯ ಸರಕು ಟರ್ಮಿನಲ್ (ಡಿಐಸಿಟಿ) ನಲ್ಲಿ ದೇಶದ ಮೊದಲ ಸರಕು ಸಾಗಣೆ ವಾಹನಗಳ ಹೆವಿ-ಡ್ಯೂಟಿ ಬ್ಯಾಟರಿ ವಿನಿಮಯ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು.

ಇದು ವಿನಿಮಯ ಮಾಡಬಹುದಾದ ಬ್ಯಾಟರಿ ವಿದ್ಯುತ್ ಹೆವಿ-ಡ್ಯೂಟಿ ಟ್ರಾಕ್ಟರ್-ಟ್ರೇಲರ್‌ಗಳು ಮತ್ತು ವಾಣಿಜ್ಯ ವಾಹನಗಳಿಗಾಗಿ ಬಹುಕ್ರಿಯಾತ್ಮಕ ಸ್ವಾಪ್-ಕಮ್-ಚಾರ್ಜಿಂಗ್ ಸ್ಟೇಷನ್ ಆಗಿದ್ದು, ಇಬ್ಬರೂ ಹಿರಿಯ ಸಚಿವರು ಚಾಲನೆ ನೀಡಿದರು.

ಎನರ್ಜಿ ಇನ್ ಮೋಷನ್ ಪ್ರೈವೇಟ್ ಲಿಮಿಟೆಡ್‌ನಿಂದ ಸ್ಥಾಪಿಸಲ್ಪಟ್ಟಿರುವ ಈ ಸೌಲಭ್ಯವು, ಎರಡು ಗಂಟೆಗಳಿಗಿಂತ ಹೆಚ್ಚಿನ ಸಾಂಪ್ರದಾಯಿಕ ಚಾರ್ಜಿಂಗ್ ಸಮಯಕ್ಕೆ ಹೋಲಿಸಿದರೆ ಏಳು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಭಾರೀ ಟ್ರಕ್ ಬ್ಯಾಟರಿಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ ಮತ್ತು ಭಾರತದ CCS-2 ಮಾನದಂಡಕ್ಕೆ ಹೊಂದಿಕೆಯಾಗುವ ಹೆವಿ-ಡ್ಯೂಟಿ DC ಚಾರ್ಜರ್‌ಗಳನ್ನು ಸಹ ಹೊಂದಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಕುಮಾರಸ್ವಾಮಿ ಅವರು; “ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ 2047ರ ವೇಳೆಗೆ ಇಂಧನ ಸ್ವಾತಂತ್ರ್ಯ ಮತ್ತು 2070ರ ವೇಳೆಗೆ ಇಂಗಾಲದ ಹೊರಸೂಸುವಿಕೆಯ ನಿವ್ವಳ ಶೂನ್ಯದತ್ತ ಭಾರತದ ನಡೆಸುತ್ತಿರುವ ಪ್ರಯಾಣದಲ್ಲಿ ಈ ಅಭಿವೃದ್ಧಿಯು ಹೆಮ್ಮೆಯ ಮೈಲಿಗಲ್ಲು” ಎಂದು ಬಣ್ಣಿಸಿದರು.

ಭಾರೀ ವಾಣಿಜ್ಯ ವಾಹನಗಳನ್ನು ಇಂಗಾಲ ಮುಕ್ತಗೊಳಿಸುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು. ಇವು ವಾಹನ ಜನಸಂಖ್ಯೆಯ 5%ಕ್ಕಿಂತ ಕಡಿಮೆ ಇದ್ದರೂ, ಸಾರಿಗೆ ಸಂಬಂಧಿತ ಹೊರಸೂಸುವಿಕೆಯಲ್ಲಿ ಸುಮಾರು ಅರ್ಧದಷ್ಟು ಪಾಲು ಹೊಂದಿವೆ. “ನಮ್ಮ ಸಾಗಾಣೆ ಕ್ಷೇತ್ರದ ಈ ಬೆನ್ನೆಲುಬನ್ನು ಬಲಿಷ್ಠವಾಗಿ ಪರಿವರ್ತಿಸುವುದು ಪರಿಸರ ಸುಸ್ಥಿರತೆ ಮತ್ತು ಆರ್ಥಿಕ ಸ್ಪರ್ಧಾತ್ಮಕತೆಗೆ ಅತ್ಯಗತ್ಯ” ಎಂದು ಅವರು ಪ್ರತಿಪಾದಿಸಿದರು.

ಸರ್ಕಾರದ ಪೂರ್ವಭಾವಿ ಕ್ರಮಗಳನ್ನು, ಅದರಲ್ಲೂ ವಿಶೇಷವಾಗಿ ಮಧ್ಯಮ ಮತ್ತು ಹೆವಿಡ್ಯೂಟಿ ಎಲೆಕ್ಟ್ರಿಕ್ ಟ್ರಕ್‌ಗಳನ್ನು ಮೊದಲ ಬಾರಿಗೆ ರಾಷ್ಟ್ರೀಯ ಪ್ರೋತ್ಸಾಹಕ ಚೌಕಟ್ಟಿನ ಅಡಿಯಲ್ಲಿ ತರುವ PM e-DRIVE ಯೋಜನೆಯ ಬಗ್ಗೆ ಇದೇ ಸಂದರ್ಭದಲ್ಲಿ ಸಚಿವರು ಒತ್ತಿ ಹೇಳಿದರು. ಇ-ಟ್ರಕ್‌ಗಳಿಗೆ ₹500 ಕೋಟಿ ಮತ್ತು ಮೂಲಸೌಕರ್ಯವನ್ನು ಚಾರ್ಜ್ ಮಾಡಲು ಮತ್ತು ವಿನಿಮಯ ಮಾಡಲು ₹2,000 ಕೋಟಿ ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ಬ್ಯಾಟರಿ ವಿನಿಮಯವು ಮುಂಗಡ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ತಂತ್ರಜ್ಞಾನದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ವಾಹನಗಳ ಸ್ಥಗಿತದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತದ 90% ಸಣ್ಣ ಫ್ಲೀಟ್ ಆಪರೇಟರ್ ಬೇಸ್‌ಗೆ ಹಣಕಾಸು ಕಾರ್ಯಸಾಧ್ಯತೆಯ ಪ್ರಯೋಜನಗಳನ್ನು ಹೇಗೆ ಸಕ್ರಿಯಗೊಳಿಸುತ್ತದೆ ಎಂಬುದನ್ನು ಕುಮಾರಸ್ವಾಮಿ ಅವರು ವಿಸ್ತಾರವಾಗಿ ವಿವರಿಸಿದರು.

“ಈ ಉಪಕ್ರಮವು ಕೇವಲ ತಂತ್ರಜ್ಞಾನದ ಬಗ್ಗೆ ಅಲ್ಲ, ಜಾಗತಿಕ ಸ್ವಚ್ಛ ಸಾರಿಗೆ ಆಂದೋಲನವನ್ನು ಮುನ್ನಡೆಸುವ ಭಾರತದ ಸಂಕಲ್ಪದ ಬಗ್ಗೆ ಇದು ನೀತಿ, ನಾವೀನ್ಯತೆ ಮತ್ತು ಉದ್ಯಮ ಸಹಯೋಗದ ಶಕ್ತಿಯನ್ನು ಒಟ್ಟಿಗೆ ಪ್ರದರ್ಶಿಸುತ್ತದೆ” ಎಂದು ಸಚಿವರು ಹೇಳಿದರು.

ಈ ಕಾರ್ಯಕ್ರಮವು ಸುಧಾರಿತ ವಿನಿಮಯ ಮಾಡಬಹುದಾದ ಬ್ಯಾಟರಿ-ಸಜ್ಜಿತ EIM ಟ್ರಾಕ್ಟರ್-ಟ್ರೇಲರ್‌ಗಳ ಫ್ಲ್ಯಾಗ್-ಆಫ್ ಮತ್ತು ಸಾಗಣೆದಾರರೊಂದಿಗೆ ಮೊದಲ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಒಪ್ಪಂದಗಳಿಗೆ ಸಹಿ ಹಾಕಿತು. ಮುಖ್ಯ ಅತಿಥಿಯಾಗಿ ಹಾಜರಿದ್ದ ನಿತಿನ್ ಗಡ್ಕರಿ ಅವರು, ಸಾಗಣೆ ವೆಚ್ಚಗಳನ್ನು ಕಡಿಮೆ ಮಾಡುವ, ದಕ್ಷತೆಯನ್ನು ಹೆಚ್ಚಿಸುವ ಮತ್ತು ಹಸಿರು ಸರಕು ವಲಯವನ್ನು ಬಲಪಡಿಸಿಕೊಳ್ಳುವ ಕಡೆಗೆ ಒಂದು ನಿರ್ಣಾಯಕ ಹೆಜ್ಜೆ ಇದಾಗಿದೆ ಎಂದು ಶ್ಲಾಘಿಸಿದರು.

ವಿದೇಶಿ ಅಂಚೆ ಕಚೇರಿ ಮೂಲಕ ಡ್ರಗ್ಸ್ ಸಾಗಾಟವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು

ಬೆಂಗಳೂರು,ಅ.8- ನಗರದಲ್ಲಿರುವ ವಿದೇಶಿ ಅಂಚೆ ಕಚೇರಿಗೆ ನಿಷೇದಿತ ಮಾದಕ ವಸ್ತುಗಳ ಪಾರ್ಸೆಲ್‌ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿದೇಶಿ ಅಂಚೆ ಕಚೇರಿಯಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಜಾಲದಲ್ಲಿ ಸಿಲುಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಕೆಂಪೇಗೌಡ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿರುವ ಈ ವಿದೇಶಿ ಅಂಚೆ ಕಚೇರಿಗೆ ನಿರಂತರವಾಗಿ ನಿಷೇದಿತ ಮಾದಕ ವಸ್ತುಗಳು ವಿದೇಶಗಳಿಂದ ಪಾರ್ಸೆಲ್‌ ಮೂಲಕ ಬರುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂಬ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ಈ ವಿದೇಶಿ ಅಂಚೆ ಕಚೇರಿ ದಕ್ಷಿಣ ವಿಭಾಗದಲ್ಲಿರುವುದರಿಂದ ಆ ವಿಭಾಗದ ಡಿಸಿಪಿ ಯವರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಡಿಸಿಪಿ ಅವರು ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆಂದು ಆಯುಕ್ತರು ಹೇಳಿದರು.

ಮುಂದಿನ ದಿನಗಳಲ್ಲಿ ನಾವು ವಿದೇಶಿ ಅಂಚೆ ಕಚೇರಿಗೆ ಬರುವಂತಹ ಪಾರ್ಸೆಲ್‌ಗಳ ಮೇಲೆ ಇನ್ನೂ ಹೆಚ್ಚಿನ ನಿಗಾ ವಹಿಸುತ್ತೇವೆ. ನಿರಂತರವಾಗಿ ಡ್ರಗ್ಸ್ ಸಾಗಾಟ ಮತ್ತು ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. ನಮಗೆ ಕೇಂದ್ರದ ಎಜೆನ್ಸಿಗಳು, ಹೊರ ರಾಜ್ಯಗಳ ಪೊಲೀಸ್‌‍ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.

ಒಟ್ಟಾರೆ ನಗರದಲ್ಲಿ ಮಾದಕ ವಸ್ತು ಮಾರಾಟ ಮತ್ತು ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆಂದು ಸೀಮಂತ್‌ಕುಮಾರ್‌ಸಿಂಗ್‌ ಹೇಳಿದರು.

ಗಣತಿಗೆ ತೆರಳುತ್ತಿದ್ದ ಮತ್ತೊಬ್ಬ ಶಿಕ್ಷಕಿ ಮೇಲೆ ನಾಯಿ ದಾಳಿ

ಬೇಲೂರು,ಅ.8- ಗಣತಿಗೆಂದು ಶಿಕ್ಷಕಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ನಾಯಿಯೊಂದು ಅಟ್ಟಾಡಿಸಿ ಕಚ್ಚಿದ್ದರಿಂದ ಬಿದ್ದು ಗಾಯಗೊಂಡಿರುವ ಘಟನೆ ತಾಲೂಕಿನ ಗೆಂಡೇಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪಟ್ಟಣದಲ್ಲಿ ಮೂರು ದಿನಗಳ ಹಿಂದೆ ಮದ್ಯಾಹ್ನದ ಸಮಯದಲ್ಲಿ ಬೀದಿ ನಾಯಿ 6 ಜನರಿಗೆ ಕಚ್ಚಿ ಗಂಭಿರವಾಗಿ ಗಾಯಗೊಳಿಸಿದ್ದರಿಂದ ಎಲ್ಲ ಗಾಯಾಳುಗಳನ್ನು ಶಾಸಕ ಎಚ್‌.ಕೆ.ಸುರೇಶ್‌ ನೇತೃತ್ವದಲ್ಲಿ ಜಿಲ್ಲಾಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಆದರೆ ಅದೇ ದಿನ ತಾಲೂಕಿನ ಗೆಂಡೇಹಳ್ಳಿ ಹಾಗೂ ಬಸ್ಕಲ್‌ನಲ್ಲಿ ಗಣತಿ ಮುಗಿಸಿಕೊಂಡು ಹಳೇ ಗೆಂಡೇಹಳ್ಳಿ ಗ್ರಾಮದಲ್ಲಿ ಸಂಜೆ 4 ಗಂಟೆ ಸಮಯದಲ್ಲಿ ಗಣತಿಗೆಂದು ಹೋದ ಗೆಂಡೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಶಿಕ್ಷಕಿ ಲುಬ್ನಾಎಂಬುವವರು ತಮದ್ವಿಚಕ್ರ ವಾಹನದಲ್ಲಿ ಹೋದಂತಹ ಸಂದರ್ಭ ನಾಯಿಯೊಂದು ಇವರನ್ನು ಅಟ್ಟಾಡಿಸಿ ಬಂದು ಕಚ್ಚಿದ್ದರಿಂದ ಶಿಕ್ಷಕಿ ದ್ವಿಚಕ್ರ ವಾಹನದಿಂದಕೆಳಕ್ಕೆ ಬಿದ್ದಿದರಿಂದ್ದ ಎಡಗೈ ಮೂಳೆ ಮುರಿದಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಅವರನ್ನು ಕಳುಹಿಸಲಾಗಿದೆ. ವಿಷಯ ತಿಳಿದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್‌ ಮತ್ತುಇತರೆ ಪದಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಶಿಕ್ಷಕಿಯ ಆರೋಗ್ಯ ವಿಚಾರಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸಂಘದತಾಲೂಕುಅಧ್ಯಕ್ಷ ಮಂಜುನಾಥ್‌ ಮಾತನಾಡಿ, ಎರಡು ದಿನಗಳ ಹಿಂದಷ್ಟೆ ಪಟ್ಟಣದಲ್ಲಿ ಶಿಕ್ಷಕಿಯೊಬ್ಬರ ಮೇಲೆ ನಾಯಿಗಳು ದಾಳಿ ಮಾಡಿದ ಘಟನೆ ಇನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ತಾಲೂಕಿನ ನಾಗೇನಹಳ್ಳಿಯಲ್ಲಿ ಲತಾ, ಮತ್ತು ಗೆಂಡೇಹಳ್ಳಿಯಲ್ಲಿ ಲುಬ್ನಾರ ಮೇಲೆ ನಾಯಿ ದಾಳಿ ಮಾಡಿವೆ. ಇದರಿಂದ ಇತರೆ ಶಿಕ್ಷಕರು ಮಾನಸಿಕವಾಗಿ ನೊಂದಿದ್ದಾರೆ.

ಜತೆಗೆ ಈಗಾಗಲೇ ಸರ್ಕಾರ ನಿಗದಿಪಡಿಸಿರುವ ಗಣತಿಯನ್ನು ಶೇ. 90 ರಷ್ಟು ಮುಗಿಸಿದ್ದು, ಉಳಿದಿರುವ ಕೆಲವೇ ಮನೆಗಳಿಗೆ ತೆರಳುವ ಸಂದರ್ಭ ಇಂತಹ ಘಟನೆ ನಡೆಯುತಿದ್ದು, ಒಂಟಿ ಮನೆಗಳಿಗೆ ತೆರಳುವ ಸಂದರ್ಭದಲ್ಲಿ ಶಿಕ್ಷಕರು ಎಚ್ಚರಿಕೆ ವಹಿಸಬೇಕು ಎಂದರು. ಸರ್ಕಾರಿ ನೌಕರರ ಸಂಘದ ಮಾಜಿ ನಿರ್ದೇಶಕ ಗಂಗಾಧರ್‌ ಇದ್ದರು.

ಪ್ರಾಣಾಪಾಯದ ಬಗ್ಗೆ ಮೊದಲೇ ಪೊಲೀಸರ ಗಮನಕ್ಕೆ ತಂದಿದ್ದ ವೆಂಕಟೇಶ್‌ ಅಲಿಯಾಸ್‌‍ ಗಿಲ್ಕಿ

ಮೈಸೂರು, ಅ. 8- ನನ್ನ ಜೀವಕ್ಕೆ ಅಪಾಯವಿದೆ ಎಂದು ಈ ಹಿಂದೆಯೇ ವೆಂಕಟೇಶ್‌ ಪೊಲೀಸರಿಗೆ ತಿಳಿಸಿದ್ದನೆಂಬ ಮಾಹಿತಿ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಹಲವು ದಿನಗಳಿಂದ ಓಡಾಡುತ್ತಿದ್ದ ಸ್ಥಳಗಳಲ್ಲಿ ನಿಂತು ನನ್ನ ಚಲನ-ವಲನಗಳನ್ನು ವೀಕ್ಷಿಸಿ ಕೊಲೆ ಮಾಡಲು ಹೊಂಚು ಹಾಕುತ್ತಿದ್ದರು ಎಂದು ವೆಂಕಟೇಶ್‌ ಪೋಲಿಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಪೊಲೀಸರು ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ಹತ್ಯೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿಂದೆ ಗುಂಪೊಂದು ವೆಂಕಟೇಶ್‌ನ ಮೇಲೆ ಎರಡು ಬಾರಿ ಹಲ್ಲೆ ನಡೆಸಿ ಕೊಲೆಗೆ ವಿಲ ಯತ್ನ ನಡೆಸಿತ್ತು. ಆದರೆ ಇದೀಗ ಮೂರನೇ ಬಾರಿಗೆ ಜನನಿಬಿಡ ಪ್ರದೇಶದಲ್ಲೇ ದಾಳಿ ಮಾಡಿ ಆತನನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದೆ.

ಮೈಸೂರಿನ ದಸರಾ ವಸ್ತುಪ್ರದರ್ಶನ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ವ್ಯಕ್ತಿಯನ್ನು ಹೊರಕ್ಕೆಳೆದು ಮಚ್ಚು-ಲಾಂಗ್‌ ಗಳಿಂದ ಕೊಚ್ಚಿ ಕೊಲೆಗೈದ ದೃಶ್ಯವನ್ನು ಅಲ್ಲಿದ್ದ ಸಾರ್ವಜನಿಕರು ೇಟೋ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಟ್ಟಿದ್ದಾರೆ. ಆದರೆ ವೀಡಿಯೋ ಮಾಡಲು ಪ್ರಯತ್ನಿನಿಸಿದರಾದರೂ ದುಷ್ಕರ್ಮಿಗಳು ಅವರತ್ತ ಲಾಂಗ್‌ ತೋರಿದ್ದರಿಂದ ಹೆದರಿ, ರೆಕಾರ್ಡ್‌ ಮಾಡಲಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿ ರುವ ನಜರ್‌ ಬಾದ್‌ ಠಾಣೆ ಪೋಲಿಸರು ಸ್ಥಳ ಮಹಜರು ನಡೆಸಿ, ಮೈಸೂರು ಮೆಡಿಕಲ್‌ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

ಘಟನಾ ಸ್ಥಳದಲ್ಲಿ ಸಾರ್ವಜನಿಕರು ತೆಗೆದಿರುವ ೇಟೋ ಹಾಗೂ ಆ ಮಾರ್ಗದ ರಸ್ತೆಗಳಲ್ಲಿರುವ ಸಿಸಿ ಕ್ಯಾಮರಾಗಳ ಟೇಜ್‌ಗಳ ಸುಳಿವಿನ ಜಾಡು ಹಿಡಿದ ಪೋಲಿಸರು ದುಷ್ಕರ್ಮಿಗಳ ಪತ್ತೆಗೆ ಎರಡು ತನಿಖಾ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಆರೋಪಿಗಳ ಬಗ್ಗೆ ಕೆಲ ಮಾಹಿತಿಗಳನ್ನು ಕಲೆ ಹಾಕಲಾಗಿದೆ ಎಂದು ಪೊಲೀಸ್‌‍ ಮೂಲಗಳಿಂದ ತಿಳಿದು ಬಂದಿದೆ.

ಇಬ್ಬರು ವಿದೇಶಿ ಪ್ರಜೆಗಳು ಸೇರಿ 6 ಮಂದಿ ಸೆರೆ, 23.84 ಕೋಟಿ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು,ಅ.8– ನಗರ ಪೊಲೀಸರು ಹಾಗೂ ಎಸ್‌‍ಒಸಿಒ ತಂಡಗಳು ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ ಆರು ಮಂದಿಯನ್ನು ಬಂಧಿಸಿ 23.84 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಮಾದಕ ದ್ರವ್ಯ ನಿಗ್ರಹ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 11.81 ಕೋಟಿ ರೂ. ಮೌಲ್ಯದ 7.176 ಕೆಜಿ ಹೈಡ್ರೋ ಗಾಂಜಾ, 1.399 ಕೆಜಿ ಎಂಡಿಎಂಎ ಕ್ರಿಸ್ಟಲ್‌, 2.30 ಕೆಜಿ ಅಫೀಮ್‌ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ಹಾಗೂ ಪೂರ್ವವಿಭಾಗ ಮತ್ತು ಕೊತ್ತನೂರು ಪೊಲೀಸ್‌‍ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ 12.03 ಕೋಟಿ ಮೌಲ್ಯದ 4.815 ಕೆಜಿ ಎಂಡಿಎಂಎ ಕ್ರಿಸ್ಟಲ್‌ ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನದ ಡ್ರಗ್‌ ಪೆಡ್ಲರ್‌ ಬಂಧನ:
ಪರಪ್ಪನ ಅಗ್ರಹಾರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಿಷೇದಿತ ಮಾದಕ ವಸ್ತು ಡ್ರಗ್‌ ಪೆಡ್ಲಿಂಗ್‌ ಕುರಿತು ಖಚಿತ ಮಾಹಿತಿ ಮೇರೆಗೆ, ಸಿಸಿಬಿ ಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್‌‍ ಇನ್‌್ಸಪೆಕ್ಟರ್‌ ಮಂಜಪ್ಪ ರವರು ಪ್ರಕರಣ ದಾಖಲಿಸಿ, ಸಿಬ್ಬಂದಿಯೊಂದಿಗೆ ದಾಳಿ ನಡೆಸಿ, ರಾಜಸ್ಥಾನ ಮೂಲದ ಡ್ರಗ್‌ ಪೆಡ್ಲರ್‌ನನ್ನು ಬಂಧಿಸಿದ್ದಾರೆ.

ಕಳೆದ ವರ್ಷ ಬೆಂಗಳೂರಿಗೆ ಬಂದು ಚಾಲಕರಾಗಿ ಕೆಲಸ ಮಾಡುತ್ತಿದ್ದು, ಈ ಆದಾಯದಿಂದ ಖರ್ಚು ನಿರ್ವಹಿಸಲು ಸಾಧ್ಯವಾಗದೇ, ತನ್ನ ಸಂಬಂಧಿಯ ಸಹಾಯದೊಂದಿಗೆ ಕಳೆದ 3 ತಿಂಗಳಿಂದ ನಿಷೇದಿತ ಮಾದಕ ವಸ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

ಆರೋಪಿಯಿಂದ 1 ಕೆ.ಜಿ 399 ಗ್ರಾಂ ಎಂಡಿಎಎಂಎ ಕ್ರಿಸ್ಟಲ್‌ ಮತ್ತು 2 ಕೆ.ಜಿ 30 ಗ್ರಾಂ ಅಫೀಮ್‌, ಒಟ್ಟು ಅಂದಾಜು 4 ಕೋಟಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಂಚೆ ಕಚೇರಿಗೆ ಬರುತ್ತಿದ್ದ ಪಾರ್ಸೆಲ್‌:
ಕೆ.ಜಿ.ನಗರ ಪೊಲೀಸ್‌‍ ಠಾಣಾ ವ್ಯಾಪ್ತಿಯ ವಿದೇಶಿ ಅಂಚೆ ಕಚೇರಿಗೆ ಶಂಕಾಸ್ಪದ ಪಾರ್ಸೆಲ್‌ ಬಂದಿರುವ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿ ಸ್ನಿಫರ್‌ ಶ್ವಾನಗಳ ಸಹಾಯದಿಂದ ಕಚೇರಿಗೆ ತೆರಳಿ ಪರಿಶೀಲಿಸಿ 3 ಕೆ.ಜಿ ಹೈಡ್ರೋ ಗಾಂಜಾ ಹಾಗೂ ಇತರೆ ವಸ್ತುಗಳು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 3.81 ಕೋಟಿ ರೂ. ಗಳೆಂದು ಅಂದಾಜಿಸಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಕೆಲವು ಅಪರಿಚಿತ ಆರೋಪಿಗಳು ಥೈಲ್ಯಾಂಡ್‌ ಮತ್ತು ಜರ್ಮನಿ ದೇಶಗಳಿಂದ ನಕಲಿ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿ ಮೂಲಕ ಹೈಡ್ರೋ ಗಾಂಜಾವನ್ನು ಖರೀದಿಸಿ, ಬೆಂಗಳೂರಿನಲ್ಲಿ ಮಾದಕ ವಸ್ತು ಪೆಡ್ಲಿಂಗ್‌ ಮಾಡುತ್ತಿದ್ದರೆಂಬುದು ಬೆಳಕಿಗೆ ಬಂದಿದೆ.
ಮಾದಕ ವಸ್ತುಗಳನ್ನು ಆರ್ಡರ್‌ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಇದೇ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ ವಿದೇಶಿ ಅಂಚೆ ಕಚೇರಿಯಲ್ಲಿ ನಿಷೇಧಿತ ಮಾದಕ ವಸ್ತುಗಳು ಇರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇರೆಗೆ, ಸ್ನಿರ್‌ ಶ್ವಾನಗಳ ಸಹಾಯದಿಂದ ಸಾಗಾಟು ಸರಕುಗಳಿಂದ ಬಂದ ಶಂಕಾಸ್ಪದ ಪಾರ್ಸೆಲ್‌ಗಳನ್ನು ಗುರುತಿಸಿ, 4 ಕೆ.ಜಿ. ಹೈಡ್ರೋ ಗಾಂಜಾ ಹಾಗೂ ಪಾರ್ಸೆಲ್‌ ಪ್ಯಾಕಿಂಗ್‌ಗೆ ಬಳಸಿದ ವಸ್ತುಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಅಂದಾಜು ಮೌಲ್ಯ ಸುಮಾರು 4 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ಇಬ್ಬರು ವಿದೇಶಿ ಮಹಿಳೆ ಸೆರೆ:
ಕೊತ್ತನೂರು ಪೊಲೀಸ್‌‍ ಠಾಣೆ ವ್ಯಾಪ್ತಿಯ ಎನ್‌.ಜಿ.ಗೊಲ್ಲಹಳ್ಳಿ ಗ್ರಾಮದ ಬಳಿ ಇರುವ ಅಪಾರ್ಟ್‌ಮೆಂಟ್‌ನಲ್ಲಿ, ವಿದೇಶಿ ಮೂಲದ ಮಹಿಳೆಯರಿಬ್ಬರು ಡ್ರಗ್‌ ಪೆಂಡ್ಲಿಂಗ್‌ನಲ್ಲಿ ತೊಡಗಿರುತ್ತಾರೆಂಬ ಮಾಹಿತಿ ಮೇರೆಗೆ ಸ್ಥಳದ ಮೇಲೆ ದಾಳಿ ಮಾಡಿ ಮಹಿಳೆಯರಿಬ್ಬರನ್ನು ವಶಕ್ಕೆ ಪಡೆದು 12.03 ಕೋಟಿ ರೂ. ಮೌಲ್ಯದ 4 ಕೆ.ಜಿ 815 ಗ್ರಾಂ ಎಂಡಿಎಎಂಎ ಕ್ರಿಸ್ಟಲ್‌ನ್ನು ವಶಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್‌‍ ಆಯುಕ್ತರ ಮಾರ್ಗದರ್ಶನದಲ್ಲಿ ದಕ್ಷಿಣ, ಈಶಾನ್ಯ ವಿಭಾಗದ ಉಪ ಪೊಲೀಸ್‌‍ ಆಯುಕ್ತರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್‌ ಹಾಗೂ ಸಿಬ್ಬಂದಿ ಮತ್ತು ಸಿಸಿಬಿ ತಂಡಗಳು ಕಾರ್ಯನಿರ್ವಹಿಸಿರುತ್ತಾರೆ.

35 ವಿದೇಶಿ ಪ್ರಜೆಗಳು ಸೇರಿ 1048 ಡ್ರಗ್‌ ಪೆಡ್ಲರ್‌ಗಳ ಬಂಧನ :
ಬೆಂಗಳೂರು,ಅ.8- ಪ್ರಸಕ್ತ ವರ್ಷದ ಜನವರಿ 1 ರಿಂದ ಈ ದಿನದ ವರೆಗೆ ಬೆಂಗಳೂರು ನಗರ ಪೊಲೀಸರು 35 ವಿದೇಶಿ ಪ್ರಜೆಗಳು ಸೇರಿದಂತೆ 1048 ಆರೋಪಿಗಳನ್ನು ಬಂಧಿಸಿ 81.21 ಕೋಟಿರೂ. ಮೌಲ್ಯದ ನಿಷೇದಿತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು 771 ಪ್ರಕರಣಗಳಲ್ಲಿ 1486.55 ಕೆಜಿ ವಿವಿಧ ಮಾದಕ ವಸ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ.ಡ್ರಗ್‌ ಪೆಡ್ಲರ್‌ಗಳು, ವಿತರಕರು ಮತ್ತು ಅಂತರರಾಜ್ಯ ಜಾಲಗಳ ವಿರುದ್ಧ ಗುರುತರವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವಿಭಾಗವಾರು ಪೊಲೀಸ್‌‍ ತಂಡಗಳು:
ಎಲ್ಲಾ ವಿಭಾಗಗಳು, ಶಾಖೆಗಳು (ಸಿಸಿಬಿ, ನಾಗರಿಕ ಪೊಲೀಸ್‌‍, ಸಿಇಆರ್‌, ಪೊಲೀಸ್‌‍ ಶ್ವಾನದಳ, (ಸೋಕೋ) ಎಸ್‌‍.ಒ.ಸಿ.ಒ) ಒಕ್ಕೂಟವಾಗಿ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಲು ಕೇಂದ್ರೀಕೃತ ಮತ್ತು ವಿತರಿತ ಪ್ರಯತ್ನಗಳನ್ನು ಕೈಗೊಂಡಿವೆ.

ನಕಾಬಂದಿ ಮತ್ತು ಪ್ರದೇಶ ಆಧಿಪತ್ಯ:
ಅನಿಯಮಿತವಾಗಿ ಸ್ಥಾಪಿಸಲಾದ ನಕಾಬಂದಿ ತಪಾಸಣೆ ಕೇಂದ್ರಗಳು ಮತ್ತು ಪ್ರದೇಶ ಆಧಿಪತ್ಯ ಅಭ್ಯಾಸಗಳಿಂದ ಪೆಡ್ಲರ್‌ಗಳ ವಿರುದ್ಧ ಕ್ರಮಕ್ಕೆ ಅಮೂಲ್ಯವಾದ ಮಾಹಿತಿ ದೊರೆತಿರುತ್ತದೆ.

ಗುಪ್ತಚರ ಸಂಗ್ರಹಣೆ:
ಮಾನವ ಗುಪ್ತಚರ ಮತ್ತು ತಾಂತ್ರಿಕ ಮೂಲಗಳನ್ನು ಬಳಸಿಕೊಂಡು, ಅಕ್ರಮ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಮತ್ತು ತಡೆಗಟ್ಟುವುದು.

ಸೋಶಿಯಲ್‌ ಮೀಡಿಯಾ ನಿಗಾ:
ನಿಷೇದಿತ ಮಾದಕ ವಸ್ತು ಮಾರಾಟ ಅಥವಾ ಪ್ರಚಾರಕ್ಕಾಗಿ ಬಳಸಲಾಗುವ ರ್ಸೇಸ್‌‍ ವೆಬ್‌ ಮತ್ತು ಡಾರ್ಕ್‌ನೆಟ್‌ ವೇದಿಕೆಗಳ ಕುರಿತು ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತವೆ.

ಸಂಸ್ಥಾಂತರ ಸಂಯೋಜನೆ:
ಎ್‌‍ಆರ್‌ಆರ್‌ಒ, ಡಿಆರ್‌ಐ, ಎನ್‌ಸಿಬಿ ಮತ್ತು ಇತರ ಸಂಸ್ಥೆಗಳೊಂದಿಗೆ ನೇರ ಮಾಹಿತಿಯ ವಿನಿಮಯ ಮತ್ತು ಸಂಯುಕ್ತ ಕಾರ್ಯಾಚರಣೆ. ವಿದೇಶಿ ಪ್ರಜೆಗಳು ತಮ ನಿವಾಸಗಳಲ್ಲಿ ವಾಸಿಸುತ್ತಿರುವ ಬಗ್ಗೆ ಕಡ್ಡಾಯವಾಗಿ ಮಾಹಿತಿ ನೀಡದ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಇದರಿಂದ ತಮ ತಮ ಆವರಣ,ಸ್ಥಳಗಳಲ್ಲಿ ಮಾದಕ ವಸ್ತು ಹರಡುವುದಕ್ಕೆ ಬಳಸುವುದನ್ನು ತಡೆಗಟ್ಟಲಾಗುತ್ತದೆ.

ಸಮುದಾಯ ಮತ್ತು ಸಂಸ್ಥಾತಕ ಸಹಭಾಗಿತ್ವ:
ಶಾಲೆಗಳು, ಕಾಲೇಜುಗಳು, ಎನ್‌ಜಿಒಗಳು ಮತ್ತು ನಾಗರಿಕ ಸಂಘಟನೆಗಳ ಸಹಕಾರದೊಂದಿಗೆ ಜಾಗೃತಿ ಅಭಿಯಾನಗಳು ಮತ್ತು ಮಾದಕ ವಸ್ತು ದುರ್ಬಳಕೆಯನ್ನು ತಡೆಯಲು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿವೆ.ಮಾದಕ ವಸ್ತು ದುರ್ಬಳಕೆ, ಪ್ರೋತ್ಸಾಹ ಅಥವಾ ಪರೋಕ್ಷವಾಗಿ ಮಾರಾಟ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ಅವರು ಎಚ್ಚರಿಸಿದ್ದಾರೆ. ನಮ ಬೆಂಗಳೂರನ್ನು ಸುಭದ್ರ ಮತ್ತು ಮಾದಕ ಮುಕ್ತ ನಗರವಾಗಿಸೋಣ ಹಾಗಾಗಿ ಸಾರ್ವಜನಿಕರೆಲ್ಲರೂ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

ಬಿಗ್‌ಬಾಸ್‌‍ಗೆ ಮತ್ತೊಂದು ಅವಕಾಶ ನೀಡುವಂತೆ ಡಿಸಿಎಂ ಡಿಕೆಶಿ ಸೂಚನೆ

ಬೆಂಗಳೂರು, ಅ.8– ಬಿಗ್‌ಬಾಸ್‌‍ ರಿಯಾಲಿಟಿ ಶೋ ನಡೆಯುತ್ತಿರುವ ಜಾಲಿವುಡ್‌ ಸ್ಟುಡಿಯೋ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಮನೋರಂಜನೆ ಹಾಗೂ ಉದ್ಯೋಗದ ಸೃಷ್ಟಿಯ ದೃಷ್ಟಿಯಿಂದ ಬಿಗ್‌ಬಾಸ್‌‍ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಗ್‌ಬಾಸ್‌‍ ಶೋ ಅನ್ನು ನಾನೇ ಉದ್ಘಾಟನೆ ಮಾಡಿದ್ದೇನೆ. ನನಗೆ ಈ ವಿಚಾರದಲ್ಲಿ ಮೂಗು ತೂರಿಸುವ ಅಗತ್ಯವಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಾಮಾವಳಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದರು.

ಬಿಗ್‌ಬಾಸ್‌‍ ಶೋ ನಡೆಯದಂತೆ ಸಚಿವರು ನಟ್ಟುಬೋಲ್‌್ಟ ಟೈಟ್‌ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್‌‍ ಪಕ್ಷದ ಆರೋಪಕ್ಕೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್‌ ಅವರು ಮಾಡುತ್ತಿರುವುದೆಲ್ಲಾ ರಾಜಕೀಯ ಎಂದರು.
ಕುಮಾರಸ್ವಾಮಿಯಾದರೂ ಟ್ವೀಟ್‌ ಮಾಡಲಿ ಅಥವಾ ಮೇಲಿನವವರನ್ನಾದರೂ ಕರೆ ತಂದು, ಟೀಕೆ ಮಾಡಿಸಲಿ ನಾನು ಅದಕ್ಕೆ ಹೆದರುವುದಿಲ್ಲ. ನನ್ನನ್ನು ನೆನಪಿಸಿಕೊಳ್ಳದಿದ್ದರೆ ಅವರಿಗೆ ನೆಮದಿಯೇ ಇರುವುದಿಲ್ಲ ಎಂದು ತಿರುಗೇಟು ನೀಡಿದರು.

ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಬಗ್ಗೆ ನಾನು ಮಾಹಿತಿ ಪಡೆದಿದ್ದೇನೆ. ಉದ್ಯೋಗ ಸೃಷ್ಟಿ ಬಹಳ ಮುಖ್ಯ. ಮನೋರಂಜನಾ ಚಟುವಟಿಕೆಗಳು ಮುಂದುವರಿಯಬೇಕು. ಜಾಲಿವುಡ್‌ ಸ್ಟುಡಿಯೋದವರು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಾವಳಿಗಳನ್ನು ಪಾಲಿಸಲಿ, ತಪ್ಪುಗಳನ್ನು ತಿದ್ದಿಕೊಳ್ಳಲಿ ಎಂದರು.

ಬಿಗ್‌ಬಾಸ್‌‍ ಶೋಗೆ ಮತ್ತೊಂದು ಅವಕಾಶ ನೀಡಬೇಕೆಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌‍ ಮುಖ್ಯಾಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರ ಜೊತೆಯೂ ನಿನ್ನೆ ರಾತ್ರಿ ತಾವು ಚರ್ಚೆ ನಡೆಸಿದ್ದಾಗಿ, ಹೇಳಿದರು.

ಏನೋ ತಪ್ಪುಗಳಾಗಿರುತ್ತವೆ. ಸರಿಪಡಿಸಿಕೊಳ್ಳಲಿ ಖಾಸಗಿ ಸಂಸ್ಥೆಯ ಹೂಡಿಕೆಗಳು ರಾಜ್ಯಕ್ಕೆ ಬೇಕಿದೆ ಎಂದು ಸಮರ್ಥಿಸಿಕೊಂಡರು.ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ಅವರ ಮೇಲೆ ಶೂ ಎಸೆದ ಪ್ರಕರಣ ಬಹಳ ತಪ್ಪು. ಯಾರೇ ಇರಲಿ ನ್ಯಾಯದಾನ ನೀಡುವ ಸ್ಥಾನದಲ್ಲಿ ಕುಳಿತಿದ್ದಾಗ ಅವರನ್ನು ಗೌರವಿಸಬೇಕು. ಅಲ್ಲಿ ಧರ್ಮ ವಿಚಾರ ತಂದು ಅಧರ್ಮ ಮಾಡುವುದು ಅಕ್ಷಮ್ಯ ಎಂದರು.

ನ್ಯಾಯಮೂರ್ತಿಗಳು ಶೂ ಎಸೆದ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳದಂತೆ ಹೇಳಿದ್ದರೂ, ಸರ್ಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಮುಂದೆ ಈ ರೀತಿಯಾಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.

ಬೆಂಗಳೂರಿನ ಹಿತಾಸಕ್ತಿಗೆ ಅನುಗುಣವಾಗಿ ಸುರಂಗ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಇದರಿಂದ ನಗರದ ಹೃದಯ ಭಾಗದಲ್ಲಿರುವ ಲಾಲ್‌ಬಾಗ್‌ಗೆ ಯಾವುದೇ ಹಾನಿಯಾಗುವುದಿಲ್ಲ. ಲಾಲ್‌ಬಾಗ್‌ ಪಾವಿತ್ರ್ಯ ಹಾಗೂ ಐತಿಹಾಸಿಕ ಹಿನ್ನೆಲೆ ಬಗ್ಗೆ ನಮಗೂ ಅರಿವಿದೆ. ಮುಂದಿನ ಶನಿವಾರ ಅಥವಾ ಭಾನುವಾರ ಎಲ್ಲಾ ಅಧಿಕಾರಿಗಳ ಜೊತೆ ನಾನೇ ಖುದ್ದಾಗಿ ಲಾಲ್‌ಬಾಗ್‌ಗೆ ಭೇಟಿ ನೀಡಿ, ಯಾವ ಜಾಗದಲ್ಲಿ ಕಾಮಗಾರಿ ನಡೆಯುತ್ತದೆ ಎಂದು ಪರಿಶೀಲಿಸುತ್ತೇನೆ. ಈ ವಿಷಯವಾಗಿ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ವಿವೇಚನಾಧಿಕಾರಕ್ಕೆ ಸೇರಿದೆ. ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ವಾಯುಪಡೆಯ ದಿನ : ಶುಭ ಕೋರಿದ ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ

ನವದೆಹಲಿ, ಅ. 8 (ಪಿಟಿಐ)- ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವಾರು ಗಣ್ಯರು ವಾಯುಸೇನೆಯ ಎಲ್ಲಾಯೋಧರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ವಾಯುಪಡೆಯ ದಿನದಂದು ಶುಭಾಶಯ ಕೋರಿದರು ಮತ್ತು ಈ ಪಡೆ ತನ್ನ ಶಕ್ತಿ ಮತ್ತು ಪ್ರತಿಯೊಂದು ಸವಾಲನ್ನು ಎದುರಿಸುವ ಸಿದ್ಧತೆಯಿಂದ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದ್ದಾರೆ.

ದೇಶದ ವಾಯು ಯೋಧರು ನಮ್ಮ ಆಕಾಶವನ್ನು ರಕ್ಷಿಸುತ್ತಾರೆ ಮತ್ತು ವಿಪತ್ತುಗಳು ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ದಣಿವರಿಯದ ಸಮರ್ಪಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಾರೆ ಎಂದು ಮುರ್ಮು ಎಕ್‌್ಸ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ವಾಯುಪಡೆಯ ದಿನದಂದು ವಾಯುಪಡೆಯ ಸಿಬ್ಬಂದಿಗೆ ಶುಭಾಶಯ ಕೋರಿದರು ವಾಯುಪಡೆ ದಿನದಂದು ಎಲ್ಲಾ ಧೈರ್ಯಶಾಲಿ ವಾಯು ಯೋಧರು ಮತ್ತು ಅವರ ಕುಟುಂಬಗಳಿಗೆ ಶುಭಾಶಯಗಳು. ಭಾರತೀಯ ವಾಯುಪಡೆಯು ಶೌರ್ಯ, ಶಿಸ್ತು ಮತ್ತು ನಿಖರತೆಯನ್ನು ಸಾರುತ್ತದೆ. ಅತ್ಯಂತ ಸವಾಲಿನ ಸಂದರ್ಭಗಳಲ್ಲಿಯೂ ಸೇರಿದಂತೆ ನಮ್ಮ ಆಕಾಶವನ್ನು ರಕ್ಷಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಮೋದಿ ಹೇಳಿದರು.ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಅವರ ಪಾತ್ರವು ತುಂಬಾ ಶ್ಲಾಘನೀಯವಾಗಿದೆ ಎಂದು ಮೋದಿ ಹೇಳಿದರು, ಅವರ ಬದ್ಧತೆ, ವೃತ್ತಿಪರತೆ ಮತ್ತು ಅದಮ್ಯ ಮನೋಭಾವವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡುತ್ತದೆ ಎಂದು ಪ್ರತಿಪಾದಿಸಿದರು.

ಅದೇ ರೀತಿ ಶಾ ಮತ್ತಿತರ ಗಣ್ಯರು ವಾಯುಪಡೆಯ ವಾರ್ಷಿಕೋತ್ಸವದಂದು ಶುಭಾಷಯ ಕೋರಿದ್ದಾರೆ.ವಾಯು ಯೋಧರು ಮಾಡಿದ ತ್ಯಾಗಗಳನ್ನು ಸ್ಮರಿಸಲು ಅಕ್ಟೋಬರ್‌ 8 ರಂದು ವಾಯುಪಡೆಯ ದಿನವನ್ನು ಆಚರಿಸಲಾಗುತ್ತದೆ.ವಾಯುಪಡೆಯ ದಿನದಂದು ಎಲ್ಲಾ ವಾಯು ಯೋಧರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಹೃತ್ಪೂರ್ವಕ ಶುಭಾಶಯಗಳು! ಭಾರತೀಯ ವಾಯುಪಡೆ ಯಾವಾಗಲೂ ಧೈರ್ಯ, ಬದ್ಧತೆ ಮತ್ತು ಶ್ರೇಷ್ಠತೆಯನ್ನು ಪ್ರದರ್ಶಿಸಿದೆ. ನಮ್ಮ ವಾಯು ಯೋಧರು ನಮ್ಮ ಆಕಾಶವನ್ನು ರಕ್ಷಿಸುತ್ತಾರೆ ಮತ್ತು ವಿಪತ್ತುಗಳು ಮತ್ತು ಮಾನವೀಯ ಕಾರ್ಯಾಚರಣೆಗಳ ಸಮಯದಲ್ಲಿ ದಣಿವರಿಯದ ಸಮರ್ಪಣೆಯೊಂದಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಾರೆ.

ನಮ್ಮ ವಾಯುಪಡೆಯು ತನ್ನ ಶಕ್ತಿ ಮತ್ತು ಪ್ರತಿ ಸವಾಲನ್ನು ಎದುರಿಸುವ ಸಿದ್ಧತೆಯಿಂದ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಭವಿಷ್ಯದ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸಿಗಾಗಿ ಭಾರತೀಯ ವಾಯುಪಡೆಗೆ ನಮ ಶುಭಾಷಯಗಳು ಎಂದು ಗಣ್ಯರು ಅಭಿನಂದಿಸಿದ್ದಾರೆ.

ಜಾತಿ ಸಮೀಕ್ಷೆಗೆ ಬರೋಬ್ಬರಿ 650 ಕೋಟಿ ವೆಚ್ಚ : ಅಶೋಕ್‌ ಆಕ್ರೋಶ

ಬೆಂಗಳೂರು,ಅ.8-ಜಾತಿಗಣತಿ ಹೆಸರಿನಲ್ಲಿ ಹತ್ತು ವರ್ಷಗಳ ಹಿಂದೆಯೇ 150 ಕೋಟಿ ರೂಪಾಯಿ ಹಣವನ್ನು ಪೋಲು ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಅದಕ್ಕಿಂತಲೂ ಹೆಚ್ಚಿನ ಸಾರ್ವಜನಿಕ ಹಣವನ್ನು ಅಪವ್ಯಯ ಮಾಡಲು ಹೊರಟಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲ ತಾಣ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಜಾತಿಗಣತಿ ನಡೆಸಲು ಎಷ್ಟು ಸಮಯ ಬೇಕು ಎನ್ನುವ ಬಗ್ಗೆ ಪೂರ್ವಯೋಜನೆ ಇಲ್ಲ? ಜಾತಿಗಣತಿಯಲ್ಲಿ ಯಾವ ಪ್ರಶ್ನೆ ಕೇಳಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಜಾತಿಗಣತಿಗೆ ಶಿಕ್ಷಕರನ್ನು ನಿಯೋಜನೆ ಮಾಡಿದರೆ ಸರ್ಕಾರಿ ಶಾಲೆಗಳಲ್ಲಿ ಯಾರು? ಪಾಠ ಮಾಡುತ್ತಾರೆ ಎನ್ನುವ ಬಗ್ಗೆ ಯೋಚನೆ ಮಾಡಲಿಲ್ಲ ಎಂದು ಆರೋಪಿಸಿದ್ದಾರೆ.

ಯಾವುದೇ ಪೂರ್ವಸಿದ್ಧತೆ, ರೂಪುರೇಷೆ, ಗೊತ್ತು-ಗುರಿ ಇಲ್ಲದೆ, ಕೇವಲ ರಾಜಕೀಯ ತೆವಲಿಗೆ ಮಾಡುತ್ತಿರುವ ಈ ಜಾತಿಗಣತಿಯಿಂದ ಕನ್ನಡಿಗರಿಗೆ ನಯಾ ಪೈಸೆ ಉಪಯೋಗವಿಲ್ಲ. ಕಾಂಗ್ರೆಸ್‌‍ ಸರ್ಕಾರ, ಈಗ ಮತ್ತೊಮ್ಮೆ 650 ಕೋಟಿ ರೂಪಾಯಿ ಕನ್ನಡಿಗರ ತೆರಿಗೆ ಹಣವನ್ನು ಬೇಕಾಬಿಟ್ಟಿ ಪೋಲು ಮಾಡುತ್ತಿದೆ ಎಂದು ವಾಗ್ದಳಿ ನಡೆಸಿದ್ದಾರೆ.

ಬೆಲೆ ಇಳಿಕೆ ಯಾವಾಗ?
ಮತ್ತೊಂದು ಪೋಸ್ಟ್‌ ನಲ್ಲಿ ಕಳೆದ ಎರಡು ವರ್ಷಗಳಿಂದ ಸತತವಾಗಿ ಏರಿಸಿರುವ ಹಾಲು, ಪೆಟ್ರೋಲ್‌‍, ಡಿಸೇಲ್‌‍, ನೀರು, ವಿದ್ಯುತ್‌ ಬೆಲೆಯನ್ನು ಇಳಿಸುವುದು ಯಾವಾಗ? ಎಂದು ಅಶೋಕ್‌ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಗ್ಯಾರಂಟಿ ಸಿದ್ದರಾಮಯ್ಯ ಟ್ಯಾಕ್‌್ಸ (ಜಿಎಸ್‌‍ ಟಿ) ಎಂದು ವ್ಯಂಗ್ಯವಾಡಿರುವ ಅಶೋಕ್‌, ಕಾಂಗ್ರೆಸ್‌‍ ಸರ್ಕಾರದಿಂದ ಕನ್ನಡಿಗರಿಗೆ ಮುಕ್ತಿ ಯಾವಾಗ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಎಸ್‌‍ಟಿ ಸುಧಾರಣೆ ನಂತರ ದಿನಬಳಕೆ ವಸ್ತುಗಳಿಂದ ಹಿಡಿದು ಬೈಕು-ಕಾರುಗಳವರೆಗೆ ದೇಶಾದ್ಯಂತ ವ್ಯಾಪಾರ ವಹಿವಾಟು ಜೋರಾಗಿದ್ದು, ಜನಸಾಮಾನ್ಯರು ಸಂತೋಷದಿಂದ ಜಿಎಸ್‌‍ಟಿ ಉಳಿತಾಯದ ಲಾಭ ಪಡೆಯುತ್ತಿದ್ದಾರೆ. ವ್ಯಾಪಾರಸ್ಥರು, ವರ್ತಕರು ಸಂತೋಷಗೊಂಡಿದ್ದಾರೆ.ಆದರೆ ರಾಜ್ಯದಲ್ಲಿರುವ ಜನವಿರೋಧಿ ಕಾಂಗ್ರೆಸ್‌‍ ಸರ್ಕಾರ ಯಾವುದಕ್ಕೂ ಮುಂದಾಗಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ
ಇನ್ನೊಂದು ಪೋಸ್ಟ್‌ ನಲ್ಲಿ ತೀವ್ರ ಸಂಕಷ್ಟದಲ್ಲಿರುವ ಈರುಳ್ಳಿ ಬೆಳೆಗಾರರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ತಕ್ಷಣವೇ ಧಾವಿಸಿ, ಉತ್ತಮ ಬೆಲೆ ಸಿಗುವಂತಹ ವ್ಯವಸ್ಥೆ ಮಾಡಬೇಕು. ಇದೇ ರೀತಿ ಬೆಲೆ ಕಡಿಮೆಯಾದರೆ ಈರುಳ್ಳಿ ಬೆಳೆಗಾರರು ಬೀದಿಗೆ ಬೀಳುತ್ತಾರೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಉತ್ತಮ ಬೆಲೆ ಸಿಗುವಂತಹ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ನೆರೆ ಪ್ರದೇಶಕ್ಕೆ ಸಿಎಂ ಕಾಟಾಚಾರದ ವೈಮಾನಿಕ ಪರಿಶೀಲನೆ ಯಾತ್ರೆ, ಕುರ್ಚಿ ದಕ್ಕಿಸಿಕೊಳ್ಳಲು ಡಿಸಿಎಂ ಪದೇ ಪದೇ ದೆಹಲಿ ದಂಡಯಾತ್ರೆ.ರೈತರು ಬೆವರು ಸುರಿಸಿ ಬೆಳೆದ ಬೆಳೆಗೆ ಶವಯಾತ್ರೆ. ಇದು ರೈತ ವಿರೋಧಿ ಕಾಂಗ್ರೆಸ್‌‍ ಸರ್ಕಾರದಲ್ಲಿ ಕರ್ನಾಟಕದ ರೈತರ ಪಾಡು ಎಂದು ಸರ್ಕಾರದ ವಿರುದ್ದ ಅವರು ವಾಗ್ದಾಳಿ ನಡೆಸಿದ್ದಾರೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಿಂಗಳುಗಟ್ಟಲೆ ಶ್ರಮವಹಿಸಿ ದುಡಿದ ರೈತರಿಗೆ ಈ ಬಾರಿ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಪ್ರತಿ ಕ್ವಿಂಟಲ್‌ಗೆ 3,000- 4,000 ರೂಪಾಯಿ ಸಿಗುತ್ತಿದ್ದದ್ದು, ಈಗ ಕ್ವಿಂಟಲ್ಗೆ 100-200 ರೂಪಾಯಿಗಳಿಗೆ ದಿಢೀರನೆ ಬೆಲೆ ಕುಸಿದಿದ್ದು ಸಾಗಾಟದ ವೆಚ್ಚಕ್ಕೂ ಹಣ ಸಿಗದೆ ರೈತರು ಕಂಗಾಲಾಗಿದ್ದಾರೆ ಎಂದು ಅಶೋಕ್‌ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.