Home Blog Page 62

“ಐ ಲವ್‌ ಮುಹಮದ್‌” ಪೋಸ್ಟರ್‌ ಹಾಕಿದರೆ ಕಠಿಣ ಕ್ರಮ

ಬೆಂಗಳೂರು,ಅ.7– ರಾಜ್ಯದಲ್ಲಿ ಐ ಲವ್‌ ಮುಹಮದ್‌ ಎಂಬ ಪೋಸ್ಟರ್‌ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌‍ ಮಹಾ ನಿರ್ದೇಶಕರಾದ ಹಿತೇಂದ್ರ ಅವರು ಎಚ್ಚರಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂರ್ನಾಲ್ಕು ಜಿಲ್ಲೆಗಳಲ್ಲಿ ಹಾಕಿದ್ದ ಪೋಸ್ಟರ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಅಲ್ಲದೇ ಮತ್ತೆ ಹಾಕದಂತೆ ಸೂಚನೆ ನೀಡಿದ್ದೇವೆ ಎಂದರು.

ಐ ಲವ್‌ ಮುಹಮದ್‌ ಎಂಬ ಪೋಸ್ಟರ್‌ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದೆಂತೆ ರಾಜ್ಯದಲ್ಲಿ 2 ಪ್ರಕರಣಗಳು ದಾಖಲಾಗಿವೆ. ದಾವಣಗೆರೆಯಲ್ಲಿ 8 ಮಂದಿಯನ್ನು ಹಾಗೂ ಬೆಳಗಾವಿಯಲ್ಲಿ 11 ಮಂದಿಯನ್ನು ಬಂಧಿಸಿ ಕ್ರಮಕೈಗೊಂಡಿದ್ದೇವೆ ಎಂದರು.ಕಲ್ಬುರ್ಗಿಯಲ್ಲಿ ಪೋಸ್ಟರ್‌ ಹಾಕಿದ್ದನ್ನು ತೆರವುಗೊಳಿಸಿದ್ದೇವೆ.

ಈ ರೀತಿಯ ಘಟನೆ ಮರು ಕಳಿಸದಂತೆ, ಯಾವುದೇ ಅಹಿತರ ಘಟನೆ ನಡೆಯದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಭದ್ರತೆ ಕೈಗೊಂಡಿದ್ದೇವೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮರ್ಪಕವಾಗಿದೆ ಎಂದರು.ಯಾರೇ ಆದರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

ಅ.10ಕ್ಕೆ ಸಿಎಂ ನೇತೃತ್ವದಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆ

ಬೆಂಗಳೂರು, ಅ.7- ಬಿಬಿಎಂಪಿ ಹೋಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಬಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ಇದೇ 10ರಂದು ಜಿಬಿಎ ಕಚೇರಿಯಲ್ಲಿರುವ ಕೆಂಪೇಗೌಡ ಸಭಾಂಗಣದಲ್ಲಿ ಸಿದ್ದರಾಮಯ್ಯ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಾಗಿ 5 ನಗರ ಪಾಲಿಕೆಗಳನ್ನು ಸೃಜಿಸಲಾಗಿದೆ.

ಈ ಐದು ನಗರ ಪಾಲಿಕೆಗಳಿಗೆ ಶೀಘ್ರ ಚುನಾವಣೆ ನಡೆಸಬೇಕಿರುವುದರಿಂದ ಜಿಬಿಎ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಭೆ ನಡೆಸುತ್ತಿದ್ದಾರೆ.ಸಭೆಯಲ್ಲಿ ಜಿಬಿಎ ಉಪಾಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ನಗರವನ್ನು ಪ್ರತಿನಿಧಿಸುವ ಶಾಸಕರು ಪಾಲ್ಗೊಳ್ಳುತ್ತಿದ್ದಾರೆ.

60 ಕೋಟಿ ರೂ. ವಂಚನೆ ಪ್ರಕರಣ : ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿಗೆ ಪೊಲೀಸರ ಗ್ರಿಲ್‌

ಮುಂಬೈ, ಅ.7- ಬಾಲಿವುಡ್‌ ನಟಿ ಮತ್ತು ಉದ್ಯಮಿ ಶಿಲ್ಪಾ ಶೆಟ್ಟಿ ಅವರು ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ದಲ್ಲಿ 60 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.ಮುಂಬೈ ಪೊಲೀಸರ ಅಧಿಕಾರಿಯೊಬ್ಬರು ಶಿಲ್ಪಾ ಅವರನ್ನು ಸುಮಾರು 4.5 ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಪೊಲೀಸರು ಶಿಲ್ಪಾ ಅವರ ನಿವಾಸಕ್ಕೆ ವಿಚಾರಣೆ ನಡೆಸಲು ಭೇಟಿ ನೀಡಿದ್ದರು. ವಿಚಾರಣೆಯ ಸಮಯದಲ್ಲಿ, ಶಿಲ್ಪಾ ತಮ್ಮ ಜಾಹೀರಾತು ಕಂಪನಿಯ ಬ್ಯಾಂಕ್‌ ಖಾತೆಯಲ್ಲಿ ನಡೆದಿದೆ ಎನ್ನಲಾದ ವಹಿವಾಟುಗಳ ಕುರಿತು ಪೊಲೀಸರಿಗೆ ವಿವರಗಳನ್ನು ನೀಡಿದರು.ವಿಚಾರಣೆಯ ಸಮಯದಲ್ಲಿ, ಶಿಲ್ಪಾ ಅವರು ಪೊಲೀಸರಿಗೆ ಹಲವಾರು ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ, ಅವುಗಳನ್ನು ಪ್ರಸ್ತುತ ಪರಿಶೀಲಿಸಲಾಗುತ್ತಿದೆ.

ಸೆಪ್ಟೆಂಬರ್‌ನಲ್ಲಿ, ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು 60 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಶಿಲ್ಪಾ ಅವರ ಪತಿ ರಾಜ್‌ ಕುಂದ್ರಾ ಅವರ ಹೇಳಿಕೆಯನ್ನು ದಾಖಲಿಸಿದೆ.ಆ ಸಮಯದಲ್ಲಿ ಮುಂಬೈ ಪೊಲೀಸರು ಪ್ರಕರಣದ ನವೀಕರಣವನ್ನು ಹಂಚಿಕೊಂಡಿದ್ದರು.

60 ಕೋಟಿ ರೂ. ವಂಚನೆ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್‌ ಕುಂದ್ರಾ ವಿರುದ್ಧ ತನಿಖೆ ನಡೆಯುತ್ತಿದೆ. ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ರಾಜ್‌ ಕುಂದ್ರಾ ಅವರಿಗೆ ಸಮನ್‌್ಸ ಜಾರಿ ಮಾಡಿದೆ. ತನಿಖೆಗಾಗಿ ಪೊಲೀಸರ ಮುಂದೆ ಹಾಜರಾಗುವಂತೆ ಅವರನ್ನು ಕೇಳಲಾಗಿದೆ.

ಮುಂದಿನ ವಾರ ಮುಂಬೈ ಪೊಲೀಸರು ರಾಜ್‌ ಕುಂದ್ರಾ ಅವರನ್ನು ಮತ್ತೆ ವಿಚಾರಣೆ ಮಾಡಲಿದ್ದಾರೆ ಎಂದು ಅವರು ಹೇಳಿದರು.ಅಪರಿಚಿತರಿಗೆ, ಉದ್ಯಮಿ ದೀಪಕ್‌ ಕೊಠಾರಿ ಅವರು ಶಿಲ್ಪಾ ಮತ್ತು ರಾಜ್‌ 60 ಕೋಟಿಗೂ ಹೆಚ್ಚು ವಂಚನೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೂಲಗಳ ಪ್ರಕಾರ, ರಾಜ್‌ ಅವರು ಬಿಪಾಶಾ ಮತ್ತು ನೇಹಾ ಅವರಿಗೆ ಹಣದ ಒಂದು ಭಾಗವನ್ನು ಶುಲ್ಕವಾಗಿ ಪಾವತಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಐದು ಗಂಟೆಗಳ ಕಾಲ ನಡೆದ ವಿಚಾರಣೆಯ ಸಮಯದಲ್ಲಿ, ಅವರು ಹಲವಾರು ನಿರ್ಣಾಯಕ ಅಂಶಗಳ ಬಗ್ಗೆ ಮೌನವಾಗಿದ್ದರು ಎಂದು ವರದಿಯಾಗಿದೆ, ಇದು ಮತ್ತಷ್ಟು ವಿಚಾರಣೆ ನಡೆಸಲು ಯೋಜಿಸಲು ಕಾರಣವಾಯಿತು.

ತನಿಖಾಧಿಕಾರಿಗಳು ಕಂಪನಿಯ ಖಾತೆಗಳಿಂದ ಶಿಲ್ಪಾ ಶೆಟ್ಟಿ, ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಸೇರಿದಂತೆ ನಾಲ್ವರು ನಟಿಯರ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ಕಂಡುಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಲ್ಲದೆ, ಬಾಲಾಜಿ ಎಂಟರ್‌ಟೈನ್‌ಮೆಂಟ್‌ಗೆ ಸಂಬಂಧಿಸಿದ ವಹಿವಾಟುಗಳನ್ನು ಪತ್ತೆಹಚ್ಚಲಾಗಿದೆ.

ಮೋದಿ ಮೆಚ್ಚುಗೆ ಗಳಿಸಿದ್ದ ಗಾಯಕಿ ಮೈಥಿಲಿ ಠಾಕೂರ್‌ಗೆ ಬಿಜೆಪಿ ಟಿಕೆಟ್‌..?

ನವದೆಹಲಿ, ಅ.7– ನರೇಂದ್ರ ಮೋದಿ ಅವರಿಂದ ಗುಣಗಾನ ಮಾಡಿಸಿಕೊಂಡಿದ್ದ ಖ್ಯಾತ ಗಾಯಕಿ ಮೈಥಿಲಿ ಠಾಕೂರ್‌ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಗಾಯಕಿ ಮೈಥಿಲಿ ಠಾಕೂರ್‌ 2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ತವರು ಕ್ಷೇತ್ರವಾದ ಮಧುಬನಿಯಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಬಿಜೆಪಿ ಬಿಹಾರ ಉಸ್ತುವಾರಿ ವಿನೋದ್‌ ತಾವ್ಡೆ ಅವರು ನವದೆಹಲಿಯಲ್ಲಿ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ ಅವರೊಂದಿಗೆ ಮೈಥಿಲಿ ಮತ್ತು ಅವರ ತಂದೆಯೊಂದಿಗೆ ನಡೆಸಿದ ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಈ ಮಾತುಗಳು ಕೇಳಿ ಬರುತ್ತಿವೆ.

ಮೈಥಿಲಿಯನ್ನು ಬಿಹಾರದ ಮಗಳು ಎಂದು ಸಂಬೋಧಿಸಿರುವ ತಾವ್ಡೆ ಅವರು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯನ್ನು ಟೀಕಿಸಿದ್ದಾರೆ. 1995 ರಲ್ಲಿ ಲಾಲು ಅಧಿಕಾರಕ್ಕೆ ಬಂದ ನಂತರ ಬಿಹಾರವನ್ನು ತೊರೆದ ಕುಟುಂಬಗಳು, ಆ ಕುಟುಂಬದ ಮಗಳು, ಪ್ರಸಿದ್ಧ ಗಾಯಕಿ ಮೈಥಿಲಿ ಠಾಕೂರ್‌ ಜಿ, ಬದಲಾಗುತ್ತಿರುವ ಬಿಹಾರದ ವೇಗವನ್ನು ನೋಡಿ ಬಿಹಾರಕ್ಕೆ ಮರಳಲು ಬಯಸುತ್ತಾರೆ ಎಂದು ಅವರು ಬರೆದುಕೊಂಡಿದ್ದಾರೆ.

ನಿತ್ಯಾನಂದ್‌ ರೈ ಮತ್ತು ತಾವ್ಡೆ ಅವರು ಮೈಥಿಲಿಯನ್ನು ಬಿಹಾರದ ಜನರಿಗೆ ಕೊಡುಗೆ ನೀಡಲು ಮತ್ತು ಅವರ ನಿರೀಕ್ಷೆಗಳನ್ನು ಪೂರೈಸಲು ಒತ್ತಾಯಿಸಿದರು.ತಾವ್ಡೆ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಠಾಕೂರ್‌ ಅವರು, ಬಿಹಾರಕ್ಕಾಗಿ ದೊಡ್ಡ ಕನಸು ಕಾಣುವ ಜನರು, ಅವರೊಂದಿಗಿನ ಪ್ರತಿ ಸಂಭಾಷಣೆಯೂ ನನಗೆ ದೃಷ್ಟಿ ಮತ್ತು ಸೇವೆಯ ಶಕ್ತಿಯನ್ನು ನೆನಪಿಸುತ್ತದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಶಾಸ್ತ್ರೀಯ ಗಾಯಕಿ ಮಧುಬನಿ ಮತ್ತು ದರ್ಭಂಗಾ ಆಗಿರುವ ಮಿಥಿಲಾ ಪ್ರದೇಶದವರು. ಬಿಜೆಪಿ ಠಾಕೂರ್‌ಗೆ ಎರಡು ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ – ದರ್ಭಂಗಾದಲ್ಲಿರುವ ಮಧುಬನಿ ಮತ್ತು ಅಲಿಗಢ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಜನವರಿ 2024 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ರಾಮಾಯಣದ ಪ್ರಕಾರ ಶ್ರೀರಾಮನಿಗೆ ಅರ್ಧ ತಿಂದ ಹಣ್ಣುಗಳನ್ನು ಅರ್ಪಿಸಿದ ಮಾ ಶಬರಿಯ ಕುರಿತು ಹಾಡನ್ನು ಹಾಡಿದ್ದಕ್ಕಾಗಿ ಮೈಥಿಲಿ ಠಾಕೂರ್‌ ಅವರನ್ನು ಹೊಗಳಿದರು.ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಮೈಥಿಲಿಯ ಹಾಡೊಂದನ್ನು ಹಂಚಿಕೊಂಡು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯ ಸಂದರ್ಭವು ದೇಶಾದ್ಯಂತ ನನ್ನ ಕುಟುಂಬ ಸದಸ್ಯರಿಗೆ ಭಗವಾನ್‌ ಶ್ರೀ ರಾಮನ ಜೀವನ ಮತ್ತು ಆದರ್ಶಗಳಿಗೆ ಸಂಬಂಧಿಸಿದ ಪ್ರತಿಯೊಂದು ಘಟನೆಯನ್ನು ನೆನಪಿಸುತ್ತಿದೆ. ಅಂತಹ ಒಂದು ಭಾವನಾತ್ಮಕ ಘಟನೆ ಶಬರಿಗೆ ಸಂಬಂಧಿಸಿದೆ. ಮೈಥಿಲಿ ಠಾಕೂರ್‌ ಜಿ ಅದನ್ನು ತಮ್ಮ ಸುಮಧುರ ರಾಗಗಳಲ್ಲಿ ಹೇಗೆ ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಕೇಳಿ ಎಂದು ಗುಣಗಾನ ಮಾಡಿದ್ದರು.

ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದ ಜೈರಾಮ್‌ ರಮೇಶ್‌

ನವದೆಹಲಿ, ಅ. 7 (ಪಿಟಿಐ) ಮತದಾರರ ಪಟ್ಟಿಯಿಂದ ನಾಗರಿಕರಲ್ಲದವರನ್ನು ತೆಗೆದುಹಾಕಲು ಎಸ್‌‍ಐಆರ್‌ ಪ್ರಕ್ರಿಯೆಯ ಅಗತ್ಯವು ಹೆಚ್ಚಾಗಿದೆ ಎಂದು ಕಾಂಗ್ರೆಸ್‌‍ ಹೇಳಿದೆ ಆದರೆ ಬಿಹಾರದಲ್ಲಿ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದರ ಕುರಿತು ದೇಶಕ್ಕೆ ಅರಿವು ಮೂಡಿಸುವ ಸಮಗ್ರತೆ ಅಥವಾ ಧೈರ್ಯ ಚುನಾವಣಾ ಆಯೋಗಕ್ಕೆ ಇಲ್ಲ ಎಂದು ದೂರಿದೆ.

ಬಿಹಾರದಲ್ಲಿ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಸಂಸ್ಥೆ ತಿಳಿಸಿದ್ದರೆ, ಅದು ಈಗಾಗಲೇ ಇರುವುದಕ್ಕಿಂತ ಹೆಚ್ಚು ಬಹಿರಂಗವಾಗುತ್ತಿತ್ತು ಎಂದು ವಿರೋಧ ಪಕ್ಷ ಹೇಳಿದೆ.

ಬಿಹಾರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌‍ಐಆರ್‌) ಕುರಿತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಲಿದೆ ಎಂದು ಕಾಂಗ್ರೆಸ್‌‍ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ಮಧ್ಯಸ್ಥಿಕೆಗಳು ಸಾಮೂಹಿಕ ಮತದಾನದ ಅಭಾವದ ಭಯವನ್ನು ನಿವಾರಿಸಿದರೂ, ನಿಖರತೆ, ಸಮಾನತೆ, ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ದೃಷ್ಟಿಕೋನದಿಂದ ಈ ಪ್ರಕ್ರಿಯೆ ಅಪೇಕ್ಷಿತವಾಗಿರುವುದನ್ನು ಬಿಟ್ಟುಬಿಟ್ಟಿದೆ ಎಂದು ವಿಶ್ಲೇಷಣೆ ಹೇಳಿಕೊಂಡಿದೆ.ಈ ಉತ್ತಮ ವಿಶ್ಲೇಷಣೆಯು ಚುನಾವಣಾ ಆಯೋಗವು ನಡೆಸಿದ ಸಂಪೂರ್ಣ ಪ್ರಕ್ರಿಯೆ ಸಂಪೂರ್ಣತೆ, ಸಮಾನತೆ ಮತ್ತು ನಿಖರತೆಯ ಮೂರು ಅಂಶಗಳಲ್ಲಿ ವಿಫಲವಾಗಿದೆ ಎಂದು ತೋರಿಸುತ್ತದೆ ಎಂದು ರಮೇಶ್‌ ಎಕ್‌್ಸ ಮಾಡಿದ್ದಾರೆ.

ಮತದಾರರ ಪಟ್ಟಿಯಿಂದ ನಾಗರಿಕರಲ್ಲದವರನ್ನು ತೆಗೆದುಹಾಕಲು ಪ್ರಕ್ರಿಯೆಯ ಅಗತ್ಯದ ಬಗ್ಗೆ ಹೆಚ್ಚಿನದನ್ನು ಹೇಳಲಾಗಿದೆ. ಬಿಹಾರದಲ್ಲಿ ಅಂತಹ ಎಷ್ಟು ನಾಗರಿಕರಲ್ಲದವರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬುದರ ಕುರಿತು ದೇಶಕ್ಕೆ ಅರಿವು ಮೂಡಿಸುವ ಸಮಗ್ರತೆ ಅಥವಾ ಧೈರ್ಯ ಆಯೋಗಕ್ಕೆ ಇಲ್ಲ ಎಂದು ಅವರು ಹೇಳಿದರು.

ಅನನ್ಯಾ ಭಟ್‌ ಪ್ರಕರಣದಲ್ಲಿ ತಾನು ತಪ್ಪು ಮಾಡಿದ್ದೇನೆ, ಕ್ಷಮೆ ಕೇಳುತ್ತೇನೆ : ಸುಜಾತಾ ಭಟ್‌ ಪಶ್ಚಾತಾಪ

ಬೆಂಗಳೂರು,ಅ.7- ವಿದ್ಯಾರ್ಥಿನಿ ಅನನ್ಯಾ ಭಟ್‌ ಪ್ರಕರಣದಲ್ಲಿ ತಾನು ತಪ್ಪು ಮಾಡಿದ್ದು ಈ ಬಗ್ಗೆ ಕ್ಷಮೆ ಕೇಳುತ್ತೇನೆ. ನನ್ನ 60 ವರ್ಷದ ಜೀವನದಲ್ಲಿ ಇದೊಂದು ನನಗೆ ಕಪ್ಪು ಚುಕ್ಕಿ ಎಂದು ಸುಜಾತಾ ಭಟ್‌ ಪಶ್ಚಾತಾಪ ಹೊರಹಾಕಿದ್ದಾರೆ.

ಇನ್ನಾದರೂ ನನಗೆ ಉತ್ತಮ ಜೀವನ ನಡೆಸುವ ಆಸೆಯಿದೆ. ಧರ್ಮಸ್ಥಳಕ್ಕೆ ಹೋಗಿ ತಪ್ಪು ಕಾಣಿಕೆ ಹಾಕುತ್ತೇನೆ, ಧರ್ಮಸ್ಥಳಕ್ಕೆ ಹೋಗಿ ಕಲ್ಲು ಒಡೆಯುತ್ತೇನೆ ಎಂದು ಹೇಳಿದ್ದೇನೆ, ನನ್ನಿಂದ ತಪ್ಪಾಗಿದೆ. ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ನಟನ ಸೋದರನಿಗೂ ನನಗೂ ಯಾವುದೇ ಸಂಬಂಧವಿಲ್ಲ, ನಟನ ಸೋದರನ ಮನೆಯಲ್ಲಿ ವಾಸಂತಿ ಇರಬಹುದು ಎಂಬ ಶಂಕೆ ನನಗಿದೆ. ಅದನ್ನು ಎಸ್‌‍ಐಟಿ ತನಿಖೆ ವೇಳೆ ಹೇಳಿದ್ದೆ, ಅವರು ತನಿಖೆ ಮಾಡಬಹುದು. ನಾನು ತಪ್ಪು ಮಾಡುಬಿಟ್ಟೆ. ಕೆಲವರ ಮಾತು ಕೇಳಿ ಕೆಟ್ಟಿದ್ದೇನೆ. ನನ್ನ ಜೀವನವೇ ಹಾಳಾಗಿ ಹೋಯಿತು. ದೇವರ ಬಳಿ ಕ್ಷಮೆ ಕೇಳುವೆ.

ಶೀಘ್ರವೇ ಧರ್ಮಸ್ಥಳಕ್ಕೆ ಹೋಗುತ್ತೇನೆ. ದೇವಸ್ಥಾನದ ಮುಂದೆ ದೀರ್ಘದಂಡ ನಮಸ್ಕಾರ ಹಾಕುತ್ತೇನೆ. ಪಾಪಪ್ರಜ್ಞೆ ನನ್ನನ್ನು ಕಾಡುತ್ತಿದೆ. ಅನನ್ಯ ಭಟ್‌ ನನ್ನ ಮಗಳು ಎಂದು ಸುಳ್ಳು ಹೇಳಿದೆ. ಸುಳ್ಳಿನ ಮೇಲೆ ಸುಳ್ಳನ್ನೇ ಸೃಷ್ಟಿಸಿದೆ. ಶಿವಶಂಕರ್‌ ಎಂಬುವರು ಹೇಳಿದರು. ನನ್ನದು ಸ್ವಲ್ಪ ಜಮೀನಿನ ವಿಚಾರವಿತ್ತು. ಹೀಗಾಗಿ ನಾನು ತಪ್ಪು ಮಾಡಿದ್ದೇನೆ. ಬುರುಡೆ ಗ್ಯಾಂಗ್‌ಗೂ, ನನಗೂ ಸಂಬಂಧವಿಲ್ಲ. ಅವರ ಮಾತು ಕೇಳಿಯೇ ನಾನು ಕೆಟ್ಟೆ. ಇನ್ನು ನನ್ನ ಮನೆ ಬಾಗಿಲಿಗೆ ಅವರು ಬಂದರೂ ನಾನು ಒಳಗೆ ಬಿಡೊಲ್ಲ ಎಂದು ಸುಜಾತಾ ಭಟ್‌ ಹೇಳಿದ್ದಾರೆ.

ಈಗ ನನಗೆ ಬದುಕಲು ಕಷ್ಣವಾಗುತ್ತಿದೆ. ಜೀವನ ನಡೆಸಲು ಹಣ ಇಲ್ಲ. ಎಸ್‌‍ಐಟಿ ಅವರೇ ನನಗೆ ಮೊಬೈಲ್‌ ಕೊಡಿಸಿದ್ದರು. ಅವರ ಮುಂದೆ ಎಲ್ಲಾ ಸತ್ಯವನ್ನು ಹೇಳಿದ್ದೇನೆ. ಇದರಿಂದ ನನಗೆ ಮುಕ್ತಿ ಸಿಕ್ಕರೆ ಸಾಕು. ಅನನ್ಯಾ ಭಟ್‌ ಕಥೆ ಮುಗಿದ ಅಧ್ಯಾಯ. ಇನ್ನು ನನ್ನ ಹೊಸ ಜೀವನ ಧರ್ಮಸ್ಥಳಕ್ಕೆ ಹೋಗಿ ಬಂದೇಲೆ ಪ್ರಾರಂಭವಾಗುತ್ತದೆ ಎಂದು ಕಣ್ಣೀರು ಹಾಕಿದ್ದಾರೆ.
ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಅಬ್ಬರಿಸಿದ್ದ ಸುಜಾತಾ ಭಟ್‌ ಇದೀಗ ಸತ್ಯ ಹೊರಗೆ ಬಂದ ಮೇಲೆ ಮೌನಕ್ಕೆ ಶರಣಾಗಿದ್ದಾರೆ. ಮಾಡಿದ ತಪ್ಪನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.

ಧರ್ಮಸ್ಥಳ ಪ್ರಕರಣದ ತನಿಖೆಯ ನಡುವೆಯೇ ಅನನ್ಯಾ ಭಟ್‌ ಪ್ರಕರಣ ಕೂಡ ಸದ್ದು ಮಾಡಿತ್ತು. ಇಲ್ಲದ ಮಗಳ ಬಗ್ಗೆ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದ ಸುಜಾತಾ ಭಟ್‌ ತಾನೇ ಹೆಣೆದ ಬಲೆಯಲ್ಲಿ ಬಿದ್ದಿದ್ದರು.

ಎಸ್‌‍ಐಟಿ ತನಿಖೆಯ ಜಾಡು ಹಿಡಿದು ಆಳಕ್ಕೆ ಇಳಿದ ನಂತರ ಅಸಲಿ ಸತ್ಯಾಂಶ ಹೊರಬಿದ್ದಿತ್ತು. ಮಾಧ್ಯಮಗಳ ಮುಂದೆ ಬಂದ ಸುಜಾತಾ ನಾನು ಹೇಳಿದ್ದೆಲ್ಲಾ ಕಟ್ಟುಕಥೆ ಎಂದು ಕ್ಷಮೆ ಕೇಳುವ ಬಗ್ಗೆ ಮಾತನಾಡಿದ್ದಾರೆ.

ಅನನ್ಯಾ ಭಟ್‌ ಬಗ್ಗೆ ಕಟ್ಟುಕತೆ ಕಟ್ಟಿ ಸುಜಾತಾ ಭಟ್‌ ಎಲ್ಲರನ್ನು ನಂಬಿಸುವ ಕೆಲಸ ಮಾಡಿದ್ದರು. ಬಳಿಕ ಇದೆಲ್ಲವನ್ನು ಜಮೀನು ವಿಚಾರವಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಇದೀಗ ಅನನ್ಯಾ ಭಟ್‌ ಕೇಸ್‌‍ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ತನಿಖೆಯನ್ನು ಎಸ್‌‍ಐಟಿ ಮುಂದುವರಿಸಿದೆ.

ಉತ್ತರ ಪ್ರದೇಶ : ಚಲಿಸುವ ವಾಹನದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಝಾನ್ಸಿ, ಆ. 7 (ಪಿಟಿಐ) ಉತ್ತರ ಪ್ರದೇಶದಲ್ಲಿ ಚಲಿಸುವ ವಾಹನದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ವರದಿಯಾಗಿದೆ. ಲಲಿತಪುರ ಜಿಲ್ಲೆಯಲ್ಲಿ ಚಲಿಸುವ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ನೀಡಿದ ದೂರಿನಲ್ಲಿ, ನಿತಿನ್‌ ಠಾಕೂರ್‌ (22) ಮತ್ತು ಅವನ ಅಪರಿಚಿತ ಸಹಚರರು ತನ್ನ ವಾಹನಕ್ಕೆ ಬಲವಂತವಾಗಿ ಸೇರಿಸಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ದೂರು ನೀಡಿದ್ದಾರೆ ಎಂದು ಲಲಿತಪುರದ ಜಖೌರಾ ಪೊಲೀಸ್‌‍ ಠಾಣೆಯ ಸ್ಟೇಷನ್‌ ಹೌಸ್‌‍ ಆಫೀಸರ್‌ ಸುರೇಂದ್ರ ಸಿಂಗ್‌ ತಿಳಿಸಿದ್ದಾರೆ.

ಠಾಕೂರ್‌ ಮತ್ತು ಅಪರಿಚಿತ ಯುವಕನ ವಿರುದ್ಧ ಬಿಎನ್‌ಎಸ್‌‍ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಕಾಮುಕರ ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ.ಪೊಲೀಸರ ಪ್ರಕಾರ, ಬಾಲಕಿ ಕಳೆದ ಎರಡು ಮೂರು ತಿಂಗಳಿನಿಂದ ಠಾಕೂರ್‌ ಜೊತೆ ಸಂಪರ್ಕದಲ್ಲಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಆರೋಪಿಗಳ ಬಂಧನ ಮತ್ತು ತನಿಖೆಯ ನಂತರ ಇಡೀ ವಿಷಯ ಬೆಳಕಿಗೆ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಪ್ರೀಂ ಮುಖ್ಯ ನ್ಯಾಯಮೂರ್ತಿಯವರ ಮೇಲೆ ಶೂ ಎಸೆದ ವಕೀಲನನ್ನು ಬಿಟ್ಟು ಕಳುಹಿಸಿರುವುದೇಕೆ.. ? : ಡಾ. ಜಿ.ಪರಮೇಶ್ವರ್‌

ಬೆಂಗಳೂರು, ಅ.7- ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆದ ವಕೀಲನನ್ನು ತಕ್ಷಣವೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಆತನನ್ನು ಬಿಟ್ಟು ಕಳುಹಿಸಿರುವುದೇಕೆ? ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟಿನಲ್ಲಿ ಅದರಲ್ಲೂ ಮುಖ್ಯನ್ಯಾಯ ಮೂರ್ತಿಗಳ ಮೇಲೆಯೇ ಚಪ್ಪಲಿ ಎಸೆಯುತ್ತಾರೆ ಎಂದರೆ, ಅಲ್ಲಿ ಗಂಭೀರವಾದ ಭದ್ರತಾ ಲೋಪವಾಗಿದೆ. ಈ ಘಟನೆ ಅಕ್ಷಮ್ಯ ಎಂದರು.ಇಲ್ಲಿ ಗವಾಯಿ ಅವರ ವೈಯಕ್ತಿಕ ಪ್ರಶ್ನೆ ಬರುವುದಿಲ್ಲ. ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಹುದ್ದೆಯ ಗೌರವದ ಪ್ರಶ್ನೆ ಇದೆ. ಸಂವಿಧಾನಕ್ಕೆ ಮಾಡಿದ ಅಪಮಾನ ಎಂದು ವ್ಯಾಖ್ಯಾನಿಸಿದರು.

ಸುಪ್ರೀಂಕೋರ್ಟಿನಲ್ಲೇ ಈ ಘಟನೆ ನಡೆಯುತ್ತದೆ ಎಂದರೆ ಸದರಿ ವಕೀಲರನ್ನು ತಕ್ಷಣವೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಬಿಟ್ಟು ಕಳುಹಿಸಿದ್ದೇಕೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಸನಾತನ ಧರ್ಮಕ್ಕೆ ಸಂಬಂಧಪಟ್ಟಂತೆ ಆತ ಆಡಿರುವ ಮಾತುಗಳು ಆಕ್ಷೇಪಾರ್ಹವಾಗಿದೆ. ಯಾವುದೇ ನ್ಯಾಯಮೂರ್ತಿಗಳು ಪ್ರಚಲಿತಲಿರುವ ಕಾನೂನುಗಳ ಆಧಾರದ ಮೇಲೆಯೇ ತೀರ್ಪು ನೀಡುತ್ತಾರೆ. ಅದನ್ನು ಮುಂದಿಟ್ಟುಕೊಂಡು ಚಪ್ಪಲಿ ಎಸೆಯುವುದು ಖಂಡನೀಯ ಎಂದರು.

ಮುಖ್ಯನ್ಯಾಯಮೂರ್ತಿಯವರು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ. ಆ ಸ್ಥಾನಕ್ಕೆ ಬರಬೇಕಾದರೆ ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಅದು ದೊಡ್ಡ ಸಾಧನೆಯೂ ಹೌದು. ಇಡೀ ಸಮುದಾಯದ ಪ್ರತೀಕವಾಗಿರುತ್ತಾರೆ. ಈ ಘಟನೆಯನ್ನು ದೇಶ ಖಂಡಿಸಬೇಕು, ತಕ್ಕ ಪ್ರತಿಕ್ರಿಯೆ ನೀಡಬೇಕು. ಮುಂದೆ ಈ ರೀತಿ ಆಗದಂತೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಸಂಬಂಧ ಪಟ್ಟ ವ್ಯವಸ್ಥೆಗೆ ತಾವು ಆಗ್ರಹಿಸುವುದಾಗಿ ಹೇಳಿದರು.

ರಾಜ್ಯದಲ್ಲಿ ರಾಜಕೀಯ ಬದಲಾವಣೆ ಮಾಡುವುದಾದರೆ ಬಿಹಾರದ ವಿಧಾನಸಭಾ ಚುನಾವಣೆವರೆಗೂ ಕಾಯುವುದಿಲ್ಲ. ಹೈಕಮಾಂಡ್‌ ಬಯಸಿದರೆ, ತಕ್ಷಣವೇ ನಿರ್ಧಾರ ತೆಗೆದುಕೊಳ್ಳುತ್ತದೆ. ರಾಜ್ಯದಲ್ಲಿ ನೆರೆಯ ಪರಿಸ್ಥಿತಿ ಇದೆ. ಅದಕ್ಕೆ ತಕ್ಷಣ ಸ್ಪಂದಿಸಬೇಕಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದಲ್ಲೂ ಅನೇಕ ಸಮಸ್ಯೆಗಳಿವೆ. ಅದರತ್ತ ಗಮನ ಹರಿಸಬೇಕು. ಅದನ್ನು ಬಿಟ್ಟು ರಾಜಕೀಯ ಬದಲಾವಣೆ ಚರ್ಚೆ ಬಗ್ಗೆ ಅನಗತ್ಯ ಎಂದು ಹೇಳಿದರು.
ಅಧಿಕಾರ ಹಂಚಿಕೆಯ ಗೊಂದಲಗಳನ್ನು ಬಗೆಹರಿಸಿ ಎಂದು ಸಚಿವ ಸತೀಶ್‌ ಜಾರಕಿಹೊಳಿ ನೀಡಿರುವ ಹೇಳಿಕೆ ಸರಿಯಿದೆ. ಈ ಬಗ್ಗೆ ದಿನನಿತ್ಯ ಒಂದೊಂದು ರೀತಿಯ ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್‌ ಮಧ್ಯೆ ಪ್ರವೇಶಿಸಿ ಬಗೆಹರಿಸಿದರೆ ಗೊಂದಲಗಳು ನಿವಾರಣೆಯಾಗುತ್ತವೆ ಎಂದರು.

ಲಿಂಗಾಯತ, ವೀರಶೈವ ಪ್ರತ್ಯೇಕ ಎಂದು ಆ ಸಮುದಾಯದ ನಾಯಕರೇ ಹೇಳುತ್ತಿದ್ದಾರೆ. ಮೊದಲು ಆ ಬಗ್ಗೆ ಚರ್ಚೆ ಮಾಡಿ, ಒಮತದ ಅಭಿಪ್ರಾಯ ರೂಢಿಗೊಳ್ಳಬೇಕು. ನಂತರ ಧರ್ಮದ ಪ್ರತ್ಯೇಕದ ಸ್ಥಾನಮಾನಗಳ ಬಗ್ಗೆ ನಿರ್ಧಾರಗಳಾಗಬಹುದು ಎಂದರು.

ಲಿಂಗಾಯತ ಸಮುದಾಯ ಬಸವ ಸಾಂಸ್ಕೃತಿಕ ಅಭಿಯಾನ ನಡೆಸಿ, ಸಮಾರೋಪ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಾಗ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಭಾಗವಹಿಸಿದ್ದಾರೆ. ಅಲ್ಲಿ ಪ್ರತ್ಯೇಕ ಧರ್ಮದ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳನ್ನು ಸಿದ್ದರಾಮಯ್ಯ ನೀಡಿಲ್ಲ. ಆ ಸಮುದಾಯದವರೇ ಪ್ರಸ್ತಾಪ ಮಾಡಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಮೆಟ್ರೋಗೆ ಬಸವಣ್ಣ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಅನಂತರ ಅಂತಿಮ ನಿರ್ಧಾರ ತೆಗೆದುಕೊಳುತ್ತೇವೆ ಎಂದರು.
ಪೊಲೀಸ್‌‍ ಇಲಾಖೆಯಲ್ಲಿ ತೆರವಾಗುವ ಹುದ್ದೆಗಳಿಗೆ ನೇಮಕಾತಿ ಮಾಡಲು ಉನ್ನತ ಅಧಿಕಾರಿಗಳ ಸಮಿತಿ ಇದೆ. ಇನ್‌್ಸಪೆಕ್ಟರ್‌ಗಳ ಮೇಲ್ಪಟ್ಟ ಹುದ್ದೆಗಳ ವರ್ಗಾವಣೆಯನ್ನು ಸದರಿ ಸಮಿತಿ ನಿರ್ವಹಿಸುತ್ತದೆ. ಕಾನ್‌್ಸಟೆಬಲ್‌ಗಳು, ಪಿಎಸ್‌‍ಐಗಳ ವರ್ಗಾವಣೆಗಳನ್ನು ಐಜಿ ಹಂತದಲ್ಲೇ ನಿಭಾಯಿಸಲಾಗುತ್ತದೆ. ಇಂತಹ ವಿಚಾರಗಳು ಹೈಕಮಾಂಡ್‌ ಗಮನಕ್ಕೆ ಹೋಗುವುದಿಲ್ಲ ಎಂದರು.

ನಿನ್ನೆ ನಾನೇ 130 ಇನ್‌್ಸಪೆಕ್ಟರ್ಸ್‌ ಹಾಗೂ 30ಕ್ಕೂ ಹೆಚ್ಚು ಡಿವೈಎಸ್‌‍ಪಿ ಗಳನ್ನುವರ್ಗಾವಣೆ ಮಾಡಿದ್ದೇನೆ. ಈ ಸಂದರ್ಭದಲ್ಲಿ ಕೆಲವರು ಹೇಳಿದ ರೀತಿ ವರ್ಗಾವಣೆಗಳು ಸಾಧ್ಯವಾಗದೇ ಇರಬಹುದು, ಆದರೆ ಆಡಳಿತ ದೃಷ್ಟಿಯಿಂದ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ,7-ಅಪರಾಧ ಚಟುವಟಿಕೆಗಳು ಜಿಲ್ಲೆಯಲ್ಲಿ ಹೆಚ್ಚುತಿದ್ದು, ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಅವರು ರೌಡಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಕಿಡಿಗೇಡಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರವೇ ಇಲ್ಲವಾಗಿದೆ ಮತ್ತು ಅಲ್ಲಿ ಒಂದು ಕುಟುಂಬದ ಆಡಳಿತ ನಡೆಯುತ್ತಿದೆ. ಅಲ್ಲಿನ ಎಲ್ಲ ನೀಚ ಕೆಲಸಗಳೂ ಅವರ ಅಂಕೆಯಲ್ಲಿ ನಡೆಯುತ್ತಿವೆ ಎಂಬ ಅನುಮಾನ ಜನರಿಗೆ ಬಂದಿದೆ ಎಂದು ದೂರಿದ್ದಾರೆ.

ಭದ್ರಾವತಿಯಲ್ಲಿ ಎಲ್ಲಿ ಇಸ್ಪೀಟ್‌ ಆಡಬೇಕು, ಎಲ್ಲಿ ಕ್ಲಬ್‌ ಇರಬೇಕು ಎಂದು ನಿರ್ಧಾರ ಆಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಬಾರ್‌ಗಳ ಮುಂದೆ ಕೊಲೆಗಳಾಗುತ್ತಿವೆ. ವಿಶ್ವೇಶ್ವರಯ್ಯರ ಕನಸಿನ ಉಕ್ಕಿನ ನಗರಿ ಇಂದು ಇಸ್ಪೀಟ್‌ ಇತ್ಯಾದಿ ದುಷ್ಕೃತ್ಯಗಳ ಕೇಂದ್ರವಾಗುತ್ತಿದೆ ಎಂದು ಕ್ರಮ ಕೈಗೊಳ್ಳದ ದೋರಣೆಯನ್ನು ಟೀಕಿಸಿದರು.

ಬೆಂಗಳೂರು ಮೆಟ್ರೊ ರೈಲು ನಿಲ್ದಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣನವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಇದನ್ನು ಸಂಪೂರ್ಣವಾಗಿ ಸ್ವಾಗತಿಸುತ್ತೇನೆ. ಯಾವುದೇ ಸರ್ಕಾರವಾದರೂ ಬಸವಣ್ಣನವರ ತತ್ವ ಸಿದ್ದಾಂತದಂತೆ ಆಡಳಿತ ನಡೆಸಬೇಕು. ಆದರೆ, ನಮ ಮುಖ್ಯಮಂತ್ರಿ ಅವರು ಬರೀ ಭಾಷಣ ಮಾಡುತ್ತಾರೆಯೇ ವಿನಾ ಅದಕ್ಕೆ ತಕ್ಕಂತೆ ಕೆಲಸ ಮಾಡುವುದಿಲ್ಲ. ಬಸವಣ್ಣನವರ ವಿಚಾರಧಾರೆಗಳನ್ನು ಅವರು ಅಳವಡಿಸಿಕೊಂಡಿಲ್ಲ. ಹೀಗೆ ಮಾಡಿದ್ದರೆ ರಾಷ್ಟ್ರದಲ್ಲಿ ಕಾಂಗ್ರೆಸ್‌‍ಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಕುಟುಕಿದರು.

ಧರ್ಮದ ವಿಚಾರದಲ್ಲಿಯೂ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಮತಗಳ್ಳತನ ಎಂದು ಕಾಂಗ್ರೆಸ್‌‍ನವರು ಹೇಳುತ್ತಿರುವುದು ಒಂದು ರಾಜಕಾರಣವಾಗಿದೆ. ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮತದಾರರ ಪಟ್ಟಿ ಪರಿಷ್ಕರಣೆ ಆಗಬೇಕಿದೆ. ಇಡೀ ದೇಶದಲ್ಲಿ ಈ ಪ್ರಕ್ರಿಯೆ ಆಗಲಿದೆ. ರಾಹುಲ್‌ ಗಾಂಧಿಯವರು ಬಿಹಾರದಲ್ಲಿ ನಡೆಸಿರುವ ಪಾದಯಾತ್ರೆ ಉಪಯೋಗಕ್ಕೆ ಬರುವುದಿಲ್ಲ ಫಲಿತಾಂಶ ಬಂದ ಮೇಲೆ ಎಲ್ಲವೂ ಬಹಿರಂಗವಾಗಲಿದೆ ಎಂದು ಹೇಳಿದರು.

BIG NEWS : ವಿದ್ಯಾರ್ಥಿಗಳು-ಪೋಷಕರಿಗೆ ಗ್ಯಾರಂಟಿ ಸರ್ಕಾರದಿಂದ ಶಾಕ್ : SSLC ಪರೀಕ್ಷಾ ಶುಲ್ಕ ಹೆಚ್ಚಳ

ಬೆಂಗಳೂರು,ಅ.7- ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್‌‍ಎಸ್‌‍ಎಲ್‌ಸಿ ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ, ವಿದ್ಯಾರ್ಥಿ ಮತ್ತು ಪೋಷಕರಿಗೆ ದೊಡ್ಡ ಆಘಾತ ನೀಡಿದೆ.
ಈ ಬದಲಾವಣೆಗೆ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಈ ಹೊಸ ಶುಲ್ಕ ವಿನ್ಯಾಸವು ಎಲ್ಲಾ ವರ್ಗದ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ಪ್ರಥಮ ಬಾರಿಗೆ ಪರೀಕ್ಷೆಗೆ ಬರುವ ನಿಯಮಿತ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹಳೆಯ 676 ರೂ.ಗಳಿಂದ 710 ರೂ.ಗೆ ಏರಿಕೆ ಮಾಡಲಾಗಿದೆ. ಇದರೊಂದಿಗೆ ಖಾಸಗಿ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕದಲ್ಲೂ ಏರಿಕೆ ಮಾಡಲಾಗಿದೆ.

ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಖಾಸಗಿ ಅಭ್ಯರ್ಥಿಗಳಿಗೆ, ನೋಂದಣಿ ಮತ್ತು ಅರ್ಜಿ ಶುಲ್ಕವನ್ನು 236 ರೂ.ಗಳಿಂದ 248 ರೂ.ಗೆ ಏರಿಕೆ ಮಾಡಲಾಗಿದೆ. ಇದೇ ವೇಳೆ, ಈಗಾಗಲೇ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ 69 ರೂ.ನಿಂದ 72 ರೂ.ಗೆ ಹೆಚ್ಚಾಗಿದೆ.

ಪುನರಾವರ್ತಿತ ಶಾಲಾ ಮತ್ತು ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕವನ್ನು ಕೂಡಾ ಪರಿಷ್ಕರಿಸಲಾಗಿದೆ. ಇನ್ನು ಒಂದೇ ವಿಷಯಕ್ಕೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳು 427 ರೂ. ಬದಲಾಗಿ 448 ರೂ. ಪಾವತಿಸಬೇಕಾಗುತ್ತದೆ. ಎರಡು ವಿಷಯಗಳಿಗೆ ಪರೀಕ್ಷೆ ಬರೆಯುವವರು 532 ರೂ. ಬದಲಾಗಿ 559 ರೂ. ಪಾವತಿಸಬೇಕಾಗುತ್ತದೆ. ಮೂರು ಮತ್ತು ಮೂರಕ್ಕಿಂತ ಹೆಚ್ಚು ವಿಷಯಗಳಿಗೆ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಶುಲ್ಕ 716 ರೂ. ಹೆಚ್ಚಿಸಿ 752 ರೂ. ಏರಿಕೆ ಮಾಡಲಾಗಿದೆ.

ಪೋಷಕರ ವಿರೋಧ
2025-26ನೇ ಸಾಲಿನ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದ್ದು, ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮಾಜಾಯಿಷಿ ನೀಡಿದ್ದು, ಉತ್ತರಪತ್ರಿಕೆಗಳ ಮೌಲ್ಯಮಾಪನ ಮತ್ತು ಇತರ ಸಂಬಂಧಿತ ಆಡಳಿತಾತಕ ವೆಚ್ಚಗಳು ಕಾಲಕಾಲಕ್ಕೆ ಏರುತ್ತಿರುವುದರಿಂದ ಈ ಕ್ರಮ ಅಗತ್ಯವೆಂದು ಪರಿಗಣಿಸಲಾಗಿದೆ. ಹಲವು ವರ್ಷಗಳಿಂದ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿರಲಿಲ್ಲ. ಆದರೆ ಇದೀಗ ವೆಚ್ಚಗಳು ಹೆಚ್ಚಳವಾಗುತ್ತಿರುವುದರಿಂದ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದೆ.

ಪರೀಕ್ಷಾ ಶುಲ್ಕ
ಪ್ರಥಮ ಬಾರಿ – 676 ರೂ. ನಿಂದ 710 ರೂ.
ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ 236ರಿಂದ 248 ರೂ.
ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ 69ರಿಂದ ನಿಂದ 72 ರೂ.
ಪುನರಾವರ್ತಿತ ಶಾಲಾ/ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ
ಒಂದು ವಿಷಯ- 427 ರೂ.ನಿಂದ 448 ರೂ.
ಎರಡು ವಿಷಯ -532 ರೂ.ನಿಂದ 559 ರೂ.
ಮೂರು ಮತ್ತು ಮೂರಕ್ಕಿಂತ ಹೆಚ್ಚಿದ್ದರೆ, 716 ರೂ.ನಿಂದ 752 ರೂಗಳು.