Home Blog Page 63

ನಾಳೆ ಭಾರತಕ್ಕೆ ಬರುತ್ತಿದ್ದಾರೆ ಯುಕೆ ಪ್ರಧಾನಿ ಸ್ಟಾರ್ಮರ್‌

ಲಂಡನ್‌, ಅ. 7 (ಪಿಟಿಐ) ಪ್ರಧಾನಿ ಕೀರ್‌ ಸ್ಟಾರ್ಮರ್‌ ಅವರ ಭಾರತ ಭೇಟಿಯು ಉದಯೋನ್ಮುಖ ತಂತ್ರಜ್ಞಾನಗಳಂತಹ ಹಂಚಿಕೆಯ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಲಿದೆ ಎಂದು ಯುಕೆ ಕೃತಕ ಬುದ್ಧಿಮತ್ತೆ ಮತ್ತು ಆನ್‌ಲೈನ್‌‍ ಸುರಕ್ಷತೆ ಸಚಿವ ಕನಿಷ್ಕ ನಾರಾಯಣ್‌ ಹೇಳಿದ್ದಾರೆ.

ನಾಳೆ ನಿಗದಿಯಾಗಿರುವ ಸ್ಟಾರ್ಮರ್‌ ಅವರ ಮೊದಲ ಅಧಿಕೃತ ಭಾರತ ಪ್ರವಾಸಕ್ಕೂ ಮುನ್ನ ಪಿಟಿಐ ಜೊತೆ ಮಾತನಾಡಿದ ಅವರು, ತಂತ್ರಜ್ಞಾನ ಮತ್ತು ಇತರ ಪ್ರಮುಖ ಕ್ಷೇತ್ರಗಳಲ್ಲಿ ಭಾರತ-ಯುಕೆ ಸಹಯೋಗಕ್ಕಾಗಿ ಈಗಾಗಲೇ ಅಸಾಧಾರಣ ಅಡಿಪಾಯ ಹಾಕಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಯುಕೆ ಪ್ರಧಾನಿಯವರ ಎರಡು ದಿನಗಳ ಭೇಟಿಯಲ್ಲಿ, ಮುಂಬೈನಲ್ಲಿ ನಡೆಯುವ ಆರನೇ ಆವೃತ್ತಿಯ ಗ್ಲೋಬಲ್‌ ಫಿನ್‌ಟೆಕ್‌‍ ಫೆಸ್ಟ್‌ನಲ್ಲಿ ಇಬ್ಬರೂ ನಾಯಕರು ಪ್ರಮುಖ ಭಾಷಣಗಳನ್ನು ನೀಡಲಿದ್ದಾರೆ ಮತ್ತು ಉದ್ಯಮ ತಜ್ಞರು, ನೀತಿ ನಿರೂಪಕರು ಮತ್ತು ನಾವೀನ್ಯಕಾರರೊಂದಿಗೆ ತೊಡಗಿಸಿಕೊಳ್ಳಲಿದ್ದಾರೆ.
ಪ್ರಧಾನಿಯವರ ಭಾರತ ಭೇಟಿಯು ಸಂಪರ್ಕ, ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ನಮ್ಮ ಹಂಚಿಕೆಯ ಆಸಕ್ತಿಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತದೆ ಎಂದು ನಾರಾಯಣ್‌ ಹೇಳಿದರು.

ಭಾರತ ಮತ್ತು ಯುಕೆ ಸಂಶೋಧನೆಯ ಮೇಲೆ ಮತ್ತು ಮುಖ್ಯವಾಗಿ, ಈ ತಂತ್ರಜ್ಞಾನಗಳ ಪ್ರಜಾಪ್ರಭುತ್ವ ಅಳವಡಿಕೆಯ ಮೇಲೆ ಗಮನ ಹರಿಸುತ್ತವೆ. ಈ ಭೇಟಿಯು ಪ್ರಾಯೋಗಿಕ ಸಹಯೋಗದೊಂದಿಗೆ ಹಂಚಿಕೆಯ ಗಮನವನ್ನು ಇನ್ನಷ್ಟು ಆಳಗೊಳಿಸುವ ಬಗ್ಗೆ ಎಂದು ಅವರು ಹೇಳಿದರು.ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ವೇಲ್‌್ಸನಿಂದ ಸಂಸತ್ತಿನ ಮೊದಲ ಭಾರತೀಯ ಮೂಲದ ಸದಸ್ಯರಾಗಿ ಆಯ್ಕೆಯಾದಾಗ ಇತಿಹಾಸ ನಿರ್ಮಿಸಿದ ಬಿಹಾರ ಮೂಲದ ಲೇಬರ್‌ ಸಂಸದರು, ತಂತ್ರಜ್ಞಾನ ವಲಯವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಕೇಂದ್ರಬಿಂದುಗಳಲ್ಲಿ ಒಂದಾಗಿರುವುದು ಮತ್ತು ಕಾಯ್ದಿರಿಸಿದ ಸಂಬಂಧಗಳ ಅಪಾರ ಸಾಮರ್ಥ್ಯದ ಬಗ್ಗೆ ಉತ್ಸುಕರಾಗಿದ್ದಾರೆ.

ನಮ್ಮ ಎರಡೂ ದೇಶಗಳಲ್ಲಿ, ಸಹಯೋಗಕ್ಕಾಗಿ ನಾವು ಅಸಾಧಾರಣ ಅಡಿಪಾಯವನ್ನು ಹೊಂದಿದ್ದೇವೆ: ಸಂಶೋಧನಾ ಪಾಲುದಾರಿಕೆಗಳು, ಆಳವಾದ ಮತ್ತು ವೈಯಕ್ತಿಕ ಇತಿಹಾಸಗಳು ಮತ್ತು ಭವಿಷ್ಯದ ನಿರಂತರ ಅನ್ವೇಷಣೆ. ಅನ್ವಯಿಕ ಮತ್ತು ಆನ್‌ಲೈನ್‌‍ ಸುರಕ್ಷತಾ ಸಂಶೋಧನೆಗೆ, ನಮ್ಮ ಸಂಸ್ಥೆಗಳು ಮತ್ತು ಸಾರ್ವಜನಿಕ ಸೇವೆಗಳಲ್ಲಿ ಉತ್ಪನ್ನಗಳನ್ನು ಅಳವಡಿಸಿಕೊಳ್ಳಲು ಮತ್ತು ಮತ್ತು ಆನ್‌ಲೈನ್‌‍ ಅನುಭವಗಳು ಭಾರತ ಮತ್ತು ಯುಕೆ ಪ್ರೀತಿಸುವ ಪ್ರಜಾಪ್ರಭುತ್ವ ಮೌಲ್ಯಗಳನ್ನು ಪೂರೈಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ನಾವು ಇವುಗಳನ್ನು ನಿರ್ದಿಷ್ಟ ಅವಕಾಶಗಳಾಗಿ ಹರಿಸಬಹುದು ಎಂದು ಅವರು ಹೇಳಿದರು.

ನಾಳೆ ಭಾರತಕ್ಕೆ ತೆರಳಲಿರುವ ಸ್ಟಾಮರ್‌ ಅವರು, ವ್ಯಾಪಾರ, ತಂತ್ರಜ್ಞಾನ ಮತ್ತು ಹೂಡಿಕೆ ಸಂಬಂಧಗಳನ್ನು ಹೆಚ್ಚಿಸುವ ಧ್ಯೇಯದೊಂದಿಗೆ ಸಿಇಒಗಳು, ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಸಾಂಸ್ಕೃತಿಕ ಮುಖ್ಯಸ್ಥರ 100 ಕ್ಕೂ ಹೆಚ್ಚು ಸದಸ್ಯರ ನಿಯೋಗದೊಂದಿಗೆ ಬರಲಿದೆ.ಜುಲೈನಲ್ಲಿ ಮೋದಿ ಅವರ ಯುಕೆ ಭೇಟಿಯ ಸಂದರ್ಭದಲ್ಲಿ ಸಹಿ ಹಾಕಲಾದ ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ ಮತ್ತು ಕಳೆದ ವರ್ಷ ನಡೆದ ದ್ವಿಪಕ್ಷೀಯ ತಂತ್ರಜ್ಞಾನ ಭದ್ರತಾ ಉಪಕ್ರಮದಿಂದ ಉಂಟಾಗುವ ಅವಕಾಶಗಳು ಸ್ಟಾಮರ್ರ್‌- ಮೋದಿ ಮಾತುಕತೆಗಳ ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿರುತ್ತವೆ.

ಭೇಟಿಯ ಬಗ್ಗೆ ಪರಿಚಿತವಾಗಿರುವ ಯುಕೆ ಸರ್ಕಾರಿ ಅಧಿಕಾರಿಗಳ ಪ್ರಕಾರ, ಎರಡೂ ನಾಯಕರು ಭಾರತೀಯ ಮತ್ತು ಬ್ರಿಟಿಷ್‌ ವ್ಯಾಪಾರ ನಾಯಕರೊಂದಿಗೆ ಎರಡೂ ದೇಶಗಳ ನಡುವಿನ ವ್ಯಾಪಾರವನ್ನು ಟರ್ಬೋಚಾರ್ಜ್‌ ಮಾಡಲು, ದ್ವಿಮುಖ ಹೂಡಿಕೆಗಳನ್ನು ಹೆಚ್ಚಿಸಲು ಮತ್ತು ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧದ ವಿಸ್ತಾರವನ್ನು ಎತ್ತಿ ತೋರಿಸುತ್ತಾರೆ.

ಕಳೆದ ತಿಂಗಳು ಬಿಡುಗಡೆಯಾದ ಯುಕೆ ವ್ಯವಹಾರ ಮತ್ತು ವ್ಯಾಪಾರ ಇಲಾಖೆಯ ಇತ್ತೀಚಿನ ಅಂಕಿಅಂಶಗಳು ಭಾರತ ಮತ್ತು ಯುಕೆ ನಡುವಿನ ಸರಕು ಮತ್ತು ಸೇವೆಗಳಲ್ಲಿನ ಒಟ್ಟು ವ್ಯಾಪಾರವನ್ನು ಮಾರ್ಚ್‌ 2025 ರವರೆಗಿನ ನಾಲ್ಕು ತ್ರೈಮಾಸಿಕಗಳಲ್ಲಿ 44.1 ಶತಕೋಟಿ ಪೌಂಡ್‌ಗಳಿಗೆ ತಲುಪಿದೆ, ಇದು ಹಿಂದಿನ ಅವಧಿಗಿಂತ ಶೇ 10.1 ರಷ್ಟು ಹೆಚ್ಚಳವಾಗಿದೆ.

ಅಧಿಕೃತವಾಗಿ ಸಿಇಟಿಎ ಎಂದು ಕರೆಯಲ್ಪಡುವ ಮುಕ್ತ ವ್ಯಾಪಾರ ಒಪ್ಪಂದ ಯುಕೆ ಸರಕುಗಳ ಶೇಕಡಾ 90 ಕ್ಕಿಂತ ಹೆಚ್ಚು ಸುಂಕಗಳನ್ನು ತೆಗೆದುಹಾಕುವ ಮೂಲಕ ಈ ಅಂಕಿಅಂಶಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಮುಂದಿನ ವರ್ಷದ ವೇಳೆಗೆ ವ್ಯಾಪಾರ ಒಪ್ಪಂದದ ಯುಕೆ ಸಂಸದೀಯ ಅನುಮೋದನೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ 2030 ರ ವೇಳೆಗೆ ಕನಿಷ್ಠ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದವರ ಮೇಲೆ ಬಸ್‌‍ ಹರಿದು ಮೂವರ ಭಕ್ತರ ದುರ್ಮರಣ

ಕೊಪ್ಪಳ,ಅ.7-ಪವಿತ್ರ ಪುಣ್ಯ ಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ಹೋಗುತ್ತಿದ್ದವರ ಮೇಲೆ ಖಾಸಗಿ ಬಸ್‌‍ ಹರಿದು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೂಕನಪಳ್ಳಿ ಗ್ರಾಮದ ಬಳಿ ಕಳೆದ ರಾತ್ರಿ ನಡೆದಿದೆ.

ಮೃತರನ್ನು ಗದಗ ಜಿಲ್ಲೆಯ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ನಿವಾಸಿಗಳಾದ ಅನ್ನಪೂರ್ಣ(40), ಪ್ರಕಾಶ್‌(25), ಶರಣಪ್ಪ(19) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನಾಲ್ವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಳ್ಳಿಹಾಳ ಗ್ರಾಮದಿಂದ ಹಲವರು ಕಾಲ್ನಡಿಗೆಯಲ್ಲಿ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ ದೇವಸ್ಥಾನಕ್ಕೆ ಶನಿವಾರ ಪಾದಯಾತ್ರೆ ಆರಂಭಿಸಿದ್ದರು. ರಾತ್ರಿ ಸಿಂದಗಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್‌ ಕೋಚ್‌ ಬಸ್‌‍ ಈ ಪಾದಯಾತ್ರಿಗಳ ಮೇಲೆ ಹರಿದಿದ್ದರಿಂದ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನು ಕೇವಲ ಕೇವಲ 3 ಗಂಟೆ ಕಳೆದಿದ್ದರೆ ಇವರು ದೇವಸ್ಥಾನ ತಲುಪುತ್ತಿದ್ದರು. ಆದರೆ ವಿಧಿಯಾಟದಲ್ಲಿ ಮೂವರು ಜೀವ ಕಳೆದುಕೊಂಡಿರುವುದು ದುರ್ದೈವ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ವಾಹನವನ್ನು ವಶಕ್ಕೆ ಪಡೆದು ಚಾಲಕನನ್ನು ಬಂಧಿಸಿದ್ದಾರೆ.ಘಟನಾ ಸ್ಥಳಕ್ಕೆ ಎಸ್ಪಿ ಡಾ ರಾಮ್‌ ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನಿರಾಬಾದ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್‌‍.ಎಲ್‌.ಭೈರಪ್ಪನವರ ನಿವಾಸಕ್ಕೆ ಸಂಸದ ಯದುವೀರ್‌ ಭೇಟಿ, ಕುಟುಂಬಸ್ಥರಿಗೆ ಸಾಂತ್ವನ

ಮೈಸೂರು,ಅ.7- ಇತ್ತೀಚೆಗೆ ನಿಧನರಾದ ಸಾರಸ್ವತ ಲೋಕದ ಧ್ರುವತಾರೆ ಡಾ. ಎಸ್‌‍.ಎಲ್‌ ಭೈರಪ್ಪನವರ ನಿವಾಸಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಕುವೆಂಪು ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದ ಯದುವೀರ್‌, ಭೈರಪ್ಪ ಅವರ ಪತ್ನಿ ಸರಸ್ವತಮ ಹಾಗೂ ಪುತ್ರ ರವಿಶಂಕರ್‌ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು.ದಸರಾ ಹಾಗೂ ಕೆಲವು ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತಿದ್ದ ಕಾರಣ ಸಾಹಿತ್ಯ ರತ್ನ ಡಾ. ಎಸ್‌‍.ಎಲ್‌. ಭೈರಪ್ಪ ಅವರ ನಿವಾಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದೇವೆ ಎಂದು ಯದುವೀರ್‌ ಹೇಳಿದ್ದಾರೆ.

ಕರ್ನಾಟಕಕ್ಕೆ ಮತ್ತು ವಿಶೇಷವಾಗಿ ಮೈಸೂರು ಭಾಗಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟಿರುವ ಎಸ್‌‍.ಎಲ್‌. ಭೈರಪ್ಪನವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದೇನೆ ಎಂದು ಯದುವೀರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೈಸೂರಿನ ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ. ಎಸ್‌‍.ಎಲ್‌. ಭೈರಪ್ಪ ಅವರ ಹೆಸರು ಮರು ನಾಮಕರಣ ಮಾಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.
ಗ್ರಂಥಾಲಯದ ಆವರಣದಲ್ಲಿ ಭೈರಪ್ಪನವರ ಜೀವನ ಚರಿತ್ರೆ, ಸಾಹಿತ್ಯ ಕೃತಿಗಳನ್ನು ಪ್ರತಿಬಿಂಬಿಸುವ ಶಾಶ್ವತ ಸಾರಕವನ್ನು ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದೇವೆ ಎಂದು ಭೈರಪ್ಪನವರ ಪತ್ನಿ ಹಾಗೂ ಪುತ್ರರಿಗೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಎಸ್‌‍.ಎಲ್‌. ಭೈರಪ್ಪ ಅವರ ಅಗಲಿಕೆ ಇಡೀ ನಾಡಿಗೆ ತೀವ್ರ ನೋವುಂಟು ಮಾಡಿದೆ. ಅವರು ನಮನ್ನು ಭೌತಿಕವಾಗಿ ಅಗಲಿದ್ದರೂ ಅವರ ಅಕ್ಷರಗಳ ಮೂಲಕ ಅಮರರಾಗಿದ್ದಾರೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-10-2025)

ನಿತ್ಯ ನೀತಿ : ವೌಢ್ಯತೆಯು ಕಂದರಕ್ಕೆ ತಳ್ಳುವವರಿಂದ ಆತ್ಮೋನ್ನತಿಯ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ.

ಪಂಚಾಂಗ : ಮಂಗಳವಾರ, 07-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು:ಸೌರ ಶರದ / ಮಾಸ: ಆಶ್ವಯುಜ / ಪಕ್ಷ:ಶುಕ್ಲ / ತಿಥಿ: ಹುಣ್ಣಿಮೆ / ನಕ್ಷತ್ರ: ರೇವತಿ / ಯೋಗ: ಧ್ರುವ / ಕರಣ: ಬಾಲವ
ಸೂರ್ಯೋದಯ – ಬೆ.06.09
ಸೂರ್ಯಾಸ್ತ – 06.06
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :
ಮೇಷ: ಆಸ್ತಿ ವಿಚಾರದಲ್ಲಿ ಕಲಹ. ಧನ ಹಾನಿ. ಸಹೋದರತ್ವದಲ್ಲಿ ದ್ವೇಷ ಉಂಟಾಗಲಿದೆ.
ವೃಷಭ: ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಮಾನಸಿಕ ಅಸ್ಥಿರತೆ ಕಾಡಲಿದೆ.
ಮಿಥುನ: ಉದ್ಯೋಗದಲ್ಲಿ ಹೆಚ್ಚು ಒತ್ತಡ. ಆರ್ಥಿಕ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಾಗಲಿದೆ.

ಕಟಕ: ಮೇಲ ಕಾರಿಗಳಿಂದ ಪ್ರಶಂಸೆ. ಅನಿರೀಕ್ಷಿತ ಬಂಧುಗಳ ಆಗಮನ.
ಸಿಂಹ: ಮಕ್ಕಳ ಆರೋಗ್ಯದಲ್ಲಿ ಚೇತರಿಕೆ. ನಿವೇಶನ ಖರೀದಿಸುವಿರಿ.
ಕನ್ಯಾ: ಒತ್ತಡದ ಜೀವನ, ದೃಢ ನಿರ್ಧಾರದಿಂದ ಅಭಿವೃದ್ಧಿ. ವ್ಯಾಪಾರದಲ್ಲಿ ಲಾಭ.

ತುಲಾ: ಉತ್ತಮ ಆರೋಗ್ಯ. ಧಾರ್ಮಿಕ ಕಾರ್ಯ ಗಳಿಗೆ ಹೆಚ್ಚು ಒತ್ತು. ತಾಯಿಯಿಂದ ಸಹಾಯ ಸಿಗಲಿದೆ.
ವೃಶ್ಚಿಕ: ಸ್ನೇಹಿತರಿಗೆ ಸಹಕಾರ. ಹಣಕಾಸಿನ ವಿಚಾರದಲ್ಲಿ ಶುಭ ಸುದ್ದಿ. ಸ್ವಯಂ ಉದ್ಯೋಗ ಮಾಡುವವರಿಗೆ ಶುಭ.
ಧನುಸ್ಸು: ಶಾರೀರಿಕ ಸಮಸ್ಯೆ. ಸಣ್ಣ ವ್ಯಾಪಾರಸ್ಥರಿಗೆ ಕೊಂಚ ಲಾಭ. ಅ ಕಾರಿ ವರ್ಗದವರಿಗೆ ತೊಂದರೆ.

ಮಕರ: ದಾಂಪತ್ಯ ಜೀವನದಲ್ಲಿ ಕಲಹ. ಗೊಂದಲದ ವಾತಾವರಣ ನಿರ್ಮಾಣವಾಗಬಹುದು.
ಕುಂಭ: ಚಿನ್ನಾಭರಣ ಖರೀದಿ, ಶುಭ ದಿನ.
ಮೀನ: ತಂದೆ-ತಾಯಿ ಆಶೀರ್ವಾದಿಂದ ಉತ್ತಮ ಸ್ಥಾನ. ಕುಲದೇವತೆ ದರ್ಶನ.

BREAKING : ಬಿಹಾರ ವಿಧಾನಸಭಾ ಚುನಾವಣೆಗೆ ಮಹೂರ್ತ ಫಿಕ್ಸ್, 2 ಹಂತದಲ್ಲಿ ಮತದಾನ

ನವದೆಹಲಿ,ಅ.06 : ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇಂದ್ರ ಚುನಾವಣಾ ಆಯೋಗವು ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. 6 ನವೆಂಬರ್‌ ರಿಂದ 11 ನವೆಂಬರ್‌ವರೆಗೆ ಎರಡು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ನವೆಂಬರ್‌ 14ರಂದು ಫಲಿತಾಂಶ ಘೋಷಣೆಯಾಗಲಿದೆ. ಪ್ರಸ್ತುತ ವಿಧಾನಸಭೆಯ ಅವಧಿ ಮುಗಿಯುವ ಮೊದಲು ಫಲಿತಾಂಶಗಳನ್ನು ಘೋಷಿಸಲಾಗುತ್ತದೆ. ಪ್ರಸ್ತುತ ಬಿಹಾರ ವಿಧಾನಸಭೆಯ ಅಧಿಕಾರಾವಧಿಯು ನವೆಂಬರ್ 22, 2025 ರಂದು ಕೊನೆಗೊಳ್ಳುತ್ತದೆ, ಇದು ವರ್ಷ ಮುಗಿಯುವ ಮೊದಲು ಕೊನೆಯ ಪ್ರಮುಖ ರಾಜ್ಯ ಚುನಾವಣೆಯಾಗಿದೆ.

ಈ ಕುರಿತು ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯಕ್ತ ಜ್ಞಾನೇಶ್‌ ಕುಮಾರ್‌, ಬಿಹಾರ ವಿಧಾನಸಭೆ ಚುನಾವಣೆಗೆ ಆಯೋಗ ಸಂಪೂರ್ಣ ಸಜ್ಜಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ SIR ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿರುವ ಚಿಇಸಿ ಜ್ಞಾನೇಶ್‌ ಕುಮಾರ್‌, ಇದಕ್ಕಾಗಿ ಪ್ರತಿಪಕ್ಷಗಳ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್‌ನ ಆರೋಪಗಳ ವಿರುದ್ಧ ತೊಡೆತಟ್ಟಿದ್ದಾರೆ. ಇಡೀ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದ್ದು, ಯಾವುದೇ ಬಾಹ್ಯ ಒತ್ತಡವಿಲ್ಲದೇ ಕಾರ್ಯನಿರ್ವಹಿಸುತ್ತಿರುವುದಾಗಿ ಮುಖ್ಯ ಚುನಾವಣಾ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಮತದಾನ ವೇಳಾಪಟ್ಟಿ
ಹಂತ 1: ನವೆಂಬರ್ 6, 2025
ಹಂತ 2: ನವೆಂಬರ್ 11, 2025

ಮತ ಎಣಿಕೆ
ನವೆಂಬರ್ 14, 2025


ಜವಳಿ ಮತ್ತು ಕೈಮಗ್ಗ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಚೇತನ ಗೌಡ ಅಧಿಕಾರ ಸ್ವೀಕಾರ

ಬೆಂಗಳೂರು : ಕರ್ನಾಟಕ ಜವಳಿ ಮತ್ತು ಕೈಮಗ್ಗ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಚೇತನ ಗೌಡರವರಿಗೆ ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರರು ಹಾಗು ಕೆಪಿಸಿಸಿ ನೀತಿ, ಸಂಶೋಧನೆ ಮತ್ತು ತರಬೇತಿ ವಿಭಾಗದ ರಾಜ್ಯ ಸಂಚಾಲಕರಾದ ಶ್ರೀ ಆದರ್ಶ ಹುಂಚದಕಟ್ಟೆ ಅವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ಸಿನ ಮಾಜಿ ರಾಷ್ಟ್ರಾಧ್ಯಕ್ಷರಾದ ಶ್ರೀನಿವಾಸ್ ಬಿ.ವಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಧುಸೂಧನ್ ಸಿ,ಜಿ ತೀರ್ಥಹಳ್ಳಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪೂರ್ಣೇಶ್ ಕೆಳಕೆರೆ, ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಜಿತ್ ಗೌಡ ದಂಡಿನಮಕ್ಕಿ ಹಾಗು ಶ್ರಂಗೇರಿ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ದುರ್ಗಾ ಚರಣ್ ಗೌಡ ಜೊತೆಗಿದ್ದರು.

ಮಾಗಡಿ ತಾಲ್ಲೂಕು ಪುರಸಭೆ ಮುಂಭಾಗದಲ್ಲಿ 400ಮರಗಳ ಮಾರಣಹೋಮಕ್ಕೆ ಖಂಡನೆ

ಬೆಂಗಳೂರು, ಅ. 6– ಮಾಗಡಿ ತಾಲ್ಲೂಕು ಪುರಸಭೆ ಮುಂಭಾಗದಲ್ಲಿ ಇರುವ ಪೂಜ್ಯ ಕೆಂಪೇಗೌಡರ ಪ್ರತಿಮೆ ಉಳಿವಿಗಾಗಿ ಮತ್ತು ಪ್ರತಿಮೆ ಸುತ್ತ ಮುತ್ತಲು ಇರುವ 400ಕ್ಕೂ ಹೆಚ್ಚು ಮರಗಳ ಮರಣಹೋಮ ಮಾಡುಲು ಹೊರಟಿರುವ ಪುರಸಭೆ ಮತ್ತು ಸ್ಥಳೀಯ ಶಾಸಕರ ನಡವಳಿಕೆಗೆ ಶ್ರೀ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್‌.ಎಂ.ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಾಡು ಕಟ್ಟಿದ ಕೆಂಪೇಗೌಡರಿಗೆ ಅವರ ಪ್ರತಿಮೆ ಸ್ಥಳವಾಕಾಶ ಇಲ್ಲದಂತೆ ಆಗಿದೆ ಎಂಬುದು ಶೋಚನೀಯ ಸಂಗತಿ. ಕೆಂಪೇಗೌಡರು ಪ್ರತಿಮೆ ಕಳೆದ 22ವರ್ಷಗಳ ಹಿಂದೆ ಪುರಸಭೆ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರತಿವರ್ಷ ಕೆಂಪೇಗೌಡ ಜನದಿನಾಚರಣೆ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.

ಅಭಿವೃದ್ಧಿಯ ಹೆಸರಿನಲ್ಲಿ ಪೂಜ್ಯ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮತ್ತು ಅದರ ಸುತ್ತಮುತ್ತಲ 400 ಮರ ಗಿಡಗಳಗಳನ್ನು ಕಡಿಯಲಾಗುತ್ತಿದೆ. ಮಾಗಡಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರು, ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಆಡಳಿತ ಮಾಗಡಿ ಕೆಂಪೇಗೌಡರರ ಕುರಿತು ಅಭಿಮಾನವಿಲ್ಲದ ಶೂನ್ಯರು ಇವರು ಎಂದು ಕಿಡಿಕಾರಿದರು.

ಕೋಟೆ ಕಂದಕ ಮುಚ್ಚುವ ಕಾರ್ಯ ಮಾಡುವ ಪ್ರಯತ್ನ ಮಾಡಿದರು ಇದೀಗ ಕೆಂಪೇಗೌಡರ ಪ್ರತಿಮೆ ತೆಗೆಯುವ ಪ್ರಯತ್ನ, 400ಮರಗಳ ತೆರವು ಕಾರ್ಯಕ್ಕೆ ತಡೆ ನೀಡಬೇಕು ಕೋರ್ಟ್‌ ನಲ್ಲಿ ಕೇಸ್‌‍ ದಾಖಲಿಸಲಾಗಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಜನರ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಮಾಡಬಾರದು ಹಾಗೂ ಮರಗಳನ್ನು ಉಳಿಸಬೇಕು ಎಂದು ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಹೇಳಿದರು. ದಲಿತ ಸಮುದಾಯದ ಮುಖಂಡರಾದ ಜಯರಾಮಯ್ಯ, ಹಿರಿಯ ಪತ್ರಕರ್ತರಾದ ಕುಮಾರ್‌ ರವರು ಭಾಗವಹಿಸಿದ್ದರು.

ನಿವೃತ್ತ ಶಾಲಾ ಶಿಕ್ಷಕಿಗೆ 2.3 ಕೋಟಿ ವಂಚಿಸಿದ ವೈವಾಹಿಕ ವೆಬ್‌ಸೈಟ್‌ನಲ್ಲಿ ಪರಿಚಿತನಾದ ವ್ಯಕ್ತಿ

ಬೆಂಗಳೂರು,ಅ.6- ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ವೈವಾಹಿಕ ವೆಬ್‌ಸೈಟ್‌ನಲ್ಲಿ ಪರಿಚಿತನಾದ ವ್ಯಕ್ತಿಯಿಂದ 2.3 ಕೋಟಿ ವಂಚನೆಗೊಳಗಾಗಿರುವ ಘಟನೆ ನಡೆದಿದೆ. ಸುಮಾರು 59 ವರ್ಷದ ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಆನ್‌ಲೈನ್‌ ವಂಚನೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿ ವಾಸಿಸುತ್ತಿದ್ದ ಈ ಮಹಿಳೆ, 2019 ರಲ್ಲಿ ವೈವಾಹಿಕ ವೆಬ್‌ಸೈಟ್‌ನಲ್ಲಿ ಒಡನಾಟ ಪಡೆಯುವ ನಿಟ್ಟಿನಲ್ಲಿ ನೋಂದಾಯಿಸಿಕೊಂಡರು.

ಕಳೆದ 2019 ಡಿಸೆಂಬರ್‌ನಲ್ಲಿ ಆಹಾನ್‌ ಕುಮಾರ್‌ಎಂಬ ಹೆಸರಿನ ವ್ಯಕ್ತಿಯೊಬ್ಬರು ಆಕೆಯನ್ನುಸಂಪರ್ಕಿಸಿದ್ದ. ನಾನು ಅಟ್ಲಾಂಟಾದಲ್ಲಿ ವಾಸವಿದ್ದು,ಇಸ್ರೇಲಿ ತೈಲ ಕಂಪನಿಯೊಂದರಲ್ಲಿ ಡ್ರಿಲ್ಲಿಂಗ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದು,ಭಾರತೀಯ ಮೂಲದ ಅಮೆರಿಕ ಪ್ರಜೆ ಎಂದು ಹೇಳಿಕೊಂಡು, ಕಪ್ಪು ಸಮುದ್ರದಲ್ಲಿ ನೆಲೆಸಿರುವುದಾಗಿ ತಿಳಿಸಿ ಫೋಟೋ ಇಲ್ಲದ ಗುರುತಿನ ಚೀಟಿಯನ್ನು ಹಂಚಿಕೊಂಡಿದ್ದ. ಕಾಲಾನಂತರದಲ್ಲಿ, ಅವರ ವರ್ಚುವಲ್‌ ಸ್ನೇಹವು ನಿಜವಾದ ಭಾವನಾತ್ಮಕ ಬಂಧವೆಂದು ಮದುವೆಯಾಗುವುದಾಗಿ ಆತ ನಂಬಿಸಿದ್ದಾನೆ. ಆಗಾಗ್ಗೆ ಅವಳನ್ನು ತನ್ನ ಹೆಂಡತಿ ಎಂದು ಕರೆಯುತ್ತಿದ್ದನು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.

ನಿಯಮಿತ ಸಂಭಾಷಣೆಗಳು ಅಮೆರಿಕದ ಸಂಖ್ಯೆಯಿಂದ ವಾಟ್ಸಾಪ್‌ ಕರೆಗಳ ಮೂಲಕ ನಡೆಯುತ್ತಿದ್ದವು ಮತ್ತು ತನ್ನ ಯೋಜನೆಯನ್ನು ಮುಗಿಸಿದ ನಂತರ ಶೀಘ್ರದಲ್ಲೇ ಭಾರತಕ್ಕೆ ಹಿಂತಿರುಗುವುದಾಗಿ ಪದೇ ಪದೇ ಹೇಳಿಕೊಂಡನು.

2020 ರ ಆರಂಭದಲ್ಲಿ, ಆಹಾನ್‌ಕುಮಾರ್‌ ತನ್ನ ಒಪ್ಪಂದದ ಪಾವತಿಗಾಗಿ ಕಾಯುತ್ತಿದ್ದು ಸಂಕಷ್ಟದಲ್ಲಿರುವುದಾಗಿ ಹೇಳಿದ್ದ. ನಂತರ ಆರ್ಥಿಕ ಸಹಾಯವನ್ನು ಕೋರಿದಾಗ ಅವನ ಕಥೆಯನ್ನು ನಂಬಿದ ಮಹಿಳೆ ಮೊದಲು ಮಾಧವಿ ಎಂಬ ಹೆಸರಿನ ಖಾತೆಗೆ ಹಣವನ್ನು ವರ್ಗಾಯಿಸಲಾಗಿತ್ತು ಕಳೆದ ನಾಲ್ಕು ವರ್ಷಗಳಲ್ಲಿ ವೈದ್ಯಕೀಯ ಸಮಸ್ಯೆಗಳು ಮತ್ತು ಕೆಲಸದ ವೇಳೆ ದಂಡದಂತಹ ನೆಪ ಹೇಳಿ ಹಣ ಪಡೆದಿದ್ದಾನೆ .

ನವೆಂಬರ್‌ 2024 ರ ಹೊತ್ತಿಗೆ, ಮಹಿಳೆ ತನ್ನ ಉಳಿತಾಯದ ಹಣ ಖಾಲಿ ಮಾಡಿ ಅವನಿಗೆ ಸಹಾಯ ಮಾಡುವುದನ್ನು ಮುಂದುವರಿಸಲು ಇತರರಿಂದ ಹಣವನ್ನು ಸಾಲ ಪಡೆದಿದ್ದರು .
ನಂತರ ಮಹಿಳೆ ಇನ್ನು ಹೆಚ್ಚಿನ ಹಣವನ್ನು ಪಾವತಿಸಲು ನಿರಾಕರಿಸಿದಾಗ, ಆಹಾನ್‌ ಸಂಪರ್ಕವನ್ನು ಕಡಿತಗೊಳಿಸಲು ಪ್ರಾರಂಭಿಸಿದ್ದಾನೆ. ಇದರಿಂದ ತಾನು ಮೋಸ ಹೋಗಿರುವುದು ಅರಿತು ಕೊನೆಗೆ ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಪೂರ್ವ ವಿಭಾಗ ಸಿಇಎನ್‌ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕುಡಿಯಲು ನೀರು ಕೊಡದ ಪತ್ನಿಯನ್ನು ಲಟ್ಟಣಿಗೆಯಿಂದ ಹೊಡೆದು ಕೊಂದ ಪತಿ

ಬೆಂಗಳೂರು,ಅ.6- ಕುಡಿಯಲು ನೀರು ಕೊಡದ ಪತ್ನಿಗೆ ಲಟ್ಟಣಿಗೆ ಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಗರದ ಚೊಕ್ಕಸಂದ್ರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಪ್ರೀತಿಸಿಂಗ್‌ (26) ಕೊಲೆಯಾದ ಗೃಹಿಣಿ. ಆರೋಪಿ ಪತಿ ಚೋಟಾಲಾಲ್‌ಸಿಂಗ್‌ (28) ನನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ ಮೂಲದವರಾದ ಪ್ರೀತಿಸಿಂಗ್‌ ಹಾಗೂ ಚೋಟಾಲಾಲ್‌ಸಿಂಗ್‌ ದಂಪತಿ ಚೊಕ್ಕಸಂದ್ರದಲ್ಲಿ ಬಂದು ನೆಲೆಸಿದ್ದರು. ದಂಪತಿಗೆ ಇಬ್ಬರು ಪುಟ್ಟಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಚೋಟಾಲಾಲ್‌ಸಿಂಗ್‌ ಹಾಗೂ ಪತ್ನಿ ಪ್ರೀತಿಸಿಂಗ್‌ ಬೇರೆ ಬೇರೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಸೆ.24 ರಂದು ಕೆಲಸದಿಂದ ಮನೆಗೆ ಬಂದು ಕುಡಿಯಲು ನೀರು ಕೇಳಿದ್ದಾನೆ. ಆ ಸಂದರ್ಭದಲ್ಲಿ ಪತ್ನಿ ಪ್ರೀತಿಸಿಂಗ್‌ ನೀನೇ ತೆಗೆದುಕೊಂಡು ಕುಡಿ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಪತಿ ಕೈಗೆ ಸಿಕ್ಕಿದ ಲಟ್ಟಣಿಗೆ ಯಿಂದ ಪತ್ನಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 1 ವಾರದ ನಂತರ ಆಕೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಪೀಣ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಚೋಟಾಲಾಲ್‌ಸಿಂಗ್‌ ನನ್ನು ಬಂಧಿಸಿದ್ದಾರೆ. ಅಪ್ಪ-ಅಮನ ಜಗಳದಲ್ಲಿ ಇಬ್ಬರು ಕಂದಮಗಳು ಅನಾಥವಾಗಿವೆ.ಅಮ ಕೊಲೆಯಾದರೆ ಅಪ್ಪ ಜೈಲಿಗೆ ಹೋಗಿದ್ದಾನೆ. ಹಾಗಾಗಿ ಪ್ರೀತಿಸಿಂಗ್‌ ಅವರ ತಂದೆ ಈ ಇಬ್ಬರು ಮಕ್ಕಳನ್ನು ಮಧ್ಯಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

ನಂದಿನಿ ಪಾರ್ಲರ್‌ಗೆ ನುಗ್ಗಿದ ಬಿಎಂಟಿಸಿ ಬಸ್, ತಪ್ಪಿದ ಅನಾಹುತ

ಬೆಂಗಳೂರು,ಅ.6- ಬೆಳ್ಳಂಬೆಳಗ್ಗೆ ಬಿಎಂಟಿಸಿ ಬಸ್‌‍ವೊಂದು ನಿಲ್ದಾಣದಲ್ಲಿನ ನಂದಿನಿ ಪಾರ್ಲರ್‌ಗೆ ನುಗ್ಗಿದ್ದು ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕಮಲಾನಗರದ ಶಂಕರ್‌ನಾಗ್‌ ಬಸ್‌‍ ನಿಲ್ದಾಣದಲ್ಲಿ ಇಂದು ಬೆಳಗ್ಗೆ 7.30 ಸುಮಾರಿನಲ್ಲಿ ಚಾಲಕ ಬಿಎಂಟಿಸಿ ನಿಲ್ದಾಣದಿಂದ ಮೆಜೆಸ್ಟಿಕ್‌ ಕಡೆಗೆ ಹೋಗಲು ಬಸ್‌‍ನ್ನು ಹೊರಗೆ ತೆಗೆಯುತ್ತಿದ್ದರು.

ಆ ಸಂದರ್ಭದಲ್ಲಿ ಬಸ್‌‍ನ ಬ್ರೇಕ್‌ ಫೇಲ್‌ ಆಗಿ ನಿಯಂತ್ರಣಕ್ಕೆ ಸಿಗದಿದ್ದಾಗ ಗಾಬರಿಗೊಂಡ ಚಾಲಕ ರಸ್ತೆಯಲ್ಲಿ ಜನರು ಇರುವುದು ಗಮನಿಸಿ ತಕ್ಷಣ ಹ್ಯಾಂಡ್‌ ಬ್ರೇಕ್‌ ಹಿಡಿದು ತಿರುಗಿಸಿದ್ದಾರೆೆ. ಆದರೆ ಅದೂ ಸಹ ಕೆಲಸ ಮಾಡದೆ ನಂದಿನಿ ಪಾರ್ಲರ್‌ ಐಸ್‌‍ಕ್ರೀಮ್‌ ಅಂಗಡಿಗೆ ನುಗ್ಗಿದೆ.

ಇದರಿಂದಾಗಿ ಬಸ್‌‍ನಲ್ಲಿದ್ದ ಪ್ರಯಾಣಿಕರು ಹಾಗೂ ನಿಲ್ದಾಣದಲ್ಲಿದ್ದವರು ಆತಂಕಗೊಂಡರು. ಅದೃಷ್ಟವಶಾತ್‌ ಯಾವುದೇ ಸಾವುನೋವುಗಳಾಗಿಲ್ಲ. ಬಸ್‌‍ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಈ ಬಗ್ಗೆ ವಿಜಯನಗರ ಸಂಚಾರಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿ ತಿಳಿದು ಬಿಎಂಟಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ತನಿಖೆ ಆರಂಭಿಸಿದ್ದಾರೆ.