Home Blog Page 65

ಶೇ.80 ರಷ್ಟು ಸಮೀಕ್ಷೆ ಮುಕ್ತಾಯ, ಅವಧಿ ವಿಸ್ತರಣೆ ಬಗ್ಗೆ ಸಿಎಂ ನಿರ್ಧರಿಸುತ್ತಾರೆ : ಸಚಿವ ಪರಮೇಶ್ವರ್‌

ಬೆಂಗಳೂರು, ಅ.6- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇ. 80 ರಷ್ಟು ಮುಗಿದಿದ್ದು ಬಾಕಿ ಸಮೀಕ್ಷೆಗಾಗಿ ಇನ್ನೂ ಮೂರ್ನಾಲ್ಕು ದಿನ ಅವಧಿ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುತ್ತಿರುವ ಸಮೀಕ್ಷೆಗೆ ಎಲ್ಲರೂ ಸಹಕಾರ ನೀಡಬೇಕು. ಅನಗತ್ಯವಾಗಿ ಗೊಂದಲ ಮೂಡಿಸಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರಿಗೆ ಸಲಹೆ ನೀಡಿದರು.ಸಮೀಕ್ಷೆ ಹಲವಾರು ಜಿಲ್ಲೆಗಳಲ್ಲಿ ನಾನಾ ರೀತಿಯಲ್ಲಿ ನಡೆದಿದೆ. ಕೆಲವು ಜಿಲ್ಲೆಗಳಲ್ಲಿ ಶೇ. 70ರಷ್ಟು, 50 ರಷ್ಟು, 60 ರಷ್ಟು ಇನ್ನೂ ಕೆಲವು ಜಿಲ್ಲೆಗಳಲ್ಲಿ ಬಹುತೇಕ ಮುಗಿಯುವ ಹಂತದಲ್ಲಿದೆ.

ರಾಜ್ಯದ ಸರಾಸರಿ ಪರಿಗಣಿಸುವುದಾದರೆ ಶೇ.20 ರಿಂದ 25ರಷ್ಟು ಬಾಕಿಯಿರುವ ಸಾಧ್ಯತೆ ಇದೆ. ನಾಳೆ ಅ. 7ಕ್ಕೆ ಸಮೀಕ್ಷೆ ಪೂರ್ಣಗೊಳಿಸಲು ಗಡುವು ನಿಗದಿ ಪಡಿಸಲಾಗಿದ್ದು, ಅದು ನಾಳೆಗೆ ಮುಗಿಯುತ್ತಿದೆ. ಇನ್ನೂ ನಾಲ್ಕು ದಿನ ಅವಧಿ ವಿಸ್ತರಣೆ ಮಾಡಿದರೆ, ಸಮೀಕ್ಷೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೊಪ್ಪಳ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಸಂಜೆ ವೇಳೆಗೆ ವಾಪಸ್‌‍ ಬರಲಿದ್ದು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಜಿಲ್ಲಾವಾರು ಮಾಹಿತಿ ಪಡೆದು ಅವಧಿ ವಿಸ್ತರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿರುವುದು ಕೇಂದ್ರ ಸಚಿವ ವಿ. ಸೋಮಣ್ಣ ಆಕ್ಷೇಪ ವ್ಯಕ್ತ ಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರಿಬ್ಬರಷ್ಟೇ ಅಲ್ಲ, ನಮಗೂ ಕೆಲವು ವಿಚಾರಗಳ ಬಗ್ಗೆ ಅಸಮಾಧಾನಗಳಿವೆ.ಸಮೀಕ್ಷೆ ನಡೆಸುವಾಗ ಸಣ್ಣ ಪುಟ್ಟ ಗೊಂದಲಗಳಾಗುತ್ತವೆ. ಅದರ ಹೊರತಾಗಿಯೂ ಎಲ್ಲರೂ ಸಹಕಾರ ನೀಡಬೇಕು. ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಬೆಂಬಲಿಸಬೇಕು ಎಂದು ಸಲಹೆ ನೀಡಿದರು.

ಈ ಹಿಂದೆ ಕಾಂತರಾಜು ಆಯೋಗದ ಸಮೀಕ್ಷೆ ನಡೆಸುವಾಗಿನ ಅನುಭವಗಳನ್ನು ಆಧರಿಸಿ, ಈ ಬಾರಿ ಕ್ರಮ ಕೈಗೊಂಡಿದ್ದೇವೆ. ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗುವುದಿಲ್ಲ ಎಂದು ಹೇಳಿದರು.ಗ್ರೇಟರ್‌ ಬೆಂಗಳೂರನ್ನು ತುಮಕೂರಿಗೆ ವಿಸ್ತರಣೆ ಮಾಡುವ ಬದಲಾಗಿ ತುಮಕೂರನ್ನೇ ಗ್ರೇಟರ್‌ ನಗರವನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.

5 ವರ್ಷ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಮಾಧ್ಯಮಗಳಲ್ಲಿನ ಚರ್ಚೆಯಿಂದಾಗಿ ಈ ವಿಚಾರ ಪ್ರಚಲಿತಕ್ಕೆ ಬರುತ್ತಿದೆ ಎಂದರು.

ತನಿಖೆ ಪ್ರಗತಿಯಲ್ಲಿ:
ಧರ್ಮಸ್ಥಳದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖೆ ಪ್ರಗತಿಯಲ್ಲಿದೆ. ಇಂತಿಷ್ಟೇ ಕಾಲಾವಧಿಯಲ್ಲಿ ವಿಚಾರಣೆ ಮುಗಿಸಿ ವರದಿ ಕೊಡಿ ಎಂದು ಒತ್ತಡ ಹೇರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಹಲವಾರು ಮಾದರಿಗಳನ್ನು ಎಫ್‌ಎಸ್‌‍ಎಲ್‌ಗೆ ಕಳುಹಿಸಲಾಗಿದೆ. ಕೆಮಿಕಲ್‌ ಅನಾಲಿಸಿಸ್‌‍, ಡಿಎನ್‌ಎ ಪರೀಕ್ಷೆ ಸೇರಿದಂತೆ ನಾನಾ ರೀತಿಯ ಪ್ರಕ್ರಿಯೆಗಳಿವೆ. ಡಿಎನ್‌ಎ ಪರೀಕ್ಷೆಯಲ್ಲಿ ತರಾತುರಿ ವರದಿ ಪಡೆಯಲು ಕಷ್ಟಸಾಧ್ಯ. ಆದರೆ ಆದ್ಯತೆ ಮೇರೆಗೆ ವರದಿ ನೀಡಲು ಎಸ್‌‍ಎಫ್‌ಎಲ್‌ಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪೊಲೀಸ್‌‍ ಇಲಾಖೆಯ ಕಾನ್‌್ಸಟೆಬಲ್‌ ಮತ್ತು ಪಿಎಸ್‌‍ಐ ಹುದ್ದೆಗಳ ನೇಮಕಾತಿಯ ವೇಳೆ ಶಾಶ್ವತವಾಗಿ ವಯೋಮಿತಿಯನ್ನು ಸಡಿಲಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರ್ಕಾರ ಅದನ್ನು ಪರಿಶೀಲಿಸುತ್ತಿದೆ. ವಿವಿಧ ರಾಜ್ಯಗಳ ವರದಿ ಪಡೆದಿದ್ದು, ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ವಾರ ಅಥವಾ 10 ದಿನಗಳ ಒಳಗಾಗಿ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.ಈಗಾಗಲೇ ಮುಖ್ಯಮಂತ್ರಿ ಅವರು 3 ವರ್ಷಗಳಿಗೆ ಸೀಮಿತವಾಗಿ ವಯೋಮಿತಿ ಸಡಿಲಿಕೆ ಮಾಡಿದ್ದಾರೆ. ಶಾಶ್ವತವಾಗಿ ವಯೋಮಿತಿ ಸಡಿಲಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ಜನ, ಟ್ರಾಫಿಕ್ ಜಾಮ್‌, ಯಶವಂತಪುರ ಮೇಟ್ರೋ ಸ್ಟೇಷನ್‌ ಬಾಗಿಲು ಬಂದ್‌

ಬೆಂಗಳೂರು, ಅ.6-ದಸರಾ ಹಬ್ಬದ ಸಾಲು ಸಾಲು ರಜೆ ಹಿನ್ನೆಯಲ್ಲಿ ಪ್ರವಾಸಕ್ಕೆ ಹಾಗೂ ಊರುಗಳಿಗೆ ತೆರಳಿ ಎಂಜಾಯ್‌ ಮಾಡಿ ಖುಷಿ ಖುಷಿಯಿಂದ ವಾಪಸ ನಗರಕ್ಕೆ ಆಗಮಿಸುತ್ತಿದ್ದವರು ಬೆಳ್ಳಂಬೆಳಗ್ಗೆ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತಾಗಿತ್ತು. ಆಯುಧಪೂಜೆ, ವಿಜಯದಶಮಿ, ಹಾಗೂ ವಾರಾಂತ್ಯದ ಸಾಲು ಸಾಲು ರಜೆಹಿಲ್ಲೆಯಲ್ಲಿ ನಗರದ ಬಹುತೇಕ ಜನರು ಪ್ರವಾಸ ಹಾಗೂ ಊರುಗಳಿಗೆ ತೆರಳಿದ್ದರು.

ರಜೆಯ ಮಜಾ ಮುಗಿಸಿಕೊಂಡು ನಗರಕ್ಕೆ ಮರಳುತ್ತಿದ್ದವರಿಗೆ ನಗರಕ್ಕೆ ಪ್ರವೇಶಿಸುವ ದ್ವಾರಗಳಾದ ನೆಲಮಂಗಲದ ಕುಣಿಗಲ್‌ ಬೈಪಾಸ್‌‍, ಮಾಗಡಿರಸ್ತೆ, ಮೈಸೂರುರಸ್ತೆ, ಭನ್ನೇರುಘಟ್ಟರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ ಬಹುತೇಕ ಮುಖ್ಯ ರಸ್ತೆ ಹಾಗೂ ಹೆದ್ದಾರಿಗಳಲ್ಲಿ ರಾತ್ರಿಯಿಂದಲೇ ಸಂಚಾರ ದಟ್ಟಣೆ ಉಂಟಾಗಿತ್ತು.

ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯ ಕುಣಿಗಲ್‌ಬೈಪಾಸ್‌‍, ಮದಾವರ, ಎಂಟನೆಮೈಲಿ, ಜಾಲಹಳ್ಳಿಕ್ರಾಸ್‌‍, ಗೊರಗುಂಟೆಪಾಳ್ಯ, ಯಶವಂತಪುರ, ರಾಜಾಜಿನಗರ ದಲ್ಲಿ ಮಧ್ಯರಾತ್ರಿಯಿಂದಲೇ ವಾಹನಗಳ ಸಂಚಾರ ಜೋರಾಗಿತ್ತು.
ಮಳೆಯ ನಡುವೆಯೂ ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದು ಕಂಡು ಬಂತು. ಇನ್ನು ನೆಲಮಂಗಲ , ನೈಸ್‌‍ರಸ್ತೆ, ಹಾಸನ ರಸ್ತೆಯ ಟೋಲ್‌ಗಳ ಬಳಿ ಕಾರುಗಳದ್ದೇ ಕಾರು ಬಾರಾಗಿತ್ತು.

ಮೈಸೂರು ಜಂಬೂಸವಾರಿ ವೀಕ್ಷಿಸಿ, ಹಾಗೇಯೇ ಮಡಿಕೇರಿ, ಕೂಡಗು, ಕೇರಳ ಕಡೆಗೆ ಪ್ರವಾಸ ಮುಂದುವರೆಸಿ ಇಂದು ಬೆಳಗ್ಗೆ ವಾಪಾಸ್‌‍ ಆಗುತ್ತಿದ್ದವರಿಗೆ ಮೈಸೂರು ರಸ್ತೆಯಲ್ಲಿ ಟ್ರಾಫಿಕ್‌ನಲ್ಲಿ ಸಿಲಿಕಿ ಕೊಂಡು ಪರದಾಡುವಂತಾಗಿತ್ತು. ಇನ್ನು ಬೆಳಗ್ಗೆ ಕೆಲಸಕ್ಕೆ ತೆರಳುವವರಿಗೆ ತಡವಾಗಿದ್ದು ಇಂದೂ ಕೂಡ ರಜೆ ಹಾಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಶಾಲೆಗಳು ಇಂದಿನಿಂದ ಪುನರಾರಂಭವಾಗಿದ್ದು ಮಕ್ಕಳು ಕೂಡ ಶಾಲೆಗೆ ರಜೆ ಹಾಕಿದರು.

ಸಂಚಾರದಟ್ಟಣೆಯಲ್ಲಿ ಸಿಲುಕಿ ಹೈರಾಣಾದ ಜನರು ಬೇಗ ಹೋಗಬೇಕೆಂದು ರಸ್ತೆ ಮಧ್ಯೆದಲ್ಲೇ ಬಸ್‌‍ ಇಳಿದು ಮೆಟ್ರೋದತ್ತ ಮುಖ ಮಾಡಿದ ದೃಶ್ಯಗಳು, ತುಮಕೂರು ರಸ್ತೆಯ ಮಾದಾವರ, ಎಂಟನೇಮೈಲಿ, ಮೈಸೂರುರಸ್ತೆ, ಕನಕಪುರ ರಸ್ತೆಯ ಮೆಟ್ರೋ ನಿಲ್ದಾಣಗಳ ಬಳಿ ಜನಸಂದಣಿ ಇಂದು ಬೆಳಗ್ಗೆ ಹೆಚ್ಚಾಗಿ ಕಂಡು ಬಂತು.

ಕಳೆದ ನಾಲ್ಕುದಿನಗಳಿಂದ ಖಾಲಿ ಖಾಲಿಯಾಗಿದ್ದ ಬೆಂಗಳೂರಿನ ರಸ್ತೆಗಳು ಇಂದು ಬೆಳಗ್ಗೆ ಎಂದಿನಂತೆ ಗಿಜಿಗುತ್ತಿದ್ದವು.ಅರ್ಧಗಂಟೆ ಯಶವಂತಪುರ ಮೆಟ್ರೋ ಸ್ಟೇಷನ್‌ ಬಾಗಿಲು ಬಂದ್‌: ಪ್ರಯಾಣಿಕರ ದಟ್ಟಣೆಯಿಂದ ಯಶವಂತಪುರದ ಮೆಟ್ರೋ ರೈಲು ನಿಲ್ದಾಣವನ್ನು ಸುಮಾರು ಅರ್ಧಗಂಟೆಗಳ ಕಾಲ ಬಂದ್‌ ಮಾಡಲಾಗಿತ್ತು.

ಆಯುಧಪೂಜೆ, ವಾರಾಂತ್ಯದ ಸಾಲು ಸಾಲು ರಜೆ ಹಿನ್ನೆಯಲ್ಲಿ ಊರು ಹಾಗೂ ಪ್ರವಾಸಕ್ಕೆ ತೆರಳಿ ವಾಪಸ್‌‍ ನಗರಕ್ಕೆ ಆಗಮಿಸುತ್ತಿದ್ದವರು ತುಮಕೂರು ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರಿಂದ ರಸ್ತೆ ಮಧ್ಯೆ ಬಸ್‌‍ ಇಳಿದು ಒಮೆಲೆ ಮೆಟ್ರೋ ದತ್ತ ಮುಖ ಮಾಡಿದ್ದರು.
ಹಾಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನಲೆಯಲ್ಲಿ ಇಂದು ಬೆಳಗ್ಗೆ ಯಶವಂತಪುರದ ಮೆಟ್ರೋ ನಿಲ್ದಾಣದಲ್ಲಿ 8. 50 ರಿಂದ 9. 15 ರವರೆಗೆ ನಿಲ್ದಾಣದ ಬಾಗಿಲನ್ನು ಬಂದ್‌ ಮಾಡಲಾಗಿತ್ತು.

ಪ್ರಯಾಣಿಕರನ್ನು ಸರದಿ ಸಾಲಿನಲ್ಲಿ ನಿಲ್ಲಿಸಿದ್ದ ದೃಶ್ಯಗಳು ಕಂಡು ಬಂದವು. ಪ್ರಯಾಣಿಕರು ಕಡಿಮೆಯಾಗುತ್ತಿದ್ದಂತೆ ನಿಯಮಾನುಸಾರ ಬಾಗಿಲನ್ನು ತೆರೆಯಲಾಯಿತು. 9.15 ರ ನಂತರ ಎಂದಿನಂತೆ ಮಟ್ರೋ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಅಂಡಮಾನ್‌ನ ಹೋಟೆಲ್‌ ಉದ್ಯಮಿಯ ಹತ್ಯೆ, ತಮಿಳುನಾಡಿನಲ್ಲಿ ಮೂವರ ಬಂಧನ

ಪೋರ್ಟ್‌ ಬ್ಲೇರ್‌,ಅ.6- ಅಂಡಮಾನ್‌ನ ಪೋರ್ಟ್‌ ಬ್ಲೇರ್‌ ಮೂಲದ ಹೋಟೆಲ್‌ ಉದ್ಯಮಿಯ ಹತ್ಯೆಗೆ ಸಂಬಂಧಿಸಿದಂತೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಮೂವರು ಆರೋಪಿಗಳನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.ಪೋರ್ಟ್‌ ಬ್ಲೇರ್‌ನ ಶಾದಿಪುರ ಪ್ರದೇಶದ ಹೋಟೆಲ್‌ನ ಸಹ-ಮಾಲೀಕ ನಿಯಾಮತ್‌ ಅಲಿ (49) ಅವರನ್ನು ಕಳೆದ ಜುಲೈನಲ್ಲಿ ಚೆನ್ನೈನಲ್ಲಿ ಕೊಲೆ ಮಾಡಲಾಗಿತ್ತು.

ಕಳೆದ ಅ.3 ರಂದು ತಮಿಳುನಾಡಿನ ತಾಂಬರಂ ಜಿಲ್ಲೆಯ ಖಿಲಂಬಥಮ್‌ ಪೊಲೀಸ್‌‍ ಠಾಣೆಯ ಅಧಿಕಾರಿಗಳು ಅಂಡಮಾನ್‌ ಮತ್ತು ನಿಕೋಬಾರ್‌ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸ್‌‍ ತನಿಖೆಯ ಪ್ರಕಾರ, ಅಲಿ ಅವರು ಜುಲೈ 27 ರಂದು ವ್ಯವಹಾರ ಪ್ರವಾಸದ ನಿಮಿತ್ತ ಚೆನ್ನೈಗೆ ಪ್ರಯಾಣ ಬೆಳೆಸಿದರು ಮತ್ತು ಅದೇ ದಿನ ನಾಪತ್ತೆಯಾಗಿದ್ದರು.

ಅವರ ಕುಟುಂಬ ಸದಸ್ಯರು ಪೋರ್ಟ್‌ ಬ್ಲೇರ್‌ನ ಅಬರ್ಡೀನ್‌ ಪೊಲೀಸ್‌‍ ಠಾಣೆಯಲ್ಲಿ ದೂರು ಸಲ್ಲಿಸಿದ್ದರು ಇದರ ಬಗ್ಗೆ ತನಿಖೆಗಾಗಿ ವಿಶೇಷ ಪೊಲೀಸ್‌‍ ತಂಡ ಚೆನ್ನೈಗೆ
ಆಗಮಿಸಿತ್ತು.ಚೆನ್ನೈನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ವಿಶ್ಲೇಷಣೆಯಲ್ಲಿ ಅಲಿ ಚೆನ್ನೈ ವಿಮಾನ ನಿಲ್ದಾಣದಿಂದ ವಂಡಲೂರು ಪ್ರದೇಶಕ್ಕೆ ಪ್ರಯಾಣಿಸಿದ್ದು, ಅಲ್ಲಿ ಅವರು ಕೊನೆಯ ಬಾರಿಗೆ ವಿದ್ಯಾರ್ಥಿಯೊಂದಿಗೆ ಕಾಣಿಸಿಕೊಂಡಿದ್ದರು ಎಂದು ದೃಢಪಡಿಸಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಆತನನ್ನು ಪತ್ತೆ ಮಾಡಿ ವಿಚಾರಿಸಿದಾಗ ಪ್ರಮುಖ ಸುಳಿವು ಸಿಕ್ಕಿದೆ.್ತ ತಾಂತ್ರಿಕ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಅಲಿ ಅವರನ್ನು ಆರೋಪಿಗಳು ಕಾರಿನಲ್ಲಿ ಕೊಂದು, ಮೃತದೇಹವನ್ನು ಆಂಧ್ರಪ್ರದೇಶ-ಒಡಿಶಾ ಗಡಿಯಲ್ಲಿ ಶವ ಎಸೆದಿದ್ದರು.ಕೊಲೆಯ ಹಿಂದೆ ವ್ಯಾಪಾರ ವೈಷಮ್ಯವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಹಿಂದೂ ಫೈರ್‌ ಬ್ರಾಂಡ್‌ ಯತ್ನಾಳ್‌ ಅವರನ್ನು ಪುನಃ ಬಿಜೆಪಿಗೆ ಕರೆತರುವಂತೆ ಹೆಚ್ಚಿದ ಒತ್ತಡ

ಬೆಂಗಳೂರು,ಅ.6- ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಛಾಟನೆಯಾಗಿದ್ದ ಹಿಂದೂ ಫೈರ್‌ ಬ್ರಾಂಡ್‌ ಖ್ಯಾತಿಯ ಬಿಜಾಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪುನಃ ಬಿಜೆಪಿಗೆ ಕರೆತರಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.

ಬಿಜೆಪಿಯೊಳಗಿರುವ ಒಂದು ಗುಂಪು ಕೇಂದ್ರ ವರಿಷ್ಠರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದು, ಯತ್ನಾಳ್‌ ಅವರನ್ನು ಪಕ್ಷಕ್ಕೆ ಕರೆತಂದರೆ ಮುಂದಿನ 2028ರ ವಿಧಾನಸಭೆ ಚುನಾವಣೆಗೆ ಹಿಂದೂ ಮತಗಳ ಕ್ರೌಢೀಕರಣವಾಗಲಿದೆ. ಇದರಿಂದ ಹೆಚ್ಚಿನ ಸ್ಥಾನ ಗೆಲ್ಲಲು ಅನುಕೂಲವಾಗುತ್ತದೆ ಎಂಬ ವಾದ ಸರಣಿಯನ್ನೇ ಮುಂದಿಟ್ಟಿದ್ದಾರೆ.

ಮಾರ್ಚ್‌ 25ರಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿತ್ತು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರುಗಳನ್ನು ಅತಿಯಾಗಿ ಟೀಕೆ ಮಾಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸುತ್ತಿದ್ದ ಹಿನ್ನೆಲೆಯಲ್ಲಿ ನೊಟೀಸ್‌‍ ನೀಡಲಾಗಿತ್ತು. ಇದಾದ ನಂತರವು ಅವರ ಟೀಕೆ ಮುಂದುವರೆದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪಕ್ಷದಿಂದ ಗೇಟ್‌ಪಾಸ್‌‍ ನೀಡಲಾಗಿತ್ತು.

ಈ ಬೆಳವಣಿಗೆ ನಡೆದ ನಂತರ ಬಿಜೆಪಿ ಸಂಘಟನೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸುಧಾರಣೆಗಳು ಕಂಡುಬರುತ್ತಿಲ್ಲ. ಆರುಕ್ಕೂ ಏರಲಿಲ್ಲ. ಮೂರಕ್ಕೂ ಇಳಿಯಲಿಲ್ಲ ಎಂಬಂತೆ ಅದೇ ರಾಗ, ಅದೇ ಹಾಡಿನಲ್ಲಿ ಪ್ರತಿಪಕ್ಷವಾಗಿ ಮುಂದುವರೆಯುತ್ತಿದೆ.

ಒಂದು ಕಡೆ ಸರ್ಕಾರದ ವೈಫಲ್ಯಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ನಿರೀಕ್ಷಿತ ಮಟ್ಟದಲ್ಲೂ ಸಂಘಟನೆ ಬೆಳೆಯುತ್ತಿಲ್ಲ ಎಂಬ ಅಸಮಾಧಾನ ನಿಷ್ಠಾವಂತ ಕಾರ್ಯಕರ್ತರನ್ನು ಕಾಡುತ್ತಿದೆ.

ಹಾಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬಗ್ಗೆ ಅಂತಹ ಅಪಸ್ವರಗಳು ಕೇಳಿಬರುತ್ತಿಲ್ಲವಾದರೂ ಬಿಜೆಪಿಯ ಮೂಲಶಕ್ತಿಯಾದ ಹಿಂದೂ ಮತಗಳನ್ನು ಸೆಳೆಯುವ ಸಾಮರ್ಥ್ಯ ಅವರಲ್ಲಿ ಇಲ್ಲ ಎಂಬುದೇ ಬಹುತೇಕರ ಕೊರಗು.

ಹೆಚ್ಚುತ್ತಿದೆ ಜನಪ್ರಿಯತೆ
ಪಕ್ಷದಿಂದ ಉಚ್ಛಾಟನೆಗೊಂಡ ನಂತರ ಯತ್ನಾಳ್‌ ರಾಜಕೀಯ ಜೀವನ ಮುಗಿಯಿತು ಎಂದು ಬಹುತೇಕರು ಭಾವಿಸಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ರಾಜ್ಯಾದ್ಯಂತ ಅಭಿಮಾನಿಗಳಿಂದ ಹಿಂದೂ ಹುಲಿ ಎಂದೇ ಖ್ಯಾತಿಯಾಗಿರುವ ಯತ್ನಾಳ್‌ ಅಬ್ಬರ ಹೆಚ್ಚುತ್ತಿರುವುದು ಬಿಜೆಪಿಯನ್ನು ನಿದ್ದೆಗೆಡುವಂತೆ ಮಾಡಿದೆ.

ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಅನ್ಯ ಕೋಮಿನವರು ಕಲ್ಲು ಎಸೆದು ದೊಡ್ಡ ವಿವಾದವೇ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಯತ್ನಾಳ್‌ ಭೇಟಿ ನೀಡಿದ ವೇಳೆ ಅವರಿಗೆ ಸಿಕ್ಕ ಭವ್ಯ ಸ್ವಾಗತ, ಜೈಕಾರ ನೋಡಿ ಮೂಲ ಬಿಜೆಪಿಯವರೇ ಕೈ ಕೈ ಹಿಸುಕಿಕೊಳ್ಳುವಂತಾಯಿತು.

ಮದ್ದೂರು ಮಾತ್ರವಲ್ಲದೆ ಬೆಳಗಾವಿ, ದಾವಣಗೆರೆ, ರಾಯಚೂರು, ಕೊಪ್ಪಳ ಹೀಗೆ ರಾಜ್ಯದ ನಾನಾ ಕಡೆ ಗಣಪತಿ ವಿಸರ್ಜನೆ ವೇಳೆ ಯತ್ನಾಳ್‌ ತೆರೆಳಿದ್ದ ವೇಳೆ ಅವರ ನಿರೀಕ್ಷೆಗೂ ಮೀರಿ ಜನರು ಸೇರುತ್ತಿದ್ದರು. ಯತ್ನಾಳ್‌ ಬರುತ್ತಿದ್ದಾರೆಂಬ ಸುದ್ದಿ ಕೇಳಿ ಹಿಂದೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಬಂದು ಜೈಕಾರ ಕೂಗುತ್ತಿದ್ದರು. ಹೀಗೆ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಮಂಕಾಗುತ್ತಿದೆ ಎಂಬ ಅಪಸ್ವರಗಳು ಕಾರ್ಯಕರ್ತರಿಂದ ಕೇಳಿಬರುತ್ತಿದೆ.

ಇನ್ನು ಬಿಜೆಪಿಯೊಳಗಿರುವ ಒಂದು ಗುಂಪು ಯತ್ನಾಳ್‌ ಅವರನ್ನು ಪುನಃ ಪಕ್ಷಕ್ಕೆ ಕರೆತರುವ ಪ್ರಯತ್ನವನ್ನು ಮುಂದುವರೆಸಿದ್ದಾರೆ. ಯಡಿಯೂರಪ್ಪ ಮತ್ತು ವಿಜೇಂದ್ರ ವಿರೋಧಿ ಬಣ ಕೇಂದ್ರ ವರಿಷ್ಠರನ್ನು ಭೇಟಿಯಾಗಿ ಲಾಭ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಯತ್ನಾಳ್‌ ಅವರನ್ನು ಪಕ್ಷಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ತಕರಾರು ಇಲ್ಲ. ಆದರೆ ಅವರು ಬಿಎಸ್‌‍ವೈ ಕುಟುಂಬವನ್ನು ಬಹಿರಂಗವಾಗಿ ಟೀಕೆ ಮಾಡುವುದನ್ನು ನಿಲ್ಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಹಠಮಾರಿ ಸ್ವಭಾವದ ಯತ್ನಾಳ್‌ ಅವರು ಈ ಷರತ್ತನ್ನು ಒಪ್ಪಿ ಮತ್ತೆ ಪಕ್ಷಕ್ಕೆ ವಾಪಸ್ಸಾಗಲಿದ್ದಾರೆಯೇ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ.

ಕೃತಕಬುದ್ಧಿಮತ್ತೆಯಿಂದ ಕಾದಂಬರಿ ಬರೆಯಲು ಆಗಲ್ಲ ; ಚೇತನ್‌ಭಗತ್‌

ಪುಣೆ, ಅ. 6 (ಪಿಟಿಐ) ಕೃತಕ ಬುದ್ಧಿಮತ್ತೆ ಮತ್ತು ಎಐ ಆಧಾರಿತ ಭಾಷಾ ಪರಿಕರಗಳು ಬರಹಗಾರರ ವೃತ್ತಿಯ ಮೇಲೆ, ವಿಶೇಷವಾಗಿ ಕಾದಂಬರಿ ಕ್ಷೇತ್ರದಲ್ಲಿ ಪರಿಣಾಮ ಬೀರುತ್ತವೆ ಎಂಬ ಕಳವಳಗಳನ್ನು ಖ್ಯಾತ ಲೇಖಕ ಚೇತನ್‌ ಭಗತ್‌ ತಳ್ಳಿಹಾಕಿದ್ದಾರೆ.

ಎಐನಂತಹ ಪರಿಕರಗಳು ನಿಜವಾದ ಭಾವನೆಯನ್ನು ಬರವಣಿಗೆಗೆ ತರಲು ಸಾಧ್ಯವಿಲ್ಲ ಮತ್ತು ಮಾನವ ಅನುಭವದಿಂದ ಪಡೆದ ಸೃಜನಶೀಲತೆ ಭರಿಸಲಾಗದಂತಿರುತ್ತದೆ ಎಂದು ಅವರು ಪುಣೆಯ ಪುಸ್ತಕದಂಗಡಿಯಲ್ಲಿ ತಮ್ಮ ಇತ್ತೀಚಿನ ಪುಸ್ತಕ 12 ಇಯರ್ಸ್‌: ಮೈ ಮೆಸ್ಡ್‌-ಅಪ್‌ ಲವ್‌ ಸ್ಟೋರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಕೃತಕ ಬುದ್ಧಿಮತ್ತೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಭಾಷಾ ಮಾದರಿಗಳು ಬರಹಗಾರನಾಗಿ ಅವರ ವೃತ್ತಿಯ ಮೇಲೆ ಪರಿಣಾಮ ಬೀರುತ್ತವೆಯೇ ಎಂದು ಕೇಳಿದಾಗ, ಮಾನವ ಭಾವನೆಯ ಮೇಲೆ ನಿರ್ಮಿಸಲಾದ ಕಥೆ ಹೇಳುವಿಕೆಯನ್ನು ಯಂತ್ರಗಳಿಂದ ಪುನರಾವರ್ತಿಸಲಾಗುವುದಿಲ್ಲ ಎಂದು ಭಗತ್‌ ಹೇಳಿದರು. ಅಥವಾ ಲೇಖಕನಾಗಿ ನನ್ನ ವೃತ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಜನರು ಕೇಳಿದಾಗ, ನನ್ನ ಉತ್ತರ: ಅದು ಆಗುವುದಿಲ್ಲ ಎಂದು ಅವರು ಹೇಳಿದರು.

ಲೇಖಕರು ನಿಜವಾದ ಬರವಣಿಗೆ ಜೀವಂತ ಅನುಭವಗಳಲ್ಲಿ ಬೇರೂರಿದೆ ಎಂದು ಒತ್ತಿ ಹೇಳಿದರು. ನನಗೆ ಬ್ರೇಕ್‌ಅಪ್‌ಗಳು ಆಗಿವೆ. ನಾನು ಪ್ರೀತಿಯನ್ನು ಅನುಭವಿಸಿದ್ದೇನೆ. ನಾನು ಏರಿಳಿತಗಳ ಮೂಲಕ ಬದುಕಿದ್ದೇನೆ. ಮತ್ತು ಪುಸ್ತಕಗಳಲ್ಲಿ ಕೆಲಸ ಮಾಡುವುದು ಆ ನೈಜ ಭಾವನೆಗಳನ್ನು ಓದುಗರಿಗೆ ವರ್ಗಾಯಿಸುವ ಸಾಮರ್ಥ್ಯ. ನೀವೇ ಏನನ್ನೂ ಅನುಭವಿಸದಿದ್ದರೆ, ಕಾದಂಬರಿ ಕೆಲಸ ಮಾಡುವುದಿಲ್ಲ, ಎಂದು ಅವರು ವಿವರಿಸಿದರು.ಕಥೆ ಹೇಳುವಿಕೆಯ ಸಾರವು ಮಾನವ ಸಂಪರ್ಕದಲ್ಲಿದೆ ಎಂದು ಭಗತ್‌ ಹೇಳಿದರು.

ಸಾಮಾನ್ಯವಾಗಿ, ಜನರು ಜನರಲ್ಲಿ ಆಸಕ್ತಿ ಹೊಂದಿದ್ದಾರೆ. ನಾವು ಇಲ್ಲಿ ಏಕೆ ಮಾತನಾಡುತ್ತಿದ್ದೇವೆ? ಏಕೆಂದರೆ ನಿಮಗೆ ಮಾತನಾಡುವ ಒಂದು ನಿರ್ದಿಷ್ಟ ವಿಧಾನವಿದೆ, ಮತ್ತು ನನಗೆ ಅದು ಇಷ್ಟ. ನಮ್ಮಿಬ್ಬರನ್ನೂ ಬಾಟ್‌ಗಳಿಂದ ಬದಲಾಯಿಸಿದರೆ, ಅವರು ಪರಮಾಣು ವಿಜ್ಞಾನದಿಂದ ಬಾಹ್ಯಾಕಾಶದಿಂದ ರಾಜಕೀಯದವರೆಗೆ ಎಲ್ಲದರ ಬಗ್ಗೆ ಮಾತನಾಡುತ್ತಾರೆ – ಆದರೆ ಕುಳಿತು ಕೇಳಲು ಯಾರು ಬಯಸುತ್ತಾರೆ ಎಂದು ಅವರು ಹೇಳಿದರು.

ಡಾರ್ಜಿಲಿಂಗ್‌ ಭೂ ಕುಸಿತಕ್ಕೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿಕೆ

ಡಾರ್ಜಿಲಿಂಗ್‌,ಆ. 6 (ಪಿಟಿಐ) ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ಏರಿದೆ, ವಿಪತ್ತು ನಿರ್ವಹಣಾ ಸಿಬ್ಬಂದಿ ಇಂದು ಕೂಡ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.

ಭೂಕುಸಿತದಲ್ಲಿ ಇನ್ನು ಹಲವಾರು ಜನರು ಕಾಣೆಯಾಗಿದ್ದಾರೆ ಮತ್ತು ಸಾವಿರಾರು ಪ್ರವಾಸಿಗರು ಕತ್ತರಿಸಿದ ಬೆಟ್ಟದ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಡರಾತ್ರಿ ಮತ್ತೊಂದು ಮೃತದೇಹ ಪತ್ತೆಯಾಗುವುದರೊಂದಿಗೆ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಉತ್ತರ ಬಂಗಾಳ ಅಭಿವೃದ್ಧಿ ಸಚಿವ ಉದಯನ್‌ ಗುಹಾ ಹೇಳಿದ್ದಾರೆ.

ಪರಿಸ್ಥಿತಿ ಅತ್ಯಂತ ಸವಾಲಿನದ್ದಾಗಿಯೇ ಇದೆ. ಹಲವಾರು ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ನಿರಂತರ ಮಳೆಯು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅವರು ಪಿಟಿಐಗೆ ತಿಳಿಸಿದರು.

ಕೇವಲ 12 ಗಂಟೆಗಳಲ್ಲಿ ಸುರಿದ 300 ಮಿ.ಮೀ. ಮಳೆಯಿಂದ ಉಂಟಾದ ಭೂಕುಸಿತಗಳು ಡಾರ್ಜಿಲಿಂಗ್‌ ಬೆಟ್ಟಗಳು ಮತ್ತು ತಪ್ಪಲಿನಲ್ಲಿರುವ ಡೂರ್ಸ್‌ ಪ್ರದೇಶವನ್ನು ಧ್ವಂಸಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡಾರ್ಜಿಲಿಂಗ್‌ನ ಮಿರಿಕ್‌, ಸುಖಿಯಾಪೋಖ್ರಿ ಮತ್ತು ಜೋರೆಬಂಗ್ಲೋ ಮತ್ತು ಜಲ್ಪೈಗುರಿ ಜಿಲ್ಲೆಯ ನಾಗರಕಟಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಸೇರಿವೆ ಎಂದು ಅವರು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌‍) ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಅನೇಕ ಸ್ಥಳಗಳಲ್ಲಿ ಮುಂದುವರೆದಿದ್ದು, ಅವಶೇಷಗಳ ದಿಬ್ಬಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ಪತ್ತೆಹಚ್ಚಲು ಭಾರೀ ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದರು.

40 ಕ್ಕೂ ಹೆಚ್ಚು ಭೂಕುಸಿತ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆಗಳು ನಡೆಯುತ್ತಿವೆ. ಮಿರಿಕ್‌‍-ಡಾರ್ಜಿಲಿಂಗ್‌ ಮತ್ತು ಸುಖಿಯಾಪೋಖ್ರಿ ರಸ್ತೆಗಳನ್ನು ಮತ್ತೆ ತೆರೆಯಲು ನಮ್ಮ ತಂಡಗಳು 24 ಗಂಟೆಗಳ ಕಾಲ ಕೆಲಸ ಮಾಡುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಿನದ ನಂತರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.ಜಿಲ್ಲಾ ಆಡಳಿತವು ಗೂರ್ಖಾಲ್ಯಾಂಡ್‌ ಪ್ರಾದೇಶಿಕ ಆಡಳಿತ (ಜಿಟಿಎ) ಮತ್ತು ಸ್ಥಳೀಯ ಎನ್‌ಜಿಒಗಳ ಸಮನ್ವಯದೊಂದಿಗೆ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್ಲಾ ಸ್ಥಳಾಂತರಗೊಂಡ ಕುಟುಂಬಗಳಿಗೆ ಆಹಾರ, ಕಂಬಳಿಗಳು, ಔಷಧಗಳು ಮತ್ತು ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.ಡಾರ್ಜಿಲಿಂಗ್‌ ಬೆಟ್ಟಗಳನ್ನು ನಿರ್ವಹಿಸುವ ಅರೆ ಸ್ವಾಯತ್ತ ಸಂಸ್ಥೆಯಾದ ಜಿಟಿಎಯ ಅಧಿಕಾರಿಯೊಬ್ಬರು, ವಿಪತ್ತು ಸಂಭವಿಸಿದ 24 ಗಂಟೆಗಳ ನಂತರವೂ ಹಲವಾರು ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ ಎಂದು ಹೇಳಿದರು.

ಸಂಪೂರ್ಣ ಇಳಿಜಾರುಗಳು ಕುಸಿದಿವೆ, ಸೇತುವೆಗಳು ಕೊಚ್ಚಿ ಹೋಗಿವೆ ಮತ್ತು ರಸ್ತೆಗಳ ದೊಡ್ಡ ಭಾಗಗಳು ಮಣ್ಣಿನಲ್ಲಿ ಹೂತುಹೋಗಿವೆ. ಕೆಲವು ಒಳನಾಡಿನ ಹಳ್ಳಿಗಳನ್ನು ತಲುಪಲು ಹೆಲಿಕಾಪ್ಟರ್‌ ಹಾರಾಟಗಳು ಬೇಕಾಗಬಹುದು ಎಂದು ಅವರು ಹೇಳಿದರು.ದುರ್ಗಾ ಪೂಜೆ ರಜೆಗಾಗಿ ಬೆಟ್ಟಗಳಿಗೆ ಪ್ರಯಾಣಿಸಿದ್ದ ನೂರಾರು ಪ್ರವಾಸಿಗರು ಸಿಲಿಗುರಿಗೆ ಹೋಗುವ ರಸ್ತೆಗಳು ಮುಚ್ಚಿಹೋಗಿರುವುದರಿಂದ ಸಿಕ್ಕಿಹಾಕಿಕೊಂಡಿದ್ದಾರೆ.

ಪರ್ಯಾಯ ಮಾರ್ಗಗಳ ಮೂಲಕ ಗುಂಪುಗಳಲ್ಲಿ ಸಿಲಿಗುರಿ ತಲುಪಲು ಸಹಾಯ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಂಗಳವಾರ ಬೆಳಿಗ್ಗೆ ತನಕ ಈ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿಯಬಹುದು, ಡಾರ್ಜಿಲಿಂಗ್‌‍, ಕಾಲಿಂಪಾಂಗ್‌‍, ಜಲ್ಪೈಗುರಿ ಮತ್ತು ಕೂಚ್‌ ಬೆಹಾರ್‌ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸಾಂದ್ರೀಕೃತ ಮಣ್ಣು ಮತ್ತು ನಿರಂತರ ಮಳೆಯಿಂದಾಗಿ, ಹೊಸ ಭೂಕುಸಿತದ ಅಪಾಯ ಹೆಚ್ಚಾಗಿದೆ ಎಂದು ಅವರು ಹೇಳಿದರು.

ಜೈಪುರದ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ

ಜೈಪುರ, ಅ.6 ರಾಜಸ್ಥಾನದ ರಾಜಧಾನಿ ಜೈಪುರದ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡಲ್ಲಿ 6 ರೋಗಿಗಳು ಸಜೀವ ದಹನವಾಗಿರುವ ಘಟನೆ ನಡೆದಿದೆ. ಶಾರ್ಟ್‌ ರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಹಲವಾರು ಗಂಭೀರ ರೋಗಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಸ್ಥಳದಲ್ಲಿದ್ದ ವೈದ್ಯರು, ದಾದಿಯರು ಮತ್ತು ಅಗ್ನಿಶಾಮಕ ದಳದ ತಂಡವು ಅಪಾರ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು ಎಂದು ವರದಿಯಾಗಿದೆ.

ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್‌ ಸಿಂಗ್‌ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಟೋರೇಜ್‌ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಾಗ ನ್ಯೂರೋ ಐಸಿಯುನಲ್ಲಿ 11 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು ಎಂದು ಟ್ರಾಮಾ ಸೆಂಟರ್‌ ಇನ್‌ಚಾರ್ಜ್‌ ಡಾ. ಅನುರಾಗ್‌ ಧಾಕಡ್‌ ಹೇಳಿದ್ದಾರೆ.

ಮೃತರನ್ನು ಪಿಂಟು (ಸಿಕಾರ್‌), ದಿಲೀಪ್‌ (ಜೈಪುರ), ಶ್ರೀನಾಥ್‌, ರುಕ್ಮಿಣಿ, ಖುರ್ಮಾ (ಎಲ್ಲರೂ ಭರತ್‌ಪುರದವರು) ಮತ್ತು ಬಹದ್ದೂರ್‌ (ಜೈಪುರ) ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತರ ಹದಿನಾಲ್ಕು ರೋಗಿಗಳನ್ನು ಬೇರೆ ಐಸಿಯುನಲ್ಲಿ ದಾಖಲಿಸಲಾಯಿತು, ಮತ್ತು ಎಲ್ಲರನ್ನೂ ಯಶಸ್ವಿಯಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು ಎಂದು ಅವರು ಹೇಳಿದರು.

ಬೆಂಕಿಯು ಕಟ್ಟಡದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಿತು, ಹೊಗೆ ವೇಗವಾಗಿ ಹರಡಿತು ಮತ್ತು ರೋಗಿಗಳು ಮತ್ತು ಅವರ ಕುಟುಂಬಗಳಲ್ಲಿ ಭೀತಿಯನ್ನು ಉಂಟುಮಾಡಿತು. ಬೆಂಕಿಯಿಂದಾಗಿ ಆ ಪ್ರದೇಶದಲ್ಲಿ ಸಂಗ್ರಹಿಸಲಾಗಿದ್ದ ವಿವಿಧ ದಾಖಲೆಗಳು, ಐಸಿಯು ಉಪಕರಣಗಳು, ರಕ್ತದ ಮಾದರಿ ಟ್ಯೂಬ್‌ಗಳು ಮತ್ತು ಇತರ ವಸ್ತುಗಳು ಸುಟ್ಟುಹೋಗಿವೆ.

ಅಗ್ನಿಶಾಮಕ ದಳದವರು ಬಂದಾಗ, ಇಡೀ ವಾರ್ಡ್‌ ಬೆಂಕಿ, ಹೊಗೆಯಿಂದ ಆವೃತವಾಗಿತ್ತು. ಬೆಂಕಿಯನ್ನು ನಂದಿಸಲು ಪ್ರಾರಂಭಿಸಲು ಅಗ್ನಿಶಾಮಕ ದಳದವರು ಕಟ್ಟಡದ ಎದುರು ಬದಿಯಲ್ಲಿರುವ ಕಿಟಕಿಯನ್ನು ಒಡೆಯಬೇಕಾಯಿತು.ಆಸ್ಪತ್ರೆ ಆಡಳಿತವು ತನಿಖೆಗೆ ಆದೇಶಿಸಿದೆ, ಆದರೆ ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಬೆಂಕಿಯ ಕಾರಣದ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದೆ. ಈ ಘಟನೆಯ ನಂತರ, ಆಸ್ಪತ್ರೆ ಆವರಣದಾದ್ಯಂತ ಭದ್ರತೆ ಮತ್ತು ಅಗ್ನಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-10-2025)

ನಿತ್ಯ ನೀತಿ : ತಾನಾಗಿ ಬಂದದ್ದನ್ನು ಸ್ವೀಕರಿಸು. ತಿರಸ್ಕರಿಸಬೇಡ. ನಿನಗೆ ಕೊಡಬೇಕಾದದ್ದನ್ನು ದೇವರು ಕೊಟ್ಟೇ ಕೊಡುತ್ತಾನೆ.

ಪಂಚಾಂಗ : ಸೋಮವಾರ, 06-10-2025
ವಿಶ್ವಾವಸುನಾಮ ಸಂವತ್ಸರ / ಅಯನ:ದಕ್ಷಿಣಾಯನ / ಋತು: ಸೌರ ಶರದ / ಮಾಸ: ಆಶ್ವಯುಜ / ಪಕ್ಷ: ಶುಕ್ಲ / ತಿಥಿ: ಚತುರ್ದಶಿ / ನಕ್ಷತ್ರ: ಪೂರ್ವಾಭಾದ್ರ / ಯೋಗ: ವೃದ್ಧಿ / ಕರಣ: ವಿಷ್ಟಿ
ಸೂರ್ಯೋದಯ – ಬೆ.06.10
ಸೂರ್ಯಾಸ್ತ – 06.08
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ವಿದ್ಯಾರ್ಥಿಗಳಿಗೆ ಶುಭದಾಯಕ ದಿನ.
ವೃಷಭ: ಸ್ವಯಂಕೃತ ಅಪರಾಧಗಳಿಂದ ತೊಂದರೆ ಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ.
ಮಿಥುನ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲಕರ ದಿನ. ಸದೃಢ ಆರೋಗ್ಯದಿಂದ ನೆಮದಿ ಸಿಗಲಿದೆ.

ಕಟಕ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
ಸಿಂಹ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ ಯಾಗುವ ಸಾಧ್ಯತೆಗಳಿವೆ.
ಕನ್ಯಾ: ಹಣಕಾಸಿನ ತೊಂದರೆ ಎದುರಾಗಲಿದೆ.

ತುಲಾ: ವೈಯಕ್ತಿಕ ವಿಷಯಗಳ ಬಗ್ಗೆ ಗಮನವಿರಲಿ.
ವೃಶ್ಚಿಕ: ನೀವು ಕಂಡ ಕನಸುಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ಮಕ್ಕಳಿಂದ ಸಂತೋಷ ಉಂಟಾಗುವುದು.
ಧನುಸ್ಸು: ಬ್ಯಾಂಕ್‌ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.

ಮಕರ: ಪ್ರಯತ್ನಗಳು ಫಲ ನೀಡುವ ಸಾಧ್ಯತೆಗಳಿವೆ. ಪ್ರಮುಖ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ.
ಕುಂಭ: ಸಿನಿಮಾ ರಂಗದವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಹೆಚ್ಚಲಿದೆ.
ಮೀನ: ಧಾರ್ಮಿಕ ಕಾರ್ಯ ಮಾಡುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ದೊರೆಯಲಿದೆ.

ಹಣಕಾಸು ವಿಚಾರಕ್ಕೆ ಇಬ್ಬರು ಕಟ್ಟಡ ಕಾರ್ಮಿಕರ ನಡುವೆ ನಡೆದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯ

ಬೆಂಗಳೂರು, ಅ.5– ಹಣಕಾಸು ವಿಚಾರಕ್ಕೆ ಇಬ್ಬರು ಕಟ್ಟಡ ಕಾರ್ಮಿಕರ ನಡುವೆ ಜಗಳವಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಾರತಹಳ್ಳಿ ಪೊಲೀಸ್‌‍ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ರಾಯಚೂರು ಮೂಲದ ಮಹದೇವ (45)ಕೊಲೆಯಾದ ಕೂಲಿ ಕಾರ್ಮಿಕ. ಆರೋಪಿ ತಮಿಳುನಾಡಿನ ತಂಜಾವೂರಿನ ರಾಜು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಗೊಳಪಡಿಸಿದ್ದಾರೆ.

ಮಹದೇವ ಹಾಗೂ ರಾಜು ಎಲ್ಲೆಲ್ಲಿ ಕಟ್ಟಡ ನಿರ್ಮಾಣ ಇರುತ್ತದೆಯೋ ಅಲ್ಲಿ ಕೆಲಸ ಮಾಡಿ ಆ ಸ್ಥಳಗಳಲ್ಲೇ ರಾತ್ರಿ ವೇಳೆ ಮಲಗಿಕೊಳ್ಳುತ್ತಿದ್ದರು.ಇವರಿಬ್ಬರು ಮಾರತಹಳ್ಳಿ ಸುತ್ತಮುತ್ತ ಕೆಲಸ ಮಾಡಿಕೊಂಡಿದ್ದರು.

ನಿನ್ನೆ ಒಂದೇ ಕಡೆ ಕೆಲಸಕ್ಕೆ ಹೋಗಿದ್ದ ಇವರಿಬ್ಬರ ಮಧ್ಯೆ ಸಂಜೆ ಹಣಕಾಸು ವಿಚಾರಕ್ಕೆ ಜಗಳವಾಗಿದೆ. ರಾತ್ರಿ ಇವರಿಬ್ಬರು ಮದ್ಯ ಸೇವಿಸಿದ್ದಾರೆ. ಮಾರತಹಳ್ಳಿ ಸರ್ವೀಸ್‌‍ ರಸ್ತೆ ಸಮೀಪದಲ್ಲಿ ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ. ಆ ವೇಳೆ ಕೋಪದಲ್ಲಿ ರಾಜು ಚಾಕುವಿನಿಂದ ಮಹದೇವನ ಹೊಟ್ಟೆಗೆ ಇರಿದು ಪರಾರಿಯಾಗಿದ್ದನು. ತೀವ್ರ ರಕ್ತಸ್ರಾವದಿಂದ ನಡುರಸ್ತೆಯಲ್ಲಿ ಬಿದ್ದಿದ್ದನ್ನು ಗಮನಿಸಿ ತಕ್ಷಣ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾರತಹಳ್ಳಿ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೆಲವೇ ಗಂಟೆಗಳಲ್ಲಿ ಆರೋಪಿ ರಾಜುನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.

ಮತ್ತೆ ಮುನ್ನೆಲೆಗೆ ಬಂದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ

ಬೆಂಗಳೂರು, ಅ.5- ಲಿಂಗಾಯತ ಪ್ರತ್ಯೇಕ ಧರ್ಮದ ಚರ್ಚೆ ಮತ್ತೊಮೆ ಮುನ್ನೆಲೆಗೆ ಬಂದಿದೆ. ಬೇಡಿಕೆ ಈಡೇರುವವರಿಗೂ ಹೋರಾಟ ಮುಂದುವರೆಯಬೇಕೆಂಬ ಸಲಹೆ ಗಳು ಕೇಳಿ ಬಂದಿವೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಬಸವಸಂಸ್ಕೃತಿ ಅಧ್ಯಯನ 2025ರ ಸಮಾರೋಪದಲ್ಲಿ ಮಾತನಾಡಿದ ನ್ಯಾಯಮೂರ್ತಿ ನಾಗಮೋಹನ ದಾಸ್‌‍, ಈ ಹಿಂದೆ ತಮ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಸಮಿತಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿತ್ತು. ಅದನ್ನು ಆಧರಿಸಿ, ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಸಕಾರಣ ನೀಡದೆ ಪ್ರಸ್ತಾವನೆಯನ್ನು ವಾಪಸ್‌‍ ಕಳುಹಿಸಿದೆ. ರಾಜ್ಯ ಸರ್ಕಾರ ಮತ್ತೊಮೆ ವಿವರಣೆ ಹಾಗೂ ಸ್ಪಷ್ಟನೆಗಳೊಂದಿಗೆ ಕೇಂದ್ರಕ್ಕೆ ಶಿಫಾರಸು ಕಳುಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಅಲ್ಪ ಸಂಖ್ಯಾತ ಧರ್ಮದ ಮಾನ್ಯತೆ ಸಿಗುವವರೆಗೂ ಹೋರಾಟ ಮುಂದುವರೆಯಬೇಕು. ಈ ಹೋರಾಟದಲ್ಲಿ ಮಿತ್ರರು ಯಾರು, ಶತ್ರುಗಳು ಯಾರು ಎಂದು ಗುರುತಿಸಲು ಸಾಧ್ಯವಾಗಬೇಕು. ಶತ್ರುಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋರಾಟ ನಡೆಸಿದರೆ, ಅದು ಯಶಸ್ವಿಯಾಗುವುದಿಲ್ಲ. ಶತ್ರುಗಳನ್ನು ಹೊರಗಿಟ್ಟು ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.

ಸಮಾನ ಮನಸ್ಕರ ಜೊತೆಗೂಡಿ ಸೈದ್ಧಾಂತಿಕವಾಗಿ ಹೋರಾಟ ನಡೆಸಿದರೆ, ಖಂಡಿತ ಯಶಸ್ಸು ಸಿಗುತ್ತದೆ ಎಂದು ನಾಗಮೋಹನ್‌ದಾಸ್‌‍ ಅಭಿಪ್ರಾಯಪಟ್ಟರು.

ಹಿನ್ನೆಲೆ:
ಈ ಹಿಂದೆ 2013ರಿಂದ 18ರ ನಡುವೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಡೆದಿತ್ತು. ಆದರೆ ಅದೇ ಕಾಂಗ್ರೆಸ್‌‍ ಪಕ್ಷಕ್ಕೆ ಚುನಾವಣೆಯಲ್ಲಿ ಮುಳುವಾಗಿತ್ತು. ಸಿದ್ದರಾಮಯ್ಯ ಅವರ ಸರ್ಕಾರ ಹಲವು ಭಾಗ್ಯ ಸರಣಿಯ ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದು ಪ್ರಯೋಜನವಾಗದೇ ಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷ ಮುಗ್ಗರಿಸಿತ್ತು. ಇದಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೇ ಕಾರಣ ಎಂದು ಡಿ.ಕೆ.ಶಿವಕುಮಾರ್‌ ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದರು.

ಸುಮಾರು 7 ವರ್ಷಗಳ ಕಾಲ ತಣ್ಣಗಿದ್ದ ಈ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಅಧ್ಯಯನ ಸಮಿತಿಯ ಮುಖ್ಯಸ್ಥರಾಗಿದ್ದ ನ್ಯಾ. ನಾಗಮೋಹನ್‌ ದಾಸ್‌‍ ಅವರೇ ಈ ಬಗ್ಗೆ ಹೇಳಿಕೆ ನೀಡಿರುವುದು ಹೊದ ಚರ್ಚೆಗಳನ್ನು ಹುಟ್ಟು ಹಾಕಿದೆ.

ವೇದಿಕೆಯಲ್ಲಿ ನಾಡಿನ ಬಹುತೇಕ ಮಠಾಧೀಶರು, ಪ್ರಭಾವಿ ಹಾಗೂ ಪ್ರಮುಖ ನಾಯಕರು ಭಾಗವಹಿಸಿದ್ದರು. ನಾಗಮೋಹನ್‌ದಾಸ್‌‍ ಹೇಳಿಕೆಗೆ ಚಪ್ಪಾಳೆ ತಟ್ಟಿ ಸ್ವಾಗತಿಸಲಾಯಿತು.
ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಪ್ರಾಸ್ತಾವಿಕ ಮಾತನಾಡಿದ ಜಾಗತಿಕ ಲಿಂಗಾಯತ ಮಹಾ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್‌‍.ಎಂ. ಜಾಮದಾರ್‌, ಲಿಂಗಾಯತ ಧರ್ಮದ ಅಲ್ಪಸಂಖ್ಯಾತ ಸ್ಥಾನಮಾನ ಹೋರಾಟವನ್ನು ಸರಿಸಿಕೊಂಡರು. ಸಿದ್ದರಾಮಯ್ಯ ಸರ್ಕಾರ ಹಿಂದೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು ಎಂದು ಹೇಳಿದರು.